ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇ-ಬುಕ್ ಬೇಕಾ ಇ-ಬುಕ್!

ಕನ್ನಡದ ಇ-ಬುಕ್ ಗಳಿಗೊಂದು ಹೊಸ ಸಾಫ್ಟ್ ವೇರ್

ಹೇಮಾ ಹೆಬ್ಬಗೋಡಿ

ನಿನ್ನೆ ಅವಧಿಯಲ್ಲಿ ತೇಜಸ್ವಿಯವರು ‘ಕನ್ನಡ ತಂತ್ರಾಂಶ ಅಭಿವೃದ್ದಿ ಪಡಿಸಿದರೆ ಅದೇ ನನಗೆ ನೀಡುವ ನಾಡೋಜ ಪ್ರಶಸ್ತಿ’ ಎಂದು ಹೇಳಿದ್ದರಂತೆ ಎಂದು ಓದಿದೆ. ಕನ್ನಡದ ಇ-ಬುಕ್ ಸೇವೆಯೊಂದು ಹೊಸದಾಗಿ ಆರಂಭವಾಗುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳುವ ಪ್ರಯತ್ನ ಈ ಲೇಖನ. ಕನ್ನಡದಲ್ಲಿ ಇ-ಬುಕ್ಸ್ ಪ್ರಯತ್ನಗಳು ಈಗಾಗಲೇ ಕೆಲವು ಬಾರಿ ನಡೆದಿವೆ. ಅವಧಿಯಲ್ಲಿಯೇ ಅಶೋಕವರ್ದನ ಅವರು ಇ-ಬುಕ್ಸ್ ಪ್ರಕಟಿಸುತ್ತಿರುವ ಲೇಖನ ಈ ಹಿಂದೆ ಬಂದಿತ್ತು. ಆದರೆ ಇದು ಕನ್ನಡಕ್ಕೆ ಕನ್ನಡದ ಪುಸ್ತಕಲೋಕಕ್ಕೆ ಸಂಬಂಧಿಸಿದಂತೆ ಹೊಸದೊಂದು ತಂತ್ರಜ್ಞಾನ. ಇದು ಹಳೆಯ- ಹೊಸ ಪುಸ್ತಕಗಳನ್ನು ಡಿಜಿಟಲೈಸ್ ಮಾಡುವ ಮೂಲಕ ಅಮೂಲ್ಯ ಪುಸ್ತಕಗಳನ್ನು ಸುರಕ್ಷಿತವಾಗಿ ನಮ್ಮ ಮುಂದಿನವರಿಗೆ ದಾಟಿಸಲು ಕೂಡ ನೆರವಾಗುವಂತದ್ದು.
ಈ ತಂತ್ರಜ್ಞಾನ ಟ್ಯಾಕಿಯಾನ್ ಟೆಕ್ನಾಲಜಿಯ ರೂವಾರಿ ರಾಮ್ ಪ್ರಕಾಶ್ ಅವರ ಕನಸಿನ ಕೂಸು. ಇವರು ಈ ಹಿಂದೆ ‘ನಮ್ಮ ಭಾರತೀಯ ಯುವಕರು ಎಲ್ಲೇ ಇದ್ದರೂ ತಂತಮ್ಮ ಮಾತೃಭಾಷೆಯಲ್ಲಿ ಸಂವಹನ ಮಾಡುವುದನ್ನು ಇಷ್ಟಪಡುತ್ತಾರೆ. ಅವರಿಗೆ ಇಂಟರ್ನೆಟ್ ನಲ್ಲಿ ಕೂಡ ತಮ್ಮ ಭಾಷೆಯನ್ನು ಬಳಸುವ ಅವಕಾಶ ಇರಬೇಕು’ ಎಂದು ಸರಳವಾಗಿ ಭಾರತದ ಹಲವು ಭಾಷೆಗಳಲ್ಲಿ ಇಂಗ್ಲೀಷ್ ಕೀಲಿಮಣೆಯನ್ನೇ ಬಳಸಿ ಮೇಲ್ ಹಾಗೂ ಚಾಟ್ ಮಾಡಲು ಅನುಕೂಲವಾಗುವಂತೆ ‘quillpad’ ಎನ್ನುವ ತಂತ್ರಾಶವನ್ನು ರೂಪಿಸಿದರು. ‘quillpad’ ಬಳಕೆದಾರರ ಸ್ನೇಹಿಯಾಗಿರುವುದರಿಂದಲೇ ಇಂದಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.
ಈಗ ‘ ಕ್ವಿಲ್ ಬುಕ್ಸ್’ ಎನ್ನುವ ಹೊಸ ಪ್ರಯತ್ನದ ಮೂಲಕ ಕನ್ನಡದಲ್ಲಿ ಇ-ಬುಕ್ಸ್ ಪರಂಪರೆ ಬೆಳೆಸಲು ಮುಂದಾಗಿದ್ದಾರೆ. ಇದು ಮುದ್ರಿತ ಪುಸ್ತಕಗಳ ಮಾರುಕಟ್ಟೆಗೆ ಪೂರಕವಾಗಿ ನಿಲ್ಲುವ ಕನಸನ್ನು ಹೊತ್ತು ನಿಂತಿರುವ ತಂತ್ರಜ್ಞಾನ. ಇಂಗ್ಲೀಷಿನಲ್ಲಿ ಇ-ಬುಕ್ಸ್ ಈಗಾಗಲೇ ಜನಪ್ರಿಯವಾಗಿದ್ದು ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತಿದೆ. ಕನ್ನಡದಂತಹ ಪ್ರಾದೇಶಿಕ ಭಾಷೆಗಳಲ್ಲಿ ಇದರ ಕೊರತೆ ಇತ್ತು. ಇಂಗ್ಲೀಷಿನಲ್ಲಿ ಇ-ಬುಕ್ಕುಗಳಿಗೆ ಸಂಬಂಧಿಸಿದಂತೆ ಹೊಸ ಹೊಸ ತಂತ್ರಜ್ಞಾನಗಳು ಆವಿಷ್ಕಾರಗೊಂಡಿವೆ. ಅಮೆಜಾನ್ ನಂತಹ ಆನ್ ಲೈನ್ ಪುಸ್ತಕ ಮಾರಾಟಗಾರರು ತಮ್ಮದೇ ತಂತ್ರಾಂಶವನ್ನು ಕೂಡ ತಮ್ಮ ಇ-ಬುಕ್ ಗಳಿಗೆ ಬಳಸುತ್ತಿದ್ದಾರೆ. ಆದರೆ ಪ್ರಾದೇಶಿಕ ಭಾಷೆಗಳಲ್ಲಿ ಇಂತಹ ತಂತ್ರಾಶಗಳಿಲ್ಲ.ಈ ಕೊರತೆಯನ್ನು ನೀಗಿಸುವಲ್ಲಿ ಕ್ವಿಲ್ ಬುಕ್ಸ್ ಭಾರತೀಯ ಭಾಷೆಗಳಿಗೆ ಸಂಬಂಧಿಸಿದಂತೆ ಇಂತಹ ಒಂದು ಪ್ರಯತ್ನ ಮಾಡಿದೆ.
ಈ ತಂತ್ರಾಂಶದ ವೈಶಿಷ್ಟ್ಯತೆಗಳೆಂದರೆ ಕ್ವಿಲ್ ಬುಕ್ಸ್ ನಲ್ಲಿನ ಪುಸ್ತಕಗಳನ್ನು ಸ್ಮಾರ್ಟಫೋನ್(android 2.3 and above), ಟ್ಯಾಬ್ಲೆಟ್ ಗಳಲ್ಲಿ ಓದಬಹುದು. ಒಮ್ಮೆ ಖರೀದಿಸಿ ನಿಮ್ಮ ನೆಚ್ಚಿನ ಪುಸ್ತಕವನ್ನು ಡೌನ್ ಲೋಡ್ ಮಾಡಿಕೊಂಡರೆ ನೀವು ಹೋದಲ್ಲಿ ಇದನ್ನು ಕೊಂಡೊಯ್ಯಬಹುದು. ಇಲ್ಲಿನ ಪುಸ್ತಕಗಳಿಗೆ DRM protection ಅಂದರೆ ಲೇಖಕರ ಮತ್ತು ಪ್ರಕಾಶಕರ ಹಕ್ಕುಗಳಿಗೆ ಚ್ಯುತಿಬಾರದಂತೆ ಕಾಪಾಡುವ ಡಿಜಿಟಲ್ ರೈಟ್ಸ್ ಮ್ಯಾನೇಜ್ ಮೆಂಟ್ ತಂತ್ರಜ್ಞಾನವು ಇದೆ. ಒಂದು ವೇಳೆ ನೀವು ನಿಮ್ಮ ಪುಸ್ತಕವನ್ನು ಟ್ಯಾಬ್ಲೆಟ್ ನಲ್ಲಿಟ್ಟಿದ್ದು ಬೇರೆಲ್ಲಿಗೋ ಹೋದಾಗ ಟ್ಯಾಬ್ಲೆಟ್ ನಿಮ್ಮೊಂದಿಗೆ ಇಲ್ಲದಿದ್ದರೆ ಆ ಪುಸ್ತಕವನ್ನು ಓದಬೇಕೆನಿಸಿದರೆ ಇಂಟರ್ನೆಟ್ ಸೌಲಭ್ಯವಿದ್ದಲ್ಲಿ ಕಂಪ್ಯೂಟರ್ ನ ಮೂಲಕ ಕ್ವಿಲ್ ಬುಕ್ಸ್ ನ ನಿಮ್ಮ ಅಕೌಂಟ್ ನಲ್ಲಿರುವ ನಿಮ್ಮ ಪುಸ್ತಕವನ್ನು ಯಾವಾಗಬೇಕಾದರೂ ತೆರೆದು ನೋಡಬಹುದು. ಅಂದರೆ ಇದು ಮೊಬೈಲ್ ಲೈಬ್ರರಿಯಂತೆ ಸದಾ ನಿಮ್ಮೊಂದಿಗಿರುತ್ತದೆ. ಕ್ವಿಲ್ ಬುಕ್ಸ್ ನ ವೈಶಿಷ್ಟ್ಯವೆಂದರೆ ನಿಮ್ಮ ಕೈಯಲ್ಲಿರುವ ಫೋನ್ ಅಥವ ಟ್ಯಾಬ್ಲೆಟ್ ನ ಪರದೆಯ ಸೈಜಿಗೆ ತಕ್ಕಂತೆ ಪುಸ್ತಕದ ಪೇಜು ಹೊಂದಿಕೊಳ್ಳುತ್ತದೆ. ಅಕ್ಷರಗಳನ್ನು ದೊಡ್ಡದು ಮಾಡಬಹುದು ಮತ್ತು ಗುರುತು ಕೂಡ ಮಾಡಿಟ್ಟುಕೊಳ್ಳಬಹುದು. ಪುಸ್ತಕ ಕೊಳ್ಳುವ ಮುನ್ನ ಪುಸ್ತಕದ ಕೆಲವು ಪುಟಗಳನ್ನು ಓದುವ ಅವಕಾಶವಿದೆ. ಅಂದರೆ ಒಂದಿಷ್ಟು ಓದಿ ನೋಡಿ ನಿಮಗೆ ಆ ಪುಸ್ತಕ ಬೇಕೆ ಬೇಡವೇ ಎಂದು ನಿರ್ಧರಿಸಬಹುದು.

ಹೀಗೆ ನಿಮ್ಮ ಮುಂದೆ ಬರುತ್ತಿರುವ ಕ್ವಿಲ್ ಬುಕ್ಸ್ ನ ಹಿಂದೆ ರಾಮ್ ಪ್ರಕಾಶ್ ಮತ್ತು ಅವರ ತಂಡದ ಪರಿಶ್ರಮವಿದೆ. ನಮ್ಮ ಬಹುತೇಕ ಲೇಖಕರು ಹಾಗೂ ಪ್ರಕಾಶಕರು ಕಂಪ್ಯೂಟರನ್ನು ಪುಸ್ತಕ ಪ್ರಕಟಣೆಗೆ ಬಳಸುತ್ತಾರಾದರೂ ಅದರ ಡಿಜಿಟಲ್ ಕಾಪಿಯನ್ನು ಕಾಪಿಡುವ ಬಗ್ಗೆ ಯೋಚಿಸುವುದು ಬಹಳ ಕಡಿಮೆ. ಇ-ಬುಕ್ ಪರಿವರ್ತನೆಯಲ್ಲಿ ರಾಮ್ ಪ್ರಕಾಶ್ ಅವರು ಎದುರಿಸಿದ ಬಹುದೊಡ್ಡ ಸವಾಲುಗಳಲ್ಲಿ ಇದು ಕೂಡ ಒಂದು. ಮುದ್ರಿತ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಮುದ್ರಿಸುವ ತಂತ್ರಜ್ಞಾನ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ ಇಂಗ್ಲೀಷ್ ಪುಸ್ತಕಗಳ ಮುದ್ರಣದಲ್ಲಿ ಬಹಳ ಜನಪ್ರಿಯವಾದದ್ದು. ಆದರೆ ಇಂಗ್ಲೀಷ್ ಪುಸ್ತಕಗಳಿಗೆ ಬಳಸುವ ಈ ತಂತ್ರಜ್ಞಾನವನ್ನು ಕನ್ನಡದಂತಹ ಪ್ರಾದೇಶಿಕ ಭಾಷೆಗಳಿಗೆ ಬಳಸಲಾಗುವುದಿಲ್ಲ. ಇದು ನಮ್ಮ ಭಾಷೆಗಳ ಲಯಕ್ಕೆ ಹೊಂದಿಕೊಳ್ಳುವುದಿಲ್ಲ. ಆದ್ದರಿಂದ ರಾಮ್ ಪ್ರಕಾಶ್ ಅವರು ಇಲ್ಲಿಗೆ ಹೊಂದುವಂತಹ OCR ಅನ್ನು ಅಭಿವೃದ್ಧಿ ಪಡಿಸಿದರು. ಮುದ್ರಿತ ಅಕ್ಷರಗಳನ್ನು ಸ್ಕ್ಯಾನ್ ಮಾಡಿದ ಮೇಲೆ ಕೂಡ ಉಳಿಯಬಹುದಾದ ತಪ್ಪುಗಳನ್ನು ಕಂಪ್ಯೂಟರೇ ಕಂಡುಹಿಡಿದು ತೋರಿಸುವಂತೆ ಇದನ್ನು ಸುಧಾರಿಸಿದ್ದಾರೆ. ಇದರಿಂದಾಗಿ ಸುಮಾರು 4 ರಿಂದ 5 ಗಂಟೆಗಳಲ್ಲಿ ಸರಿಸುಮಾರು 150 ಪುಟಗಳ ಪುಸ್ತಕವನ್ನು ಇ-ಬುಕ್ ಆಗಿ ಪರಿವರ್ತಿಸಬಹುದು.
ಇದೇ ಆಗಸ್ಟ್ 21 ರಿಂದ quillbooks.in ತನ್ನ ಪೂರ್ಣಪ್ರಮಾಣದ ಸೇವೆಯನ್ನು ಆರಂಭಿಸಲಿದೆ. https://play.google.com/store/apps/details?id=com.tachyon.quillbooks.app ನಲ್ಲಿ ಕ್ವಿಲ್ ಬುಕ್ಸ್ ನ ಅಪ್ಲಿಕೇಶನ್ ಲಭ್ಯವಿದ್ದು ಇದನ್ನು ಡೌನ್ ಲೋಡ್ ಮಾಡಿಕೊಂಡು ಲಭ್ಯವಿರುವ ಉಚಿತ ಪುಸ್ತಕಗಳನ್ನು ಓದಬಹುದಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಕ್ರೆಡಿಟ್, ಡೆಬಿಟ್ ಹಾಗೂ ನೆಟ್ ಬ್ಯಾಂಕಿಂಗ್ ಸೌಲಭ್ಯಗಳಲ್ಲದೆ ದೂರವಾಣಿ ಮೂಲಕ ಕೂಡ ಹಣ ಪಾವತಿಸಿ ಪುಸ್ತಕ ಖರಿದೀಸುವ ಅವಕಾಶವನ್ನು ಕಲ್ಪಿಸಲಾಗಿದೆ. ಇ-ಬುಕ್ ಗಳ ಬೆಲೆ ಮುದ್ರಿತ ಪುಸ್ತಕಗಳ ಬೆಲೆಗಿಂತ ಸರಿಸುಮಾರು ಶೇ.50ರಷ್ಟು ಕಡಿಮೆ ದರಕ್ಕೆ ಸಿಗುತ್ತದೆ. ಸದ್ಯಕ್ಕೆ ಇಲ್ಲಿ ಕನ್ನಡದ ಪುಸ್ತಕಗಳು ಲಭ್ಯವಿದ್ದು ಮುಂದೆ ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳಿಗೆ ವಿಸ್ತರಿಸುವ ಉದ್ದೇಶವನ್ನು ಹೊಂದಿದೆ. ಯು.ಆರ್.ಅನಂತಮೂರ್ತಿ, ಕೆ.ವಿ.ಸುಬ್ಬಣ್ಣ, ವಿವೇಕ ಶಾನಬಾಗ, ವಸುದೇಂದ್ರ, ಜೋಗಿ, ವಿಶ್ವೇಶ್ವರಭಟ್, ಕೆ.ಟಿ.ಗಟ್ಟಿ, ನಾಗತಿಹಳ್ಳಿ ಚಂದ್ರಶೇಖರ ಮೊದಲಾದ ಖ್ಯಾತನಾಮರ ಪುಸ್ತಕಗಳನ್ನು ನೀವಿಲ್ಲಿ ಕಾಣಬಹುದಾಗಿದೆ.
ದೇಶ ಬಿಟ್ಟು ದೂರಹೋದಾಗ ಅಯ್ಯೋ ಪುಸ್ತಕ ಹೊತ್ತೊಯ್ಯುವುದು ಹೇಗೆ? ಅಥವ ಅಲ್ಲಿ ನನ್ನ ಭಾಷೆಯ ಪುಸ್ತಕಗಳನ್ನ ಓದೋದು ಹೇಗೆ ಅನ್ನೋ ಚಿಂತೆ ಇನ್ನುಮುಂದೆ ಇಲ್ಲ. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಕನ್ನಡ ಪುಸ್ತಕಗಳನ್ನು ಓದಬಹುದು. ಪುಸ್ತಕ ಓದುವುದರಿಂದ ದೂರ ಓಡುತ್ತಿರುವ ಮಕ್ಕಳ ಮತ್ತು ಯುವಜನಾಂಗದವರ ಕೈಯಲ್ಲಿ ಹೀಗಾದರೂ ಪುಸ್ತಕ ನೀಡುವ ಒಂದು ಅವಕಾಶ ಈ ಮೂಲಕ ಸಿಗಲಿದೆ. ಇಂತಹ ಪ್ರಯತ್ನಗಳಿಗೆ ಸಿಗುವ ಯಶಸ್ಸು ಇನ್ನಷ್ಟು ಹೊಸ ಆವಿಷ್ಕಾರಗಳಿಗೆ ಕಾರಣವಾಗಬಲ್ಲದು. ತೇಜಸ್ವಿಯಂತಹವರು ಹೇಳುತ್ತಿದ್ದ ಹಾಗೆ ತಂತ್ರಜ್ಞಾನದೊಂದಿಗೆ ಕನ್ನಡ ಹೆಜ್ಜೆ ಹಾಕಿದಾಗ ಮಾತ್ರ ಉಳಿಯಬಲ್ಲದು.
ಈ ವೆಬ್ ತಾಣವು ಗುರುವಾರ ಆಗಸ್ಟ್ 21ರಂದು ಪೂರ್ಣಪ್ರಮಾಣದಲ್ಲಿ ತನ್ನ ಸೇವೆಯನ್ನು ಆರಂಭಿಸಲಿದೆ.
 

‍ಲೇಖಕರು G

20 August, 2014

7 Comments

  1. narendra shivanagere

    Thank you!

  2. satya

    Thank you … I signed up now and bought a book. I was missing kannada books. Hopefully I will get them now.

  3. srinivasamurthy B G

    android’ಗಾಗಿ ಅಣಿಗೊಳಿಸಿರುವ ಈ ಹೊತ್ತಗೆಯ software unicode ನೆಲೆಯದ್ದಾಗಿರುತ್ತದೆಯೆ? ಮತ್ತು ಹೊತ್ತಗೆಗಳು unicode ಬೆಂಬಲಿತವೆ?

  4. vasantha gowda

    Why only for android? why not for ios (iPad, iPhone)?

  5. ಸತ್ಯನಾರಾಯಣ

    ಕನ್ನಡ ಈ-ಪುಸ್ತಕಗಳದ್ದೇ ಆದ ಒಂದು ವೆಬ್ ಸೈಟ್ ಬಂದಿದ್ದು ಒಳ್ಳೆಯದು. ಅಭಿನಂದನೆಗಳು. ಅದರಲ್ಲಿನ ಕೆಲವು ಸೇವೆಗಳು ಇನ್ನೂ ಆಕ್ಟಿವೇಟ್ ಆಗಿಲ್ಲ. ಮುಂದೆ ಸರಿಹೋಗಬಹುದು ಎಂದುಕೊಳ್ಳುತ್ತೇನೆ.
    bookrix.com ಎಂಬ ಅಂತರ್ಜಾಲ ತಾಣವು ಈ-ಬುಕ್ ಸಿದ್ಧಪಡಿಸುವ ಅವಕಾಶವನ್ನು ಬರಹಗಾರರಿಗೇ ನೀಡಿದೆ. ಪ್ರಕಟಗೊಂಡ ಈ-ಪುಸ್ತಕಗಳನ್ನು, ಅಮೆಜಾನ್ ಒಳಗೊಂಡಂತೆ ಹತ್ತಕ್ಕೂ ಹೆಚ್ಚು ಮಾರಾಟ ಜಾಲಗಳಲ್ಲಿ ಮಾರಟಕ್ಕೂ ಅವಕಾಶ ಕಲ್ಪಿಸುತ್ತದೆ. ಅಲ್ಲಿ ಕನ್ನಡ ಪುಸ್ತಕಗಳನ್ನು ಪ್ರಕಟಿಸಬಹುದು. ಆದರೆ, ಭಾಷೆಯನ್ನು ಆಯ್ದುಕೊಳ್ಳುವಲ್ಲಿ ಕನ್ನಡಕ್ಕಿನ್ನೂ ಸ್ಥಾನ ಸಿಕ್ಕಿಲ್ಲ. ಆ ಸಂಬಂಧವಾಗಿ ನಾನು ಆ ಸಂಸ್ಥೆಗೆ ಈ ಮೇಲ್ ಕೂಡಾ ಕಳುಹಿಸಿದ್ದೇನೆ. ಮತ್ತಷ್ಟು ಒತ್ತಡಗಳು ಬಂದರೆ ಅದರಲ್ಲಿ ಕನ್ನಡ ಭಾಷೆಯ ಆಯ್ಕೆ ದೊರೆಯಬಹುದು.
    ಇಂಗ್ಲಿಷ್ ಭಾಷೆಯನ್ನು ಆಯ್ದುಕೊಂಡೇ ಕನ್ನಡ ಪುಸ್ತಕವನ್ನು ಪ್ರಕಟಣೆಗೆ ಸಿದ್ಧಪಡಿಸಿ ಸಲ್ಲಿಸಿದ್ದೇನೆ. ಅದರ ವಿವರಗಳು:
    http://www.bookrix.com/_ebook-dr-b-r-satyanarayana-kuvempu-kaavyayaana/
    http://www.bookrix.com/_ebook-dr-b-r-satyanarayana-nanna-highschool-dinagalu/
    http://www.bookrix.com/_ebook-dr-b-r-satyanarayana-mudi/
    ಪರಿಶೀಲಿಸುವುದಾಗಿ ಉತ್ತರ ಬಂದಿದೆ.
    bookrix.com ಅವರಂತೆ quillpad ನವರೂ ಈ-ಪುಸ್ತಕಗಳನ್ನು ಸಿದ್ಧಪಡಿಸಿ ಪ್ರಕಟಿಸುವ ಸೌಲಭ್ಯವನ್ನು ಒದಗಿಸಿದರೆ ಅನುಕೂಲ.

  6. hema

    ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.
    1.ಹೌದು ಕ್ವಿಲ್ ಬುಕ್ಸ್ ಅನ್ನು ಐ ಫೋನ್ ಹಾಗೂ ಐ ಪಾಡ್ ಗಳಲ್ಲಿ ಕೂಡ ಸದ್ಯದಲ್ಲೇ ಓದಲು ಸಾಧ್ಯವಾಗುವಂತೆ ಮಾಡಲಾಗುತ್ತಿದೆ.
    2. ಎಲ್ಲ ಆಂಡ್ರ್ಯಾಡ್ ಫೋನುಗಳೂ ಕನ್ನಡದ ಯೂನಿಕೋಡ್ ಅಕ್ಷರಗಳನ್ನು ಸಪೋರ್ಟ್ ಮಾಡುವುದಿಲ್ಲವಾದ್ದರಿಂದ ಕ್ವಿಲ್ ಬುಕ್ಸ್ ತನ್ನದೇ ತಂತ್ರಾಶವನ್ನು ಹೊಂದಿದೆ. ಇದರಿಂದಾಗಿ ನೀವು ಯಾವುದೇ ಆಂಡ್ರ್ಯಾಡ್ ಫೋನಿನಲ್ಲಿ ತೊಂದರೆಯಿಲ್ಲದಂತೆ ಓದಬಹುದು.
    3. ಕ್ವಿಲ್ ಬುಕ್ಸ್ ಇಂದಿನಿಂದ ಸಂಪೂರ್ಣವಾಗಿ ತನ್ನ ಸೇವೆಯನ್ನು ಆರಂಭಿಸಿದೆ. ನಿಮಗೆ ಯಾವುದಾದರೂ ಸಮಸ್ಯೆ ಎದುರಾದಲ್ಲಿ support@quillbooks.in ಗೆ ಮೇಲ್ ಕಳಿಸಬಹದು.
    4. ಪುಸ್ತಕ ಪ್ರಕಟಣೆಯ ಸೇವೆಯನ್ನು ಸದ್ಯದಲ್ಲೇ ಆರಂಭಿಸಲಾಗುತ್ತಿದೆ.

  7. srinivas

    Will there be appropriate contribution to the author whenever I purchase a book. Because it should not cause injustice to the author

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading