Love is a bird……She needs to fly……..
ಉದಯ್ ಇಟಗಿ
ಇಲ್ಲಿ ಈಗ ಭರ್ತಿ ಚಳಿ. ಅಂದರೆ ಇಲ್ಲೀಗ ಚಳಿಗಾಲದ ಪರ್ವಕಾಲ. ಅಬ್ಬಾ! ಅದ್ಯಾವ ಪರಿ ಚಳಿ ಎಂದರೆ ಒಳಗೆ ಥರ್ಮಲ್ ವೇರ್ಸ್, ಮೇಲೆ ದಪ್ಪದಪ್ಪನೆ ಉಣ್ಣೆ ಅಂಗಿ, ಕೈಗೆ ಗ್ಲೌಸುಗಳನ್ನು ಹಾಕಿಕೊಂಡು ಕುಳಿತರೂ ಗಡಗಡ ನಡುಗಿಸುವ ಈ ಚಳಿ ನಮ್ಮ ಮೈ ಮನಸ್ಸುಗಳನ್ನು ಮರಗಟ್ಟಿಸಿಬಿಡುತ್ತದೆ. ಎಲ್ಲಿ ಹೋದರೂ ಬಿಡದ ಈ ಚಳಿ ನಮ್ಮನ್ನು ಬಲವಂತವಾಗಿ ಹೀಟರ್ ಗಳ ಮುಂದೆ ಎಳೆದು ತಂದು ಕೂರಿಸಿಸಿಬಿಡುತ್ತದೆ. ಹೀಗೆ ಹೀಟರ್ ಮುಂದೆ ಕುಳಿತುಕೊಂಡು ಮೈ ಕಾಯಿಸಿಕೊಳ್ಳುತ್ತಿದ್ದಂತೆ ಮರಗಟ್ಟಿದ ಮೈ ನಿಧಾನವಾಗಿ ಸಡಿಲವಾಗತೊಡಗುತ್ತದೆ. ಮೈ ಬೆಚ್ಚಗಾಗುತ್ತಿದ್ದಂತೆ ಮನಸ್ಸು ಕೂಡಾ ತಾನೇ ತಾನಾಗಿ ಅದೆಂಥದೋ ಬೆಚ್ಚಗಿನ ಭಾವಕ್ಕೆ ಒಳಗಾಗಿ ಬಿಡುತ್ತದೆ. ಸ್ವಲ್ಪ ಹೊತ್ತು ಮೈ ಕಾಯಿಸಿಕೊಳ್ಳುವದು, ಮತ್ತೆ ಹೀಟರ್ ನಿಂದ ಹಿಂದೆ ಸರಿಯೋದು. ಮೈ ಕಾಯಿಸಿಕೊಳ್ಳುವದು, ಮತ್ತೆ ಹೀಟರ್ ನಿಂದ ಹಿಂದೆ ಸರಿಯೋದು. ಹೀಗೆ ಸಾಗುತ್ತಲೇ ಇರುತ್ತದೆ.
ಈ ಚಳಿಗೆ ಒಮ್ಮೊಮ್ಮೆ ಗುಂಡು (ಗಡಾಫಿ ಇರಬೇಕಾದರೆ ಸಿಗುತ್ತಿರಲಿಲ್ಲ. ಆದರೆ ಈಗ ಧಾರಾಳವಾಗಿ ಸಿಗುತ್ತದೆ.) ಹಾಕಬೇಕೆನಿಸುತ್ತದೆ. ಆದರೆ ಸರಿಯಾದ ಕಂಪನಿಯಿಲ್ಲ ಎಂದು ಸುಮ್ಮನಾಗುತ್ತೆನೆ. ಈ ನಡುವೆ ಮನಸ್ಸು ಕೆಡಿಸುವ ಮತ್ಸ್ಯಗಂಧಿಯರು ಇಲ್ಲಿಂದ ಹೊರಟುಹೋಗಿದ್ದಾರೆ. ಮನಸ್ಸು ಬರಗೆಟ್ಟುಹೋಗಿದೆ. ಎಲ್ಲ ಇದ್ದೂ ಇನ್ನೆನನ್ನೋ ಬಯಸುತ್ತದೆ. ಹೋಗಲಿ ಚಳಿಗೆ ಒಂದಷ್ಟು ಕುರುಕುಲು ತಿಂಡಿಗಳನ್ನಾದರು ತಿನ್ನೋಣವೆಂದರೆ ಅವನ್ನೂ ತಿನ್ನುವಹಾಗಿಲ್ಲ. ಹಾಗಂತ ಡಾಕ್ಟರ್ ಹೇಳಿದ್ದಾರೆ. ಏಕೆಂದರೆ ಅದು ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯಕ್ಕೆ ತೊಂದರೆಯೆಂದೂ ನಾನು ಡಯಾಬಿಟಿಕ್ ಆಗಿರುವದರಿಂದ ಹುಶಾರಾಗಿರಬೇಕೆಂದೂ ಅವರು ಎಚ್ಚರಿಸಿದ್ದಾರೆ.
ಈ ನಡುವೆ ಇಲ್ಲೀಗ ಇಂಟರ್ನೆಟ್ ಇರುವದಿಲ್ಲ. ಅದೇನೋ ಸಮಸ್ಯೆಯಂತೆ. ವಾರಕ್ಕೊಮ್ಮೆ ಬರುತ್ತದೆ. ಸ್ವಲ್ಪಹೊತ್ತು ಇದ್ದು ಮತ್ತೆ ಹೋಗುತ್ತದೆ. ಆ ಸ್ವಲ್ಪಹೊತ್ತಿನಲ್ಲಿಯೇ ಇಂಟರ್ನೆಟ್‍ಲ್ಲಿ ಏನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಮಾಡುತ್ತೇನೆ. ಅಂದಹಾಗೆ ಇಂಟರ್ನೆಟ್ ಇಲ್ಲದೆ ಹುಚ್ಚನಾಗಿದ್ದೇನೆ. ಹೀಗೆ ಬಿಟ್ಟರೆ ಹುಚ್ಚನಾಗಿ ಹೋಗುತ್ತೆನೆಂದುಕೊಂಡು ಮಧುರ್ ಭಂಡಾರಕರ್ ಸಿನಿಮಾಗಳು ಹಾಗೂ ಮಡೋನಾಳ ಹಾಡುಗಳಲ್ಲಿ ಕಳೆದುಹೋಗಿದ್ದೇನೆ.
ಅದಾಗಲೇ ಡೌನ್‍ಲೋಡ್ ಮಾಡಿಟ್ಟುಕೊಂಡಿದ್ದ ಮಧುರ್ ಭಂಡಾರಕರ್ ಅವರ ಸಿನಿಮಾಗಳಷ್ಟನ್ನೂ ನೋಡುತ್ತಿದ್ದೇನೆ. ಪೇಜ್ 3, ಫ್ಯಾಷನ್, ದಿಲ್ ತೋ ಬಚ್ಚಾ ಹೈ, ಟ್ರಾಫಿಕ್ ಸಿಗ್ನಲ್, ಜೈಲ್, ಕಾರ್ಪೋರೇಟ್, ಹೀರೋಯಿನ್, ಮುಂತಾದ ಸಿನಿಮಾಗಳನ್ನು ಅದೆಷ್ಟನೇ ಬಾರಿ ನೋಡಿದ್ದೇನೋ ಗೊತ್ತಿಲ್ಲ. ಆದರೆ ಪ್ರತಿಸಾರಿ ನೋಡಿದಾಗೊಮ್ಮೆ ಅದೇನೋ ಹೊಸತನ್ನು ಹೇಳುತ್ತವೆ. ಮಧುರ್ ಭಂಡಾರಕರ್ ಅವರು ಆಯಾಯ ಕ್ಷೇತ್ರದ ನಗ್ನಸತ್ಯಗಳನ್ನು ಮುಖಕ್ಕೆ ರಾಚುವಂತೆ ಹಿಡಿಯುತ್ತಾರಲ್ಲದೆ ಆಧುನಿಕ ಬದುಕಿನ ವೈಪರಿತ್ಯಗಳನ್ನು ಇವು ಹೀಗ್ಹೀಗೆ ಅಂತಾ ಕಡ್ದಿಮುರಿದ ಹಾಗೆ ಹೇಳಿಬಿಡುತ್ತಾರೆ. ಅಂದಹಾಗೆ ಅವರ “ಸತ್ತಾ” ಮತ್ತು “ಚಾಂದನಿ ಬಾರ್” ಸಿನಿಮಾಗಳ ಲಿಂಕ್ ಸಿಗುತ್ತಿಲ್ಲ. ಯಾರಿಗಾದರು ಗೊತ್ತಿದ್ದರೆ ನನಗೆ ಕಳಿಸಿಕೊಡಿ.
ಇನ್ನು ಮಡೋನಾಳ ಹಾಡುಗಳನ್ನು ಇಷ್ಟಪಡದವರ್ಯಾರಿದ್ದಾರೆ? ಆಕೆಯ ಮಾದಕ ದನಿಯು ಅದೆಂಥದೋ ಮತ್ತಲ್ಲಿ ನಮ್ಮನ್ನು ತೇಲಿಸದಿದ್ದರೆ ಕೇಳಿ. ಅವಳ “Ray of Light” ಎನ್ನುವ ಆಲ್ಬಂನ “Frozen” ಎನ್ನುವ ಹಾಡನ್ನು ಅದೆಷ್ಟು ಸಾರಿ ಕೇಳಿದ್ದೇನೆಯೋ! ಹುಡುಗಿಯೊಬ್ಬಳು ತನ್ನ ಪ್ರಿಯಕರನಿಂದ ದೂರವಾಗಿ ನರಳುವ ಹಾಗೂ ಮತ್ತೆ ಅವನಿಗಾಗಿ ಹಂಬಲಿಸುವ ಪರಿಯನ್ನು ತಮ್ಮ ಮಾದಕ ಕಂಠದಲ್ಲಿ ಹಾಡತ್ತಾ ಕೆಳುಗರ ಮನವನ್ನು ತಟ್ಟಿಬಿಡುತ್ತಾರೆ. ಅದೇಕೋ ಗೊತ್ತಿಲ್ಲ. ಈ ಹಾಡು ನನಗೆ ತುಂಬಾ ಇಷ್ಟವಾಯಿತು. ನೋವಿನಲ್ಲೂ ಅದೆಂಥದೋ ಮಾದಕತೆಯಿರುತ್ತದೆ. ನಾವದನ್ನು ಇಷ್ಟಪಡಬೇಕಷ್ಟೆ. ಒಂದೊಂದು ಸರ್ತಿ ಪ್ರೀತಿಯ ಸುಖದ ಭಾವಕ್ಕಿಂತ ಅದರ ನೋವಿನ ಭಾವವೇ ಹೆಚ್ಚು ಇಷ್ಟವಾಗುತ್ತದೆ, ಆಪ್ತವಾಗುತ್ತದೆ. ಏಕೆಂದರೆ ಪ್ರಿತಿಯಲ್ಲಿ ಸುಖವಾಗಿರುವರಿಗಿಂತ ನರಳುವವರೇ ಹೆಚ್ಚು. ಅವರ ಈ ನರಳಾಟ, ತೊಳಲಾಟಗಳು ಜಗತ್ತಿನಲ್ಲಿ ಇನ್ನೂ ಪ್ರೀತಿಯಿದೆ ಎನ್ನುವದನ್ನು ಪ್ರತಿಪಾದಿಸುತ್ತದೆ.
ಈ ನಡುವೆ ನನ್ನ ಜೋರ್ಡಾನಿ ಸಹೋದ್ಯೋಗಿಗಳು ನನ್ನನ್ನು ತಾಜಮಹಲ್ ಬಗೆಗಿನ ಕಥೆಯನ್ನು ಹೇಳುವಂತೆ ಕೇಳುತ್ತಾರೆ. ಅವರಿಗೆಲ್ಲಾ ತಾಜ್ ಮಹಲ್‍ವೆಂದರೆ ಭಾರತ, ಭಾರತವೆಂದರೆ ತಾಜ್ ಮಹಲ್. ತಾಜ್‍ಮಹಲ್‍ದು ಒಂದು ನೋವಿನ ಕಥೆಯೇ ಅಲ್ಲವೇ? ನಾನದರ ಕಥೆಯನ್ನು ಹೇಳುತ್ತಿದ್ದಂತೆ ಅವರೆಲ್ಲಾ ಷಹಜಾನ್‍ನ ಅದ್ಭುತ ಪ್ರೀತಿಗೆ ಬೆರಗಾಗುತ್ತಾರೆ. ಅದರ ಹಿಂದಿನ ಕಥೆ ಕೇಳಿ ಕಣ್ಣೀರಾಗುತ್ತಾರೆ. ನಾವೂ ಒಂದು ಸಾರಿ ಅದನ್ನು ನೋಡಬೇಕು. ನಾವು ಭಾರತಕ್ಕೆ ಬಂದರೆ ನಮಗೆ ಅದನ್ನು ತೋರಿಸುತ್ತೀಯಾ? ಎಂದು ಕೇಳುತ್ತಾರೆ. ತಾವೂ ಷಹಜಾನ್‍ರಾಗಬೇಕೆಂದು ಹಂಬಲಿಸುತ್ತಾರೆ. ಅದಕ್ಕೂ ಮೊದಲು ನಿಮ್ಮ ಹೆಂಡಿರು ಮಮ್ತಾಜ್ ಮಹಲ್‍ರಾಗಲು ಅರ್ಹರಿದ್ದಾರೆಯೇ? ನೋಡಿಕೊಳ್ಳಿ ಎಂದು ನಾನು ತಮಾಷೆ ಮಾಡುತ್ತೇನೆ. ಅವರು ಜೋರಾಗಿ ನಗತೊಡಗುತ್ತಾರೆ.
ನಾನು ಅಷ್ಟಕ್ಕೆ ಸುಮ್ಮನಿರದೆ ಷಹಜಾನ್ ತಾಜ್‍ಮಹಲ್‍ನ್ನು ಕಟ್ಟಿ ಮುಗಿಸಿದ ಬಳಿಕ ಅಂಥದೊಂದು ಸ್ಮಾರಕವನ್ನು ಬೇರೆಲ್ಲೂ ಕಟ್ಟಬಾರದು ಎಂಬ ಕಾರಣಕ್ಕೆ ಅದನ್ನು ಕಟ್ಟಿದ ಅಷ್ಟೂ ಜನರ ಕೈಗಳನ್ನು ಕತ್ತರಿಸಿದ ಕಥೆಯನ್ನೂ ಹೇಳತ್ತೇನೆ. ಅವರು ಬೆಚ್ಚಿಬೀಳುತ್ತಾರೆ. ಪ್ರೀತಿಯಲ್ಲಿ ಕ್ರೌರ್ಯವೂ ಇದೆಯಾ? ಎಂದು ಕೇಳತ್ತಾರೆ. ನಾನು ಪ್ರೀತಿಯಲ್ಲಿ ಏನೇನಿಲ್ಲ ಹೇಳಿ? ಎಂದು ಅವರನ್ನೇ ಕೇಳುತ್ತೆನೆ. ಅದಕ್ಕವರು ಹಾಗಾದರೆ ನಾವು ಷಹಜಾನ್ ಆಗಲಾರೆವು ಎಂದು ಹೇಳುತ್ತಾರೆ. ನಾನು ಸುಮ್ಮನೆ ನಗುತ್ತೇನೆ.
Love is a bird… she needs to fly
Let all the hurt inside of you die
You’re frozen… when your heart’s not open
ಇವು “Frozen” ಹಾಡಿನ ಮಧ್ಯದ ಸಾಲುಗಳು. ಪ್ರೀತಿಯೊಳಗೆ ಅಷ್ಟೆಲ್ಲಾ ನೋವಿದೆಯೆಂದು ಗೊತ್ತಿದ್ದೂ ನಾವು ಮತ್ತೆ ಮತ್ತೆ ಅದಕ್ಕಾಗಿ ಹಂಬಲಿಸುವದೇಕೆ? ಈ ಪ್ರಶ್ನೆಗೆ ಬಹುಶಃ ಉತ್ತರವಿಲ್ಲವೇನೋ! ಅಂದಹಾಗೆ ನನಗೇನೋ ಈ ಹಾಡು ತುಂಬಾ ಇಷ್ಟವಾಯಿತು. ನಿಮಗೂ ಇಷ್ಟವಾಗಬಹುದೆಂದುಕೊಂಡು ಅದನ್ನಿಲ್ಲಿ ಹಾಕಿದ್ದೇನೆ. ಬೇಕಿದ್ದರೆ ಡೌನ್‍ಲೋಡ್ ಮಾಡಿಕೊಳ್ಳಿ.
ಇವೆಲ್ಲದರ ನಡುವೆ ಒಂದೆರೆಡು ಲೇಖನಗಳನ್ನು ಬರೆದಿಟ್ಟಿದ್ದೇನೆ. ಇಂಟರ್ನೆಟ್ ಬಂದ ತಕ್ಷಣ ನನ್ನ ಬ್ಲಾಗಿನಲ್ಲಿ ಹಾಕುವೆ. ಶೀಘ್ರದಲ್ಲಿಯೇ “ಅವಧಿ” ಯಲ್ಲಿ ಲಿಬಿಯಾದಲ್ಲಿನ ನನ್ನ ಅನುಭವಗಳನ್ನು ಕುರಿತಂತೆ ನನ್ನ ಅಂಕಣವೊಂದು ಶುರುವಾಗಬಹುದು. ಈಗಲೇ ಖಚಿತವಾಗಿ ಏನೂ ಹೇಳಲಾರೆ.






0 Comments