ಜಿ ಎನ್ ಮೋಹನ್
ಅರಕಲಗೂಡು ಜಯಕುಮಾರ್ ಅವರ ಬರಲಿರುವ ಕೃತಿಯ ನೆಪದಲ್ಲಿ ಮಾಡಿದ ಟಿಪ್ಪಣಿ
ಪತ್ರಿಕೋದ್ಯಮಕ್ಕೆ ಇದು ನಿಜಕ್ಕೂ ಸಂಕಟದ ದಿನಗಳು. ಜಾಗತೀಕರಣ ಮಾಧ್ಯಮದ ಆಶಯಗಳನ್ನು ಸಾರಾಸಗಟಾಗಿ ಬದಲು ಮಾಡಿಹಾಕುತ್ತಿದೆ. ಜಾಗತೀಕರಣ ಮೊದಲ ಪೆಟ್ಟು ನೀಡಿರುವುದು ನಮ್ಮ ಚಿಂತನೆಗೆ. ದೇಶ ಕಟ್ಟುವ ಆಶಯದೊಂದಿಗೆ ಆರಂಭವಾದ ಪತ್ರಿಕೋದ್ಯಮಕ್ಕೆ ಆ ಕೆಲಸವೇ ಇನ್ನೂ ಆಗಿ ಮುಗಿದಿರಲಿಲ್ಲ. ಅಂತಹ ಹಂತದಲ್ಲಿಯೇ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಇದ್ದ ಕಿಟಕಿ ಬಾಗಿಲುಗಳನ್ನು ತೆರೆದು, ಗಡಿ ಗೋಡೆಗಳನ್ನು ಇಲ್ಲವಾಗಿಸಿ ಜಾಗತೀಕರಣ ರಾತ್ರೋರಾತ್ರಿ ದೇಶವನ್ನು ಆಕ್ರಮಿಸಿಕೊಳ್ಳುವ ಅವಕಾಶ ನೀಡಿದರು.
ಮಾಧ್ಯಮದ ಸಂಸ್ಥೆಯ ನಾಲ್ಕು ಗೋಡೆಯ ಒಳಗಿದ್ದವರಿಗೆ ಆಗ ಜಾಗತೀಕರಣ ಎನ್ನುವುದು ಗ್ಯಾಟ್, ಡಂಕೆಲ್, ಟ್ರಿಪ್ಸ್… ಹೀಗೆ ಕೇವಲ ಪದಪುಂಜಗಳನ್ನು ರೂಪಿಸುವ ಸವಾಲಿನ ಕೆಲಸ ಮಾತ್ರ ಆಗಿತ್ತು. ಆದರೆ ಜಾಗತೀಕರಣ ಕೇವಲ ಪದಪುಂಜಗಳ ಆಟವಲ್ಲ ಅದು ಬದುಕು ಬದಲಿಸುವ ಆಟ ಎನ್ನುವುದು ಗೊತ್ತಾಗಲು ತೀರಾ ತೀರಾ ತಡವಾಗಲಿಲ್ಲ. ಆದರೆ ಆ ವೇಳೆಗೆ ಸಾಕಷ್ಟು ತಡವಾಗಿತ್ತು. ಮಾಧ್ಯಮದ ಒಳಮನಸ್ಸೇ ಕದಲಿಹೋಗುವಷ್ಟು ಬದಲಾವಣೆಯನ್ನು ಜಾಗತೀಕರಣ ತಂದಿತ್ತು.
ಜಾಗತೀಕರಣದಿಂದಾಗಿ ಯಾವಾಗ ಬಹುರಾಷ್ಟ್ರೀಯ ಜಾಹೀರಾತು ಸಂಸ್ಥೆಗಳು ದೇಶದ ಒಳಪ್ರವೇಶಿಸಿದವೋ ಆಗಲೇ ಮಾಧ್ಯಮದ ಮನಸ್ಸೂ ಬದಲಾಗಿ ಹೋಗಿತ್ತು. ಆ ವೇಳೆಗಾಗಲೇ ಒಂದು ವ್ಯವಹಾರವಾಗಿ ಬದಲಾಗುವ ದಿಕ್ಕಿನಲ್ಲಿ ಹೊರಳುತ್ತಿದ್ದ ಪತ್ರಿಕೋದ್ಯಮಕ್ಕೆ ಜಾಗತೀಕರಣದ ಈ ಆರ್ಥಿಕ ಅವಕಾಶಗಳು ಇನ್ನಷ್ಟು ಬದಲಾಗಲು, ಅತಿ ವೇಗದಲ್ಲಿ ಬದಲಾಗಲು ಕುಮ್ಮಕ್ಕು ನೀಡಿತು. ಆ ಕಾರಣಕ್ಕಾಗಿಯೇ ಇವತ್ತು ಪತ್ರಿಕೋದ್ಯಮ ಎನ್ನುವುದು ಪತ್ರಿಕೆಯ ಉದ್ಯಮ . ಇದನ್ನೇ ಡಾ. ಅಂಬೇಡ್ಕರ್ ಅವರು ಮೊದಲು ಪತ್ರಿಕಾಧರ್ಮ ಇತ್ತು ಈಗ ಅದು ಪತ್ರಿಕಾ ಉದ್ಯಮವಾಗಿದೆ ಎಂದು ಉದ್ಘರಿಸಿದ್ದರು.
ಪತ್ರಿಕೆ ಎನ್ನುವುದು ಯಾವಾಗ ಲಾಭದತ್ತ ಕಣ್ಣು ನೆಟ್ಟಿತೋ, ಪೈಪೋಟಿಗೆ ಅಂಜಿ ಸದಾ ರೇಸಿನಲ್ಲಿ ಮುಂದೆ ಇರುವ ಮನಸ್ಸು ಮಾಡಿತೋ, ಅಂತರರಾಷ್ಟ್ರೀಯ ಜಾಹೀರಾತು ಕಂಪನಿಗಳ ಸರಕುಗಳ ಪ್ರಚಾರಕನಾಗಿ ಬದಲಾಯಿತೊ, ಆಗಲೇ ಮಾಧ್ಯಮ ತನಗಿದ್ದ ಸೇವಾ ಮನೋಭಾವಕ್ಕೂ ಕ್ರಮೇಣ ವಿದಾಯ ಹೇಳಲು ಆರಂಭಿಸಿತು.
ಹಾಗೆ ಅಂತರಾಷ್ಟ್ರೀಯ ಜಾಹೀರಾತು ಕಂಪನಿಗಳಿಗೆ ಮಣಿದ ಕಾರಣ ಆದ ದೊಡ್ಡ ಬದಲಾವಣೆಯೆಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಅದರ ಕಣ್ಣು ಮಂಜಾದದ್ದು. ಜಾಹೀರಾತು ಕಂಪನಿಗಳ ಸರಕುಗಳಿಗೆ ಗ್ರಾಹಕರನ್ನು ಹುಟ್ಟುಹಾಕಬೇಕಾದ ಅನಿವಾರ್ಯತೆ ಇತ್ತು. ಮಾಧ್ಯಮಗಳು ಆ ಸರಕುಗಳನ್ನು ಕೊಂಡುಕೊಳ್ಳುವವರನ್ನು ಸೆಳೆಯಲು ಹಿಂದೆ ಬಿದ್ದವು. ಪರಿಣಾಮ ಅದುವರೆಗೂ ಕೊಳ್ಳುವ ಶಕ್ತಿ ಇದ್ದವರಿಗೆ ಕೊಳ್ಳಲಾಗದದವನ ಕಥೆ ಹೇಳುತ್ತಿದ್ದ ಮಾಧ್ಯಮಗಳು ಕೊಳ್ಳುವವನಿಗೆ ಕೊಳ್ಳುವ ಶಕ್ತಿ ಇದ್ದವನ ಕಥೆಯನ್ನೇ ಹೇಳಲು ಆರಂಭಿಸಿತು.
ಆದರೆ ಭಾರತ ಇನ್ನೂ ಅಭಿವೃದ್ಧಿಯತ್ತ ಹೆಜ್ಜೆ ಇಡುತ್ತಿರುವ ದೇಶ. ‘ಇಂಡಿಯಾ ಶೈನಿಂಗ್’ ಎನ್ನುವುದು ಚುನಾವಣೆಗಳು ಹುಟ್ಟಿಸುವ ಭ್ರಮೆ ಮಾತ್ರ. ಇಂಡಿಯಾ, ಭಾರತ ಎನ್ನುವುದು ಅತ್ಯಂತ ಸರಳವಾಗಿ ಸಮಸ್ಯೆಗಳನ್ನು ಮರೆಮಾಚುವ, ಅರ್ಥೈಸುವ ವಿಧಾನ. ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ ದೇಶವನ್ನು ಕಟ್ಟುವ ಯತ್ನದಲ್ಲಿದ್ದ ಮಾಧ್ಯಮಗಳು ದಿಢೀರನೆ ಇನ್ನೊಂದು ದಾರಿಗೆ ಹೊರಳಿಕೊಂಡ ಕಾರಣ ಉಂಟಾದ ಪರಿಣಾಮ ಅಗಾಧ. ಮಾಧ್ಯಮ ಎನ್ನುವುದು ಸಮಾಜ ಮತ್ತು ಸರ್ಕಾರದ ನಡುವಿನ ಸೇತುವೆ ಆಗಿತ್ತು. ಆದರೆ ಯಾವಾಗ ಮಾದ್ಯಮ ತಾನು ಸೇತುವೆಯ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಯತ್ನಿಸಿತೋ ಆಗ ಮಾಧ್ಯಮ ಎನ್ನುವುದು ಇನ್ನಾರಿಗಾಗಿ ಎನ್ನುವ ಪ್ರಶ್ನೆ ತಲೆ ಎತ್ತಿದೆ.

ಈ ಮಧ್ಯೆ ದೃಶ್ಯ ಮಾಧ್ಯಮಗಳು ಅದರಲ್ಲೂ 24*7 ಘಂಟೆಯ ಸುದ್ದಿ ಮಾಧ್ಯಮಗಳು ಮಾಧ್ಯಮದ ಆಶಯಗಳನ್ನು ಇನ್ನಷ್ಟು ವಿರುದ್ಧ ದಿಕ್ಕಿಗೆ ಕೊಂಡೊಯುತ್ತಿದೆ. ಬಹುಷಃ ಈ ಕಾರಣಕ್ಕಾಗಿಯೇ ಇರಬೇಕು ಐಪಿಎಲ್ ಭಾರತ ಹಾಗೂ ಬಿಪಿಎಲ್ ಭಾರತ ಎನ್ನುವ ಎರಡು ಲೋಕ ಸೃಷ್ಟಿಯಾಗಿರುವುದು. ಟಿವಿ ಚಾನೆಲ್ಗಳು, ಜಾಹೀರಾತುಗಳು, ಅದಕ್ಕಾಗಿ ಪಡೆಯಬೇಕಾದ ಟಿ.ಆರ್.ಪಿ. ಅಂಕಗಳು ಎಲ್ಲವೂ ಮಾಧ್ಯಮದ ಆದ್ಯತೆಯನ್ನು ಬದಲು ಮಾಡಿಹಾಕಿದೆ.
ಈ ಎಲ್ಲ ಕಾರಣಕ್ಕಾಗಿಯೇ ಈಗ ಉಸಿರುಗಟ್ಟಿಸುವ ವಾತಾವರಣವಿದೆ. ಮಾಧ್ಯಮ, ರಾಜಕಾರಣ, ಕಾರ್ಪೊರೇಟ್ ಸಂಸ್ಥೆಗಳ ಅಗೋಚರ ಒಪ್ಪಂದಗಳು ಮಾಧ್ಯಮದ ಬಗ್ಗೆ ಏನು ಭರವಸೆ ಇಟ್ಟುಕೊಳ್ಳಬೇಕು ಎನ್ನುವ ಪ್ರಶ್ನೆ ಎತ್ತುವಂತೆ ಮಾಡಿವೆ.
* * *
ಇಂತಹ ಕಾಲಘಟ್ಟದಲ್ಲಿಯೇ ನಾನು ‘ಅಭಿವ್ಯಕ್ತಿ’ ಹಿಡಿದು ಕುಳಿತಿದ್ದೇನೆ. ಅರಕಲುಗೂಡಿನ ಹುಡುಗ ಜಯಕುಮಾರ್ ‘ಜನತಾ ಮಾಧ್ಯಮ’ಕ್ಕೂ ತಮ್ಮ ‘ಅಭಿವ್ಯಕ್ತಿ’ ಬ್ಲಾಗ್ಗೂ ಬರೆದ ಅಂಕಣ ಲೇಖನಗಳು ಇವು.
ಅರಕಲಗೂಡು ಜಯಕುಮಾರ್ ಅವರ ಬರಹಗಳು ನಿಗಿನಿಗಿ ಕೆಂಡದುಂಡೆಗಳಂತಿವೆ. ಯಾವ ಒಂದು ಕಾಲದಲ್ಲಿ ನಾವು ಪತ್ರಿಕಾ ಲೋಕವನ್ನು ಪ್ರವೇಶಿಸಿದ್ದೆವೋ ಆ ಕಾಲಕ್ಕೆ ಇದ್ದ ತಹತಹ, ಸಿಟ್ಟು, ರೊಚ್ಚು ಎಲ್ಲವೂ ಈ ಬರಹಗಳಲ್ಲಿದೆ. ಪತ್ರಿಕಾ ಮಾಧ್ಯಮ ಈ ಆಶಯಗಳನ್ನು ಕೈಬಿಟ್ಟು ಆಗಲೇ ಮಾರುದೂರ ಹೋಗಿದೆ. ಆದರೆ ಜಯಕುಮಾರ್ ಅವರ ಬರಹಗಳು ನಮ್ಮ ಮಾಧ್ಯಮಗಳು ಯಾರನ್ನು ಕೈಬಿಟ್ಟು ಹೋಗಬಾರದಿತ್ತೋ, ಯಾವ ಪ್ರಶ್ನೆಗಳನ್ನು ಎತ್ತಬೇಕಿತ್ತೋ ಅದನ್ನು ತಮ್ಮ ಬರಹಗಳಲ್ಲಿ ಎತ್ತಿದ್ದಾರೆ.
ಅರಕಲುಗೂಡು ಜಯಕುಮಾರ್ ಈ ಜಾಗತೀಕರಣದ ಅಪ್ಪಟ ದಿನಗಳಲ್ಲೂ ಇನ್ನೂ ಪ್ರಶ್ನೆ ಕೇಳುವ ಎಚ್ಚರ ಉಳಿಸಿಕೊಂಡದ್ದು ಹೇಗೆ ಎನ್ನವುದು ನನ್ನ ಕೌತುಕ. ಜಯಕುಮಾರ್ ಮೈಸೂರಿನ ಗರಡಿಯಲ್ಲಿ ಪಳಗಿದವರು. ಸಂಗೀತದಲ್ಲಿ ಘರಾಣೆಗಳು ಇರುವಂತೆ ಬೌದ್ಧಿಕ ಕ್ಷೇತ್ರದಲ್ಲೂ ಬುದ್ದಿಗೆ ಸಾಣೆ ಹಿಡಿಯುವ ಘರಾಣೆಗಳು ಇವೆ. ಅದರಲ್ಲಿ ಮೈಸೂರು ಘರಾಣೆಯದ್ದೇ ಶ್ರೇಷ್ಠ ಪಂಕ್ತಿ. ಪ್ರಶ್ನೆ ಕೇಳುವುದಕ್ಕೆ ಎಂದೆಂದಿಗೂ ಒತ್ತು ಕೊಡುವ, ಪ್ರಶ್ನೆಗಳ ಮೂಲಕವೇ ಪರಚಿ ಹಾಕುವುದನ್ನು ಕಲಿಸುವ ಮೈಸೂರು ನಮ್ಮ ನಾಡಿಗೆ ಬೌದ್ಧಿಕ ಹಸಿವನ್ನು ಕಲಿಸಿದೆ. ಜಯಕುಮಾರ್ ತಾವು ಓದಿದ ಮೈಸೂರಿನಿಂದ ಈ ಎಲ್ಲವನ್ನೂ ಹೀರಿಕೊಂಡಿದ್ದಾರೆ. ಹಾಗಾಗಿಯೇ ಇವರೊಳಗೆ ಒಬ್ಬ ಪ್ರಶ್ನೆ ಮಾಡುವ, ವಿಮರ್ಶಿಸಿ ನೋಡುವ, ಇದ್ದದ್ದನ್ನು ಇದ್ದ ಹಾಗೇ ಹೇಳುವ ವ್ಯಕ್ತಿಯೊಬ್ಬ ರೂಪುಗೊಂಡಿದ್ದಾನೆ.
ಮಾಧ್ಯಮದ ಬಗ್ಗೆ ಜಯಕುಮಾರ್ ಸಾಕಷ್ಟು ಚಿಂತನೆ ನಡೆಸಿದ್ದಾರೆ. ಟಿ.ಆರ್.ಪಿ. ಎಂಬ ಹುಚ್ಚು ಕುದುರೆ ತನ್ನ ಕಾಲ್ತುಳಿತಕ್ಕೆ ಎಲ್ಲವನ್ನೂ ಬಲಿ ತೆಗೆದುಕೊಳ್ಳುತ್ತಾ ಸಾಗುತ್ತಿದ್ದು ಇವರಲ್ಲೂ ಚಿಂತೆ ಹುಟ್ಟಿಸುವ, ಮಡೆಸ್ನಾನ, ಹೋಂಸ್ಟೇ ಮೇಲಿನ ದಾಳಿ, ಡಾ. ಅಂಬೇಡ್ಕರ್ ಎಂಬ ದಲಿತ ಸೂರ್ಯ, ಜಾತಿ ರಾಜಕಾರಣ, ಕೇಸರೀಕರಣ, ರೈತ, ಅಣ್ಣಾ ಹಜಾರೆ, ಭ್ರಷ್ಟಾಚಾರ ಎಲ್ಲವೂ ಇವರ ಪ್ರಶ್ನೆಗಳಿಗೆ ಸಿಕ್ಕಿವೆ. ಅಸೀಂ ತ್ರಿವೇದಿ ಬರೆದ ವ್ಯಂಗ್ಯ ಚಿತ್ರವನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ರಕ್ಷಿಸಿಕೊಳ್ಳಲು ಹೊರಟಾಗ ಅದು ಹೇಗೆ ತಪ್ಪು ಎಂದು ಕೇಳುವ ಧೈರ್ಯ ಬರುವುದು ಸಮಾಜದ ಒಳಹೊರಗು ಗೊತ್ತಿರುವವರಿಗೆ ಮಾತ್ರ. ಅಂತಹ ಪ್ರಶ್ನೆಯನ್ನು ಜಯಕುಮಾರ್ ಕೇಳುತ್ತಾರೆ. ಕೇಳಿದ್ದನ್ನೇ ಹಾಕುತ್ತಿದ್ದೇನೆ ಎನ್ನುವ ಮಾಧ್ಯಮದ ಜಾಣ ಉತ್ತರಗಳನ್ನು ಪ್ರಶ್ನೆಗಳನ್ನು ಹಾಕಿ ನಿಲ್ಲಿಸುತ್ತಾರೆ.
ಹೀಗೆಲ್ಲಾ ಬರೆಯುವ ಜಯಕುಮಾರ್ ಅವರ ಲೇಖನಗಳನ್ನು ಓದಲು ನನಗೆ ಇನ್ನೊಂದಿಷ್ಟು ಸಮಯ ಬೇಕಿತ್ತು. ಒಂದು ಬೀಸುನೋಟಕ್ಕೆ ಜಯಕುಮಾರ್ ಅವರು ನನಗೆ ಸಿಕ್ಕದ್ದು ಹೀಗೆ ಮಾತ್ರ. ಅವರ ಲೇಖನಗಳನ್ನು ಅವರ ಬ್ಲಾಗ್ (‘ಅಭಿವ್ಯಕ್ತಿ’ ) ಓದುತ್ತಾ ಬಂದಿದ್ದ ನನಗೆ ಒಟ್ಟಾಗಿ ಓದುವಾಗ ಅವರ ಸಮಾಜ ನಿಷ್ಠೆ ಮನಸೆಳೆಯಿತು. ಇದು ಇಂದಿಗೆ ಅಪರೂಪದ ಗುಣ. ಹಾಗಾಗಿ ಜಯಕುಮಾರ್ ನನಗೆ ಇಷ್ಟ. ಈ ನಿಷ್ಠುರತೆ ತರುವ ಕಷ್ಟಗಳೂ ನನಗೆ ಗೊತ್ತು. ಜಯಕುಮಾರ್ ಸಹ ಅದನ್ನು ಅನುಭವಿಸಿ ಗೆದ್ದಿದ್ದಾರೆ.
ಅದಿರಲಿ, ಜಯಕುಮಾರ್ ಅವರ ಈ ಬರಹಗಳಿಗೆ ಇನ್ನೂ ತಾಳ್ಮೆಯ ಒರೆಯಲ್ಲಿಟ್ಟು ನೋಡಲು ಬೇಕಾದ ಅನುಭವ ಬೇಕು. ಬರೆಯುತ್ತಾ, ನೋಡುತ್ತಾ, ಅನುಭವಿಸುತ್ತಾ ಸಾಗಿದ ಜಯಕುಮಾರ್ ಬರಹಗಳಿಗೆ ಸಮಾಜದ ಒಳಗಣ ಅನಂತ ವೈರುಧ್ಯಗಳ ದರ್ಶವನೂ ಆಗಲಿ. ಅದರ ಫಲ ಅವರ ಬರಹಗಳಿಗೂ ಸಿಕ್ಕಲಿ.
ಇಂದಿನ ಪತ್ರಿಕೋದ್ಯಮದ ಮಿಣಿ ಮಿಣಿ ಬೆಳಕು ಇರುವುದು ಜಾಗತೀಕರಣದ ಗಾಳಿಯ ಹೊಡೆತಕ್ಕೆ ಇನ್ನೂ ಸಿಗದೆ ಅಷ್ಟಿಷ್ಟು ಬಚಾವಾಗಿರುವ ಗ್ರಾಮಾಂತರ ಪ್ರದೇಶಗಳಲ್ಲಿ ಅನಿಸುತ್ತದೆ. ಹಾಗಾಗಿಯೇ ‘ಜನತಾ ಮಾಧ್ಯಮ’ ಎಂಬ ಪತ್ರಿಕೆಗೆ ಜನರ ಆಶಯಗಳಿಗೆ ಇನ್ನು ಬದ್ಧವಾಗಿರಲು ಸಾಧ್ಯವಾಗಿದೆ. ಪತ್ರಿಕೆ ಎನ್ನುವುದು ಇನ್ನೂ ಸರಕಾರ ಹಾಗೂ ಸಮಾಜದ ನಡುವಿನ ಸೇತುವೆಯಂತಿರಲು ಸಾಧ್ಯವಾಗಿದೆ.
ಇಲ್ಲಿ ಒಂದಂಶವನ್ನು ಗಮನಿಸಬೇಕು. ಜಾಗತೀಕರಣ ಹುಟ್ಟುಹಾಕಿರುವ ಸರಕು ಸಂಸ್ಕೃತಿಗೆ ಈಗ ಬೇಕಿರುವುದು ಬೃಹನ್ನಗರಿಗಳು. ತಕ್ಷಣದಲ್ಲೇ ನಮ್ಮ ಸರಕುಗಳನ್ನು ಬಾಚಿಕೊಳ್ಳುವ ಮನಸ್ಸುಗಳು. ಹಾಗಾಗಿಯೇ ಜಾಗತೀಕರಣದ ಹೊಡೆತ ಇನ್ನೂ ನಗರಗಳಿಗೆ ಮಾತ್ರ ಮೀಸಲಾಗಿದೆ. ಈ ನಗರಗಳ ಆಚೆಗೂ ಕಣ್ಣು ಹಾಕುವ ದಿನಗಳೇನೂ ದೂರವಿಲ್ಲ. ಆದರೆ ಅದುವರೆಗಿನತನಕ ಹಾಸನ, ಅರಕಲಗೂಡು, ಜನತಾ ಮಾಧ್ಯಮ, ಜಯಕುಮಾರ್ ಎಲ್ಲರೂ ಪಾರಾಗಿರುತ್ತಾರೆ. ಮಾಧ್ಯಮದ ಮನಸ್ಸನ್ನು ಬದಲು ಮಾಡಿ ಹಾಕುವ ಗಾಳಿ ಇಂದಲ್ಲಾ ನಾಳೆ ಬೀಸುವ ಗ್ಯಾರಂಟಿ ಇದೆ. ಆಗಲೂ ಈ ಹುಡುಗ, ಅರಕಲಗೂಡಿನ ಜಯಕುಮಾರ್ ಪ್ರಶ್ನೆಗಳನ್ನು ಕೇಳುವ ಹುಮ್ಮಸ್ಸು ಉಳಿಸಿಕೊಳ್ಳಲಿ ಎಂಬ ಆಶಯ ನನ್ನದು.









……
ಪತ್ರಿಕೋದ್ಯಮ ಪತ್ರಿಕಾ ಉದ್ಯಮವಾದ ಬಗೆಯನ್ನು ಬಹಳ ಸೊಗಸಾಗಿ ವಾಸ್ತವಿಕತೆಗೆ ಹತ್ತಿರವಾಗಿ ಬರೆದಿದ್ದೀರಿ ಸರ್
patrikaa udyamakke aatmavalokanada jaroorattide ennuvudannu nimma lekhana etti toriside.
ಜಯಕುಮಾರ್ ಲೇಖನಗಳು ನನಗೆ ಆಗಾಗ ಮಾರ್ಗದರ್ಶಿಯಂತೆ ಭಾಸವಾಗುತ್ತದೆ.ಅವರ ನಿರ್ಮಲತೆ,ಮೃದುತ್ವ,ಒಡಲಲ್ಲಿ ಬೆಂಕಿ ಇಟ್ಟುಕೊಂಡಿರುವ ಅನುಮಾನವನ್ನು ಹುಟ್ಟಿಸುವ ಜಯಕುಮಾರ್ ಪುಸ್ತಕ ಬೇಗ ಕೈಸೇರುವಂತಾಗಲಿ.
ಅಭಿವ್ಯಕ್ತಿ ಬ್ಲಾಗ್ ನ ಸರಿಯಾದ ಅಡ್ರೆಸ್ ಕೊಡ್ತೀರಾ ಪ್ಲೀಸ್…
http://reporterjay.blogspot.in/
ಜಯಕುಮಾರ್ ಪುಟವಿಟ್ಟ ಚಿನ್ನ. ಆತ ಯಾವತ್ತೂ ಯಾರಿಗೂ ಕೂಡ ಸ್ವಾರ್ಥದ ಎಳೆ ಇಟ್ಟುಕೊಂಡು ಸಹಾಯ ಮಾಡುವ ವ್ಯಕ್ತಿ ಅಲ್ಲ. ಜೊತೆಗೆ ಸುದ್ದಿಗಳು ಹಾಗು ವಿಷಯಗಳ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದು ನಾನು ನೋಡಿಲ್ಲ. ತುಂಬಾ ದುಃಖ ಆದಾಗ ಕಾಲ್ ಮಾಡಿದರೆ ಎಷ್ಟೇ ಹೊತ್ತಾಗಲಿ ಅಷ್ಟೇ ಸಂಯಮದಿಂದ ಸಮಾದಾನ ಹೇಳೋ ಮಾತೃ ಹೃದಯಿ. ಅವರ ಬರವಣಿಗೆಯಲ್ಲಿ ಖಂಡಿತ ಗಟ್ಟಿತನವಿದೆ. ಗೆಳೆಯ, ಸಮಾಜ, ವ್ಯವಸ್ಥೆ, ನೋವು, ನಲಿವು ಇತ್ಯಾದಿಗಳ ತುಡಿತವಿದೆ. ಒಂದೇ ವಾಕ್ಯದಲ್ಲಿ ಹೇಳಬಹುದಾದ್ರೆ ಆತ ಎಲೆ ಮರೆಯ ಕಾಯಿ
ಪತ್ರಿಕೆ ಎನ್ನುವುದು ಯಾವಾಗ ಲಾಭದತ್ತ ಕಣ್ಣು ನೆಟ್ಟಿತೋ, ಪೈಪೋಟಿಗೆ ಅಂಜಿ ಸದಾ ರೇಸಿನಲ್ಲಿ ಮುಂದೆ ಇರುವ ಮನಸ್ಸು ಮಾಡಿತೋ, ಅಂತರರಾಷ್ಟ್ರೀಯ ಜಾಹೀರಾತು ಕಂಪನಿಗಳ ಸರಕುಗಳ ಪ್ರಚಾರಕನಾಗಿ ಬದಲಾಯಿತೊ, ಆಗಲೇ ಮಾಧ್ಯಮ ತನಗಿದ್ದ ಸೇವಾ ಮನೋಭಾವಕ್ಕೂ ಕ್ರಮೇಣ ವಿದಾಯ ಹೇಳಲು ಆರಂಭಿಸಿತು.
sir.. nivu helirovudralli anumaanave illa.. nannadu 5 years education journalism.. aadre kelas adiyaaaalu…. hummayya..
thank you sir..