ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಣ್ಣು ಕಂಡರೆ ಇವನ ನೆನಪು..

‘ಸಾಯಿಲ್‌ ವಾಸು’ ಎಂದೇ ಹೆಸರಾದ ಪಿ ಶ್ರೀನಿವಾಸ್ ಇನ್ನು ನೆನಪು ಮಾತ್ರ.

ಮಣ್ಣಿನ ಒಡನಾಡಿ ವಾಸು ಅವರ ಕುರಿತು ನಿಕಟವರ್ತಿ, ಪರಿಸರ ಪ್ರೇಮಿ ಕೆ ಪಿ ಸುರೇಶ್ ಅವರ ಒಂದು ನೋಟ ಇಲ್ಲಿದೆ

“ವಾಸು ತೀರಿಕೊಂಡ್ರು ಸಾರ್.. “

ವಾಸು, ಸಾಯಿಲ್‌ ವಾಸು ತೀರಿಕೊಂಡ. ಭಾವ, ಬುದ್ಧಿ, ಕರಣಗಳಿಗೆ ಊನವಾಯಿತು. ನಾಲ್ಕು ದಶಕಗಳ ಸ್ನೇಹದಲ್ಲಿ ಕಲಿತದ್ದೆಷ್ಟೋ, ಕಲಿತುಕೊಂಡದ್ದೆಷ್ಟೋ.

ಶಾಪಗ್ರಸ್ತ ಅವಧೂತ ಈತ. ಸದಾ ಮಣೆಗಾರನ ಚೈನು ಹಿಡಿವ ಸಹಾಯಕನ ತರ ಒಂದು ಚೀಲ ಹೆಗಲಿಗೆ ಹಚ್ಚಿ ಮಾಸಿದ ಅಂಗಿ- ಪ್ಯಾಂಟಲ್ಲಿ ಈ ವಾಸು ಅದೆಷ್ಟು ಮೈಲಿ ಅಲೆದಿದ್ದ ಅಂದರೆ ವಾಹನವಾಗಿದ್ದರೆ ಜಂಕ್‌ ಮಾಡಬೇಕಾಗಿತ್ತು. ನಯಾ ಪೈಸೆಯ ವ್ಯಾವಹಾರಿಕ ಪ್ರಜ್ಞೆ, ಕಾಸು ಮಾಡುವ ಆಸೆ ಇಲ್ಲದ ಈ ಮನುಷ್ಯ ಏಕತಾರಿ ಮೀಟಿ ಹಾಡುತ್ತಾ ಅಲೆವ ಮಂದಿಯ ತರಹ ಇದ್ದ.

ಕರೆದರೋ.. ಹೋದ. ಒಂದೆರಡು ಗುನುಗಿನ ಬಳಿಕ ಹಾಡಿದ. ಆಮೇಲೆ ಮಣ್ಣಿನ ಬಗ್ಗೆ ಸಾದ್ಯಂತ ವಿವರಿಸುವ. ಆ ಕೆಲಸದಲ್ಲಿ ಮಣ್ಣಿನಲ್ಲಾಡುವ ಮಕ್ಕಳ ತರಹ ಪೂರಾ ಮುಳುಗಿರುವ.

“ಹೇಳಿ ಬುದ್ಧಿ, ಹಾಗಲ್ಲ ಬುದ್ದಿ,” ಎಂದು ತಲೆ ಆಡಿಸಿ ಮಾತಾಡುವ.

ಮಧ್ಯೆ ಕದ್ದು ಎದ್ದು ದೂರ ಹೋಗಿ ಸಿಗರೇಟು ಸೇದುವ.

ಅವನಿದ್ದ ರೀತಿಗೆ ಅವನು ಸಿಗರೇಟು ಸೇದುವುದೇ ಅಚ್ಚರಿಯ ಸಂಗತಿ.

ನಾರಾಯಣ ರೆಡ್ಡಿಯವರಿಂದ ಹಿಡಿದು ದೇಶದ ಎಲ್ಲಾ ಸಾಧಕರ ಜೊತೆ ಒಡನಾಟದಲ್ಲಿ ಓಡಾಡಿದ್ದ. ನೂರಾರು ರೈತರ ಹೊಲ ಗದ್ದೆಗಳಲ್ಲಿ ಓಡಾಡಿದ್ದ, ರೈತ ಗುಂಪುಗಳ ಜೊತೆ ಸಂವಾದ ಮಾಡಿದ್ದ.

ಆ ಎಲ್ಲಾ ನೆನಪು, ಅನುಭವಗಳನ್ನು ಬರೆಯೋ ಮಾರಾಯಾ ಅಂದರೆ ಹಾವು ತುಳಿದ ಹಾಗೆ, ಆಡೋನು. ಮಾತಿಗೆ ಕೂತರೆ ಅವೆಲ್ಲಾ ನೆನಪುಗಳನ್ನು ಹೇಳೋನು. ಕೆ.ಸಿ.ರಘು ಇಂಥಾ ಇನ್ನೊಬ್ಬ .

ವಾಸುವಿನ ಒಡನಾಟದ ಬಗ್ಗೆ ಬರೆಯುವುದು ಕಷ್ಟ. ಯಾಕೆಂದರೆ ಅದು ಮೂಲತಃ ಲೋಕ ವ್ಯಾಪಾರದ ಅರಿವೇ ಇಲ್ಲದ ಮುಗ್ಧ ಬದ್ಧತೆಯ ಮನುಷ್ಯನ ಜೊತೆಯ ಹೆಣಗಾಟ.

“ ಇವರೆಲ್ಲಾ ಹೆಂಗೆ ದುಡ್ಡು ಮಾಡ್ಕೊತಾರೆ ಬುದ್ದೀ, ಎಂದು ಬೆಪ್ಪಾಗಿ ಕೇಳುವನು. ನನಗೂ ಗೊತ್ತಿಲ್ಲ. ಆದರೆ ನಾನು ಕಟುವಾಗಿ ಹೇಳುತ್ತಿದ್ದೆ. ನನ್ನ ಸಿಟ್ಟು ಅವನಿಗಿರಲಿಲ್ಲ. ನನ್ನ ಸಿನಿಕತನದ ಅಂಚಿನ ನಿರ್ಲಿಪ್ತತೆ ಅವನಿಗೆ ಸಾಧ್ಯವಿರಲಿಲ್ಲ ಅವನ ಮುಗ್ಧತೆ ನನಗಿರಲಿಲ್ಲ. ಆತ ಸಹಜವಾಗಿ ಲೌಕಿಕದ ಚಾಲೂತನ, ವೈಯ್ಯಾರಗಳು ತನಗಂಟದಂತೆ ಇದ್ದ.

ಕಳೆದ ೧೫ ವರ್ಷಗಳಿಂದ ಸಾಯಿಲ್‌ ಎಂಬ ಸಂಸ್ಥೆ ಕಟ್ಟಿಕೊಂಡು ಮಣ್ಣಿನ ಬಗ್ಗೆ ವಿವರಿಸುತ್ತಿದ್ದ. ಯಾವ ವಿಜ್ಞಾನಿಗೂ ದಕ್ಕದ ಸರಳ ಮಾತಿನ ಲಯದಲ್ಲಿ ಮಣ್ಣಿನ ಸ್ಥಿತಿಗತಿ, ಅದರ ನಿಗೂಢ ಸ್ವಭಾವ, ಅದರ ತಾಯ್ತನದ ಬಗ್ಗೆ ವಿವರಿಸುವನು. ಮಣ್ಣಿನ ಕಳೆ, ಹುಳಗಳ ಬಗ್ಗೆ ವಿವರಿಸುವನು. ಆದರೆ ಎಷ್ಟೋ ಬಾರಿ , “ ಬುದ್ದಿ ಬೆಂಗಳೂರಿನ ಬ್ರಾಹ್ಮಣ ನಾನು, ಕಣ್ಣಲ್ಲಿ ಕಂಡು, ಮುಟ್ಟಿ ಅನುಭವಿಸಿದವನಲ್ಲ. ಆ ರೋಮಾಂಚನ ಈಗ ಸಿಗ್ತಿದೆ “ ಎಂದು ಹೇಳುವನು.

ಅವನ ಸಮಸ್ಯೆಗಳೋ, ಸ್ಥಳೀಯ ಉದಾಹರಣೆಗಳನ್ನು ಹುಡುಕೋ ಬದಲು ಓದಿದ ಯಾವ್ಯಾವುದೋ ಪಶ್ಚಿಮದ ಪಟ, ವಿವರಣೆ ಸದಾ ಹಾಕೋನು. ನಾನು ವ್ಯಂಗ್ಯ ತಮಾಷೆಯಲ್ಲಿ ಪ್ರತಿಕ್ರಿಯಿಸುತ್ತಿದ್ದೆ. ಅದಾದ ಮರುಗಳಿಗೆ ಫೋನು ಮಾಡುವನು.

ಸೈದ್ಧಾಂತಿಕ ಸೂಕ್ಷ್ಮಗಳೆಲ್ಲಾ ಅವನಿಗೆ ಅರ್ಥವೇ ಆಗುತ್ತಿರಲಿಲ್ಲ. ಯಾರು ಕರೆದರೂ ಹೋಗುವನು. ಆದರೆ ಆತ ಸಂಪೂರ್ಣ ತಲ್ಲೀನವಾಗಿ ಮಣ್ಣು, ಕೃಷಿ ಬಗ್ಗೆ ಹೇಳುತ್ತಾ ತನ್ನದೇ ಆದ ಪಾಠದ ಲೋಕವನ್ನು ಕಟ್ಟುವನು. ನಾರಾಯಣ ರೆಡ್ಡಿಯವರೂ ಹೀಗೆಯೇ.

ಅವನೊಳಗಿದ್ದ ನೋವುಗಳನ್ನು ಯಾರು ಕೇಳಲಿಲ್ಲ. ಅವನೂ ಹೇಳಲೂ ಇಲ್ಲ. ತಗಡು ಸ್ಕೂಟರು ಚಲಾಯಿಸುತ್ತಾ ಬೆಂಗಳೂರು ಸುತ್ತುತ್ತಿದ್ದ.

ತುಂಬಾ ಕ್ಷೋಭೆಯಾದರೆ ತನ್ನ ಬೋಳು ತಲೆ ಸವರಿ ಸಿಗರೇಟು ಸೇದಿ, ,” ಇದೆಲ್ಲಾ ಮುಗಿಯೋ ಕಷ್ಟ ಅಲ್ಲ ಬುದ್ದೀ. .. ಎಂದು ನಿಟ್ಟುಸಿರು ಬಿಡುವನು.

ನಾನು ನಗಿಸುವುದನ್ನೇ ಕಾಯುತ್ತಿದ್ದ. ಎಷ್ಟೋ ಬಾರಿ, “ಬುದ್ದಿ ನಿಮ್ಮ ಸಾಂದರ್ಭಿಕ ಶಾರ್ಪ್‌ ಜೋಕು, ಹೀನೋಪಮೆ ನೆನಪಿಸ್ಕೊತಿದೀನಿ” ಅಂತ ಮಾತಿಗೆ ಶುರು ಹಚ್ಚಿಕೋತಿದ್ದ. ಒಂತರಾ ಪುಟ್ಟ ಮಕ್ಕಳು ಡಿಚ್ಚಿ ಆಟ ಆಡಲು ತಯಾರಾದ ಹಾಗೆ.

ಪರಮ ಪೋಲಿ ಉಪಮೆಗಳನ್ನು ಹೇಳಿ ಅವನೊಂದಿಗೆ ಏನೇನೋ ವಿವರಿಸುತ್ತಿದ್ದೆ. ಅವನೋ ಸಾಯುವಷ್ಟು ನಕ್ಕು ಅದನ್ನು ಸಂತೋಷ ಕೌಲಗಿಯಲ್ಲಿ ಹೇಳುವನು. ಇಬ್ಬರೂ ಈ ನಾನ್‌ ವೆಜ್‌ ಜೋಕು ಯಾರಲ್ಲೂ ಹೇಳಲಾಗದೇ ನಕ್ಕು ಮುಲುಗೋರು.

ಆ ನಗುವಿನ ಅಂಚಲ್ಲಿ ಒಂದು ನೋವಿನ ರಾಗದ ಎಳೆ ಮಿಂಚಿ ಮಾಯವಾಗುತ್ತಿತ್ತು.

ಮತ್ತೆ ಮಣ್ಣು. ಕೃಷಿ ಬಗ್ಗೆ ಅವನು.. ಗ್ರಾಮ ಭಾರತದ ಸಂಕೀರ್ಣತೆ ಬಗ್ಗೆ ನಾನು ಹಂಚಿಕೋತಾ ಮುಂದಿನ ಕೆಲಸಕ್ಕೆ ತೊಡಗುತ್ತಿದ್ದೆವು. ಎಲ್ಲೋ ಇರುವನು. ಏಕಾಏಕಿ ಫೋನು “ ಇಲ್ಲದೀನಿ ಬುದ್ದೀ, ಹಿಂಗಿಂಗೆ ಕಾರ್ಯಕ್ರಮ “ ಎನ್ನುವನು. ಅವನ ಜೋಳಿಗೆಯೋ. ಅದರಲ್ಲಿ ಮಣ್ಣಿನ ಲೋಕರಹಸ್ಯಗಳೆಲ್ಲಾ ಅವಿತಿರೋದು. ರಾತ್ರಿ ಕೂತರೆ, ಪಂಚೆ ಒಂದು ಬಾತ್‌ ಟವೆಲ್. ಒಮ್ಮೆಯಂತೂ ಥೇಟು ಹೋಟೇಲಿನ ಜ್ಯೋತಿಷಿ ತರ ಕಂಡಿದ್ದ.

“ಒಂದು ರುದ್ರಾಕ್ಷಿ, ನಾಲ್ಕು ಫೋಟೋ , ಕವಡೆ ಇಟ್ಟುಕೊಂಡು ಇದರ ನೂರು ಪಟ್ಟು ಗಳಿಸಬಹುದಿತ್ತೋ ಮಾರಾಯಾ“ ಎಂದು ನಿಡುಸುಯ್ದು ಹೇಳಿದ್ದೆ. ನನಗದು ಬೌದ್ಧಿಕವಾಗಿ ಸಾಧ್ಯವಿರಲಿಲ; ಅವನಿಗೋ ಸ್ವಭಾವಸಹಜವಾಗಿ ಸಾದ್ಯವಾಗದ ಮಾತು.

ಈಗ ಸತ್ತಿದ್ದಾನೆ. ಆತ ಸ್ವರ್ಗಕ್ಕೆ ಹೋಗಲಾರ ಅನ್ನಿಸುತ್ತೆ. ಸ್ವರ್ಗದಲ್ಲಿ ಮಣ್ಣೆಲ್ಲಿದೆ? ಅವನ ದೇಹದ ಬೂದಿ ಗಾಳಿ, ನೀರು ಮಣ್ಣಲ್ಲಿ ಹರಡಿದರೆ ಅಲ್ಲೂ ಅದು ಪಿಸುಗುಟ್ಟಬಹುದು. ಹಾಡಬಹುದು.

ಆತ್ಮ ಸಖ, ಜಿಗಣೆ ಗೆಳೆಯ, ಮುಗ್ಧ , ಕೊಂಚ ಪೆದ್ದುತನದೊಂದಿಗೆ ಸದಾ ಏನೋ ಕನಸಿನೆಡೆಗೆ ಹೆಜ್ಜೆ ಇಡುವ ಮೂಡಿನಲ್ಲೇ ಇದ್ದವನು.

ತಾನು ನಂಬಿದ್ದಕ್ಕೆ ಮರ್ಕಟ ಕಿಶೋರ ತರಹ ಅಂಟಿಕೊಂಡವನು. ಲೌಕಿಕಕ್ಕೆ ಕಣ್ಣು ತೆರೆಯದೇ ಮಾರ್ಜಾಲ ಕಿಶೋರ ತರಹ ಇದ್ದವನು.

ಅವನು ಹುಟ್ಟಿದ ಜಾತಿಯ ತಾತ್ವಿಕತೆಯ ಒಂದಂಶ ಅವನಲ್ಲಿ ಸದಾ ನನಗೆ ಕಾಣುತ್ತಿತ್ತು. ವಿಸ್ಮೃತಿಯ ಚೇತನ- ಕರ್ಮ, ಭಕ್ತಿಯ ಮೂಲಕ ದಿವ್ಯದ ಜೊತೆ ಒಂದಾಗುವ ನಡಿಗೆ ಅದು.

‍ಲೇಖಕರು Admin

15 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading