ಮಂಜುಳಾ ಸುಬ್ರಹ್ಮಣ್ಯ ಕರಾವಳಿಯ ಯಾರಿಗೂ ಗೊತ್ತಿಲ್ಲದೇ ಇರಲು ಸಾಧ್ಯವಿಲ್ಲ. ಮಂಜುಳಾ ನಾಟ್ಯ ಕ್ಷೇತ್ರದ ಮೂಲಕ ಟಿ ವಿ ಲೋಕ ಹೊಕ್ಕು ಸುದ್ದಿಗಳನ್ನು ಓದಿ ನಂತರ ರಂಗಭೂಮಿಗೆ ಮರಳಿದವರು. ನಾಟ್ಯ ಹಾಗೂ ರಂಗಭೂಮಿಯನ್ನು ಇನ್ನಿಲ್ಲದಂತೆ ಪ್ರೀತಿಸುವ ಇವರ ಬಗ್ಗೆ ಎಂದೋ ಬರೆಯಬೇಕಿತ್ತು. ಈಗ ಒಂದು ಅವಕಾಶ ಸಿಕ್ಕಿದೆ.
ಮಂಗಳಮುಖಿಯರಿಗಾಗಿ ನಾಟಕ ನಿರ್ದೇಶಿಸುವ, ಅದನ್ನು ಒಂದು ವರ್ಷದ ರಂಗ ತಿರುಗಾಟವಾಗಿಸುವ ಹೊಣೆ ಹೊರಲು ಸಜ್ಜಾಗಿದ್ದಾರೆ. ಓದುಗರು ಬಳಗ ನಾನು ಅವನಲ್ಲ ಅವಳು ಚಿತ್ರವನ್ನು ಉಡುಪಿಯಲ್ಲಿ ಹಲ್ಲು ಕಚ್ಚಿ ಪ್ರದರ್ಶಿಸಿದ್ದು ಅನೇಕ ತಿರುವುಗಳನ್ನು ಪಡೆದಿದೆ.

ಮಂಜುನಾಥ ಕಾಮತ್
ಉಡುಪಿಯಲ್ಲಿ “ನಾನು ಅವನಲ್ಲ ಅವಳು” ಸಿನಿಮಾ ಪ್ರದರ್ಶನವಾದ ಮೇಲೆ ಒಂದು ದಿನ ಕಾಜಲ್, ನಗ್ಮಾ, ಸಂಜೀವ ವಂಡ್ಸೆ ಅವರೊಂದಿಗೆ ನಾನು ಮತ್ತು ಸುಧೀರಣ್ಣ ಅವರ ಕಲಿಕೆಯ ಬಗ್ಗೆ ಮಾತಾಡ್ತಾ ಇದ್ದೆವು.
ಇಬ್ಬರು ಎಂ.ಎ, ಒಬ್ಬರು ಬಿ.ಎ, ಮತ್ತೆ ಐದು ಮಂದಿ ಎಸ್ಸೆಸ್ಸೆಲ್ಸಿ ಕಲಿಯಲು ಮುಂದೆ ಬಂದಿದ್ದಾರೆ. ಎಂ.ಜಿ.ಎಂ ಕಾಲೇಜಿನ ಉಪನ್ಯಾಸಕರ, ಓದುಗರು ಬಳಗದ ವಿದ್ಯನಾಥ್ ಕೆ ಅವ್ರ ಓದಿನ ಜವಾಬ್ದಾರಿ ತಗೊಂಡಿದ್ದಾರೆ.
ಓದೋದು, ಎಗ್ಸಾಮ್ ಬರಿಯೋದು, ಈ ವರೆಗೆ ಎಷ್ಟು ಓದಿದ್ದಾರೆ ಅಂತೆಲ್ಲಾ ಮಾತಾಡ್ತಾ, ಕಲಿಯುವ ಆಸೆ ಇದೆ ಅಂತಾದರೆ ಮತ್ತಷ್ಟು ಮಂದಿಗೆ ಕಲಿಸುವ ಪ್ರಯತ್ನ ಮಾಡೋಣ. ಉಡುಪಿಯಲ್ಲಿರುವ ಎಲ್ಲಾ ಲಿಂಗತ್ವ ಅಲ್ಪಸಂಖ್ಯಾತರನ್ನು ಒಂದು ದಿನ ಒಟ್ಟು ಸೇರಿಸಿ ಓದಲು ಪ್ರೇರೇಪಿಸೋಣವೆಂದು ಯೋಜಿಸಿದ್ದೆವು.

ಹೈಸ್ಕೂಲು ಮೇಸ್ಟ್ರೂ, ಟಿ.ವಿ ಆ್ಯಂಕರ್ರೂ, ಜೆ.ಸಿ ರಾಷ್ಟ್ರೀಯ ತರಭೇತುದಾರರೂ ಆಗಿರುವ ರಾಜೇಂದ್ರ ಭಟ್, ನಾನು ಮಾತಾಡ್ತೇನೆ ಅವ್ರೊಂದಿಗೆ ಅಂತ ಹೇಳಿ ನೂರಿನ್ನೂರು ಜನ ಸೇರಬಲ್ಲ ಹಾಲನ್ನೂ ಅವ್ರೇ ಬುಕ್ ಮಾಡಿದ್ರು.
ಹೀಗೆ ಮಾತುಗಳೆಲ್ಲಾ ಕಾರ್ಯರೂಪಕ್ಕೆ ಬರುತ್ತಿರುವಾಗ ಕಾಜಲ್ ಅವ್ರು ತಮ್ಮ ಅಭಿನಯ ಮತ್ತು ನೃತ್ಯದ ಆಸಕ್ತಿ ಕುರಿತು ಹೇಳಿಕೊಂಡರು.
ಆಗ ನಮಗೆ ಚಿತ್ರದ ನಾಯಕಿ ಲಿವಿಂಗ್ ಸ್ಮೈಲ್ ವಿದ್ಯಾ ಅವ್ರೆ ಸ್ಪೂರ್ತಿಯಾದರು. ನಾಟಕ ತಂಡ ಕಟ್ಟಿದರೆ ಹೆಂಗೆ. ವರುಷಕ್ಕೊಂದು ನಾಟಕ ಮತ್ತು ವರುಷ ಪೂರ್ತಿ ತಿರುಗಾಟ. ನಾಟಕ ಮತ್ತು ನೃತ್ಯದ ಮೇರು ಪ್ರತಿಭೆ, ನಮ್ಮ ಓದುಗರು ಬಳಗದ ಮಂಜುಳಾ ಸುಭ್ರಮಣ್ಯ ಅದರ ಜವಾಬ್ದಾರಿ ತಗೊಂಡಿದ್ದಾರೆ.
ಉಡುಪಿಯಲ್ಲಿ ನಾವು ಇಷ್ಟೆಲ್ಲಾ ಬದಲಾಗಲು ಸ್ಪೂರ್ತಿಯಾಗಿದ್ದು ಲಿಂಗದೇವರು ನಿರ್ದೇಶನದ “ನಾನು ಅವನಲ್ಲ ಅವಳು” ಸಿನಿಮಾ.

ಆ ಸಿನಿಮಾವೀಗ ಒಂದು ವಾರದ ಮಟ್ಟಿಗೆ ಮಂಗಳೂರಿನಲ್ಲಿ ಪ್ರದರ್ಶನವಾಗುತ್ತಿದೆ. ಇಡೀ ಕರಾವಳಿ ಆ ಸಿನಿಮಾ ನೋಡ್ಬೇಕು. ನಾವೀಗ ಕಾಣುತ್ತಿರುವ ಬದಲಾವಣೆಗೆ ಮತ್ತಷ್ಟು ಸೇರ್ಪಡೆಯಾಗಬೇಕು. ಅದರ ವೇಗ ಮತ್ತಷ್ಟು ಹೆಚ್ಚಬೇಕು.
ಮಂಗಳೂರಿನ ಜಯಕಿರಣ ಫಿಲಂಸ್ ಸಂಸ್ಥೆ ಈ ಪ್ರದರ್ಶನವನ್ನು ಆಯೋಜಿಸಿದೆ. ಅವರ ಅಭಿರುಚಿಗೆ ಅಭಿನಂದನೆಗಳು.
ದಯವಿಟ್ಟು ಎಲ್ರೂ ಸಿನಿಮಾ ನೋಡಿ.





ಮಂಜುಳ ಅವರು ಕರಾವಳಿಗಷ್ಟೇ ಪರಿಚಿತರಲ್ಲ. ನಮ್ಮ ಬಯಲು ಸೀಮೆಯ ಹಾಸನಕ್ಕೂ ಪರಿಚಿತರು. ಅವರ ಭರತನಾಟ್ಯ ಶಾಲೆಯ ಕನಸು ಚಿಗುರೊಡೆದಿದ್ದು ಇಲ್ಲೆ. ಅವರ ಹೊಸತನದ ಪ್ರಯೋಗಗಳಿಗೆ ಯಶಸ್ಸು ಸಿಗಲೆಂದು ಹಾರೈಸುತ್ತೇನೆ.