ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿದೆ ಜಯಂತ ಕಾಯ್ಕಿಣಿಯವರ 'ಟೂರಿಂಗ್ ಟಾಕೀಸ್'!

ಸಿನೆಮಾ ಜಗತ್ತಿನ ಒಳ ಆವರಣದ ಅನಾವರಣ

ಡಾ.ಎಸ್.ಬಿ.ಜೋಗುರ

ಜಯಂತ ಕಾಯ್ಕಿಣಿಯವರ ‘ಟೂರಿಂಗ್ ಟಾಕೀಸ್’ ಓದುತ್ತಿದ್ದಂತೆ ನನ್ನೂರಿನ ನಟರಾಜ ಟೂರಿಂಗ್ ಟಾಕೀಸ್ ನೆನಪಾಯಿತು. ಅದು 1975-76 ರ ಸಂದರ್ಭ. ನೆಲ 70 ಪೈಸೆ ಇದ್ದ ಕಾಲದಲ್ಲಿ ಕೈ ಮಾಡಿದರೆ ಸಾಕು ತೆರೆಗೆ ತಾಗುವಷ್ಟು ಹತ್ತಿರ ಕುಳಿತು ಶ್ರೀಕೃಷ್ಣ ದೇವರಾಯ ಸಿನೇಮಾ ನೋಡಿದ ನೆನಪಾಯಿತು. ಹಾಗೆಯೇ ಈ ಕೃತಿ ಪುಟ್ಟಸ್ವಾಮಿಯವರ ‘ಸಿನೇಮಾಯಾನ’ ಮತ್ತು ಮನುಚಕ್ರವರ್ತಿಯವರ ‘ಮಾಧ್ಯಮಮಾರ್ಗ’ ದಂತಹ ಕೃತಿಗಳನ್ನು ನೆನಪುಮಾಡಿಕೊಟ್ಟಿತು.

ಮನುಚಕ್ರವರ್ತಿಯವರ ಸಿನೇಮಾ ಕುರಿತ ಬರವಣಿಗೆಗಳು ಒಂದು ಬಗೆಯ ಸಾಂಸ್ಕೃತಿಕ ಜಗತ್ತನ್ನು ಆತ್ಯಂತಿಕ ಗಂಭೀರವಾದ ನೆಲೆಯಲ್ಲಿ ಯೋಚಿಸಲು ಹಚ್ಚುತ್ತದೆ. ಜಯಂತರ ಬರವಣಿಗೆಗಳು ಯಥಾಪ್ರಕಾರ ಲವಲವಿಕೆಯಿಂದ ಓದುಗನನ್ನು ಆಪ್ತವಾಗಿ ಒಳಗೊಳ್ಳ್ಲುತ್ತಾ ಸಾಗುತ್ತದೆ. ಎಲ್ಲೂ ಟೂರಿಂಗ್ ಟಾಕೀಸ್ ಬೋರ್ ಹೊಡೆಸುವದಿಲ್ಲ ಎನ್ನುವ ಮಾತು ಜಯಂತರ ಬರವಣಿಗೆಗೆಯ ಕಸುಬುದಾರಿಕೆಗೆ ಸಲ್ಲುತ್ತದೆ.

ಯಾವದೇ ಪ್ರಕಾರದ ಬರವಣಿಗೆಯಿರಲಿ ಅದನ್ನು ಆಯಾ ಪ್ರಕಾರದ ಸ್ವರೂಪಕ್ಕೆ ಸಂಬಂಧಿಸಿದಂತೆ ಭಾಷೆಯನ್ನು ಸಂಭಾಳಿಸುವ, ದುಡಿಸಿಕೊಳ್ಳುವ ನಯಗಾರಿಕೆ ಜಯಂತರಿಗೆ ಮಾತ್ರ ಸಾಧ್ಯವೇನೋ..? ಈ ಟೂರಿಂಗ್ ಟಾಕೀಸ್ ನ್ನು ಓದಿ ಮುಗಿಸಿದ ಮೇಲೆ ಸಿನೇಮಾ ಜಗತ್ತಿನ ಬಗೆಗೆ ಒಂದು ಬಗೆಯ ಗೌರವ ಮೂಡುವಲ್ಲಿ ಈ ಕೃತಿ ಕಾರಣವಾಯಿತು. ಸಿನೆಮಾ ಜಗತ್ತು ಸಾಹಿತ್ಯಕ ವಲಯದಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ನಗಣ್ಯ ಎನ್ನುವಂತಾಗಿದ್ದು ಕರ್ನಾಟಕದ ಮಟ್ಟಿಗಂತೂ ಹೌದು.

ಅಲ್ಲಿಯ ಚಿತ್ರಕತೆ, ಸಂಗೀತ, ಸಾಹಿತ್ಯ, ಗೀತೆಗಳು, ವಿನ್ಯಾಸ, ಹಿನ್ನೆಲೆ ಸಂಗೀತ, ಬೆಳಕು ಮುಂತಾದವುಗಳು ಇವತ್ತಿಗೂ ನಮ್ಮಲ್ಲಿ ಒಂದು ಅಧ್ಯಯನದ ಶಿಸ್ತಾಗಿ ಅವತರಿಸಿಲ್ಲ. ಸಾರಾಸಗಟಾಗಿ ಇಲ್ಲಿಯ ಒಳ್ಳೆಯದನ್ನೂ ನಿರ್ಲಕ್ಷಿಸುವ ಕ್ರಮದ ನಡುವೆ ಈ ಬಗೆಯ ಕೃತಿಗಳು ಸಿನೇಮಾ ಒಂದು ಅಧ್ಯಯನದ ಶಿಸ್ತಿಗೆ ಒಳಪಡುವ ಅಗತ್ಯವಿದೆಯಲ್ಲ..! ಎನಿಸುವಂತೆ ಮಾಡುತ್ತದೆ.

ಸಾಮಾನ್ಯನಿಗೆ ಒಂದು ಸಿನೆಮಾದ ಹೊರ ಆವರಣದ ಗ್ರಹಿಕೆ ಮಾತ್ರ ಸಾಧ್ಯ. ಜಯಂತರಂಥಾ ಸೂಕ್ಷ್ಮಗ್ರಾಹಿಗಳಿಗೆ ಸಿನೇಮಾದ ಒಳ ಆವರಣಗಳು ಮಾತ್ರವಲ್ಲದೇ ಅಲ್ಲಿಯ ಸೂಕ್ಷ್ಮಾತಿ ಸೂಕ್ಷ್ಮವಾದ ಸಂಗತಿಗಳು ಕೂಡಾ ಮುಖ್ಯವಾಗುತ್ತವೆ. ಹಾಗಾಗಿಯೇ ಟೂರಿಂಗ್ ಟಾಕೀಸ್ ಒಂದು ಮಾಮೂಲಾದ ಸಿನೇಮಾ ಕುರಿತ ಬರವಣಿಗೆ ಎನಿಸದೇ ಅದರಲ್ಲಿಯ ಅಗಾಧತೆಯ ಅನುಭವವನ್ನು ಮನದಟ್ಟುಮಾಡಿಸುವ ಒಂದು ಮೌಲಿಕ ಕೃತಿಯಾಗಿ ನಿಲ್ಲುತ್ತದೆ.

ಕಲಾತ್ಮಕ ಸಿನೇಮಾ ಒಂದರಲ್ಲಿಯ ಸಂಭಾಷಣೆಯ ನಡುವಿನ ಮೌನದ ಸ್ಪೇಸ್ ಕೂಡಾ ಎಷ್ಟು ಮುಖ್ಯವಾಗುತ್ತದೆ ಎನ್ನುವಂಥಾ ಆತ್ಯಂತಿಕವಾದ ಸೂಕ್ಷ್ಮಗಳನ್ನು ಗ್ರಹಿಸಿ ಜಯಂತ ಟೂರಿಂಗ್ ಟಾಕೀಸ್ ರೂಪಿಸಿದ್ದಾರೆ. ‘ಸಿನೆಮಾಯಾನ’ ಕೃತಿಯ ತರುವಾಯ ಸಿನೇಮಾ ಜಗತ್ತಿಗೆ ಸಂಬಂಧಿಸಿದ ಮತ್ತೊಂದು ಅಪರೂಪದ ಕೃತಿ ಇದು. ಇಲ್ಲಿರುವ ಬಹುತೇಕ ಬರಹಗಳು ‘ರೂಪತಾರಾ’ ದಲ್ಲಿ ಅಂಕಣ ಬರಹಗಳಾಗಿ ಮೂಡಿಬಂದರೂ ಅವುಗಳನ್ನು ಓದದಿರುವ ನನ್ನಂಥ ಅನೇಕರಿಗೆ ಈ ಕೃತಿ ವಿಶಿಷ್ಟವೆನಿಸುತ್ತದೆ.

 

‍ಲೇಖಕರು avadhi

15 May, 2013

1 Comment

  1. ಉದಯಕುಮಾರ್ ಹಬ್ಬು

    ನಿಮ್ಮ ಲೇಖನ ಜಯಂತರನ್ನು ಓದುವಂತೆ ಪ್ರೇರಣೆ ನೀಡಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading