ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇನ್ನಷ್ಟು ತೇಜಸ್ವಿ: ಕುಬಿಯದೊಂದು ದುರಂತ ಕಥೆ

ಇನ್ನಷ್ಟು ತೇಜಸ್ವಿ 3

ಡಾ ಬಿ.ಆರ್. ಸತ್ಯನಾರಾಯಣ

ವ್ಯಕ್ತಿಪೂಜೆಯ ಪ್ರಬಲ ವಿರೋಧಿ

ನಮ್ಮ ನಿಮ್ಮಂತೆಯೇ ಉಸಿರಾಡಿಕೊಂಡು ಅನ್ನ ನೀರು ಸೇವಿಸುತ್ತಾ, ನಮ್ಮಂತೆಯೇ ಮಲಮೂತ್ರಗಳನ್ನು ವಿಸರ್ಜಿಸುತ್ತಿರುವ ಅಥವಾ ಹಾಗೆ ಇದ್ದ ಒಬ್ಬ ಸಹಜೀವಿಯನ್ನು ದೈವತ್ವಕ್ಕೇರಿಸಿ ಕಲ್ಪಿಸಿಕೊಳ್ಳುವುದು ತೇಜಸ್ವಿಗೆ ಆಗಿಬರದ ವಿಚಾರ. ಸ್ವತಃ ತಮ್ಮ ತಂದೆಯವರನ್ನು ಕೆಲವರು ದೈವತ್ವಕ್ಕೇರಿಸಿದ್ದನ್ನು ಅವರು ನೋಡಿ ವಿರೋಧಿಸಿದ್ದಾರೆ, ನಕ್ಕು ಸುಮ್ಮನಾಗಿದ್ದಾರೆ. ಒಂದು ಹಂತದಲ್ಲಿ ತಮಗೆ ಮಾದರಿಯೆನಿಸಿದ್ದ ಕಾರಂತರನ್ನೂ ಅವರು ಒಬ್ಬ ಕ್ರಿಯಾಶೀಲ ವ್ಯಕ್ತಿಯಾಗಿ ಕಂಡಿದ್ದಾರೆಯೇ ಹೊರತು ದೇವರಂತಲ್ಲ. ಆದ್ದರಿಂದಲೇ ಕುವೆಂಪು ಕಾರಂತರಿಬ್ಬರ ಜೊತೆಯಲ್ಲೂ ತೇಜಸ್ವಿಗೆ ವಿಚಾರಬೇಧಗಳಿದ್ದವು. ಅವುಗಳನ್ನು ಯಾವ ಮುಲಾಜು ಇಲ್ಲದೆ ಹೊರಗೆಡವಿದ್ದಾರೆ. ಮುಸ್ಲಿಂ ಮೂಲಭೂತವಾದ ಕಾರಂತರಂಥವರನ್ನೂ ಸನಾತನ ಧರ್ಮ ಪ್ರತಿಪಾದನೆಗೆ ಇಳಿಯುವಂತೆ ಮಾಡಿತೆನ್ನುವುದು ನಮ್ಮಂಥವರ ಆತ್ಮವಿಶ್ವಾಸವನ್ನೇ ಕಲಕುತ್ತದೆ ಎಂಬ ಅಭಿಪ್ರಾಯವನ್ನು ಸ್ವತಃ ತೇಜಸ್ವಿಯವರೇ ವ್ಯಕ್ತಪಡಿಸಿದ್ದಾರೆ.

ಕುವೆಂಪು ಅವರ ಜೊತೆಯಲ್ಲಿನ ಭಿನ್ನತೆಗಳನ್ನು ಅಣ್ಣನ ನೆನಪು ಕೃತಿಯಲ್ಲಿ ಅಲ್ಲಲ್ಲಿ ಕಾಣಬಹುದು. ತಾರಿಣಿಯವರ ಮದುವೆ, ಮಂತ್ರಮಾಂಗಲ್ಯದಂತೆ ನಡೆದರೂ ಬಂದವರಿಗೆ ಊಟ ಹಾಕಿದ್ದನ್ನು ತೇಜಸ್ವಿ ವಿರೋಧಿಸಿ, ಊಟ ಮಾಡದೆ ಇದ್ದುದನ್ನು ಶಾಮಣ್ಣ ತಮ್ಮ ಆತ್ಮಕತೆಯಲ್ಲಿ ನಿರೂಪಿಸಿದ್ದಾರೆ. ಮಲೆನಾಡು ಒಕ್ಕಲಿಗರಲ್ಲಿ ಗೌರವಯುತವಾದ ಸ್ಥಾನ ಹೊಂದಿದ್ದ ಹಾಗೂ ಮುಖ್ಯಮಂತ್ರಿಯಾಗಿದ್ದ ಕಡಿದಾಳ ಮಂಜಪ್ಪಗೌಡರ ಮನೆಯ ಹೆಣ್ಣುಮಕ್ಕಳ ಮದುವೆಯ ಸಂದರ್ಭದಲ್ಲೂ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಇವೆಲ್ಲವೂ ತೇಜಸ್ವಿಯವರು ವ್ಯಕ್ತಿಪಜೆಗೆ ವಿರೋಧವಾಗಿದ್ದರೆಂಬುದನ್ನು ತೋರಿಸುತ್ತವೆ. ಅವರೇ ಒಂದು ಕಡೆ ನಾನು ವಾಸ್ತವವಾಗಿ ಪರಿಸರ ವಿಜ್ಞಾನಿಯೂ ಅಲ್ಲ; ವೈಚಾರಿಕ ಚಿಂತಕನೂ ಅಲ್ಲ; ಅಥವಾ ಪಾಂಡಿತ್ಯ ಜ್ಞಾನಗಳ ಆರಾಧಕನೂ ಅಲ್ಲ. ನನಗೆ ಇಷ್ಟಕಂಡ ರೀತಿಯಲ್ಲಿ ಅನ್ನತಿನ್ನುವ ನರಮನುಷ್ಯನಾಗಿ ಮಾತ್ರ ಬದುಕುತ್ತಾ ಇರುವವನು ಎಂದು ಹೇಳಿರುವುದನ್ನು ಗಮನಿಸಬಹುದಾಗಿದೆ.

ವ್ಯಕ್ತಿಪೂಜೆ – ವ್ಯಕ್ತಿತ್ವದ ಸಮಾಧಿ: ಕುಬಿಯದೊಂದು ದುರಂತ ಕಥೆ

ಕುಬಿ ಮತ್ತು ಇಯಾಲ ಕಥೆಯ ಕುಬಿ ಈ ಬಗೆಯ ದುರಂತಕ್ಕೆ ಒಂದು ಉತ್ತಮ ಉದಾಹರಣೆ. ಕುಬಿ ಡಾಕ್ಟರಾಗಿ ಬಂದ ಹೊಸತರಲ್ಲಿ ದ್ವೇಷಿಸುತ್ತಿದ್ದ ರಾಮರಾವ್, ತನ್ನನ್ನು ಗುಣಪಡಿಸಿದರು ಎಂಬ ಕಾರಣಕ್ಕೆ, ಅವರನ್ನು ದೈವತ್ವಕ್ಕೆ ಏರಿಸುತ್ತಾನೆ. ಕುಬಿಯೇ ಹೇಳುವಂತೆ ಕೇವಲ ತನ್ನ ಕರ್ತವ್ಯ ಮತ್ತು ಸಮಯ ಪ್ರಜ್ಞೆಯಿಂದ ರಾಮರಾವ್ನನ್ನು ಗುಣಪಡಿಸಿರುತ್ತಾನೆ. ಆದರೆ ರಾಮರಾವ್ ತನ್ನ ಪ್ರತಿ ಹೆಜ್ಜೆಯಲ್ಲೂ ಕುಬಿಯನ್ನು ದೈವತ್ವಕ್ಕೇರಿಸಲು ಪ್ರಯತ್ನಿಸಿ, ಅದರಲ್ಲಿ ಯಶಸ್ವಿಯೂ ಆಗುತ್ತಾನೆ.

 

ಕುಬಿಯ ಕೈಯಲ್ಲಿ ಔಷಧಿಯನ್ನು ಮುಟ್ಟಿಸಿಕೊಂಡು ಬರಬೇಕೆಂದು ತನ್ನ ಅಮ್ಮನಿಂದ ಆಜ್ಞಪ್ತಳಾಗಿ ಬಂದಿದ್ದ ಇಯಾಲ, ಕುಬಿ ಅದನ್ನು ನಿರಾಕರಿಸಿದಾಗ ನಿರಾಶೆಗೊಳ್ಳುತ್ತಾಳೆ. ಅವಳ ನಿರಾಶೆಗೆ ಕುಬಿಯ ವರ್ತನೆಗಿಂತ, ತನ್ನ ತಾಯಿ ಬಯ್ಯಬಹುದೆಂಬ ಭಿತಿಯೇ ಹೆಚ್ಚು ಕಾರಣವಾಗಿರುತ್ತದೆ. ಆದರೆ ಮಧ್ಯ ಪ್ರವೇಶಿಸಿದ ರಾಮರಾಯನ ಕುತರ್ಕದಿಂದ ಔಷಧಿಯನ್ನು ಮುಟ್ಟಿಕೊಡುತ್ತಾನೆ. ಆಗ ಕುಬಿಗೆ ತಾನೇ ನಂಬದಿರುವ, ತನಗೆ ಶ್ರದ್ಧೆ ಇಲ್ಲದಿರುವ ಒಂದನ್ನು ಮಾಡಲು ಅವನಿಗೆ ವಿಪರೀತ ಮುಜುಗರವಾಯ್ತು.

ದುಃಖವೂ ಆಯ್ತು. ಆದರೆ ರಾಮರಾಯ ಇದನ್ನೊಂದು ಪೂಜಾ ಕರ್ಮವೋ ಎನ್ನುವಂತೆ ಭಕ್ತಿ ಶ್ರದ್ಧೆಗಳಿಂದ ವೀಕ್ಷಿಸುತ್ತಿದ್ದ. ರಾಮರಾಯನ ಈ ಬಗೆಯ ಸ್ವಾಮಿ ನಿಷ್ಟೆಯನ್ನು ಕುಬಿ ಪ್ರತಿ ಹಜ್ಜೆಯಲ್ಲೂ ವಿರೋಧಿಸುತ್ತಾನೆ. ಆದರೆ ರಾಮರಾಯ ನೀವು ಏನು ಬೇಕಾದರೂ ಹೇಳಿ ಸಾರ್, ನನಗೆ ಸತ್ಯ ಏನೆಂದು ಗೊತ್ತಿರುವಾಗ ಏಕೆ ನನಗೆ ಚಿಂತೆ ಎಂದು ಆಧ್ಯಾತ್ಮವಾದಿಯಾಗುತ್ತಾನೆ. ಕೊನೆಗೆ ಮಹಾಸತ್ಯನಿಷ್ಠನಾದ ಕುಬಿ ಡಾಕ್ಟರ್ ಎಂದರೆ ದೈಯ್ಯ ಪ್ರೇತ ಪಿಶಾಚಿಗಳೂ ತಗ್ಗಿ ನಡೆಯುತ್ತವೆ! ಎಂಬ ಸಾರ್ವತ್ರಿಕ ಅಭಿಪ್ರಾಯ ರೂಪಗೊಳ್ಳುತ್ತದೆ.

ರಾಮರಾಯನಂತವರನ್ನು ನೋಡಿದಾಗ ತೇಜಸ್ವಿಗೆ ಮೂಡುವ ಜ್ಞಾನ ತನ್ನೊಡನೆ ಅಜ್ಞಾನವನ್ನೂ ಒಯ್ಯುವುದು ಅದರ ಆನುವಂಶಿಕ ಗುಣವೋ ಅಥವಾ ಇದೊಂದು ಚಾರಿತ್ರಿಕವಾದ ವ್ಯಂಗ್ಯವೋ ಯಾರು ಬಲ್ಲರು! ಎಂಬ ಉದ್ಘಾರ ಹಾಗೂ ಕಥೆಯ ಕೊನೆಗೆ ಬರುವ ಕುಬಿ ತಾನು ಯಾವುದನ್ನು ನಂಬದೆ ವಿರೋಧಿಸಿ ತಿರಸ್ಕರಿಸಿದ್ದನೋ ಅದನ್ನೇ ಗೂಢವಾಗಿ ಇನ್ನೊಂದು ಕಡೆಯಿಂದ ಪ್ರತಿಪಾದಿಸುತ್ತಲೂ ಬಂದುದ್ದು ಕಾಲಪುರುಷನ ಅಪಹಾಸ್ಯ. ಇತಿಹಾಸದ ವ್ಯಂಗ್ಯ ಎಂಬ ಮಾತುಗಳು ಅರ್ಥಪೂರ್ಣವೆನಿಸುತ್ತವೆ. ಬಹುಶಃ ಬುದ್ಧ, ಮಹಾವೀರ, ಬಸವಣ್ಣ, ಅಂಬೇಡ್ಕರ್ ಇವರೂ ಕೂಡಾ ಇದಕ್ಕೆ ಹೊರತಲ್ಲ.

‍ಲೇಖಕರು G

21 July, 2011

1 Comment

  1. santhosh

    super likes….interpretation of satyanarayana is too gud….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading