ಡಾ.ಭರತಕುಮಾರರ ಹೊಸ ನಾಟಕ ಶಾಕುಂತಲ
ಕಲಾಸೃಷ್ಟಿ ಮತ್ತು ಪ್ರಯೋಗಶೀಲತೆಯ ಹಂಬಲ

ರಾಜೀವ ನಾರಾಯಣ ನಾಯಕ
ಡಾ. ಭರತಕುಮಾರ್ ಪೊಲಿಪುರವರ ಹೊಸ ನಾಟಕದ ಬಗ್ಗೆ ಮುಂಬಯಿ ತುಳು-ಕನ್ನಡಿಗರಿಗೆ ಸದಾ ಕುತೂಹಲವಿರುತ್ತದೆ. ಮುಂಬಯಿಯ ಮಾತ್ರವಲ್ಲ ಒಟ್ಟಾರೆ ಕನ್ನಡ ಮತ್ತು ತುಳು ರಂಗಭೂಮಿಯ ನಮ್ಮ ಕಾಲದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾಗಿರುವ ಅವರು ಕೈಗೆತ್ತಿಕೊಳ್ಳುವ ನಾಟಕದ ವಸ್ತು, ನಿರೂಪಣಾ ವಿಧಾನ, ಪರಿಚಯಿಸುವ ನವಕಲಾವಿದರ ಬಗ್ಗೆ ಒಂದು ಬೆರಗು ಇರುತ್ತದೆ.ಮೊನ್ನೆ ಶನಿವಾರದಂದು ಮುಂಬಯಿ ಕರ್ನಾಟಕ ಸಂಘದಲ್ಲಿ ಅವರ ನಿರ್ದೇಶನದ ತುಳು ನಾಟಕಶಾಕುಂತಲಆ ಬೆರಗನ್ನು ಇನ್ನಷ್ಟು ಬೆಚ್ಚಗಾಗಿಸಿತು. ನಾಟಕ ನೋಡಲು ಹೋಗುವ ಮೊದಲು ನನ್ನಲ್ಲಿ ಎರಡು ಪ್ರಶ್ನೆಗಳಿದ್ದವು:
೧)ಮಹಾಕವಿ ಕಾಳಿದಾಸನ ಶಾಕುಂತಲ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಕತೆಯಾದ್ದರಿಂದ ಮತ್ತು ಘಟನಾವಳಿಗಳು ನಿರೀಕ್ಷಿತ ನೆಲೆಯಲ್ಲಿ ಚಲಿಸುವುದರಿಂದ ಇಂದಿನ ಧಾವಂತದ ಪ್ರೇಕ್ಷಕರನ್ನು ಎರಡು ಗಂಟೆ ವರೆಗೆ ಹಿಡಿದಿಟ್ಟುಕೊಳ್ಳಬಲ್ಲದೆ?
೨) ನಾಟಕದ ವಸ್ತು ವಿಷಯ ಪ್ರಸ್ತುತ ಕಾಲದ ಸಂವೇದನೆಯನ್ನು ಚುರುಕುಗೊಳಿಸಬಲ್ಲದೆ?
ತುಂಬಿದ ಸಭಾಗೃಹದಲ್ಲಿ ಕೊನೆಯ ವರೆಗೂ ಅಲುಗಾಡದೇ ಎರಡು ತಾಸಿನ ನಾಟಕ ಆಸ್ವಾದಿಸಿದ ಪ್ರೇಕ್ಷಕರನ್ನು ನೋಡಿದಾಗ ನನ್ನ ಮೊದಲನೇ ಪ್ರಶ್ನೆ ಪ್ರಶ್ನೆಯಾಗುಳಿಯಲಿಲ್ಲ. ಲವಲವಿಕೆಯ ಅಭಿನಯ, ಕಚಗುಳಿಯಿಡುವ ಸಂಭಾಷಣೆ,ಬೆಳಕು ಮತ್ತು ರಂಗಸಜ್ಜಿಕೆಯಿಂದ ಅನಾವರಣಗೊಂಡ ಅಧ್ಬುತ ಲೋಕ ಪ್ರೇಕ್ಷಕರನ್ನು ಕೊನೆಯ ವರೆಗೂ ಮಂತ್ರ ಮುಗ್ಧರನ್ನಾಗಿಸಲು ಸಮರ್ಥವಾಯಿತು.
ಎರಡನೇ ಪ್ರಶ್ನೆಯನ್ನು ನನಗೆ ನಾನೇ ಹಾಕಿಕೊಳ್ಳಲು ಕಾರಣವಿತ್ತು. ಇತ್ತೀಚಿನ ದಿನಗಳಲ್ಲಿ ಡಾ.ಭರತರವರು ಅಂಬೆ, ಮೃಗತೃಷ್ಣಾದಂಥ ಪೌರಾಣಿಕ ಹಿನ್ನಲೆಯ ನಾಟಕಗಳ ಮೂಲಕ ಸದಾಕಾಲದ ಸ್ತ್ರೀ ಸಂವೇದನೆಯನ್ನು, ಸವಾಲುಗಳನ್ನು ಪ್ರಸ್ತುತ ಸಂದರ್ಭದ ತಲ್ಲಣಗಳಿಗೆ ಕಸಿ ಮಾಡುವ ಮೂಲಕ ವಿಷಯವಸ್ತುವನ್ನು ಸಮಕಾಲೀನಗೊಳಿಸಿದ್ದರು. ಅಥವಾ ಶ್ರೀರಂಗರ ಗುಮ್ಮನೆಲ್ಲಿಹ ತೋರಮ್ಮನಂಥ ಬುದ್ಧಿಗಮ್ಯ ನಾಟಗಳ ಮೂಲಕ ಮುಂಬಯಿ ಪ್ರೇಕ್ಷಕರನ್ನು ನಾಟಕ ವೀಕ್ಷಣೆಯ ಸಾಮಾನ್ಯ ಅನುಭದಿಂದ ಒಂದು ಮಟ್ಟ ಮೇಲಕ್ಕೇರಿಸುವ, ಅವರಲ್ಲಿ ಚಿಂತನಶೀಲ ಅಭಿರುಚಿಯನ್ನು ಬೆಳೆಸುವ ಪ್ರಯತ್ನ ಮಾಡಿದ್ದರು. ಆದರೆ ಶೃಂಗಾರ ಪ್ರಧಾನವಾದ ಶಾಕುಂತಲ ನಾಟಕದಲ್ಲಿ ಅಂಥ ಸಾಧ್ಯತೆಗಳಿವೆಯೇ?ಈ ನಾಟಕದ ವಸ್ತು ವಿಷಯ ಪ್ರಸ್ತುತ ಕಾಲದ ಸಂವೇದನೆಯನ್ನು ಚುರುಕುಗೊಳಿಸಬಲ್ಲದೆ?
ಖಂಡಿತ! ಶಾಕುಂತಲಾ ನಾಟಕ ಕೂಡ ಸಾಂಸ್ಕೃತಿಕವಾಗಿ ರಾಜಕೀಯವಾಗಿ ಆಧುನಿಕ ಸಂದರ್ಭದ ತಲ್ಲಣಗಳಿಗೆ ಸ್ಪಂದಿಸಲು ಸಶಕ್ತವಾಗಿದೆ, ಆದರೆ ಅತಿ ಸೂಕ್ಷ್ಮ ನೆಲೆಯಲ್ಲಿ. ಅಂಥ ಅನೇಕ ಅಂಶಗಳನ್ನು ಹೇಳಬಹುದಾದರೂ ನನಗೆ ಹೆಚ್ಚು ಪ್ರಸ್ತುತವಾಗಿ ಕಂಡದ್ದು: ೧) ಕಳೆದು ಹೋಗುತ್ತಿರುವ ಪರಿಸರ ಸಂಸ್ಕ್ರತಿ ೨) ಅರಳುವ ಮತ್ತು ನರಳುವ ಮನುಷ್ಯ ಪ್ರೀತಿ!
ಪಶುಪಕ್ಷಿ, ಗಿಡಬಳ್ಳಿಗಳು ಕೇವಲ ಮನುಷ್ಯನ ಸೌಂದರ್ಯೋಪಾಸನೆಯ ಆವರಣಗಳು ಮಾತ್ರವಲ್ಲ; ಅವು ಸಕಲ ಜೀವಿಗಳ ಸಂಬಂಧಗಳ ಕರುಳುಬಳ್ಳಿ ಎಂಬುದು ನಾಟಕದಲ್ಲಿ ಅರಿವಾಗುವ ಮುಖ್ಯ ಅಂಶ. ಶಕುಂತಲೆಯ ವಿದಾಯ ಸಮಯದಲ್ಲಿ ಕಣ್ವ ಮಹರ್ಷಿಗಳ ಆಶ್ರಮದಲ್ಲಿ ಇದು ದಟ್ಟವಾಗಿ ಅಭಿವ್ಯಕ್ತಿಗೊಳ್ಳುತ್ತದೆ.
ಇಲ್ಲಿ ವಿದಾಯದ ನೋವಿನ ಕ್ಷಣದಲ್ಲಿ ಮನುಷ್ಯ ಹೃದಯಗಳು ಮಾತ್ರ ಮಿಡಿಯುವುದಿಲ್ಲ. ಜಿಂಕೆ ಹಸುಗಳಂಥ ಪಶುಗಳೂ, ಗಿಳಿ ಕೋಗಿಲೆಗಳಂಥ ಪಕ್ಷಿಗಳೂ, ಜಾಜಿ ಮಲ್ಲಿಗೆಯಂಥ ಬಳ್ಳಿಗಳೂ ಭಾವುಕ ಕ್ಷಣದ ಭಾಗವಾಗುತ್ತವೆ. ಸ್ವಪ್ರತಿಷ್ಠೆ ಮತ್ತು ಒಣ ಅಹಂಕಾರದಲ್ಲಿ ಮನುಷ್ಯ ಮನುಷ್ಯರ ನಡುವೆ ಗೋಡೆ ಕಟ್ಟಿಕೊಂಡಿದ್ದರಿಂದಲೇ ಇಂದು ನಾವೆಲ್ಲ ಒಂಟಿತನ ತಬ್ಬಲಿತನದಂಥ ಆಧುನಿಕ ವ್ಯಾಧಿಗಳಿಂದ ಬಳಲುವಂತಾಗಿದೆ ಎಂಬ ದರ್ಶನವಾಗುತ್ತದೆ.
ಪ್ರೀತಿ ಪ್ರೇಮ ವಿರಹ ವಿದಾಯ ನಾಟಕದ ಇನ್ನೊಂದು ಸಾರ್ವಕಾಲಿಕ ಆಯಾಮ. ಹೆಣ್ಣು-ಗಂಡಿನ ಸಹಜ ಆಕರ್ಷಣೆ ಪ್ರೀತಿಯಾಗುವ ಪ್ರೇಮವಾಗುವ ಕಾಲಾತೀತ ಶಕ್ತಿಯೊಂದಿದೆ. ದುಷ್ಯಂತ ಶಕುಂತಲೆಯರ ಮೊದಲ ನೋಟದ ಪ್ರೇಮ ನಿರಂತರವಾಗಿ ಇನ್ನೂ ಹರಿಯುತಿದೆ. ಆ ಪ್ರೇಮನದಿ ದಾಟುವ ಪ್ರೇಮಿಗಳು ಮಾತ್ರ ಬದಲಾಗುತ್ತಿದ್ದಾರೆ, ಅಷ್ಟೆ. ಬಹುಶ: ಅದನ್ನೇ ನಾವು ಅಮರ ಪ್ರೇಮ ಎನ್ನುವುದು! ಆದರೆ ಪ್ರೇಮಕ್ಕೆ ಇನ್ನೊಂದು ಮುಖವೂ ಇದೆ; ವಿರಹ ಮತ್ತು ವಿದಾಯ! ಅರಳಿದ ಪ್ರೇಮ ಕೆಲವೊಮ್ಮೆ ನರಳುತ್ತದೆ. ಸ್ಮೃತಿ-ವಿಸ್ಮೃಗಳ ದ್ವಂದ್ವದದಲ್ಲಿ ಪ್ರೀತಿ ಬಡವಾಗುತ್ತದೆ. ಅಥವಾ ವಿರಹ ಮತ್ತು ವಿದಾಯಗಳೂ ಪ್ರೇಮದ ತೀವ್ರತೆಯನ್ನು ಉದ್ದೀಪಿಸಲೆಂದೇ ಇರುವವೇ?
ನಾಟಕವು ಇಂಥ ಪ್ರಶ್ನೆಗಳನ್ನು ಹುಟ್ಟುಹಾಕುವುದರಿಂದ ಭಾವನಾತ್ಮಕ ನೆಲೆಯಿಂದ ಒಂದಿಂಚು ಮೇಲೆ ನೆಗೆಯುವಂತಾಗುತ್ತದೆ.
ಇನ್ನು ಅಭಿನಯದ ಬಗ್ಗೆ ಹೇಳುವುದಾರೆ: ದುಷ್ಯಂತನ ಪಾತ್ರದಲ್ಲಿ ಮುಂಬಯಿಯ ಕಲಾವಿದ ಮೋಹನ್ ಮಾರ್ನಾಡ್ ಅತ್ಯುತ್ತಮವಾಗಿ ನಟಿಸಿದ್ದಾರೆ. ನೆನಪು- ಮರೆವು, ಪ್ರೀತಿ-ವಿರಹಗಳ ತಾಕಲಾಟವನ್ನು ಚೆನ್ನಾಗಿ ಅಭಿವ್ಯಕ್ತಿಸಿದ್ದಾರೆ. ಶಕುಂತಲೆಯಾಗಿ ರೇಷ್ಮಾ ಶೆಟ್ಟಿ ತಾನೊಬ್ಬ ಉತ್ತಮ ಕಲಾವಿದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅನಸೂಯಾ ಹಾಗೂ ಪ್ರಿಯಂವದೆಯರಾಗಿ ಶ್ರೀನಿಧಿ ಮತ್ತು ದೀಕ್ಷಾ
ಲವಲವಿಕೆಯಿಂದ ನಟಿಸಿ ಗಮನ ಸೆಳೆಯುತ್ತಾರೆ. ಸುರೇಂದ್ರ ಮಾರ್ನಾಡ್ ತಮ್ಮ ಪಾದರಸದ ಚಲನೆಯಿಂದ ವಿದೂಷಕನ ಪಾತ್ರದಲ್ಲಿ ಮಿಂಚುತ್ತಾರೆ.
ಗೌತಮಿ ಮತ್ತು ಕಣ್ವ ಮಹರ್ಷಿಗಳು ಶಕುಂತಲೆಯ ವಿದಾಯದ ನೋವನ್ನು ಅನುಭವಿಸುವ ದೃಶ್ಯಕ್ಕೆ ವಿಜಯಲಕ್ಷ್ಮಿ ಮತ್ತು ಐತಾಳರು ಜೀವ ತುಂಬಿಸಿ ಪ್ರೇಕ್ಷಕರ ಮನಸ್ಸುಗಳನ್ನು ಆರ್ದ್ರಗೊಳಿಸುತ್ತಾರೆ. ಶಕುಂತಲೆಯನ್ನು ಶಾರ್ಗರವ ಮುನಿ ಅರಮನೆಗೆ ಕರೆತಂದಾಗ ದುಷ್ಯಂತನಿಂದ ತಿರಸ್ಕ್ರತಳಾಗುವ ಸನ್ನಿವೇಶದಲ್ಲಿಯ ಮುಜುಗರ ಹತಾಶೆ, ಸಾತ್ವಿಕ ಸಿಟ್ಟನ್ನು ಕಲಾವಿದ ಅವಿನಾಶ್ ಕಾಮತ್ ತಮ್ಮ ದೇಹದ ಚಲನೆ ಮತ್ತು ಧ್ವನಿಯ ಏರಿಳಿತಗಳಲ್ಲಿ ಉತ್ತಮವಾಗಿ ಅಭಿವ್ಯಕ್ತಿಸಿದ್ದಾರೆ. ಅಶೋಕಕುಮಾರ ಕಾರ್ನಾಡ್ ಮಾರೀಚನ ಪಾತ್ರಕ್ಕೆ ಗಾಂಭೀರ್ಯವನ್ನು ತಂದಿದ್ದಾರೆ.
ಲತೇಶ್, ಸುಧಾ ಶೆಟ್ಟಿ,ಜೀವನದಾಸ್,ಧೀರಜ್,ಆಶಿಶ್ ಕೂಡ ತಮ್ಮ ಚಿಕ್ಕ ಪಾತ್ರಗಳನ್ನು ಚಂದವಾಗಿ ನಿರ್ವಹಿಸಿದ್ದಾರೆ. ಆದರೆ ಎಲ್ಲರಿಂದ ಹೆಚ್ಚು ಚಪ್ಪಾಳೆ ಗಿಟ್ಟಿಸಿದವನು ಮಾಸ್ಟರ್ ಸುವಿದ್! ಅವನು ಕಾಡಿನಲ್ಲಿಯ ಹುಲಿಗಳಿಗೆ ಮಾತ್ರವಲ್ಲ ಸಭಾಗ್ರಹದಲ್ಲಿ ತುಂಬಿದ ಪ್ರೇಕ್ಷಕರಿಗೂ ಹೆದರುವುದಿಲ್ಲ; ಆಶ್ರಮದಲ್ಲಿ ಬೆಳೆಯುತ್ತಿರುವ ಬಾಲಕ ದುಷ್ಯಂತನ ಮಗ ಸರ್ವದಮನ ಪಾತ್ರದಲ್ಲಿ ಚೂಟಿಯಾಗಿ ನಟಿಸಿದ್ದಾನೆ.
ರಾಮಚಂದ್ರ ಹಡಪದ, ಮನೋಜ ರಾವ್ ತಮ್ಮ ಸಂಗೀತದಿಂದ ಅನೇಕ ಕಡೆಗಳಲ್ಲಿ ಸನ್ನಿವೇಶದ ಭಾವತೀವ್ರತೆ ಹೆಚ್ಚುವಂತೆ ಮಾಡಿದ್ದಾರೆ. ಮಂಜುನಾಥ್ ಶೆಟ್ಟಿಗಾರರ ಪ್ರಸಾದನ ಯಥೋಚಿತವಾಗಿದೆ.ಬೆಳಕು ಮತ್ತು ರಂಗ ವಿನ್ಯಾಸ ಇಡೀ ನಾಟಕದಲ್ಲಿ ಮುಖ್ಯ ಭೂಮಿಕೆಯನ್ನು ವಹಿಸಿವೆ. ರಂಗದಲ್ಲಿ ಹುಣ್ಣಿಮೆ ಚಂದ್ರನನ್ನು ಮೂಡಿಸಿದ್ದು ರಮ್ಯವಾಗಿತ್ತು. ಲೋಕೇಶ್ ಮತ್ತು ವಿಶ್ವೇಶ್ವರ ಪರ್ಕಳ ಅಭಿನಂದಾರ್ಹರು. ಸುಂದರ್, ಸುಧಾಕರ್, ವಿಶ್ವನಾಥ್ ನೇಪಥ್ಯದಲ್ಲಿ ದೃಶ್ಯಗಳ ಬದಲಾವಣೆಯಂಥ ಕಾರ್ಯವನ್ನು ಸುಲಲಿತವಾಗಿ ಮಾಡಿದ್ದಾರೆ. ಎಲ್ಲವನ್ನೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿರುವ ಓಂದಾಸ್ ಕಣ್ಣಂಗಾರ್ ಕೂಡ ಅಭಿನಂದನಾರ್ಹರು.
ಡಾ.ಭರತಕುಮಾರ್ ಇಡೀ ನಾಟಕವನ್ನು ಒಂದು ದೃಶ್ಯ ಕಾವ್ಯವಾಗಿಸಿದ್ದಾರೆ; ಕಲಾಸೃಷ್ಟಿ ಮತ್ತು ಪ್ರಯೋಗಶೀಲತೆಯಿಂದ ಮುಂಬಯಿ ತುಳು-ಕನ್ನಡಿಗರ ಮನಸ್ಸಿಗೆ ಮುದ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.






0 Comments