ಇಲ್ಲಿ ಜಗತ್ತು ಬೆಳ್ ಬೆಳಗ್ಗೆ ಕವಿತೆಗಳನ್ನು ಕುಡಿಯುತ್ತಾ ಕೂತಿದೆ…

ಸದಾಶಿವ ಸೊರಟೂರು

ನಾನು ಕುದಿಯುತ್ತಿರುವ ಚಹಾದ ಪಾತ್ರೆಯೊಳಗೆ ಇಣುಕುತ್ತೇನೆ. ಅದನ್ನು ಗಮನಿಸಿದ ಚಹಾ ಕಾಯಿಸುವವ ‘ನೋಡಿ ಸರ್, ಪಾತ್ರೆಯೊಳಗೆ ಕುದೀತಾ ಇರೋ ಈ ಹಾಲು, ಸಕ್ಕರೆ, ಪುಡಿಯಂತೆ ಬಾಳು ಕೂಡ ಕಷ್ಟದಲ್ಲಿ ಕುದಿಯಲೇಬೇಕು. ಕುದ್ದು ಕುದ್ದು ಕೊನೆಗೆ ಬಾಳಿಗೂ ಹದ ಈ ಚಹಾಕ್ಕೂ ಹದ..’ ಅಂತಾ ಅವಧೂತನಂತೆ ಮಾತಾಡುತ್ತಾನೆ.

ಚಹಾ ತಯಾರಿಸುವ, ಮಾರುವ, ಲೋಟ ತೊಳೆಯುವ ಗಡಿಬಿಡಿಯಲ್ಲೇ ಇಂತಹ ನೂರೆಂಟು ಮಾತಾಡ್ತಾನೆ ಅವನು. ಆಕಳಿಸಿ ಹಾಸಿಗೆಯಿಂದ ಎದ್ದು ಬಂದವನಿಗೆ ಅವನ ಚಹಾ ಜೊತೆಗೆ ಎರಡು ಮಾತುಗಳು ಮನಸ್ಸು ತುಂಬುತ್ತವೆ. ಆಮೇಲೆ ದಿನವೆಲ್ಲವೂ ಸಲೀಸು. ಇದು ನನ್ನ ಏಳೆಂಟು ವರ್ಷದ ರೊಟೀನು.

ಜಗತ್ತಿನ ಪಾಲಿಗೆ ಚಹಾ ಅನ್ನೋದೆ ಇಲ್ಲದೆ ಹೋಗಿದ್ರೆ ಅದೆಷ್ಟು ನಿಸ್ತೇಜವಾಗಿರೋದು ಅನಿಸುತ್ತೆ! ಈ ಬದುಕಿನಲ್ಲಿ ನನಗೆ ಚಹಾ ಜೊತೆಯಾದಷ್ಟು ಇನ್ಯಾರು ಆಗಿಲ್ಲ. ಒಂದು ಹೊಸ ಊರಿಗೆ ಕಾಲಿಟ್ಟರೆ ‘ಇಲ್ಲಿ ಛಲೋ ಚಹಾ ಎಲ್ಲಿ ಸಿಗುತ್ತೆ ಸ್ವಾಮಿ’ ಅಂತ ಕೇಳಿ ಅವರಿಂದ ವಿಚಿತ್ರ ನೋಟಗಳನ್ನು ಎದುರಿಸಿದ್ದೀನಿ.

ಇಲ್ಲಿ ಚಹಾ ನೆಪಕ್ಕೆ ಬೆಳ್ ಬೆಳಗ್ಗೆ ಸೇರುವ ಒಂದು ಸಣ್ಣ ಜಗತ್ತು ಇದೆಯಲ್ಲಾ ಅದು ಒಂದು ಅದ್ಭುತ ಕವನದಂತೆ ಕಾಡುತ್ತೆ! ಇಂಥದ್ದೊಂದು ಅಡ್ಡ ಎಲ್ಲ ಊರಲ್ಲೂ ಇರಬಹುದೇನೊ! ಇಲ್ಲಿ ಚಿಂತಾಮಣಿಯಿಂದ ಬೆಂಗಳೂರಿಗೆ ಓಡುವ ಜೋಡಿ ರಸ್ತೆಯ ಬದಿಯಲ್ಲಿ ಈ ಚಹಾದ ಗೂಡು ಹೊತ್ತು ಮೂಡುವ ಹೊತ್ತಿಗೆ ಲಕಲಕ.

ಚಹಾದ ಅಭಿಮಾನಿಗಳ ಕಲರವ. ಚಹಾ ಕುದಿಸುವವನ ಮಾತುಗಳು, ಎಳೆ ಬಿಸಿಲು, ಅವಳ ಪಕ್ಕೆಯಿಂದ ಹಾದು ಬಂದಂತಹ ಗಾಳಿ, ಸ್ಟವ್‍ನ ಬುರ್ರು ಬುರ್ರು ಸದ್ದು. ಆಗ ತಾನೇ ಕನಸುಗಳನ್ನು ಸವರಿಕೊಂಡು ಬಂದ ಹಿಂಡುಗಟ್ಟಲೆ ತಾಜಾ ಕಣ್ಣುಗಳು.. ನನಗೆ ಅದೆಲ್ಲಾ ಒಂದು ಕಾವ್ಯದಂತೆ ಭಾಸವಾಗುತ್ತದೆ.

ನನಗೆ ಎಷ್ಟೋ ಬಾರಿ ಅನಿಸಿದೆ ಬದುಕಿಗೆ ಏನಿಲ್ಲವೆಂದರೂ ಇಂಥದೊಂದು ಬೆಳಗು ಬೇಕು. ಅಂಥದೊಂದು ಚಹಾ ಕುದಿಸಿ ಕೊಡುವ ಗೂಡು ಬೇಕು. ಬೆತ್ತಲಾಗಿ ಮಲಗಿ ಎದ್ದ ತಣ್ಣನೆಯ ಖಾಲಿ‌ ರಸ್ತೆಯನ್ನು ನೋಡುತ್ತಾ ರಾತ್ರಿ ಓದಿದ ಯಾವುದೊ ಕವನದ ತುಣುಕುಗಳನ್ನು ನೆನಪಿಸಿಕೊಳ್ಳುತ್ತಾ ಒಂದು ಗುಟುಕು ಚಹಾ ಎಳೆದೆನೆಂದರೆ ಖಾತೆಯಲ್ಲಿ‌ರುವ ಲಕ್ಷಗಟ್ಟಲೆ ದುಡ್ಡನ್ನು ಡ್ರಾ ಮಾಡಿ ಬೆಂಕಿ ಹಚ್ಚಬೇಕು ಅನಿಸುತ್ತೆ!.

ನೂರಾರು ಜನರನ್ನು ಅವನೊಬ್ಬ ಹೇಗೆ ಸಂಭಾಳಿಸುತ್ತಾನೊ ಅನಿಸುತ್ತೆ! ಅರ್ಧ ಡಜನ್ ದಿನಪತ್ರಿಕೆಗಳನ್ನು ತಂದು ಹರಡಿಕೊಂಡು ಜನರ ಪ್ರತಿಚಳಿಗೂ ಕಾವು ತುಂಬುತ್ತಾನೆ. ಕಷ್ಟಗಳನ್ನು‌‌ ಸಿಗರೇಟ್ ಮೂಲಕ ಸುಡುತ್ತಾ ಜನ ಪೇಪರ್ ಹಿಡಿದು ಕೂತುಬಿಟ್ಟರೆ ಟ್ರಂಪ್ ಮತ್ತು ಪಕ್ಕದ ಮನೆ ಪಿಯುಸಿ ಹುಡುಗಿ ನೋಟ್ಸಿನ ಕೊನೆಯ ಪುಟದಲ್ಲಿ ಬರೆದುಕೊಂಡ ಲವ್ ಸಿಂಬಲ್‍ವರೆಗೂ ಚರ್ಚೆ. ಚಹಾ ಬಟ್ಟಲುಗಳು‌ ಒಂದರ ನಂತರ ಒಂದು ಖಾಲಿಯಾಗುತ್ತಿರುತ್ತವೆ. ಸಿಗರೇಟ್ ಬೇಡ ತೆಗಿರಪ್ಪ ಅಂದ್ರೆ ಅದು ಸೇದುವವರಿಗೆ ಮತ್ತೆ ಕಚಗುಳಿಕೊಟ್ಟಂತಾಗಿ ಮತ್ತೊಂದು ಹಚ್ಚಿ ಹೊಗೆ ಬಿಡುತ್ತಾರೆ.                                                                                                                                                                                                       

ನನಗೆ ಆಶ್ಚರ್ಯ ಆಗೋದು ಎಂತಹ ಅವಸರದಲ್ಲೂ, ಇಷ್ಟು ವರ್ಷಗಳಲ್ಲೂ ಒಂದು ಬಾರಿಯೂ ರುಚಿ ಹದಗೆಡಿಸದ ಅವನ ಪರಿಗೆ. ಎಂತಹ ಕವಿಯೂ ಅದೊಂದು ಟೈಮು ಅನ್ನೋದು ಬೇಕು ಅಂತಾನೆ. ಇವನಿಗೆ ಜಸ್ಟ್ ಬೆಳಗು ಅನ್ನುವ ನೆಪ ಸಾಕು. ಬಟ್ಟಲುಗಳಲ್ಲಿ ಚಹಾ ನೆಪದ ಬದುಕಿನ ರುಚಿ ಹಚ್ಚಿಸುತ್ತಾನೆ.

ಇದೆಲ್ಲಾ ನೋಡುತ್ತಾ ನೋಡುತ್ತಾ ಅದೆಷ್ಟು ಕವನಗಳು ಹುಟ್ಟುತ್ತವೆ ಎದೆಯಲ್ಲಿ.. ಬರೆದು ಬರೆದು ಹಗುರು ಮಾಡಿಕೊಳ್ಳುವ ಹೊಣೆಗೇಡಿತನಕ್ಕೆ ಮಾತ್ರ ಕೈಹಾಕಿಲ್ಲ. ಇಡೀ ಸಂದರ್ಭವನ್ನೇ ಒಂದು ಕವನದಂತೆ ಓದಿಕೊಳ್ಳುತ್ತೇನೆ. ಅವನು ತುಂಬಿ‌ ಕೊಡುವ ಪ್ರತಿ ಚಹಾದ ಬಟ್ಟಲು ಕೂಡ ಒಂದೊಂದು ಕವನದಂತೆ ಅನಿಸುತ್ತವೆ. ಇಲ್ಲಿ ಜಗತ್ತು ಬೆಳ್ ಬೆಳಗ್ಗೆ ಕವಿತೆಗಳನ್ನು ಕುಡಿಯುತ್ತಾ ಕೂತಿದೆ ಅನಿಸುತ್ತೆ.

ಇದೇನೊ ಕವಿಗೋಷ್ಠಿಯೊ ಅನ್ನುವ ಒಂದು ಸೊಗಸಾದ ಕಲ್ಪನೆ ನನಗೆ. ಪ್ರತಿಯೊಬ್ಬರ ನೋವು ಸಂಕಟ, ಖುಷಿಗಳೂ ಕೂಡ ಕವನಗಳಾಗಿ ಮೂಡುತ್ತವೆ. ದೂರದಿಂದ ನೋಡುವವರಿಗೆ ಅದೊಂದು ಸುಂದರ ಕಾವ್ಯದ  ವಾಲ್ ಪೈಂಟ್ ತರಹ ಕಂಡರೂ ಆಶ್ಚರ್ಯವಿಲ್ಲ!.

‍ಲೇಖಕರು avadhi

September 29, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Vasundhara k m

    ನಿಮ್ಮ ಈ ಬರಹ ಕೂಡ ಒಂದು ಕಾವ್ಯದಂತೆಯೇ ಓದಿಸಿಕೊಂಡಿತು ..

    ಪ್ರತಿಕ್ರಿಯೆ
  2. Archana H

    ವಾವ್ ಸೂಪರ್ ಮೇಸ್ಟ್ರೇ ನಾನು ಈಗ ಚಹಾ ಅಂಗಡಿ ಹುಡುಕಬೇಕು….

    ಪ್ರತಿಕ್ರಿಯೆ
  3. ಸಚಿನ್‌ಕುಮಾರ ಹಿರೇಮಠ

    ಚಹಾದ ಅಂಗಡಿ ಬದುಕಿನ ಅನೇಕ ಸೆಡವುಗಳಿಗೆ ಸಮಾಂತರ ನಿದರ್ಶನ..ಲೇಖನ‌ ಅದ್ಭುತ ಸರ್..

    ಪ್ರತಿಕ್ರಿಯೆ
  4. Raghavendra E Horabylu

    ತುಂಬಾ ಸುಂದರವಾದ ಕಾವ್ಯಾತ್ಮಕ ಲೇಖನ

    ಪ್ರತಿಕ್ರಿಯೆ
  5. T S SHRAVANA KUMARI

    ಬೆಳಗಾಗೆದ್ದು ಒಳ್ಳೆಯ ಚಹಾ ಸವಿದ ಹಾಗಾಯಿತು

    ಪ್ರತಿಕ್ರಿಯೆ
  6. Dr VH Shivakeerthi

    naane swathaha anubhavisidanthe anubhava needida lekhana khushi aytu geleya

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: