ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲವಾದರು 'ರಾಯರು'

ಯಕ್ಷಗಾನದಲ್ಲೂ ಸಾಹಿತ್ಯ ಇದೆ ಎಂದು ಸಮ್ಮೇಳನಗಳ ಮಹಾಪೂರವನ್ನೇ ಹರಿಸಿದ
ಬಹುಮುಖ ಸಂಘಟಕ,  ಹಲವು ಸಂಘಟನೆಗಳ ಅಧ್ಯಕ್ಷ ಮುಂಬಯಿಯ
ಎಚ್. ಬಿ . ಎಲ್ .ರಾವ್  ಇನ್ನು ನೆನಪು ಮಾತ್ರ.
———–
ಶ್ರೀನಿವಾಸ ಜೋಕಟ್ಟೆ, ಮುಂಬಯಿ.
ದೇಶವೇ ಲಾಕ್ಡೌನ್ ಸ್ಥಿತಿಯಲ್ಲಿರುವ ಈ ವರ್ತಮಾನದಲ್ಲಿ  ಮನೆಯಿಂದ ಹೊರ ಕಾಲಿಡಲು ಪ್ರತಿಯೊಬ್ಬರೂ  ಭಯಪಡುವಂಥಹ ಅತ್ಯಂತ ಗಂಭೀರ ದೃಶ್ಯಗಳ ನಡುವೆ  ಆಘಾತಪಡಬೇಕಾದ, ಒಬ್ಬರಿಗೊಬ್ಬರು ಒಂದು ಮೀಟರ್ ಅಂತರ ಕಡ್ಡಾಯ ಇಟ್ಟುಕೊಳ್ಳಬೇಕಾದ ಸ್ಥಿತಿಯಲ್ಲಿ ನಮ್ಮ ಮುಂಬೈಯ ಹರಸಾಹಸ, ಕಲಾತಪಸ್ವಿ, ಮುಂಬೈ ಕನ್ನಡ ಸೇನಾನಿ, ಕ.ಸಾ.ಪ. ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ, ಪದವೀಧರ ಯಕ್ಷಗಾನ ಸಮಿತಿಯ ಅಧ್ಯಕ್ಷ, ಸಾಹಿತ್ಯ ಬಳಗದ ಅಧ್ಯಕ್ಷ…. ಎಚ್ .ಬಿ .ಎಲ್. ರಾವ್ ನಮ್ಮನ್ನು ಎಪ್ರಿಲ್ 22 ರ ಮುಂಜಾನೆ ಅಗಲಿ ಬಿಟ್ಟರು.
ಬದುಕಿನ ಕೊನೆಯ ತನಕವೂ ಮುಂಬೈಯಲ್ಲಿ ಆಗಬೇಕಾದ ಭಾವೀ ಕಾರ್ಯಕ್ರಮಗಳ ಯೋಜನೆಗಳನ್ನು ರೂಪಿಸಿಕೊಳ್ಳುತ್ತ ಅದನ್ನು ಇತರ ಮಿತ್ರರಲ್ಲಿ ಹಂಚಿಕೊಳ್ಳುತ್ತಾ ಆಯಾಯ ಲೇಖಕರಿಗೆ ಬರೆಯಬೇಕಾದುದನ್ನೆಲ್ಲ ಬರೆಸುತ್ತಾ ಇದ್ದಂತಹ  ರಾಯರು ಕೆಲವರಿಗಷ್ಟೇ ಅಂತಿಮ ದರ್ಶನದ ಭಾಗ್ಯವನ್ನು ಕರುಣಿಸಿ ಇತಿಹಾಸದ ಪುಟಗಳಿಗೆ ಸೇರಿಹೋದರು.
ರಾಯರು ನನಗೆ ಎಂಭತ್ತರ ದಶಕದಿಂದಲೂ ಪರಿಚಿತರು. ಅದರಲ್ಲೂ ‘ತಾಯಿನುಡಿ’ ಪತ್ರಿಕೆಯ ಮೂಲಕವೂ ಅವರು ನನಗೆ ಹೆಚ್ಚು ಪರಿಚಿತರು. ಎಲ್ಲರಂತೆ ನಾನೂ ಅವರೂ ಸಾಕಷ್ಟು ವಾದ ಚರ್ಚೆಗಳನ್ನು ಮಾಡಿದವರೇ.
“ಸಾಹಿತ್ಯದಲ್ಲಿ ದಲಿತ ಬಲಿತ ಕಲಿತ ಅಂತೇನೂ ಇಲ್ಲ” ಎಂದು ಕ.ಸಾ.ಪರಿಷತ್  ನ ಎಪ್ಪತ್ತರ ದಶಕದ ಅಧ್ಯಕ್ಷರು ಹೇಳಿದ ನಂತರ ಹೇಗೆ ಬಂಡಾಯ ಸಾಹಿತ್ಯ ಸಂಘಟನೆ , ಸಮ್ಮೇಳನ ಕಾಣಲು  ಕಾರಣವಾಯ್ತೋ ಅಂಥದ್ದೇ ಮತ್ತೊಂದು ಘಟನೆ ಮುಂಬಯಿಯಲ್ಲೂ  ಅದೇ ಕಾಲಕ್ಕೆ ನಡೆದಿತ್ತು ಎನ್ನುವುದು ಈಗಿನ‌ ಪೀಳಿಗೆಗೆ ಬಹುಷ  ತಿಳಿದಿರಲಿಕ್ಕಿಲ್ಲ.
ಮುಂಬಯಿಯಲ್ಲಿ ಜರಗಿದ 1981 ರ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನ ಗೋಷ್ಟಿಗೆ ಅವಕಾಶ ನಿರಾಕರಿಸಲಾಗಿತ್ತು. ಅದರ ಪ್ರತಿಭಟನೆಯಾಗಿ ಮುಂದೆ  ಪದವೀಧರ ಯಕ್ಷಗಾನ ಸಮಿತಿಯ ಮೂಲಕ  “ಪರ್ಯಾಯ ಯಕ್ಷಗಾನ  ಸಾಹಿತ್ಯ ಸಮ್ಮೇಳನ”ವನ್ನೇ ಮುಂಬಯಿಯಲ್ಲಿ  ನಡೆಸಿದ ಮಹಾನ್ ವ್ಯಕ್ತಿ ಎಚ್. ಬಿ.ಎಲ್ ರಾವ್. ಮೂರು ದಶಕಗಳಿಗೂ ಹೆಚ್ಚು ಕಾಲ ಈ ಪರ್ಯಾಯ ಯಕ್ಷಗಾನ ಸಾಹಿತ್ಯ ಸಮ್ಮೇಳನ ಮುಂಬಯಿಯಲ್ಲಿ ನಡೆಯಿತು.

ಈ ಮಾತುಗಳಿಂದ ಅದನ್ನು ಇನ್ನಷ್ಟು ಸ್ಪಷ್ಟಪಡಿಸುವೆ–
” ದಿನಾಂಕ10,11 ಅಕ್ಟೋಬರ್ 1981 ರಂದು  ಮುಂಬಯಿಯ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ನಡೆದ ಮುಂಬಯಿ‌ ಕನ್ನಡಿಗರ ಮೂರನೆಯ ಸಾಹಿತ್ಯ ಸಮ್ಮೇಳನದಲ್ಲಿ ಪೂರ್ವಾಗ್ರಹ ಪೀಡಿತರಾಗಿ ದ್ದ ಕಾರ್ಯಾಧ್ಯಕ್ಷ ವ್ಯಾಸರಾಯ ಬಲ್ಲಾಳರು ಮತ್ತು ಸದಸ್ಯರು ಯಕ್ಷಗಾನ ಎನ್ನುವ ಶಬ್ದವು ವಿಚಾರಗೋಷ್ಠಿಯಲ್ಲಿ ಬಾರದಂತೆ ಜಾಗ್ರತೆ ವಹಿಸಿದ್ದರು. ಮುಂಬೈಯಲ್ಲಿ ಕನ್ನಡ ಭಾಷೆಯ ಜಾಗೃತಿಗೆ ಕಾರಣ ರಾತ್ರಿ ಶಾಲೆ ಮತ್ತು ಯಕ್ಷಗಾನ .ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವೇದಿಕೆಯಲ್ಲಿ ಭಾಷಣ ಬಿಗಿದು ಬರ್ಕಾಸ್ತುಗೊಳ್ಳುವ ಸಮ್ಮೇಳನಗಳಿಂದ ಅಲ್ಲ.” ಇದು ಎಚ್ ಬಿ ಎಲ್ ರಾವ್ ಅವರ  ಕ್ರಾಂತಿಕಾರಿ ನಿಲುವಾಗಿ ದಾಖಲು ಗೊಂಡಿತು.
ಈ ಪ್ರತಿಭಟನೆಯ  ಕರಪತ್ರವು  23.05.1982 ರಂದು ಪದವೀಧರ ಯಕ್ಷಗಾನ ಸಮಿತಿಯ ವಾರ್ಷಿಕೋತ್ಸವದ ಆಮಂತ್ರಣದ ಹಿಂಬದಿ ಪುಟದಲ್ಲಿ ಮುದ್ರಣವಾಗಿತ್ತು.  ಆವಾಗಲೇ ರಾಯರು ಮುಂಬಯಿಯಲ್ಲಿ  ಸಾಹಿತಿಗಳಿಗೆ ಸಡ್ಡು ಹೊಡೆಯಲು  ಹಿಂಜರಿದಿರಲಿಲ್ಲ.
ತನ್ನ ನೇರ ಮಾತುಗಳಿಂದ ರಾಯರು  ಆಗಲೇ ಪರಿಚಿತರಾಗಿದ್ದರು. ಶತ್ರುಗಳನ್ನೂ ಸಂಪಾದಿಸಿದ್ದರು. ನಾನು ಎಂಭತ್ತರ ದಶಕದ ಮಧ್ಯಕಾಲದಲ್ಲಿ  ಮುಂಬಯಿಯ ತಾಯಿನುಡಿ ಪತ್ರಿಕೆಯ ಸಂಪಾದಕ ಡಿ.ಕೆ.ಮೆಂಡನ್ ರ  ಸ್ನೇಹಿತನಾಗಿದ್ದೆ. ಅವರೇ ನನ್ನ ಆರಂಭದ ಪತ್ರಿಕಾರಂಗದ ಗುರುಗಳು. ಆದರೆ ತಾಯಿನುಡಿಗೂ  ಎಚ್ ಬಿ.ಎಲ್. ರಾಯರಿಗೂ ನಂಟು ಅಷ್ಟಕ್ಕಷ್ಟೇ. ನಾನಾಗ ‘ಜಮದಗ್ನಿ ‘ ಹೆಸರಲ್ಲಿ ವರದಿ ಬರೆಯುತ್ತಿದ್ದೆ. ಆ ದಿನಗಳಲ್ಲಿ ರಾಯರು ತಮ್ಮ ವಿರೋಧವನ್ನು ಪತ್ರಗಳ ಮೂಲಕ ಅನೇಕರಿಗೆ ಹಂಚಿಕೊಳ್ಳುತ್ತಿದ್ದ ದಿನಗಳು. ತಾಯಿನುಡಿಯು ಅವರಿಗೆ ಆಗುತ್ತಿರಲಿಲ್ಲವಾದ್ದರಿಂದ   ಜಮದಗ್ನಿಯೂ ಅವರ ಟೀಕೆಗೆ ಗುರಿಯಾದ ಹೆಸರಾಗಿತ್ತು.  ಆದರೆ ಜೆರಿಮೆರಿ  ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿರುವ ನಾನೇ “ಜಮದಗ್ನಿ” ಎಂದು ತಿಳಿದ ನಂತರ ಮತ್ತೆ ನಮ್ಮ ನಂಟು ಗಟ್ಟಿಯಾಗಿತ್ತು .
ಕಳೆದ ವಾರವಷ್ಟೇ ಎಚ್ ಬಿ.ಎಲ್. ರಾಯರು ತಮ್ಮ ನೂತನ ಯೋಜನೆ “ಕರಾವಳಿ ಸಾಹಿತ್ಯ”ದ ಬಗ್ಗೆ ಬೃಹದ್ಗ್ರಂಥ ತರುವ ಕನಸಿನ ಕುರಿತು ನನ್ನಲ್ಲಿ ಸುಮಾರು ಅರ್ಧಗಂಟೆ ಮಾತನಾಡಿದ್ದಿದೆ. ಕರಾವಳಿ ಬಂಡಾಯ ಸಾಹಿತ್ಯದ ಕುರಿತಂತೆ ಅನೇಕ ಸಂಗತಿಗಳನ್ನು  ನನ್ನಿಂದ ತಿಳಿದುಕೊಂಡಿದ್ದು ಆ ಹೆಸರುಗಳನ್ನು ಪಟ್ಟಿಮಾಡಿ ಕೊಡುವಂತೆಯೂ ಹೇಳಿದ್ದರು. ” ಈಗ ಮನೆಯಲ್ಲಿ ಅಲ್ವಾ ,ಆಗಾಗ ಫೋನ್ ಮಾಡ್ತಾ ಇರ್ತೀನಿ. ತೊಂದರೆ ಇಲ್ಲವಲ್ಲ” ಎಂದು ಮಾತು ಮುಗಿಸಿದ್ದರು.
ಎಚ್ ಬಿ ಎಲ್ ರಾಯರ ” ಸಾಹಿತ್ಯ ಬಳಗ”ದ ಬೆಳ್ಳಿಹಬ್ಬದ ಸಮಾರೋಪ ಸಮಾರಂಭವು ಡಿಸೆಂಬರ್  8,  2019 ರ ಸಂಜೆ ಮೈಸೂರ್ ಅಸೋಸಿಯೇಷನ್ ನಲ್ಲಿ 12 ಕೃತಿಗಳ ಬಿಡುಗಡೆಯೊಂದಿಗೆ ಜರಗಿತ್ತು. ಅದರಲ್ಲಿ ಸಮಾಜ ಸೇವಕ ಪ್ರಾಧ್ಯಾಪಕ ಪಿ ಸೋಮಶೇಖರ ರಾವ್ ಕೃತಿಯನ್ನು ನನಗೆ ಬಿಡುಗಡೆ ಮಾಡುವ ಅವಕಾಶ ದೊರೆತಿತ್ತು. ನಾನು ಎಚ್ ಬಿ ಎಲ್ ರಾಯರು ಒಂದೇ ವೇದಿಕೆಯಲ್ಲಿ ಇದ್ದದ್ದು ಬಹುಶಃ ಅದೇ ಕೊನೆಯ ಕಾರ್ಯಕ್ರಮವಾಗಿತ್ತು. ಅವರನ್ನು ಕೊನೆಯ ಬಾರಿಗೆ ನಾನು ನೋಡಿದ್ದು ವಿದ್ವಾನ್ ರಾಮಚಂದ್ರ ಉಚ್ಚಿಲರ ಜನ್ಮಶತಮಾನೋತ್ಸವ ಉದ್ಘಾಟನಾ ಸಮಾರಂಭವು ಜನವರಿ ನಾಲ್ಕರಂದು 2020 ಮುಂಬೈ ವಿಶ್ವವಿದ್ಯಾಲಯದ ಡಬ್ಲ್ಯೂ ಆರ್ ಐ ಸಿ ಸಭಾಗೃಹದಲ್ಲಿ  ಜರಗಿದಾಗ. ಅದೇ ಕೊನೆ.
ಎಚ್ ಬಿ ಎಲ್ ರಾಯರು ಅನೇಕಬಾರಿ ನಮ್ಮ ಕರ್ನಾಟಕ ಮಲ್ಲ ಪತ್ರಿಕಾ ಕಚೇರಿಗೆ ಬರುತ್ತಿದ್ದರು. ತಮ್ಮ ಕಾರ್ಯಕ್ರಮಗಳ ಕುರಿತು ಚರ್ಚಿಸಲು ಅಥವಾ ಸುದ್ದಿಗಳನ್ನು ನೀಡಲು ಬರುತ್ತಿದ್ದರು. ಅವರು ಬರಿಗೈಯಲ್ಲಿ ಬರುತ್ತಿರಲಿಲ್ಲ, ಏನಾದರೂ ತಿಂಡಿ ತರುತ್ತಿದ್ದರು. ಆನಂತರ ಅವರ ಆರೋಗ್ಯವನ್ನು ಗಮನಿಸಿ “ಸುದ್ದಿಗಳನ್ನು ನೀವೇ ಬಂದು ಕೊಡು ವ ಅಗತ್ಯವಿಲ್ಲ. ಅಳಿಯ ನಲ್ಲಿ ವಾಟ್ಸಪ್ ಮಾಡಿ ಅಂದಿದ್ದೆ.  ನವೀನ್ ಪ್ರಿಂಟರ್ಸ್ ನಿಂದ ನಮ್ಮ ಕಚೇರಿಯ ದಾಮೋದರ್ ಅವರ ಸುದ್ದಿಗಳನ್ನು ಇತ್ತೀಚೆಗೆ ತರುತ್ತಿದ್ದರು.
ವಿಶೇಷ ಅಂದರೆ ರಾಯರಿಗೆ ತಮ್ಮ ಸುದ್ದಿ ಬಂತೋ ಇಲ್ವಾ ಎನ್ನುವುದು ಅನಂತರ ಬೇಕಾಗಿಯೇ ಇಲ್ಲ ಎನ್ನುವಷ್ಟು ನಿರ್ಲಿಪ್ತರು. ಎಷ್ಟು ಫೋಟೋ ಹಾಕಿದ್ದೀರಿ ಎಷ್ಟು ಕಟ್ ಮಾಡಿದ್ದೀರಿ ಅದರಲ್ಲಿ ಅವರು ಆಸಕ್ತಿ ಇರಿಸಿದವರಲ್ಲ .ತಮ್ಮ ಕಾರ್ಯಕ್ರಮಗಳಿಗೆ ಸಾಹಿತ್ಯಾಸಕ್ತರು ಬಂದರೆ ಸಾಕು ಎನ್ನುವ ಜಾಯಮಾನದವರು. ತಮ್ಮನ್ನು ಸದಾ ಬಡ ಬ್ರಾಹ್ಮಣ ಎನ್ನುವುದು ಅವರ ಸ್ಲೋಗನ್ ಆಗಿತ್ತು. ಇನ್ನೂರಕ್ಕೂ ಹೆಚ್ಚು ಅವರು ಕೃತಿಗಳನ್ನು ಸಂಪಾದಿಸಿದ್ದಾರೆ. ಅವರ ” ಅಣಿ   ಅರದಲ   ಸಿರಿ ಸಿಂಗಾರ  ” ಸಂಪಾದಿತ  ಗ್ರಂಥಕ್ಕೆ  ಪುಸ್ತಕ ಪ್ರಾಧಿಕಾರದಿಂದ  ಪುಸ್ತಕ ಸೊಗಸು ಪ್ರಶಸ್ತಿ ದೊರಕಿದೆ  .ಅಂತಹ ಗ್ರಂಥ ಮುಂಬಯಿ ಸಾಹಿತ್ಯಲೋಕದ ಹೆಮ್ಮೆ .ಯಕ್ಷಗಾನಕ್ಕೆ ಸಂಬಂಧಪಟ್ಟು ಇರುವ ಎಲ್ಲಾ ಪ್ರಮುಖ ಪ್ರಶಸ್ತಿಗಳು ರಾಯರಿಗೆ ದೊರೆತಿದೆ. ಮುಂಬೈಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ  ಅವರು ಅರ್ಹ ಇದ್ದರೂ  ಎಂದೂ  ಅದರ ಹಿಂದೆ  ಓಡಾಡಿದವರಲ್ಲ.  “ಸಂಸ್ಕೃತಿ ಇಲಾಖೆಯಯವರು ಕರೆದಿದ್ದಾರೆ . ಮಾತಾಡೋಣ ” ಅಂದಿದ್ದರು ಎಂದು ಹೆಚ್ ಬಿ ಎಲ್ ರಾಯರು ಒಮ್ಮೆ ಹೇಳಿದ್ದಿದೆ .
ರಾಯರ ಬಗ್ಗೆ ನನಗೆ ಅತ್ಯಂತ ಖುಷಿಯ ಸಂಗತಿ ಎಂದರೆ ಕನ್ನಡ ಸಂಘ ಕಾಂತಾವರ ಖ್ಯಾತ ವಿಮರ್ಶಕ ಡಾ. ಬಿ .ಜನಾರ್ದನ ಭಟ್ ಸಂಪಾದಕತ್ವದಲ್ಲಿ ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ 150ನೇ ಕೃತಿಯಾಗಿ ನನ್ನಿಂದ “ಹೊರನಾಡ ಕನ್ನಡ ಸೇನಾನಿ ಎಚ್  ಬಿ ಎಲ್ ರಾವ್ ” ಕೃತಿಯನ್ನು ಬರೆಸಿರುವುದು.
ಎಚ್ ಬಿ ಎಲ್ ರಾಯರಿಗೆ ಡಾ. ಜಿ ಎನ್ ಉಪಾಧ್ಯ ಅವರ ಸಂಪಾದಕತ್ವದಲ್ಲಿ ಹರಸಾಹಸ ಎಂಬ ಅಭಿನಂದನ ಗ್ರಂಥವೂ ಪ್ರಕಟವಾಗಿದೆ. ಉಪಾಧ್ಯ ಅವರು ಕಲಾತಪಸ್ವಿ ಎಚ್ ಬಿ ಎಲ್ ರಾವ್ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ.
ರಾಯರನ್ನು  ಬಹುಶಃ ಮೊದಲ ಬಾರಿಗೆ ನಾನೇ 1993 ರಲ್ಲಿ ಮುಂಬೈ ಕನ್ನಡ ದೈನಿಕ ಉದಯ ದೀಪ ಸಾಪ್ತಾಹಿಕ ಕ್ಕಾಗಿ ಸಂದರ್ಶನ ಮಾಡಿದ್ದೆ. ಅದು 28 .11 .1993 . ಎಚ್ ಬಿ ಎಲ್ ರಾಯರ ಅರವತ್ತರ ಸಂಭ್ರಮದಲ್ಲಿ  ಆ ಸಂದರ್ಶನ   ಮಾಡಿದ್ದಾಗಿತ್ತು.  ಶೀರ್ಷಿಕೆ “ನನ್ನ ವಿರೋಧಿಗಳಿಗೆ ನಾನು ಋಣಿ”. ಈ ಸಂದರ್ಶನದಲ್ಲಿ  ಈಗ ವಿಜಯಕರ್ನಾಟಕ ದೈನಿಕದಲ್ಲಿ ಇರುವ ಸಂತೋಷ ಸಸಿಹಿತ್ಲು ರಾಯರ ಆಕರ್ಷಕ ಕ್ಯಾರಿಕೇಚರ್ ಬಿಡಿಸಿದ್ದರು.
ರಾಯರ ಪೂರ್ಣಹೆಸರು ಹೆಜಮಾಡಿ ಬಾಗಿಲ್ತಾಯ ಲಕ್ಷ್ಮೀನಾರಾಯಣ ರಾವ್.
2004ರಲ್ಲಿ ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ ಅವರು ಆಯ್ಕೆಯಾದಾಗ ಕರ್ನಾಟಕ ಮಲ್ಲಕ್ಕೆ ನಾನು ವಿಶೇಷ ಸಂದರ್ಶನ ಮಾಡಿದ್ದೆ .ಆಗ ಅವರ ಮಾತು ‘ಕುರ್ಚಿ ಪ್ರಿಯರು ನಮಗೆ ಬೇಕಾಗಿಲ್ಲ”.  ರಾಯರು ಅನೇಕರನ್ನು ಬೆಳೆಸಿದ್ದರು ಅವರ ಜೊತೆಗಿದ್ದ ಅನೇಕರು ಅವರನ್ನು ನಂತರ ದೂರ ಮಾಡಿದ್ದೂ ಇದೆ. ಮಹಾ ಜಗಳಗಂಟ ಕೂಡ ರಾಯರು! ಎಸ್ ಕೆ ಸುಂದರ್ , ಕರುಣಾಕರ ಶೆಟ್ಟಿ, ಪೇತ್ರಿ ವಿಶ್ವನಾಥ್, ಡಾ.ಜಿ.ಎನ್. ಉಪಾಧ್ಯ… ಇಂತಹ ಕೆಲವರಷ್ಟೇ (ಇನ್ನೂ ಇದ್ದಾರೆ) ಅವರ ಪ್ರೀತಿ  ಉಳಿಸಿಕೊಂಡವರು ಅನ್ನಬಹುದೇನೋ.
ರಾಯರ ಬಾಲ್ಯ ಜೀವನ ಬಹಳ ಕಷ್ಟಕರವಾಗಿತ್ತು. ಅವರದು ಕ್ರಾಂತಿಕಾರಿ ಮನೋಭಾವ. ಅವರು ಹೋಟೆಲ್ ನಲ್ಲಿ ಕೆಲಸ ಮಾಡಿದವರೂ ಆಗಿದ್ದು ಎಂದೂ ಬದುಕಿಗೆ ಭಯ ಪಡೆದವರು. ಡಾ. ಜಿ ಎನ್ ಉಪಾಧ್ಯ ಹೇಳಿದಂತೆ ಅವರು ‘ಒಂಟಿಸಲಗ’. ಹೆಚ್ಚಾಗಿ ಕಾರ್ಯಕ್ರಮಗಳ ರೂಪುರೇಷೆಯನ್ನು ಒಬ್ಬರೇ ಮಾಡುತ್ತಿದ್ದರು. ಕೆಲವೊಮ್ಮೆ ಯಾರ ಸಲಹೆಯನ್ನೂ  ಕೇಳುತ್ತಿರಲಿಲ್ಲ. ನಾನು ಎಷ್ಟೋ ಸಲ ಅವರಿಗೆ ಹೇಳಿದ್ದೆ- “ನಿಮ್ಮ ನಂತರ ಈ ರೀತಿಯ ವಿಷಯ ವಸ್ತುಗಳನ್ನೊಳಗೊಂಡ ವಿಚಾರಗೋಷ್ಠಿಗಳನ್ನು ಮುಂಬೈಯಲ್ಲಿ ಯಾರೂ ಇಡಲಾರರು. ನಿಮ್ಮ ಜತೆ  ಆ ರೀತಿಯ ವಿಚಾರ ಗೋಷ್ಟಿಗಳೂ ಹೊರಟು ಹೋಗಬಹುದು” ಎಂದು.
2005ರ ಒಂದು ಘಟನೆ ನೆನಪಾಗುತ್ತೆ. ಕೇಂದ್ರ ಕಸಾಪದಲ್ಲಿ ಅಧ್ಯಕ್ಷರಾಗಿದ್ದವರು ಆಗ ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲ . ಆ ವರ್ಷ ನನಗೆ ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ  ಯನ್ನು ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಚಂದ್ರಶೇಖರ ಕಂಬಾರರು ಪ್ರದಾನಿಸಿದ್ದರು. ಕಾರ್ಯಕ್ರಮದ ನಂತರ ನಾನು ಕಸಾಪ ಅಧ್ಯಕ್ಷ ಚಂದ್ರಶೇಖರ ಪಾಟೀಲರನ್ನು ಭೇಟಿಯಾದೆ. ಚಂಪಾ ಅವರು ಸಂಕ್ರಮಣದ ಮೂಲಕ ಹಲವು ವರ್ಷ ಹಿಂದಿನ ಪರಿಚಿತರು. ನಮ್ಮ ಮಾತಿನ ನಡುವೆ ಕಸಪಾ ಮಹಾರಾಷ್ಟ್ರ ಘಟಕದ ನೂತನ ಅಧ್ಯಕ್ಷ ಎಚ್ ಬಿ ಎಲ್ ರಾಯರ ಮಾತು ಬಂತು. ತಕ್ಷಣ ಚಂಪಾ ಅವರು “ಈ ರಾಯರು ಯಜ್ಞಗಳನ್ನೆಲ್ಲಾ ಕಸಾಪ ಘಟಕದ ಬ್ಯಾನರ್ ನಲ್ಲಿ ಮಾಡಿ ಪಜೀತಿ ಮಾಡುತ್ತಿದ್ದಾರೆ” ಎಂದದ್ದು ಇದೆ .

ನವಿಮುಂಬೈಯ ವಾಶಿ ಯಲ್ಲಿ ನಿರ್ಮಿಸಲಾಗಿದ್ದ ಕರ್ನಾಟಕ ಭವನದ ಕಟ್ಟಡ ಮೇಲೆ ಬರುವಂತೆ ಮಾಡಿದ ಅಪ್ರತಿಮ ಸಾಹಸಿ ರಾಯರು. ಅವರ ಆಸೆ ಕರ್ನಾಟಕ ಭವನದಲ್ಲಿ ಕಸಾಪ ಘಟಕಕ್ಕೆ ಕಚೇರಿ ಪಡೆಯುವುದಾಗಿತ್ತು. ಆದರೆ ಆ ಗುರಿ ಈಡೇರಲಿಲ್ಲ .
ತನ್ನ ಬದುಕಿನ ಕೊನೆಯ ದಿನಗಳನ್ನು ಕರ್ನಾಟಕ ಭವನ ಮೇಲೇರುವಲ್ಲಿ ಬೆಂಗಳೂರಿಗೆ ಓಡಾಟ ನಡೆಸುವುದರಲ್ಲಿ ಕಳೆದಿದ್ದರು ಎಂದರೂ ತಪ್ಪಾಗಲಾರದು.  ರಾಯರ ಪ್ರಯತ್ನದಿಂದ ಕನ್ನಡ ಪ್ರವೇಶ ಕಾವ ಜಾಣ ಮತ್ತು ರತ್ನ ಪರೀಕ್ಷೆಗಳು ಮುಂಬೈಯಲ್ಲೇ ನಡೆಯುತ್ತಿವೆ .ಸಂಗೀತ ನೃತ್ಯ ಪರೀಕ್ಷೆಗಳೂ ಮುಂಬಯಿಯಲ್ಲಿ ನಡೆಯುವಂತಾಗಿದೆ. ರಾಯರ ಈ ಕೊಡುಗೆಗೆ ಮುಂಬೈ ಕನ್ನಡಿಗರು ಸದಾ ಕೃತಜ್ಞರು.
ಕರ್ನಾಟಕದ ಮಂತ್ರಿಯಾಗಿದ್ದ ಡಾ. ವಿ ಎಸ್ ಆಚಾರ್ಯರು  ರಾಯರ ತೀರಾ ಆಪ್ತರಾಗಿದ್ದರು. ಮನಸ್ಸು ಮಾಡಿದರೆ ರಾಯರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕಷ್ಟ ಇರಲಿಲ್ಲ. ಆದರೆ ಎಂದೂ ರಾಯರು ಪ್ರಶಸ್ತಿಯ ಹಿಂದೆ ಹೋಗಲೇ ಇಲ್ಲ .ಅನೇಕರಲ್ಲಿ ನಿಷ್ಠುರ ಮಾಡಿದರೂ ಕೂಡ ರಾಯರ ಕೆಲಸಗಳನ್ನು ಎಲ್ಲರೂ ಶ್ಲಾಘಿಸುತ್ತಾ ಬಂದಿದ್ದಾರೆ. ಅನೇಕಬಾರಿ ಕರ್ನಾಟಕಕ್ಕೆ ಮುಂಬೈಯ ಸಾಹಿತಿಗಳನ್ನು ಕರೆದೊಯ್ದು  ಕಾರ್ಯಕ್ರಮಗಳನ್ನು ನೀಡಲು ಹೋದಾಗ ನನ್ನನ್ನೂ ಕರೆಯುತ್ತಿದ್ದರು.ಆದರೆ  ನಾನು ನಯವಾಗಿ “ಹೊಸಬರಿಗೆ ಅವಕಾಶ ನೀಡಿ” ಎಂದು ತಪ್ಪಿಸಿಕೊಳ್ಳುತ್ತ ಬಂದಿದ್ದೆ. ಆದರೂ  ಮುಂಬೈಯ ಅನೇಕ ಕಾರ್ಯಕ್ರಮಗಳಿಗೆ ನನ್ನನ್ನು ವೇದಿಕೆಗೆ  ಹತ್ತಿಸಿದ್ದರು.
ಬೆಳಗಾವಿಯಲ್ಲಿ ದ್ವಿತೀಯ  ವಿಶ್ವ ಕನ್ನಡ ಸಮ್ಮೇಳನ ಜರುಗಿದಾಗ ರಾಯರೂ ಬಂದಿದ್ದರು .ಅಲ್ಲಿ ಯಾವುದೋ ದೂರದಲ್ಲಿ ನಾವು ದಂಪತಿಗೆ ವಸತಿ ವ್ಯವಸ್ಥೆ ಮಾಡಲಾಗಿತ್ತು. ಕೊನೆಯ ದಿನ ರಾಯರು “ನಾನು ಒಂದು ದಿನ ಮೊದಲೇ ಮುಂಬೈ ಗೆ ಹೋಗುತ್ತೇನೆ .ನೀವಿಬ್ಬರು ನನ್ನ ರೂಮಲ್ಲಿ ಇರಿ “ಎಂದು ಹೋಟೆಲ್ ರಾಮದೇವ್ ಅಲ್ಲಿ ಅವರ ರೂಮನ್ನು ನಮಗೆ ಬಿಟ್ಟುಕೊಟ್ಟದ್ದು ಈಗಲೂ ನೆನಪಾಗುತ್ತಿದೆ.
ಒಂದುವರೆ ದಶಕದ ಹಿಂದೆ ನಾನು ಮಂಗಳೂರಲ್ಲಿದ್ದಾಗ ಒಮ್ಮೆ ಎಂಟು ಜನ ಯಕ್ಷಗಾನ ದಿಗ್ಗಜರನ್ನು ಮತ್ಸ್ಯಗಂಧ ದಲ್ಲಿ ಮುಂಬೈ ಯಕ್ಷಗಾನ ಸಮ್ಮೇಳನಕ್ಕೆ ಕರೆತರುವ ಜವಾಬ್ದಾರಿಯನ್ನು ರಾಯರು ನನಗೆ ಕೊಟ್ಟಿದ್ದರು. ನಿಜ. 90ರ ದಶಕದ ಪರ್ಯಾಯ ಯಕ್ಷಗಾನ ಸಮ್ಮೇಳನ ಯಾರೂ ಮರೆಯುವಂತಿಲ್ಲ. ಬಾಳೆ ಎಲೆ ಊಟ ,ದಿಗ್ಗಜ ಕಲಾವಿದರ ಯಕ್ಷಗಾನ, ಕಮ್ಮಟಗಳು ,ಉಪನ್ಯಾಸಗಳು… ಆ ದಿನಗಳಲ್ಲಿ ಅದನ್ನು ವೀಕ್ಷಿಸುತ್ತಿದ್ದ ನಾವೇ ಭಾಗ್ಯಶಾಲಿಗಳು.
ಒಂದು ಘಟನೆ ಹೇಳಿ  ಈ ಬರಹ  ಮುಕ್ತಾಯ ಮಾಡುವೆ- “ಶಿವಳ್ಳಿ ಬ್ರಾಹ್ಮಣ” ಎನ್ನುವ ಗ್ರಂಥವನ್ನು ಎಚ್.ಬಿ.ಎಲ್ ರಾಯರ ಪ್ರಧಾನ ಸಂಪಾದಕತ್ವದಲ್ಲಿ 2001ರಲ್ಲಿ ತರಲಾಗಿತ್ತು. ಅದರಲ್ಲಿ ಸಾಂಸ್ಕೃತಿಕ ರಂಗದಲ್ಲಿ ಶಿವಳ್ಳಿಯವರು ಎನ್ನುವ  ಲೇಖನವನ್ನು ಮುರಳೀಧರ ಉಪಾಧ್ಯ  ಬರೆದಿದ್ದರು . (ಅದರಲ್ಲಿ ನನ್ನ ಹೆಸರು ಇರಲಿಲ್ಲ. ) ವಿಜಯಕರ್ನಾಟಕದ 25 .11. 2001 ರ ಸಂಚಿಕೆಯಲ್ಲಿ ಡಾ. ಬಿ ಜನಾರ್ದನ ಭಟ್ ವಿಮರ್ಶೆ ಬರೆಯುತ್ತ “ಶ್ರೀನಿವಾಸ ಜೋಕಟ್ಟೆ ಅವರಂಥ ಸಾಹಿತಿಗಳ ಜಾತಿ ಅವರ ಹೆಸರಲ್ಲಿ ತಿಳಿದಿಲ್ಲವಾದ್ದರಿಂದ ಅಂತ ಹಲವು ಹೆಸರುಗಳು ಸಹಜವಾಗಿಯೇ ಬಿಟ್ಟುಹೋಗಿವೆ” ಎಂದಿದ್ದರು. ಅನಂತರ ಒಂದು ದಿನ ತಮಾಷೆಯಾಗಿ  “ರಾಯರೇ, ನಿಮ್ಮ ಪ್ರಧಾನ ಸಂಪಾದಕತ್ವದಲ್ಲಿ ಬಂದ ಕೃತಿಯಲ್ಲಿ ನನ್ನ ಹೆಸರೇ ಇಲ್ಲವಲ್ಲ” ಎಂದಾ ಗ “ಅರೆ,ನನಗೂ ಈಗಲೇ ಗೊತ್ತಾಗಿದ್ದು” ಅಂದಿದ್ದರು.
ನಾನು 2000ದಿಂದ 2004ರ ತನಕ ಮಂಗಳೂರಲ್ಲಿ ಇದ್ದಾಗ  ರಾಯರು ಸುರತ್ಕಲ್ ಗೆ ಬಂದಾಗಲೆಲ್ಲ ಅವರ ಬಂಧುವಿನ  ಮನೆಗೆ ತಪ್ಪದೆ ನಾನು ಹಾಜರಾಗಿ ರಾಯರನ್ನು ಕಾಣಲೇ ಬೇಕಾಗಿತ್ತು. ರಾಯರಿಗೆ ರಾಯರೇ ಸಾಟಿ.

‍ಲೇಖಕರು avadhi

23 April, 2020

1 Comment

  1. Sumathi BK

    ಎಂದರೋ ಮಹಾನುಭಾವುಲು ..
    ನಮಸ್ಕಾರ. ಒಳ್ಳೆ ಬರಹಕ್ಕಾಗಿ ವಂದನೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading