ಈಕಿನಾ ಏನ್ ನಾನು ನಿಶ್ಚಿತಾರ್ಥದಾಗ ನೋಡಿ ಸೋತದ್ದು?!

ಮದುವೆ ಮನೆಯಲ್ಲಿ ನಾ ಕಂಡ ಅಚ್ಚರಿಗಳು

ಮುನಿ ಹೂಗಾರ್


ಮದುವಣಗಿತ್ತಿ ಸಿಂಗಾರ :
ನಮ್ ದೇಶದಾಗ ಯಾವ ಗಂಡಸಿನ ಹತ್ರ ಹೋಗಿ, ನಿನ್ ಹೆಂಡ್ರು ಆಡಂಭರದ ಸಿಂಗಾರದಾಗ ಸುಂದ್ರಿನೋ, ಇಲ್ಲಾ ನಿರಾಭರಣ – ನಿರ್ಬಣ್ಣದಾಗ ಸುಂದ್ರಿನೋ ಅಂದ್ರ ಖರೇ ಹೇಳ್ತನ್ರಿ, ಅವ ಬಯಸದ್ ಸರ್ವಸಿಂಗಾರ ಬಿಟ್ಟು ಲಕ್ಷಣವಾಗಿ ಕಾಣ ನಿರಾಭರಣ ಸುಂದ್ರಿನಾ ನೋಡ್ರಿ.
ಆದ್ರ ಈಗಿನ್ ನಮ್ ಮದುವ್ಯಾಗ್ ಯಾಕೋ ಏನೋ, ಈ ಎಲ್ಲಾ ಮರೆತ ಹೆಣ್ ಮಕ್ಳೂ, ಸುಮ್ಮನಾ ತಾಯಾದ ತಾಯಂದ್ರೋ, ಅಪ್ರಯೋಜಕ ಗೆಳತಿರೋ, ಇಲ್ಲಾ ಈಚೆಗೆ ಮದುವಿ ಹೆಣ್ಣಿಗೆ ಸಿಂಗಾರ ಮಾಡದ್ನ ಒಂದ್ ವ್ಯವಹಾರ ಮಾಡಕ್ಯಂಡ ಕೆಲಸಕ್ಬಾರದ ಸಿಂಗಾರಕಿಯರೋ ಮಾಡ ಕೆಲ್ಸಕ್ಕ ನಮ್ ಮಧುಮಗ್ಗ ಎಷ್ಟ ಸಂದೇಹ ಹುಟ್ಟಸ್ತಾವು ಗೊತ್ತದೇನ್ರಿ?
ಈಕಿನಾ ಏನ್ ನಾನು ನಿಶ್ಚಿತಾರ್ಥದಾಗ ನೋಡಿ ಸೋತದ್ದು?, ಈಕಿ ಕೂಡ ಏನ್ ನಾನ್ ಸರ್ವೊತ್ತವರಿಗು ಪೋನ್ಯಾಗ ನಿರಾಳಾಗಿ ಮಾತಾಡಿದ್ದು?, ಇಲ್ಲಾ ಅವಾಗಾವಾಗ್ ಕದ್ದು ಮುಚ್ಚಿ ಗೆಳತಿ ಕೂಡ ಸಿಕ್ಕಾಗ್ ದಿನದುಡುಗೆ , ತೊಳದ್ ಮಖದಾಗ ಕುಂಕುಮ ಇಟ್ಡ ಚಂದಾಗಿ ಕಂಡ ಹುಡುಗಿ ಇಕಿನಾ ಏನ್ ಅನ್ನಸೋವಷ್ಟು ಮಖಕ್ಕ ಬಣ್ಣ – ಮೈಗೆ ಬಂಗಾರ ಹಾಕಿರ್ತಾರ ನೋಡ್ರಿ.
ಅದ ಹ್ಯಾಂಗ್ ಸಿಂಗಾರ ಮಾಡ್ತಾರ ಗೊತ್ತೇನ್ರಿ, ಆ ನಾ ನಿನ್ನ ಬಿಡಲಾರೆ ಸಿನಿಮಾದಾಗ್ ಅನಂತ್ನಾಗ ದೆವ್ವಾಗಿ ಬಂದಾಗ ಮಾಡಿರ್ತಾರ ನೋಡ್ರಿ, ಡಿಟ್ಟೂ ಹಂಗಾ ನೋಡ್ರಿ, ಇನ್ನು ಆಕಿ ಗೆಳತಿರ ನೋಡಬಕ್ರಿ ನೀವು, ಬೆಚ್ಚಿಬಿದ್ದಬಿಡ್ತೀರಿ, ಇದೇನ್ ಮದುವಿನಾ ಇಲ್ಲಾ ನಮ್ಮ ಉಕ್ಕಡಗಾತ್ರಿ ಕರಿಬಸಜ್ಜನ ಜಾತ್ರಿನಾ ಅಂತಾ?
ನಮ್ ಹಳ್ಳ್ಯಾಗ್ ಹಿಂಗೆಲ್ಲಾ ಮಾಡಲ್ಲಬಿಡ್ರಿ , ಅದೇನಿದ್ರು ಈ ಪಾಶ್ ಆಗಿರೋ ಪ್ಯಾಟ್ಯಾಗ ನೋಡ್ರಿ. ಆ ಲಕ್ಷಣವಾಗಿರೋ ನಮ್ ಕನ್ನಡದಕಿನಾ ಫಾರಿನ್ ಹುಡುಗಿ ಹಾಂಗೋ ಇಲ್ಲಾ ಯಾದೋ ದೆವ್ವದ್ ಸಿನಿಮಾದ್ ಹಿರೋಹಿನ್ ಹಾಂಗೋ ತೋರಸ್ತಾರ . ಆ ನಮ್ ಬಡಪಾಯಿ ಹುಡ್ಗನೋ ಮಖ ತೊಳ್ಕಂಡ್ ಬಂದ್ ನಿಂತಿರ್ತಾನ ನೋಡ್ರಿ. ಅವನೌನ್ ಅದ್ ಯಾಕಡಿದ್ದಾ ನೋಡಿದ್ರೂ ಜೋಡಿ ಅಂತಾ ಅನ್ಸದಾ ಇಲ್ರಿ.
ಯಾಕ್ ಬೇಕ್ರಿ ಈ ಸೀಮ್ಯಾಗಿಲ್ಲದ್ ಸಿಂಗಾರ ಬಂಗಾರ ಎಲ್ಲಾ , ಪ್ರಿತ್ಯಾಗ ಸಿಂಗರಿಸಿದ್ ಮನಸ್ಸು, ಬಂಗಾರದಂತ ಗುಣ , ತೊಳದ್ ಮಖದಾಗ್ ಕುಂಕುಮ ಇಟ್ಟ್ ಹೆಣ್ಣ್ ಸಾಕಲ್ಲೇನ್ರಿ?
ನಮಿಗೊತ್ರಿ ನಿಮಿಗೆಲ್ಲ ಬಂಗಾರದಂತಾ ಗುಣನೂ, ಶುದ್ಧ ಮನಸ್ ಇರ್ತಾತಿ ಅಂತಾ ಅದನ್ಯಾಕ್ರಿ ಈ ಬಣ್ಣ – ಬಂಗಾರದಾಗ ಮುಚ್ಚಿ ಹಾಕ್ತಿರಿ, ಬಣ್ಣ ಬಂಗಾರ ಶಾಶ್ವತ ಅಲ್ರೀ,
ಬಾಳ ಬೇಜಾರ ಹಕ್ಕತ್ರಿ.

ವೀಡೀಯೋದವ :
ಈ ಮದ್ವಿ ಮನ್ಯಾಗ ಇನ್ನೊಬ್ಬನ್ ವಿಚಿತ್ರವಾದ ಮನಷ್ಯ ಇರ್ತಾನ್ ನೋಡ್ರಿ ಅವನ ರೀ ಈ ವಿಡಿಯೋದನು. ದೊಡ್ಡರೆಲ್ಲ ಸೇರ್ಕ್ಯಂದ್ ನೂರ್ ಶಾಸ್ತ್ರ ಮಾಡ್ತರ ಅದ್ರದೆಲ್ಲ ವಿಡಿಯೋ ಮಾಡ್ಕ್ಯಳ್ಳಿ, ಪಾಪ ಆ ಅಪ್ಪ-ಅವ್ವಂದ್ರಿಗೆ ಆಸಿ ಇರ್ತಾತಿ. ಆದ್ರ ಆ ವಿಡಿಯೋದನು ಮಾಡದ್ ಒಂದಂದಲ್ರಿ.
ಸುಮ್ಮನ ಏನೋ ಮುಯ್ಯ ಕೊಟ್ಟ್, ಆಶಿರ್ವಾದ ಮಾಡಿ ಹೊಗಾಕ್ ಬಂದುರ ಡೀಸೆಂಟ್ ಜನನೆಲ್ಲ ಕರ್ಸಿ ನಿಲ್ಸಿ ಈಕಡಿದ್ದ – ಆಕಡಿವರುಗೂ ವಿಡಿಯೋ ತಿರಿಗಿಸ್ಗ್ಯಂತ ಬರ್ತಾನ ನೋಡ್ರಿ. ಆಕಡಿಗೆ ನಿಂತರನಿಗೆ ಸ್ಮೈಲ್ ಕೊಟ್ ಕೊಟ್ ಸಾಕಾಗಿ ಸಿಟ್ ಬಂದುರ್ತಾತಿ ಅವ್ನ್ಹತ್ರ ಬರಹತ್ತಿಗೆ. ನಡುವೆ ಯಾದ್ರ ಚಂದಿರ ಹುಡುಗಿ ಇದ್ರಂತೂ ಅವನೌನ್ ಅಲ್ಲೆ ನಿಂತಬಿಡ್ತಾನ ನೋಡ್ರಿ ಮುಂದಕ್ಕ ಹೋಗದುಲ್ಲ. ಆಕಡಿಗಿರನು ಯಾಕರ ಬಂದ್ನ್ಯಪ್ಪ ಮದ್ವಿಗೆ ಅನ್ನಸ್ಬಕು ಸತ್ತಹೋಗಿರ್ತಾನ್ ಪಾಪ.
ಇನ್ನು ನಮ್ಮಂಗ ಏನ್ರ ಅವಿಭಕ್ತ ಕುಟುಂಬ ಇದ್ರಂತೂ ಅವನೌನ್ ಸ್ಟೇಜ್ ತುಂಬೆ ಹೊಕ್ಕತಿ , ಅದ್ರಗ ಗಂಡ್ಯಾರು – ಹೆಣ್ಣ್ಯಾರು ಅಂತ ಬಾಳ ಹೊತ್ತ ಆದಿ ಮ್ಯಾಲ ಗೊತ್ತಕತಿ ನೊಡ್ರಿ. ಒಂದಿಷ್ಟ ಜನನ್ನ ನಿಲ್ಸಿ, ಇನ್ನೊದಿಷ್ಟು ಜನನ್ನ ಕುಂದ್ರಿಸಿ ಫೋಟೋ-ವಿಡಿಯೋ ಅಂದ್ ಸಾಯ್ಸಿಬಿಡ್ತಾರ. ಹಿಂದ್ ನಿಂತಿರರ ಕ್ಯೆಯಾಗ ಒಂದ್ ನಾಕ್ ರೈಫಲ್ , ಮುಂದ ಕುಂತುರ ಕ್ಯೆಯಾಗ ನಾಕ್ ಸ್ಲೇಟು ಕೊಟ್ಟ್ರಂತೂ , ಫೋಟದ್ ತಳಗ “ಆರು ತಿಂಗಳಿಂದ ನಗರದ ನಾನಾ ಕಡೆ ದ್ವಿಚಕ್ರವಾಹನ, ಕಾರು, ಸರಗಳನ್ನು ಕದಿಯುತ್ತಿದ್ದ ಗುಂಪನ್ನು ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ” ಅಂತ ಹಾಕಿದ್ರ ಯಾರಿಗೂ ಡೌಟಾ ಬರದುಲ್ಲ ನೋಡ್ರಿ.
ಇನ್ನು ಸ್ಟೇಜ್ ತಳಗ ಬರನ್ರಿ, ಆ ಜನ್ದಾಗ ಯಾದರ ಚಂದಿರ ಹುಡುಗಿ ಇದ್ರಂತೂ ಮದ್ವಿ ಗಂಡು – ಹೆಣ್ಣ ಮರತಾ ಬಿಡ್ತಾನ್ರಿ. ಆ ಹುಡುಗಿನ ಮ್ಯಾಗಿಂದ – ಕೆಳಗ ಹತ್ತ್ ಸತಿ ತೋರಸ್ತಾನ ನೋಡ್ರಿ. ಮದ್ವಿ ಆಗ ಹುಡುಗ್ಗೋ – ಹುಡಿಗ್ಗೋ ವಯಸ್ಸಿಗೆ ಬಂದುರ ತಂಗಿ ಇದ್ರಂತೂ ಆಕಿನಾ ಝೂಮ್ ಮಾಡಿ ಮಾಡಿ ತೊರಸ್ತಿರ್ತಾನ. ಎಲ್ಲಾ ಫೋಟದಾಗು ಅಕಿನಾ ಇರ್ತಾಳ, ಅಕಿನಾ ಹಾಂಗ್ ತೊರ್ಸಿಲ್ಲಾ ಅಂದ್ರ ಅಕಿಗೆ ಗಂಡ ಸಿಗಲ್ಲ ನೋಡ್ರಿ ಪಾಪ.
ಇದೆಲ್ಲಾ ಹೋಗ್ಲಿ ಮಾರಯ ಒಂದೊಂದ್ ಮದುವ್ಯಗಂತೂ ಉಣ್ಣಕ ಹೋದ್ರ ಅಲ್ಲಿಗೂ ಬರ್ತಾನ್ ನೊಡ್ರಿ ವಿಡಿಯೋ ಹಿಡಕಂದ್ ಸ್ಟಿಂಗ್ ಆಪ್ರೇಷನ್ ಮಾಡರಂಗ. ಯಾರ್ರ ಉಣ್ಣಬಕರ ವೀಡಿಯೋ-ಫೋಟೋ ಹಿಡಿತಾರೇನ್ರಿ, ಇವನೋ ನಿಂತಬಿಡ್ತಾನ ಎಲಿ ಮುಂದ ೨ ನಿಮಿಷ ೩ ನಿಮಿಷ ಮುಂದಕ್ಕ ಹೋಗದುಲ್ರಿ, ನಾವೇನ್ ತಿನ್ಬಕೋ – ಸ್ಮ್ಯೆಲ್ ಕೊಡ್ಬಕೋ ಲೆಕ್ಕ ಅರಿಯದುಲ್ಲ ನೊಡ್ರಿ. ಅವನೌನ್ ನಾವೇನ್ ಗತಿ ಇಲ್ಲದಾ ಹೋಗಿರ್ತವೇನ್ರಿ ತಿನ್ನಕ.
ಕೊನಿಗೆ ಆ ಹುಡುಗ ಹುಡುಗಿಗೆ ತಾಳಿ ಕಟ್ಟಬಕರ ಅವ್ರ ಅಪ್ಪ – ಅವ್ವ ಕಣ್ತುಂಬ ನೋಡ್ಬಕು ಅಂತ ನಿಂತುರ್ತಾರ್ರಿ , ಆ ವೀಡಿಯೋದನು ಅಲ್ಲಿಗೂ ಬಂದು ಅವ್ರಿಗೇ ಸ್ವಲ್ಪ ಸರಿರಿ ಅಂತಾನ, ಅವನೌನ್ ಅಗ್ನಿ ಸಾಕ್ಷಿಯಾಗಿ ಅಪ್ಪ-ಅವ್ವನೆದ್ರಿಗೆ ತಾಳಿ ಕಟ್ಟಬಕರ ಪುಟಗೋಸಿ ವೀಡಿಯೋ ಬೇಕೇನ್ರಿ.
ಇನ್ನು ಆ ಮದ್ವಿ ವೀಡಿಯೋ ಕ್ಯಾಸೆಟ್ ನೋಡ್ಬಕ್ರಿ ನೀವು ಯಾದೋ ಫ್ಲಾಫ್ ಸಿನಿಮಾ ನೋಡ್ದಂಗ ಅಕ್ಕತಿ, ಅವನು ಹಾಕಿದ್ದ ಹಾಡು – ಮಾಡಿದ್ದ ಗ್ರಾಫಿಕ್ಸು. ಅದನ್ನೇನ್ರ ಕಾಮಿಡಿ ಸಿನಿಮಾ ಅಂತಾ ಹೊರದೇಶದಾಗ ರಿಲೀಸ್ ಮಾಡಿದ್ವಪ್ಪ ಅಂದ್ರ ಒಳ್ಳೆ ದುಡ್ಡು ಮಾಡ್ಕ್ಯಬೌದು ನೋಡ್ರಿ.
ಮದ್ವಿ ಹ್ಯಾಂಗ್ ಮಾಡ್ತವಿ ಅನ್ನದ್ ಮುಖ್ಯ ಅಲ್ರಿ, ಮದ್ವಿ ಆದರು ಹ್ಯಾಂಗ ಬಾಳ್ಯವು ಮಾಡ್ತರ ಅನ್ನದ್ ಮುಖ್ಯನ್ರೀ. ಅದೆಲ್ಲ ಮಾಡದ್ರ ಬದ್ಲು ನಾಕ್ ಚಂದಿರ ಫೋಟೋ ತೆಗಿರಿ. ಆ ವಿಡಿಯೋದನಿಗೆ ಕೊಡ ದುಡ್ಡನ್ಯಾಗ ನಾಕ್ ಜನ ಬಡವ್ರ ಕರ್ದು ಅನ್ನ ಹಾಕ್ರಿ, ನಿಮಿಗೆ ಪುಣ್ಯನ್ರ ಬರ್ತತಿ.
ಇವನೌನ್ ಇಷ್ಟಲ್ಲ ಹೇಳ್ತನಲ್ಲ ಇವನ್ ಮದ್ವ್ಯಗ ಹ್ಯಾಂಗ್ ಮಾಡ್ತನ ನೋಡನ ಅನ್ನಬ್ಯಾಡ್ರಿ, ನಾನು ಅಷ್ಟ ರೀ, ನಮ್ಮ ಅವ್ವ-ಅಪ್ಪಗ ಹೇಳಿ ನೋಡ್ತನಿ, ಕೇಳಿದ್ರ ಪಾಡು, ಕೇಳ್ಳಿಲ್ಲಾಂದ್ರ ???!!!
ಏನು ಇಲ್ರಿ ಗೃಹಸ್ಥಾಶ್ರಮ ಜಗದ ನಿಯಮ
 

‍ಲೇಖಕರು avadhi

September 3, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. nagraj.harapanahalli

    ನ್ಯೂಸ್ ಗೆ ಹೋದಾಗ, ಪ್ರತಿಭಟನೆ ಇದ್ದಾಗ ಚೆಂದದ ಹುಡುಗಿಯರು ಕಂಡರೆ ಟಿಆರ್ ಪಿ ಅಂತಾ 5 ನಿಮಿಷಗಟ್ಟಲೆ ಕ್ಯಾಮರಾ ಹಿಡಿದು ಕೊಳ್ಳುವ ಕ್ಯಾಮಾರಮನ್ ಗಳು ಇದ್ದಾರೆ. ಲಹರಿ ಚೆನ್ನಾಗಿ ಬಂದಿದೆ.

    ಪ್ರತಿಕ್ರಿಯೆ
  2. C P NAGARAJA

    ಮಾನ್ಯ ಶ್ರೀ ಮುನಿ ಹೂಗಾರ್ ಅವರಿಗೆ ,
    ನಿಮ್ಮ ಬರಹವನ್ನು ಓದಿ ಮನೆಯ ಮಂದಿಯೆಲ್ಲಾ ನಕ್ಕು ನಕ್ಕು ಹೊಟ್ಟೆಕಳ್ಳೆಲ್ಲಾ ಹುಣ್ಣಾಯಿತು . ತುಂಬಾ ಚೆನ್ನಾಗಿ ಬರೆದಿದ್ದೀರಿ . ಮದುಮಂಟಪದಲ್ಲಿ ನಡೆಯುವ ಆಚರಣೆಗಳನ್ನು ಮತ್ತು ಭಾಗಿಗಳಾಗುವ ನಮ್ಮೆಲ್ಲರನ್ನೂ ಬಹಳ ಚೆನ್ನಾಗಿ ಚಿತ್ರಿಸಿದ್ದೀರಿ . ಈ ಕೆಳಕಂಡ ಸಾಲುಗಳನ್ನು ಓದಿದಂತೆಲ್ಲಾ , ಅಲ್ಲೆಲ್ಲೋ ನಾವೇ ಕಣ್ಣುಬಾಯಿ ಬಿಡುತ್ತಾ , ಕೃತಕವಾದ ನಗೆ ಬೀರುತ್ತಾ ನಿಂತಿರುವಂತಿದೆ .
    ” ಒಂದಿಷ್ಟ ಜನನ್ನ ನಿಲ್ಸಿ, ಇನ್ನೊಂದಿಷ್ಟು ಜನನ್ನ ಕುಂದ್ರಿಸಿ ಫೋಟೋ-ವಿಡಿಯೋ ಅಂದ್ ಸಾಯ್ಸಿಬಿಡ್ತಾರ. ”
    ಸಿ ಪಿ ನಾಗರಾಜ , ಬೆಂಗಳೂರು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: