
ಅಜ್ಜಿಮನೆ ವಿಜಯಕ್ಕ
‘ಅಜ್ಜಿಮನೆ’ ಎಂಬ ಹೊಸ ಆಲೋಚನೆಯ ಪ್ಲೇ ಹೋಂ ಆರಂಭಿಸಿದ ಕಾರಣಕ್ಕಾಗಿಯೇ ‘ಅಜ್ಜಿಮನೆ ವಿಜಯಕ್ಕ’ ಎಂದೇ ಇವರು ಪರಿಚಿತರು. ಸದಾ ಚಟುವಟಿಕೆ, ಅರಳು ಹುರಿದ ಮಾತು ಇವರ ಹೆಗ್ಗುರುತು. ಸಧ್ಯ ಗಾಂಧಿ ಬಜಾರ್ ನಲ್ಲಿ ಅಜ್ಜಿಮನೆ ತಿಂಡಿ ಬಜಾರ್ ನಡೆಸುತ್ತಿದ್ದಾರೆ. ಅಲ್ಲಿಯ ಒಂದು ಕಥನ ಇದು

ಇವತ್ತು ಹೀಗಾಯ್ತು
ಬೆಳಿಗ್ಗೆ ಕೆಲಸಕ್ಕಾಗಿ ಮಹಿಳೆಯೊಬ್ಬಳು ಬಂದಿದ್ದರು.. ಹೊರಗೆ ಕೆಲಸ ಮಾಡಿ ಅನುಭವವಿಲ್ಲ.. ಆದರೆ ಮನೆಯಲ್ಲೇ ಹಪ್ಪಳ ಇತ್ಯಾದಿ ಮಾಡಿ ಅನುಭವವಿದೆ, ಗಂಡನ ಸಂಬಳದಲ್ಲಿ ಸಂಸಾರ ಕಷ್ಟ.. ಆಕೆ ಇರುವ ಜಾಗವೂ ದೂರವಿತ್ತು.. ಹೇಗೆ ಬರ್ತಿರಿ? ಕೇಳಿದೆ.. ಯಜಮಾನ್ರು ಗಾಡಿಲಿ ಡ್ರಾಪ್ ಮಾಡ್ತಾರೆ…
ಸಾಧಾರಣವಾಗಿ ಕೆಲಸಕ್ಕೆ ಸೇರುವಾಗ ಯಾವುಧೇ ಸಮಸ್ಯೆಗಳು ಸಮಸ್ಯೆಗಳೇ ಅಲ್ಲವೆನ್ನುವವರು.. ಆಮೇಲೆ ನಿಧಾನವಾಗಿ ಶುರು ಮಾಡುತ್ತಾರೆ.. ಇದು ನನ್ನ ಲೆಕ್ಕವಿಡಲಾರಷ್ಟನೆಯ ಅನುಭವ.. ನನಗೆ ನಂಬಿಕೆ ಬರಲಿಲ್ಲಾ ಅನಿಸಿರಬೇಕು.. ಅವರು ಹೊರಗೆ ಇದ್ದಾರೆ ಕರಿಯಲಾ ಎಂದಳು.. ಆಕೆಯ ಕಣ್ಣಲ್ಲಿದ್ದ ಕಾನ್ಫಿಡೆನ್ಸ್ ನನಗಾಗಲೇ ಕಾಣಿಸಿದರಿಂದ ಒಪ್ಪಿದೆ..
ದಪ್ಪ ಕನ್ನಡಕದ ಪಾಪದ ವ್ಯಕ್ತಿ ಒಳಗೆ ಬಂದ್ರು.. ರೀ.. ನೀವು ದಿನಾ ಡ್ರಾಪ್ ಮಾಡ್ತಿರಲ್ಲ.. ಮೇಡಂ ಕೇಳ್ತಿದ್ದಾರೆ.. ಹೌದು ಮೇಡಂ.. ನನಗಿವಳು ಇಷ್ಟು ಸಹಾಯ ಮಾಡುವಾಗ ನಾನು ಇಷ್ಟೂ ಮಾಡದಿದ್ರೆ ಹೇಗೆ… ಸ್ಪಷ್ಟವಾಗಿ ನಿಧಾನವಾಗಿ ಹೇಳಿದ.
ಏನ್ ಕೆಲ್ಸ ಮಾಡ್ತಿದ್ದಿರಿ? ಕೇಳಿದೆ.
ಮಷೀನ್ ಆಪರೇಟರ್….
ಎಷ್ಟು ವರ್ಷದಿಂದ?
8 ವರ್ಷದಿಂದ..
ಆಕೆ.. ನಾನು ಅವ್ರಿಗೆ ಬೇರೆ ಕಡೆ ಕೆಲ್ಸ ನೋಡ್ಕ್ಕೊಲ್ಲಿ ಅಂದ್ರೆ ಕೇಳೋದಿಲ್ಲ.. ಮೇಡಂ,
ಯಾಕೆ ಬೇರೆ ಕಡೆ ನೋಡೋದು ?
ಸಂಬಳ ಯಾವಾಗ್ಲೋ ಕೊಡ್ತಾರೆ.. ನಮ್ಮ ಬಾಡಿಗೆ, ಅಂಗಡಿಸಾಲ, ಕರೆಂಟು ಬಿಲ್ಲು, ತಿಂಗಳೆಲ್ಲ ಒದ್ದಾಟ ಮೇಡಂ..
ಹೌದೂ.. ಯಾಕೆ ನೀವು ಬೇರೆ ಕೆಲ್ಸ ನೋಡಬಾರದು .. ಎಂದೆ ಆತನಿಗೆ
ಆತ ಕೊಟ್ಟ ಉತ್ತರ.. ನನಗೆ ಮಾತೇ ಮರೆತಂತಾಯ್ತು.
ದೇವರಂತವರು.. ನಮ್ಮ ಓನರು.. ಈಗ.. ಆರ್ಡರ್ ಕಮ್ಮಿ ಇದೆ ಒಂದು ವರ್ಷ ದಿಂದ…. ಸರಿಯಾಗುತ್ತೆ.. ದೇವರನ್ನು ಬಿಟ್ಟು ಹೇಗೆ ಬರಲಿ?… ಭಾವಪೂರ್ಣವಾಗಿ ಹೇಳಿದ.. ಕನ್ನಡಕವನ್ನು ತೆಗೆದು ಒರಸಿ ಮತ್ತೆ ಹಾಕಿದ.
ಆ ಓನರ್ ಹೇಗಿರಬಹುದು?.. ಗಂಡನಿಗೆ ಹೆಗಲು ಕೊಡುವ ಹೆಂಡತಿ, ಹೆಂಡತಿಗೆ ನೆರವಾಗುವ ಗಂಡನ ಒಳ್ಳೆತನ, ಎಂತಹ ಪರಿಸ್ಥಿತಿಯಲ್ಲೂ ಬಿಟ್ಟುಹೋಗದಂತೆ ಪ್ರೀತಿಯ ದಾರದಲ್ಲಿ ಕಟ್ಟಿ ಹಾಕಿದ ಓನರ್…ಈ ಮೂವರಿಗೂ ಒಳ್ಳೆದಾಗಲಿ…





ಈ ಮೂವರಿಗೂ ಒಳ್ಳೆದಾಗಲಿ…
ಮೌಲ್ಯಯುತ ಮಾನವೀಯ ಸಂಬಂಧಗಳು ಅಲ್ಲಲ್ಲಿ ಸಿಗುತ್ತವೆ, ಸುಳ್ಳಲ್ಲ ಅನ್ನೂದಕ್ಕೆ ವಿಜಯಕ್ಕ ಸಾಕ್ಷ ಒದಗಿಸಿದ್ದಾರೆ. ಆ ಮೂವರೊಂದಿಗೆ ಇವರಿಗೂ ಒಳ್ಳೇದಾಗಲಿ.