“ನಾನು ಅರವಸು, ರೈಭ್ಯ ಋಷಿಯ ಕಿರಿಯ ಮಗ”, ಗಿರೀಶ್ ಕಾರ್ನಾಡರ ‘ಅಗ್ನಿ ಮತ್ತು ಮಳೆ’ ನಾಟಕದ ಈ ಸಾಲುಗಳು ನನ್ನ ಕಿವಿಯಲ್ಲಿ ಇನ್ನೂ ಗುಂಯಿಗುಡುತ್ತಿದೆ. ಹತ್ತು ವರ್ಷದ ಹಿಂದೆ ಕಾಲೇಜು ರಂಗಭೂಮಿಯಲ್ಲಿ ನಮ್ಮ ಗುರು, ಸುಳ್ಯದ ರಂಗಮನೆಯ ಜೀವನರಾಂ ಸುಳ್ಯ ಅವರ ನಿರ್ದೇಶನದಲ್ಲಿ ನಾವು ಈ ನಾಟಕವನ್ನು ಆಡಿದ್ದೆವು.
“ನಾನು ಅರವಸು” ಎನ್ನುವಾಗ ಮುಗ್ಧ ಅರವಸುವಿನ ಬೆಂಕಿಯಂತಹ ಒಳಗುದಿ, ರಕ್ತಪಾತಗಳು, ಅವನ ಕಣ್ಣ ಮುಂದೆ ಹಾದು ಹೋಗಿರಬಹುದಾದಾ ಸಂಕೀರ್ಣ ಸಂಬಂಧಗಳು, ಮನುಷ್ಯನ ಕ್ರೌರ್ಯಗಳಿಗೆ ನಲುಗಿ ಥಂಡಿಗಟ್ಟಿದ ಅವನ ಮೆದು ಮನಸ್ಸು, ಎಲ್ಲವನ್ನೂ ಕಣ್ಣಲ್ಲಿ, ಧ್ವನಿಯ ಗಡಸಲ್ಲಿ ಹೇಳಬೇಕಾಗಿತ್ತು. ಆ ಹೊತ್ತಿಗೆ ಎಳೆಯರಾಗಿದ್ದ ನಮಗೆ ತಂದೆಯನ್ನು ಕೊಂದ ಅಣ್ಣ ಪರಾವಸು ಯಜ್ಞ ಸತ್ರದಲ್ಲಿ ಸ್ವಂತ ತಮ್ಮನನ್ನು “ಯಾರು ನೀನು”, ಎಂದಾಗ, “ನಾನು ಅರವಸು” ಎಂಬ ಎರಡು ಶಬ್ಧಗಳಲ್ಲಿ ತೋರಿಸಬೇಕಾಗಿದ್ದ ನೋವು, ಪ್ರೀತಿ, ಕ್ರೌರ್ಯಗಳ ಮೊನಚು ಅರ್ಥವಾಗಿರಲಿಕ್ಕಿಲ್ಲ.
“ಅಗ್ನಿ ಮತ್ತು ಮಳೆ” ಒಂದು ಸಾಹಿತ್ಯ ಕೃತಿ. ಆಮೇಲೆ ಅದೊಂದು ರಂಗನಿರ್ಮಿತಿಯೂ ಹೌದು. ನಾಟಕವನ್ನು ಓದುವಾಗ ಸಿಗುವ ಅನುಭೂತಿ ಒಂದು ತೆರನಾದರೆ, ಅಭಿನಯಿಸುವುದು, ಅಥವಾ ಪ್ರೇಕ್ಷಕನಾಗುವುದು ಇನ್ನೊಂದು ರೀತಿಯದ್ದು. ಅದಕ್ಕಿಂತಲೂ ಚಂದದ ಅನುಭವವೆಂದರೆ ನಾಟಕ ತಾಲೀಮಿನಲ್ಲಿ ಸಿಗುವ ಅನುಭವಗಳು.
ನಾಟಕದ ತಾಲೀಮು ನಡೆಯುತ್ತಿದ್ದ, ಒಂದು ಪುಟ್ಟ ಕ್ಲಾಸ್ ರೂಂ ನಮ್ಮ ಇಡೀ ಪ್ರಪಂಚವಾಗಿತ್ತು. ಆ ಒಂದು ಸಣ್ಣ ಜಾಗದಲ್ಲಿ ನಾಟಕದ ಪ್ರಾಪರ್ಟಿಗಳು, ಬೆಂಚು, ಡೆಸ್ಕು, ಗೆಳೆಯರು, ಪಾತ್ರಧಾರಿಗಳೆಲ್ಲಾ ತುಂಬಿಕೊಂಡಿದ್ದೆವು. ಸುತ್ತಮುತ್ತ ಪ್ರತಿಧ್ವನಿಸುತ್ತಿದ್ದ ಚೆಂಡೆಯ ಸದ್ದು, ಡೈಲಾಗುಗಳು, ಕಾಲೇಜಿನವರಿಗೆ “ಓ ಇದು ನಾಟಕದವರದ್ದು”, ಎಂದು ತಿಳಿದಿತ್ತು. ಆಗಾಗ ಬಂದು ನಾಟಕ ಹೇಗೆ ನಡೆಯುತ್ತಿದೆ ಎಂದು ಇಣುಕಿ ಹೋಗುತ್ತಿದ್ದರು. ಆ ಕಾಲೇಜಿನ ಕಟ್ಟಡಗಳು, ಗಾಳಿ, ಬೆಳಕು, ಮತ್ತೆ ಅಲ್ಲಿ ಇದ್ದ ಮನುಷ್ಯರೆಲ್ಲಾ ನಾಟಕದ ಒಂದು ಭಾಗವಾಗಿ ಅರಿವಿಲ್ಲದೆ ಒಳ ಸೇರಿದ್ದರು.
ಒಬ್ಬರು ಅಭಿನಯಿಸುವಾಗ ಉಳಿದವರು ಗಮನಿಸಿ, ಇಡೀ ನಾಟಕದ ನಡೆಯನ್ನು ತಿಳಿದುಕೊಳ್ಳಬೇಕಿತ್ತು. ನಮ್ಮ ಕೀಟಲೆಗಳು, ಗುರುಗಳಿಗೆ ಗೊತ್ತಾಗದ ಕಣ್ಣುಸನ್ನೆಗಳು, ಪೋಲಿ ಜೋಕುಗಳು, ಮಧ್ಯ ಸಿಗುತ್ತಿದ್ದ ಬೈಗುಳಗಳು ಎಲ್ಲವನ್ನು ಮರೆಸುವ ಸೀರಿಯೆಸ್ ನೆಸ್ ಒಂದು ತನ್ನಿಂತಾನೇ ಬರುತ್ತಿತ್ತು. ನಮ್ಮ ಎಳೆ ಮನಸಿನ ಮುನಿಸು, ಪ್ರೀತಿ, ತುಂಟತನದೊಳಗೆ ನಮಗೆ ತಿಳಿಯದ ಬೆಳಕಿನ ಲೋಕವೊಂದು ಹೃದಯಕ್ಕೆ ಮುಟ್ಟುತಿತ್ತು. ನಾಟಕದ ಪ್ರಾಪರ್ಟಿಗಳನ್ನು, ಉದಾಹರಣೆಗೆ ಒಂದು ಮರ ಎಂದು ಇಟ್ಟುಕೊಳ್ಳೋಣ. ಆ ಮರವನ್ನು ದಿನಾ ನೋಡೀ, ಮುಟ್ಟಿ, ಮೂಸಿ ಅದು ನಮಗೆ ಒಗ್ಗಿ ಹೋಗಿರುತ್ತದೆ. ನಾವೇ ಒಂದು ರಾತ್ರಿ ಕುಳಿತು ಆ ಮರವನ್ನು ತಯಾರಿಸಿದ್ದೆವು. ಆ ರಾತ್ರಿಯ ನಿಶ್ಯಬ್ಧ, ಮಾತುಕತೆ, ಗೆಳೆಯರು, ಮತ್ತು ಒಮ್ಮೊಮ್ಮೆ ನಿತ್ತಿಲೆ ಅರವಸು, ಪರವಸು, ಆಗಿಯೋ ಇನ್ನೊಂದು ಸಲ ನಿಜದ ನಾವುಗಳಾಗಿಯೋ ಸತ್ಯ ಮತ್ತು ಸುಳ್ಳಿನ ಗೆರೆಯನ್ನು ಮರೆಸುವ ಪ್ರತಿಮೆಯಂತೆ ನಾವು ತೋರುತ್ತಿದ್ದೆವು.
ಈ ಸಾಹಿತ್ಯ ಕೃತಿಯನ್ನು ಓದುವಾಗ ಯವಕ್ರೀತ, ಪರಾವಸು, ರೈಭ್ಯ ನಂತಹ ಬ್ರಾಹ್ಮಣ ಮುನಿಗಳ ಜ್ಞಾನ ಯುದ್ಧ, ಒಳಗೊಳಗೆ ಕುದಿಯುವ ಶ್ರೇಷ್ಟತೆಯ ವ್ಯಸನಕ್ಕೆ ಬೀಳುವ ಸಾಲು ಸಾಲು ಹೆಣಗಳು, ರೈಭ್ಯ ಋಷಿಯ ಕಿರಿಯ ಮಗ ಅರವಸು ಎಲ್ಲದರ ವ್ಯರ್ಥತೆಯನ್ನು ಅರಿತು ನಿಷಾದರಕನ್ಯೆ ನಿತ್ತಿಲೆಯನ್ನು ಪ್ರೀತಿಸುವುದು, ರೈಭ್ಯನ ಸೊಸೆ ವಿಶಾಖ ಯವಕ್ರೀತನೊಂದಿಗೆ ಕೂಡುವುದು ಎಲ್ಲವೂ ನಾಟಕದೊಳಗೆ ನಾಟಕ ನಡೆವಂತೆ ನಮ್ಮ ಮನಸ್ಸನ್ನು ಕಾಣದ ಲೋಕದತ್ತ ಹೊಸೆಯುತ್ತಿರುತ್ತದೆ. ಯವಕ್ರೀತನ ಸ್ವಾರ್ಥದ ಅರಿವಾಗಿ ಮಂತ್ರದ ಕಮಂಡಲವನ್ನು ಚೆಲ್ಲುವ ವಿಶಾಖೆಯದ್ದು, ಪ್ರೀತಿಯೋ, ದ್ವೇಷವೋ ಎಂದು ಅರಿವಾಗದೆ ಮಾಂತ್ರಿಕತೆಯ ಸುಖವೊಂದು ಕಾಡುತ್ತಿರುತ್ತದೆ. ವಿಶಾಖೆ, ನಿತ್ತಿಲೆ ಹೇಗಿದ್ದಿರಬಹುದೆಂದು ತಳಮಳಿಸುತ್ತಿರುತ್ತದೆ.
ಇದೇ ಸಾಹಿತ್ಯಕೃತಿಯನ್ನು ಆಧರಿಸಿದ ರಂಗಪ್ರಯೋಗದಲ್ಲಿ ರಕ್ತ, ಮಾಂಸ ದೇಹವಿರುವ ಅರವಸು, ಪರವಸು, ನಿತ್ತಿಲೆಯರು ಕಣ್ಣಮುಂದೆ ಬಂದು, ಯಜ್ಞ ಕುಂಡದಲ್ಲಿ ಬೆಂಕಿ ಕುದಿವಾಗ, ನಿತ್ತಿಲೆ ತೀರಿಹೋಗಿ ಮಳೆ ಬರುವಾಗ, ಬ್ರಹ್ಮ ರಾಕ್ಷಸನಿಗೆ ಮುಕ್ತಿ ದೊರೆತಾಗ ಪ್ರೇಕ್ಷಕನೂ ನಾಟಕದ ಒಂದು ಪಾತ್ರವಾಗಿರುತ್ತಾನೆ. ನಮ್ಮ ನಾಟಕದ ರಿಹರ್ಸಲ್ ನಡೆವಾಗ ಬರುವ ಕೆಲವರನ್ನು ನೋಡಿದ್ದೇನೆ. ಸಾವು, ನೋವು, ಯುದ್ಧ, ಪ್ರೀತಿಗೆ ಅವರ ಮುಖಭಾವ ಬದಲಾಗುತ್ತದೆ. ಎಲ್ಲಾ ಮರೆತು ಪಾತ್ರದ ಗತಿಯಲ್ಲೇ ಅವರು ಸಾಗುತ್ತಿರುತ್ತಾರೆ, ರಸಾನುಭವ ಪಡೆಯುತ್ತಾರೆ.
ನಾನು ಎರಡು ವರುಷದ ಹಿಂದೆ ‘ಮಲೆಗಳಲ್ಲಿ ಮದುಮಗಳು’ ನಾಟಕ ನೋಡುವಾಗ ಅಂತಕ್ಕನ ಮಗಳು ಕಾವೇರಿ ಸಾಯುವ ಪ್ರಸಂಗದಲ್ಲಿ ಪಕ್ಕದಲ್ಲೇ ಸಾವು ನಡೆದಂತೆ ಬೆಚ್ಚಿ ಬಿದ್ದಿದ್ದೆ. ಆದ್ದರಿಂದ ಪ್ರೇಕ್ಷಕನಿಗೆ “ನಾನು ಅರವಸು” ಎಂಬುದರಲ್ಲೇ ಘಟನೆಯ ಆಳವನ್ನುಅರ್ಥಮಾಡಿಸ ಬೇಕು. ರಂಗದ ಮೇಲಿನ ಅರವಸು ಪಾತ್ರಧಾರಿ ತನ್ನ ನಿಜ ಜೀವನದಲ್ಲಿ ಹೇಳದೆ ಉಳಿದ ಯಾವುದೋ, ಹಳೆಯ ನೋವನ್ನು ಆ ಪಾತ್ರಕ್ಕೆ ತುಂಬಿಕೊಡಬಲ್ಲ. ಆದರೆ ಸಾಹಿತ್ಯ ಕೃತಿಯನ್ನು ಓದುವಾಗ ಸಿಗುವ ಅರವಸು, ನಮಗೆ ಬೇಕಾದ ಹಾಗೆ ಬೆಳೆಯುವ ಅರವಸು ಆಗಬಲ್ಲ.
ನಾನು ಚಿಕ್ಕಂದಿನಲ್ಲಿ ಕಂಪನಿ ನಾಟಕಗಳು, ಊರಿನ ಯುವಕರು ಸೇರಿ ಆಡುತ್ತಿದ್ದ ಸಾಮಾಜಿಕ ನಾಟಕಗಳನ್ನು ನೋಡಿದ್ದೇನೆ. ನಮ್ಮೂರಿನಲ್ಲಿ ಈಗಲೂ ಹಳೆಯ ನಾಟಕಗಳನ್ನು ನೆನೆಸಿಕೊಂಡು, “ನಮ್ಮ ಪೈಗಳದ್ದು ಮತ್ತೆ ಶೆಟ್ರದ್ದು ಎಂತಾ ಲವ್ ಸೀನ್ ಮಾರಾಯ್ರೇ, ಅವರ ಡಾನ್ಸ್ ಹಾಡು, ಆಹಾ ಭಾರೀ ಶೋಕಿತ್ತು” ಎಂದು ಹೇಳುವುದನ್ನು ಕೇಳಿದ್ದೇನೆ. ಇನ್ನು ಅವರ ಕೆಲವು ಪ್ರಣಯ ಪ್ರಸಂಗಗಳನ್ನು, ನಾಟಕಕ್ಕೂ ಅನ್ವಯಿಸುವಂತೆ, ಇನ್ಯಾರಿಗೋ ತಗುಲುವಂತೆ ದ್ವಂದ್ವಾರ್ಥದಲ್ಲಿ ಹೇಳುತ್ತಿದ್ದರು.
ನಲವತ್ತು ಐವತ್ತು ವರ್ಷಗಳ ಹಿಂದೆ ನಮ್ಮೂರಲ್ಲಿ ದೊಡ್ಡಣ್ಣ ಶೆಟ್ಟರ ನಾಟಕ ಕಂಪೆನಿಯೊಂದು ಇತ್ತು. ಅಲ್ಲಿ, “ಮಾಮಿಗಾವಂದಿ ಮರ್ಮಾಯೆ” (ಅತ್ತೆಗಾಗದ ಅಳಿಯ), “ಒಣಸುಗಿಜ್ಜಂದಿ ಉಪ್ಪಡು” (ಊಟಕ್ಕಿಲ್ಲದ ಉಪ್ಪಿನಕಾಯಿ) ಹೀಗೆಲ್ಲಾ ತುಳು ನಾಟಕಗಳು ತಮಾಷೆಯ, ಕೊನೆಯಲ್ಲಿ ಸಾಮಾಜಿಕ ಸಂದೇಶವನ್ನು ನೀಡುತ್ತಿತ್ತು. ಆದರೆ ಆ ಕಾಲದಲ್ಲಿ ಸ್ಕ್ರಿಪ್ಟ್ ಎಂತ ಏನೂ ಇರಲಿಲ್ಲ. “ಮೋಕೆದಾ ಸಿಂಗಾರಿ, ಉಂತುದೇ ವೈಯ್ಯಾರಿ..” ಎಂದು ಅವರೇ ಹಾಡು ಬರೆದುಕೊಂಡು, ಡ್ಯಾನ್ಸು ಡೈಲಾಗು ಹೇಳಿಕೊಂಡು ಊರೂರು ತಿರುಗಾಡಿಕೊಂಡು ನಾಟಕ ಆಡುತ್ತಿದ್ದರು. ಪರದೆ, ತಬಲಾ, ಸೈಡ್ ವಿಂಗ್ಸ್, ಶಿಳ್ಳೆಗಳ ಪ್ರಪಂಚವೇ ಬೇರೆಯದಾಗಿತ್ತು.
ನಾಟಕದ ಇತಿಹಾಸವನ್ನು ನೋಡಿದರೆ ಪೂರ್ವದಲ್ಲಿ ಲಿಖಿತ ನಾಟಕಗಳು ಇರಲಿಲ್ಲ. ಪ್ರಯೋಗಕ್ಕೆಂದು ರಚಿಸಿರುವ ಕಾವ್ಯಗಳಿದ್ದರೂ ಸಂಭಾಷಣೆಗಳಿರದೆ, ಬಾಯಿಪಠದ ರೂಢಿಯೇ ಇಲ್ಲ. ಸಂದರ್ಭಕ್ಕೆ ತಕ್ಕ ಹಾಗೆ ಅವರ ಜೀವನಾನುಭವವೇ ಅವರನ್ನು ಮಾತಾಡಿಸುತ್ತಿತ್ತು. ಒಂದು ಕಡೆ ಗೌರೀಶ್ ಕಾಯ್ಕಿಣಿಯವರು, ನೃಪತುಂಗ ಕನ್ನಡ ಜನರನ್ನು ಹೊಗಳುತ್ತಾ “ಕುರಿತೋದದೆಯಂ ಕಾವ್ಯಪ್ರಯೋಗ ಪರಿಣತಮತಿಗಳ್” ಎಂಬುದನ್ನು ಕಾವ್ಯ ರಚನೆಗಲ್ಲದೆ, ಕಾವ್ಯವನ್ನು ನೆಚ್ಚಿದ್ದ ರಂಗಪ್ರಯೋಗದ ಕುರಿತೇ ಅಭಿಪ್ರಾಯಪಟ್ಟಿರಬಹುದೆಂದು ಹೇಳುತ್ತಾರೆ. ಇದರ ಸತ್ಯಾಸತ್ಯಾತೆ ನನಗೆ ತಿಳಿದಿಲ್ಲ.
ಹೀಗೆ ಹಳ್ಳಿಗಳಲ್ಲಿ ದಿನನಿತ್ಯದ ಅವರದೇ, ತಮಾಷೆ, ಅವರದೇ ಮಾತುಗಳು, ಒಬ್ಬರಿಗೊಬ್ಬರು ನೀಡುವ ಟಾಂಟ್ ಗಳು, ಸ್ತ್ರೀಪಾತ್ರಗಳ ಮೇಲಿನ ಮೋಕೆ, ಎಲ್ಲವೂ ಪ್ರೇಕ್ಷಕನಿಗೂ ಕಲಾವಿದನಿಗೂ ಉಲ್ಲಾಸ ನೀಡುತ್ತಿತ್ತು. ಊರು ಲವಲವಿಕೆಯಿಂದ ಇರುತ್ತಿತ್ತು. ಎಲ್ಲರ ಒಳಗೆ ಒಂದು ನಾಟಕ ನಡೆಯುತ್ತಿತ್ತು.
ಕೆ.ವಿ ಸುಬ್ಬಣ್ಣನವರು ಹೇಳುವಂತೆ ಒಂದು ಸಲ ಹಳ್ಳಿಗನೊಬ್ಬ ಒಂದು ಪಾತ್ರ ಮಾಡುವಾಗ ಸಿಗರೇಟು ಸೇದುತ್ತಾನೆ. ಆದರೆ ಆ ಪಾತ್ರಕ್ಕೆ ತೀರಾ ಸಿಗರೇಟಿನ ಅವಶ್ಯಕತೆ ಇರಲಿಲ್ಲ. ತನ್ನ ಅಪ್ಪನ ಮುಂದೆಯೋ ಇನ್ಯಾರೋ ಮುಂದೆಯೋ ತಾನು ಸಿಗರೇಟು ಸೇದುವುದನ್ನು ಹೇಳಲಾಗದವನು ರಂಗದ ಮೇಲೆ ಸೇದಿ, ನಿಜ ಜೀವನದಲ್ಲಿ ಆಗುವ ಮುಜುಗರವನ್ನು ತಪ್ಪಿಸಿಕೊಳ್ಳುತ್ತಾನೆ. ಇನ್ನೊಂದು ಸಲ ನಾಟಕದ ವಸ್ತು ಅಂತರ್ಜಾತಿ ವಿವಾಹ. ನಾಯಕನ ಅಪ್ಪ ನಾಯಕನನ್ನು ನಿಜದಲ್ಲಿ ಆಕ್ಷೇಪಿಸುವುದಿಲ್ಲ, ಹಾಗೇನಾದರೂ ಗೊಣಗಿಕೊಂಡರೂ ಅದು ನಾಟಕ ತಾನೆ? ‘
ಆದರೆ ಸುಬ್ಬಣ್ಣನವರು ಹೇಳುವಂತೆ ನಾಟಕಗಳನ್ನು ಹಳ್ಳಿಗಳಲ್ಲಿ ವ್ರತದಂತೆ ಪಾಲಿಸುತ್ತಿದ್ದ ಅಂತಹ ಸಮುದಾಯಗಳು ಈಗ ಜಾಸ್ತಿ ಕಾಣುವುದಿಲ್ಲ. ಅಂದಿನ ಪ್ರೇಕ್ಷಕ ನಾಟಕ ನೋಡಿ ಮತ್ತೆ ಬೆಳಗ್ಗೆ ಎದ್ದು ದಿನನಿತ್ಯದ ಕೆಲಸದಲ್ಲಿ ತೊಡಗುತ್ತಿದ್ದ. ಈಗಿನ ಪ್ರೇಕ್ಷಕ ದಿನನಿತ್ಯದ ಬವಣೆಯಿಂದ ತಪ್ಪಿಸಿಕೊಳ್ಳಲು ನಾಟಕದಂತಹ ಕಲೆಯ ಮೊರೆ ಹೋಗುತ್ತಿದ್ದಾನೆ. ಅದು ಪ್ರೇಕ್ಷಕನ ಒಳಪ್ರಜ್ಞೆಗೆ ಇಳಿಯುತ್ತದಷ್ಟೆ. ಅದು ಯಾವ ಕಲಹವನ್ನೂ ಬೇಡದೆ ಕನಸಿನ ಲೋಕದಲ್ಲಿ ತನ್ನಷ್ಟಕ್ಕೆ ಸುಮ್ಮಗಿರುತ್ತದೆ. ಬೇಕಾದಾಗ ಹೊರಹೊಮ್ಮುತ್ತದೆ.
ಜಪಾನಿನಲ್ಲಿ ೧೬ನೇ ಶತಮಾನದಲ್ಲಿ ಸುಶಿಕ್ಷಿತರು ನೋಡುವ “ನೋ” ಎಂಬ ನಾಟಕ ಪ್ರಕಾರವಿತ್ತು. ಅದರಲ್ಲಿಇಬ್ಬರೇ ನಟರು ಭಾಗವಹಿಸುತ್ತಿದ್ದರು. ಕೆಲವು ಪಾತ್ರಗಳನ್ನು ಮುಖವಾಡ ಧರಿಸಿ, ಪದ್ಯಗಳ ಮೂಲಕ, ಕವನ ಹೇಳುವ ಮೂಲಕ ಜೀವನದ ನಿಗೂಢತೆಗೆ ಪ್ರೇಕ್ಷಕರನ್ನು ಪರಿಚಯಿಸುತ್ತಿದ್ದರಂತೆ. ಇದು ಒಂತರ ಹಾಯ್ಕು ಪದ್ಯಗಳಂತೆ. ಹೇಳದಿರುವ ಸಂಗತಿಗಳನ್ನು ಪ್ರೇಕ್ಷಕ ಅರ್ಥ ಮಾಡಿಕೊಳ್ಳಬೇಕು. ನಾಟಕದ ದುರಂತವನ್ನು ಪ್ರೇಕ್ಷಕನ ದುರಂತದ ಸಹಾಯದಿಂದ ತುಂಬಿಕೊಳ್ಳಬೇಕು. ಆ ಮೂಲಕ ರಂಗಾನುಭವ ಸಿಗಬೇಕು.
ಆದರೆ ಇದು ಶ್ರೀಮಂತ ವರ್ಗದವರಿಗೆ, ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ ಕೆಳಮಟ್ಟದಲ್ಲಿದ್ದವರಿಗೆ ರುಚಿಸಲಿಲ್ಲ. ಅದಕ್ಕೆ ಪ್ರತಿಯಾಗಿ “ಕಬೂಕಿ’ ಎಂಬ ಇನ್ನೊಂದು ನಾಟಕ ಪ್ರಕಾರ ಹುಟ್ಟಿಕೊಂಡಿತ್ತು. ಇಲ್ಲಿ ಹೆಂಗಸರೂ ಪಾತ್ರ ಮಾಡುತ್ತಿದ್ದರು. ಅವರ ವಯ್ಯಾರದಿಂದ ಜನರ ಮನಸ್ಸನ್ನು ಕಲಕುತ್ತಿದ್ದರು. ಇಂತಹ ನಟಿಯರಿಗಾಗಿ ಟೋಕಿಯೋ ನಗರದಲ್ಲಿ ಹೊಡೆದಾಟ ಪ್ರಾರಂಭವಾಗಿತ್ತಂತೆ. ಹಾಗಾಗಿ ಸರಕಾರ ಹೆಂಗಸರು ನಾಟಕದಲ್ಲಿ ನಟಿಸಬಾರದೆಂಬ ಆಜ್ಞೆ ಮಾಡಿತ್ತು. ಆಮೇಲೆ ಸುಂದರ ತರುಣರೇ ಸ್ತ್ರೀ ಪಾತ್ರ ಮಾಡುತ್ತಿದ್ದರು. ಅವರನ್ನೂ ಬಿಡದ ಶ್ರೀಮಂತ ಜನರು ಎಳೆಯ ಹುಡುಗರಿಗಾಗಿ ಮತ್ತೆ ಹೊಡೆದಾಟ ಪ್ರಾರಂಭಿಸಿದರು. ನಡು ವಯಸ್ಕರೋ ವೃದ್ಧರೋ ಸ್ತ್ರೀ ಪಾತ್ರ ಮಾಡಬೇಕಾಯಿತು.
ಕ್ರಮೇಣ ಪುರುಷರೇ ಸ್ತ್ರೀ ಪಾತ್ರಕ್ಕೆ ಒಗ್ಗಿಕೊಂಡು ‘ಒನ್ನಗಾತಾ’ ಎಂದು ಸ್ತ್ರೀ ಪಾತ್ರ ಮಾಡುವವರ ವಂಶವೇ ಪ್ರಖ್ಯಾತವಾಯಿತು. ಹೆಣ್ಣಿನ ಬಹಿರಂಗ ಸೌಂದರ್ಯವಲ್ಲದೆ ಆಂತರಿಕ ಗುಣಗಳನ್ನು ಅವರು ಮೈಗೂಡಿಸಿಕೊಂಡಿದ್ದರಂತೆ. ಅವರು ಎಷ್ಟು ಪ್ರತಿಭಾವಂತರೆಂದರೆ ಹೆಣ್ಣು ಮಕ್ಕಳು ಈ ಸೂಕ್ಷ್ಮತೆ, ನಡುವಳಿಕೆಯನ್ನು ಅರಿಯಲು ಇವರಲ್ಲಿ ತರಬೇತಿ ಪಡೆಯುತ್ತಿದ್ದರಂತೆ! ಇದರಂತೆಯೇ, ಹಿಂದಿನ ಕಾಲದಲ್ಲಿ ಯಕ್ಷಗಾನ ಸ್ತ್ರೀ ಪಾರ್ಟು ಮಾಡುವವರು ತಲೆಕೂದಲು ಬೆಳೆಸಿಕೊಂಡು, ಹೆಣ್ಣಿನಂತೆಯೇ ಮೈಕಟ್ಟು, ಧ್ವನಿಯನ್ನು ಮಾರ್ಪಾಟು ಮಾಡಿಕೊಳ್ಳುವುದೂ ರೂಢಿಯಲ್ಲಿತ್ತು. ನಮ್ಮ ನಾಟಕದಲ್ಲಿಯೂ ಅರವಸುವಿನ ಪಾತ್ರ ಮಾಡಿದ್ದ ನನ್ನ ಗೆಳತಿಗೆ ಗಂಡಸೊಬ್ಬನ ಅಂತಃ ಸತ್ವವನ್ನು ಕೆಣಕುವ ಸವಾಲು ಎದುರಾಗಿತ್ತು.
ರಂಗದ ಮೇಲೆ ನಾವೊಂದು ಜೀವಂತ ಕಥೆಯ ಒಳಗೆ ಹೋಗುತ್ತಿದ್ದೆವು. ಅರವಸು ಮಾತಾಡುವಾಗಲೂ ನಮಗೆ ನಾವೇ ಪ್ರೇಕ್ಷಕರಾಗಿ ತಪ್ಪಾದರೆ ನಾಲಗೆ ಕಚ್ಚಿಕೊಳ್ಳುತ್ತಿದ್ದೆವು. ಈಗ ಮತ್ತೆ ನಾಟಕವನ್ನು ಓದುವಾಗ ನನಗೆ ಇನ್ನೊಂದು ಬೇರೆಯೇ ‘ಅಗ್ನಿ ಮತ್ತು ಮಳೆ’ಯ ಲೋಕ ತೆರೆದುಕೊಳ್ಳುತ್ತಿದೆ. ನಾನು ನೋಡದ ಅರವಸು ನಿತ್ತಿಲೆ ವಿಶಾಖೆಯರು ಕಾಣುತ್ತಿದ್ದಾರೆ. ಅದರ ಜೊತೆಗೇ ತಾಲೀಮಿನಲ್ಲಿ ನಮ್ಮ ಗುರುಗಳು, ಚೆನ್ನಾಗಿ ಕುಣಿಸಿ, ನಲಿಸಿ ಮಾನಸಿಕವಾಗಿ ದೈಹಿಕವಾಗಿ ಒಂದು ಹದ ಬರಿಸುತ್ತಿದ್ದರು. ಹಿತವಾಗಿ ತಮಟೆ ನುಡಿಸುತ್ತಾ ಹಗುರಾಗುವಂತೆ ಹೊಸತನ್ನು ಆವಾಹಿಸಿವಂತೆ ಮೆಲ್ಲಗೆ ಹಾಡುತ್ತಿದ್ದರು. ಮನಸ್ಸು ಹೊಸ ನೋಟಕ್ಕೆ ಸಜ್ಜಾಗುತ್ತಿತ್ತು. ಕಲಾಕೃತಿಯೊಂದು ಹೊಸದಾಗಿ ಮೂಡುತ್ತಿತ್ತು. ಈಗ ನನಗೆ ಅದೆಲ್ಲಾ ಕೇಳಿಸಿ, “ನಾನು ಅರವಸು” ಎಂದು ಹೇಳಬೇಕಾಗಿರುವ ಹಿಂದಿನ ತಳಮಳವೊಂದು ಗೊತ್ತಾಗುತ್ತಿದೆ.
ಫೋಟೋ ಕೃಪೆ: ಜೀವನ್ ರಾಂ ಸುಳ್ಯ
ಮುಖಪುಟ ಚಿತ್ರ: ಅಗ್ನಿ ಮತ್ತು ಮಳೆಯ ತೆಲುಗು ಆವೃತ್ತಿ ಅಗ್ನಿ ವರ್ಷಮ್ ಪ್ರಯೋಗದ್ದು


Beautiful
ಚೆನಾಗಿದೆ ನಾಗಶ್ರೀ.
ಈ ಮಳೆಯಲ್ಲಿ ನಿಮ್ಮ ಮಾರ್ದವ ನೆನಪುಗಳು ಹಬೆ ಎಬ್ಬಿಸುತ್ತಿವೆ.
ನಾನು ಅರಾವಸು ಅಂತ ಹೇಳಬೇಕಿರುವ ಮಾತಿನ ಹಿಂದಿನ ಕಥೆ ನಟನಲ್ಲಿ ತುಂಬಿಕೊಂಡುಬಿಟ್ಟರೆ ಅದು ಪ್ರೇಕ್ಷಕಳಿಗೆ ದಾಟುವುದಕ್ಕೆ ಹೆಚ್ಚಿನ ಹೊತ್ತು ಬೇಡ. ಅಲ್ಲವಾ. ಎಂಥ ಒಳ್ಳೆಯ ಆಲೋಚನೆ ನಿಮ್ಮದು.
Namma natakada dinagalu nenapadavu.. dhanyavada…