ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಬ್ಬಂದಿ

ಜಾಹಿಧಾ

ನಾನಾಗ ….
ಅಮ್ಮನ ಮಡಿಲಲ್ಲಾಡುತ್ತಿದ್ದ ಹೂ ಕೂಸು
ನನಗಾಗ ತಿಳಿದಿರಲ್ಲಿಲ್ಲ…
ನನ್ನ ಹೆತ್ತವಳೊಬ್ಬ ಹಿಂದು ಹೆಂಗಸು ಎಂದು
ಇದೂ ತಿಳಿದಿರಲಿಲ್ಲ…
ನನ್ನ ತೊಗಲೊಳಗೆ
ನೆತ್ತರು ಸುರಿದವನೊಬ್ಬ ಮುಸ್ಲಿಮನೆಂದು…..

ನಾನು ಬೆಳೆದೆ…
ಬೆಳೆಯುತ್ತಾ…
ಮೈನೆರೆದೆ..
ಪಕ್ಕದ ಮನೆಯ ಹುಡುಗಿಯೊಬ್ಬಳು ಬಂದು…
ಕೊಬ್ಬರಿ ಬೆಲ್ಲವ ಕೊಟ್ಟು
ನೀರೆರೆದು.. ಸಲಹಿದಾಗಲೂ
ನನಗೆ ತಿಳಿದಿರಲಿಲ್ಲ…
ಅವಳೊಬ್ಬ ಹಿಂದು ಹುಡುಗಿ ..ಮತ್ತು
ನಾನು ಮುಸ್ಲಿಂ ಎಂದು …

ಊರ ಕಣ್ತಪ್ಪಿಸಿ ಅಪ್ಪ ಬಾಡು ತಿನ್ನಿಸುತ್ತಿದ್ದರೆ….
ಗಂಡನ ಕಣ್ತಪ್ಪಿಸಿ ಅಮ್ಮ…..
ನನ್ನಣೆಗೆ ಬೊಟ್ಟಿಟ್ಟು ಸಂಭ್ರಮಿಸುತ್ತಿದ್ದಳು…
ತುತ್ತಿಗೆ ಮೊದಲು ಅಪ್ಪ…
‘ಬಿಸ್ಮಿಲ್ಲಾ’… ಎಂದರೆ
ದಿಂಬಿಗೆ ತಲೆಕೊಡುವಾಗ ಅಮ್ಮ
‘ಶಿವಾ’ ಎನ್ನುತ್ತಿದ್ದಳು
ನನಗಾಗಲೂ ತಿಳಿದಿರಲ್ಲಿಲ್ಲ
ಅವನು ಮುಸ್ಲಿಂ…
ಮತ್ತು ಅವಳು ಹಿಂದು ಎಂದು ……

ಹಬ್ಬಗಳಾದವು… ಜಾತ್ರೆಗಳಾದವು….
ದೀಪಾವಳಿಯ ಹೊಸಬಟ್ಟೆಗೆ
ರಂಜಾನ್ ನ ಡಾಬು ಸುತ್ತಿಕೊಳ್ಳುತ್ತಿದ್ದೆ…
ಅಪ್ಪನ ಹೆಗಲ ಮೇಲೆ ಕೂತು ಮಸೀದಿಗಳ….
ಅಮ್ಮನ ಸೆರಗ ಹಿಡಿದು ಮಂದಿರಗಳ ಸುತ್ತಿದೆ…
ನನಗಾಗಲೂ ತಿಳಿಯಲಿಲ್ಲ ……
ನಾನು ಹಿಂದು ಅಥವಾ ಮುಸಲ್ಮಾನಳೆಂದು…

ಅಪ್ಪ ಹೆಣವಾದಾಗ …..
ಹೂ ಸುರಿದವರು…
ದೀಪ ಬೆಳಗಿದವರು…
ವಿಭೂತಿ ಹಚ್ಚಿ ಕಣ್ಣೀರಿನೊಂದಿಗೆ
ಹೆಗಲು ಕೊಟ್ಟವರು ಹಿಂದುಗಳು,
ಆ ಹೆಣ ಮುಸ್ಲಿಂ ಎಂದು..
ನಾನಾಗ ತಿಳಿದಿರಲಿಲ್ಲ.
ಈಗ…….
ಇಲ್ಲಿ ನೆತ್ತರಿಗೂ
ಹಲವಾರು ಬಣ್ಣಗಳು………..!

‍ಲೇಖಕರು Avadhi

18 October, 2020

1 Comment

  1. ಯಂ ಕೃಷ್ಣರಾಜ ಭಟ್ ಹೆಬ್ರಿ

    ಈಗ…….
    ಇಲ್ಲಿ ನೆತ್ತರಿಗೂ
    ಹಲವಾರು ಬಣ್ಣಗಳು………..!

    ಪ್ರಸ್ತುತ ಪರಿಸ್ಥಿತಿಗೆ ಕೈಗನ್ನಡಿ…!
    ಕೇವಲ ಭರವಸೆಯ ಬೆಳಕಿನಲ್ಲಿ ಬಾಳ ಬೇಕಾದ ಅನಿವಾರ್ಯತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading