ಇಲ್ಲಿ ಬದುಕೇ 'ತರಕಾರಿ'

ಸದಾಶಿವ್ ಸೊರಟೂರು
ನಿಮಗೆ ಇಲ್ಲಿನ ಮಣ್ಣಿನ ಬಗ್ಗೆ ಅಷ್ಟಾಗಿ ಗೊತ್ತಿರ್ಲಿಕ್ಕಿಲ್ಲ! ರೈತ ಹೇಳಿದಂತೆ ಬೆಳೆಯುತ್ತದೆ. ಒಂದೇ ಒಂದು ಬೊಗಸೆ ನೀರು ಚೆಲ್ಲಿದರೆ ಸಾಕು ಒಡಲ ತುಂಬಾ ಪೈರು. ಆದರೆ ಇಲ್ಲಿನ ದೊಡ್ಡ ಸಮಸ್ಯೆ ಅಂದ್ರೆ ನೀರಿಲ್ಲ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ನೀರಿನ ಸಮಸ್ಯೆ ದೊಡ್ಡ ಸುದ್ದಿ ಆಗುವುದೇ ಇಲ್ಲ. ಬೆಂಗಳೂರಿನಲ್ಲಿ ಒಂದಿನ ನೀರಿಲ್ಲ ಅಂದ್ರೆ ಅದು ಬಿಗ್ ಬ್ರೇಕಿಂಗ್ ನ್ಯೂಸ್. ಇಲ್ಲಿ ಒಂದು ಮನೆಗೆ ದಿನಕ್ಕೆ ಮೂರರಿಂದ ನಾಲ್ಕು ಬಿಂದಿಗೆ ಮಾತ್ರ ನೀರು ದಕ್ಕುವುದು. ಅದರಲ್ಲಿ ಅಡುಗೆಯಿಂದ ಶೌಚದವರೆಗೂ ಬಳಕೆಯಾಗಬೇಕು. ಇನ್ನೂ ಬೆಳೆ ಬೆಳೆಯುವುದು ಅನ್ನುವ ವಿಚಾರ ಮಾತ್ರ ಹೆಚ್ಚು ಜೋಕೇ ಸರಿ..
ಆದರೂ ರೈತರು ಬೆಳೆಯುತ್ತಾರೆ. ರೈತನ ನಿಷ್ಠೆಯೇ ಅಂಥದ್ದು. ಆತ ಮನಸ್ಸು ಮಾಡಿದರೆ ಕಲ್ಲಿನಲ್ಲೂ ಒಂದು ಸಸಿ ನೆಟ್ಟಾನು! ಈ ಎರಡೂ ಜಿಲ್ಲೆಗಳಲ್ಲಿ ಬೆಳೆಯುವಷ್ಟು ತರಕಾರಿಯನ್ನು ನಾನು ಬೇರೆ ಕಡೆ ನೋಡಿಲ್ಲ. ಚಿಂತಾಮಣಿ ಮತ್ತು ಕೋಲಾರದ ತರಕಾರಿ ಮಾರುಕಟ್ಟೆಗೆ ಬಂದು ನಿಂತರೆ ನಿಮಗೆ ಅದರ ಅರಿವಾಗುತ್ತದೆ. ನೀರನ್ನು ಟ್ಯಾಂಕರ್ ನಲ್ಲಿ‌ ಕೊಂಡು ತಂದು ಬೆಳೆಯುತ್ತಾರೆ ಅಂದರೆ ನೀವೇ ಊಹಿಸಿಕೊಳ್ಳಿ!
ನಾನು ಹೇಳಲು ಹೊರಟಿದ್ದ ವಿಚಾರನೇ ಬೇರೆ.‌ ತರಕಾರಿ ಮಾರುಕಟ್ಟೆ ಯಾವ ಮಟ್ಟಿಗೆ ಇದೆ ಎಂಬುದನ್ನು ಹೇಳಲು ನಾನು ನಿಮಗೆ ಇದೆಲ್ಲವನ್ನು ಹೇಳಬೇಕಾಯ್ತು.
ಪ್ರತಿದಿನ ಚಿಂತಾಮಣಿಯಲ್ಲಿ ತರಕಾರಿ ಮಾರುಕಟ್ಟೆ ಸೇರುತ್ತದೆ. ‌ಇಡೀ ಹತ್ತು ಎಕರೆಯಷ್ಟು ಜಾಗದ ತುಂಬಾ ತರಕಾರಿಯೇ! ಇಷ್ಟೊಂದು ನೀರಿನ ಅಭಾವದಲ್ಲೂ ಇಷ್ಟು ಬೆಳೆಯಲು ಸಾಧ್ಯವಾ ಅನ್ನುವಷ್ಟರ ಮಟ್ಟಿಗೆ ನಿಮಗೆ ಆಶ್ಚರ್ಯವಾಗುತ್ತದೆ. ತರಕಾರಿ ಮಾರುಕಟ್ಟೆಗೆ ಕಾಲಿಟ್ಟರೆ ಖಂಡಿತ ನಿಮ್ಮ ಕಣ್ಣಿಗೊಂದು ಹಬ್ಬ. ಬರೀ ಬಣ್ಣ. ಬಣ್ಣ-ಬಣ್ಣದ ತರಕಾರಿ. ಪ್ರತಿಯೊಂದು ತರಕಾರಿಯೂ ಅಲ್ಲಿ ಸಿಗುತ್ತದೆ. ಅಷ್ಟೇ ತಾಜ ಮತ್ತು ಸೋವಿ ಬೆಲೆಯಲ್ಲಿ!.
ಬಹುಪಾಲು ರೈತರೇ ನೇರವಾಗಿ ಮಾರುಕಟ್ಟೆಗೆ ತಂದ ಮಾಲು ಅದು. ಯಾವುದೇ ತರಕಾರಿಯಾದರೂ ಕನಿಷ್ಠ ನೀವು ಐದು ಕೆ.ಜಿಯಷ್ಟು ಕೊಳ್ಳಲೇಬೇಕು. ಅದಕ್ಕಿಂತ ಕಡಿಮೆ ಅಲ್ಲಿ ಸಿಗುವುದಿಲ್ಲ. ಒಂದು ಕೆ.ಜಿ ಎರಡು ಕೆ.ಜಿ ಹೀಗೆ ಚಿಲ್ಲರೆ ಲೆಕ್ಕದ ವ್ಯಾಪಾರ ಅಲ್ಲಿಲ್ಲ. ಎಂಟು ಗಂಟೆ ಹೊತ್ತಿಗೆ ಒಂದೇ ಒಂದು ತುಣುಕು ತರಕಾರಿ ಸಿಗದಷ್ಟು ಖಾಲಿ ಖಾಲಿ. ಮತ್ತೆ ಮರುದಿನ ಬೆಳಗ್ಗೆ ಐದಕ್ಕೆ ಮಾರುಕಟ್ಟೆ ಮೈಬಿಚ್ಚಿಕೊಳ್ಳುತ್ತದೆ.
ಆ ಮಾರುಕಟ್ಟೆಯನ್ನು ನೀವು ಹೊಕ್ಕರೆ ಚಿಕ್ಕ-ಚಿಕ್ಕ ಪ್ಲಾಸ್ಟಿಕ್ ಕವರ್ ಇಟ್ಟುಕೊಂಡು ತಿರುಗುವ ಹುಡುಗರು ಕಾಣಿಸುತ್ತಾರೆ. ಅವರು ತರಕಾರಿ ಆಯುವವರು. ಅಲ್ಲಿ ಇಲ್ಲಿ ಬಿದ್ದ ತರಕಾರಿ ಆಯ್ದುಕೊಂಡು ಮನೆಗೆ ಒಯ್ಯುವವರು.
ಸುಮ್ಮನೆ ಒಬ್ಬ ಹುಡುಗನನ್ನು ಮಾತಾಡಿಸಿದೆ. ಹೌದು ಸರ್, ತರಕಾರಿ ಆಯ್ದು ತಗೊಂಡು ಹೋಗ್ತೀನಿ. ಕದಿತಾನೆ ಅಂತಾ ಎಷ್ಟೋ ಜನ ಹೊಡೆದಿದ್ದಾರೆ ಸರ್.. ಯಾಕೆ ಕದೀಲಿ ಸರ್? ಚೆನ್ನಾಗಿ ಆರಿಸಿದರೆ ಇಪ್ಪತ್ತರಿಂದ ಮೂವತ್ತು ಕೆ.ಜಿ ತರಕಾರಿ ಸಿಗುತ್ತೆ. ಕೊಳೆ ಬಟ್ಟೆ ಹಾಕ್ಕೊಂಡು ಬಿಟ್ರೆ ಈ ಜನಕ್ಕೆ ಎಲ್ಲರೂ ಕಳ್ಳರ ತರಹನೇ ಕಾಣ್ಸುತ್ತಾರೆ ಸರ್. ಎಷ್ಟೋ ತರಕಾರಿ ಸುಮ್ಮನೆ ವ್ಯರ್ಥವಾಗಿ ಹೋಗುತ್ತೆ. ಪ್ರತಿಯೊಂದು ತರಕಾರಿ ತುಣುಕಿನಲ್ಲೂ ನಮ್ಮ ಪಾಲಿನ ನೀರು ಮತ್ತು ರೈತನ ಬೆವರು ಇರುತ್ತೆ ಸರ್. ಕೆಲವರು ಆಯ್ದುಕೊಂಡು ಹೋದ ತರಕಾರಿ ಮಾರಿಕೊಳ್ಳುತ್ತಾರೆ.
                                                                                                                                                     
ಆದರೆ, ನಾನು ಯಾವತ್ತೂ ಕೂಡ ಮಾರಿಲ್ಲ. ಒಂದಷ್ಟು ಮನೆಗೆ ಇಟ್ಟುಕೊಂಡು ಹತ್ತಿರ ಸರ್ಕಾರಿ ಶಾಲೆಗೆ ಬಿಸಿಯೂಟಕ್ಕೆ ಕೊಡ್ತೀನಿ. ಬೆಳಗ್ಗೆ ಬಂದು ಇಷ್ಟು ಅವಮಾನಗಳ ಮಧ್ಯೆ ತರಕಾರಿ ಆಯುವುದು ನನಗೆ ಬೇಕಾ? ಅನಿಸುತ್ತೆ. ಆದರೆ ಬೆಳೆದ ತರಕಾರಿ ಸೋರಿ ಹೋಗಿ ಅಲ್ಲಿ‌ ಮಣ್ಣಾಗುವುದು ಕಂಡಾಗ ಹೊಟ್ಟೆ ಉರಿಯುತ್ತೆ ಅಂದ.
ನಾನು ಅವನಿಗೆ ಏನು ಹೇಳಬಹುದಿತ್ತು. ಅಭಿನಂದನೆನಾ? ಥ್ಯಾಂಕ್ಸ್ ಎಂದಾ? ಒಳ್ಳೆಯದಾಗಲಿ ಎಂಬ ಹಾರೈಕೆಯಾ? ಮಾತು ಬರಲಿಲ್ಲ ಸುಮ್ನೆ ನಿಂತೆ.  ಮೂರ್ನಾಲ್ಕು ವರ್ಷವಾಯ್ತು ತರಕಾರಿ ಆಯಲು ಆರಂಭಿಸಿ. ನೀವು ಒಬ್ರೇ ಸರ್ ಹೀಗೆ ಕೇಳಿದ್ದು ಅಂದು ತನ್ನ ಭಾವುಕತೆಯನ್ನು ಮತ್ತೊಮ್ಮೆ ತಾಡಿಸಿ ಹೋದ.

‍ಲೇಖಕರು avadhi

September 18, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Archana H

    ಬಹಳ‌ ಚೆನ್ನಾಗಿದೆ… ಕಣ್ಣಾಲಿಗಳು ತುಂಬಿದವು ಹುಡುಗನ ಮಾತಿಗೆ…

    ಪ್ರತಿಕ್ರಿಯೆ
  2. T S SHRAVANA KUMARI

    ತುಂಬಾ ಚೆನ್ನಾಗಿದೆ. ಹುಡುಗನ ಮಾತು ಮನ ಕಲಕಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: