ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವರ ತಲೆಗೇರಿತು ಮುಳ್ಳಿನ ಕಿರೀಟ

……

ಚರಿತ್ರೆಯಿಂದ ಪಾಠಗಳನ್ನು ಕಲಿಯದಿದ್ದರೆ, ಚರಿತ್ರೆ ಮತ್ತೆ ಮತ್ತೆ ಮರುಕಳಿಸುತ್ತದೆ.

ಹಾಗೆ ನೋಡಿದರೆ ಇದೇನೂ ಹಳೆಯ ಚರಿತ್ರೆ ಅಲ್ಲ. 2004ರಲ್ಲಿ ವಾಜಪೇಯಿ ಸರಕಾರ “INDIA SHINING”ಎಂಬ ಸೂತ್ರ ಹಿಡಿದು ಚುನಾವಣಾ ಪ್ರಚಾರ ನಡೆಸಿತ್ತು. ಆದರೆ, ದೇಶ ಅದನ್ನು ಒಪ್ಪದೆ ಇದ್ದುದರಿಂದ, NDA  ಸರಕಾರ ಚುನಾವಣೆಯಲ್ಲಿ ಸೋಲಬೇಕಾಯಿತು.

ಸೋಲಿನ ವಿಶ್ಲೇಷಣೆ ಮಾಡಿದ ಅಂದಿನ ಉಪಪ್ರಧಾನಿ ಲಾಲಕೃಷ್ಣ ಆಡ್ವಾಣಿ ಅವರು “ಭಾರತ ಪ್ರಕಾಶಿಸುತ್ತಿದೆ” ಎಂಬ ಆ ಪ್ರಚಾರ ಸತ್ರದ ಕುರಿತು “valid,” but “inappropriate for our election campaign… By making them verbal icons of our election campaign, we gave our political opponents an opportunity to highlight other aspects of India’s contemporary reality… which questioned our claim.”ಎಂದು ಪೋಸ್ಟ್ ಮಾರ್ಟಂ ಮಾಡಿದ್ದರು.

ಈಗ ಹಾಲೀ ಎನ್ ಡಿ ಎ ಸರಕಾರ ಕೂಡ ಅಂತಹದೇ ಒಂದು ಜೂಜಾಟಕ್ಕೆ ಇಳಿದಿದ್ದು, ನವೆಂಬರ್ 8ರಂದು ನೋಟು ರದ್ಧತಿಯ ಪ್ರಕಟಣೆ ಮಾಡುವ ಮೂಲಕ ದೇಶದಲ್ಲಿ ಭ್ರಷ್ಟಾಚಾರ, ಕಪ್ಪುಹಣ ಬುಡಸಮೇತ ನಿರ್ಮೂಲಗೊಂಡಿದೆ ಎಂದು ಹೇಳಿಕೊಂಡಿದೆ. ಇದರ ಸತ್ಯಾಸತ್ಯತೆ, ಪರಿಣಾಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ, ದೇಶ ಅದರ ಪರಿಣಾಮಗಳನ್ನು ಅನುಭವಿಸುತ್ತಲೂ ಇದೆ. ಈ ಎಲ್ಲ ಗದ್ದಲಗಳ ನಡುವೆ ಒಂದು ವಿಶೇಷ ಗಮನಿಸಿದ್ದೀರಾ?

ಸ್ವಾತಂತ್ರ್ಯದ ಬಳಿಕ  60 ವರ್ಷಗಳುದ್ದಕ್ಕೂ ದೇಶದ ಎಲ್ಲ ಭ್ರಷ್ಟಾಚಾರ, ಕಪ್ಪುಹಣಗಳ “ಮುಳ್ಳಿನ ಕಿರೀಟ”ವನ್ನು ಧರಿಸಿ, ಅದರ ಭಾರವನ್ನು ಹೊತ್ತು ಏದುಸಿರು ಬಿಡುತ್ತಿದ್ದ ಕಾಂಗ್ರೆಸ್ ಪಕ್ಷ ಈಗ ನರೇಂದ್ರ ಮೋದಿ ಶುದ್ಧೀಕರಿಸಿರುವ ಗಂಗೆಯಲ್ಲಿ ಮುಳುಗೆದ್ದು ಪಾವನಗೊಂಡಿದೆ; ಅದರ ತಲೆಯ ಮೇಲಿದ್ದ ಮುಳ್ಳಿನ ಕಿರೀಟ ಈಗ ಸ್ವತಃ ಎನ್ ಡಿ ಎ ಯ ತಲೆಯೇರಿ ಕುಳಿತಿದೆ. ಕಾಂಗ್ರೆಸ್ಸಿನ ಆಡಳಿತ ಕಾಲದ ಎಲ್ಲ ಕಪ್ಪುಹಣ ಬಯಲಿಗೆ ಬಂದ ಮೇಲೆ ಇನ್ನು ನವೆಂಬರ್ ಎಂಟರಿಂದ ಈಚೆಗೆ ದೇಶದಲ್ಲಿ ಹುಟ್ಟುವ ಪ್ರತಿಯೊಂದು ಕಪ್ಪು ರೂಪಾಯಿಯ ಮೇಲೂ ಮೋದಿ ಸರಕಾರದ ಹೆಸರು ಬೀಳುವುದು ಅನಿವಾರ್ಯ ಆಗಲಿದೆ.

ಕಪ್ಪುಹಣ ಎಂದರೆ ಅದು ಎಲ್ಲೋ ಯಾವತ್ತೋ ಉಂಟಾಗಿ ಶೇಖರಣೆ ಆದದ್ದಲ್ಲ. ಪ್ರತಿದಿನ ಕಪ್ಪು ಹಣ ಹುಟ್ಟುತ್ತಿರುತ್ತದೆ. ದಿನಕ್ಕೊಂದು ಲಕ್ಷ ವ್ಯಾಪಾರ ಮಾಡುವ ಒಬ್ಬ ವ್ಯಾಪಾರಿ ಅದರಲ್ಲಿ ತೊಂಬತ್ತು ಸಾವಿರಕ್ಕೆ ತೆರಿಗೆ ಕಟ್ಟಿ, ಹತ್ತು ಸಾವಿರಕ್ಕೆ ತೆರಿಗೆ ತಪ್ಪಿಸಿದರೂ,  ಈಗ 50 ದಿನಗಳಲ್ಲಿ  ಐದು ಲಕ್ಷ ರೂಪಾಯಿಗಳ ಕಪ್ಪುಹಣ ಸಂಗ್ರಹಿಸಿರುತ್ತಾನೆ.

ನರೇಂದ್ರ ಮೋದಿಯವರು ನವೆಂಬರ್ 8 ರ ನೋಟು ರದ್ಧತಿಯ ಪ್ರಕಟಣೆಯ ಬಳಿಕ, ಕಪ್ಪು ಹಣ ಮತ್ತೆ ಹುಟ್ಟದಂತೆ, ಹಲವು ಪೂರಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ, ಈಗ ಉಂಟಾಗಿರುವ ವಿಷಮ ಪರಿಸ್ಥಿತಿಯನ್ನು ನಿಭಾಯಿಸುವುದರಲ್ಲೇ ಅವರ ತಂಡದ ಸಂಪೂರ್ಣ ಚೈತನ್ಯ ವಿನಿಯೋಗ ಆಗುತ್ತಿದೆ. 10-20 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಪ್ರಮಾಣದ ವ್ಯವಹಾರಗಳನ್ನು ಕಡ್ಡಾಯವಾಗಿ ನಗದು ರೂಪದಲ್ಲಿ ಮಾಡುವಂತಿಲ್ಲ,  ಒಂದು ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ನಗದು ಹೊಂದಿರುವುದು ಅಪರಾಧ ಎಂಬಂತಹ ಪೂರಕ ನಿಯಮಗಳು ಬರದೆ ಇದ್ದಲ್ಲಿ, ನವೆಂಬರ್ 8ರ ತೀರ್ಮಾನ ನೀರಿನಲ್ಲಿಟ್ಟ ಹೋಮ ಮಾತ್ರ. ಇನ್ನಾರು ತಿಂಗಳ ಒಳಗೆ ದೇಶದಲ್ಲಿ ಹಿಂದೆ ಇದ್ದಷ್ಟೇ ಕಪ್ಪುಹಣ ಹುಟ್ಟಿಕೊಳ್ಳಲಿದೆ.

ಹೀಗೆ ಹುಟ್ಟಿಕೊಂಡ ಪ್ರತೀ ಹೊಸ ಕಪ್ಪು ರೂಪಾಯಿಗೂ ನರೇಂದ್ರ ಮೋದಿಯವರ ಸರಕಾರವೇ ಉತ್ತರದಾಯಿ ಆಗಬೇಕಾಗುತ್ತದೆ. ಹಾಗಾಗಿ, ಮುಂದಿನ ಚುನಾವಣೆಯ ವೇಳೆಗೆ ಕಾಂಗ್ರೆಸ್ಸಿಗೆ ಕೂಡ ಮೋದಿ ಸರಕಾರವನ್ನು ಕಪ್ಪುಹಣದ ಹೆಸರಿನಲ್ಲಿ ಹಣಿಯುವ ಅವಕಾಶ ಸಿಗಲಿದೆ.

ಈವತ್ತು ವೀರಾವೇಶದಲ್ಲಿ ಆಡಿದ ಮಾತುಗಳು, ಎಚ್ಚರ ತಪ್ಪಿದರೆ ಮುಂದಿನ ಚುನಾವಣೆಯ ವೇಳೆ ಎನ್ ಡಿ ಎ ಸರಕಾರಕ್ಕೆ ನುಂಗಲಾಗದ ಉಗುಳುಗಳಾಗಿ ಕಾಡಲಿವೆ. ಮಿಂದು ಪವಿತ್ರಗೊಂಡು ಕುಳಿತಿರುವ ಕಾಂಗ್ರೆಸ್ಸಿಗೆ ಮತ್ತಿತರ ವಿರೋಧ ಪಕ್ಷಗಳಿಗೆ ಕುಳಿತಲ್ಲಿಗೇ ಹರಿತವಾದ ಆಯುಧಗಳು ಸಿಗಲಿವೆ.

‍ಲೇಖಕರು admin

2 January, 2017

ನಿಮಗೆ ಇವೂ ಇಷ್ಟವಾಗಬಹುದು…

5 Comments

  1. Anonymous

    ನಿಮ್ಮ ಈ ವಿಮರ್ಷೆ ನಿಜ ಯಾರು ಎಷ್ಟೇ ವಿರೋಧ ಮಾಡಿದರು ನಗದು ರೂಪದ ವ್ಯವಹಾರವನ್ನು ನಿಯಂತ್ರಿಸುವುದು ಒಳ್ಳೆಯದು. ನಮಗೆ ಬೇಕಿರುವುದು NDA UPA ಸರ್ಕಾರಗಳಲ್ಲ, ಉತ್ತಮ ಆಡಳಿತ ನೀಡುವ ಸರ್ಕಾಕಗಳು, ಸರ್ಕಾರ ಒಂದು ಉತ್ತಮ ಕೆಲಸಕ್ಕೆ ಮುಂದಾಗಿದೆ ಅದನ್ನು ಸಮರ್ಪಕವಾಗಿ ಜಾರಿಗೆ ತರುವುದು ಅದರ ಜವಬ್ದಾರಿಯಾಗಿರುತ್ತದೆ. – Suresha B Suri

  2. raju

    ಉತ್ತಮ ವಿಶ್ಲೇಷಣೆ

  3. Sandeep Kamath

    ಲೇಖನ ನೋಡಿದ್ರೆ NDA ಮೇಲೆ ಭಾರಿ ಪ್ರೀತಿ ಇದೆಯೇನೊ ಅನಿಸಬೇಕು!

    ನೀವು ಸರಿಯಾದ ಸಮಯಕ್ಕೆ ಈ ಲೆಖನ ಬರೆದಿದ್ದೀರಾ. ಇನ್ನು ಎರಡು ದಿನ ತಡವಾದ್ರೂ ಅರುಣ್ ಜೇಟ್ಲಿ ಮಿಸ್ ಮಾಡ್ಕೋತಾ ಇದ್ರು. ಈಗ ನಿಮ್ಮ ಲೇಖನ ಓದಿ ಬಜೆಟ್ ನಲ್ಲಿ ಬೇಕಾದ ಬದಲಾವಣೆ ತರುತ್ತಾರೆ ನೋಡಿ!

    “ಕಪ್ಪುಹಣ ಎಂದರೆ ಅದು ಎಲ್ಲೋ ಯಾವತ್ತೋ ಉಂಟಾಗಿ ಶೇಖರಣೆ ಆದದ್ದಲ್ಲ. ಪ್ರತಿದಿನ ಕಪ್ಪು ಹಣ ಹುಟ್ಟುತ್ತಿರುತ್ತದೆ”

    ಯಾರು ಇಲ್ಲ ಅಂದ್ರು? ಮೋದಿ ಏನಾದ್ರೂ ಇದನ್ನು ನಿರಾಕರಿಸಿದ್ದಾರಾ?

    “ನರೇಂದ್ರ ಮೋದಿಯವರು ನವೆಂಬರ್ 8 ರ ನೋಟು ರದ್ಧತಿಯ ಪ್ರಕಟಣೆಯ ಬಳಿಕ, ಕಪ್ಪು ಹಣ ಮತ್ತೆ ಹುಟ್ಟದಂತೆ, ಹಲವು ಪೂರಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ, ಈಗ ಉಂಟಾಗಿರುವ ವಿಷಮ ಪರಿಸ್ಥಿತಿಯನ್ನು ನಿಭಾಯಿಸುವುದರಲ್ಲೇ ಅವರ ತಂಡದ ಸಂಪೂರ್ಣ ಚೈತನ್ಯ ವಿನಿಯೋಗ ಆಗುತ್ತಿದೆ. 10-20 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಪ್ರಮಾಣದ ವ್ಯವಹಾರಗಳನ್ನು ಕಡ್ಡಾಯವಾಗಿ ನಗದು ರೂಪದಲ್ಲಿ ಮಾಡುವಂತಿಲ್ಲ, ಒಂದು ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ನಗದು ಹೊಂದಿರುವುದು ಅಪರಾಧ ಎಂಬಂತಹ ಪೂರಕ ನಿಯಮಗಳು ಬರದೆ ಇದ್ದಲ್ಲಿ, ನವೆಂಬರ್ 8ರ ತೀರ್ಮಾನ ನೀರಿನಲ್ಲಿಟ್ಟ ಹೋಮ ಮಾತ್ರ.”

    ಸಾಧ್ಯವದಷ್ಟು ಕ್ಯಾಶ್ ಲೆಸ್ ವ್ಯವಹಾರ ಮಾಡಿ ಅಂದಿದ್ದಕ್ಕೆ(ಕಡ್ಡಾಯ ಅಲ್ಲ!) ನೀವೂ ನಿಮ್ಮ ಸ್ನೇಹಿತರೂ ಸೇರಿ ಎಲ್ಲರ ಬ್ಯಾಂಕ್ ಬಳಿ ಅಕೌಂಟ್ ಇಲ್ಲ, ಅದಿಲ್ಲ ಇದಿಲ್ಲ ಅನ್ನೋ ಆರೋಪ ಮಾಡಿದ್ರಿ. ಈಗ ನೋಡಿದ್ರೆ ಕಡ್ಡಾಯ ಮಾಡಬೇಕಂತೆ!

    ಮೊದಲು ಇದ್ದ ಮೋದಿ ವಿರೋಧಿ ಟೋನ್ ನಿಧಾನಕ್ಕೆ “ನಾನು ಹೇಳೋದು ಮೋದಿ ಒಳ್ಳೆಯದಕ್ಕಾಗಿ” ಅನ್ನೋ ಥರ ಬದಲಾಗಿದೆ, ಇರಲಿ ಅದೂ ಒಳ್ಳೆಯ ಬೆಳವಣಿಗೆ.

  4. Neeta Rao

    ಮಿಂದು ಪವಿತ್ರಗೊಂಡು(?) ಕುಳಿತಿರುವ ಕಾಂಗ್ರೆಸ್ ಮತ್ತಿತರ ಪಕ್ಷಗಳಿಗೆ ಕುಳಿತಲ್ಲಿಯೇ ಹರಿತವಾದ ಆಯುಧಗಳು ಸಿಕ್ಕಿವೆ! ವಾ! ಏನು ಪವಿತ್ರವಾಗೋ ಸಾಡೆತೀನ ಮುಹೂರ್ತ ಬಂದಬಿಡ್ತು ಸ್ವಾಮಿ ಕಾಂಗ್ರೆಸ್ಸಿನ ಜನಗಳಿಗೆ! ಮೇಲೆ ಕೂತಲ್ಲಿಯೇ ಹರಿತವಾದ ಆಯುಧಗಳು! ಇನ್ನೂ ಮಜಾ! ಆದ್ರೆ ಅವನ್ನ ಉಪಯೋಗಿಸಬೇಕಾದ ರಾಜಕುಮಾರ ಪಾಪ ಇನ್ನೂ ಬಾಲಕ! ಆದ್ರೂ ರಾಜಕುಮಾರನ ಮೇಲಿನ ಭಕ್ತಿ, ಪ್ರೀತಿಯಿಂದ ಬೇರೆಯವರು ಅವನ ಕೈಯಿಂದ ಆಯುಧಗಳನ್ನು ಕಿತ್ತುಕೊಂಡು ತಾವು ಯುದ್ಧ ಮಾಡುವುದಿಲ್ಲ ಅಂತ ಶಸ್ತ್ರ ಸನ್ಯಾಸ ಸ್ವೀಕರಿಸಿಬಿಟ್ಟಿದ್ದಾರೆ. ಇನ್ನು ಯಾರು ಯುದ್ಧ ಮಾಡುವವರು ಸ್ವಾಮಿ ತಲ್ಲೂರ ಅವರೆ!!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading