ಶ್ರೀಕಲಾ ಡಿ ಎಸ್
ಅಪ್ಪನೆಂಬ ಉಪಾಸಕ…
“ನಾವು ಔನ್ನತ್ಯಕ್ಕೇರಲು ಸದ್ಯ ನಮ್ಮ ಕೈಯಲ್ಲಿರುವ ಕರ್ತವ್ಯವನ್ನು ನಮ್ಮ ಶಕ್ತಿಯನ್ನೆಲ್ಲಾ ಉಪಯೋಗಿಸಿ ಮಾಡುವುದೊಂದೇ ಮಾರ್ಗ. ಇದು ನಮ್ಮ ಜೀವನದಲ್ಲಿಯೂ, ಸಮಾಜದಲ್ಲಿಯೂ ಉಚ್ಚತರ ಪದವಿಗಳ ಸಂಬಂಧವಾದ ಕರ್ತವ್ಯಗಳನ್ನು ನೆರವೇರಿಸಲು ನಮಗೆ ಶಕ್ತಿಯನ್ನು ಕೊಡುತ್ತದೆ. ಕರ್ತವ್ಯ ಯಾವ ತೆರನಾದುದೇ ಆಗಲಿ ನಾವು ಅದನ್ನು ಅಸಡ್ಡೆ ಮಾಡಬಾರದು. ಉಪಾಸನೆಯಂತೆ ಮಾಡಬೇಕು.”
ವಿವೇಕಾನಂದರ ‘ಕರ್ಮಯೋಗ’ ಪುಸ್ತಕದ ಸಾಲಿದು. ಉಪಾಸನೆ ಎಂದರೆ ಅರ್ಚನೆ, ಆರಾಧನೆ. ಉಪಾಸನೆಯಲ್ಲಿ ಅಸಹನೆ, ಅಸಡ್ಡೆ, ಸಿಟ್ಟಿಲ್ಲ. ಇರುವುದು ತಾಳ್ಮೆ, ಕ್ರಿಯಾಶೀಲತೆ ಮತ್ತು ಶ್ರದ್ಧಾಭಕ್ತಿಗಳಷ್ಟೆ. ರೈತನಿಗೆ ನೆಲದ ಉಪಾಸನೆ, ಶಿಷ್ಯನಿಗೆ ಗುರುವಿನ ಉಪಾಸನೆ, ಅಮ್ಮನಿಗೆ ಮಗುವಿನ ಉಪಾಸನೆ, ಹಣ್ಣಿಗೆ ಬೇರಿನ ಉಪಾಸನೆ, ಇರುವೆಗೆ ಸಿಹಿಯ ಉಪಾಸನೆ, ಬ್ರಹ್ಮಾಂಡಕ್ಕೆ ಅಣುವಿನ ಉಪಾಸನೆ! ಆರಾಧನೆಯ ರೂಪ ಆಯಾ ವ್ಯಕ್ತಿ-ವಸ್ತುವಿನ ಕರ್ತವ್ಯಕ್ಕೆ ತಕ್ಕಂತೆ ವಿಭಿನ್ನ, ವಿಶೇಷ.
ಇವೆಲ್ಲವನ್ನೂ ಗಮನಿಸುತ್ತಾ ಅರಿವಿಗೆ ಬಂದದ್ದೇನೆಂದರೆ, ಅಪ್ಪ ತನ್ನ ಪಾಲಿಗೆ ಬಂದ ಅಷ್ಟೂ ಕರ್ತವ್ಯಗಳನ್ನು ಉಪಾಸನೆಯಂತೆ ಮಾಡುತ್ತಲೇ ಬಂದಿದ್ದಾನೆ ಎನ್ನುವ ಸತ್ಯ. ಇಲ್ಲವೆಂದರೆ ಬಚ್ಚಲು ತಿಕ್ಕುವುದು ಮತ್ತು ಸಾವಿರಾರು ಯಕ್ಷ ವಿದ್ವಾಂಸರ ಸಭೆಯಲ್ಲಿ ಉಪನ್ಯಾಸ ಮಾಡುವುದು… ಆಗುತ್ತಿರಲಿಲ್ಲ! ತೋಟದಲ್ಲಿ ಬಿದ್ದ ತೆಂಗಿನ ಕಾಯಿಗಳನ್ನು ದಿನವೂ ಆಯುವುದು-ಕಾದಂಬರಿ ಬರೆಯುವುದು. ಸಾಧ್ಯವೇ ಇರಲಿಲ್ಲ! ನಿತ್ಯದ ಸಣ್ಣ ಕರ್ಮಗಳ ಫಲದ ಒಟ್ಟು ಮೊತ್ತವೇ ಸಾಧನೆ. ಸಾಧಕನಿಗೆ ಗುರಿಯ ಹಂಬಲದಷ್ಟೇ ಮುಖ್ಯ ವರ್ತಮಾನದ ದುಡಿಮೆ. ಅಪ್ಪ ಲೋಕದ ದೃಷ್ಟಿಯಲ್ಲಿ ಸಣ್ಣದು ಮತ್ತು ದೊಡ್ಡದು ಎಂದು ಪರಿಗಣಿಸಲ್ಪಡುವ ಎಲ್ಲಾ ಕಾರ್ಯಗಳನ್ನೂ ಏಕ ಶ್ರದ್ಧೆಯಿಂದ ನಿರಂತರವಾಗಿ ಮಾಡುತ್ತಲೇ ಇದ್ದಾನೆ.
ಬದುಕಿನ ಅದೆಷ್ಟೋ ಅಡೆ-ತಡೆಗಳನ್ನು ಸುಲಲಿತ ಎಂಬಂತೆ ದಾಟಿ ಬಂದಿದ್ದಾನೆ ಅಪ್ಪ. ಎಂಟು ಮಕ್ಕಳಿರುವ ಮನೆಯಲ್ಲಿ ‘ಇದು ಓದು, ಅದನ್ನು ಬರೆ’ ಎಂದು ಹಿಡಿದು ಕೂರಿಸಿ ಕಲಿಸುವವರಿರಲಿಲ್ಲ. ೧೯೫೦ರ ಕಾಲದಲ್ಲಿ ಬಹುತೇಕ ಊರ ಮನೆಯ ಮಕ್ಕಳು ಬೆಳೆದದ್ದೇ ತೋಟ, ಗುಡ್ಡೆ, ನದಿಯ ಪರಿಸರ ಶಾಲೆಯಲ್ಲಿ. ಈಗಿನ ‘ಅಸಾಂಪ್ರದಾಯಿಕ’ ಶಾಲೆಗಳು ಆಗದೆಷ್ಟು ಸ್ವಾಭಾವಿಕವಾಗಿತ್ತು. ‘ಆಧುನಿಕ’ ಎಂದು ಕರೆಸಿಕೊಳ್ಳುವ ಕಾಲದಲ್ಲಿರುವ ನಾವು ಕಷ್ಟಪಟ್ಟು ಹಳೆಯದಕ್ಕೆ ಮರಳುವ ಅದೆಷ್ಟೋ ಸಂಗತಿಗಳ ಪಟ್ಟಿಗೆ ಇದೂ ಸೇರ್ಪಡೆ ಅಷ್ಟೆ. ಆಗೆಲ್ಲಾ ‘ಐಗಳ ಶಾಲೆ’ ಎಂದಿರುತ್ತಿತ್ತು. ಇಲ್ಲಿ ಒಂದು ಪಾಸು ಎರಡು ಎಂಬ ತರಗತಿಗಳ ಬಡ್ತಿಯ ಲೆಕ್ಕವಿಲ್ಲ.
ಒಂದಷ್ಟು ಕನ್ನಡ, ಪದ್ಯ, ಸಾಮಾನ್ಯ ಜ್ಞಾನ, ಲೆಕ್ಕ ಇವುಗಳನ್ನು ಮೇಷ್ಟ್ರು ಹೇಳಿಕೊಡುತ್ತಿದ್ದರು. ಶಿವಮೊಗ್ಗದ ಕುಗ್ರಾಮವಾದ ದರೇಮನೆಯಲ್ಲಿ ಇಂತಹ ಐಗಳ ಶಾಲೆಯ ಗುರುಗಳಾದ ಕೃಷ್ಣ ಮಾಷ್ಟ್ರ ಗರಡಿಯಲ್ಲಿ ಮಗ್ಗಿ, ಅಕ್ಷರಮಾಲೆ ಕಲಿಯುತ್ತಾ ಎಂಟನೇ ವಯಸ್ಸಲ್ಲೇ ಕುಮಾರವ್ಯಾಸ ಭಾರತ’ ಓದಲು ಶುರು ಮಾಡಿಬಿಟ್ಟಿದ್ದ ಅಪ್ಪ! ಆದರೆ ಶಾಲೆಗಳಿಲ್ಲದ ಕಾಲದ ಅನಿವಾರ್ಯತೆಯಿಂದ ನಾಲ್ಕನೇ ತರಗತಿ ಮುಗಿಸುವಾಗ ಹದಿನಾಲ್ಕು ವರುಷ! ಮರಗದ್ದೆ ಶಾಲೆಯ ಮೊತ್ತ ಮೊದಲ ಟಿಸಿ ಇರುವುದು ಅಪ್ಪನ ಹೆಸರಿಗೆ! ಟಿಸಿ ನಂಬರ್ ಒನ್ ಪಡೆದು ಹೋಗಿದ್ದು ಹೆಬ್ಬಿಗೆ ಶಾಲೆಗೆ. ಅದಾಗಿ ಏಳನೇ ಕ್ಲಾಸು ಮುಗಿಸಿ ಉಡುಪಿಗೆ ಹೈಸ್ಕೂಲು ಶಿಕ್ಷಣಕ್ಕೆ ಬಂದು, ಓದುತ್ತಾ-ಬೆಳೆಯುತ್ತಾ ಇದೇ ಭಾಗದಲ್ಲಿ ನೆಲೆನಿಂತ. ಒಂದಷ್ಟು ಘಟನೆಗಳು ಒಟ್ಟಾಗುತ್ತಾ ನೆನಪುಗಳಾಗಿ ಬದುಕಿನುದ್ದಕ್ಕೂ ಬರುತ್ತವೆ. ಇವುಗಳಲ್ಲಿ ಕೆಲವು ಘಟನೆಗಳು ಅಚ್ಚಳಿಯದೆ ಉಳಿದಿದೆ ಎಂದರೆ ಎರಡು ಕಾರಣಗಳಿರಬಹುದು.

ಒಂದು ಘಟನೆಯ ತೀವ್ರತೆಯಾದರೆ ಮತ್ತೊಂದು ಅವುಗಳ ಪುನರಾವರ್ತನೆ. ಅಪ್ಪ ಎಂದ ಕೂಡಲೇ ಕಣ್ಣೆದುರು ಬಂದು ನಿಲ್ಲುವ ಬಹಳಷ್ಟು ಘಟನೆಗಳಿವೆ. ಆ ಒಂದೊಂದು ಘಟನೆಗಳು ಸೇರಿ ಅಪ್ಪ ನನ್ನ ಪಾಲಿಗೆ ಪಿತಾ ದೇವೋ ಮಹೇಶ್ವರನಾಗಿದ್ದಾನೆ. ಈ ಘಟನೆಗಳು ಅಪ್ಪ ನಿಭಾಯಿಸಿದ ಚಿಕ್ಕದು-ದೊಡ್ಡದು ಎಂಬ ಭೇದವಿಲ್ಲದ ಕರ್ತವ್ಯಗಳ ಉಪಾಸನೆಯ ನಿದರ್ಶನಗಳೂ ಹೌದು. ಮುಂದೆ ಅಂತಹ ಘಟನೆಗಳನ್ನು ಹೇಳುತ್ತಿರುವೆ. ನನಗೆ ಅಪ್ಪನ ಕುರಿತು ನೆನಪಿರುವ ಅತ್ಯಂತ ಹಳೆಯ ಮತ್ತು ಮೊದಲ ಘಟನೆ ಎಂದರೆ ನನ್ನ ಐದನೇ ವರ್ಷದ್ದು. ಆಗ ನಾನು ಬಾಲವಾಡಿ. ನಮ್ಮ ಮನೆಯಲ್ಲೊಂದು ಬೆಕ್ಕಿನ ಮರಿ ಇತ್ತು. ಇನ್ನಿಲ್ಲದಂತೆ ಅದನ್ನು ಮುದ್ದಾಡುತ್ತಿದ್ದೆ.
ಒಂದು ರಾತ್ರಿ ಅದು ನೀರು ತುಂಬಿದ ಬಕೆಟ್ ಒಳಗೆ ಬಿದ್ದು ಸತ್ತುಹೋಯಿತು. ಇನ್ನದು ಬರುವುದಿಲ್ಲ ಎಂಬುದು ಗೊತ್ತಾಗಿ ಅತ್ತೂ ಅತ್ತೂ ಇಟ್ಟಿದ್ದೆ. ಅಪ್ಪ ನನ್ನನ್ನು ಥರಥರವಾಗಿ ಸಮಾಧಾನ ಮಾಡಿದ್ದ ಆವತ್ತು. ಬೆಕ್ಕು ಸತ್ತದಕ್ಕೆ ಮಧ್ಯರಾತ್ರಿಯಲ್ಲಿ ಅಳುತ್ತಿರುವ ಮಗಳನ್ನು ಬೈದದ್ದಾಗಲೀ, ಇದೆಂಥ ಕಿರಿಕಿರಿ ಎಂದದ್ದಾಗಲೀ ಇಲ್ಲ. ಮಗುವಿನ ಆ ಮುಗ್ಧ ಮನಸ್ಸನ್ನು ಅರಿಯುವುದು ಯಾವುದೇ ಪೇರೆಂಟಿಂಗ್ ಟಿಪ್ಸ್ ಅವಶ್ಯಕತೆ ಇಲ್ಲದೆ ಅಪ್ಪನಿಗೆ ಗೊತ್ತಾಗಿತ್ತಲ್ಲ. ಭಾವನೆಗಳನ್ನು ಗೌರವಿಸುವ ಸಹಜ ಕಲೆಯದು.
ಅಪ್ಪನಿಗೋ ಏನು ಓದಬೇಕು ಎಂಬ ಸಲಹೆಗಳೇ ಇಲ್ಲದೆ ಎಂಟರ ವಯಸ್ಸಲ್ಲಿ ಕುಮಾರವ್ಯಾಸ ಭಾರತ ಸಿಕ್ಕಿಬಿಟ್ಟಿತ್ತು. ನನಗೆ-ಅಣ್ಣನಿಗೆ ಅಪ್ಪ ಈ ವಯಸ್ಸಲ್ಲಿ ಭರಪೂರ ಮಕ್ಕಳ ಪುಸ್ತಕಗಳನ್ನು ತಂದುಕೊಡುತ್ತಿದ್ದ. ಕೂತು ಕಥೆ ಹೇಳುತ್ತಿದ್ದ. ಅಣ್ಣನಿಗೆ ಆರೇಳು ವರ್ಷವಿರುವಾಗ ಅಪ್ಪ-ಅಣ್ಣ ಇಬ್ಬರೂ ಶಾಲೆ ತಲುಪಲು ಎರಡು ಕಿಲೋಮೀಟರ್ ನಡೆಯಬೇಕಿತ್ತು. ಆಗ ದಾರಿಯ ತುಂಬೆಲ್ಲಾ ಮಹಾಭಾರತ-ರಾಮಾಯಣದ ಕಥೆಗಳು. ಆಗೆಲ್ಲಾ ನಾಲ್ಕೈದು ಅಟ್ಟಳಿಗೆ ಇರುವ ಪುಟ್ಟ ಮರದ ಶೆಲ್ಫ್ನಲ್ಲಿ ಪುಸ್ತಕ ಜೋಡಿಸಿಡುತ್ತಿದ್ದೆವು. ಆಮೇಲೆ ಒಂದು ದೊಡ್ಡ ಕಪಾಟು ಬಂತು. ಬರಬರುತ್ತಾ ಆ ಸಂಖ್ಯೆ ಏರಿ ಒಂದಿಡೀ ಕೋಣೆಯನ್ನೇ ಪುಸ್ತಕಕ್ಕೆ ಮೀಸಲಿಡುವಂತೆ ಗ್ರಂಥಾಲಯ ಬೆಳೆಯಿತು. ಜ್ಞಾನಕ್ಕಾಗಿ ನಡೆಸಿದ ನಿರಂತರ ಉಪಾಸನೆಯ ಫಲವದು.
ಹತ್ತನೇ ತರಗತಿಯ ತನಕವೂ ಶಾಲೆಯ ಓದಿನ ಬಗ್ಗೆ ಅಣ್ಣನಿಗೆ ಅಂತಹ ಆಸಕ್ತಿಯೇನೂ ಇರಲಿಲ್ಲ. ಅದರಲ್ಲೂ ಗಣಿತವೆಂದರೆ ಮಾರು ದೂರ. ಅದೇ ಕಥೆ ಪುಸ್ತಕ ಹಿಡಿದು ಕೂತರೆ ನೂರೈವತ್ತು ಬಾರಿ ಕರೆದರೂ ಕೇಳುತ್ತಿರಲಿಲ್ಲ. ಅಪ್ಪ ಉಪನ್ಯಾಸಕರಾಗಿದ್ದ ‘ಪಾಂಪೈ ಪಿಯು ಕಾಲೇಜ್’ನಲ್ಲಿಯೇ ಪ್ರಾಥಮಿಕ-ಪ್ರೌಢ ತರಗತಿಗಳೆಲ್ಲವೂ ಇತ್ತು. ಅಣ್ಣ ಓದಿದ್ದು ಪಾಂಪೈನಲ್ಲೇ. ನಿತ್ಯವೂ ಅವನ ಎಲ್ಲಾ ಮೇಷ್ಟ್ರುಗಳು ಅಪ್ಪನಿಗೆ ಸಿಗುತ್ತಿದ್ದರು. ಹೆಚ್ಚಿನವರು ಅಣ್ಣನ ಓದಿನ ಕುರಿತಂತೆ ಅಪ್ಪನ ಬಳಿ ದೂರುವುದಿತ್ತು. ಆದರೆ ಆ ಮಾತುಗಳನ್ನೆಲ್ಲಾ ಕೇಳಿಸಿಕೊಂಡು, ಅದನ್ನು ತನ್ನೊಳಗೆ ಒತ್ತಡವಾಗಿಸಿಕೊಂಡು ಅಣ್ಣನಿಗೆ ಬೈದದ್ದು-ಹೊಡೆದದ್ದು ಇಲ್ಲ. “ಆರ್ಟ್ಸ್ ತಗೊಂಡ್ರೆ ಸರಿ ಹೋಗುತ್ತೆ” ಎನ್ನುತ್ತಿದ್ದ ಅಪ್ಪ. ಅಣ್ಣ ಪಿಯುಸಿಯಲ್ಲಿ ಹಾಗೇ ಮಾಡಿದ. ಅತ್ಯುತ್ತಮ ಅಂಕಗಳಿಂದ ಮುಂದೆ ನಡೆದ. ಆಮೇಲೆ ಅಣ್ಣನ ಕಲಿಕೆಯ ಕುರಿತಾಗಿ ಉಪನ್ಯಾಸಕರಿಂದ ಮೆಚ್ಚುಗೆಯ ಮಾತುಗಳನ್ನಷ್ಟೇ ಕೇಳುವುದು ಅಭ್ಯಾಸವಾಯಿತು! ನಾನು ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ದುಕೊಂಡಿದ್ದೆ. ಆದರೆ ಅದರಲ್ಲೇ ಮುಂದುವರೆಯುವ ಯೋಚನೆ ಇರಲಿಲ್ಲ. ಸಿಇಟಿ ಬರೆಯುವುದಿಲ್ಲ ಎಂದಿದ್ದೆ. ಅಪ್ಪಸರಿ’ ಎಂದ.
ಪತ್ರಿಕೋದ್ಯಮ ಅವಳಿಗೆ ಹೊಂದುತ್ತದೆ ಎಂದ ಅಣ್ಣ. ಅಪ್ಪ ಒಪ್ಪಿದ. ಸಿದ್ಧ ಮಾದರಿಗಳಿಗೆ ಕಟ್ಟುಬೀಳುವ, ಮಕ್ಕಳನ್ನು ಹೀಗೇ’ ಓದಿಸಬೇಕು ಎಂದು ತಮಗೆ ತಾವೇ ತಾಕೀತು ಮಾಡಿಕೊಂಡು ಮಕ್ಕಳನ್ನೂ ಅದೇ ಚಿಂತನೆಯಲ್ಲಿ ನಡೆಸುವ ಯಾವುದೇ ಒತ್ತಡ ಅಪ್ಪನ ಒಳಗೆ ಇರಲಿಲ್ಲ. ಬದುಕಿನ ವಿಶ್ವವಿದ್ಯಾನಿಲಯಕ್ಕೆ ನಮ್ಮನ್ನು ತೆರೆದಿಡುವ ಪ್ರಯತ್ನವಾಗಿತ್ತೇನೋ ಅದು... ಅಮ್ಮನ ಆಸಕ್ತಿಯಿಂದಾಗಿ ನನ್ನೊಳಗೆ ಹುಟ್ಟಿ-ಬೆಳೆದ ಆಸಕ್ತಿ ನೃತ್ಯ. ಐದನೇ ವರ್ಷಕ್ಕೆ ಭರತನಾಟ್ಯಕ್ಕೆ ಸೇರಿಸಿದ್ದು ಅವಳೇ. ಮೂವತ್ತು ವರ್ಷಗಳ ಹಿಂದೆ ಮೆಲ್ಲಗೆ ಬೆಳೆಯುತ್ತಿದ್ದ ಚಿಕ್ಕ ಊರು ಕಿನ್ನಿಗೋಳಿ. ಒಬ್ಬರಾದ ಮೇಲೊಬ್ಬರು ನೃತ್ಯ ಗುರುಗಳು ಬರುವುದು, ಏನೋ ಕಾರಣ ಕೊಟ್ಟು ಬಿಟ್ಟು ಹೋಗುವುದು ಆಗುತ್ತಿತ್ತು. ನಾನು ಐದನೇ ತರಗತಿಗೆ ಬರುವ ವೇಳೆಗೆ ಮೂರು ನೃತ್ಯ ಗುರುಗಳಾಗಿದ್ದರು. ಹೀಗಾಗಿ ಅಲ್ಲಿಂದ ಹನ್ನೆರಡು ಕಿಲೋಮೀಟರ್ ದೂರವಿದ್ದ ಮುಲ್ಕಿ ಎಂಬ ಊರಿನ ಭರತನಾಟ್ಯ ತರಗತಿಗೆ ಸೇರಿಸಿದರು. ಭಾನುವಾರ ಬಂತೆಂದರೆ ನಾನು-ಅಪ್ಪ ಮುಲ್ಕಿಯ ಬಸ್ ಏರುತ್ತಿದ್ದೆವು. ಆಮೇಲೆ ನಮ್ಮನೆಗೆ ಕೈನೆಟಿಕ್ ಬಂತು.
ಹಾದಿಯ ತುಂಬಾ ಮಾತು ಮಾತು ಮಾತಿನ ನಡುವೆ ನಮ್ಮಿಬ್ಬರ ಸವಾರಿ ಸಾಗುತ್ತಿತ್ತು. ಈಗೆಲ್ಲಾ ನನ್ನ ಮಗನನ್ನು ಅರ್ಧಕಿಲೋಮೀಟರ್ ಕೂಡಾ ದೂರವಿಲ್ಲದ ಸಂಗೀತ ತರಗತಿಗೆ ಕರೆದೊಯ್ಯುವಾಗ,ಎಷ್ಟೆಲ್ಲಾ ಕೆಲಸ ಮಾಡುತ್ತೇನಲ್ಲ’ ಎನಿಸುವಾಗ ಅಪ್ಪನ ನೆನೆಯುತ್ತೇನೆ. ಆ ದಿನಗಳಲ್ಲಿ ತಾಳಮದ್ದಲೆ, ಯಕ್ಷಗಾನ ಸಂಘಟನೆ ಎಂದು ಅಪ್ಪನೂ ಸದಾ ಒಂದಲ್ಲಾ ಒಂದು ಚಟುವಟಿಕೆಗಳಲ್ಲಿ ನಿರತನಾಗಿರುತ್ತಿದ್ದ. ಭಾರೀ ಪುರುಸೊತ್ತಿದ್ದು ಇದನ್ನೆಲ್ಲಾ ಮಾಡುತ್ತಿದ್ದ ಎಂದಲ್ಲ. ಎಲ್ಲರೂ ಫಸ್ಟ್ ಪಿಯುಸಿ ಮುಗಿದ ಬೇಸಿಗೆ ರಜೆಯಲ್ಲಿ ಕೋಚಿಂಗ್ ತರಗತಿಗಳಲ್ಲಿ ಕುಳಿತಿದ್ದರೆ ನಾನು ಭರತನಾಟ್ಯ ಜ್ಯೂನಿಯರ್ ಪರೀಕ್ಷೆ ಬರೆಯುತ್ತಿದೆ! ಮಗಳು ಭರತನಾಟ್ಯ ಕಲಿತು ಮಾಡುವುದೇನಿದೆ ಎಂದು ಒಮ್ಮೆಯಾದರೂ ಯಾಕೆ ಯೋಚಿಸಲಿಲ್ಲ ಅಪ್ಪ?
ನನ್ನ ಶಾಲಾ ಶಿಕ್ಷಣದ ಅವಧಿಯಲ್ಲಿ ಪಠ್ಯೇತರ ಚಟುವಟಿಕೆಯ ಪಾಲು ಬಹುದೊಡ್ಡದಿದೆ. ನೃತ್ಯ, ಹಾಡು, ಭಾಷಣ, ಪ್ರಬಂಧ ಇವಿಷ್ಟರಲ್ಲಿ ಯಾವಾಗಲೂ ಭಾಗವಹಿಸಲು ಉತ್ತೇಜಿಸಿದ್ದು ಅಪ್ಪ-ಅಮ್ಮ. ಮೊತ್ತಮೊದಲ ಬಾರಿ ಭಾಷಣಕ್ಕಾಗಿ ವೇದಿಕೆ ಏರಿದ್ದು ಎರಡನೇ ತರಗತಿಯಲ್ಲಿದ್ದಾಗ. `ಭಾವೈಕ್ಯತೆ’ ಎಂಬ ವಿಚಾರದ ಕುರಿತ ಭಾಷಣವಾಗಿತ್ತದು. ಹಾಗೆಂದರೇನು ಎನ್ನುವುದೂ ನನಗೆ ಗೊತ್ತಿರಲಿಲ್ಲ. ಅಪ್ಪನೇ ಭಾಷಣ ಬರೆದು ಬಾಯಿಪಾಠ ಮಾಡಿಸಿ, ಪೂರ್ವಾಭ್ಯಾಸವನ್ನೂ ಮಾಡಿಸಿದ್ದ. ವೇದಿಕೆ ಹತ್ತುವ ಕ್ಷಣ ಬಂದಾಗ ನನಗೋ ಎಲ್ಲಿಲ್ಲದ ಭಯ. ಆಗ ಅಪ್ಪನೇ ತನ್ನ ಕಣ್ಣೊಳಗಿನ ಸಮಸ್ತ ಧೈರ್ಯವನ್ನೂ ನನ್ನೊಳಗೆ ಹರಿಸುತ್ತಾ ಕೈ ಹಿಡಿದು, “ನೀನು ಚೆನ್ನಾಗಿ ಮಾಡ್ತೆ, ಹೋಗು” ಎಂದು ವೇದಿಕೆ ಏರಿಸಿದ್ದ. ಆವತ್ತು ಭಾಷಣದಲ್ಲಿ ಎರಡನೇ ಬಹುಮಾನ. ಅಶ್ವತ್ಥ ಎಲೆಯಾಕಾರದ ಪುಟ್ಟ ಬಟ್ಟಲು ಪ್ರಶಸ್ತಿಯಾಗಿ ಬಂದಿತ್ತು. ಈಗಲೂ ದೇವರ ಮನೆಯ ದೀಪವಿಡುವುದು ನಾನು ಅದೇ ಬಟ್ಟಲಲ್ಲಿ! ಅಲ್ಲಿ ಬೆಳಗುವುದು ಅಪ್ಪ ಕೊಟ್ಟ ಆತ್ಮವಿಶ್ವಾಸದ ಬೆಳಕು!
ಪದವಿ ಮುಗಿಯುವ ತನಕವೂ ಪಠ್ಯೇತರ ಸ್ಪರ್ಧೆಗಳನ್ನು ತಪ್ಪಿಸಿದ್ದು ನೆನಪೇ ಇಲ್ಲ. ಭಾಷಣ, ಪ್ರಬಂಧವನ್ನು ಅಪ್ಪನೇ ಬರೆದುಕೊಡುತ್ತಾ ಇದ್ದವನು. ಉರು ಹೊಡೆಯುವುದಷ್ಟೇ ನನ್ನ ಕೆಲಸ. ದೇಶಭಕ್ತಿಗೀತೆ, ಭಕ್ತಿಗೀತೆ, ಭಾವಗೀತೆ, ಜನಪದ ಗೀತೆ ಹೀಗೆ ವಿಧವಿಧದ ಹಾಡಿನ ಸ್ಪರ್ಧೆಗಳಾಗುತ್ತಿದ್ದವು. ಸದಾ ಕ್ಯಾಸೆಟ್ ಹಾಕಿಕೊಂಡು, ಹಾಡನ್ನು ಬರೆದುಕೊಂಡು ಅದನ್ನೇ ಅಭ್ಯಾಸ ಮಾಡುವುದು. ಅಪ್ಪ ಬೇಕಾದಷ್ಟು ಕ್ಯಾಸೆಟ್ಗಳನ್ನು ಮನೆಗೆ ತರುತ್ತಿದ್ದ. ಹಾಡುಗಳ ಕುರಿತು ಮೊದಲಿನಿಂದಲೂ ಅಪ್ಪ-ಅಮ್ಮನಿಗೆ ಒಂದೇ ಥರದ ಒಲವು.
ಪಿಯುಸಿಗೆ ಬಂದ ಮೇಲೆ ಅಪ್ಪ ನನ್ನನ್ನು ಹೊಸದೊಂದು ಸ್ಪರ್ಧೆಗೆ ಒಡ್ಡಿದ. ಅಥವಾ ಆ ಮೂಲಕ ನನ್ನೊಳಗಿನ ಹೊಸ ಸಾಧ್ಯತೆಯೇ ತೆರೆದುಕೊಂಡಿತು ಎನ್ನಬಹುದು. ಅದೇ ಏಕಪಾತ್ರಾಭಿನಯ. ಅಲ್ಲಿಯ ತನಕ ನಟನೆಯ ವಿಚಾರಕ್ಕೆ ಹೋಗಿದ್ದಿರಲಿಲ್ಲ. ಈ ಏಕಪಾತ್ರಾಭಿನಯಕ್ಕಾಗಿ ಅಪ್ಪನೇ ಪುರಾಣದ ಸನ್ನಿವೇಶವೊಂದರ ಸಂಭಾಷಣೆಯನ್ನು ತಯಾರು ಮಾಡಿ, ಅಭಿನಯವನ್ನೂ ಕಲಿಸಿ ಕೊಡುತ್ತಿದ್ದ. ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಉಸ್ತುವಾರಿ ಅಪ್ಪನದಾಗಿತ್ತು. ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡಿ ತಾಲೂಕು, ಜಿಲ್ಲಾ, ರಾಜ್ಯಮಟ್ಟದವರೆಗೂ ತಾನೇ ಕರೆದೊಯ್ಯುತ್ತಿದ್ದ. ನನ್ನಂತೆಯೇ ಅನೇಕ ವಿದ್ಯಾರ್ಥಿಗಳನ್ನು ಅಪ್ಪ ಏಕಪಾತ್ರಾಭಿನಯ, ಭಾಷಣ, ಪ್ರಬಂಧಗಳಿಗೆ ತರಬೇತುಗೊಳಿಸಿದ್ದ. ತಾರತಮ್ಯವಿಲ್ಲದೆ ವಿದ್ಯೆಯನ್ನು ನದಿಯಾಗಿಸಿದವ ಅಪ್ಪ.
ಪಿಯುಸಿಯಲ್ಲಿ ನನಗೆ-ಅಣ್ಣನಿಗೆ ಅಪ್ಪ ಕನ್ನಡ ಮೇಷ್ಟ್ರು ಕೂಡಾ ಹೌದು. ಅಪ್ಪನ ತರಗತಿಯ ವಿಶೇಷ ಎಂದರೆ ಕಥೆಗಳು. ಎಷ್ಟೇ ಪೇಲವ ವಿಚಾರಗಳಿರುವ ಪಠ್ಯವೇ ಆಗಿದ್ದರೂ ಅದಕ್ಕೆ ಪೂರಕವಾದ ಕಥೆಗಳನ್ನು ಹೇಳಿ ರಸವತ್ತಾಗಿಸುವ ಕಲೆ ಅಪ್ಪನಿಗೆ ಸಹಜವಾಗಿ ಒಲಿದಿತ್ತು. ಕಾವ್ಯ, ನಾಟಕ, ವೈಚಾರಿಕ ಚಿಂತನೆಗಳ ಪಠ್ಯ, ಪುರಾಣ… ಪಾಠ ಎಂಥದ್ದೇ ಆಗಿರಲಿ. ಅಪ್ಪನ ತರಗತಿ ಎಂದರೆ ಅಲ್ಲಿ ಕಥೆಗಳ ಸುರಿಮಳೆಯಾಗುತ್ತಿತ್ತು. ಕೇವಲ ಪಾಠವನ್ನಷ್ಟೇ ಮಾಡಿ ಮುಗಿಸುವುದಾದರೆ ಈ ಪಠ್ಯಪುಸ್ತಕ ಮುಗಿಸಲು ಅರ್ಧವರ್ಷ ಸಾಕು ಎನ್ನುತ್ತಿದ್ದ. ಈಗಲೂ ಅಪ್ಪನ ಅನೇಕ ವಿದ್ಯಾರ್ಥಿಗಳು ಶ್ರೀಧರ್ ಸರ್ ಎಂದರೆ ನೆನಪಿಸಿಕೊಳ್ಳುವುದು ಈ ಕಥೆಗಳನ್ನೇ. ಪಾಠವೆಂದರೆ ಗುರುವಿನ ಮಾತುಗಳನ್ನು ತನ್ಮಯವಾಗಿ ಕೇಳುತ್ತಾ ಅದರೊಳಗೆ ಇಳಿಯುವ ಅನುಭವವಷ್ಟೇ?
ಅಣ್ಣ ಎಂಎಸ್ಡಬ್ಲ್ಯು ಮತ್ತು ನಾನು ಪತ್ರಿಕೋದ್ಯಮಕ್ಕಾಗಿ ಸೇರಿದ್ದು ಆಳ್ವಾಸ್ ಕಾಲೇಜಿಗೆ. ಇಷ್ಟು ವರ್ಷ ಅಪ್ಪ-ಅಮ್ಮ ಪಠ್ಯೇತರ ಚಟುವಟಿಕೆಯ ಹಾದಿಯಲ್ಲಿ ಮಾಡಿಸಿದ್ದ ತಯಾರಿಗೆ ಇಲ್ಲಿ ಮತ್ತಷ್ಟು ರೂಪ ದೊರಕುತ್ತಾ ಹೋಯಿತು. ಆಳ್ವಾಸಿನ ಕಲಾತಂಡವನ್ನು ಸೇರಿಕೊಂಡಿದ್ದ ನಾನು ತರಗತಿಯಲ್ಲಿ ಕೂತದಕ್ಕಿಂತ ವೇದಿಕೆಯ ಮೇಲೆ ಇರುತ್ತಿದ್ದ ಅವಧಿಯೇ ಹೆಚ್ಚಾಗಿತ್ತು. ಮೂರು ವರ್ಷಗಳ ಕಾಲ ಎಷ್ಟೋ ಬಾರಿ ನೃತ್ಯ ಪ್ರದರ್ಶನಗಳು, ಸ್ಪರ್ಧೆಗಳು ಇದ್ದಾಗ ನಾನು ಬರುವುದು ರಾತ್ರಿ ಎಂಟರ ಮೇಲಾಗಿದ್ದಿದೆ. ಅಷ್ಟು ಹೊತ್ತಿಗೆ ಕಿನ್ನಿಗೋಳಿಯಿಂದ ಮನೆಗೆ ಹೋಗಲು ಬಸ್ಗಳು ಇರುತ್ತಿರಲಿಲ್ಲ. ಅಪ್ಪನೇ ಕಿನ್ನಿಗೋಳಿಯಿಂದ ಗಾಡಿಯಲ್ಲಿ ಕರೆದೊಯ್ಯುತ್ತಿದ್ದ. ಒಂದೇ ಒಂದು ದಿನವೂ ಅಸಹನೆ ವ್ಯಕ್ತಪಡಿಸಿದ್ದಿಲ್ಲ. ಅಷ್ಟೆಲ್ಲಾ ಆತ್ಮವಿಶ್ವಾಸ ಮಗಳ ಬಗ್ಗೆ ಇತ್ತಲ್ಲ ಅನ್ನಿಸಿದಾಗ ನನ್ನ ಮಕ್ಕಳ ಮೇಲೆ ಇಷ್ಟೇ ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಬಗೆ ಹೇಗಪ್ಪಾ ಎಂದು ಯೋಚಿಸುತ್ತೇನೆ. ಕಿಂಚಿತ್ತೂ ಆತಂಕ ಪಡದೆ, ಸಂಶಯಿಸದೆ ನೀನು ಮಾಡುವ ಎಲ್ಲಾ ಕೆಲಸಗಳಿಗೆ ನನ್ನ ಬೆಂಬಲವಿದೆ ಎನ್ನಲು ಒಂದು ತಾಕತ್ತು ಬೇಕಲ್ಲವೇ?
ನಾವು ೧೯೯೭ರಲ್ಲಿ, ಸ್ವಂತ ಮನೆ ಕೊಂಡಿದ್ದು ತಾಳಿಪಾಡಿಯಲ್ಲಿ. ಅಪ್ಪನಿಗೆ ಆಗ ವಯಸ್ಸು ನಲವತ್ತೇಳು. ಅಣ್ಣ ಹೈಸ್ಕೂಲು, ನಾನು ಆರನೇ ಕ್ಲಾಸು. ‘ಭೋಜರಾಜ ಭವನ’ವೆಂಬ ಈಗಾಗಲೇ ಕಟ್ಟಿ ನಿಲ್ಲಿಸಿದ್ದ ಹಳೆಯ ಕಾಲದ ಉಪ್ಪರಿಗೆ ಮನೆಯದು. ಈ ಹೆಸರೇ ಒಂಥರಾ ಚೆಂದವಿದೆ ಎಂದು ಹೆಸರು ಬದಲಿಸುವ ಗೋಜಿಗೆ ಅಪ್ಪ ಹೋಗಲಿಲ್ಲ. ಮನೆಯ ಎದುರಿಗೆ ಇಳಿದರೆ ಗದ್ದೆ, ಹಿಂದೆ ಹತ್ತಿದರೆ ಗುಡ್ಡ. ಪೇರಳೆ, ಚಿಕ್ಕು, ಗೇರು, ಮಾವು, ಹಲಸು, ತೆಂಗು, ಹುಣಸೆ, ಪುನರ್ಪಳಿ ಎಲ್ಲವೂ ಸುತ್ತ ತುಂಬಿ ಹಸಿರಿನ ನಡುವೆ ನಳನಳಿಸುತ್ತಿದ್ದ ಜಾಗವದು. ನನ್ನ ಮತ್ತು ಅಣ್ಣನ ಪಾಲಿಗೆ ಒಲಿದ ನಮ್ಮ ಬದುಕಿನ ಶ್ರೇಷ್ಠ ಉಡುಗೊರೆ ಆ ಪ್ರಕೃತಿ ಎಂದು ಈಗ ತಿಳಿಯುತ್ತಿದೆ. ಹಳ್ಳಿ-ಮಣ್ಣು-ಹಸಿರಿಗೆ ಇಷ್ಟು ಹತ್ತಿರವಾಗಿ ನಾವು ಅದುವರೆಗೂ ಬೆಳೆದದ್ದಿಲ್ಲ. ಅಪ್ಪನೊಳಗೆ ಅವಿತು ಕುಳಿತಿದ್ದ ಕೃಷಿಕನೆಂಬ ಪಾತ್ರಕ್ಕೆ ಈಗ ಜೀವ ಬಂದಿತ್ತು.
ಮಲೆನಾಡಿನ ಮಣ್ಣಲ್ಲಿ ತೋಟದ ಕೆಲಸ ಮಾಡಿದ್ದರೂ ತಾನೇ ಖುದ್ದಾಗಿ ಅಪ್ಪ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡಿರಲಿಲ್ಲ. ಭತ್ತದ ಕೃಷಿ ಮಾಡುವುದೆಂದು ಹೊರಟ. ಸುಮಾರು ಏಳೆಂಟು ವರ್ಷ ಮೊದಲ ಬೆಳೆ ಭತ್ತ, ಪರ್ಯಾಯ ಬೆಳೆ ಉದ್ದು. ಗದ್ದೆಯನ್ನು ಹೂಳುವುದು, ನೇಜಿ ನೆಡುವುದು, ಕೊಯ್ಲು, ಕಣಕ್ಕೆ ತಂದು ಬೇರ್ಪಡಿಸುವುದು, ಆಮೇಲೆ ಬೆಳೆದ ಉದ್ದಿನ ಗಿಡಗಳನ್ನು ಕೀಳುವುದು… ಈ ಬೆಳೆ ಬೆಳೆಯುವ ಹಾದಿಯೇ ಅನುಭವಗಳ ಕಣಜ. ಆಳುಗಳ ಜೊತೆಗೆ ಮನೆಮಂದಿಯೆಲ್ಲಾ ಸೇರಿ ಕೆಲಸ ಮಾಡುತ್ತಿದ್ದೆವು. ಒಮ್ಮೆಯಂತೂ ಕೊಯ್ಲಿಗೆ ಆಳುಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ ಎಂದು ರೊಚ್ಚಿಗೆದ್ದ ಅಣ್ಣ ತನ್ನ ನಾಲ್ಕು ಸ್ನೇಹಿತರ ಜೊತೆಗೂಡಿ ರಾತ್ರಿ ಗದ್ದೆಗೆ ಲೈಟ್ ಹಾಕಿಸಿ ಬೆಳಗಾಗುವುದರೊಳಗೆ ಕೊಯ್ಲು ಮಾಡಿ ಮುಗಿಸಿದ್ದ!
ಅಪ್ಪ ಬಹಳ ಪ್ರೀತಿಯಿಂದ ಮಾಡಿದ ಮತ್ತೊಂದು ಹೊಸ ಕೆಲಸ ಎಂದರೆ ದನ ಸಾಕಿದ್ದು. ಸೆಗಣಿ ಬಾಚಿ, ತರಗೆಲೆಯನ್ನು ಹಾಸಿ, ಕೊಟ್ಟಿಗೆಯ ಅಷ್ಟೂ ಕೆಲಸವನ್ನು ಅಪ್ಪ-ಅಮ್ಮ ಇಬ್ಬರೂ ಶ್ರದ್ಧೆಯಿಂದ ಮಾಡುತ್ತಿದ್ದರು. ಅಣ್ಣ ಹಾಲು ಕರೆಯುವುದನ್ನೂ ಚೆನ್ನಾಗಿ ಅಭ್ಯಾಸ ಮಾಡಿಕೊಂಡಿದ್ದ. ಕೊಟ್ಟಿಗೆ ಕೆಲಸದಲ್ಲಿ ಕಳ್ಳ ಬಿದ್ದವಳು ನಾನೇ.

ಬೇಸಿಗೆ ಬಂತೆಂದರೆ ನಾವೆಲ್ಲ ಅಪ್ಪನ ಜೊತೆಗೆ ತರಗೆಲೆ ಗುಡಿಸುವುದಕ್ಕೆ ದರಕಿನ ಗೂಡು ಹಿಡಿದು ಗುಡ್ಡೆಗೆ ಹೋಗುತ್ತಿದ್ದೆವು. ಮಾಮೂಲಿ ಕಸದ ಪೊರಕೆಯಲ್ಲಿ ತರಗೆಲೆ ಗುಡಿಸಲು ಬರುವುದಿಲ್ಲ. ಅದಕ್ಕಾಗಿ ಅಪ್ಪ ಮರದ ಬರಲಿನಿಂದ ಪೊರಕೆ ತಯಾರು ಮಾಡಿ ಕೊಡುತ್ತಿದ್ದ. ಬಚ್ಚಲು ಒಲೆಗೆ, ಕೊಟ್ಟಿಗೆಗೆ ಬೇಸಿಗೆಯ ಕಾಲದಲ್ಲೇ ಒಣ ಕಟ್ಟಿಗೆ, ತರಗೆಲೆಗಳ ಸಂಗ್ರಹ ಮಾಡಿಟ್ಟುಕೊಂಡರೆ ಮಳೆಗಾಲದಲ್ಲಿ ಸಮಸ್ಯೆ ಇರಲಿಲ್ಲ. ೨೦೧೯ರಲ್ಲಿ ಹೊಸ ಮನೆಗೆ ಪ್ರವೇಶವಾಗುವ ತನಕವೂ ಅಪ್ಪ ನಿತ್ಯ ಬೆಳಿಗ್ಗೆ ಬಚ್ಚಲ ಒಲೆಗೆ ಬೆಂಕಿ ಒಟ್ಟುವ ಕೆಲಸ ತಪ್ಪಿಸಲಿಲ್ಲ.
ಪದವಿ ಮುಗಿದ ಕೂಡಲೇ ಪತ್ರಕರ್ತೆಯ ಉದ್ಯೋಗಕ್ಕೆ ಹೊರಟು ನಿಂತೆ. ಬೆಂಗಳೂರು ಬಸ್ ಹತ್ತಿಸಿ ನನ್ನ ಸೀಟಿನ ಬಳಿಯೇ ನಿಂತಿದ್ದ ಅಪ್ಪ, “ನೀರು ಇದ್ದು ಅಲ್ದಾ? ಊಟ ಮಾಡು. ಬೆಂಗಳೂರು ಬಂದ ಕೂಡ್ಲೇ ಅಣ್ಣಂಗೆ ಫೋನ್ ಮಾಡು. ಮೊಬೈಲ್ ಹುಶಾರು” ಎನ್ನುತ್ತಾ ಬಸ್ ಹೊರಡುವ ಕೊನೇ ಗಳಿಗೆಯವರೆಗೂ ಮಾತನಾಡುತ್ತಾ ಪಕ್ಕದಲ್ಲೇ ನಿಂತಿದ್ದ. ಆಡಿದ ಕಾಳಜಿಯ ಮಾತುಗಳು ಆ ಒಂದು ದಿನಕ್ಕಷ್ಟೇ ಸೀಮಿತವಾಗಿರಲಿಲ್ಲ! ಕನ್ನಡಕದ ಹಿಂದಿನ ಅವನ ಕಣ್ಣುಗಳು ಒದ್ದೆಯಾಗಿದ್ದನ್ನು ತೋರಿಸಿಕೊಡಲಿಲ್ಲ. ಬಸ್ ಹೊರಟಿತು. ಅಪ್ಪ ಕೆಳಗಿಳಿದ. ನನಗೆ ಕೈ ಬೀಸಲಷ್ಟೇ ಶಕ್ತಿ ಇತ್ತು. ಒಬ್ಬ ಹೆಣ್ಣು ಮಗಳು ಸಶಕ್ತಳಾಗಲು ಏನೆಲ್ಲವನ್ನು ಕೊಡಬಹುದೋ ಅವನ್ನೆಲ್ಲಾ ಕೊಟ್ಟಿದ್ದರು ಅಪ್ಪ-ಅಮ್ಮ.
ಎಲ್ಲಾದರೂ ಹೊಡೆಯದೆ ಇರುವ ಅಪ್ಪನಿದ್ದರೆ ಆ ಪಟ್ಟಿಗೆ ನನ್ನಪ್ಪನೂ ಸೇರ್ಪಡೆ. ಬಹುಶಃ ಅಮ್ಮನ ಆರೋಗ್ಯದ ಕಾಳಜಿಯನ್ನು ಅಪ್ಪನ ಮಟ್ಟಕ್ಕೆ ಬೇರಾರೂ ಮಾಡಲಾರರು. ನಿವೃತ್ತಿಯ ನಂತರವಂತೂ ಅಪ್ಪ ಮತ್ತಷ್ಟು ಚುರುಕಾಗಿದ್ದಾನೆ. ಕಾದಂಬರಿಗಳನ್ನು ಬರೆದ. ಹಲವು ಬಗೆಯ ಪುಸ್ತಕಗಳ ರಚನೆಯಾಯಿತು. ಲೇಖನಗಳ ಲೆಕ್ಕವಂತೂ ಕೇಳುವಂತಿಲ್ಲ. ಹೊಸಬರ/ಹಳಬರ ಪುಸ್ತಕಗಳನ್ನು ಬೇಧವಿಲ್ಲದೆ ಓದಿ ವಿಮರ್ಶೆ ಬರೆಯುತ್ತಾನೆ. ಯಕ್ಷಗಾನಕ್ಕೆ ಸಂಬಂಧಿಸಿದಂತೆ ಅನೇಕಾನೇಕ ಕೆಲಸಗಳನ್ನು ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ಮಾಡುತ್ತಾನೆ. ಅದೇ ನನಗೆ ದೊಡ್ಡ ಅಚ್ಚರಿ.
ಹೊಸದನ್ನು ಕಲಿಯುವಾಗ ತನಗೇನೂ ಗೊತ್ತಿಲ್ಲ ಎಂಬ ಮಗು ಮುಗ್ಧತೆ ಅಪ್ಪನಲ್ಲಿರುತ್ತದೆ. ಹಾಗಾಗಿಯೇ ಎಲ್ಲವನ್ನೂ ಬೇಗ ಕಲಿಯುತ್ತಾನೆ. ಅದೇ ಕಾರಣಕ್ಕೆ ಸೋಶಿಯಲ್ ಮೀಡಿಯಾಗಳನ್ನೂ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾನೆ. (ಆದರೂ ಮೊಬೈಲ್ ಜಾಸ್ತಿಯಾಯಿತು ಎಂದು ನಾನು ಬೈಯುತ್ತೇನೆ.) ಕೊರೋನಾ ಲಾಕ್ಡೌನ್ ಸಮಯದಲ್ಲಿ ಕ್ಲಬ್ಹೌಸ್, ಝೂಮ್ ಎಂದು ಯಾವೆಲ್ಲಾ ಆನ್ಲೈನ್ ವೇದಿಕೆಗಳಿವೆಯೋ ಅಲ್ಲೆಲ್ಲಾ ಉಪನ್ಯಾಸಗಳು, ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಲೇ ಬಂದಿದ್ದಾನೆ.
ಮೊಮ್ಮಕ್ಕಳಿಗೆ ಅಜ್ಜನೆಂದರೆ ಕಥೆಗಾರ ಅಜ್ಜನೇ. ನನ್ನ ದೊಡ್ಡ ಮಗ ಸಾರ್ಥಕನ ಎಲ್ಲಾ ಪುರಾಣ ಸಂಬಂಧೀ ಸಂದೇಹಗಳನ್ನು ನಿವಾರಿಸುವವನು ಅಪ್ಪ. ವರ್ಷ ಎಪ್ಪತ್ತಾದರೂ ಚಾಕಲೇಟ್ ಎಂದರೆ ಅಪ್ಪನಿಗೆ ಪ್ರೀತಿ! ಮೊನ್ನೆ ಮೊನ್ನೆಯಷ್ಟೇ ಅಪ್ಪ ಒಂದಷ್ಟು ಪೆನ್ನುಗಳನ್ನು ಕೊಂಡಿದ್ದ. ವೀಡಿಯೋ ಕಾಲ್ನಲ್ಲಿ ಆ ಪೆನ್ನುಗಳನ್ನು ತೋರಿಸುತ್ತಾ, “ನೋಡಿಲ್ಲಿ, ಅರವತ್ತು ರೂಪಾಯಿಗೆ ಇಪ್ಪತ್ತು ಪೆನ್ನು. ಹಸಿರು, ಕೆಂಪು, ನೀಲಿ ಎಲ್ಲಾ ಬಣ್ಣ ಇದ್ದು” ಎಂದು ಮುಗ್ಧ ಮಗುವಿನಂತೆ ಮಾತನಾಡುತ್ತಿದ್ದರೆ ನನಗೆ ಅಪ್ಪ ನನ್ನ ಮಗನಂತೆಯೇ ಕಾಣಿಸುತ್ತಿದ್ದ.
ನಮ್ಮ ಕರ್ಮಗಳನ್ನು ನಿರಂತರವಾಗಿ ಕ್ರಿಯಾಶೀಲತೆಯಿಂದ ಮಾಡುತ್ತಲೇ ಇರಲೊಂದು ಶಕ್ತಿ ಬೇಕು. ನಿತ್ಯದ ಕಾಯಕವನ್ನು ಏಕಶ್ರದ್ಧೆಯಿಂದ ಪುನರಾವರ್ತಿಸಿದಾಗ ಹುಟ್ಟಿಕೊಳ್ಳುವ ಧ್ಯಾನಾಸಕ್ತ ಮನದೊಳಗಿಂದ ಆ ಶಕ್ತಿ ಸದಾ ಪ್ರವಹಿಸುತ್ತದೆ. ಪುರುಷನಲ್ಲಾಗಲೀ, ಸ್ತ್ರೀಯಲ್ಲಾಗಲೀ ಪವಿತ್ರತೆಯೇ ಎಲ್ಲಕ್ಕಿಂತಲೂ ಮೇಲಾದ ಗುಣ ಎನ್ನುತ್ತದೆ ಕರ್ಮಯೋಗ. ಆ ಪವಿತ್ರತೆಯಿಂದ ತನ್ನೆಲ್ಲಾ ಕರ್ಮಗಳನ್ನು ಉಪಾಸನೆಯಾಗಿಸಿಕೊಳ್ಳುತ್ತಿರುವ ನನ್ನಪ್ಪನಿಗೆ ಶರಣು…
(‘ಯಕ್ಷ ಶ್ರೀಧರ’ ಅಭಿನಂದನಾ ಗ್ರಂಥಕ್ಕಾಗಿ ಬರೆದ ಅಪ್ಪನ ( ಡಿ ಎಸ್ ಶ್ರೀಧರ್) ಅವರ ಕುರಿತ ಲೇಖನ ಇದು.)






0 Comments