ಆರ್ ಜಿ ಹಳ್ಳಿ ನಾಗರಾಜ್
#ಭಗವದ್ಗೀತೆ ಮೂಲಕ ಪ್ರೊ. ಬಿ.ವಿ.ವೀರಭದ್ರಪ್ಪ ಸ್ಮರಣೆ
* ನಿನ್ನೆ (೨೧.೦೯.೨೦೧೭) ನಮ್ಮನ್ನಗಲಿದ ವಿಚಾರವಾದಿ ಲೇಖಕ, ಪ್ರಾಧ್ಯಾಪಕ ಪ್ರೊ. ವೀರಭದ್ರಪ್ಪ ದಾವಣಗೆರೆಯಲ್ಲಿ ನೆಲೆನಿಂತು ವೈಚಾರಿಕತೆಯ ಚಿಂತನೆಗಳನ್ನು ತಮ್ಮ ಕೃತಿಗಳ ಮೂಲಕ ಹರಡಿದ ವಿದ್ವಾಂಸ. ಸತ್ಯದ ಕಹಿ ಹಾಗೂ ಕಟುತ್ವವನ್ನು ಬರಹದ ಮೂಲಕ ವ್ಯಕ್ತಪಡಿಸುವಲ್ಲಿ ಎಲ್ಲೂ ಸಂಯಮ ಕಳೆದುಕೊಳ್ಳದೆ ಪೊಳ್ಳು ಹಾಗೂ ಹುಸಿ ಸುಳ್ಳುಗಳನ್ನು ಪುರಾವೆ ಮೂಲಕ ಸಾಧಿಸಿ ತೋರಿದವರು ಅವರು.
* ಪ್ರೊ. ಬಿವಿವಿ, ೧೯೮೪ ಜನವರಿಯಲ್ಲಿ ನನ್ನೂರು ರಾಮಗೊಂಡನಹಳ್ಳಿಗೂ ಬಂದು ನನ್ನ ಕಥಾ ಸಂಕಲನ “ಸಿಡಿದವರು” ಬಿಡುಗಡೆಯಲ್ಲಿ ಕೃತಿ ಬಗ್ಗೆ ಮಾತಾಡಿ ಹೋಗಿದ್ದರು. ಅಂದು ಪ್ರೊ. ಬಿ.ಜಿ. ನಾಗರಾಜ, “ಜನತಾವಾಣಿ” ಸಂಪಾದಕ ಎಚ್.ಎನ್. ಷಡಾಕ್ಷರಪ್ಪ, ನನ್ನ ತಂದೆ, ನನ್ನ ಊರಿನ ಮಿತ್ರರು, ಅಪಾರ ಜನಸ್ತೋಮ ಭಾಗಿಯಾಗಿದ್ದರು. ಆ ನೆನಪು ಇನ್ನೂ ಹಸಿರಾಗಿದೆ. (ಫೋಟೋ ಗಮನಿಸಿ)
***
* “ಭಗವದ್ಗೀತೆ – ಒಂದು ವೈಚಾರಿಕ ಒಳನೋಟ” ನವಕರ್ನಾಟಕ ಪ್ರಕಾಶನದ ಮೂಲಕ ೧೯೯೯ರಲ್ಲಿ ಮೊದಲ ಮುದ್ರಣ ಬಂತು. ಮುಂದೆ ಏಳೆಂಟು ಮರುಮುದ್ರಣ ಕಂಡ ವಿಶಿಷ್ಟವಾದ ಕೃತಿಯಿದು. ಈ ಕೃತಿ ರಚನೆಗೆ ಅವರು ಅಧ್ಯಾಯ ಮಾಡಿದ ಗ್ರಂಥಗಳು ಹತ್ತಾರು.
* ಭಗವದ್ಗೀತೆಯ ರಚನೆಯ ಕಾಲದ ಚರಿತ್ರೆ ಯನ್ನು ಅಭ್ಯಾಸ ಮಾಡಿದಾಗ ಅವರು ದಾಖಲಿಸಿದ ವಿಚಾರ :
“ಭಾರತೀಯರಿಗೆ ಬಹು ಪ್ರಾಚೀನ ಇತಿಹಾಸವಿದೆಯಾದರೂ ಅದನ್ನು ನಿಖರವಾಗಿ ದಾಖಲಿಸಿದ ಕೃತಿಗಳಿಲ್ಲ; ಬದಲಾಗಿ ಇತಿಹಾಸವನ್ನು ತಿರುಚಿದ ಐತಿಹಾಸಿಕ ಗ್ರಂಥಗಳೇ ಹೆಚ್ಚು. ಅಲ್ಲದೆ ಯಾವುದು ಇತಿಹಾಸ, ಯಾವುದು ಪುರಾಣ ಅವುಗಳ ನಡುವೆ ಎಲ್ಲಿ ಗೆರೆ ಎಳೆಯಬೇಕೆಂಬುದೇ ಗೊತ್ತಾಗುವುದಿಲ್ಲ.” (ಪುಟ ೪).
“ಗೀತೆಯ ಲೇಖಕ ಉದ್ದಕ್ಕೂ ಪ್ರಗತಿಪರ ತಾತ್ವಿಕ ಸಿದ್ಧಾಂತಗಳನ್ನು ಅಲ್ಲಗಳೆದು ಅಥವಾ ವಿರೂಪಗೊಳಿಸಿ ದೇವರಲ್ಲಿ ಸಂಪೂರ್ಣ ಶರಣಾಗತಿಯಿಂದ ಮಾತ್ರ ಮುಕ್ತಿ ಸಾಧ್ಯ ಎಂಬ ತತ್ವವನ್ನು ಬಲವಾಗಿ ಪ್ರತಿಪಾದಿಸಿದ್ದಾನೆ.
ಬೌದ್ಧ ಧರ್ಮ ಪ್ರಾಬಲ್ಯವಿದ್ದ ಕಾಲದಲ್ಲಿ ಹಿಂದೆ ಸರಿಸಿದ್ದ ವೈದಿಕ ಧರ್ಮ ತನ್ನ ಕರ್ಮ ಸಿದ್ಧಾಂತ, ಯಜ್ಞ, ತಪಸ್ಸು ಮತ್ತು ಇತರ ಎಲ್ಲ ಆಚರಣೆಗಳ ಜೊತೆಗೆ ಹಿತ್ತಲ ಬಾಗಿಲಿನಿಂದ ಪುನಃ ಪ್ರವೇಶ ಮಾಡುವಂತೆ ಮಾಡುವುದೇ ಗೀತೆಯ ಉದ್ದೇಶವಾಗಿದೆ”. (ಪುಟ ೧೫೨)
***
ಮೂರು ದಶಕಕ್ಕೂ ಹೆಚ್ಚುಕಾಲ ಅವರನ್ನು ಹತ್ತಿರದಿಂದ ಬಲ್ಲ ನಾನು ದಾವಣಗೆರೆಯ ವಿದ್ಯಾನಗರದ “ಲೋಕಾಯತ” ಮನೆಯಲ್ಲಿ ಹಲವುಬಾರಿ ಭೇಟಿ ಮಾಡಿ ಚರ್ಚಿಸಿದ್ದೇನೆ.
ಸರಳ, ಸಜ್ಜನ, ಮಿತಭಾಷಿ ಪ್ರೊ. ಸದಾ ಓದಿನಲ್ಲಿ, ಗಂಭೀರ ಚಿಂತನೆಯಲ್ಲಿ ಮಗ್ನರಾಗಿದ್ದರು. ನನ್ನ ಎರಡು ಪುಸ್ತಕಗಳ ಬಿಡುಗಡೆಗೂ ಬಂದಿದ್ದರು. ನಮ್ಮ ಹೆಮ್ಮೆಯ”ಅನ್ವೇಷಣೆ” ಸಾಹಿತ್ಯ ಪತ್ರಿಕೆಗೆ ವಿಚಾರವಾದಿ “ಅಬ್ರಾಹಿಂ ಕೋವೂರ್” ಬಗ್ಗೆ ಲೇಖನ ಬರೆದು ಕೊಟ್ಟಿದ್ದರು.
* ಪ್ರೊ. ಬಿವಿವಿ ಅವರ ಸಾವು ವೈಚಾರಿಕ ಕ್ಷೇತ್ರಕ್ಕಾದ ನಷ್ಟ. ಅವರ ವಿಚಾರ, ಕೃತಿಗಳನ್ನು ಓದಿ ಜೀವಂತವಾಗಿಟ್ಟು ಮುಂದಿನ ಪೀಳಿಗೆಗೆ ಸಾಗಿಸುವುದಷ್ಟೇ ನಮ್ಮ ಕೆಲಸ.






ಅವರ ಭಗವದ್ಗೀತೆಯನ್ನು ಕುರಿತಬರಹನನ್ನಮೆಚ್ಚಿನಕೃತಿ