ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲೀಗೆ ಈ ಕಥನ ಸಂಪೂರ್ಣವಯ್ಯಾ..

ಜಿ ಎನ್ ಮೋಹನ್

ಪ್ರಸಾದ್ ರಕ್ಷಿದಿ ನನ್ನ ಗೆಳೆಯರು. ಅವರ ಪರಿಚಯವಾದಾಗ ಅವರು ಬೆಳ್ಳೇಕೆರೆಯಲ್ಲಿ ನಡೆಸಿದ ರಂಗ ಕ್ರಾಂತಿಯ ಪರಿಚಯ ಖಂಡಿತಾ ನನಗಿರಲಿಲ್ಲ. ಹಾಗೆ ಅವರನ್ನು ಯಾರೂ ಗುರುತು ಮಾಡಿಕೊಡಲಿಲ್ಲ. ರಕ್ಷಿದಿ ತನ್ನ ಬಣ್ಣಿಸುವವರಲ್ಲ. ಹಾಗಾಗಿ ಅದು ನನಗೆ ಗೊತ್ತೇ ಆಗಲಿಲ್ಲ. ರಕ್ಷಿದಿ ನನಗೆ ಪರಿಚಯವಾಗಿದ್ದು ಅದೇ ಮಂಜ್ರಾಬಾದ್ ಕೋಟೆಯಲ್ಲಿ. ನಾವೊಂದಷ್ಟು ಜನ ತುಡುಗು ದಂಡು ಇದ್ದಕ್ಕಿದ್ದಂತೆ ಹುಚ್ಚು ಹತ್ತಿ ಮಂಗಳೂರಿನಿಂದ ಸಿಕ್ಕ ಸಿಕ್ಕ ಸ್ಕೂಟರ್, ಬೈಕ್ ಏರಿ ಮಂಜ್ರಾಬಾದ್ ನೋಡಿಯೇ ಬಿಡೋಣ ಅಂತ ಸಕಲೇಶಪುರದ ದಿಕ್ಕಿಗೆ ಕಾಲು ಹಾಕಿದಾಗಲೇ ನಾನು ಮೊದಲು ಪ್ರಸಾದ್ ರಕ್ಷಿದಿ ಹೆಸರು ಕೇಳಿದ್ದು.

ಪೊದೆ ಗಡ್ಡ ಹೊತ್ತ ಇವರು ಸಿಕ್ಕಾಗ ನಾನು ಒಳ್ಳೆ ಸರ್ಕಸ್ ನ ವಿದೂಷಕನ ರೀತಿ ಸ್ಕೂಟರ್ ಓಡಿಸುತ್ತಿದ್ದವರ ಬೆನ್ನಿಗೆ ಬೆನ್ನು ಹಾಕಿ ಕುಳಿತಿದ್ದೆ. ಹೀಗೆ ಗಾಡಿ ಓಡಿಸುವವರ ವಿರುದ್ಧ ದಿಕ್ಕಿಗೆ ಮುಖ ಹಾಕಿ ಕುಳಿತುಕೊಂಡವರನ್ನು ರಕ್ಷಿದಿ ಮೊದಲ ಬಾರಿಗೆ ನೋಡಿದ್ದರೆನೋ.. ಗೊಳ್ಳೆಂದು ನಕ್ಕುಬಿಟ್ಟಿದ್ದರು. ಆ ನಂತರ ನಾವು ಆ ಹಸಿರು ಹಸಿರಾದ ಕೋಟೆಯನ್ನೂ, ಅದರೊಳಗಿನ ತಂಪನ್ನೂ, ಅದರಾಚೆ ಕಾಣುತ್ತಿದ್ದ ಗಿರಿ ಶಿಖರ ಝರಿ ನೀರನ್ನು ನೋಡಿಯೇ ಬಂದೆವು.

ಆಮೇಲೆ ಒಂದು ದಿನ ಇದ್ದಕ್ಕಿದ್ದಂತೆ ಎಸ್ ಸಿ ದಿನೇಶ್ ಕುಮಾರ್ ಬೆಳ್ಳೇಕೆರೆಯ ಪುಟ್ಟ ಜಾಗದಲ್ಲಿ ಜರುಗುತ್ತಿರುವ ಮೌನ ರಂಗ ಕ್ರಾಂತಿಯ ಬಗ್ಗೆ ಬರೆದಾಗಲೇ ‘ಅರೆ ಇದು ನಮ್ಮ ಪ್ರಸಾದಿ ಅಲ್ಲವಾ’ ಅನಿಸಿದ್ದು. ಪ್ರಸಾದ್ ರಕ್ಷಿದಿ ಥೇಟ್ ಹೆಗ್ಗೋಡಿನ ನೀನಾಸಂನಂತೆಯೇ ದೊಡ್ಡ ಬದಲಾವಣೆ ತಂದಿದ್ದರು. ಅವರ ಕೃತಿ ‘ಬೆಳ್ಳೇಕೆರೆ ಹಳ್ಳಿ ಥಿಯೇಟರ್’ ಅನ್ನು ಅಭಿನವ ಪ್ರಕಾಶನ ಪ್ರಕಟಿಸಿದೆ. ಅದು ಓದಲೇಬೇಕಾದ, ಓದಿದರೆ ನೀವು ಸುಮ್ಮನಿರಲಾಗದೆ ನಿಮ್ಮ ಹಳ್ಳಿಯತ್ತ ಓದುವಂತೆ ಮಾಡುವ ಕೃತಿ. ಈ ಕೃತಿಯ ಬಗ್ಗೆ ಸುಧನ್ವ ದೇರಾಜೆ ಒಳ್ಳೆಯ ನೋಟ ನೀಡಿದ್ದಾರೆ.

ಇಂತಹ ಪ್ರಸಾದ್ ರಕ್ಷಿದಿ ಅವರನ್ನು ‘ವಾಹ್!’ ಎನ್ನುವಂತೆ ನಾನು ಮತ್ತೆ ಪರಿಚಯ ಮಾಡಿಕೊಳ್ಳಬೇಕಾಗಿ ಬಂದದ್ದು ಅಂಕಿತ ಪುಸ್ತಕ ಮಳಿಗೆಯಲ್ಲಿ. ಅಲ್ಲಿ ಹಂಪಿ ವಿಶ್ವವಿದ್ಯಾಲಯ ತಂದ ಕಿರು ಹೊತ್ತಿಗೆ ‘ ನಮ್ಮ ನಡುವಿನ ತೇಜಸ್ವಿ’ ಸಿಕ್ಕಾಗ. ಕೊಂಡು ಮನೆಗೆ ತಂದು ಒಂದೇ ಗುಕ್ಕಿಗೆ ಓದಿ ಮುಗಿಸಿದಾಗ ಅವರ -ತೇಜಸ್ವಿಯವರ, ತೇಜಸ್ವಿಯವರ ಪಾತ್ರಗ ಜೊತೆಗಿನ ನಂಟು ಓದಿ ಈ ರಕ್ಷಿದಿ ಇನ್ನೂ ಏನೇನೆಲ್ಲಾ..! ಎಂದು ಮೂಗಿನ ಮೇಲೆ ಬೆರಳಿತ್ತುಕೊಳ್ಳುವಂತಾಯಿತು.

‘ಅವಧಿ’ಯಲ್ಲಿ ಪ್ರಕಟಿಸಿಯೇಬಿಡೋಣ ಎಂದು ಕೇಳಿದೆ. ಎಂದಿನ ಸಂಕೋಚ ರಕ್ಷಿದಿಯನ್ನು ಕಾಡಿತು., ಆನ್ ಲೈನ್ ಮಾಧ್ಯಮಕ್ಕಿಲ್ಲದ ಗಡಿ ಗೋಡೆಯ ಬಗ್ಗೆ ತಿಳಿಸಿದಾಗ ಒಪ್ಪಿದರು. ಇಷ್ಟು ದಿನಗಳ ಕಾಲ ತೇಜಸ್ವಿ ಕಥನ ನಿಮ್ಮ ಮುಂದೆ ಸುಳಿದಾಡಿದೆ. ಇದಕ್ಕೆ ಸಿಕ್ಕ ಓದುಗರ ಸಂಖ್ಯೆ, ಪ್ರತಿಕ್ರಿಯೆ ಅಪಾರ. ಅಷ್ಟರ ಮಟ್ಟಿಗೆ ರಕ್ಷಿದಿ ನಿರೂಪಣೆಯ ಬಗ್ಗೆಯೂ ತೇಜಸ್ವಿ ಎಂಬ ಹಕ್ಕಿಯ ಬಗ್ಗೆಯೂ ನಾವು ಮೂಕರಾಗಿದ್ದೇವೆ.

ರಕ್ಷಿದಿ ಈ ಕೃತಿ ಪ್ರಕಟಿಸಲು ಒಪ್ಪಿಗೆ ಕೊಟ್ಟಿದ್ದಕ್ಕಾಗಿ, ಅಪರೂಪದ ಫೋಟೋಗಳನ್ನು ಒದಗಿಸಿಕೊಟ್ಟಿದ್ದಕ್ಕಾಗಿ, ಡಿ ಜಿ ಮಲ್ಲಿಕಾರ್ಜುನ್ ಫೋಟೋಗಳು, ಪಿ ಮಹಮದ್ ಬರೆದ ರೇಖಾ ಚಿತ್ರಗಳು ಅಲ್ಲದೆ ಇನ್ನೂ ಅನೇಕ ಗೆಳೆಯರ ಫೋಟೋ, ಚಿತ್ರಗಳು ಕಥನದ ಉದ್ದಕ್ಕೂ ಹರಡಿಕೊಂಡವು. ಈ ಎಲ್ಲರಿಗೂ ಥ್ಯಾಂಕ್ಸ್ . ರಕ್ಷಿದಿ ಅವರ ಎರಡೂ ಕೃತಿಯನ್ನು ನೀವೆಲ್ಲರೂ ಕೊಳ್ಳಿ ಎಂದು ಮತ್ತೆ ನೆನಪಿಸುತ್ತಾ ಇಲ್ಲಿ ಈ ಕಥನ ಪ್ರಕಟವಾಗುವಾಗ ಬಂದ ಪ್ರತಿಕ್ರಿಯೆಯ ಬಗ್ಗೆ ಪ್ರಸಾದ್ ರಕ್ಷಿದಿ ಬರೆದ ಬರಹವನ್ನು ಪ್ರಕಟಿಸಿದ್ದೇವೆ. ‘ಇಲ್ಲೀಗೆ ಹರ ಹರಾ, ಇಲ್ಲೀಗೆ ಶಿವ ಶಿವಾ, ಇಲ್ಲೀಗೆ ಈ ಕಥನ ಸಂಪೂರ್ಣವಯ್ಯಾ….’

ಗೆಳೆಯ ಮೋಹನ್ ಫೋನ್ ಮಾಡಿ, ನಿಮ್ಮ ತೇಜಸ್ವಿ ಬರಹವನ್ನು ‘ಅವಧಿ’ಯಲ್ಲಿ ಪ್ರಕಟಿಸುತ್ತೇನೆ ಎಂದಾಗ, ಅದು ಈಗಾಗಲೇ ಪತ್ರಿಕೆಯಲ್ಲಿ ಬಂದಿದೆಯಲ್ಲ ಎಂದೆ.

ಆದರೆ ನಮ್ಮ ಓದುಗರೇ ಬೇರೆ ಇದ್ದಾರೆ, ಇರಲಿ ಎಂದರು. ಅವರ ನಿರ್ಧಾರ ಸರಿಯೆಂದು ನನಗೆ ಈಗ ಮನವರಿಕೆಯಾಗಿದೆ.

‘ತೇಜಸ್ವಿ ಕಥನ’ ಸರಣಿ ಪ್ರಾರಂಭವಾದಾಗಿನಿಂದ ನನಗೆ ಬಂದ ಫೋನ್ ಕರೆಗಳ ಸಂಖ್ಯೆಯೇ ಸುಮಾರು ಐನೂರನ್ನು ದಾಟಿರಬಹುದು. ತೇಜಸ್ವಿ ಕನ್ನಡದ ಓದುಗರನ್ನು ಆವರಿಸಿಕೊಂಡಿರುವ ರೀತಿಯೇ ಬೆರಗು ಹುಟ್ಟಿಸುವಂಥದ್ದು. ಹೀಗೆ ಪ್ರತಿಕ್ರಿಯೆ ನೀಡಿದವರಲ್ಲಿ ಹೆಚ್ಚಿನವರು ಕಿರಿಯರು ಮತ್ತು ವಿದ್ಯಾರ್ಥಿಗಳು. ಇದು ಗಮನಾರ್ಹವಾದುದು ಮತ್ತು ಎಲ್ಲ ಲೇಖಕರಿಗೂ ಭರವಸೆ ನೀಡುವಂತಾದ್ದು.

ಈ ಬರಹವನ್ನು ಓದಿದ ಅನೇಕರು ತೇಜಸ್ವಿಯವರನ್ನು ಮೆಚ್ಚುಗೆಯಿಂದಲೋ, ಇಲ್ಲವೇ ಆರಾಧನಾ ಭಾವದಿಂದಲೋ ಪ್ರತಿಕ್ರಯಿಸಿದ್ದಾರೆ. ಆದರೆ ನನಗೆ ಹೇಳಬೇಕೆಂದಿರುವುದು ಅದಕ್ಕಿಂತ ಸ್ವಲ್ಪ ಭಿನ್ನವಾದದ್ದು.

ತೇಜಸ್ವಿಯವರಿಗೆ ಯಾವಾಗಲೂ ‘ಸಾಮಾನ್ಯರಲ್ಲಿ ಸಾಮಾನ್ಯ’ರು ಎಂದುಕೊಳ್ಳುವ ಜನರಲ್ಲಿ ಆಳದಲ್ಲಿರುವ ಜೀವನಾನುಭವ ಮತ್ತು ಅದರಿಂದ ಗಳಿಸಿದ ವಿವೇಕದ ಬಗ್ಗೆ ಮೆಚ್ಚುಗೆ ಮತ್ತು ಅಚ್ಚರಿಗಳಿದ್ದವು. ಹಾಗೇ ವಿದ್ಯಾವಂತರು ಅಥವಾ ಮುಖ್ಯರು ಎನ್ನಿಸಿಕೊಂಡವರ ಅವಿವೇಕತನದ ಬಗ್ಗೆ ದುಗುಡ- ವಿಷಾದಗಳಿದ್ದವು. ಬಿರಿಯಾನಿ ಕರಿಯಪ್ಪ, ಖಾಸಿಂ ಸಾಬಿ, ಶಾಂತಕುಮಾರ, ಗಾರೆಯವ, ಇಂತವರಲ್ಲಿರುವ ಜೀವನಪ್ರೀತಿ ಮತ್ತು ವಿವೇಕವನ್ನು ಗಮನಿಸಿ. ಈ ಕಾರಣಗಳಿಂದಾಗಿಯೇ ತೇಜಸ್ವಿ, ಯಾವಾಗಲೂ ತಮ್ಮನ್ನು ಸಾಮಾನ್ಯರಾಗಿ ಗುರುತಿಸಿಕೊಳ್ಳುತ್ತಿದ್ದರು.

(ಉದಾ: ನಾವು ಪ್ರಥಮ ಬಾರಿಗೆ ಅವರನ್ನು ರಂಗಶಿಬಿರದ ಉದ್ಘಾನೆಗೆ ಆಹ್ವಾನಿಸಲು ಹೋದಾಗ ಅವರು ರಿಚರ್ಡ್ ಲೋಬೋಅವರಿಗೆ ಹೇಳಿದ ಮಾತು ನೀವು ಹುಡುಗ್ರು ಬೆಳ್ದ್ ಬಿಟ್ಟಿದ್ದೀರಿ ಗುರ್ತಿಡಿಯೋಕ್ಕಾಗಲ್ಲ, ಆದ್ರೆ ನೀನು ನನ್ನ ನೆನಪಿಟ್ಕೊಂಡಿದ್ದೀಯಲ್ಲ-)

ಈ ಎಲ್ಲ ಕಾರಣಗಳಿಂದಾಗಿಯೇ ಅವರು ಚಳುವಳಿ, ಹೋರಾಟಗಳಿಗೆ, ಪ್ರಖರ ವಿಚಾರವಾದಿಗಿಂತ, ಸಾಮಾನ್ಯ ರೈತನ ನೆಲೆಯಲ್ಲೇ ಪ್ರತಿಕ್ರಯಿಸುತ್ತಿದ್ದರು. ಇದು ಅನೇಕ ಭಿನ್ನಾಭಿಪ್ರಾಯಗಳಿಗೂ, ತಪ್ಪು ತಿಳುವಳಿಕೆಗೂ ಕಾರಣವಾಯಿತೆಂದು ನನ್ನ ಅಭಿಪ್ರಾಯ.

ಈ ಎಲ್ಲ ಕಾರಣಗಳಿಂದ ಅವರು ಸಾಹಿತಿ- ಬರಹಗಾರ… ತೇಜಸ್ವಿಗಿಂತ, ನಮ್ಮ ನಡುವಿನ ತೇಜಸ್ವಿ ಆದ್ದರಿ ಈ ನೆಲೆಯಲ್ಲಿ, ತೇಜಸ್ವಿಯನ್ನು ನಮ್ಮ ಹಿರಿಯ ಜೊತೆಗಾರನಾಗಿ ನೋಡಿ ಈ ಬರಹವನ್ನು ಓದಬೇಕೆಂದು ಮನವಿ.

ಕಥನವನ್ನು ಓದಿದ, ಪ್ರತಿಕ್ರಿಯೆ ನೀಡಿದ ಎಲ್ಲ ಮಿತ್ರರಿಗೆ, ಮೋಹನ್ ಗೆ ಕೃತಜ್ಞತೆಗಳು

-ಪ್ರಸಾದ್ ರಕ್ಷಿದಿ

 

 

 

‍ಲೇಖಕರು G

7 June, 2011

5 Comments

  1. ರಾಕೇಶ ಜೋಷಿ

    ಪ್ರಸಾದ್ ಸರ್ ಹಾಗೂ ಮೋಹನ್ ಸರ್ ಗೆ ಈ ಲೇಖನಗಳನ್ನು ನಮಗೋಸ್ಕರ ಪ್ರಕಟಿಸಿದ್ದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು.
    ಮೋಹನ್ ಸರ್ ಹೇಳಿದ ಹಾಗೆ “ಅವಧಿ” ಓದುಗರೇ ಬೇರೆ ಇದ್ದಾರೆ. ತುಂಬಾ ಹೊತ್ತು ಗಣಕ ಯಂತ್ರದ ಮುಂದೆ ಕೂರುವ ನಮಗೆ ಪುಸ್ತಕ ಓದೋಕೆ ಸಮಯ ಸಿಗೋದು ಕಡಿಮೆ. ಹಾಗೆ ಸಿಕ್ಕಾಗ ಎಂದೋ ನಿಲ್ಲಿಸಿದ ಕಾದಂಬರಿಗಳು open ಆಗುತ್ತವೆ. ಆದರೆ office ನಲ್ಲಿ ಸಮಯ ಸಿಕ್ಕಾಗ “ಅವಧಿ”ಗೆ ಒಮ್ಮೆ ಭೇಟಿ ಕೊಟ್ಟಾಗಲೆ ಸಮಾಧಾನ ಆಗುತ್ತೆ.
    ಪ್ರಸಾದ್ ಸರ್ ಮತ್ತೊಮ್ಮೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಲೇಖನಗಳು ಹೀಗೆ ಮುಂದುವರಿಯಲಿ. ನಿಮ್ಮ ಪುಸ್ತಕ ” ನಮ್ಮ ನಡುವಿನ ತೇಜಸ್ವಿ” ಬೇಗನೆ ತಂದು ಓದಲು ಶುರು ಮಾಡುವೆ.

  2. ದಿನೇಶ್ ಕುಮಾರ್ ಎಸ್.ಸಿ

    ಪ್ರಸಾದ್ ಅವರ ಲೇಖನ ಮಾಲೆಯನ್ನು ಹಿಂದೆ ನಾನು ಕರವೇ ನಲ್ನುಡಿಯಲ್ಲಿ ಪ್ರಕಟಿಸಿದ್ದಾಗಲೂ ಅದು ಜನಪ್ರಿಯವಾಗಿತ್ತು. ಪ್ರಸಾದ್ ಅವರ ಭಾವೋದ್ವೇಗರಹಿತ, ಸರಳ, ನಿಷ್ಠುರ ಬರವಣಿಗೆ, ಸಾಂಸ್ಕೃತಿಕ ಒಳನೋಟಗಳು ಅದಕ್ಕೆ ಕಾರಣ. ಅವಧಿಯಲ್ಲಿ ಈ ಲೇಖನ ಮಾಲಿಕೆ ಪ್ರಕಟಿಸುವುದಕ್ಕೂ ಮುನ್ನ ಪ್ರಸಾದ್ ಅವರನ್ನು ಪರಿಚಯಿಸಲು ನನ್ನ ಲೇಖನ ಬಳಸಿಕೊಂಡಿದ್ದಕ್ಕೆ ಥ್ಯಾಂಕ್ಸ್.
    ಅಂದ ಹಾಗೆ ಪ್ರಸಾದ್ ಅವರ ಹಳ್ಳಿ ಥೇಟರ್ ಕೃತಿಯನ್ನೂ ಪ್ರಕಾಶಕರ ಅನುಮತಿ ಪಡೆದು ಅವಧಿಯಲ್ಲಿ ಪ್ರಕಟಿಸಲು ಸಾಧ್ಯವೇ ನೋಡಿ ಸರ್. ರಂಗಾಯಣ, ನೀನಾಸಂ, ಶಿವಸಂಚಾರ ಗಳಂಥ ದೊಡ್ಡ ಅಣ್ಣಂದಿರ ಕುರಿತ ಮಾತು-ಚರ್ಚೆಗಳೇ ನಡೆಯುವ ಈ ಹೊತ್ತಿನಲ್ಲಿ ಮಲೆನಾಡಿನ ಸಣ್ಣ ಹಳ್ಳಿಯಲ್ಲಿ ನಡೆದ ರಂಗಕ್ರಾಂತಿಯ ಅನುಭವಗಳನ್ನು ಕಟ್ಟಿಕೊಡುವ ಈ ಕೃತಿ ಹೆಚ್ಚು ಜನರನ್ನು ತಲುಪಬೇಕು ಅನ್ನುವ ಆಶಯದಿಂದ ಈ ಮಾತು ಹೇಳಿದೆ.
    -ದಿನೇಶ್ ಕುಮಾರ್ ಎಸ್.ಸಿ.

  3. dinesh kukkujadka

    ಪ್ರಸಾದ್ ರಕ್ಷಿದಿಯವರು ಬರೆದ ತೇಜಸ್ವಿಯವರ ಕುರಿತಾದ ಈ ಕಥಾನಕದ ಸವಿಯಾದ ಓದಿನ ಸುಖವನ್ನು ಈ ಹಿಂದೆಯೇ ಅನುಭವಿಸಿದ್ದೆ. ರಕ್ಷಿದಿಯವರೊಮ್ಮೆ ಮನೆಗೆ ಬಂದಿದ್ದಾಗ ಈ ಲೇಖನಗಳಿದ್ದ ಹಾಳೆಗಳನ್ನು ಕೊಟ್ಟಿದ್ದರು. ಆವತ್ತು ಅಭಿಪ್ರಾಯ ತಿಳಿಸುವ ನನ್ನ ಅತ್ಯುತ್ಸಾಹವನ್ನಲ್ಲೇ ಸುಮ್ಮನೇ ಅದುಮಿಕೊಂಡಿದ್ದೆ. ಕಾರಣ ಇಷ್ಟೇ- ತೇಜಸ್ವಿಯಂಥಾ ಅಪ್ಪಟ ನೆಲಸಂವೇದನೆಯ ಶುದ್ಧ ಮನುಷ್ಯಮೂರ್ತಿಯ ಬಗ್ಗೆ, ರಕ್ಷಿದಿಯವರಂಥಾ ಸೂಕ್ಷ್ಮಗ್ರಾಹೀ ಮನಸ್ಸುಳ್ಳ ಬರಹಗಾರನೊಬ್ಬ ತಾನು ಅನುಭವಿಸಿದ ಸಂಗತಿಗಳನ್ನು ಹಂಚಿಕೊಂಡಿರುವ ಒಂದೊಂದು ತುಣುಕೂ ರಸಗ್ರಾಹಿಯಾದುದೇ! ಇವನ್ನೆಲ್ಲಾ ವಿಮರ್ಶೆಯ ಮೂಸೆಗೆ ತುರುಕುವ ಅನಗತ್ಯ ಉಸಾಬರಿ ಆ ಸಂದರ್ಭದ ರಸಗ್ರಹಣದ ಖುಷಿಗೆ ವಿಹಿತವಾಗಿರಲಿಲ್ಲ ಎಂತಲೇ ನಂಬಬೇಕು. ಜೊತೆಗೆ ಉದಾಸೀನವೂ ಸೇರಿ ನನ್ನ “ಸ್ವಯಂ ಆರೋಪಿತ ಸಾಂಸ್ಕ್ರಿತಿಕ ಜವಾಬ್ದಾರಿ”ಯಿಂದ ಆವತ್ತು ನೀಟಾಗಿ ಜಾರಿಕೊಂಡಿದ್ದೆ!

    ಅಂದಹಾಗೆ, ರಕ್ಷಿದಿಯವರ ನೇರ ಸಹವಾಸದಿಂದ ಇನ್ನೂ ಅದೆಷ್ಟೋ ಮಲೆನಾಡಿನ ಹಸಿಹಸಿ ರಸಾನುಭವಗಳನ್ನು ಅವರಿಂದಲೇ ಕೇಳಿ ಅನುಭವಿಸಿದ್ದೇನೆ..ನನಗೆ ಗೊತ್ತಿರುವ ಹಾಗೆ ಅವರೊಬ್ಬ ಸೂಕ್ಷ್ಮ ಒಳನೋಟಗಳಿರುವ ಅಪ್ಪಟ ರಂಗಕರ್ಮಿ. ಹಳ್ಳಿ ರಂಗಭೂಮಿ ಮತ್ತು ವ್ರುತ್ತಿ – ಹವ್ಯಾಸಿ ರಂಗಭೂಮಿಗಳ ವಿವಿಧ ಮಗ್ಗುಲುಗಳಲ್ಲೂ,ಅವರ ಕಲಿಕೆಯ ಜಾಡಿನ ಹುಡುಕಾಟ-ಸಂತೆಯಲ್ಲಿದ್ದೂ ರೂಢಿಸಿಕೊಂಡಿರುವ ಒಂದು ಬಗೆಯ ತನ್ಮಯತೆಗಳನ್ನು ಹತ್ತಿರದಿಂದ ಕಂಡಿದ್ದೇನೆ.

    ಬದುಕಿನ ಕಾರ್ಪಣ್ಯಗಳಿಗೆ ಕಲೆ ಜೀವರಸ. ಸಹಜತೆ ಮತ್ತು ಒಂದು ತೆರನಾದ ಮುಗ್ಧತೆ ಅದರ ಸತ್ವ ಮತ್ತು ಸೊಬಗು! “ಡೌನ್ ಟು ಅರ್ತ್” ಅಂತೀವಲ್ಲ…. ಹಾಗೇ ಅವರ ಯೋಚನೆಗಳಲ್ಲೂ ಅದು ತುಂಬಿಕೊಂಡಿರುವುದನ್ನು ಗಮನಿಸಿದ್ದೇನೆ. ತೇಜಸ್ವಿ ಪ್ರಭಾವಿತ ಮಲೆನಾಡಿನ ಮಣ್ಣಿನ ಗುಣ ಸೇರಿಹೋಗಿರುವುದರಿಂದಲೇ ಅವರ “ಬೆಳ್ಳೆಕೆರೆ ಹಳ್ಳಿ ಥೇಟರ್” ನಮ್ಮನ್ನು ಅಷ್ಟೊಂದು ಪ್ರಭಾವಿಸುವಂತಾಗಿರುವುದು!ಮತ್ತು ಅದರಿಂದಲೇ ತೇಜಸ್ವಿಯವರ ಬದುಕಿನ ನಿಜದ ಮಗ್ಗುಲುಗಳನ್ನು ಹೆಚ್ಚು ನ್ಯಾಯವಾಗಿ ನಿರ್ವಚಿಸುವುದು ಸಾಧ್ಯವಾಗಿರಬಹುದೆಂದು ನನ್ನ ಅನಿಸಿಕೆ.

    ನಾವೆಲ್ಲ ಗಮಿಸುವ ಹಾದಿಯ ಸಾಂಸ್ಕ್ರಿತಿಕ ಸ್ಪಷ್ಟತೆಗೆ ಈ ಬರಹ “ಆಪದ್ದೀಪ”ವಾಗಬಹುದೆಂಬ ಗಟ್ಟಿ ಭರವಸೆಯೊಂದಿಗೆ “ಅವಧಿ”ಗೆ ಧನ್ಯವಾದಗಳು.

    -ದಿನೇಶ್ ಕುಕ್ಕುಜಡ್ಕ

  4. shiva prasad

    thanks to avdhi n special thanks to s.n.mohan sir and prasad sir…. tejasvi bagge innu barali…

  5. santhosh tarikere

    tejaswi kathana was very gur..thanks mohan…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading