ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗ ಅದೆಲ್ಲವೂ ಕೇವಲ ನೆನಪು ಮಾತ್ರ..

“ಈ ಶರ್ಟ್ ತಗೊಂಡ್ ಇನ್ನೂ ಮೂರು ತಿಂಗಳಾಗಿಲ್ಲ. ಆಗಲೇ ಇದು ಮೂರನೇ ಸಾರಿ ಗುಂಡಿಗಳು ಚೂರಾಗಿದೆ. ಹೀಗಾದ್ರೆ ಬಟ್ಟೆ ಉಳಿತಾವಾ? ಈ ಶರ್ಟ್‍ನ ಕಾಲರ್ ನೋಡು, ಬಣ್ಣ ಹೊರಟೇ ಹೋಗಿದೆ”.

***
“ನನ್ನ ಯೂನಿಫಾಂ ಚಡ್ಡಿಯ ಎರಡು ಗುಂಡಿಗಳು ಒಡೆದು ಹೋಗಿದೆ. ಹಾಕೊಂಡ್ರೆ ಚಡ್ಡಿ ಜಾರತ್ತೆ. ನೀನೇ ಗುಂಡಿ ಜೋಡಿಸಿ ಹೊಲಿದುಕೊಡು”.

***
“ಸದ್ಯ, ನನ್ನದು ಬರೀ ವೈಟ್ ಯೂನಿಫಾಂ ಶರ್ಟ್‍ನಲ್ಲಿ ಒಂದು ಗುಂಡಿ ಹೊಡೆದುಹೋಗಿದೆ. ಅದೂ ಮೇಲಗಡೆ. ಟೈ ಹಾಕಿದ್ರೆ ಅದು ಕಾಣೋದಿಲ್ಲ ಬಿಡು. ನಿನ್ನೆ ಬುಧವಾರ ಅಲ್ಲವಾ! ಭವ್ಯ ಮಿಸ್‍ಗೆ ಕ್ಲಾಸ್‍ನಲ್ಲಿ ಹೇಗೋ ಗುಂಡಿ ಹೊಡೆದುಹೋಗಿದ್ದು ಗೊತ್ತಾಯ್ತು. ನೆಕ್ಸ್ಟ್ ವೆಡ್ನಸ್‍ಡೆ ಬಟನ್ ಹಾಕಿಸ್ಕೊಂಡ್ ಬಾ ಅಂದ್ರು”.

***
“ಏನೋ ಬಟ್ಟೆಗಳು ಚೆನ್ನಾಗಿ ಕಾಣಲಿ ಅಂತ ಹಾಗೆ ಉಜ್ಜಿ ಒಗೀತಿನಿ. ಸೋಪಿನಲ್ಲಿ ತೊಳೆದಮೇಲೆ, ಜಾಲಿಸುವ ಮೊದಲು ನೆಲಕ್ಕೆ ಕುಸುಕಿ ಬಡಿಯುವಾಗ ಗುಂಡಿಗಳು ಹೊಡೆದುಹೋಗುತ್ತವೆ. ಸರೀ, ಇನ್ಮೇಲೆ ನಿಮ್ಮ ಬಟ್ಟೆಗಳನ್ನ ಚೆನ್ನಾಗಿ ಬಡಿದು ಒಗೆಯಲ್ಲ ಬಿಡಿ. ಬರಿ ಸೋಪಲ್ಲೇ ಒಗೆದುಕೊಡ್ತೀನಿ. ಬಟ್ಟೆಯಲ್ಲಿ ಕೊಳೆ ತುಂಬಿದ್ದರೆ ನನಗೇನು? ನನ್ನ ಸೀರೆಯನ್ನ ಮಾತ್ರ ಸರಿಯಾಗಿ ಒಗೆದರೆ ಸಾಕು”.

***
“ನಿನ್ನ ಸೀರೆಯನ್ನ ಎಷ್ಟು ಜೋರಾಗಿ ಬೇಕಿದ್ದರು ಒಗೆಯಬಹುದು. ನೆಲಕ್ಕೆ ಕುಸುಕಿದರು ಏನು ಆಗಲ್ಲ. ಅದಕ್ಕೇನು ನಮ್ಮ ಶರ್ಟು ಪ್ಯಾಂಟಿನ ಹಾಗೆ ಗುಂಡಿಗಳು ಇದೆಯಾ? ಮೂವರು ಒಟ್ಟಿಗೆ ಕಿರುಚುತ್ತಿದ್ದೆವು”.

***

ಮೈಸೂರಿನ ಮನೆಯಲ್ಲಿ ಪ್ರತಿದಿನವೂ ಬಳಕೆಯಾಗುತ್ತಿದ್ದ ಅನಿವಾರ್ಯ ವಸ್ತುಗಳಲ್ಲಿ ಸೂಜಿದಾರದ ಡಬ್ಬಿ ಪ್ರಮುಖವಾದದ್ದು. ಸೂಜಿದಾರದ ಡಬ್ಬಿಯೊಳಗೆ ಏನಿಲ್ಲವೆಂದರೂ ಕಾಮನಬಿಲ್ಲಿನೊಳಗೆ ಇರಬಹುದಾದ ಅಷ್ಟೂ ಬಣ್ಣಗಳ ನೂಲಿನ ಉಂಡೆಗಳು ಸದಾ ಕಾಲವೂ ಇರುತ್ತಿದ್ದವು. ಕೆಲವೊಮ್ಮೆ ಅದಕ್ಕೂ ಹೆಚ್ಚು. ಮನೆಗೆ ಹೊಸಬಟ್ಟೆಗಳನ್ನು ತರುವಾಗಲೇ, ಅಪ್ಪ ಬಟ್ಟೆಗಳ ಬಣ್ಣಗಳಿಗೆ ಸರಿ ಹೊಂದುವಂತಹ ನೂಲಿನ ಉಂಡೆಗಳು ಹಾಗೂ ಅದೇ ಬಣ್ಣಗಳ (ಬಟನ್) ಗುಂಡಿಗಳನ್ನೂ ತೆಗೆದುಕೊಳ್ಳುತ್ತಿದ್ದರು. ಆರಂಭದಲ್ಲಿ, ಇದು ವಿಚಿತ್ರ ಎನಿಸಿದರೂ, ಕ್ರಮೇಣ ಅಪ್ಪನ ಇರಾದೆ ಅರ್ಥವಾಗಿಹೋಗಿತ್ತು.

ಸಣ್ಣ ಸೈಜಿನ ಹತ್ತಾರು ಸೂಜಿಗಳಲ್ಲಿ, ಕೆಲವು ನೂಲಿನ ಉಂಡೆಗಳಿಗೆ ಚುಚ್ಚಿಕೊಂಡಿರುತ್ತಿದ್ದರೆ, ಇನ್ನು ಕೆಲವು ಮನೆಯ ಕ್ಯಾಲೆಂಡರ್‍ನ ಯಾವುದೋ ಒಂದು ತುದಿಯಿಂದ ಒಳಹೊಕ್ಕು ಹೊರಗೆ ಬಂದಿರುತ್ತಿದ್ದವು. ಡಬ್ಬಿಯೊಳಗೆ ಮುಚ್ಚಿಹೋಗಿದ್ದ ಬಣ್ಣದ ನೂಲಿನ ಉಂಡೆ ಮತ್ತು ಮನೆಯ ಕ್ಯಾಲೆಂಡರ್‍ನ ತುದಿಗೆ ಚುಚ್ಚಿಕೊಂಡಿರುತ್ತಿದ್ದ ಸೂಜಿಗಳು ಥೇಟು ಜಾತಿಯ ಕಾರಣಕ್ಕೋ ಮನೆಯವರ ಒತ್ತಡಕ್ಕೋ ಇಷ್ಟವಿದ್ದರೂ ಮದುವೆಯಾಗಲು ನಿರಾಕರಿಸುವ ಹುಡುಗ ಹುಡುಗಿಯರು ದೂರದಲ್ಲೇ ನಿಂತು ಪರಿತಪಿಸುವಂತೆ ಕಾಣುತ್ತಿದ್ದವು. ಒಂದಾಗುವ ಅವಕಾಶಕ್ಕೆ ಹಾತೊರೆಯುತ್ತಿದ್ದಂತೆ ಭಾಸವಾಗುತ್ತಿದ್ದವು.

ಹೊಲಿಗೆ ಕಳಚಿಕೊಂಡ ಸ್ವೇಟರ್‍ಗಳು, ಮನೆಯ ಅಪ್ಪನ ಶರ್ಟು, ಪ್ಯಾಂಟ್‍ನ ಗುಂಡಿಗಳು, ನಮ್ಮ ಯಾವುದೋ ಟೀ ಶರ್ಟ್‍ನ ಒಂದೆರಡು ಗುಂಡಿಗಳು ಸದಾ ಒಡೆದೇ ಇರುತ್ತಿದ್ದವು. ಕೆಲವು ಒಡೆದ ಗುಂಡಿಗಳು ಹುಣ್ಣಿಮೆಯ ಹಿಂದಿನ ದಿನದ ಚಂದ್ರನ ಆಕಾರದಲ್ಲಿರೆ, ಇನ್ನು ಕೆಲವು ನಕ್ಷತ್ರದ ತುದಿಯ ಚೂರಿನಂತೆ ಕಾಣುತ್ತಿದ್ದವು. ಮತ್ತೆ ಕೆಲವು ಅರ್ಧ ಬರೆದಿಟ್ಟ ಬಯೋಲಜಿಯ ಯುಗ್ಲೀನಾ, ಪ್ಯಾರಾನೀಶಿಯಾದ ಅಪೂರ್ಣ ಚಿತ್ರಗಳಂತೆ ಗೋಚರಿಸಿ ಭಯಗೊಳಿಸುತ್ತಿದ್ದವು. ಈ ಎಲ್ಲದರ ನಡುವೆ ಒಂದಿಷ್ಟು ಗುಂಡಿಗಳು ಮಾತ್ರ ಒಡೆದು ಚೂರಾಗದಿದ್ದರೂ, ಹೊಲಿಯನ್ನು ಕಳಚಿಕೊಂಡು ದಾರದ ತುದಿಯಲ್ಲಿ ನಿಂತು ಜೋಲಾಡುತ್ತಿದ್ದವು. ಥಟ್ಟನೆ ನೋಡಿದರೆ ಆ ಎಲ್ಲಾ ಗುಂಡಿಗಳು ಸಾವಿನ ಅಂಚಿನಲ್ಲಿರುವ ಅಜ್ಜ ಮನೆಯ ಮೊಮ್ಮಕ್ಕಳ ಎದುರು ತಾನೇ ಬರೆದ ವಿಲ್ ವಿವವರಿಸುವ ಕಡೆಯ ಕ್ಷಣದ ಎದೆ ಭಾರವಾದ ನೀರವತೆಯಲ್ಲಿ ನಿಂತಿರುವಂತೆ ಕಾಣುತ್ತಿದ್ದವು.

ಅಮ್ಮ ವಾರದ ಕಡೆಯ ದಿನ ಬಟ್ಟೆ ಒಗೆಯಲು ಕೂರುತ್ತಾಳೆ ಎಂದರೆ ಮನೆಯ ಮೂಲೆಯಲ್ಲಿದ್ದ ಸೂಜಿ ಹಾಗೂ ದಾರದ ಉಂಡೆಗಳು ಮುಂದಿನ ಕಾಯಕಕ್ಕೆ ಹೇಳದೆಯೂ ಜಾಗ್ರತವಾಗಬೇಕಿತ್ತು. ಬಹುಶಃ ಬಡಿಯುವ ಜೋರಿಗೆ ಬಟ್ಟೆಗಳು ಒಳಗೇ ಒದ್ದಾಡಿ ಸಾಯುತ್ತಿದ್ದವೋ ಏನೋ! ಆದರೆ ಅವುಗಳು ಹೇಳಿಕೊಳ್ಳುವಂತಿರಲಿಲ್ಲ ಅಷ್ಟೇ. ಬ್ರಾಂಡೆಡ್ ಕಂಪನಿಯ ಬಟ್ಟೆಗಳು ಎಂದು ನಾವು ಖರೀದಿಸುತ್ತಿದ್ದ ಬಟ್ಟೆಗಳೂ ಕೂಡ ಅಮ್ಮನ ದೀರ್ಘ ಹೊಡೆತಗಳಿಗೆ ರಕ್ತ ಕಾರಿಕೊಂಡು ಸಾಯುವ ಕ್ಯಾನ್ಸರ್ ರೋಗಿಯಂತೆ ಬಣ್ಣ ಕಾರಿಕೊಂಡು ನಿಸ್ತೇಜವಾಗಿಬಿಡುತ್ತಿದ್ದವು. ಬಟ್ಟೆಗಳನ್ನು ಒಗೆಯದೇ ಹಾಕಿಕೊಂಡರೆ ಇನ್ನಷ್ಟು ದಿನ ಬಾಳಿಕೆ ಬರಬಹುದು, ಮಾಸದ ಬಟ್ಟೆಗಳನ್ನು ಧರಿಸದ ಖುಷಿಯೂ ಉಳಿಯುತ್ತದೆ ಎನ್ನುವುದು ಒಮ್ಮತದ ನಿರ್ಧಾರವಾಗಿತ್ತು. ಮನೆಯಲ್ಲಿ ಅಘೋಷಿತವಾಗಿ ಈ ಕಾನೂನನ್ನು ಜಾರಿಗೆ ತರಬೇಕು ಎನ್ನುವ ಒತ್ತಡ ನಿರ್ಮಾಣವಾಗುವ ಸ್ಥಿತಿಯೂ ಬಂದಿತ್ತು.

ಅಮ್ಮ, ಹುಣಸೂರಿನ ಬಳಿಯ ಸಣ್ಣಹಳ್ಳಿಯವಳು. ಕೇವಲ ಇಪ್ಪತ್ತೇ ಮನೆಗಳಿದ್ದ ಹಳ್ಳಿಯಿಂದ ಮದುವೆಯಾಗಿ ಸೀದಾ ಮೈಸೂರಿಗೆ ಬಂದ ಅಮ್ಮ, ನಗರದ ರೀತಿಗಳನ್ನು ಬಲವಂತವಾಗಿ ರೂಢಿಸಿಕೊಂಡವಳ್ಳಲ್ಲ. ತಾನು ಊರಿನಲ್ಲಿ ಕಲಿತಿದ್ದ ಒಂದಿಷ್ಟು ಗುಣಗಳನ್ನ ಮದುವೆಯ ನಂತರವೂ ಬಳಸಿದ್ದಳು. ಅದರಲ್ಲಿ ಬಟ್ಟೆಗಳನ್ನು ಒಗೆಯುವಾಗ ಚೆನ್ನಾಗಿ ಬಡಿದು ಒಗೆಯಬೇಕು. ಒಗೆದ ಬಟ್ಟೆಗಳು ಮೈ ಮೇಲಿದ್ದರೆ ಚಂದ ಕಾಣಬೇಕು ಎನ್ನುವುದು ಆ ಗುಣಗಳಲ್ಲಿ ಒಂದು. ಹಾಗೆ ತಾನೇ ಒಗೆದ ಬಟ್ಟೆಗಳನ್ನು ಮನೆಯ ಎದುರಿನ ದಾರಕ್ಕೆ ಒಣಗಲು ತೂಗುಹಾಕಿದ್ದಾಗ ದೂರದಲ್ಲಿ ನಿಂತು ಅದೊಂದು ಬಗೆಯಲ್ಲಿ ನೋಡುತ್ತಿದ್ದಳು.

ಬಟ್ಟೆಗಳು ಶೋ ರೂಮ್‍ನಲ್ಲಿರುವುದಕ್ಕಿಂತ ಒಗೆದ ನಂತರ, ಎಷ್ಟು ಚೆನ್ನಾಗಿ ಕಾಣುತ್ತಿವೆ ಎನ್ನುವಂತೆ ನೋಡುತ್ತ ಒಳಗೇ ಆನಂದಿಸುತ್ತಿದ್ದಳು. ಅಮ್ಮನಿಗೆ ಮಾಡಿದ ಕೆಲಸವನ್ನು ತೃಪ್ತಿಯನ್ನಾಗಿಸಿಕೊಳ್ಳುವ ಅಥವಾ ಮಾಡುವ ಕೆಲಸವನ್ನೇ ತೃಪ್ತಿಯಾಗಿ ಮಾಡುವ ಅದೊಂದು ಗುಣವಿತ್ತು. ಈಗಲೂ ಆಫೀಸಿನಲ್ಲಿ ಯಾವುದಾದರೂ ನ್ಯೂಸ್ ಸ್ಕ್ರಿಪ್ಟ್ ಅಥವಾ ಪತ್ರಿಕೆಗಳಿಗೆ ಲೇಖನಗಳನ್ನು ಬರೆದ ನಂತರ ಮತ್ತೆ ಮತ್ತೇ ಓದಿ ಅದರೊಳಗಿನ ಸಾಂಧ್ರಂತೆಯನ್ನು ಅನುಭವಿಸಲು ಯತ್ನಿಸುತ್ತೇನೆ. ಆದರೆ ಅಮ್ಮ ಬಟ್ಟೆ ಒಗೆದ ನಂತರ ನಿಂತು ನೋಡುವಾಗ ಅನುಭವಿಸುತ್ತಿದ್ದ ಸಾರ್ಥಕತೆಯ ಸುಖವನ್ನು ಅನುಭವಿಸಲು ಇಂದಿಗೂ ಸಾಧ್ಯವಾಗಿಲ್ಲ. ಪ್ರಾಯಶಃ ಅದೊಂದು ದಿವ್ಯಸ್ಥಿತಿ. ಅದು ರೂಢಿಸಿಕೊಳ್ಳುವುದಲ್ಲ ಬದಲಿಗೆ ತಾನಾಗೇ ಸಿದ್ಧಿಸಬೇಕು ಅಷ್ಟೇ.

ಅಮ್ಮ ಬಟ್ಟೆಗಳನ್ನು ಒಗೆದು, ಬಿಸಿಲಿನಲ್ಲಿ ಒಣಗಿಸಿ, ಮನೆಯ ಬೀರುವಿನಲ್ಲಿ ಮಡಚಿಟ್ಟು, ಪುನಃ ತೊಡುವ ಸಮಯ ಬಂದಾಗ ಅನಿವಾರ್ಯವಾಗಿ ಯಾರಾದರೊಬ್ಬರು ಸಿಟ್ಟುಗೊಳ್ಳಲೇಬೇಕಿತ್ತು. “ಇಲ್ಲಿ ನೋಡು ಹೇಗೆ ಆಗಿದೆ. ಈ ಬಟ್ಟೆಯ ಬಣ್ಣ ಎಲ್ಲಾ ಹೋಗಿದೆ. ನಮ್ಮ ಸ್ಕೂಲ್‍ನಲ್ಲಿ ಯಾರ ಯೂನಿಫಾಂ ಕೂಡ ಇಷ್ಟು ಮಾಸಿಲ್ಲ ಗೊತ್ತಾ”. ಎಂದು ನಾವು ಎಳೆಯ ನಾಲಗೆ ಬಳಸಿ ತಕರಾರು ತೆಗೆದರೆ, “ಹೌದಪ್ಪಾ, ನಿಮಗೆ ನಾನು ಒಗೆಯೋದು ಇಷ್ಟ ಆಗಲ್ಲ. ಮುಂದೆ ನಿಮ್ಮ ಹೆಂಡತಿ ಬಂದು ಹೇಗೇ ಒಗೆದುಕೊಟ್ಟರು, ಅದೇ ಚಂದ ಅಂತ ಹಾಕೋತ್ತೀರಾ. ಅವಳಿಗೆ ಒಂದೇ ಒಂದು ಮಾತು ಕೂಡ ನೀವು ಹೇಳೋದಿಲ್ಲ ಅಂತ ಗೊತ್ತು ನನಗೆ” ಎಂದುಬಿಡುತ್ತಿದ್ದಳು.

ಮದುವೆ ಎಂದರೆ ಎಲ್ಲರೂ ಸೇರುವ ಅದೊಂದು ಮನೆಯ ಹಬ್ಬ ಎಂದಷ್ಟೇ ತಿಳಿದುಕೊಂಡಿದ್ದ ನಮಗೆ, ಅಮ್ಮನ ಮಾತಿನ ಒಳಾರ್ಥಗಳು ತಿಳಿಯುತ್ತಿರಲಿಲ್ಲ. ಪ್ರಾಯಶಃ ಆವತ್ತಿಗೆ ಅರ್ಥಗಳು ಬೇಕಾಗಿರಲಿಲ್ಲ. ಅಪ್ಪ ಬಹಳ ಶಿಸ್ತಿನ ಮನುಷ್ಯ. ಬೆಳಗ್ಗೆಯೇ ಒಂದು ಸಣ್ಣ ವಾಕಿಂಗ್, ತಣ್ಣೀರು ಸ್ನಾನ. ಪೂಜೆ, ಹಣೆಯ ನಡುವೆ ಸಣ್ಣದಾಗಿ ರಂಗೋಲಿ ಚಿಕ್ಕಿಯಷ್ಟೇ ಸಣ್ಣ ಕುಂಕುಮ. ತಪ್ಪಿಯೂ ಐರನ್ ಇಲ್ಲದ ಬಟ್ಟೆಗಳನ್ನು ತೊಡದ ಅಸಾಧ್ಯ ಗುಣ. ಹೀಗಾಗಿ ಮನೆಯನ್ನು ನಿಭಾಯಿಸುವಂತೆ ಅಪ್ಪನ ಅಂಗಿಯ ವರ್ಚಸ್ಸು ಕಾಯುವುದು ಕೂಡ ಅಮ್ಮನ ಮತ್ತೊಂದು ಹೊಣೆಯಾಗಿತ್ತು.

ಇದಕ್ಕಾಗೇ ಅಮ್ಮ ಒಗೆದ ಬಟ್ಟೆಗಳನ್ನು ಮಡಚಿಡುವಾಗ ಕಣ್ಣಿಗೆ ಬೀಳುತ್ತಿದ್ದ ಗುಂಡಿಗಳು ಒಡೆದು ಚೂರಾದ ಶರ್ಟುಗಳನ್ನು ಪ್ರತ್ಯೇಕವಾಗಿ ಜೋಡಿಸುತ್ತಿದ್ದಳು. ಕ್ಯಾಲೆಂಡರ್‍ಗೆ ಚುಚ್ಚಿಕೊಂಡು ಸವ್ಯವಾಗೇ ಉಳಿದುಹೋಗಿರುತ್ತಿದ್ದ ಸೂಜಿಗಳಿಗೆ ಮರುಜೀವ ನೀಡುತ್ತಿದ್ದಳು. ಕಣ್ಣುಗಳನ್ನು ಅರೆತೆರೆದು ಆಗಾಗ ಮನೆಯ ಕಿಟಕಿಯಂತೆ ಒಂದಿಷ್ಟೇ ಮುಚ್ಚಿ, ಸೂಜಿಗೆ ದಾರ ಪೋಣಿಸಿ ಹೊಲಿಗೆ ಹಾಕಲು ಕೂರುತ್ತಿದ್ದಳು.

ಹೀಗೆ ಹೊಲಿಗೆ ಹಾಕುವಾಗ ಶರ್ಟುಗಳ ಬಣ್ಣಗಳಿಗೆ ಹೊಂದುವ ಗುಂಡಿಗಳು ಡಬ್ಬಿಯಲ್ಲಿ ಇರದೇ ಹೋದರೂ ಹೆಚ್ಚು ಯೋಚಿಸುತ್ತಿರಲಿಲ್ಲ. ಡಬ್ಬಿಯೊಳಗೆ ಹೋಲಿಕೆಯಾಗುವ ಯಾವುದೇ ಬಣ್ಣದ ಗುಂಡಿಗಳು ಕೈಗೆ ಸಿಕ್ಕರು ಜೋಡಿಸಿ ಹೊಲೆದುಬಿಡುತ್ತಿದ್ದಳು. ತಿಳಿಗುಲಾಬಿ ಬಣ್ಣದ ನಮ್ಮ ಸ್ಕೂಲಿನ ಯೂನಿಫಾಂಗೆ ಕೆಲವೊಮ್ಮೆ ಕಪ್ಪು ಅಥವಾ ಶ್ವೇತವರ್ಣದ ಗುಂಡಿಗಳನ್ನು ಜೋಡಿಸಿ ಹೊಲಿಗೆ ಹಾಕಿದ್ದರೆ ಕೆಲವೊಮ್ಮೆ ಅಪ್ಪ ಸಾಮಾನ್ಯವಾಗಿ ತೊಡುತ್ತಿದ್ದ ತಿಳಿನೀಲಿ ಬಣ್ಣದ್ದ ಶರ್ಟುಗಳಿಗೆ ಕಡುನೀಲಿ ಬಣ್ಣದ ಗುಂಡಿಗಳನ್ನು ಜೋಡಿಸಿಬಿಡುತ್ತಿದ್ದಳು. ಒಂದೇ ಬಣ್ಣದ ಐದಾರು ಗುಂಡಿಗಳ ನಡುವೆ ನುಸುಳಿಬಿಡುತ್ತಿದ್ದ ಅನ್ಯವರ್ಣದ ಗುಂಡಿಗಳು ತೋಳದ ಗುಂಪಿನಲ್ಲಿರುವ ಕುರಿಮರಿಯಂತೆ ಕಾಣುತ್ತಿದ್ದವು. ಹೀಗೆ ಒಂದೇ ಬಣ್ಣದ ಗುಂಡಿಗಳ ನಡುವೆ ಅನ್ಯವರ್ಣದ ಗುಂಡಿಗಳು ಏಕಾಂಗಿಯಾಗಿ ಕಾಣಿಸಿಕೊಳ್ಳುತ್ತಿದ್ದವು. ಆಗೆಲ್ಲಾ ಗುಂಡಿಗಳ ಗುಂಡಿಗೆಯೊಳಗೆ ಅಶಾಂತತೆಯ ಮೂರ್ತರೂಪವೂ ಇದ್ದಿರಬಹುದು.

ಅಮ್ಮನ ಈ ನಡೆಗಳಿಗೆ ಅಪ್ಪ, “ಹೋಗಲಿ ಬಿಡಿ, ಪಾಪಾ ಅವಳಿಗೆ ಅಷ್ಟು ತಿಳಿಯುವುದಿಲ್ಲ” ಎಂದು ಹೇಳಿರುವುದನ್ನು ಕೇಳಿದ್ದೇವೆ. ಅದೊಂದು ಘನಘೋರ ಪಾಪ ಎಂದೇನು ಅನಿಸಿಲ್ಲ. ಆದರೆ ಸ್ಕೂಲಿನಲ್ಲಿ ಒಡೆದ ಗುಂಡಿಗಳು ಆಗಾಗ ಕಳಚಿಕೊಳ್ಳುತ್ತಿದ್ದಾಗ, ಅಮ್ಮನನ್ನು ನೆನೆದು ನಕಶಿಖಾಂತ ಸಿಟ್ಟಾದ ಉದಾಹರಣೆಗಳು ಸಾಕಷ್ಟಿವೆ. ಇಡೀ ದಿನ ಒಡೆದುಹೋದ ಗುಂಡಿಗಳು ನೀಡುವ ಕಿರುಕುಳಕ್ಕೆ ಒಳಾಗಿದ್ದೇವೆ. ಇಷ್ಟಾದರೂ ನಮಗೆ ಆ ಎಲ್ಲವೂ ಅಷ್ಟಾಗಿ ಕಾಡುತ್ತಿರಲಿಲ್ಲ.

ನಾವು ಪ್ರೈಮರಿ ಸ್ಕೂಲು ಮುಗಿಸಿ, ಹೈ ಸ್ಕೂಲ್‍ನ ಹೊಸ್ತಿಲು ದಾಟಿ ಕಾಲೇಜು ಎಂದು ಬೆಳೆದಂತೆ, ನಮ್ಮೊಂದಿಗೆ ಅಮ್ಮನೂ ಬೆಳೆಯತೊಡಗಿದಳು. ನಮ್ಮ ಭಾಷೆ ಹಾಗೂ ಬಳಸುವ ಪದಗಳು ಬದಲಾದಂತೆ ಅಮ್ಮನೂ ನಮ್ಮೊಂದಿಗೆ ಹೊಂದಿಕೊಳ್ಳು ಹೆಣಗಾಡುತ್ತಿದ್ದಳು. ಅದೊಂದು ಕ್ರಿಯೆ ನಮ್ಮ ನಡುವೆ ಅಪ್ರಜ್ಞಾಪೂರ್ವಕವಾಗಿ ಜಾರಿಯಾಗಿತ್ತು. ಕಾಲೇಜ್ ಯೂನಿಫಾರಗಳನ್ನು ಅಮ್ಮ ಬಡಿದು ಒಗೆಯುತ್ತಿರಲಿಲ್ಲ.
ಹೊಸಬಟ್ಟೆಗಳನ್ನು ತಂದರೆ, ಅಷ್ಟು ಜೋರಾಗಿ ಕುಸುಕುತ್ತಿರಲಿಲ್ಲ. ಕೇವಲ ಸರ್ಫ್‍ನಲ್ಲಿ ನೆನಸಿ ಹಿಂಡುತ್ತಿದ್ದಳು ಅಷ್ಟೇ. ಏಕೆ? ಎಂದು ಕೇಳಿದರೆ, “ನೀವು ಈಗ ಚಿಕ್ಕವರ ಹೇಳು. ಮೊದಲು ಬೀದಿಯಲ್ಲಿ ಕುಣಿದು ಬಟ್ಟೆಗಳು ಕೊಳೆಯಾಗಿರುತ್ತಿದ್ದವು. ಈಗ ನೀವು ದೊಡ್ಡವರು, ಅಷ್ಟು ಗಲೀಜಾಗುವುದಿಲ್ಲ. ಎಂದು ಬಿಡುತ್ತಿದ್ದಳು.

ಹೀಗೆ  ಎಷ್ಟೋ ದಿನಗಳು ಉರುಳಿಹೋದವು. ಬೆಂಗಳೂರಿಗೆ ಬಂದ ಆರಂಭದಲ್ಲಿ ಅಮ್ಮ ಮೈಸೂರಿನಿಂದ ಫೋನ್ ಮಾಡುತ್ತಿದ್ದಳು. “ಇಲ್ಲಿ, ಎಲ್ಲರ ಬಟ್ಟೆಗಳು ಇವೆ, ನಿನ್ನದು ಮಾತ್ರ ಇಲ್ಲ. ನೀನು ಪ್ರತಿವಾರ ಇಲ್ಲಿಗೆ ತಂದುಕೊಂಡು, ನಾನೇ ಒಗೆದುಕೊಡುತ್ತೇನೆ” ಎನ್ನುತ್ತಿದ್ದಳು. “ಬೇಡ ಗುರು, ನೀನು ಬಟ್ಟೆಗಳನ್ನು ಒಗೆಯೋದು, ಈಗ ನೀನು ಮತ್ತೆ ಶರ್ಟ್ ಗುಂಡಿಗಳನ್ನು ಒಡೆದುಹಾಕಿದರೆ ನಾನು ಸೂಜಿದಾರ ಪೋಣಿಸಿಕೊಂಡು ಕೂರೋದಕ್ಕೆ ಟೈಮ್ ಇಲ್ಲ” ಎನ್ನುತ್ತ ನಿರಾಕರಿಸಿದ್ದೆ. ಅದೊಂದು ಶಿಸ್ತಿಗೆ ಒಳಗಾಗುವ ಆಲೋಚನೆಯಲ್ಲಿ ಉಳಿದುಹೋಗಿದ್ದರಿಂದ ಊರಿಗೆ ಬಟ್ಟೆಗಳನ್ನು ಕಳಿಸಿ ಒಗೆಸಬೇಕು ಎನಿಸಿರಲಿಲ್ಲ.

ಕಳೆದ ವಾರ ಒಂದಿಷ್ಟು ಹೆಚ್ಚು ಎನ್ನುವಷ್ಟೇ ಕೆಲಸದಲ್ಲಿ ಮುಳುಗಿಹೋಗಿದ್ದೆ. ವಾರಪೂರ್ತಿ ಎನನ್ನೋ ಬರೆಯುತ್ತ, ತಿದ್ದುತ್ತ ಉಳಿದುಹೋಗಿದ್ದೆ. ಅದೊಂದು ಶೂನ್ಯತೆ ಆವರಿಸಿಕೊಂಡಿತ್ತು. ಈ ಎಲ್ಲದರ ನಡುವೆ ಬಟ್ಟೆಗಳನ್ನು ಒಗೆಯಲು ಸಾಧ್ಯವಾಗಿರಲಿಲ್ಲ. ಎಲ್ಲಿಯಾದರೂ ಹೊರಗೆ ಅಲೆದಾಡಿ ಬರಬೇಕು ಎನ್ನುವ ಮೊದಲು ಬಟ್ಟೆಗಳನ್ನು ಮೈಸೂರಿನಲ್ಲಿ ಅಮ್ಮನ ಹತ್ತಿರ ಒಗೆಸಿಕೊಂಡರೆ ಸಾಕು ಎನಿಸಿತ್ತು. ಎಲ್ಲ ಬಟ್ಟೆಗಳನ್ನು ಬ್ಯಾಗ್‍ಗೆ ತುರುಕಿಕೊಂಡು ಮೈಸೂರಿಗೆ ಹೊರಟು ಅಮ್ಮನ ಹತ್ತಿರ ಒಗೆಸಿಕೊಂಡೆ.

ಅಮ್ಮ ಸಂತೋಷದಲ್ಲೇ ಒಗೆದು ಬಟ್ಟೆಗಳನ್ನು ನೀಟಾಗಿ ಮತ್ತೆ ನನ್ನ ಬ್ಯಾಗ್‍ಗೆ ಪ್ಯಾಕ್ ಮಾಡಿದಳು. ರಾತ್ರೋ ರಾತ್ರಿ ಬಸ್ಸು ಹಿಡಿದು ಶಿರಸಿ, ಬನವಾಸಿ, ಸಿದ್ದಾಪುರ ಸುತ್ತಿ ಬೆಳಗ್ಗೆ ಐದು ಗಂಟೆಗೆ ಬೆಂಗಳೂರಿನಲ್ಲಿ ಇಳಿದೆ.
ಒಂದು ಸಣ್ಣ ನಿದ್ರೆಯ ನಂತರ ಆಫೀಸಿಗೆ ಹೊರಡಲು ಅಣಿಯಾಗುವ ಮೊದಲು ಅಮ್ಮ ಒಗೆದ ಬಟ್ಟೆಗಳನ್ನು ಹ್ಯಾಂಗರ್‍ಗೆ ನೇತುಹಾಕುವ ಅಮ್ಮ ಒಗೆದು ಕಳಿಸಿದ್ದ ಬಟ್ಟೆಗಳ ಮೇಲೆ ನೂರಾರು ನೆರಿಗೆಗಳು ಮೂಡಿದ್ದವು. ನೆರಿಗೆಗಳನ್ನು ಹಿಡಿದು ಸ್ಪರ್ಶಿಸುವಾಗ ಅಮ್ಮನ ನೆನಪಾಯಿತು.
ಹಳೆಯದನ್ನು ನೆನೆಯುತ್ತ ಸ್ನಾನಕ್ಕೆ ಗೀಜರ್ ಆನ್ ಮಾಡಿ ಬಟ್ಟೆ ಐರನ್ ಮಾಡಲು ಹೊರಟೆ. ಅಮ್ಮನೇ ಒಗೆದು ಕಳಿಸಿದ್ದ ಪ್ಯಾಂಟ್‍ವೊಂದನ್ನ ಆರಿಸಿ ಐರನ್ ಮಾಡುವುದಕ್ಕೆ ಟೇಬಲ್ ಹರಡಿದಾಗ ನನ್ನ ಹೊಸ ಪ್ಯಾಂಟ್‍ನಲ್ಲಿದ್ದ ಗುಂಡಿ ಒಡೆದು ಚೂರಾಗಿತ್ತು. ಅದನ್ನೇ ಕಣ್ಣುಕೀಳದಂತೆ ನೋಡುವಾಗ ಯಾಕೋ ಅಮ್ಮನ ನೆನಪು ಉಮ್ಮಳಿಸಿ ಬಂತು.

‍ಲೇಖಕರು Avadhi

26 November, 2018

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading