ನವೀನ್ ಸಾಗರ್
ನನಗೆ ತುಂಬಾ ಅಚ್ಚರಿ ಮತ್ತು ಮನಸಿನೊಳಗೊಂದು ತುಸು ಸಂತೋಷ ಮೂಡಿದ್ದು ಈ ಭಾರಿ ಊರಿಗೆ ಹೋದಾಗಲೇ…ಸದಾ ಶಾಂತಚಿತ್ತವಾಗಿ ರಸ್ತೆಯಲ್ಲಿ ನರಪ್ರಾಣಿಗಳ ಸಂಚಲನ ಬಲು ಅಪರೂಪವಾದ ನಮ್ಮ ಊರರಲ್ಲಿ ‘ಯಕ್ಷ ದರ್ಶನ’…!!? ಇಡಿ ಊರು ಒಂದುರೀತಿಯಲ್ಲಿ ನೀರಶ ಮೌನದಿಂದ ತುಂಬಿರುತ್ತಿದ್ದ ನಮ್ಮ ಊರು ಈ ಬಾರಿ ತನ್ನ ಮೌನವನ್ನು ಮುರಿದು ಪದ ತಾಳಕ್ಕೆ ದನಿಯಾಗಿತ್ತು. ನಮ್ಮ ಊರಿನ ಪುಟ್ಟ ಮಕ್ಕಳಿಂದ ಹಿಡಿದು, ಗ್ರಾಮದ ಯುವ ಕುಡಿಗಳೂ ಹೆಜ್ಜೆ ಹಾಕಿದ್ದರು. ಹಾಂ…. ಅದು ಅಂತಿತ್ತ ಹೆಜ್ಜೆಯಲ್ಲ, ಒಗ್ಗಟ್ಟಿನ ಹೆಜ್ಜೆ, ಸಹಕಾರದ ಹೆಜ್ಜೆ, ಅದರೊಂದಿಗೆ ಯಕ್ಷಗಾನದ ಹೆಜ್ಜೆ. ಸದಾ ಖಾಲಿ ಖಾಲಿಯಾಗಿರುತ್ತಿದ್ದ ನಮ್ಮೂರು ಒಂದಿಷ್ಟು ಚೇತರಿಸಿಕೊಂಡಿದೆ. ಸದಾ ತಮ್ಮ ಕೃಷಿ ಬದುಕಿನಲ್ಲಿ ಪರಾವಲಂಬಿಗಳಾಗಿದ್ದ ನಮ್ಮ ಗ್ರಾಮಸ್ಥರು ಸಹಾಕಾರ ತತ್ವಕ್ಕೆ ಒಗ್ಗಿಕೊಂಡು ತಮ್ಮ ಕೃಷಿ ಜೀವನ ನಡೆಸುತ್ತಿದ್ದಾರೆ. ಒಬ್ಬರಿಗೊಬ್ಬರು ಅಡಿಕೆ ಸುಲಿಯುವುದರಿಂದ ಹಿಡಿದು, ಪಂಖ್ತಿ ಭೋಜನದವರೆಗೂ ಸಹಾಕಾರ ಮೂಡಿದೆ.
ನಮ್ಮ ಗ್ರಾಮದ ಯುವಕರು ಪ್ರತಿಯೊಬ್ಬರೂ ಪದವಿದರರಾಗಿದ್ದು, ದೊಡ್ಡ ದೊಡ್ಡ ಹುದ್ದೆಗಳು ಸಿಕ್ಕರೂ ಕೂಡಾ ತಮ್ಮ ಕೃಷಿ ಜೀವನದ ಬದುಕನ್ನು ಹರಸಿ ತಮ್ಮ ಊರಿನಲ್ಲೇ ಉಳಿದವರಿದ್ದಾರೆ. ಒಂದಲ್ಲಾ ಒಂದು ಕೆಲ್ಸದಲ್ಲಿ ನಿರತರಾಗಿರುವ ನಮ್ಮ ಗ್ರಾಮಸ್ಥರಲ್ಲಿ ಕಲೆಯ ಬಗ್ಗೆ ಅದರಲ್ಲೂ ಯಕ್ಷಗಾನದ ಬಗ್ಗೆ ಒಂದಿಷ್ಟು ವ್ಯಾಮೋಹ ಹೆಚ್ಚಾಗಿದೆ. ಅಳಿವಿನ ಹಾಗೂ ಬದಲಾವಣೆಯ ಸುಳಿಗೆ ಸಿಕ್ಕಿರುವ ಯಕ್ಷಗಾನ ನಮ್ಮ ಗ್ರಾಮದ ಯುವಕರನ್ನ ಆಕರ್ಷಿಸಿದೆ. ಇಂದಿನ ಬಾನುಲಿ ತಾಂತ್ರಿಕತೆಯಲ್ಲಿ ಯಕ್ಷಗಾನ ಕಲೆ ಮಾಸಿ ಹೋಗಿದೆ. ಹಿಂದೆಲ್ಲಾ ದೊಡ್ಡಾಟ ಚಿಕ್ಕಾಟ, ಬಯಲಾಟ, ಕೋಲಾಟ, ಡೊಳ್ಳು ಕುಣಿತ, ನಾಟಕ, ಗೊಂಬೆಯಾಟ ಹೀಗೆ ಹೆಸರನ್ನು ಮರೆಯುತ್ತಿರವ ಕಲೆಗಳೆಲ್ಲಾ ಪರದೆಯ ಹಿಂದೆ ಸರಿದು ಹೋಗುತ್ತಿವೆ.
ಮನರಂಜನೆ ಹೊಸರೂಪ ಪಡೆದು ಚಿಕ್ಕ ಚೌಕಟ್ಟಿನಲ್ಲಿ ಬಣ್ಣ ಬಣ್ಣದಲ್ಲಿ ಮೂಡಿ ಬರತೊಡಗಿದ್ದು, ನಮ್ಮ ಜನರನ್ನು ಸೆಳೆದು ಬಿಟ್ಟಿದ್ದವು. ಸಂಜೆಯಾಗುತ್ತಲೇ ಧಾರಾವಾಹಿ ಸಿನಿಮಾ ಎಂದು ಬಣ್ಣದ ಪರದೆಯ ಮುಂದೆ ಕಣ್ಣು ಮಿಟುಕಿಸದೇ ಕೂರುತ್ತಿದ್ದ ನಮ್ಮವರಲ್ಲಿ ಹೊಸ ಬೆಳಕು ಮೂಡಿದೆ. ಯಕ್ಷಗಾನಕ್ಕೆ , ಆ ಚಂಡೆಯ ನಾದಕ್ಕೆ ಕಂಚಿನ ಕಂಠದ ಪದಕ್ಕೆ ಗೆಜ್ಜೆ ನಾದಕ್ಕೆ ಧಾರ್ಮಿಕತೆಯ ತಿಳಿ ಹಾಸ್ಯದ ಸಂವಾದದ ಯಕ್ಷ ಅಲೆಗೆ ಹೊಸ ರೂಪ ಕೊಡುತ್ತಿದ್ದಾರೆ……. ನಮ್ಮ ಗ್ರಾಮದ ಯುವಕ ಯುವತಿಯರು ಈಗ ಯಕ್ಷಗಾನ ಕಲೆಯುತ್ತಿದ್ದಾರೆ. ವಾರದಲ್ಲಿ ಎರಡು ದಿನ ಇದಕ್ಕಾಗಿಯೇ ಮೀಸಲಿಟ್ಟಿದ್ದಾರೆ. `ಯುವ` ಗ್ರಾಮಸ್ಥರು ತಮ್ಮ ಸ್ವಂತ ಖರ್ಚಿನಲ್ಲಿ ಯಕ್ಷಗಾನದ ತರಬೇತಿ ಪಡೆಯುತ್ತಿದ್ದಾರೆ. ನಮ್ಮ ಪಪಕ್ಕದ ಊರಿನ ಯಕ್ಷಗಾನ ಕಲಾವಿದ ಮಧುರವರಿಂದ ತರಬೇತಿ ಪಡೆಯುತ್ತಿದ್ದಾರೆ. ಈಗಾಗಲೇ, ಹೆಜ್ಜೆ ಹಾಕುವುದನ್ನು ಕಲಿತು ಬಿಟ್ಟಿದ್ದಾರೆ.
ಥಾ…ಥಯಕ… ಧಿನಕ ತೋಂ….ಎಂಬ ಪ್ರಥಮ ಯಕ್ಷಗಾನದ ಪದಕ್ಕೆ ಲಯಬದ್ಧವಾಗಿ ಹೆಜ್ಜೆ ಹಾಕುತ್ತಿದ್ದಾರೆ. ಇದರೊಂದಿಗೆ ಗ್ರಾಮದ ಜನರ ಭಾವನೆ ಮತ್ತು ಸ್ನೇಹ `ಹೆಜ್ಜೆ` ಹಾಕುತ್ತಿದೆ. ತಮ್ಮವರು ಎಂಬ ಭಾವ ಹೆಚ್ಚಾಗಿದೆ. ನನಗೆ ಖುಷಿಕೊಟ್ಟ ವಿಷಯವೆಂದರೆ ಎಲ್ಲರೂ ಗ್ರಾಮದ ಒಂದು ಮನೆಯಲ್ಲಿ ವಾರದ ಎರಡು ದಿನ ಸೇರಿ ಒಬ್ಬರನ್ನೊಬ್ಬರು ಭಾವನಾತ್ಮಕವಾಗಿ ಬೆರೆಯುವ ಹಾಗೂ ಸ್ನೇಹ ವಿಶ್ವಾಸಕ್ಕೆ ಒಂದು ತಳಹದಿಯನ್ನ ಹಾಕಿಕೊಟ್ಟಿದ್ದಲ್ಲದೆ ಒಂದು ಹೊಸ ತಲೆಮಾರಿಗೆ ಮಾದರಿಯಾಗಿದೆ.
ಅಲ್ಲಿನ ವಾತಾವರಣ ಹೇಗಿತ್ತೆಂದರೆ ಇದು ನಮ್ಮ ಊರೇ?…. ಎಂದು ನನ್ನಲ್ಲೇ ಪ್ರಶ್ನೆ ಉದ್ಭವವಾಗಿತ್ತು. ವಿಸ್ಮಯವಾಗಿ ತದೇಕ ಚಿತ್ತದಿಂದ ಅವರಲ್ಲಿ ನಾನೂ ಒಬ್ಬನಾದೆ. ಚಿಕ್ಕವರಿದ್ದಾಗ ಲಘೋರಿ, ಚನ್ನೆಮಣೆಆಟ, ಗೋಲಿಯಾಟ, ಚಿನ್ನಿಕೋಲಾಟ, ಮರಕೋತಿ ಆಟ, ಎಲ್ಲವೂ ಮಸ್ತಕದಲ್ಲಿ ಮಿಂಚಿ ಕಣ್ಣಮುಂದೆ ಹಾದು ಹೋಗಿದ್ದವು. ಆ ದಿನಗಳೆಲ್ಲ ಸರಿದು ಹೋದರೂ ಮತ್ತೆ ಮತ್ತೆ ನೆನಪಿನ ಬುತ್ತಿ ಬಿಚ್ಚುತಿತ್ತು. ಸುಡು ಬಿಸಿಲಿಗೆ ಭೂಮಿಯ ಮಣ್ಣು ಕಾದಿರುವಾಗ ಸುರಿದ ವಸಂತದ ಮಳೆಗೆ ಮಣ್ಣಿನ ಸುವಾಸನೆ ಎಲ್ಲೆಡೆ ಪಸರಿಸುವಂತೆ ನಮ್ಮೂರಿನ ಬದಲಾವಣೆ ಕಂಡು ಮನ ತಂಪಾಗಿತ್ತು.









0 Comments