ಇಬ್ಬರು ವ್ಯಾಪಾರಿಗಳು; ಒಂದೇ ವ್ಯಾಪಾರ ಮತ್ತು ಒಂದು ಕೊಲೆ

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

ಯಾವುದೋ ಕೆಲಸದ‌ ನಿಮಿತ್ತ ಎಲ್ಲಿಗೋ ಹೊರಟವನು ರಸ್ತೆ ಪಕ್ಕದಲ್ಲಿದ್ದ ಎಳನೀರು ಮಾರುವ ಅಜ್ಜನ ಬಳಿ ಗಾಡಿ ನಿಲ್ಲಿಸಿ ಎಳನೀರು ಕೊಡಲು ಹೇಳಿದೆ. ಅವನಿಂದ ಸ್ವಲ್ಪವೇ ದೂರದಲ್ಲಿ ಮತ್ತೊಬ್ಬ ಹುಡುಗ ಗಾಡಿಯಲ್ಲಿ ಎಳನೀರು ಮಾರುವವನಿದ್ದ‌. ಇಷ್ಟು ದಿನ ಅಲ್ಲಿ ಅಜ್ಜ ಮಾತ್ರ ಎಳನೀರು ಮಾರುತ್ತಿದ್ದ. ಆ ಹುಡುಗ ತನ್ನ ಗಾಡಿ ತಂದಿಟ್ಟ ಮೇಲೆ ಗಿರಾಕಿಗಳು ಇಬ್ಬರ ಮಧ್ಯೆ ಹಂಚಿ ಹೋದರು.

ಆ ಹುಡುಗ ಸ್ಕ್ಯಾನ್ ಪೇ ಸ್ಟ್ಯಾಂಡ್ ತಂದಿಟ್ಟ.  ಆ ಅಜ್ಜನೂ ತಂದಿಟ್ಟ. ಮೊದಲೆಲ್ಲ ನಾನು ಆ ಅಜ್ಜನ ಬಳಿ ಹೋದಾಗ ನಿಧಾನ ಮಾತನಾಡುತ್ತ, ಎಳನೀರು ಕೆತ್ತುತ್ತಿದ್ದ ಅಜ್ಜ, ಈಗ ಹೋದರೆ ಪಟಪಟನೆ ಗಂಜಿಯೋ, ನೀರೋ ಎಂದು ಕೇಳಿ, ನಾವು ಹೇಳಿ ಮುಗಿಸುವಷ್ಟರಲ್ಲಿ ಅದನ್ನು ಕೈಗಿಟ್ಟಿರುತ್ತಾನೆ. ಆ ಹುಡುಗನ ಸ್ಪೀಡಿಗೆ ಇವನೂ ತನ್ನನ್ನು ಅಪ್ ಗ್ರೇಡ್ ಮಾಡಿಕೊಂಡಿದ್ದಾನೆ. ‌

ಈ ಹಿಂದೆ ನಾನು ಅಲ್ಲಿ ಎಳನೀರು ಕುಡಿಯಲು ಹೋದಾಗಲೆಲ್ಲ ಅದನ್ನು ಯಾವ ಊರಿಂದ ತರಿಸುತ್ತೇನೆ? ಮೂಲಬೆಲೆ ಎಷ್ಟು ?  ಉಳಿದವುಗಳ ಲೆಕ್ಕ ಹೇಗೆ ? ಹಾಳಾದ ಎಳನೀರುಗಳನ್ನು ಏನು ಮಾಡುತ್ತೇನೆ? ವಾರದಲ್ಲಿ ಎಷ್ಟು ಕಾಯಿ ಇಳಿಸಿ ಒಡೆಯುತ್ತೇನೆ ? ಎಂದೆಲ್ಲ ವಿವರವಾಗಿ ಮಾತನಾಡುತ್ತಿದ್ದ ಅಜ್ಜ ಈಗ ಮಿತಭಾಷಿಯಾಗಿದ್ದಾನೆ.

ಅದೆಂಥದೋ ವಿಚಿತ್ರವಾದ ಅಸಹಜ ನಗುವನ್ನು ರೂಢಿಸಿಕೊಂಡಿದ್ದಾನೆ. ಎಳನೀರಿಗೆ ನಿಂಬೆ ಹಣ್ಣಿನ ರಸ ಬೆರೆಸಿ ಕೊಡಲಾ ಎಂದು ಕೇಳುತ್ತಾನೆ. ಯಾವಾಗಲೂ ತೊಳೆದು ಇಸ್ತ್ರಿ ಮಾಡಿದ, ಫಳಫಳನೆ ಹೊಳೆಯುವ ಬಿಳಿ ಅಂಗಿ ಹಾಕಿರುತ್ತಾನೆ.‌

ಇನ್ನು ಆ ಹುಡುಗ ಅಲ್ಲಲ್ಲಿ ತುಂಡರಿಸಿದ ಜೀನ್ಸ್ ಪ್ಯಾಂಟ್ ಮತ್ತು   Life is fun ಎಂಬ ಬರಹವಿರುವ ಕೊಳೆಯಾದ ಟಿ ಶರ್ಟನ್ನೇ ಯಾವಾಗಲೂ ಹಾಕಿಕೊಂಡಿರುತ್ತಾನೆ. ಅವನ ಬಳಿ ಅದೊಂದೇ ಟಿ ಶರ್ಟ್ ಇದೆಯೋ ಅಥವಾ ಅಂಥವೇ ಮೂರು ನಾಲ್ಕು ಇವೆಯೋ ತಿಳಿಯದು.‌

*      *       *         

ಅಜ್ಜನ ಬಳಿ ಹಿಂದೊಮ್ಮೆ ನಾನು ಹೋದಾಗ ಹೀಗಾಯಿತು; ಆ ಇನ್ನೊಬ್ಬ ಹುಡುಗ ವ್ಯಾಪಾರಿ ಸರಿಯಾಗಿ ಇವನ ಗಾಡಿಯ ಮುಂದೆ ತಂದು ತನ್ನ ಬೈಕ್ ಅಡ್ಡ ನಿಲ್ಲಿಸಿ ಹೋಗಿ ವ್ಯಾಪಾರ ಶುರುವಿಟ್ಟುಕೊಂಡ. ಅದಕ್ಕೆ ಅಜ್ಜ ನನ್ನನ್ನೂ ಸೇರಿದಂತೆ ಅಲ್ಲಿದ್ದವರ ಬಳಿ ಈ ಬಗ್ಗೆ ಕಂಪ್ಲೇಂಟ್ ಮಾಡ ತೊಡಗಿತು. ‘ನೋಡಿ , ನೀವೇ ಹೇಳಿ. ಹೀಗೆ ಗಾಡಿ ಮುಂದೆ ಅಡ್ಡ ಬೈಕ್ ಇಟ್ರೆ ಗಿರಾಕಿಗಳು ಬರ್ತಾರಾ ? ಬೇಕಂತಲೇ ಹೀಗೆ ಮಾಡಿದ್ದಾನೆ’. 

ಅದಕ್ಕೆ ಆ ಹುಡುಗನೂ ಶುರು ಮಾಡಿದ. ‘ನಿನ್ನೆ ನೀವು ನನ್ನ ಗಾಡಿ ಮುಂದೆ ಬೇಕಂತಲೇ ಆಟೋ ನಿಲ್ಸಿಕೊಂಡಾಗ ನಾನು ಹೇಳಿದ್ರೆ ಕೇಳಿದ್ರಾ ? ಈಗ ನನಗೇನು ಹೇಳೋಕ್ ಬಂದಿದೀರಾ ? ‘ ಎಂದು ಆ ಹುಡುಗನೂ ರೇಗಿದ. ಆ ಹುಡುಗ ಸ್ವಲ್ಪ ಪೊರ್ಕಿಯ ಥರಾನೇ ಕಾಣುತ್ತಿದ್ದ. ಅವನು ಅಲ್ಲಿ ಗಾಡಿ ಇಡಲಾರಂಭಿಸಿದ ಮೇಲೆ ಅಜ್ಜನಿಗೆ ಕೆಲವು ದಿನ ಸ್ವಲ್ಪ ವ್ಯಾಪಾರ ಕಮ್ಮಿಯಾಗಿದ್ದೇನೋ ನಿಜ.‌ ಆದರೆ, ಹುಡುಗನ ಬಳಿ ಯಾವಾಗಲೂ ಗಿರಾಕಿಗಳೇನೂ ಇರುತ್ತಿರಲಿಲ್ಲ. ಹಾಗೆ ನೋಡಿದರೆ ಅಜ್ಜನಿಗೆ ಬಹುತೇಕ ದಿನಗಳಲ್ಲಿ ಮೊದಲಿನಷ್ಟೆ ವ್ಯಾಪಾರವಾಗುತ್ತಿತ್ತು.‌

ಆದರೂ ಅಜ್ಜ ಆಟೋ ಅಡ್ಡ ಇಡುವಂಥ ತಂತ್ರವನ್ನು ಅದೇಕೆ ಅನುಸರಿಸದನೋ ತಿಳಿಯದು. ಹಾಗೆ ನನ್ನೆದುರಲ್ಲೆ ಇಬ್ಬರೂ ಜಗಳ‌ ಮಾಡಲಾರಂಭಿಸಿದರು. ‘ನೀವು ನನ್ನನ್ನ ಇಲ್ಲಿ ಎಷ್ಟು ವರ್ಷದಿಂದ ನೋಡ್ತಿದ್ದೀರಿ‌ ಹೇಳಿ‌ ಸರ್ ? ನಾನು ಅಂಥವನಾ ಆಟೋ ಅಡ್ಡ ಇಡ್ತೀನಾ ? ನಾನು ಈ ಚಿಪ್ಪುಗಳನ್ನೆಲ್ಲ ತುಂಬಿಕೊಳ್ಳಲು ಆಟೋ ನಿಲ್ಸಿದ್ದೆ ಅಷ್ಟೆ’ ಎಂದು ಅಜ್ಜ , ‘ ಚಿಪ್ಪು ತುಂಬುಕೊಳ್ಳೋಕೆ ಯಾರ್ರಿ ಬೇಡ ಅಂತಾರೆ ಅದಾದ ಮೇಲೆ ಒಂದು ತಾಸು ಇಲ್ಲೇ ನಿಲ್ಸಿದ್ದಾನೆ ಮುದುಕ. ಈಗ ನೋಡಿ ಹೆಂಗ್ ಉರೀತಿದೆ ಅವ್ನಿಗೆ ‘ ಎಂದ ಹುಡುಗ ಅಜ್ಜನ ಗಾಡಿ ಹತ್ತಿರವೇ ಬಂದ.

ಮುದುಕ ಎಂಬ ಪದ ಅಜ್ಜನಲ್ಲಿ ಅದೇನು ಮಾಡಿತೋ ಗೊತ್ತಿಲ್ಲ. ಅಜ್ಜ  ಏನನ್ನೂ ಮಾತನಾಡಲಿಲ್ಲ. ಹಾಗೆಲ್ಲ ವಯಸ್ಸಾದವರಿಗೆ  ಹೇಳ್ಬಾರ್ದಪ್ಪ, ನೀವಿಬ್ಬರೂ ನಿಮ್ಮ ನಿಮ್ಮ ವ್ಯಾಪಾರ ಮಾಡಿಕೊಂಡು ಹೋಗ್ಬೇಕು’ ಎಂಬ ನ್ಯಾಯ ತೀರ್ಮಾನದ ನನ್ನ ಮಾತು ಮುಗಿಯುವಷ್ಟರಲ್ಲಿ ಆ ಹುಡುಗ ತನ್ನ ಬೈಕನ್ನು ಆ ಜಾಗದಿಂದ ತೆಗೆಯಲು ಹೊರಟಿದ್ದ. ಇನ್ನೇನು ಅವನು ಬೈಕ್ ಅಲ್ಲಿಂದ ತೆಗೆಯಬೇಕು ಅನ್ನುವಷ್ಟರಲ್ಲಿ, ಸುಮ್ಮನೆ ನಿಂತಿದ್ದ ಅಜ್ಜ,  ಕೈಯಲ್ಲಿದ್ದ ಕತ್ತಿಯನ್ನು ಎತ್ತಿ ಹಿಡಿಯುತ್ತಾ, ಸಣ್ಣಗೆ ‘ನನಗ್ ಗೊತ್ತು ಎಲ್ಲಿ, ಏನ್ ಮಾಡ್ಬೇಕು ಅಂತ ‘ ಎಂದಿತು. ಅದಕ್ಕೆ ಆ ಹುಡುಗ, ‘ ಓಹ್ ! ನಿನ್ಗೆ ಇಷ್ಟಿರಬೇಕಾದ್ರೆ ಇನ್ನು ನನ್ಗೆ ಎಷ್ಟಿರಬೇಕು. ನೋಡ್ತೀನಿ ಅದೇನ್ ಕಿತ್ಕೋತೀಯಾ ಅಂತ. ನಾನೂ ಹುಡುಗ್ರನ ಇಟ್ಟಿದ್ದೀನಿʼ ಬೈಕ್ ನ ಅಲ್ಲೇ ಬಿಟ್ಟು ತನ್ನ ಗಾಡಿಯ ಬಳಿ ಹೋದ.

ಅವನ ಗಾಡಿ ಹತ್ತಿರ ಕಾಯುತ್ತಿದ್ದ ಒಂದೆರೆಡು ಗಿರಾಕಿಗಳೂ ಎಳನೀರು ಕೊಳ್ಳದೇ ಅಲ್ಲಿಂದ ಹೊರಟು ಹೋದರು. ಅಜ್ಜ ಹಲ್ಲು ಮಸೆಯುತ್ತಿದ್ದ. ಒಳಗೊಳಗೇ ಹುಡುಗನ ಬಳಿ ಎಳನೀರು ಕೊಳ್ಳದೇ ಹಾಗೇ ಹೋದ ಗಿರಾಕಿಗಳಿಗೆ ಥ್ಯಾಂಕ್ಸ್ ಹೇಳಿಕೊಂಡಂತೆ ಭಾಸವಾದ. ಆ ಹುಡುಗ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕಿವಿಯಲ್ಲಿ ಇಯರ್ ಫೋನ್ ಸಿಗಿಸಿಕೊಂಡು ಮಜವಾಗಿ ಹಾಡು ಕೇಳುತ್ತಿದ್ದ. ಹಲ್ಲು ಮಸೆಯುತ್ತಿದ್ದ ಅಜ್ಜ, ಅವನ ಕೈಯಲ್ಲಿದ್ದ ಕತ್ತಿ ಮತ್ತು ನಿರ್ಲಿಪ್ತವಾಗಿ ಹಾಡು ಕೇಳಿಸಿಕೊಳ್ಳುತ್ತಿದ್ದ ಹುಡುಗ – ಈ ಮೂರು ಚಿತ್ರಗಳನ್ನು ಮನದಲ್ಲಿಟ್ಟುಕೊಂಡು ಅಲ್ಲಿಂದ ಹೊರಟೆ.

ರಾತ್ರಿ ಮಲಗಿದಾಗ ಏನೇನೋ ಯೋಚನೆ. ಕತ್ತಲಾದ ಮೇಲೆ ಆ ಅಜ್ಜ ತನ್ನ ಕತ್ತಿಯನ್ನು ಈ ಹುಡುಗನ ಮೇಲೆ ಬಳಸಿಬಿಟ್ಟರೆ ? ಅವನು ಅದ್ಯಾರೋ ಹುಡುಗರನ್ನು ಕರ್ಕೊಂಡ್ ಬಂದ್ ಹೊಡೆಸಿಬಿಟ್ರೆ ? ಯಾರಿಗೋ ಒಬ್ಬರಿಗೆ ಆಘಾತವಾಗುವುದಂತೂ ಖಚಿತ ಎಂದು ಯೋಚಿಸುತ್ತ ದುಗುಡಕ್ಕೊಳಗಾದೆ. ಹಾಗೆಯೇ ಇಂಥ ಕ್ಷುಲ್ಲಕ ಕಾರಣದ ಜಗಳಗಳು ದಿನಂಪ್ರತಿ ನಡೆಯುತ್ತಲೇ ಇರುತ್ತವೆ. ನಾನೇ ಓವರ್ ಥಿಂಕಿಂಗ್ ಮಾಡುತ್ತಿದ್ದೇನೆ ಅಷ್ಟೆ. ಏನೂ ಆಗುವುದಿಲ್ಲ ಎಂದು ಸಮಾಧಾನ ಮಾಡಿಕೊಂಡು ನಿದ್ದೆ ಮಾಡಿದೆ. 

*      *    * 

ಆದರೆ ನಾನು ಹಾಗೆ ಯೋಚಿಸಿದ್ದು ಏಕೆಂದರೆ ಕೆಲ ದಿನಗಳ ಹಿಂದೆ ಆಸ್ಪತ್ರೆಯೊಂದರ ಮುಂಭಾಗದಲ್ಲಿ ಒಂದಷ್ಟು ಜನ ತುಂಬಾ ರೋಧಿಸುತ್ತಿದ್ದರು. ಡೆಡ್ ಬಾಡಿಗಾಗಿ ಕಾಯುತ್ತಿದ್ದ ಅವರು ಕೂಗಾಟ, ರೋದನ, ಸಿಟ್ಟು ಮತ್ತು ಅಸಾಹಯಕತೆಗಳ ಹಿಂದಿನ ಕಾರಣ ಏನು ಎಂದು ಅಲ್ಲಿದ್ದ ಸೆಕ್ಯೂರಿಟಿ ಗಾರ್ಡನ್ನು ಕೇಳಿದೆ. ಅಣ್ಣ ತಮ್ಮಂದಿರು ಏನೋ ಜಾಗಕ್ಕಾಗಿ ಹೊಡೆದಾಡಿದ್ರಂತೆ. ಅಣ್ಣನೋ‌ ತಮ್ಮನೋ ಮಚ್ಚಿನಿಂದ ತಲೆಗೆ ಹೊಡೆದಿದ್ನಂತೆ.‌ ಏಳು ದಿನ ಐಸಿಯು ನಲ್ಲಿದ್ದವನು ಇವತ್ತು ಸತ್ತೋದ ಎಂದು ನಿರ್ಭಾವುಕನಾಗಿ ಹೇಳಿದ್ದ.‌ ಇದನ್ನು ನೆನೆಸಿಕೊಂಡದ್ದರಿಂದಲೇ ನನಗೆ ಅಜ್ಜ ಹಲ್ಲು ಮಸೆದು ,ಕೈಯಲ್ಲಿ ಕತ್ತಿ ಹಿಡಿದದ್ದು ಕಂಡು ಭಯವಾಯ್ತು. 

*          *          * 

ಅಂಥದ್ದೇನು ಆಗದಿರಲಿ ಎಂದು ಆಶಿಸುತ್ತಿದ್ದೆ. ಕಳೆದವಾರ ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ನಲ್ಲಿ ಹೊಸ ರಸ್ತೆ ನಿರ್ಮಾಣಕ್ಕೆಂದು ಜೆಸಿಬಿ , ರೋಲರ್ , ಟ್ರಾಕ್ಟರ್ ,ಲಾರಿಗಳೆಲ್ಲ ಬಂದು ನಿಂತು ಇನ್ಮೇಲೆ ಅಲ್ಲಿ ಬೀದಿ ಬದಿಯ ಯಾವ ವ್ಯಾಪಾರವೂ ಸಾಧ್ಯವಾಗದ ರೀತಿಯಲ್ಲಿ ಕಾಮಗಾರಿ ಪ್ರಾರಂಭಿಸಿದ್ದಾರೆ. ಅಜ್ಜ ಮತ್ತು ಹುಡುಗ ಯಾರನ್ನೂ ದೂರದೆ ಪರಸ್ಪರರ ಮೇಲೆ ಇಬ್ಬರೂ ಮರುಕ ಪಟ್ಟುಕೊಳ್ಳುತ್ತಾ ಅಲ್ಲಿಂದ ತಮ್ಮ ಗಾಡಿಗಳನ್ನು ಎತ್ತಿದರು. ನಾವು ಗಳಿಸಿದ್ದೆಲ್ಲವನ್ನೂ ನಾವೇ ಅನುಭವಿಸಲು ಸಾಧ್ಯವಿಲ್ಲ ಎಂದು ತಿಳಿಯದೆ ಮನುಷ್ಯರು ಮಾಡುವ ‘ವ್ಯಾಪಾರ’ಗಳಿಗೆ ಏನಾದರೂ ಅರ್ಥವಿದೆಯೆ ಎಂದು ನಾನು ಯೋಚಿಸುತ್ತಾ ಕುಳಿತೆ …

January 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: