7
ಕೊನೆಯ ದಿನಗಳು
ಹಾಮಾನಾ 2000ದ ನವೆಂಬರ್ ಹತ್ತನೆಯ ತಾರೀಕು ತೀರಿಕೊಂಡ.
ಆಗ ಅವನಿಗೆ 69 ವರ್ಷ ವಯಸ್ಸು ಮಾತ್ರ.
ಅದೇನೂ ನಿರೀಕ್ಷಿತ ಸಾವು ಆಗಿರಲಿಲ್ಲ. ದೈಹಿಕವಾಗಿ ಅವನ ಆರೋಗ್ಯ ಚೆನ್ನಾಗಿಯೇ ಇತ್ತು. ಅವನ ಆತ್ಮೀಯರು ಇನ್ನೂ ಅಷ್ಟು ಕಾಲ ಅವನು ಬದುಕಿರಬೇಕಿತ್ತು ಎನ್ನುವ ಆಶಯ ವ್ಯಕ್ತಪಡಿಸುತ್ತಾರೆ. ಆದರೆ ಯಾರಿಗೆ ಯಾವತ್ತು ಸಾವು ಬರಬೇಕೆಂದು ತೀರ್ಮಾನ ಎಲ್ಲರ ಇಚ್ಛೆಗೆ ಹೊರತಾದದ್ದು. ಯಾರನ್ನೂ ಅವಲಂಬಿಸದೆ, ಯಾರಿಗೂ ತೊಂದರೆ ಕೊಡದೆ, ಆರೋಗ್ಯವಂತನಾಗಿರುವಾಗಲೇ ಸಾಯಬೇಕು ಎನ್ನುವುದು ಹಾಮಾನಾ ಒಂದು ಪ್ರಬಲ ಆಕಾಂಕ್ಷೆಯಾಗಿತ್ತು. ಅಷ್ಟರಮಟ್ಟಿಗೆ ಅವನ ಇಚ್ಛೆ ಫಲಿಸಿತು ಎನ್ನುವುದು ಸಮಾಧಾನದ ಸಂಗತಿ.
ಅವನ ಮರಣಪತ್ರದಲ್ಲಿ ಅವನೇ ಸೂಚಿಸಿದ್ದಂತೆ, ಹಾರೋಗದ್ದೆ-ಹೊಸಮನೆಯಲ್ಲಿ ಅವನ ತಂದೆ ತಾಯಿಯರ ಸಮಾಧಿಗಳ ಪಕ್ಕದಲ್ಲೇ, ಅವನ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ನೆರವೇರಿಸಲಾಯಿತು. ಮೈಸೂರಿನಿಂದ ಹಾರೋಗದ್ದೆಗೆ ಅವನ ಮೃತ ದೇಹವನ್ನು ಸಾಗಿಸುವ ಹಾದಿಯಲ್ಲಿ ಅವನಿಗೆ ಗೌರವ ಸಲ್ಲಿಸಲು ಬೇರೆಬೇರೆ ಊರುಗಳಲ್ಲಿ ನೆರೆದಿದ್ದ ಜನಸ್ತೋಮ ಹಾಮಾನಾ ಜನಪ್ರಿಯತೆಗೆ ಇನ್ನೊಂದು ಸಾಕ್ಷಿ. ಆ ಸಂದರ್ಭದಲ್ಲಿ ಹಾಜರಿರಲು ದೂರದ ಮೈಸೂರು, ಬೆಂಗಳೂರಿನಿಂದಲೂ ಅವನ ವಿದ್ಯಾರ್ಥಿಗಳು, ಸ್ನೇಹಿತರು ಅಲ್ಲಿಗೆ ಬಂದಿದ್ದರು ಎನ್ನುವುದು ಅವನು ಸಂಪಾದಿಸಿದ್ದ ಪ್ರೀತಿ, ವಿಶ್ವಾಸಗಳ ದ್ಯೋತಕ.
ಡಾ. ಮಹದೇವ, ಪ್ರೊ. ಜಿ. ಹೆಚ್. ನಾಯಕ ಮತ್ತು ಅವರ ಪತ್ನಿ ಮೀರಾ ನಾಯಕ, ಡಾ. ಪದ್ಮಾ ಶೇಖರ್, ಡಾ. ಸೋಮಶೇಖರ ಗೌಡ, ಪ್ರೊ. ಲಕ್ಷೀನಾರಾಯಣ ಭಟ್ಟ ಮೊದಲಾದವರು ಆ ಸಂದರ್ಭದಲ್ಲಿ ಹಾಜರಿದ್ದ ಪ್ರಮುಖರು. ಹಾಮಾನಾ ಅನಿರೀಕ್ಷಿತ ಸಾವಿನಿಂದ ಊರಿನ ಜನರು ಸಹಜವಾದ ದುಃಖವನ್ನು ಅನುಭವಿಸಿದರು. ಆದರೆ ಅಂತ್ಯಸಂಸ್ಕಾರದಲ್ಲಿ ಅವನಿಗೆ ದೊರೆತ ಸರ್ಕಾರಿ ಮರ್ಯಾದೆ ತಮ್ಮ ಹಳ್ಳಿಗೆ ಸಂದ ಗೌರವ ಎಂದು ಹೆಮ್ಮೆ ಪಟ್ಟುಕೊಂಡು ಜನರಾಡಿದ ಮಾತುಗಳನ್ನು ನಾನು ಕೇಳಿಸಿಕೊಂಡಿದ್ದೇನೆ.

ಹಾಮಾನಾ ತೀರಿಕೊಂಡಾಗ ಅವನಿಗೆ ಸಾಯುವ ವಯಸ್ಸಾಗಿರಲಿಲ್ಲ ಎನ್ನುವ ಮಾತನ್ನು ಹಲವರು ಹೇಳಿದ್ದುಂಟು. ಈ ಬಗೆಯ ಮಾತಿಗೆ ಯಾವುದೇ ಅರ್ಥವಿಲ್ಲ. ಯಾರು ಯಾವ ವಯಸ್ಸಿನಲ್ಲಿ ಸಾಯಬೇಕು ಎಂದು ಯಾವುದೇ ನಿಯಮವಿಲ್ಲ. ಹಾಗಾದರೂ ಈ ಮಾತಿನ ಹಿಂದೆ ಒಂದು ಗೂಡಾರ್ಥವಿದೆ ಎಂದು ನಾನು ಭಾವಿಸುತ್ತೇನೆ. ಹಾಮಾನಾ ತನ್ನ ಕೊನೆಯ ದಿನಗಳಲ್ಲಿ ಅಪಾರವಾದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನುವ ವಿಚಾರ ಅವನನ್ನು ಹತ್ತಿರದಿಂದ ಬಲ್ಲವರಿಗೆ ಗುಟ್ಟಾಗೇನೂ ಇರಲಿಲ್ಲ.
ಅವನ ಸ್ವಂತದವರೇ ತಿರುಗಿ ಬಿದ್ದರು, ಅವನ ಮಾನ ಹರಾಜು ಹಾಕುವ ಕೆಲಸಗಳನ್ನೂ ಮಾಡಿದರು. ಅವನು ಜೀವನದುದ್ದಕ್ಕೂ ತನ್ನ ವಿರೋಧಿಗಳನ್ನು ಸ್ಥೈರ್ಯದಿಂದ ಎದುರಿಸಿದವನು; ಎಂದೂ ರಣರಂಗದಿಂದ ಹಿಂದೆ ಸರಿದವನಲ್ಲ. ಆದರೆ ತಾನು ಯಾರನ್ನು ಅತಿಯಾಗಿ ಪ್ರೀತಿಸಿದ್ದನೋ, ಯಾರ ಏಳಿಗೆಗಾಗಿ ಶ್ರಮಿಸಿದ್ದನೋ ಅವರಿಂದಲೇ ವಿರೋಧ ಒದಗಿ ಬಂದಾಗ ಅವನು ಜರ್ಜರಿತನಾಗಿ ಅಪಾರ ನೋವನ್ನು ಅನುಭವಿಸಿದ. ಈ ಹಂತದಲ್ಲಿ ಅವನು ತನ್ನ ಹೋರಾಟದ ಕೆಚ್ಚನ್ನು ಕಳೆದುಕೊಂಡಿದ್ದ ಮತ್ತು ಬದುಕಿನ ಅರ್ಥಹೀನತೆ, ಸಂಬಂಧಗಳ ಅವಾಸ್ತವತೆಗಳು ಅವನನ್ನು ಹತಾಶನನ್ನಾಗಿ ಮಾಡಿದ್ದವು. ಇದು ಹಾಮಾನಾ ಬದುಕಿನ ಬಹು ದೊಡ್ಡ ದುರಂತ. ಈ ದುರಂತವೇ ಅವನನ್ನು ಸಾವಿನ ಹತ್ತಿರಕ್ಕೆ ಕರೆದೊಯ್ಯಿತು ಎನ್ನುವುದು ಒಂದು ಅಭಿಪ್ರಾಯ.
ಒಂದು ಕಾಲಕ್ಕೆ ದೇಶ ವಿದೇಶಗಳಲ್ಲಿ, ಕರ್ನಾಟಕದ ಉದ್ದಗಲಕ್ಕೂ ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ಓಡಾಡುತ್ತಿದ್ದ ಹಾಮಾನಾ, ಕೊನೆಯ ದಿನಗಳಲ್ಲಿ ಅವನ ಓಡಾಟವನ್ನು ಬಹಳಷ್ಟು ಕಡಿಮೆ ಮಾಡಿದ್ದ. ಊರೂರು ಸುತ್ತುವುದು, ಬಗೆಬಗೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಭಾಷಣಗಳನ್ನು ಮಾಡುವುದು, ಜನರೊಡನೆ ಬೆರೆಯುವುದು ಇವೇ ಮೊದಲಾದ ಅವನಿಗೆ ಪ್ರಿಯವಾದ ಚಟುವಟಿಕೆಗಳು ಅಪರೂಪ ಎನ್ನುವಷ್ಟು ಕಡಿಮೆಯಾದವು. ಈ ಬಗೆಯ ಬದಲಾವಣೆಗಳಿಗೆ ವಯಸ್ಸಿನ ಸಹಜ ಕಾರಣ ಇದ್ದಿರಲೂಬಹುದು. ವಯಸ್ಸನ್ನು ಮೀರಿ ನಿಲ್ಲುವ ದಾರ್ಷ್ಟ್ಯವನ್ನು ಅವನು ಕಳೆದುಕೊಂಡಿದ್ದ; ಬದುಕಿನ ಉತ್ಸಾಹ, ಆಸಕ್ತಿಗಳು ಕ್ಷೀಣಿಸಿದ್ದವು. ತನ್ನ ಜೀವನ ಸಂಗಾತಿ ಯಶೋಧರಮ್ಮನವರೊಂದಿಗೆ, ಒಬ್ಬರಿಗೊಬ್ಬರು ಆಸರೆಯಾಗಿ, ಒಂದು ಬಗೆಯ ನಿರ್ಲಿಪ್ತತೆಯಿಂದ ಕೊನೆಯ ದಿನಗಳನ್ನು ಸಾಗಹಾಕಿದ ಎನ್ನುವುದು ಸೂಕ್ತ

ಅನುಬಂಧಗಳು
ಎಚ್. ಎಸ್. ಈಶ್ವರ. ಅಪ್ಪಯ್ಯ (ಹಾರೋಗದ್ದೆ ಶ್ರೀನಿವಾಸ ನಾಯಕರು, 1900-1984). ಅಪ್ರಕಟಿತ ಲೇಖನ.
ಎಚ್. ಎಸ್. ಈಶ್ವರ. ದೊಡ್ಡಣ್ಣ: ದಿವ್ಯ ಸ್ಮರಣೆ. ಸ.ಚಿ.ರಮೇಶ್ (ಸಂ.) ಶಬ್ದಾಂಜಲಿ. 2001.
ಎಚ್. ಎಸ್. ಈಶ್ವರ. ಕಟಪಾಡಿ ಗೋಪಾಲಕೃಷ್ಣ ಕಾಮತರು. ಅಪ್ರಕಟಿತ ಲೇಖನ.
ದೊಡ್ಡಣ್ಣ: ದಿವ್ಯ ಸ್ಮರಣೆ
ನನಗಿಂತ ಸುಮಾರು ಏಳು ವರ್ಷಗಳಷ್ಟು ಹಿರಿಯನಾದ ನನ್ನ ಅಣ್ಣ ಹಾಮಾನಾ, ಬಳಕೆಯಲ್ಲಿ ದೊಡ್ಡಣ್ಣ. ನಾನು ಮಗುವಾಗಿದ್ದಾಗ ಆಟ ಆಡಿಸುವುದು, ಸ್ನಾನ ಮಾಡಿಸುವಾಗ ನೀರೆರೆಯುವುದು ಮೊದಲಾಗಿ ನನ್ನ ಲಾಲನೆಪಾಲನೆ ಮಾಡಿದ್ದಾಗಿ ನಮ್ಮ ತಾಯಿ ಆಗಾಗ ನೆನೆಸಿಕೊಳ್ಳುತ್ತಿದ್ದರು. ನನಗೆ ಸರಿಯಾದ ತಿಳಿವಳಿಕೆ ಬರುವ ಮೊದಲೇ ದೊಡ್ಡಣ್ಣ ಮನೆ ಬಿಟ್ಟು ತನ್ನ ಓದಿಗಾಗಿ ಬೇರೆಬೇರೆ ಊರುಗಳಿಗೆ ಹೋದಕಾರಣ ಅವನ ಜೊತೆಯಲ್ಲಿ ಕಳೆದ ಬಾಲ್ಯದ ದಿನಗಳು ನೆನಪಿಗೆ ಬರುತ್ತಿಲ್ಲ. ಮೊದಲ ವರ್ಷಗಳಲ್ಲಿ ಅವನ ಜೊತೆ ನನ್ನ ಒಡನಾಟ ಅಷ್ಟಾಗಿ ಇಲ್ಲದಿದ್ದರೂ ನಂತರದ ದಿನಗಳಲ್ಲಿ ಅವನು ನಡೆದ ಹಾದಿಯಲ್ಲೇ ನನ್ನ ಬದುಕನ್ನು ರೂಢಿಸಿಕೊಂಡದ್ದು ಸ್ಪಷ್ಟ.
ದೊಡ್ಡಣ್ಣ ತನ್ನ ಆರಂಭದ ವಿದ್ಯಾಭ್ಯಾಸವನ್ನು ನಾಲೂರು, ಮೇಗರವಳ್ಳಿಗಳಲ್ಲಿ ಮುಗಿಸಿ ಮುಂದೆ ಪ್ರೌಢಶಾಲಾ ಶಿಕ್ಷಣಕ್ಕೆ ತೀರ್ಥಹಳ್ಳಿಗೆ ಬಂದ. ಆ ಕಾಲಕ್ಕೆ ನಮ್ಮ ತಂದೆ ಮಕ್ಕಳ ವಿದ್ಯಾಭ್ಯಾಸಕ್ಕೆಂದೇ ತೀರ್ಥಹಳ್ಳಿಯಲ್ಲಿ ಒಂದು ಮನೆ ಮಾಡಿ, ದೊಡ್ಡಣ್ಣನ ಜೊತೆಯಲ್ಲಿ ನನ್ನ ಇನ್ನೊಬ್ಬ ಅಣ್ಣ- ಸಣ್ಣಣ್ಣ- ಮತ್ತು ನಮ್ಮೂರಿನ ಇನ್ನೊಂದಿಬ್ಬರು ವಿದ್ಯಾರ್ಥಿಗಳನ್ನು ಓದಿಸುತ್ತಿದ್ದರು. ವಿದ್ಯಾಭ್ಯಾಸದಲ್ಲಿ ಅಪಾರ ನಂಬಿಕೆ ಇಟ್ಟಿದ್ದ ನಮ್ಮ ತಂದೆ ತಮ್ಮ ಆರ್ಥಿಕ ಸಂಕಷ್ಟಗಳ ನಡುವೆಯೂ ಈ ಬಗೆಯ ವ್ಯವಸ್ಥೆ ಮಾಡಿದ್ದರು.
ನನ್ನ ವಿಚಾರ ಹೇಳಬೇಕೆಂದರೆ ನಾನು ಕ್ರಮವಾಗಿ ಶಾಲೆಯಲ್ಲಿ ಓದಿದವನೇ ಅಲ್ಲ; ಮನೆಯಲ್ಲೇ ಪಾಠ ಓದಿಕೊಂಡು ನೇರವಾಗಿ ಮಾಧ್ಯಮಿಕ ಶಾಲೆಯ ಮೂರನೆಯ ತರಗತಿಗೆ ಪ್ರವೇಶ ಪಡೆದುಕೊಂಡವನು. ನಾನು ಆಗಾಗ ತೀರ್ಥಹಳ್ಳಿಯ ಮನೆಗೆ ಬಂದು ಅಣ್ಣಂದಿರ ಜೊತೆ ಕೆಲವು ದಿನ ಕಳೆಯುತ್ತಿದ್ದೆ. ದೊಡ್ಡಣ್ಣ ಎಸ್. ಎಸ್. ಎಲ್. ಸಿ. ಓದುವ ಕಾಲಕ್ಕೆ ನಾನು ತೀರ್ಥಹಳ್ಳಿ ಮನೆಯ ಖಾಯಂ ಸದಸ್ಯನಾಗಿ ಸ್ಥಾಪಿತನಾಗಿದ್ದೆ.
ಅವು ಸ್ವಾತಂತ್ರದ ನಂತರದ ದಿನಗಳು. ಆ ದಿನಗಳಲ್ಲಿ ತೀರ್ಥಹಳ್ಳಿ ಸಾಹಿತ್ಯ, ಸಂಸ್ಕೃತಿ, ಸಮಾಜವಾದಿ ಚಟುವಟಿಕೆಗಳ ತವರೂರು. ದೊಡ್ಡಣ್ಣನ ಸಾಹಿತ್ಯ ಚಟುವಟಿಕೆಗಳು ಅದೇ ಸಮಯದಲ್ಲಿ ಆರಂಭಗೊಂಡು ಮುಂದೆ ವಿಸ್ತಾರಗೊಂಡವು. ದೊಡ್ಡಣ್ಣ ತನ್ನ ಗೆಳೆಯರ ಜೊತೆಗೂಡಿ ಸಾಹಿತ್ಯ ಚಟುವಟಿಕೆಗಳಿಗೆ ಮೀಸಲಾದ ಸಂಘವೊಂದನ್ನು ಕಟ್ಟಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದ (ಅದರ ಹೆಸರು “ಮಿತ್ರರ ಬಳಗ” ಆಗಿದ್ದಿತ್ತೆಂದು ನನ್ನ ನೆನಪು.)
ಕಾರಂತರು, ಮಾಸ್ತಿ, ಅನಕೃ, ತರಾಸು, ಚದುರಂಗ ಮುಂತಾದ ಪ್ರಖ್ಯಾತರು ಆ ಸಂಘದ ವತಿಯಿಂದ ತೀರ್ಥಹಳ್ಳಿಗೆ ಬಂದು ನಮ್ಮ ಮನೆಯಲ್ಲಿ ಉಳಿದುಕೊಂಡ ಸಂದರ್ಭಗಳು ನಮಗೆಲ್ಲಾ ತುಂಬಾ ಸಂಭ್ರಮದ ದಿನಗಳು. ದೊಡ್ಡಣ್ಣನ ಮೊದಲ ಕೃತಿ ‘ಬಾಳ್ನೋಟಗಳು’ ಪ್ರಕಟವಾದದ್ದೂ ಅದೇ ಸಮಯಕ್ಕೆ. ಆ ಪುಸ್ತಕ ಮನೆಯವರಿಗೆಲ್ಲ ಸಂತೋಷ, ಹೆಮ್ಮೆಗಳನ್ನು ತಂದಿತ್ತಾದರೂ, ನಮ್ಮ ಬಂಧುಗಳಲ್ಲಿ ಒಂದು ರೀತಿಯ ಅಸಮಾಧಾನಕ್ಕೆ ಕಾರಣವಾಗಿತ್ತು. ಎಸ್.ಎಸ್.ಎಲ್.ಸಿ. ತೇರ್ಗಡೆಯಾದೊಡನೆ ದೊಡ್ಡಣ್ಣ ತೀರ್ಥಹಳ್ಳಿಯನ್ನು ಬಿಟ್ಟು ಶಿವಮೊಗ್ಗಕ್ಕೆ ಹೋದ. ಪುನಃ ನಾವು ಬೇರೆಬೇರೆ ಆದೆವು.
ಮುಂದೆ ನಾನು ನನ್ನ ಅಣ್ಣ ಜೊತೆಯಾಗಿ ಒಂದು ಬಗೆಯ ‘ಮೂರು ಕಾಲಿನ ಓಟ’ದ ಸ್ಪರ್ಧೆಯಲ್ಲಿ ತೊಡಗಿದ್ದಂತೆ ತೋರುತ್ತದೆ. ಅವನು ಮೈಸೂರಿನಲ್ಲಿ ಕನ್ನಡ ಆನರ್ಸ್ ಓದುತ್ತಿದ್ದ ಕಾಲಕ್ಕೆ ನಾನು ಅಂದಿನ ಇಂಟರ್‍ಮೀಡಿಯಟ್ ಓದಲು ಅವನನ್ನು ಸೇರಿಕೊಂಡೆ. ಆಗ ನಾವಿಬ್ಬರೂ ಮಹಾರಾಜಾ ಕಾಲೇಜು ವಿದ್ಯಾರ್ಥಿನಿಲಯದಲ್ಲಿ ‘ರೂಮ್ ಮೇಟ್ಸ್’ ಸಹ ಆಗಿದ್ದೆವು.
ಅವು ತುಂಬಾ ಅಪೂರ್ವದ ದಿನಗಳು. ಆ ದಿನಗಳಲ್ಲಿ ದೊಡ್ಡಣ್ಣನ ಅಧ್ಯಾಪಕರು, ಸಾಹಿತಿ ಮಿತ್ರರು, ಸಹಪಾಠಿಗಳು ನಮ್ಮ ಕೊಠಡಿಗೆ ಆಗಾಗ ಬಂದು ಹೋಗುತ್ತಿದ್ದರು. ಹರಟೆ, ಚರ್ಚೆಗಳು ನಿರಂತರವಾಗಿ ಸಾಗುತ್ತಿದ್ದವು. ಸನ್ಮಾನ್ಯರುಗಳಾದ ಪರಮೇಶ್ವರ ಭಟ್ಟರು, ಶಂಕರನಾರಾಯಣರಾಯರು, ಗೋಪಾಲಕೃಷ್ಣ ಅಡಿಗರು, ಕೆ.ವಿ. ಸುಬ್ಬಣ್ಣ, ಕಥೆಗಾರ ಆನಂದ, ಕಲಾವಿದ ಆರ್. ಎಸ್. ನಾಯ್ಡು ಮೊದಲಾದ ಮಹನೀಯರುಗಳನ್ನು ನಾನು ಮೊದಲು ಕಂಡದ್ದು ಈ ಸಂದರ್ಭಗಳಲ್ಲಿ. ಆ ಎಳೆಯ ವಯಸ್ಸಿನಲ್ಲಿ ಅವರ ಪರಿಚಯವಾದದ್ದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ.
1955ರಲ್ಲಿ ದೊಡ್ಡಣ್ಣ ಕನ್ನಡ ಆನರ್ಸ್ ಮುಗಿಸಿ ಅದೇ ವರ್ಷ ತುಮಕೂರಿನಲ್ಲಿ ಕನ್ನಡ ಅಧ್ಯಾಪಕನಾಗಿ ಕೆಲಸ ಪ್ರಾರಂಭಿಸಿದ. ಒಂದು ವರ್ಷದ ನಂತರ ಕಲ್ಕತ್ತಾ ವಿಶ್ವವಿದ್ಯಾಲಯಕ್ಕೆ ತೆರಳಿ ಅಲ್ಲಿಂದ ಭಾಷಾವಿಜ್ಞಾನದಲ್ಲಿ ಎಂ. ಎ. ಪದವಿ ಪಡೆದುಕೊಂಡ. ಅದೇ ಸುಮಾರಿಗೆ ನಾನು ಮೈಸೂರಿನಲ್ಲಿ ಮನಶ್ಯಾಸ್ತ್ರದಲ್ಲಿ ಆನರ್ಸ್ ಹಾಗೂ ಎಂ. ಎ. ಪದವಿಗಳನ್ನು ಸಂಪಾದಿಸಿದೆ. ಮುಂದೆ ಅವನು ಅಮೆರಿಕಾಕ್ಕೆ ತೆರಳಿದ; ಅಲ್ಲಿನ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ 1964ರಲ್ಲಿ ಪಿಎಚ್. ಡಿ. ಪಡೆದು ವಾಪಾಸಾದ. ಅವನು ವಾಪಾಸಾದ ಒಂದೇ ವಾರದಲ್ಲಿ ನಾನು ಸಹ ಅಮೆರಿಕಾಕ್ಕೆ ತೆರಳಿ 1968ರಲ್ಲಿ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಪಡೆದು ವಾಪಾಸಾದೆ. ನಮ್ಮಿಬ್ಬರ ಈ ಉನ್ನತ ವ್ಯಾಸಂಗ ನಮ್ಮ ತಂದೆ ಶ್ರೀನಿವಾಸ ನಾಯಕರಿಗೆ ಅಪಾರ ಸಂತೋಷ, ತೃಪ್ತಿಯನ್ನು ತಂದುಕೊಟ್ಟ ವಿಚಾರವಾಗಿತ್ತು.
ಮುಂದೆ ದೊಡ್ಡಣ್ಣ ಪ್ರಾಧ್ಯಾಪಕನಾಗಿ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕನಾಗಿ, ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿಯಾಗಿ, ಸಾಹಿತಿಯಾಗಿ ಹೆಸರು ಗಳಿಸಿದ; ಜನಮನ್ನಣೆ ಪಡೆದುಕೊಂಡ. ನಾನೂ ಪ್ರಾಧ್ಯಾಪಕನಾದೆ; ಮೈಸೂರು ಹಾಗೂ ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಹಲವು ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸಿದೆ. ಒಂದು ಸಂದರ್ಭದಲ್ಲಿ ದೊಡ್ಡಣ್ಣ ಮೈಸೂರು ವಿಶ್ವವಿದ್ಯಾಲಯದಲ್ಲೂ, ನಾನು ಬೆಂಗಳೂರು ವಿಶ್ವವಿದ್ಯಾಲಯದಲ್ಲೂ ಏಕಕಾಲಕ್ಕೆ ಸಿಂಡಿಕೇಟ್ ಸದಸ್ಯರಾಗಿ ಕೆಲಸ ಮಾಡುತ್ತಿದ್ದೆವು. ಈ ಎರಡೂ ವಿಶ್ವವಿದ್ಯಾಲಯಗಳಲ್ಲಿ ಸಿಂಡಿಕೇಟ್ ಸದಸ್ಯತ್ವ ಹೊಂದಿದ ಸದಸ್ಯರೊಬ್ಬರು, “ಅಲ್ಲಿ ಹೋದರೆ ಅಣ್ಣ, ಇಲ್ಲಿ ಬಂದರೆ ತಮ್ಮನ ಜೊತೆಯಲ್ಲಿ ಕುಳಿತುಕೊಳ್ಳುವ ಸೌಭಾಗ್ಯ ನನ್ನದು” ಎಂದು ತಮಾಷೆ ಮಾಡಿದ್ದುಂಟು.
ನಮ್ಮ ‘ಮೂರು ಕಾಲಿನ ಓಟದ ಪಂದ್ಯ’ ನಮ್ಮ ವಿದ್ಯಾಭ್ಯಾಸ ಮತ್ತು ವೃತ್ತಿ ಜೀವನದ ಕೆಲವು ಸಾಮ್ಯಗಳಿಗಷ್ಟೇ ಸೀಮಿತವಾಗಿದ್ದು, ಉಳಿದಂತೆ ದೊಡ್ಡಣ್ಣ ಅನನ್ಯವಾಗಿ ಮೆರೆಯುತ್ತಾನೆ. ಅವನ ಪ್ರತಿಭೆ, ಪಾಂಡಿತ್ಯ, ಸೃಷ್ಟಿ, ಸಾಧನೆ ಹಾಗೂ ಜನಪ್ರಿಯತೆಗಳು ಕನ್ನಡನಾಡಿನಲ್ಲಿ ಮನೆಮಾತಾಗಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅವನು ‘ಹೀರೋ’ ಆಗಿ ವಿಜೃಂಭಿಸುತ್ತಾನೆ (ಹೀರೋ ಆದವರಿಗೆ ‘ವಿಲನ್’ಗಳಿರುವುದು ಸಹಜ. ಅವನ ಬದುಕಿನಲ್ಲೂ ಸಾಕಷ್ಟು ಸಂಖ್ಯೆಯ ‘ವಿಲನ್’ಗಳಿದ್ದರು ಎನ್ನುವುದು ಸತ್ಯ).
ಅವನು ಗಳಿಸಿದ ಪಾಂಡಿತ್ಯ, ಸಾಧನೆ, ಜನಪ್ರಿಯತೆಗಳು ಅವನಿಗೆ ಸುಲಭವಾಗಿ ಬಂದ ಬಳುವಳಿಗಳು ಎಂದು ಯಾರಾದರೂ ಭಾವಿಸಿದ್ದರೆ ಅದು ತಪ್ಪಾಗುತ್ತದೆ. ವಾಸ್ತವವಾಗಿ ಅವನ ಎಲ್ಲ ಗಳಿಕೆಗಳ ಹಿಂದೆ ಅವಿರತ ದುಡಿಮೆ, ಅಪಾರ ಪರಿಶ್ರಮ, ಒಂದು ಬಗೆಯ ತ್ಯಾಗ ಮತ್ತು ಅವೆಲ್ಲಕ್ಕಿಂತ ಮಿಗಿಲಾಗಿ ಸವಾಲುಗಳನ್ನು ಎದುರಿಸುವ ಛಲ ಅಡಕವಾಗಿದ್ದವು.
ಸೌಜನ್ಯತೆಯ ಜೊತೆಯಲ್ಲೇ ನಿರ್ದಾಕ್ಷಿಣ್ಯವಾಗಿ, ನ್ಯಾಯ ನಿಷ್ಠುರನಾಗಿ ವರ್ತಿಸಬಲ್ಲವನಾಗಿದ್ದ. ಈ ಬಗೆಯ ನಿರ್ದಾಕ್ಷಿಣ್ಯ ಪ್ರವೃತ್ತಿಯಿಂದಾಗಿ ಸಂಬಂಧಿಗಳೂ ಸೇರಿದಂತೆ ಅನೇಕರು ಅವನನ್ನು ‘ಅತಿ ಗರ್ವಿ’ ಎಂದು ಭಾವಿಸಿದ್ದುಂಟು. ನಮ್ಮ ಗೌರವಕ್ಕೆ ಪಾತ್ರರಾಗಿದ್ದು ನಮ್ಮನ್ನು ಚೆನ್ನಾಗಿ ಬಲ್ಲವರಾಗಿದ್ದ ಮಾಜಿ ಮುಖ್ಯಮಂತ್ರಿಗಳೊಬ್ಬರು ಅವನ ಬಗ್ಗೆ ಅಸಮಾಧಾನ ಪಟ್ಟುಕೊಂಡು ನನ್ನೊಡನೆ ಹೇಳಿದ್ದರು: “ನಿನ್ನ ಅಣ್ಣ ತುಂಬಾ ಅಹಂಕಾರಿ” ಎಂಬುದಾಗಿ. ಈ ಮಾತನ್ನು ನಾನು ದೊಡ್ಡಣ್ಣನಿಗೆ ತಿಳಿಸಿದಾಗ, ಅವನು ನಕ್ಕು ಸುಮ್ಮನಾಗಿದ್ದ. ಆ ಹಿರಿಯರ ಕೋಪದ ಹಿನ್ನೆಲೆ ಅವನಿಗೆ ಗೊತ್ತಿದ್ದಿರಬೇಕು. ಆದ್ದರಿಂದಲೇ ಅವನು ಅವರ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ನನ್ನ ಭಾವನೆ.
ದೊಡ್ಡಣ್ಣ ಮತ್ತು ನನ್ನ ನಡುವಿನ ಬಾಂಧವ್ಯ ಯಾವ ಬಗೆಯದಾಗಿತ್ತು ಎಂದು ಚಿಂತಿಸಿದಾಗ ಉತ್ತರ ಸ್ಪಷ್ಟವಾಗಿ ಹೊಳೆಯುವುದಿಲ್ಲ. ಅವನ ನಿರ್ದಾಕ್ಷಿಣ್ಯ ನಡವಳಿಕೆ ಸಂಬಂಧಿಗಳಿಗೂ ಅನ್ವಯವಾಗುತ್ತಿತ್ತು. ವಿಶ್ವಾಸ ಹಾಗೂ ವ್ಯವಹಾರಗಳನ್ನು ಅವನು ಬೇರೆ ಬೇರೆಯಾಗಿಯೇ ನೋಡುತ್ತಿದ್ದ. ಸಂಬಂಧಿಗಳಿಗೆ ಸಹಾಯ ಮಾಡುವ ಸಂದರ್ಭಗಳಲ್ಲಿ ಸಹ ನ್ಯಾಯ ಮತ್ತು ನೀತಿಯ ಚೌಕಟ್ಟನ್ನು ಅವನು ಎಂದೂ ಮೀರಲಿಲ್ಲ. ನಾನು ಕನ್ನಡದಲ್ಲಿ ಬರವಣಿಗೆ ಮಾಡಬೇಕು, ಕೆಲಸ ಮಾಡಬೇಕು ಎನ್ನುವುದು ಅವನ ಅಪೇಕ್ಷೆಯಾಗಿತ್ತು. ಸ್ವಭಾವತಃ ಸೋಮಾರಿಯಾಗಿದ್ದ ನಾನು ಅವನ ನಿರೀಕ್ಷೆಯಂತೆ ಯಾವ ಕೆಲಸವನ್ನೂ ಮಾಡಲಿಲ್ಲ. ಈ ವಿಚಾರದಲ್ಲಿ ಅವನಿಗೆ ನನ್ನ ಬಗ್ಗೆ ಸಾಕಷ್ಟು ಅಸಮಾಧಾನವಿತ್ತು. ಅದನ್ನು ಅನೇಕ ಬಾರಿ ವ್ಯಕ್ತಪಡಿಸಿಯೂ ಇದ್ದ. ಅದೆಲ್ಲ ಏನಿದ್ದರೂ ನಮ್ಮ ನಡುವಿನ ಸಂಬಂಧ ಆತ್ಮೀಯವಾಗಿತ್ತು ಎಂದೇ ನನ್ನ ಭಾವನೆ. ಎಂದಾದರೊಮ್ಮೆ ನನ್ನ ಸಲಹೆ ಕೇಳಿದ್ದುಂಟು, ವಿವೇಕ ಹೇಳಿದ್ದುಂಟು, ಕಷ್ಟಸುಖ ವಿಚಾರಿಸಿದ್ದುಂಟು.
ತನ್ನ ಜೀವನದ ನೋವನ್ನು ಸೂಕ್ಷ್ಮವಾಗಿ ಹಂಚಿಕೊಂಡ ಸಂದರ್ಭಗಳೂ ಇವೆ. ಆಗಲಾದರೂ ದೊಡ್ಡಣ್ಣನ ಜೊತೆ ಸಲುಗೆಯಿಂದ ನಡೆದುಕೊಳ್ಳುವುದು ಸಾಧ್ಯವಿರಲಿಲ್ಲ. ನಮ್ಮ ತಂದೆಯವರ ಎದುರು ಯಾವ ಸಂಕೋಚವೂ ಇಲ್ಲದೆ ಸಿಗರೇಟು ಸೇದುತ್ತಿದ್ದ ನಾನು, ದೊಡ್ಡಣ್ಣನ ಮುಂದೆ ಯಾವತ್ತೂ ಸಿಗರೇಟು ಸೇದಲಿಲ್ಲ. ಅಂದ ಮಾತ್ರಕ್ಕೆ ನಮ್ಮ ತಂದೆಯವರ ಬಗ್ಗೆ ನನಗೆ ಕಡಿಮೆ ಗೌರವ ಎಂದಲ್ಲ; ಬದಲಿಗೆ ದೊಡ್ಡಣ್ಣನ ಬಗ್ಗೆ ಹೆಚ್ಚಿನ ಭಯವಿತ್ತು. ಅವನ ವ್ಯಕ್ತಿತ್ವವೇ ಆ ಬಗೆಯದಾಗಿತ್ತು. ಕೆಲವೊಮ್ಮೆ ದೊಡ್ಡಣ್ಣ ನನ್ನ ಬಗ್ಗೆ ವಿಶೇಷ ಒಲವು ತೋರಿದ ಸಂದರ್ಭಗಳೂ ಇದ್ದುವು. ಮದುವೆ ಮುಂತಾದ ಸಮಾರಂಭಗಳಿಗೆ ಅವನು ಮೈಸೂರಿನಿಂದ ಹೊರ ಊರುಗಳಿಗೆ ಹೋದದ್ದು ತೀರಾ ಅಪರೂಪ. ನಮ್ಮ ಕೇವಲ ಸಂಬಂಧಿಗಳ ವಿಚಾರದಲ್ಲೂ ಅವನು ಈ ನಿಯಮಗಳನ್ನು ಸಡಿಲಿಸಿದ್ದು ನನಗೆ ತಿಳಿಯದು. ಹಾಗಾದರೂ ನನ್ನ ಇಬ್ಬರು ಮಕ್ಕಳ ಮದುವೆಯ ಸಂದರ್ಭಗಳಲ್ಲಿ ತನ್ನ ಕುಟುಂಬದ ಎಲ್ಲ ಸದಸ್ಯರ ಜೊತೆಗೂಡಿ ಭಾಗವಹಿಸಿದ್ದು ನನ್ನ ಬಗೆಗಿನ ಅವನ ವಿಶ್ವಾಸದ ದ್ಯೋತಕ ಎಂದು ನನ್ನ ಭಾವನೆ.
2000ದ ವರ್ಷ ನಮ್ಮ ಮನೆಯಲ್ಲಿ ಸಾವಿನ ವರ್ಷ. ಆ ವರ್ಷದ ಆರಂಭದಲ್ಲಿ ನಮ್ಮ ತಾಯಿ ದೀರ್ಘ ಅನಾರೋಗ್ಯದ ನಂತರ ತೀರಿಕೊಂಡರು. ಅವರ ಸಾವನ್ನೇ ಕಾಯುತ್ತಿದ್ದಂತೆ, ಮುಂದಿನ ಮೂರು ತಿಂಗಳಲ್ಲಿ ನಮ್ಮ ಭಾವ ನಾರಾಯಣ, ನಂತರ ವರ್ಷ ಕೊನೆಗೊಳ್ಳುವ ಮೊದಲು ದೊಡ್ಡಣ್ಣ ನಮ್ಮ ತಾಯಿಯನ್ನು ಹಿಂಬಾಲಿಸಿ ನಡೆದರು. ಅವನ ಸಾವಿಗೆ ಸುಮಾರು ಒಂದು ತಿಂಗಳ ಮೊದಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕೆಲಸದ ಮೇಲೆ ಮೈಸೂರಿಗೆ ಹೋಗಿದ್ದ ನಾನು ದೊಡ್ಡಣ್ಣನನ್ನು ಭೇಟಿಯಾಗಿದ್ದೆ. ಅಂದು ಸಂಜೆ ಮನೆಗೆ ಊಟಕ್ಕೆ ಬರುವಂತೆ ಒತ್ತಾಯ ಮಾಡಿದ.
ಆ ಸಂಜೆಯ ಅವನ ಕರೆಯನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವಾಗದ ಕಾರಣ ಮಾರನೆಯ ಬೆಳಗಿನ ತಿಂಡಿಗೆ ಬರುವಂತೆ ಒತ್ತಾಯಿಸಿದ. ಅದೊಂದು ಅವನ ಅಪರೂಪದ ವರ್ತನೆ ಎನ್ನಿಸಿತು. ಕಾರಣ, ಊಟ ಉಪಚಾರಗಳ ಬಗ್ಗೆ ಅವನು ಯಾವತ್ತೂ ಒತ್ತಾಯ ಮಾಡಿದ್ದಿಲ್ಲ. ಆ ಬೆಳಿಗ್ಗೆ ಅವನಿಗೆ ಇಷ್ಟವಾದ ಕೇಸರಿಬಾತ್ ಮೊದಲಾದ ವಿಶೇಷ ತಿಂಡಿಗಳಿದ್ದವು. ತನ್ನ ಅನಾರೋಗ್ಯದ ಕಾರಣ ಆ ಬಗೆಯ ಎಣ್ಣೆಯ ತಿಂಡಿಗಳನ್ನು ಕಡಿತಗೊಳಿಸುವಂತೆ ವೈದ್ಯರು ಹೇಳಿದ್ದಾರೆಂದೂ, ನನ್ನ ನೆಪದಲ್ಲಿ ಆ ದಿನ ತಾನು ಅವುಗಳನ್ನು ತಿನ್ನುತ್ತಿರುವುದಾಗಿಯೂ ಹೇಳಿಕೊಂಡ. ಆ ಬೆಳಿಗ್ಗೆ ನಾವಿಬ್ಬರೂ ಕೂಡಿ ಊಟದ ಮೇಜಿನ ಮೇಲೆ ಕಳೆದ ಸಂತೋಷದ ಗಳಿಗೆ ನಮ್ಮ ಪಾಲಿನ ಕೊನೆಯ ಭೇಟಿಯಾಯಿತು ಎನ್ನುವುದು ಎಂದೂ ಮರೆಯಲಾಗದ ದುಃಖದ ಸಂಗತಿ. ಆ ದಿನದ ಅವನ ಒತ್ತಾಯಪೂರ್ವಕ ಆಹ್ವಾನವನ್ನು ಯೋಚಿಸಿದಾಗ, ಅವನು ತನ್ನ ಸಾವನ್ನು ಸದ್ಯದಲ್ಲೇ ನಿರೀಕ್ಷಿಸುತ್ತಿದ್ದಿರಬಹುದೇನೊ ಎನ್ನುವುದು ನನ್ನ ಸಂದೇಹ.
ಅವನೇ ಹಲವರ ಸಾವನ್ನು ಕುರಿತ ಹೇಳಿರುವಂತೆ, ಅವನು ತೀರಿಕೊಂಡಾಗ ಅವನದ್ದೇನೂ ಸಾಯುವ ವಯಸ್ಸಲ್ಲ. ಆರೋಗ್ಯವಾಗಿಯೇ ಇದ್ದ. ಇನ್ನೂ ನಾಲ್ಕಾರು ಕಾಲ ಬದುಕಬಹುದಾಗಿತ್ತು ಎನ್ನುವುದು ನಮ್ಮ ಆಶಯ. ಆದರೆ ಅವನ ಸಾವು ಅದೆಷ್ಟು ಅನಾಯಾಸವಾಗಿ, ಅನಿರೀಕ್ಷಿತವಾಗಿ ಬಂತು? ಅಷ್ಟು ಸುಖದ ಸಾವು ಯಾರಿಗೆ ತಾನೆ ಬೇಡ? ಒಪ್ಪ ಓರಣಗಳಿಂದ ಕೂಡಿದ್ದ ಅವನ ಬದುಕಿಗೆ ಅದೇ ಸೂಕ್ತವಾದ ಕೊನೆ; ಅವನ ಸಾವು ಅವನ ಬದುಕಿನಷ್ಟೇ ಸುಂದರ.





My dear Mohan,
I am extremely grateful to you for the affection shown to me and my late brother H M Nayak by serializing my monograph on him and giving it wider publicity. Even now I confess I am not writer. In recognizing my writing you have shown me abundant courtesy. It is typical Mohan. Thank you.
ಗುರುಗಳಾದ ಹಾ.ಮಾ. ನಾಯಕರನ್ನು ಕುರಿತು ಅವರ ತಮ್ಮ ಈಶ್ವರ್ ಅವರು ಬರೆಯುತ್ತಿರುವುದನ್ನು ಕುತೂಹಲದಿಂದ ಓದುತ್ತಿದ್ದೇನೆ. ನಾಯಕರು ನಿಧನರಾದಾಗ ಬಂದಿದ್ದವರ ಹೆಸರುಗಳನ್ನು ಈಶ್ವರ್ ಅವರು ನೆನಪಿನಿಂದ ಬರೆದಿದ್ದಾರೆ. ಜಿ..ಎಚ್. ನಾಯಕರ ಜೊತೆ ಹಾರೋಗದ್ದೆಗೆ ಮೀರಾನಾಯಕರು ಬಂದಿರಲಿಲ್ಲ. ಅಂತ್ಯಕ್ರಿಯೆಗೆ ಹೋಗಿಬರಲು ಅನುಕೂಲವಾಗಲೆಂದು ವಿಶ್ವವಿದ್ಯಾನಿಲಯ ಒಂದು ಮಿನಿ ಬಸ್ಸನ್ನೇ ಕೊಟ್ಟಿತ್ತು. ಅದರೆ ಮೈಸೂರಿನಿಂದ ಹಾರೋಗದ್ದೆಗೆ ಹೋದವರು ಮೂರು ಜನ ಮಾತ್ರ. ಮುಂದೆ ಕಾರಿನಲ್ಲಿ ನಾಯಕರ ದೇಹದ ಜೊತೆ ಸೊಮಶೇಖರಗೌಡ ದಂಪತಿಗಳು ಮಾತ್ರ ಇದ್ದರು. ಹಿಂದೆ ಬಸ್ ನಲ್ಲಿ ಜಿ.ಎಚ್. ನಾಯಕರು, ನಾನು ಮತ್ತು ಅಧ್ಯಯನ ಸಂಸ್ಥೆಯ ಆಗಿನ ನಿರ್ದೇಶಕರಾಗಿದ್ದ ಸಿ.ಪಿ. ಸಿದ್ಧಾಶ್ರಮ ಅವರು ಮಾತ್ರ. ಅಂದು ರಾತ್ರಿ ಅಂತ್ಯಕ್ರಿಯೆ ಮುಗಿಸಿಕೊಂಡು ಅದೇ ಬಸ್ ನಲ್ಲಿ ನಾವು ಮೂವರೂ ಹಿಂದಿರುಗಿದೆವು.
ಪಂಡಿತಾರಾಧ್ಯ
ಮೈಸೂರು