ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ..

ಮುರಳೀಧರ ಉಪಾಧ್ಯ, ಹಿರಿಯಡ್ಕ

ಕನ್ನಡದ ಹೊಸ ತಲೆಮಾರಿನ ಪ್ರತಿಭಾವಂತ ಕವಿ ಗ. ಸು. ಭಟ್ಟ ಬೆತ್ತಗೇರಿ [ 1971- 2013 ] 8-8- 2013 ರಂದು ಧಾರೇಶ್ವರ ಬಳಿಯ ಕಡಲ ತೀರದಲ್ಲಿ ಆತ್ಮಹತ್ಯೆ ಮಾಡಿ ಕೊಂಡರು. ಈ ಆಘಾತಕಾರಿ ಸುದ್ದಿ ಇಂದು [ 13-9-2013 ] ಕೆ. ವಿ.ಅಕ್ಷರ “ಹಿಂದು ’ ಪತ್ರಿಕೆಯಲ್ಲಿ ಬರೆದಿರುವ ಲೇಖನ ಓದಿ ನನಗೆ ಗೊತ್ತಾಯಿತು. ಅಕ್ಷರ ಪ್ರಕಾಶನ ಪ್ರಕಟಿಸಿರುವ ಗ. ಸು. ಭಟ್ಟರ ’ ಒಂದು ಯಃಕಶ್ಚಿತ್ ಹುಳದ ಕತೆ ’ [ 2011 ] ಕವನ ಸಂಕಲನಕ್ಕೆ ನಾನು ಮುನ್ನುಡಿ ಬರೆದಿದ್ದೆ..ಆದರೆ ಗ. ಸು. ಭಟ್ಟರನ್ನು ನಾನು ಒಮ್ಮೆಯೂ ಭೇಟಿಯಾಗಿರಲಿಲ್ಲ.

ಉತ್ತರ ಕನ್ನಡಜಿಲ್ಲೆಯ ಬೆತ್ತಗೇರಿಯ ಗ. ಸು. ಭಟ್ಟರು ತನ್ನ ತಂದೆ- ತಾಯಿಯ ಒಬ್ಬನೇ ಮಗ . ಪ್ರಾಥಮಿಕ ಶಾಲಾ ಅಧ್ಯಾಪಕರಾಗಿದ್ದ ಅವರು ಕಳಿದ ಮೂರು ವರ್ಷಗಳಿಂದ ಯಲ್ಲಾಪುರ ಬಳಿಯ ಹಂಸನಕಟ್ಟೆ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು.
ಅಕಾರಣವಾದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವರು ಜೂನ್ ತಿಂಗಳಿನಿಂದ ಶಾಲೆಗೆ ಹೋಗಿರಲಿಲ್ಲ. ಪತ್ನಿ ಹೇಮಾ ಭಟ್ , ಮಗ ಸಂಜಯ { ಎರಡನೆ ತರಗತಿ ವಿದ್ಯಾರ್ಥಿ ] ರನ್ನು ಭಟ್ಟರು ಅಗಲಿದ್ದಾರೆ. ಅಂತರ್ಮುಖಿಯಾಗಿದ್ದ ಈ ಕವಿ ಸಾಹಿತ್ಯಗೋಷ್ಟಿಗಳಲ್ಲಿ ಭಾಗವಹಿಸುತ್ತಿರಲಿಲ್ಲ.. ನೀನಾಸಮ್ ಸಂಸ್ಕೃತಿ ಶಿಬಿರಕ್ಕೆ ಒಂದೆರಡು ದಿನ ಬರುತ್ತಿದ್ದರಂತೆ.

ಖಂಡ ಕಾವ್ಯ ಗ. ಸು. ಭಟ್ಟರ ಇಷ್ಟದ ಕಾವ್ಯ ಪ್ರಕಾರ. ಅವರ ’ಅಲೆಮಾರಿಯ ಕತೆ’ ಖಂಡ ಕಾವ್ಯ ಮುಂಬೈ ಕರ್ನಾಟಕ ಸಂಘದ ಪೇಜಾವರ ಸದಾಶಿವ ರಾವ್ ಪುರಸ್ಕಾರ ಪಡೆದಿದೆ. ಗ. ಸು. ಭಟ್ಟರ ’ ನಳ ದಮಯಂತಿ ’ { 2002 ] ಮೂರು ಸಾವಿರ ಚೌಪದಿಗಳಿರುವ ಕಾವ್ಯ. ’ ಜ್ವಾಲೆ ’ ಖಂಡ ಕಾವ್ಯದ ಜ್ವಾಲೆ ಜೈಮಿನಿ ಭಾರತದಿಂದ ಎದ್ದು ಬಂದು ಕಂಗೊಳಿಸುತ್ತಾಳೆ.’ ಬೇಲೆಯ ಲೇಲೆಯಲ್ಲಿ ’ , ನಿರ್ವರ್ಣ ’ ಅವರ ಇತರ ಕಾವ್ಯ ಕೃತಿಗಳು.
’ ನವ್ಲು’ ಕಥನ ಕವನಕ್ಕೆ ಬರೆದಿರುವ ಮುನ್ನುಡಿಯಲ್ಲಿ ಅವರ ಕಾವ್ಯ ಚಿಂತನದ ಹೊಳಹುಗಳಿವೆ- ” ಪ್ರತಿಮೆ ಬರೀ ಕವಿಯಲ್ಲಿ ಎಂಬುದು ಅಹಂಕಾರ. ಅದು ಭಾಷೆಯಲ್ಲಿ ಕೂಡ ಮೊದಲೇ ಹುಟ್ಟಿರಬಹುದಲ್ಲವೇ ? ”

’ ಮರುಗಡಲು ’, ’ಪುನರ್ನವ ’ ಎಂಬ ಎರಡು ಪೌರಾಣಿಕ ನಾಟಕಗಳನ್ನೂ , ಎರಡು ಮಕ್ಕಳ ನಾಟಕಗಳನ್ನೂ , ’ಉಪ್ಪಾನಿ’ [ 2002 ] ಎಂಬ ಕಾದಂಬರಿಯನ್ನು ಗ. ಸು. ಭಟ್ಟರು ಬರೆದಿದ್ದಾರೆ. ’ ವಾಲ್ಮೀಕಿಗಾದ ಅನ್ಯಾಯ ” ನಾನು ತುಂಬ ಮೆಚ್ಚಿಕೊಂಡ ಗ. ಸು . ಭಟ್ಟರ ವೈಚಾರಿಕ ಕೃತಿ.
” ಕತೆ ಕಾಲವನ್ನು ಮೀರಲು ಹವಣಿಸುತ್ತದೆ .ಆದರೆ ಕಾಲ ಕತೆಯ ಕಾಲು ಕಟ್ಟಲು ಹವಣಿಸುತ್ತದೆ. ’ ಎಂದ ಕವಿ ಗ. ಸು. ಭಟ್ ’ , ’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುತ್ತ ಹೊರಟು ಹೋಗಿದ್ದಾರೆ .
 

‍ಲೇಖಕರು G

14 September, 2013

5 Comments

  1. ಮಹದೇವ ಹಡಪದ

    ಅವರು ಬಳಸುವ ಭಾಷೆ ಅದ್ಭುತವಾಗಿತ್ತು. ಒಬ್ಬ ಒಳ್ಳೆಯ ಸಹೃದಯ ಕವಿಯನ್ನು ಕಳೆದುಕೊಂಡೆವು

  2. anupama prasad

    ಆಘಾತಕರ ಸುದ್ದಿ.ಅರಗಿಸಿಕೊಳ್ಳುವುದು ತುಂಬ ಕಷ್ಟ. ನನ್ನ `ದೂರತೀರ’ಕ್ಕೆ (ಕಥಾ ಸಂಕಲನ)ಮುನ್ನುಡಿ ಬರೆಯುತ್ತ ಜಿ.ರಾಜಶೇಖರ ಅವರು ಗ.ಸು.ಭಟ್ಟರ ಕಾವ್ಯದಲ್ಲಿ ಬಳಕೆಯಾದ ಆಡುನುಡಿಯ ಬಗ್ಗೆ ಪ್ರಶಂಸನೀಯವಾಗಿ ಪ್ರಸ್ಥಾಪ ಮಾಡಿದ್ದು ನೆನಪಾಗ್ತಿದೆ.
    ಅನುಪಮಾ ಪ್ರಸಾದ್.

  3. Anonymous

    ಇದು ಅತ್ಯಂತ ನೋವಿನ ಸಂಗತಿ. ಗ.ಸು.ಭಟ್ಟರ ಒಂದು ಸಂಲನ ಓದಿ ಅವರ ಕಾವ್ಯಶಕ್ತಿಗೆ ಬೆರಗಾಗಿದ್ದ ನಾನು ಆ ಭಾಗದ ಮಿತ್ರ ವಸಂತ ನಾಯಕರ ನೆರವಿನಿಂದ ಅವರನ್ನು ಸಂಪರ್ಕಿಸಿದ್ದೆ. ಭಟ್ಟರು ತಮ್ಮ ಅನೇಕ ಕೃತಿಗಳನ್ನು ನನಗೆ ಕಳಿಸಿಕೊಟ್ಟರು.ಆ ಕೃತಿಗಳನ್ನು ಓದಿದ ಮೇಲೆ ಅವರ ಬಗ್ಗೆ ನನ್ನಲ್ಲಿ ಮೂಡಿದ ಪ್ರೀತಿಯಿಂದಾಗಿ ಕೆಲವು ಸಲ ಫೋನ್‍ನಲ್ಲಿ ಮಾತನಾಡಿದ್ದೆ. ತುಂಬ ಸ್ನೇಹಜೀವಿಯಾಗಿ ತೋರಿದ ಭಟ್ಟರನ್ನು ಭೇಟಿಮಾಡುವ ಮಾತನ್ನೂ ಆಡಿದ್ದೆ. ಆ ಭೇಟಿ ಕೈಗೂಡಲಿಲ್ಲ. ಅವರ ಸಾವು ನನ್ನಂಥವರನ್ನು ದುಃಖದ ಮಡುವಿನಲ್ಲಿ ನಿಲ್ಲಿಸಿದೆ.
    ಮುಖ್ಯವಾದ ಮಾತೆಂದರೆ ಭಟ್ಟರಂಥ ಅನೇಕ ಕವಿಗಳು ಈಗಲೂ ನಮ್ಮ ನಡುವೆ ಬೆಳಕಿಗೆ ಬಾರದೆ, ಸೂಕ್ತ ಬೆಂಬಲ ಸಿಕ್ಕದೆ, ಒಂದು ಬಗೆಯ ಹಿಂಜರಿಕೆಯಲ್ಲಿ, ಹೇಳಿಕೊಳ್ಳಲಾಗದ ನೋವಿನಲ್ಲಿ ಬದುಕುತ್ತಿದ್ದಾರೆ. ಭಟ್ಟರಿಗೆ ಅಗತ್ಯ ಮನ್ನಣೆ ದೊರಕಿದ್ದರೆ, ಅವರು ಜೀವನ್ಮುಖಿಯಾಗಿರುತ್ತಿದ್ದರೇ?
    ಭಟ್ಟರ ಕುಟುಂಬ ಈ ನೋವನ್ನು ಭರಿಸಬೇಕಾಗಿದೆ. ಅವರ ದುಃಖದಲ್ಲಿ ಕಾವ್ಯಪ್ರೇಮಿಗಳೆಲ್ಲ ಕೈಗೂಡಿಸಬೇಕು. ಅದೊಂದೇ ಈಗ ನಾವು ಮಾಡಬಹುದಾದ ಕೆಲಸ.

  4. Anonymous

    ಗ.ಸು.ಭಟ್ಟರು ನಿಜಕ್ಕೂ ಪ್ರತಿಭಾನ್ವಿತ ಕವಿ. ಅವರು ಬೇರೆದ ‘ಮರುಗಡಲು’ ನಾಟಕವನ್ನು ಓದಿ ಅದರ ಅರ್ಥವೈಶಾಲ್ಯತೆಯನ್ನು ಸಂಕೀರ್ಣತೆಯನ್ನು ಕುರಿತು ನನ್ನ ವಿಮರ್ಶಾ ಸಂಕಲನದಲ್ಲಿ ವಿಸ್ತೃತವಾಗಿ ಬರೆದಿದ್ದೇನೆ. ಪ್ರಚಾರವಿಲ್ಲದೆ ಸೊರಗಿ ಬಾಡಿ ಹೋದ ಅವಜ್ನೆಗೊಳಗಾದ ಸಾಹಿತಿಗಳ ಸಂಕೇತವಾಗಿ ಅವರಿದ್ದಾರೆ ಎಂದು ಬರೆದಿದ್ದೆ. ಪ್ರತಿಭಾನ್ವಿತ ಕವಿಯೊಬ್ಬ ಹೀಗೆ ಬಾಡಿ ಹೋದದ್ದು ನಿಜಕ್ಕೂ ದುಃಖಕರ. ಕನ್ನಡ ಸಾಹಿತ್ಯಕ್ಕೆ ತುಂಬಿಸಲಾಗದ ಹನಿ. ತುಂಬಾ ಸಂಕಟವಾಗುತ್ತಿದೆ.

  5. Anonymous

    ಇದು ಅತ್ಯಂತ ನೋವಿನ ಸಂಗತಿ. ಗ.ಸು.ಭಟ್ಟರ ಒಂದು ಸಂಲನ ಓದಿ ಅವರ ಕಾವ್ಯಶಕ್ತಿಗೆ ಬೆರಗಾಗಿದ್ದ ನಾನು ಆ ಭಾಗದ ಮಿತ್ರ ವಸಂತ ನಾಯಕರ ನೆರವಿನಿಂದ ಅವರನ್ನು ಸಂಪರ್ಕಿಸಿದ್ದೆ. ಭಟ್ಟರು ತಮ್ಮ ಅನೇಕ ಕೃತಿಗಳನ್ನು ನನಗೆ ಕಳಿಸಿಕೊಟ್ಟರು.ಆ ಕೃತಿಗಳನ್ನು ಓದಿದ ಮೇಲೆ ಅವರ ಬಗ್ಗೆ ನನ್ನಲ್ಲಿ ಮೂಡಿದ ಪ್ರೀತಿಯಿಂದಾಗಿ ಕೆಲವು ಸಲ ಫೋನ್‍ನಲ್ಲಿ ಮಾತನಾಡಿದ್ದೆ. ತುಂಬ ಸ್ನೇಹಜೀವಿಯಾಗಿ ತೋರಿದ ಭಟ್ಟರನ್ನು ಭೇಟಿಮಾಡುವ ಮಾತನ್ನೂ ಆಡಿದ್ದೆ. ಆ ಭೇಟಿ ಕೈಗೂಡಲಿಲ್ಲ. ಅವರ ಸಾವು ನನ್ನಂಥವರನ್ನು ದುಃಖದ ಮಡುವಿನಲ್ಲಿ ನಿಲ್ಲಿಸಿದೆ.
    ಮುಖ್ಯವಾದ ಮಾತೆಂದರೆ ಭಟ್ಟರಂಥ ಅನೇಕ ಕವಿಗಳು ಈಗಲೂ ನಮ್ಮ ನಡುವೆ ಬೆಳಕಿಗೆ ಬಾರದೆ, ಸೂಕ್ತ ಬೆಂಬಲ ಸಿಕ್ಕದೆ, ಒಂದು ಬಗೆಯ ಹಿಂಜರಿಕೆಯಲ್ಲಿ, ಹೇಳಿಕೊಳ್ಳಲಾಗದ ನೋವಿನಲ್ಲಿ ಬದುಕುತ್ತಿದ್ದಾರೆ. ಭಟ್ಟರಿಗೆ ಅಗತ್ಯ ಮನ್ನಣೆ ದೊರಕಿದ್ದರೆ, ಅವರು ಜೀವನ್ಮುಖಿಯಾಗಿರುತ್ತಿದ್ದರೇ?
    ಭಟ್ಟರ ಕುಟುಂಬ ಈ ನೋವನ್ನು ಭರಿಸಬೇಕಾಗಿದೆ. ಅವರ ದುಃಖದಲ್ಲಿ ಕಾವ್ಯಪ್ರೇಮಿಗಳೆಲ್ಲ ಕೈಗೂಡಿಸಬೇಕು. ಅದೊಂದೇ ಈಗ ನಾವು ಮಾಡಬಹುದಾದ ಕೆಲಸ.-ಜಿ.ಪಿ.ಬಸವರಾಜು
    Reply

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading