ಅವನೆಂಬ ಬೆಳಕಿನ ಸಿರ
ಗೀತಾ ಎನ್ ಸ್ವಾಮಿ.
ಕಿಟಕಿಗೆ ಆತುಕೊಂಡಂತೆ ಮೈತುಂಬಾ ಎಲೆತುಂಬಿಕೊಂಡ ಹೊಂಗೇಮರ ರಾತ್ರಿ ಬೀದಿ ದೀಪದ ಕೆಳಗೆ ಮೌನವಾಗಿ ಅಲುಗುತ್ತಲೇ ಇರುತ್ತದೆ… ಅಲ್ಲಿ ಆಗಾಗ ಜೀವಿಗಳು ಆಡಿ ಹೋಗುತ್ತವೆ…. ಸರಿರಾತ್ರಿ ಹನ್ನೆರಡರ ಸುಮಾರಿಗೆ ಇದೇ ಮುಚ್ಚಿದ ಕಿಟಕಿಯನ್ನೇ ಸಾಕ್ಷಿಯಾಗಿ ಇಟ್ಟುಕೊಂಡು ಕತ್ತಿನಸಿರಕ್ಕೆ ಬೆಳಕಿಟ್ಟ ಅವನ ನೆನಪಾಯಿತು. ತಟ್ಟನೆ ಕಂಬಿ ಹಿಡಿದು ಮುಗಿಲ ಕಡೆಗೆ ಕಣ್ಣು ನೆಟ್ಟರೆ ಪೆರೆಯ ಜೀವವಿಳಿದು ಅವನನ್ನೇ ಕರೆತಂದು ಎದುರು ನಿಲ್ಲಿಸಿತು….
ಅಳುವ ಕಣ್ಗಳಿಗೆ ಜೊತೆಯಿಲ್ಲ. ಕಣ್ಣೀರಲ್ಲಿ ನೆಂದು ನೆಂದು ಚಂದಿರನೇ ಮುಗ್ಗಿಡಿದು ಒಣಗಲು ಬಿಸಿಲ ಎದುರು ನೋಡುತ್ತಿದ್ದಾನೆ. ತಿಳಿನೆಲದ ನನ್ನ ಕೋಣೆಯಲ್ಲಿ ಬಿಂಬವಾದವನು ಬುವಿಯ ಸೊಡರಂತೆ ಮಿನುಗ್ತಾ ಮಿನುಗ್ತಾ ಮರದ ಹಿಂದೆಯೇ ಇಳಿದು ಕಾಣದಾದ. ಹತಾಶೆಯಲ್ಲಿ ದಪ್ಪನೆ ಕುಳಿತ ಮೇಲೆ ತಲೆ ತುಂಬಾ ಅವನದೇ ವಾಸನೆ… ಅವನಿಗೋ ಮೈತುಂಬಾ ಜೀವಗಳೊಡೆದಿವೆ… ಧ್ಯಾನವೆಲ್ಲ ಅವುಗಳ ಕಡೆಗೆ…. ನನ್ನೊಳಗೆ ವಿಪರೀತ ಚಲಿಸುತ್ತಿರುವ ಅವನು ನನಗೆ ಜೀವವಾದದ್ದು ಅವನ ವಿವೇಕಕ್ಕೆ ಸರಿಯಾಗಿ ದಕ್ಕಿಲ್ಲ…..

ಈಸ್ಲು ಗೆಡ್ಡೆ ಹೊಯ್ವಾಗ ಅಗೆದು ಅಗೆದು ಇಳಿಸಂಜೆಗಾದರು ಗಿಣ್ಣಿನಂತೆ ಮೆದುವಾದ ನವಿರು ಪದರಗಳ ದಿಂಡು ಸಿಕ್ಕಿ ತಿಂದಿದ್ದು ನೆನಪಾಯ್ತು ಸಣ್ಣವರಿದ್ದಾಗ…. ಅವನನ್ನು ಅಗಿಯುತ್ತಲೇ ಇದ್ದೇನೆ ಸಿಕ್ಕಂತೆ ಸಿಕ್ಕು; ಸಿಗದಂತೆ ಕದ್ದು ಕತ್ತಲಾಗಿ ಬಿಡುತ್ತಾನೆ…… ಕತ್ತಲೆಯಲ್ಲಿ ತಡಕಿ ತಡಕಿ ಸಾಕಾದರೆ ಕಣ್ಣಿನಲ್ಲಿ ಅವನ ಮೂಳೆಗಳು ಇಳಿಬಿದ್ದು ಚುಚ್ಚುತ್ತವೆ… ಜೀವದಂತ ಜೀವವೇ ತನ್ನದೆಲ್ಲವನ್ನೂ ತೊರೆದು ಸ್ವಂತಕ್ಕೆ ಮಾಡಿಕೊಂಡ ಮೇಲು ಬಿಂಬವಾಗಿ ತಳಸೇರುತ್ತಾನೆ…. ಮೆಲ್ಲಗೆ ತಳಸೇರಿ ಅವನನ್ನೇ ಸೊಡರಾಗಿ ಹಚ್ಚಿಕೊಳ್ಳುತ್ತೇನೆ ನನ್ನೊಳಗೆ ಉರಿದು ಉರಿದು ಬೆಳಕಾಗಿ ಅರಳುತ್ತಾನೆ. ಅವನೊಳಗೆ ಕೆಟ್ಟು ಗುರುತ ಕಳೆದುಕೊಂಡವನನ್ನು ಮತ್ತೆ ಮತ್ತೆ ಹೊಲೆದುಕೊಳ್ಳುತ್ತೇನೆ.
ಈಗೀಗ ಎಲ್ಲವೂ ತಿಳಿಯುತ್ತಿದೆ. ಮಲೆತ ನೀರಿನ ದಡದಲ್ಲಿ ಜಾರಿದ್ದು, ಕೇದಿಗೆಯ ಗಮಲಿನ ಗರಿಗಳಲ್ಲಿ ಉರಗವಾಗಿ ಹರಿದದ್ದು ದೇವಕಣಗಿಲೆಯ ಗಿಡದಲ್ಲಿ ಅರಳುವಾಗಲೇ ಕೊಳೆತದ್ದು ಅಯ್ಯೋ.. ಸಿಗದ ಆಕ್ರೋಶಕ್ಕೆ ಯಾವಯಾವುದರ ಜೊತೆಯೋ ತಗಲಾಕಿ ಅವನನ್ನು ನಿಂದಿಸುತ್ತೇನೆ.. ಆಗೆಲ್ಲಾ ಹೆಚ್ಚು ಹೆಚ್ಚು ಮೆತ್ತಿಕೊಂಡು ಉಸಿರೊಳಗೆ ಬೆಳಕಾಗುತ್ತಾನೆ…. ಅಲ್ಲಿಯೇ ನೆಲೆಸಿದ್ದೇನೆ ಈಗ… ಅವನೊಳಕ್ಕೆ ದಾರಿ ಮಾತ್ರ ಇಲ್ಲ; ಠಾವು ಮಾಡಿಕೊಂಡು ನಡೆದು ಅವನೊಳಕ್ಕೆ ಸೇರೋಣವೆಂದರೆ ಅಲ್ಲಿ ಉಸಿರೊಯ್ಯುತ್ತಿರುವ ಸದ್ದು ಕೇಳುತ್ತದೆ. ಆ ಉಸಿರೆಲ್ಲಾ ನನಗೆ ನನ್ನದೇ ಹರಣವಾಗಿ ಜೊತೆಯಾದವು….
ನಿಂತೇ ಇದ್ದೇನೆ ಸಣ್ಣ ಕೇಡನ್ನು ಧರಿಸಿದ ದಿನ ಆ ದಾರಿಯ ಉಸಿರುಗಳಲ್ಲಿ ನಾನು ನನ್ನದೇ ಹೆಣಕ್ಕೆ ಸಿಂಗರಿಸಲಿಕ್ಕಿದೆ…. ಜೀವದ ದಾರಿಯಲ್ಲಿ ಹಣತೆಗಳಿವೆ, ಅವಕ್ಕೆಲ್ಲ ಬದುಕೆಂಬ ಹೆಸರು….ಅವನೆಂಬ ದೀಪವು ಅವನಿಗರಿವಿಲ್ಲದಂತೆ ನನ್ನೊಳಗೆ ಬೆಳಗಿದೆ….. ಮತ್ತೆಂದೂ ದೀಪ ಹಚ್ಚಲಾರೆ.….…ನಿಧಾನಕ್ಕೆ ತಲೆಯಲ್ಲಿ ಚಿಗುರಿದ್ದ ಜೀವ ಚಂದ್ರನಿಗೆ ಆಹುತಿಯಾಯ್ತು….
ಬಿತ್ತಿದ ಬೀಜಗಳು ಒಂದಿಡೀ ದಿನ ಬಿದ್ದ ಮಳೆಗೆ ಮೈಯ್ಯನ್ನೆಲ್ಲಾ ತೋಯಿಸಿಕೊಂಡು ಸೂರ್ಯನತ್ತಲೇ ನೋಡಿ ನಕ್ಕವು……. ಕಿಟಕಿಯಲ್ಲಿ ಚಂದಿರ ಹಣತೆಯಾಗಿ ಮೆತ್ತಿಕೊಂಡಿದ್ದಾನೆ….






ಮನಃ ದೀಪದ ಬೆಳಕು, ಚಂದಿರನಲ್ಲಿ ಸಿಲುಕು
ನೀಗುತಾ ನನ್ನಲಿನ ಕೊಳಕು, ಚಿಗುರೊಡೆಯಿತು ಆತ್ಮವಿಶ್ವಾಸವೆಂಬ ತುಣುಕು.!
ಅರ್ಪಣೆ: ಶ್ರೀಮತಿ ಗೀತಾ ಎನ್ ಸ್ವಾಮಿ.