ಕ್ರಿಕೇಟು ಮತ್ತು ಬೆಲೆ ಕಟ್ಟಲಾಗದ ಬಾಲ್ಯದ ಹೈಲೈಟು!
– ಗುರುಪ್ರಸಾದ ಕುರ್ತಕೋಟಿ, ಬೆಂಗಳೂರು
ತದೇಕ ಚಿತ್ತರಾಗಿ, ಕಣ್ಣು ಮಿಟುಕಿಸಿದರೆ ಏನಾದರೂ ಅನಾಹುತ ವಾದೀತು ಎಂದು ಟೀವೀ ಎನ್ನುವ ಮಾಯಾ ಡಬ್ಬ ದ ಮುಂದೆ ಇಹಲೋಕ ವನ್ನೇ ಮರೆತು ಕುಳಿತ ಜನರೆದುರು ನಾನು ಹಾಗೆ ಕೇಳಬಾರದಿತ್ತು! IPL ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದವರನ್ನು “ಇದು ವರ್ಲ್ಡ್ ಕಪ್ಪಾ?” ಅಂತ ಕೇಳಿ ನೋಡುಗರ ಧ್ಯಾನ ಭಗ್ನ ಮಾಡಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದೆ!
ಅಲ್ಲವೇ ಮತ್ತೆ? ನಮ್ಮ ದೇಶದಲ್ಲಿ ಕ್ರಿಕೆಟ್ ಅನ್ನೋದು ಚಿಕ್ಕ ಮಕ್ಕಳಿಗೂ ಕೂಡ ಗೊತ್ತು. ಆಗ IPL ಪಂದ್ಯಗಳು ನಡೆಯುತ್ತಿರುವುದೂ ಎಲ್ಲರಿಗೂ ಗೊತ್ತಿತ್ತು. ಅಂಥದರಲ್ಲಿ ನಾನು ಹಾಗೆ ಕೇಳಿ ದೇಶದ ಮರ್ಯಾದೆ ತಗೆಯಬಹುದೇ? ಅದೇಕೋ ಕಾಣೆ, ಕ್ರಿಕೆಟ್ ಗೂ ನನಗೂ ಅಷ್ಟಕ್ಕಷ್ಟೇ. ಆದರೆ ಮೊದಲಿನಿಂದಲೂ ಹೀಗೆ ಅಂತ ಹೇಳಿದರೆ ತಪ್ಪಾಗುತ್ತೆ. ನಾನೂ ಕೂಡ ಒಂದಾನೊಂದು ಕಾಲಕ್ಕೆ ಸಿಕ್ಕಾಪಟ್ಟೆ ಕ್ರಿಕೆಟ್ ಹುಚ್ಚನಾಗಿದ್ದೆ. ಕ್ರಿಕೆಟ್ ನೋಡುತ್ತಿದ್ದೆ, ಆಡುತ್ತಿದ್ದೆ, ಉಸಿರಾಡುತ್ತಿದ್ದೆ ಕೂಡ! ಅದ್ಯಾಕೆ ಈಗ ಇಷ್ಟೊಂದು ನಿರ್ಲಿಪ್ತನಾದೆ? ಅದಕ್ಕೆ ಕಾರಣಗಳಿಲ್ಲದಿಲ್ಲ. ಅದನ್ನು ಹೇಳುವುದಕ್ಕೆ ಮೊದಲು ಸ್ವಲ್ಪ ನನ್ನ ಬಾಲ್ಯದ ಹೈಲೈಟ್ಸು ನೋಡೋಣ…
ಚಿಕ್ಕವನಿದ್ದಾಗ ಎಲ್ಲರದೂ ಇರುವಂತೆ ನನ್ನದೂ ಒಂದು ಗೆಳೆಯರ ಬಳಗವಿತ್ತು. ಆಗೆಲ್ಲ ಕಂಪ್ಯೂಟರ್ ಇರಲಿಲ್ಲವಾದ್ದರಿಂದ ನಮ್ಮ ಆಟಗಳೆಲ್ಲ ಮನೆಯ ಹೊರಗೇ ಇರುತ್ತಿದ್ದವು. ಗೋಲಿ ಗುಂಡಾ, ಛಾಪಾ, ಸರಗೋಲು, ಚಿನ್ನಿ ದಾಂಡು ಹೀಗೆ ಹಲವಾರು ಆಟಗಳು. ಆದರೆ ಇವೆಲ್ಲ ಆಟಗಳ ರಾಜ ಕ್ರಿಕೆಟ್! ಬ್ಯಾಟು, ಬಾಲು, ಮೂರು ಸ್ಟಂಪು, ಜೊತೆಗೊಂದಿಷ್ಟು ಹುಡುಗರು (ಹೌದು ನಮ್ಮ ಕಾಲಕ್ಕೆ ಹುಡುಗಿಯರಂತೂ ಕ್ರಿಕೆಟ್ ಆಡಲು ನಾವು ಕರೆದರೂ ಬರುತ್ತಿರಲಿಲ್ಲ, ಈಗ ಗೊತ್ತಿಲ್ಲ!). ಈ ಆಟ ಇಷ್ಟೊಂದು ಪಾಪ್ಯುಲರ್ ಆಗುವುದಕ್ಕೆ ಇರುವ ಕಾರಣಗಳಲ್ಲಿ ಅದರ ಸರಳತೆಯು ಒಂದು. ಅದೂ ಅಲ್ಲದೆ ತುಂಬಾ ಅಗ್ಗದ ಆಟ. ಬ್ಯಾಟು ಇಲ್ಲದಿದ್ದರೆ, ಒಂದು ಕಟ್ಟಿಗೆಯ ಫಳಿಯಾದರೂ ಆದೀತು. ಸ್ಟಂಪ್ ಇಲ್ಲವೆಂದರೆ ಗೋಡೆಗೆ ಮೂರು ಗೆರೆ ಎಳೆದರಾಯ್ತು. ನಾವೆಲ್ಲಾ ಆಗ ಚೆಂಡನ್ನು ದುಡ್ಡು ಕೊಟ್ಟು ತಂದ ನೆನಪೇ ನನಗಿಲ್ಲ. ಚೆಂಡನ್ನು ನಾವೇ ತಯಾರಿಸುತ್ತಿದ್ದೆವು. ಒಂದು ಬಗೆಯ ಗಿಡದ ಬೀಜಗಳನ್ನು ಸಂಗ್ರಹಿಸಿ ಅದನ್ನು ಕುಟ್ಟಿ, ಕಟ್ಟಿಗೆಯ ಪುಡಿಯೊಂದಿಗೆ ಸೇರಿಸಿ ಉಂಡಿ ಕಟ್ಟಿ, ಬಿಸಿಲಲ್ಲಿ ಎರಡರಿಂದ ಮೂರು ಗಂಟೆ ಕಾಯಿಸಿದರಾಯ್ತು ಕಾರ್ಕ್ ಬಾಲು ರೆಡಿ! ನಮ್ಮ ಆಟ ಶುರು. ಗ್ರೌಂಡು ಗಳಿಗೆ ನಮ್ಮ ಊರಿನಲ್ಲಿ ಕೊರತೆ ಇರಲಿಲ್ಲ. ಈಗ ಎಲ್ಲ ಗ್ರೌಂಡು ಗಳಲ್ಲಿ ಕಟ್ಟಡಗಳು ಎದ್ದು ನಿಂತಿವೆ. ಪಾಪ ಈಗಿನ ಮಕ್ಕಳು ಆಡಬೇಕು ಎಂದರೂ ಆಡಲು ಅವಕಾಶಗಳೇ ಇಲ್ಲ. ಅಂಥದೇ ಒಂದು ಗ್ರೌಂಡಿ ನಲ್ಲಿ ನಮ್ಮ ಮ್ಯಾಚ್ ನಡೆಯುತ್ತಿತ್ತು. ಇಬ್ಬರು ಹಿರೆ ಉದ್ರಿಗಳು, ಅಂದರೆ captain ಗಳು. ಅವರು ದಯಪಾಲಿಸಿದರೆ ಬಾಲಿಂಗ್, ಇಲ್ಲದಿದ್ದರೆ ಬ್ಯಾಟಿಂಗ್ ಅಂತೂ ಗ್ಯಾರಂಟಿ. ವಣಗಿರುವ ಗಂಟಲು, ಬೆವರಿಗೆ ಒದ್ದೆಯಾದ ಬಟ್ಟೆಗಳೊಂದಿಗೆ, ಬಯಲು ಸೀಮೆಯ ಉರಿಬಿಸಿಲಿನಲ್ಲಿ ನಮ್ಮ ಆಟ ಸಾಗುತ್ತಿತ್ತು.
ಯುದ್ಧ ವಿರಾಮದಂತೆ ಈ ನಮ್ಮ ಕ್ರಿಕೇಟ್ ಆಟಕ್ಕೆ ಆಗಾಗ ಸಂಪೂರ್ಣ ವಿರಾಮ ವಿರುತ್ತಿತ್ತು. ಅದು ಯಾವುದಾದರೂ ಅಂತರ್ ರಾಷ್ಟ್ರೀಯ ಕ್ರಿಕೆಟ್ ಮ್ಯಾಚ್ ಶುರುವಾದಾಗ. ಟೀವಿ ಹಾವಳಿ ಆಗ ತಾನೇ ಶುರುವಾಗಿತ್ತು. ಆದರೆ ವರ್ಷಗಳುರುಳಿದಂತೆ “ಟೀವಿ” ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ, ಅವಿಭಾಜ್ಯ ಅಂಗವಾಗಿ ಹೋಯ್ತು. ಆಗಿನ್ನೂ ನಮ್ಮ ಮನೆಯಲ್ಲಿ ಟೀವಿ ಇರಲಿಲ್ಲ. ಯಾಕಂದರೆ ಅದೊಂದು ಅವಶ್ಯಕತೆಯಾಗಿರಲಿಲ್ಲ. ನಮ್ಮ ಮನೆಯ ಸುತ್ತ ಮುತ್ತ ಎರಡೋ – ಮೂರೋ ಮನೆಗಳಲ್ಲಿ ಮಾತ್ರ ಟೀವಿ ಗಳಿದ್ದವು. ಟೀವಿ ಅಪರೂಪದ ವಸ್ತುವಾಗಿದ್ದರಿಂದ, ಆ ಮನೆಯ ಎಲ್ಲರಿಗೂ ಒಂದು ಬಗೆಯ “ಠೀವಿ”ಯೂ ಇರುತ್ತಿತ್ತು! ನಾವು ಕ್ರಿಕೇಟ್ ನೋಡಬೇಕೆಂದರೆ ಇಂಥದೇ ಒಂದು ಮನೆಯಲ್ಲಿ ಠಿಕಾಣಿ ಹೂಡುತ್ತಿದ್ದೆವು. ಯಾರ ಮನೆಯಲ್ಲಿ ಅವತ್ತು ಶೋ ಇದೆ ಅನ್ನುವುದು, ಅವರ ಮನೆ ಮುಂದೆ ಸೇರಿದ ಜನ ಜಂಗುಳಿಯಿಂದ ಅರ್ಥವಾಗುತ್ತಿತ್ತು. ಅವತ್ತು ಶೋ ಇಡುವುದು ಬಿಡುವುದು ಮನೆಯ ಯಜಮಾನನ ಮೂಡ್ ಮೇಲೆ ನಿಶ್ಚಿತ ವಾಗುತ್ತಿತ್ತು. ಅಲ್ಲವೆ ಮತ್ತೆ? ಅವೆಲ್ಲ ಮಧ್ಯಮ ವರ್ಗದ ಮನೆಗಳು. ಒಂದು ಪಡಸಾಲೆ, ಒಂದು ಕೋಣೆ, ಅಡುಗೆ ಮನೆ ಹಾಗು ಬಚ್ಚಲು ಮನೆ. ಪಡಸಾಲೆಯಲ್ಲಿ ಟೀವಿ ರಾರಾಜಿಸುತ್ತಿತ್ತು. ಅಂಥದರಲ್ಲಿ ಓಣಿಯ ಮಂದಿಯೆಲ್ಲ ಕ್ರಿಕೇಟ್ ನೋಡಲು ಮನೆಗೆ ಬಂದರೆ, ಮನೆ ಮಂದಿ ಏನು ಮಾಡಬೇಕು? ಹೀಗಾಗಿ ಕೆಲವೊಂದು ಸರ್ತಿ ತುಂಬಾ ಜನ ಸೇರಿದ್ದರೆ ಮನೆಯ ಮಂದಿ ಮುಖ ಗಂಟು ಹಾಕಿರುತ್ತಿದ್ದರು. ಆದರೆ ನಾವಂತೂ ಅದಕ್ಕೆಲ್ಲ ತಲೆ ಕೆಡೆಸಿಕೊಳ್ಳುವ ಗೋಜಿಗೆ ಹೋಗುತ್ತಿರಲಿಲ್ಲ. ನಾವು ಹೋಗುತ್ತಿದ್ದುದು ಟೀವಿ ನೋಡಲು, ಅವರ ಮುಖ ನೋಡಲು ಯಾರಿಗಿತ್ತು ಪುರುಸೊತ್ತು!
ಇನ್ನೂ ಕೆಲವು ಸರ್ತಿ ಬಾಗಿಲು ಮುಚ್ಚಿ ಬಿಡುತ್ತಿದ್ದರು. ನಾವೆಲ್ಲ ಬಾಲ ಕ್ರಿಕೇಟ್ ಪ್ರೇಮಿಗಳು, ವಲಸೆ ಹಕ್ಕಿಗಳ ಥರ ಇನ್ನೊಂದು “ಟೀವಿ” ಮನೆ ಹುಡುಕಿ ಓಡುತ್ತಿದ್ದೆವು. ಎಲ್ಲೊ ಒಂದು ಕಡೆ ದರ್ಶನ ಭಾಗ್ಯ ದೊರೆಯುತ್ತಿತ್ತು. ಇಲ್ಲದಿದ್ದರೆ ನಿರಾಸೆಯೊಂದಿಗೆ ನಮ್ಮ ಬ್ಯಾಟು-ಬಾಲುಗಳೊಂದಿಗೆ ನಮ್ಮ ಆಟ ಮುಂದುವರಿಯುತ್ತಿತ್ತು. ದರ್ಶನ ಭಾಗ್ಯ ದೊರೆತರದೇ ಪುಣ್ಯ, ಅದೂ ಕೂತುಕೊಂಡು ನೋಡುವ ಭಾಗ್ಯ ದೊರೆತರೆ ಸ್ವರ್ಗ! ಬಾಯಿ ಬಿಟ್ಟುಕೊಂಡು ಒಂದೊಂದು ಬಾಲ್ ತಪ್ಪಿಸಿಕೊಳ್ಳದಂತೆ ನೋಡುತ್ತಿದ್ದೆವು. ಭಾರತದ ಆಟಗಾರ ಬೌಂಡರಿ ಅಥವಾ ಸಿಕ್ಸರ್ ಹೊಡೆದರೆ ನಮ್ಮ ಕೂಗು, ಶಿಳ್ಳೆಗಳು, ಚಪ್ಪಾಳೆಗಳು ಮುಗಿಲು ಮುಟ್ಟುತ್ತಿದ್ದವು. ಹೀಗೆ ಕಣ್ಣು ಮಿಟುಕಿಸದಂತೆ ನೋಡುತ್ತಿರುವಾಗಲೇ, ಇನ್ನೇನು ಆಟದ ಕೊನೆ ಹಂತ, ಒಂದು ಓವರ್ ಗೆ ಹನ್ನೆರಡು ರನ್ನು, ನಾವೆಲ್ಲ ಉಸಿರು ಬಿಗಿ ಹಿಡಿದಿರುವಾಗಲೇ… ಟಸ್ಸ್ ಅಂತ ಕರೆಂಟು ಹೋಗುತ್ತಿತ್ತು! ನಾವು ನಿಟ್ಟುಸಿರು ಬಿಡುತ್ತಿದ್ದೆವು. ನಾವೆಲ್ಲ ಭಾರವಾದ ಹ್ರದಯದೊಂದಿಗೆ ಟೀವಿ ಮನೆಯಿಂದ ಹೊರಬರುತ್ತಿದ್ದೆವು. ಆದರೆ ಟೀವಿ ಮನೆಯ ಯಜಮಾನರು ನಿರಾಳವಾಗುತ್ತಿದ್ದರು.
ಹೀಗಿರುವಾಗ ಒಂದು ದಿನ ನನ್ನ ಅಪ್ಪ ಅಮ್ಮ, ನನ್ನ ಕಷ್ಟ ನೋಡಲಾಗದೇ ಮನೆಗೊಂದು ಕಲರ್ ಟೀವಿ ಕೊಂಡು ತಂದರು. ನನಗೆ ಸ್ವರ್ಗಕ್ಕೆ ಮೂರೆ ಗೇಣು! ಇನ್ನು ಬೇರೆಯವರ ಮನೆಗೆ ಹೋಗಿ ಕಾಯುವ ಕಷ್ಟ ಇಲ್ಲ. ನನಗೂ ತಲೆಯ ಮೇಲೆ ಸಣ್ಣಗೆ ಕೋಡು ಮೂಡತೊಡಗಿದವು. ಕ್ರಿಕೇಟ್ ಮ್ಯಾಚ್ ಇದ್ದಾಗ ನಮ್ಮ ಮನೆಗೆ ದಂಡು ಬರೋಕೆ ಶುರುವಾಯ್ತು. ಮೊದ ಮೊದಲು ಇದು ಖುಷಿಯ ಸಂಗತಿಯೇ ಆಗಿದ್ದರೂ ದಿನ ಕಳೆದಂತೆ ಕಿರಿ ಕಿರಿ ಅನ್ನಿಸತೊಡಗಿತು. ಬೇರೆಯವರ ತೊಂದರೆ ಈಗ ನನಗೆ ಅರ್ಥವಾಗಿತ್ತು. ಕ್ರಿಕೆಟ್ ಜೊತೆಗೆ ದೂರದರ್ಶನದಲ್ಲಿ ಆಗ ಮಹಾಭಾರತ ದಂತ ಮೆಗಾ ಸೀರಿಯಲ್ಲು ಶುರುವಾಯ್ತು ನೋಡಿ, ಮನೆಗೆ ಬರುವವರ ಸಂಖೆಯೂ ಜಾಸ್ತಿಯಾಯ್ತು. ಅವ್ರೆಲ್ಲರೂ ಕೌರವರ ಥರ ಕಾಣತೊಡಗಿದರು. ಅದೊಂದು ಧರ್ಮ ಸಂಕಟ.
ಇಂತಹ ಒಂದು ಸಂದರ್ಭದಲ್ಲಿ, ನಮ್ಮ ಮನೆಗೆ ಬರುವ ಪ್ರೆಕ್ಷಕವೃಂದದಲ್ಲಿ ರತ್ನದಂತೆ ಕಂಗೊಳಿಸುತ್ತಿದ್ದವನೊಬ್ಬ ಇದ್ದ. ಯಾಕೆ ರತ್ನದಂತೆ ನಾಲ್ಕು ಜನರ ನಡುವೆ ಎದ್ದು ಕಾಣುತ್ತಿದ್ದ ಅಂದರೆ, ಅವನ ಮೈ ಬಣ್ಣವೇ ಹಾಗಿತ್ತು! ಕಡುಗಪ್ಪು! ಅವನ ಹೆಸರು ಹಾಲಪ್ಪ ಅಂತ ಅಂದ್ಕೊಳ್ಳೊಣ. ಹೆಸರಿನಲ್ಲೇನಿದೆ ಅಲ್ಲವೆ? ಹೆಸರಿಗೂ ಬಣ್ಣಕ್ಕೂ ಎಲ್ಲಿಯ ಸಂಬಂಧ! ಇರಲಿ. ಟೀವಿ ಯಲ್ಲಿ ಕ್ರಿಕೇಟ್ ಇದ್ದಾಗಲೆಲ್ಲ ಅವನು ಹಾಜರು. ಅಪರೂಪಕ್ಕೆ ಒಂದೊಂದು ಸಲ ಗೈರು ಇರುತ್ತಿದ್ದ. ಅವನು ಬಂದಿಲ್ಲ ಅಂದ್ರೆ ನಮಗೆಲ್ಲ ಖುಷಿ, ಯಾಕಂದ್ರೆ ಅವತ್ತು ಭಾರತ ಗೆಲ್ಲೋದು ಖಾತ್ರಿ. ಹೀಗಿತ್ತು ಅವನ ಇನ್ ಫ಼್ಲುಯೆನ್ಸು! ಇಂಟರ್ ನ್ಯಾಶನಲ್ ಲೆವಲ್ಲು. ಅವನಿಗೆ ಕ್ರಿಕೇಟು ಅಂದ್ರೆ ಅಶ್ಟಕ್ಕಶ್ಟೆ. ಆದರೆ ಅವನು ಅಲ್ಲಿ ಬರುತ್ತಿದ್ದುದು ಸುಮ್ಮನೆ ಟೈಮ್ ಪಾಸಿಗೆ. ನಾವೆಲ್ಲ ಉಸಿರು ಬಿಗಿ ಹಿಡಿದು, “ಅರ್ಜೆಂಟ್” ಬಂದಿದ್ದರೂ ಹೋಗದೇ, ಒಂದೊಂದು ಬಾಲು ಹಾಗೂ ರನ್ನು ಕೂಡ ನಮ್ಮದೇ ಜವಾಬ್ದಾರಿ ಎಂಬಂತೆ ಟೀವಿಯನ್ನೆ ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದರೆ ಆತ ನಮ್ಮನ್ನೆ ನೋಡುತ್ತ ನಗುತ್ತ ಕೂತಿರುತ್ತಿದ್ದ. ಅವನಿಗದು ಒಂಥರ ತಮಾಷೆ. ಬರೀ ಅಡ್ಡ ಮಾತುಗಳನ್ನಾಡುತ್ತಿದ್ದ, ಭಾರತದ ಬ್ಯಾಟಿಂಗು ಇದ್ರೆ “ಈಗೊಂದು ವಿಕೇಟು ಬೀಳೋದು ಗ್ಯಾರಂಟೀ” ಅಂತಿದ್ದ. ನಮಗೆಷ್ಟು ಕ್ವಾಪಾ ಬರ್ಬ್ಯಾಡಾ? ಬೈಬೇಕು ಅಂದ್ರೆ ಅವನು ನಮಗಿಂತ ತುಂಬಾ ದೊಡ್ಡವನು. ಹಾಳಾಗಿ ಹೋಗ್ಲಿ ಅಂತ ಕೋಪ ನುಂಗಿಕೊಳ್ಳುತ್ತಿದ್ದೆವು. ಬರ್ತಾ ಬರ್ತಾ ಇಂತಹ ಅಧಿಕ ಪ್ರಸಂಗಿ ಹಾಲಪ್ಪನನ್ನೂ, ಅವನು ಮಾಡುವ ಕೀಟಲೆಗಳನ್ನೂ ಸಹಿಸುವುದು ಅಸಾಧ್ಯವೆನಿಸತೊಡಗಿತು. ಭಾರತ ತಂಡ ಸೋತರೆ ನಮಗೆ ಯಾರನ್ನೋ ಕಳಕೊಂಡಷ್ಟು ಸಂಕಟವಾಗುತ್ತಿತ್ತು, ನಮ್ಮ ಮನೆಯಲ್ಲಿ ನೆರೆದ ಪ್ರಜೆಗಳ ಮುಖದಲ್ಲಿ ಸೂತಕದ ಛಾಯೆ ಇರುತ್ತಿತ್ತು. ಆದರೆ ಹಾಲಪ್ಪ ಮಾತ್ರ ಅರಾಮಾಗಿ ನಗು ನಗುತಾ ನಲಿಯುತ್ತಿದ್ದ! ಅವನನ್ನು ನೊಡಿ ನಮಗೆ ಇನ್ನೂ ಕೋಪ ಬರುತ್ತಿತ್ತು.
ಆದರೆ ದಿನ ಕಳೆದಂತೆ ಹಾಲಪ್ಪನನ್ನು ನೋಡಿ ಒಂದು ಮಾತ್ರ ಅರ್ಥವಾಗತೊಡಗಿತ್ತು. ಅವನು ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಕ್ರಿಕೇಟ್ ನೋಡುತ್ತಿದ್ದ, ನಾವು ಭಾರತ ಗೆಲ್ಲಲೇಬೇಕು, ತೆಂಡುಲ್ಕರ್ ಸೆಂಚುರಿ ಬಾರಿಸಲೇಬೇಕು ಎಂಬ ನಿರೀಕ್ಷೆಯೊಂದಿಗೆ ಆಟವನ್ನು ನೋಡಿ, ಅದು ಘಟಿಸಲಾರದೇ ಹೋದಾಗ ನಿರಾಶರಾಗುತ್ತಿದ್ದೆವು. ಅದಕ್ಕೆ ನಮಗೆ ದುಖಃವಾಗುತ್ತಿತ್ತು. ಯಾವುದೆ ನಿರೀಕ್ಷೆಗಳಿಲ್ಲದ ಹಾಲಪ್ಪ ನಿರ್ಲಿಪ್ತ ಭಾವದೊಂದಿಗೆ, ನಗುನಗುತ್ತ, ಖ್ಯಾಕರಿಸಿ ಉಗಿಯುತ್ತಾ ಜಾಗ ಖಾಲಿ ಮಾಡುತ್ತಿದ್ದ. ಹಾಲಪ್ಪನಿಂದ ನಾನು ನಿಜಕ್ಕೂ ಒಂದು ಪಾಠ ಕಲಿತೆ. ನಿರೀಕ್ಷೆ ಇಟ್ಟುಕೊಳ್ಳದೇ ಕ್ರಿಕೆಟ್ ನೋಡುವುದ ಅಭ್ಯಾಸ ಮಾಡಿಕೊಂಡೆ. ಈಗ ಆರಾಮವಾಗಿದ್ದೇನೆ. ಟೆನ್ಶನ್ ಅಲ್ಲಿ ಕ್ರಿಕೇಟ್ ನೋಡವ್ರನ್ನ ನೋಡಿ ನಗುತ್ತೇನೆ. ಅಂಥವರ ನೋಡಿದಾಗಲೊಮ್ಮೆ ಹಾಲಪ್ಪ ನೆನಪಾಗುತ್ತಾನೆ. ಇದು ಕ್ರಿಕೇಟಿಗಷ್ಟೆ ಸೀಮಿತವಲ್ಲ ಜೀವನದ ಪ್ರತಿಯೊಂದು ವಿಷಯದಲ್ಲೂ ನೀರಿಕ್ಷೆಯನ್ನಿಟ್ಟುಕೊಳ್ಳದೇ ಹೋದಾಗ ನಿರಾಶೆ ಯಾಗುವುದು ತಪ್ಪುತ್ತದೆ, ಅಲ್ಲವೆ? ಇದೇ ಅಲ್ಲವೇ ನಮ್ಮ ಅಣ್ಣ ಕೃಷ್ಣ ಪರಮಾತ್ಮ ಬೊಧಿಸಿದ್ದು?!





nicely written