ಟಿ.ಕೆ.ಗಂಗಾಧರ ಪತ್ತಾರ
ಗ್ರಾಮೀಣ ಬ್ಯಾಂಕ್ ನಿವೃತ್ತ ಅಧಿಕಾರಿಯಾಗಿರುವ ಡಾ. ವೆಂಕಟಯ್ಯ ಅಪ್ಪಗೆರೆಯವರದು ವಿಶಿಷ್ಟ ವ್ಯಕ್ತಿತ್ವ.
ಬುದ್ಧ, ಚಾರ್ವಾಕ, ಲೋಹಿಯಾ, ಅಂಬೇಡ್ಕರ್, ಕುವೆಂಪು ವಿಚಾರಧಾರೆಗಳಿಂದ ಪ್ರಭಾವಿತರಾಗಿ ಬಾಲ್ಯದಿಂದಲೂ ವಿಭಿನ್ನ ಧೋರಣೆಯ ಕ್ರಾಂತಿ ಮಾರ್ಗದಲ್ಲಿ ನಡೆದು ಬಂದವರು. ಪ್ರಥಮ ಶ್ರೇಣಿಯಲ್ಲಿ ಬಿಎಸ್.ಸಿ., ಎಂ.ಎಸ್.ಸಿ., ಸ್ನಾತಕೋತ್ತರ ಡಿ.ಎಂ.ಎ., ರಾಷ್ಟ್ರೀಯ ವೃತ್ತಿಪರ-ಸಿ.ಎ.ಐ.ಐ.ಬಿ., ಹೀಗೆ ಹಲವು ಸ್ನಾತಕ-ಸ್ನಾತಕೋತ್ತರ ಪದವೀಧರರಾದ ಶ್ರೀಯುತರು
ಕರ್ನಾಟಕ, ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಆಡಿಟರ್ ಹುದ್ದೆಯಿಂದ ವೃತ್ತಿ ಪ್ರಾರಂಭಿಸಿ, ಗ್ರಾಮೀಣ ಬ್ಯಾಂಕಿನಲ್ಲಿ ಉನ್ನತ ಶ್ರೇಣಿಯ ಅಧಿಕಾರಿಯಾಗಿ ಸಿಂಧನೂರು, ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ ಹೀಗೆ ವಿವಿಧೆಡೆ ಸೇವೆ ಸಲ್ಲಿಸಿ ಪ್ರಾದೇಶಿಕ ಪ್ರಬಂಧಕರಾಗಿ ನಿವೃತ್ತರಾಗಿದ್ದಾರೆ.
ಜವಾಬ್ದಾರಿಯುತ ದೊಡ್ಡ ಹುದ್ದೆಯಲ್ಲಿದ್ದೂ 2003ರಲ್ಲಿ “ಗ್ರಾಮೀಣ ಮಹಿಳಾಭಿವೃದ್ಧಿಯಲ್ಲಿ ಸ್ವಸಹಾಯ ಗುಂಪುಗಳ ಪಾತ್ರ” ಎನ್ನುವ ಸಂಶೋಧನಾ ಪ್ರಬಂಧವನ್ನು ಸಲ್ಲಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್.,(ಡಾಕ್ಟೊರೇಟ್)ಪದವಿ ಪಡೆದಿದ್ದಾರೆ.
1992ರಲ್ಲಿ ಪ್ರಕಟವಾದ “ಚಾರ್ವಾಕ” ಮೊದಲನೆ ಕೃತಿಗೇ ರಾಜ್ಯ ಪ್ರಶಸ್ತಿ ಪುರಸ್ಕಾರ,
ಐದು ಆವೃತ್ತಿಗಳನ್ನು ಕಂಡಿರುವ “ಸಾಮಾನ್ಯ ಘಟನೆಗಳ ವೈಜ್ಞಾನಿಕ ವಿಶ್ಲೇಷಣೆ”(1994),
“ಅಂಬೇಡ್ಕರ್ ಅಮರವಾಣಿಗಳು”(1996),
ಗೋಪಾಲಕೃಷ್ಣ ಅಡಿಗ ಸ್ಮರಣಾರ್ಥ ಗಂಗಾವತಿಯಲ್ಲಿ ಏರ್ಪಡಿಸಿದ ಕವನ ಸ್ಪರ್ಧೆಯ ಪ್ರಶಸ್ತಿ ವಿಜೇತ “ವೇದ ವಿಜ್ಞಾನ”-ಕವನ ಸಂಕಲನ (1999),
ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಬರೆದುಕೊಟ್ಟ “ಸ್ವಸಹಾಯ ಗುಂಪುಗಳ ದಸ್ತಾವೇಜು ಮತ್ತು ಲೆಕ್ಕಪತ್ರಗಳು”(2000),
ಇನ್ಫೋಸಿಸ್ ಪ್ರತಿಷ್ಠಾನದಿಂದ ಪ್ರಕಟಿತ “ವೈಜ್ಞಾನಿಕ ವಿಶೇಷತೆಗಳು”(2004),
ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ “ವೈಚಾರಿಕ ಚಿಂತನೆಗಳು(2005),
ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತು ಪ್ರಶಸ್ತಿ ಪುರಸ್ಕøತ ವಿದೇಶ ಪ್ರವಾಸ ಕಥನ-“ಪ್ರವಾಸಿ ಸ್ವರ್ಗಕ್ಕೊಂದು ಸುತ್ತು”(2008),
“ವೈಚಾರಿಕ ನಾಟಕಗಳು”-ಹೀಗೆ ಕೆಲವೇ ಕಲವು ಕೃತಿಗಳನ್ನು ಪ್ರಕಟಿಸಿದರೂ ಅವೆಲ್ಲವೂ ವೈಜ್ಞಾನಿಕ-ವೈಚಾರಿಕ ವಿಭಿನ್ನ ವಿಶಿಷ್ಟ ದೃಷ್ಟಿಕೋನದಿಂದ ಓದುಗರ ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದಿರುವುದು ಗಮನಾರ್ಹ.
2005ರಲ್ಲಿ ಪ್ರಕಟಿತ “ವೈಚಾರಿಕ ಚಿಂತನೆಗಳು”-ಇದೀಗ ಡಾ.ಎಚ್.ಎಸ್.ಎಂ.ಪ್ರಕಾಶರವರಿಂದ ––“Rationalist’s Musings” ಶೀರ್ಷಿಕೆಯಡಿ ಇಂಗ್ಲೀಷಿಗೆ ಅನುವಾದಗೊಂಡು ಬೆಂಗಳೂರಿನ ಅನ್ನಪೂರ್ಣ ಪ್ರಕಾಶನದಿಂದ ಪ್ರಕಟವಾಗಿದೆ.
ಮಧುಕರ ಪಿಪ್ಲಯಾನ್‍ರವರ ಬಂಗಾಲಿ ಕೃತಿಯ ಭಾಷಾಂತರವಾಗಿರುವ ಮೋಸೆಸ್ ಮೈಕೇಲ್‍ರವರ GREAT ಇಂಗ್ಲೀಷ್ ಕೃತಿಯನ್ನು ಡಾ. ವೆಂಕಟಯ್ಯ ಅಪ್ಪಗೆರೆಯವರು “ಬೌದ್ಧ ಮಹಾ ಮಹಿಳೆಯರು” ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದು ಇದನ್ನು ಸಿರುಗುಪ್ಪಾ ತಾಲೂಕು ಚನ್ನಪಟ್ಟಣದ ಪಲ್ಲವ ಪ್ರಕಾಶನ ಪ್ರಕಟಿಸಿದೆ.
ಈ ಎರಡೂ ಅನುವಾದ ಕೃತಿಗಳ ಲೋಕಾರ್ಪಣ ಸಮಾರಂಭ ಇದೇ ತಿಂಗಳ 22-ಶನಿವಾರ ಬೆಂಗಳೂರಿನ ನಿಡುಮಾಮಿಡಿ ಸಭಾಂಗಣದಲ್ಲಿ ಜರುಗಲಿದೆ.






0 Comments