ಡಾ ಬಿ.ಆರ್. ಸತ್ಯನಾರಾಯಣ
ತೇಜಸ್ವಿಯವರ ಸಾಹಿತ್ಯವನ್ನು ಕುರಿತು ಚಿಂತಿಸುವಾಗಲೆಲ್ಲಾ, ಎರಡು ಪ್ರಮುಖ ಅಂಶಗಳು ನನ್ನನ್ನು ಕಾಡುತ್ತವೆ. ಮೊದಲನೆಯದು ತೇಜಸ್ವಿ ಸಾಹಿತ್ಯಕ್ಕೆ ಹೆಚ್ಚಿನ ವಿವರಣೆ, ವಿಮರ್ಶೆಯ ಅಗತ್ಯವೇ ಇಲ್ಲದಿರುವಾಗ, ಅಂದರೆ ನೇರವಾಗಿಯೇ ಓದುಗನ ಗ್ರಹಿಕೆಗೆ ದಕ್ಕುವಷ್ಟು ಸರಳವಾದ ಸಾಹಿತ್ಯ ಶೈಲಿ ತೇಜಸ್ವಿಯವರದಾಗಿರುವಾಗ, ನಮ್ಮ ವಿವರಣೆ ವಿಮರ್ಶೆಗಳು ಎಲ್ಲಿ ಓದುಗ ಮತ್ತು ತೇಜಸ್ವಿಯವರ ನಡುವೆ ಫಿಲ್ಟರ್ ಆಗಿಬಿಡುತ್ತವೆಯೋ ಎಂಬ ಭಾವ. ಎರಡನೆಯದು ತೇಜಸ್ವಿಯವರ ಮಾತಿನಲ್ಲೇ ಹೇಳುವುದಾದರೆ, ಇಂದು ನಾವು ಪರಿಸರಕ್ಕೆ ಸಹಾಯ ಮಾಡುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಮಾಡುತ್ತಿರುವ ಕೃತ್ಯಗಳೆಲ್ಲಾ ಮುಂದೊಂದು ದಿನ ಪರಿಸರಕ್ಕೇ ದಕ್ಕೆ ತರಬಹುದು ಎನ್ನುವಂತೆ, ನಾವು ತೇಜಸ್ವಿಯವರನ್ನು ಅವರ ಸಾಹಿತ್ಯವನ್ನು ಕುರಿತು ನಡೆಸುವ ವಿಚಾರ ಮಂಥನಗಳು ಎಲ್ಲಿ ಅಡ್ಡ ಪರಿಣಾಮಗಳನ್ನು ಬೀರುತ್ತವೊ ಎಂಬ ಭಾವ.
ಮೊದಲನೆಯ ನನ್ನ ಭಾವನೆಗೆ ಮುಖ್ಯ ಕಾರಣವೊಂದಿದೆ. ವೃತ್ತಿಯಿಂದ ಗ್ರಂಥಪಾಲಕನಾದ ನನಗೆ ನನ್ನ ಮಿತ್ರರೊಬ್ಬರು, ಹೊಸದಾಗಿ ಕನ್ನಡ ಕಲಿತಿರುವ ಹಾಗೂ ಸಾಹಿತ್ಯದಲ್ಲಿ ಆಸಕ್ತಿಯಿರುವ ಗುಜರಾತಿ ಮಹಿಳೆಗೆ ಓದಲು ಯಾವುದಾದರು ಕನ್ನಡ ಪುಸ್ತಕಗಳನ್ನು ಕೊಡುವಂತೆ ಕೇಳಿದ್ದರು. ಆಗ ನಾನು ಹಿಂದೆಮುಂದೆ ಯೋಚಿಸದೆ ತೇಜಸ್ವಿಯವರ ಪರಿಸರದ ಕಥೆಗಳು ಮತ್ತು ಕರ್ವಾಲೊ ಕಾದಂಬರಿಯನ್ನು ಕೊಟ್ಟಿದ್ದೆ. ಕೇವಲ ಮೂರೇ ದಿನದಲ್ಲಿ ಆ ಗುಜರಾತಿ ಮಹಿಳೆ ಗ್ರಂಥಾಲಯಕ್ಕೇ ಬಂದು, ಈ ಲೇಖಕರ ಎಲ್ಲಾ ಕೃತಿಗಳನ್ನು ನಾನು ಓದಬೇಕು. ಎಲ್ಲಿ ಸಿಗುತ್ತವೆ ಎಂದರು. ನಾನು ನಮ್ಮ ಗ್ರಂಥಾಲಯದಲ್ಲೇ ಸಿಗುತ್ತವೆ ಅಂದಿದ್ದಕ್ಕೆ ಇಲ್ಲ. ನಾನು ಅವೆಲ್ಲವನ್ನು ಕೊಂಡೇ ಓದುತ್ತೇನೆ. ಲಿಸ್ಟ್ ಕೊಟ್ಟು ಬಿಡಿ ಅಂದರು. ಈ ಘಟನೆಯಿಂದ ತೇಜಸ್ವಿಯವರ ಸಾಹಿತ್ಯದ ಗಟ್ಟಿತನ ಏನೆಂದು ತಿಳಿಯುತ್ತದೆ. ತೇಜಸ್ವಿ ಕೃತಿಗಳು ಏಕೆ ಮೇಲಿಂದ ಮೇಲೆ ಮರುಮುದ್ರಣಗೊಳ್ಳುತ್ತಿವೆ ಎಂಬುದೂ ಇದರಿಂದ ಅರ್ಥವಾಗುತ್ತದೆ.
ನಾವು ತೇಜಸ್ವಿಯವರ ಸಾಹಿತ್ಯದ ಬಗ್ಗೆ ಮಾತನಾಡುವಾಗ, ಅವರು ಹೇಳಲು ಹೊರಟಿರುವ ಹಾಗೂ ನಮಗೆ ದಕ್ಕದೇ ಇರುವ ಒರಿಜಿನಾಲಿಟಿಯನ್ನು ಬಿಟ್ಟು, ಬೇರೇನನ್ನೋ ಹೇಳಿ ನಾವೂ ದಾರಿ ತಪ್ಪಿ, ನಮ್ಮ ವಿಮರ್ಶೆಯನ್ನೋ ವಿವರಣೆಯನ್ನೋ ನೆಚ್ಚಿ ನಡೆಯುವವರನ್ನೂ ದಾರಿ ತಪ್ಪಿಸುವ ಅಪಾಯವಿರುತ್ತದೆ ಎಂಬ ಭಯ ನನ್ನದು.
ತೇಜಸ್ವಿಯವರ ಚಿಂತನೆಯೆ ಕೆಲವು ಅಂಶಗಳು
ತೇಜಸ್ವಿಯವರ ಬದುಕು ಹಾಗೂ ಎಲ್ಲಾ ಕೃತಿಗಳು, ಅವರ ಪತ್ರಿಕಾ ಸಂದರ್ಶನಗಳು, ಹೇಳಿಕೆಗಳು, ಅವರು ವಾಚಕರವಾಣಿಗೆ ಬರೆಯುತ್ತಿದ್ದ ಪತ್ರಗಳು ಇವನ್ನೆಲ್ಲಾ ಒಟ್ಟಾರೆ ಗಮನಿಸಿದಾಗ, ಮೇಲಿಂದ ಮೇಲೆ ಓದಿದಾಗ, ತೇಜಸ್ವಿಯವರನ್ನು ಕಾಡುತ್ತಿರುವ ಸಮಸ್ಯೆಗಳು ಅಥವಾ ಅವರು ಮತ್ತೆ ಮತ್ತೆ ಮುಖಾಮುಖಿಯಾಗಲು ಹೆಚ್ಚು ಇಷ್ಟಪಡುತ್ತಿದ್ದ ಕ್ಷೇತ್ರಗಳು ಯಾವುವು ಎಂಬುದರ ಸ್ಥೂಲ ಕಲ್ಪನೆ ನಮಗೆ ಸಿಗಬಹುದು. ಕೆಳಕಂಡವುಗಳನ್ನು ನನ್ನ ಓದಿನ ಮತ್ತು ಅರ್ಥೈಸುವಿಕೆಯ ಮಿತಿಯಲ್ಲಿ ಪಟ್ಟಿ ಮಾಡಲು ಇಚ್ಚಿಸುತ್ತೇನೆ.
ದೇವರು ಇದ್ದಾನೋ ಇಲ್ಲವೋ. ಆದರೆ ಇದ್ದಾನೆ ಎಂದಾಗ ಆಗುವ ವಿಸ್ಮಯ, ಇಲ್ಲ ಎಂದಾಗಲೂ ಆಗುತ್ತದೆ. ಅಂತಹ ವಿಸ್ಮಯಗಳ ಹುಡುಕಾಟ ತೇಜಸ್ವಿಯವರ ಹವ್ಯಾಸ.
ಒಬ್ಬ ಮನುಷ್ಯ ಸಾಮಾಜಿಕವಾಗಿ ಸ್ವಲ್ಪ ಗುರುತಿಸಲ್ಪಟ್ಟರೆ ಸಾಕು. ಅವನನ್ನು ಒಂದು ಫಂಥಕ್ಕೆ ಸೀಮಿತಗೊಳಿಸಿ, ಅವನ ಪ್ರಗತಿಪರವಾದ, ಜೀವಪರವಾದ ನಿಲುವುಗಳನ್ನು ಮೂಲೆಗುಂಪು ಮಾಡುವ ಪ್ರತಿಗಾಮಿತನ ಶಕ್ತಿಮೂಲ ಯಾವುದು?
ಬಹುಸಂಸ್ಕೃತಿಯ, ಧಾರ್ಮಿಕತೆಯ ನಾಡಿನಲ್ಲಿ ಸಹಬಾಳ್ವೆ ಸಾದ್ಯವಿರುವೆಡೆಯಲ್ಲೆಲ್ಲಾ ಅಂತರಂಗದಲ್ಲಿ ಕ್ರೋಧ, ದ್ವೇಷಗಳಂತೆ ಜಾತಿಯತೆಯೂ ಸ್ಥಾಯಿಯಾಗಿ ಇರುವುದರಿಂದ ಸಾಂಸ್ಕೃತಿಕ ಚಿದ್ರೀಕರಣವಾಗುತ್ತಿರುವುದು.
ಒಳಗೊಳಗೇ ಮತ್ತೆ ಗಟ್ಟಿಯಾಗುತ್ತಿರುವ ಜಾತೀಯತೆ. ಜಾಗತೀಕರಣದ ತೀವ್ರತರ ಪ್ರಭಾವ ಮತ್ತು ಪರಿಣಾಮದಿಂದಾಗಿ ಜಾತೀಯತೆಯ ಬೇರುಗಳು ಸಡಿಲವಾಗಬಹುದೆಂಬ ಆಶಾಭಾವನೆ.
ಸನಾತನವಾದಿಗಳ ಪ್ರಕಾರ ಗುರುಪೀಠದ ಹಕ್ಕೇ ಇಲ್ಲದ ಶೂದ್ರಪರಂಪರೆಯ ಮಠಗಳೂ ಸಹ ಬೆಳ್ಳಿಕಿರೀಟ, ಅಡ್ಡಪಲ್ಲಕ್ಕಿ ಉತ್ಸವ ಪಾದಪೂಜೆ ಮೊದಲಾದವುಗಳಲ್ಲಿ ತೊಡಗುತ್ತಿರುವುದು.
ಸ್ವಲ್ಪಮಟ್ಟಿನ ವೈಚಾರಿಕತೆಯನ್ನು ಮೈಗೂಡಿಸಿಕೊಂಡಿರುವರಿಗೇ (ತೇಜಸ್ವಿಯವರನ್ನೂ ಸೇರಿಸಿಕೊಂಡು) ಬೆಕ್ಕು ಅಡ್ಡ ಹೋಗುವುದನ್ನು ನೋಡಿ ತಥ್ ಎನ್ನುವಂತೆ ಆಗುತ್ತದೆ. ಅಂದರೆ ಈ ನಂಬಿಕೆಗಳು ಆನುಷಂಗಿಕವೋ ಎಂಬ ಭಾವ.
ಯಾವುದರ ವಿರುದ್ದ ಶೂದ್ರರು ಸೆಟೆದು ನಿಂತಿದ್ದರೊ ಅದರ ಬಗ್ಗೆಯೇ ಮೃದುವಾದರೆಂದರೆ ಶುದ್ರರೂ ದಲಿತರೂ ಮತ್ತೆ ಸನಾತನಿಗಳ ಊಳಗಕ್ಕಿಳಿಯುವ ಸಾಧ್ಯತೆ.
ಮುಸ್ಲಿಂ ಮೂಲಭೂತವಾದದ ದೆಸೆಯಿಂದ ಉದ್ದೀಪನಗೊಳ್ಳುತ್ತಿರುವ ಹಿಂದೂ ಮೂಲಭೂತವಾದದ ಪರಿಣಾಮಗಳು.
ಶಿಕ್ಷಣ ಪದ್ಧತಿ, ಮಾಧ್ಯಮ ಮತ್ತು ಗುಣಮಟ್ಟ. ಟೀ.ವಿ. ಚಾನೆಲ್ಗಳನ್ನು ಬದಲಾಯಿಸುವಂತೆ, ನಮ್ಮ ನಾಯಕರುಗಳು ಬದಲಾಯಿಸುತ್ತಿರುವ, ದೂರಗಾಮಿತ್ವವಿಲ್ಲದ ಶಿಕ್ಷಣ ನೀತಿ.
ಶಿಕ್ಷಕ ಸಮುದಾಯದ ನಿಷ್ಕ್ರೀಯತೆ. ಪಠ್ಯೇತರ ಜ್ಞಾನದ ಬಗೆಗಿನ ಅನಾದರ. ಸಾಹಿತ್ಯವು ಅಧ್ಯಾಪಕರ ಸೊತ್ತಾಗಿರುವುದು. ಸಾಹಿತಿಗಳೆನಿಸಿಕೊಂಡವರಲ್ಲಿ ಹೆಚ್ಚುತ್ತಿರುವ ಜ್ಞಾನದ ಅಹಂಕಾರ ಮತ್ತು ಜ್ಞಾನ ಮೂಲದ ನಿರಾಕರಣೆ.
ತನ್ನ ಅನುಭವ ಮತ್ತು ಆಲೋಚನೆಗಳನ್ನು ಇತರರಿಗೆ ವರ್ಗಾಯಿಸುವ ಅತ್ಯಂತ ಕ್ಷಿಪ್ರ ಮತ್ತು ಸಮರ್ಥ ಮಾರ್ಗದ ಅನ್ವೇಷಣೆ.
ಕಾಲ, ತಂತ್ರಜ್ಞಾನ ಇವುಗಳ ಬದಲಾವಣೆಯ ವೇಗದೊಂದಿಗೆ ಬದಲಾಗದ ಕನ್ನಡ ಭಾಷೆ. ಕಂಪ್ಯೂಟರ್ ಕ್ಷೇತ್ರದಲ್ಲಿ ಕನ್ನಡವನ್ನು ಬಳಸಲು ಇರುವ ಹಿಂಜರಿಕೆ.
ಪುಸ್ತಕೋದ್ಯಮದ ಶಿಥಿಲ ವ್ಯವಸ್ಥೆ ಹಾಗೂ ಭ್ರಷ್ಟಾಚಾರ. ಸುಳ್ಳು ಹೇಳದೆ, ಮೋಸ ಮಾಡದೆ, ಅನ್ಯಾಯವೆಸಗದೆ ಇಪ್ಪತ್ತನಾಲ್ಕು ಗಂಟೆ ಕಳೆಯುವುದು ಸಹ ಈ ದೇಶದಲ್ಲಿ ದುರ್ಭರವಾದ ಮಹಾಸಾಹಸವಾಗುತ್ತಿರುವುದು.
ಎಲ್ಲಾ ಚಳುವಳಿಗಳು, (ಉದಾಹರಣೆಗೆ ಜಾತಿವಿನಾಶ ಚಳುವಳಿ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ, ನವ್ಯ, ದಲಿತ ಮತ್ತು ಬಂಡಯ, ಇತ್ತಿಚಿನ ಪರಿಸರ ಚಳುವಳಿಗಳು) ಕೇವಲ ಸಾಹಿತ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗುತ್ತಿರುವುದು. ಸಾಮಾಜಿಕ ಆಯಾಮವನ್ನು ದಕ್ಕಿಸಿಕೊಳ್ಳದೇ ಇರುವುದು. ಗೋಕಾಕ್ ಮತ್ತು ರೈತ ಚಳುವಳಿಗಳು ಸಾಹಿತ್ಯೇತರ ಚಳುವಳಿಯಾಗಿದ್ದರೂ ಸಾಮಾಜಿಕ ಎಚ್ಚರ ಮೂಡಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದು.
ಆಯಾಯ ಕಾಲಧರ್ಮವನ್ನು ಅನುಸರಿಸಿ ಸಮಾಜೋದ್ಧಾರದಲ್ಲಿ ನಿರತರಾದವರನ್ನು ನೇತಾರರನ್ನು ಅವರುಗಳ ಹೆಸರನ್ನು ಹೇಳಿಕೊಂಡು ತಿರುಗಾಡುತ್ತಿದ್ದರೆ ಅಭಿವೃದ್ಧಿ ಸಾಧ್ಯವೇ ಇಲ್ಲ. ಇಂದಿನ ಸಮಸ್ಯೆಗಳೇ ಬೇರೆ ಸ್ವರೂಪದವುಗಳು. ಆದ್ದರಿಂದ ಯಾವುದೇ ನಾಯಕ, ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಲೋಹಿಯಾ ಸೇರಿದಂತೆ ಯಾವುದೇ ನಾಯಕರು ಇಂದು ರಿಲವೆಂಟ್ ಆಗಿ ಉಳಿದಿಲ್ಲ.
ವೈಚಾರಿಕತೆ ಎಂಬುದನ್ನು ಕೇವಲ ಧಾರ್ಮಿಕವಾದ, ಕೋಮುವಾದ ಮತ್ತು ಸಾಹಿತ್ಯ ವಾದದ ಹಿನ್ನೆಲೆಯಲ್ಲಿ ಮಾತ್ರ ಏಕೆ ನೋಡಲಾಗುತ್ತಿದೆ? ವೈಚಾರಿಕತೆಯ ನಿಲುವುಗಳನ್ನು ಆರ್ಥಿಕ ಮತ್ತು ಸಾಮಾಜಿಕ ಆಯಾಮಗಳಿಂದ ಏಕೆ ನೋಡಲಾಗುತ್ತಿಲ್ಲ?
ಮನುಷ್ಯನನ್ನು ಒಟ್ಟು ಪರಿಸರದಿಂದ ಬೇರೆಯಾಗಿಯೇ ನೋಡುತ್ತಿರುವುದರಿಂದ ಆಗುತ್ತಿರುವ ದುರಂತ.







ಯಾವುದೇ ಪುಸ್ತಕ ಓದುವ ಮೊದಲು ಆ ಪುಸ್ತಕದ ಮುನ್ನುಡಿ ಮತ್ತು ಪುಸ್ತಕದ ಬಗೆಗಿನ ವಿಮರ್ಶೆ ಓದಬಾರದು ಎನ್ನುವುದು ನನ್ನ ನ೦ಬಿಕೆ. ಆ ಪುಸ್ತಕವನ್ನು ಮೊದಲು ನಮ್ಮ ನೆಲೆಯಲ್ಲಿ ನಮ್ಮದಾಗಿಸಿಕೊ೦ಡು ಆಮೇಲೆ ಅದರ ಬೇರೆ ಬೇರೆ ಮಜಲುಗಳನ್ನು ಅರ್ಥ ಮಾಡಿಕೊಳ್ಳಬಹುದು..
Yes u r right.
ತೇಜಸ್ವಿ ಅವರನ್ನು ಒಂದೇ ಲೇಖನದಲ್ಲಿ ಹಿಡಿದಿಡುವುದು ಕಷ್ಟ. ಆದರೆ ಈ ಲೇಖನ ತೇಜಸ್ವಿ ಅವರನ್ನು ಸಾಧ್ಯವಾದ ಮಟ್ಟಿಗೆ ಹಿಡಿದಿಡುವ ಪ್ರಯತ್ನ ತುಂಬ ಹಿಡಿಸಿತು.
nija tejasvi namma nadi na shesta lekhaka