
Modi is campaigning against nehru, indira Gandhi and Rajiv Gandhi and the like.
Is this election for lokasabha or paraloka sabha?
ಫೇಸ್ಬುಕ್ ಜಾಲಾಡುತ್ತಿದ್ದಾಗ ಕಂಡ ಒಂದು ಕುತೂಹಲಕಾರಿ ಪೋಸ್ಟ್ ಇದು.
ಮೋದಿ ಹೇಳಿಕೆಗೂ , ಕೆಲವರು ಮಾಡುವ ಟೀಕೆಗಳಿಗೆ ಸೇರು ಸವಾಸೇರು ಎಂಬಂತಿದೆ ಎಂದುಕೊಂಡೆ ಮುಗುಳ್ನಕ್ಕು ಸುಮ್ಮನಾಗುವ ಹೊತ್ತಿಗೆ.. ಏಕಾಏಕಿ ನೂರಾರು ಪ್ರಶ್ನೆಗಳು ತೂರಿಬಂದವು. ಮೇಲ್ನೋಟಕ್ಕೆ ಇದು ತಮಾಷೆ ಅನ್ನಿಸಿದರೂ ಆಳಕ್ಕೆ ಅಷ್ಟು ಸಲೀಸಲ್ಲ ಎನಿಸತೊಡಗಿತು.
“ಹೌದು…ಈ ಪ್ರಧಾನಿ ಚುನಾವಣೆ ಕಣದ ಕೊನೆ ಹಂತದಲ್ಲಿ ಏಕಾಏಕಿ ರಣಾಂಗಣದಲ್ಲಿ ಇರೋರನ್ನು ಬಿಟ್ಟು ಪರಲೋಕ ಸೇರಿದವರನ್ನು ಅದರಲ್ಲೂ ನೆಹರೂ ಅವರನ್ನು ಪದೇ ಪದೇ ಯಾಕೆ ಭೂಲೋಕದ ಚುನಾವಣೆ ಕಣಕ್ಕೆ ಎಳೆದು ಕರೆತರುತ್ತಾರೆ “ ಎನ್ನುವ ಪ್ರಶ್ನೆ ಕಾಡತೊಡಗಿತು.
ಚುನಾವಣೆಗಳು ಸಾಮಾನ್ಯವಾಗಿ ಆಡಳಿತ ಪಕ್ಷಕ್ಕೆ ಜನಾದೇಶ ಆಗಿರುತ್ತೆ. ಸರ್ಕಾರದ ಸಾಧನೆಯನ್ನು ಮುಂದಿಟ್ಟು ಮತ್ತೆ ಮತ ಕೇಳುವುದು ಪ್ರಜಾಸತ್ತೆಯ ವೈಶಿಷ್ಟ. ಆಡಳಿತದ ವೈಫಲ್ಯದ ಜತೆ ಒಂದಿಷ್ಟು ಭರವಸೆಗಳನ್ನು ಜನರ ಮುಂದಿಟ್ಟು ಮತ ಯಾಚನೆ ಮಾಡುವುದು ಪ್ರತಿಪಕ್ಷಗಳ ವೈಖರಿ.
ವಿಚಿತ್ರ ನೋಡಿ. ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಾಧನೆ ಬಗ್ಗೆ ಮಾತೇ ಆಡುತ್ತಿಲ್ಲ. ಮುಂದೆ ಸರಕಾರ ಬಂದರೆ ಜನರ ಪರ ತರಲಿರುವ ಯೋಜನೆಗಳ ಬಗ್ಗೆ ಕಿಂಚಿತ್ ಚಕಾರವಿಲ್ಲ. ಇಡೀ ಚುನಾವಣೆ ಪ್ರಚಾರದಲ್ಲಿ ಪ್ರಣಾಳಿಕೆ ಕುರಿತು ಒಂದು ಶಬ್ದ ಕೂಡಾ ಇಲ್ಲ. ಎಲ್ಲ ಬಿಟ್ಟು ಪರಲೋಕದ ನೆಹರೂ, ಇಂದಿರಾ, ರಾಜೀವ ರನ್ನು ಇಲ್ಲಿಗೇಕೆ ಕರೆತಂದು ಟೀಕೆಗಳ ಸಿಡಿಮದ್ದು ಸಿಡಿಸುತ್ತಿದ್ದ್ದಾರೆ ಎನ್ನುವುದು ಅಚ್ಚರಿಯೇ..
ತಂತ್ರ ಇರುವುದು ಇಲ್ಲಿಯೇ…
2014 ರ ಚುನಾವಣೆ ಬಂದಾಗ ಇದೇ ಮೋದಿ ಹೊಸತನದ ಕನಸು ಬಿತ್ತಿದರು. ಅಭಿವೃದ್ದಿಯ ಬಲೂನನ್ನು ಆಕಾಶಕ್ಕೆ ಹಾರಿಸಿದರು. ಕಾಂಗ್ರೆಸ್ ಕೊಳೆತುಹೋದ ಕತೆಯನ್ನು ಭಾರತದ ಉದ್ದಗಲಕ್ಕೂ ಸಾರಿದರು. ಭರವಸೆ ಮೂಡಿಸಿದರು.” ಆಚೆ ದಿನ್ ಆಯೆಂಗೆ “ ಎನ್ನುವ ಸ್ಲೋಗನ್ ಹೊಸದಾಗಿ ಕಂಡಿತು. ಜನ ನಂಬಿದರು.

ಆದರೆ ಈ ಬಾರಿ ಅಚ್ಚೆ ದಿನ್ ಪ್ರಸ್ತಾಪ ಇಲ್ಲ. ಅಭಿವೃದ್ದಿಯ ಪ್ರಸ್ತಾಪ ಇಲ್ಲ.. ಬಾಹುಬಲಿಯಂತೆ ಬೀಗುತ್ತಿರುವ ಮೋದಿ, ರಾಷ್ಟ್ರೀಯವಾದದ ಘೋಷಣೆ ಹೊರಡಿಸುತ್ತಾರೆ. ಆರ್ಥಿಕ ವೈಫಲ್ಯ, ಹುಸಿಯಾದ ಭರವಸೆ ಮರೆಮಾಚಿ ಮುಂದಿನ ವರ್ಷಗಳಲ್ಲಿ ಭಾರತ ವಿಶ್ವಗುರು ಆಗುತ್ತಿದೆ ಎಂದು ಎದೆಯುಬ್ಬಿಸಿ ಹೇಳುತ್ತಿದ್ದಾರೆ. ತಾವು ಜಗದ್ಗುರು ಎಂಬಂತೆ ಬೀಗುತ್ತಿದ್ದಾರೆ. ತಮ್ಮನ್ನು ಟೀಕಿಸುವವರು ದೇಶಭಕ್ತರಲ್ಲ ಎನ್ನುವ ಮಟ್ಟಿಗೆ ಆತ್ಮ ರತಿ ಬಂದು ನಿಲ್ಲುತ್ತದೆ.
ಹೀಗೆ….
ಯುದ್ದ, ಎದುರಾಳಿಗಳನ್ನು ಮೆಟ್ಟಿನಿಲ್ಲುವ ಮಾತು, ಅಲ್ಪಸಂಖ್ಯಾತರನ್ನು ಮಟ್ಟ ಹಾಕುವ ಮಾತು, ಟೀಕಾಕಾರರನ್ನು ಬಗ್ಗುಬಡಿಯುವ ದ್ವನಿ, ಕರ್ಮಠ ಹಿಂದುತ್ವದ ಕಠೋರ ದ್ವನಿ ಎಲ್ಲೆಲ್ಲೂ ಪ್ರತಿದ್ವನಿಸುತ್ತಿದೆ.
Hit and run ಶೈಲಿಯ ಅವರ ದ್ವನಿ ಹೇಗಿದೆ ಅಂದರೆ ಪ್ರತಿಪಕ್ಷಗಳು ವೈಫಲ್ಯಗಳ ಬಗ್ಗೆ ಮಾತೇ ಆಡುವಂತಿಲ್ಲ. ಮೋದಿ ತನ್ನ ಚಾಣಾಕ್ಷತನಡಿಂದ ಬೇರೆಡೆ ಗಮನ ಸೆಳೆಯುತ್ತಿದ್ದು, ನೈಜ ವಿಚಾರಗಳು ಮರೆಯಾಗಿವೆ. ರಾಜಕಾರಣವೋ? ಇಲ್ಲವೇ ವಶೀಕರಣವೋ?.. ಎಂಬಂತೆ ಪ್ರಚಾರ ಸಾಗಿದೆ.
ಅಂದರೆ…ಇದು ಬೇರೇನೂ ಅಲ್ಲ. ಮಹಾತಂತ್ರವೇ…!!
ಇದು“ಗುಜರಾತ್ ಮಾಡೆಲ್ “ನಿಶ್ಚಿತ.
ಕಳೆದ ಲೋಕಸಭೆ , ವಿಧಾನಸಭೆ ಚುನಾವಣೆ ವೇಳೆ ಆಗಾಗ್ಗೆ ಗುಜರಾತ್ ಮಾದರಿ ಎಂಬ ಮಾತು ಕೇಳಿ ಬರುತ್ತಿತ್ತು. ಬಿಜೆಪಿ ಎಲ್ಲರ ಬಾಯಲ್ಲಿ ಅಭಿವೃದ್ದಿ ಎಂದರೆ ಗುಜರಾತ್ ಎನ್ನುವ ಉದ್ಗಾರ. ಆದರೆ ಈ ಅಭಿವೃದ್ದಿಯ “ಗುಜರಾತ್ ಮಾಡಲ್ “
ಈಗ ಧಿಡೀರ್ ಮಾಯ ಆಯ್ತು.
ಹಾಗಾದರೆ ನಿಜವಾದ ಗುಜರಾತ್ ಮಾಡೆಲ್ ಯಾವುದು?…
ಅದೇ ಕಠೋರ ಹಿಂದುತ್ವದ ಗುಜರಾತ್ ಮಾಡಲ್. ಕೋಮು ದ್ರುವೀಕರಣದ ಮಾಡೆಲ್. ಅಲ್ಪಸಂಖ್ಯಾತರ ನರಮೇಧಕ್ಕೆ ಕಾರಣವಾದ ಮಾಡಲ್. ಗುಜರಾತ್ ನಲ್ಲಿ ಈಗಲೂ ಅಲ್ಪಸಂಖ್ಯಾತರು, ದಲಿತರು ಭಯದಿಂದ ತತ್ತರಿಸಿ ಬದುತ್ತಿರುವ ಮಾಡಲ್.
ಹತ್ಯೆ ಎನ್ನುವುದೇ ವಿಕೃತ ಮನಸ್ಥಿತಿಯ ಘೋರ ಕೃತ್ಯ. ಧರ್ಮದ ಹೆಸರಲ್ಲಿ ರಕ್ತ ಹಾರಿಸುವುದು ಹೇಯ., ಹಿಂದೂ ಆಗಿರಬಹುದು. ಮುಸ್ಲಿಂ ಆಗಿರಬಹುದು. ಇಂಥ ಹತ್ಯೆಗಳನ್ನು ಜಾತಿ , ಧರ್ಮದ ಆಧಾರದ ಮೇಲೆ ಸಮರ್ಥಿಸುವ ಗುಜರಾತ್ ಮಾಡಲ್. ಕೋಮು ಆಧಾರಿತ ಪ್ರತೀಕಾರದ ಮಾಡಲ್.
ಪ್ರಸಕ್ತ ಚುನಾವಣೆ ಅಖಾಡದಲ್ಲಿ ಅಲಿ – ಭಜರಂಗಬಲಿ ಹೇಳಿಕೆ ನೀಡುತ್ತಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ, ದಿಗ್ವಿಜಯ್ ಸಿಂಗ್ ವಿರುದ್ಧ ಕಣಕ್ಕಿಳಿದಿರುವ ಮಲೆಗಾಂವ್ ಬಾಂಬ್ ಸ್ಫೋಟದ ಆರೋಪಿ ಸಾಧ್ವಿ ಪ್ರಗ್ಯಾ, ಈ ದೇಶದಿಂದ ಮೂಲನಿವಾಸಿಗಳಾದ ಹಿಂದೂ, ಜೈನರು, ಬೌದ್ಧರು ಬಿಟ್ಟು ಉಳಿದವರನ್ನು ದೇಶ ಬಿಟ್ಟು ಓಡಿಸುತ್ತೇವೆ ಎಂದು ಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನು ಬೆದರಿಸುವ ಅಮಿತ ಶಾ ಹೇಳಿಕೆ – ಇವೆಲ್ಲ “ಗುಜರಾತ್ ಮಾಡಲ್ “ ಅನ್ನು ಮೋದಿ ಇಡೀ ದೇಶಕ್ಕೆ ಪ್ರಯೋಗಿಸಲು ಸಜ್ಜಾಗಿರುವ ಮುನ್ಸೂಚನೆ ಅಲ್ಲದೆ ಬೇರೇನೂ ಅಲ್ಲ.

ಆದ್ದರಿಂದ ಬಿಜೆಪಿ ಬಲಶಾಲಿ ಆಗಿರುವ ಈ ದಿನಗಳಲ್ಲಿ ಈ ಅಜೆಂಡಾ ಜಾರಿಗೆ ತರಲು ಸಕಾಲವಾಗಿದ್ದು, ಇದರ ಆಧಾರದ ಮೇಲೆ ಮೋದಿ ಜನಾದೇಶ ಕೇಳುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟ.
ಅದಕ್ಕಾಗಿ ಮೊದಲೇ ಹೇಳಿದಂತೆ ನೆಹರೂ ಹೆಸರು ತಂದು ಪದೇಪದೇ ಪ್ರಹಾರ ನಡೆಸುತ್ತಿರುವ ಹಿಂದೆ ಪ್ರಜಾಸತ್ತೆಯ ಮೂಲ ಬುಡವನ್ನೇ ಕತ್ತರಿಸಿ, ನಂಬಿಕೆಯನ್ನು ಬುಡಮೇಲು ಮಾಡುವ ರಾಜಕೀಯ ಸಂಚಿದೆ ಎನ್ನುವುದೇ ಇಲ್ಲಿಯ ವಿಶ್ಲೇಷಣೆ.
ಭಾರತ ಪಾಕಿಸ್ತಾನ ಇಬ್ಬಾಗ ಆದಾಗ ಪಾಕಿಸ್ತಾನ ಮುಸ್ಲಿಂ ಹಣೆಪಟ್ಟಿಯ ರಾಷ್ಟ್ರ ಆಯಿತು. ಆದರೆ ನೆಹರೂ ಭಾರತವನ್ನು ಸರ್ವಧರ್ಮ ಸಮಾನತೆ, ಭಾವೈಕ್ಯತೆ, ಸಹಿಷ್ಣುತೆಯ ರಾಷ್ಟ್ರವಾಗಿ ಒಪ್ಪಿ ಜಾತ್ಯಾತೀತ ತಳಹದಿಯ ಗಟ್ಟಿ ನೆಲೆಗಟ್ಟು ತಂದುಕೊಟ್ಟರು. ಈ ನೆಲೆಗಟ್ಟು ಹಲವು ದಶಕಗಳ ಕಾಲ ಜಾತಿವಾದಿ ಶಕ್ತಿಗಳು ಅದರಲ್ಲೂ ಜನಸಂಘ ಹಾಗೂ ಸಂಘ ಪರಿವಾರ ತಲೆ ಎತ್ತಲು ಸಾಧ್ಯವಾಗಲಿಲ್ಲ.
ಕಾಂಗ್ರೆಸ್ ತಪ್ಪುಗಳಿಂದ ಇದೀಗ ಈ ಶಕ್ತಿಗಳು ಜನಬೆಂಬಲ ಪಡೆದಿದ್ದು ನೆಹರೂ ಪ್ರತಿಪಾದಿಸಿದ ಜಾತ್ಯಾತೀತ ಮೌಲ್ಯಗಳನ್ನೇ ಈ ನೆಲದಿಂದ ದ್ವಂಸ ಮಾಡಲಾಗುತ್ತಿದೆ. ಅದೇ ಕಾರಣಕ್ಕೆ ನೆಹರೂ ಸತ್ತು ಹೋಗಿದ್ದರೂ ಈಗಲೂ ಬದುಕಿರುವ ಅವರ ಮೌಲ್ಯಗಳನ್ನೂ ಛಿದ್ರಗೊಳಿಸಲಾಗುತ್ತಿದೆ. ಈ ಮೌಲ್ಯಗಳಿಗೆ ಜೀವವಿದ್ದರೆ ತಮ್ಮ ಮಹತ್ವಾಕಾಂಕ್ಷೆಗೆ ಅಡ್ಡಿ ಎಂಬ ಭೀತಿ. ಹೀಗೆ ಸ್ವದೇಶಿ ನೀತಿ, ರಾಷ್ಟ್ರೀಯವಾದದ ಹೆಸರಲ್ಲಿ ನಡೆಯುತ್ತಿರುವ ಸೈದ್ದಾಂತಿಕ ದಾಳಿ ಇದಾಗಿದೆ.
ನೆಹರೂ ಹೆಸರು ಈ ಚುನಾವಣೆಗಳಲ್ಲಿ ಪದೇ ಪದೇ ಯಾಕೆ ಬರುತ್ತಿದೆ ಎನ್ನುವುದು ಈಗ ಗೊತ್ತಾಯಿತೇ?
ಮೋದಿ ಜನಪ್ರಿಯತೆಯ ಹಠಾತ್ ಕುಸಿತದಿಂದ ಕಂಗೆಟ್ಟಿರುವ ಪರಿವಾರ, ವಾಸ್ತವದಲ್ಲಿ ಈ ಅವಧಿಯನ್ನು ”ಕಠೋರ ಹಿಂದುತ್ವದ ಸುವರ್ಣಯುಗ “ ಎಂಬಂತೆ ಬಿಂಬಿಸಿ ಭದ್ರ ಕೋಟೆಯನ್ನು ಕಟ್ಟುವ ಐತಿಹಾಸಿಕ ಸಾಹಸಕ್ಕೆ ಕೈ ಹಾಕಿ ಅದಕ್ಕಾಗಿ ಜನಾದೇಶ ಕೇಳುತ್ತಿರುವಂತೆ ಈ ಚುನಾವಣೆ ಕಂಡುಬರುತ್ತಿದೆ.
ಸಹಿಷ್ಣುತೆ ಮತ್ತು ಬಹುತ್ವವನ್ನು ಧಿಕ್ಕರಿಸಿ , ಹಿಂದೂರಾಷ್ಟ್ರ ನಿರ್ಮಾಣದ ಪರಿಕಲ್ಪನೆಯನ್ನು ಸಾಕಾರ ಮಾಡುವ ಮೂಲಕ ಪಕ್ಷಗಳನ್ನು ನಾಮಾವಶೇಷ ಮಾಡುವ ದೊಡ್ಡ ರಾಜಕೀಯ ಹುನ್ನಾರ ಹಿಂದೆಂದೂ ಇಲ್ಲದ ರೀತಿ ಈ ಬಾರಿ ಎದ್ದು ಕಾಣುತ್ತಿದೆ.
ಅದು ಹಿಂದೂ ವೋಟ್ ಬ್ಯಾಂಕ್ ಸೃಷ್ಟಿ.
ಶೇಕಡಾ 80ರಷ್ಟು ಇರುವ ಹಿಂದೂಗಳ ರಾಜಕೀಯ ಶಕ್ತಿಯ ಮುಂದೆ ಶೇಕಡಾ 20 ರಷ್ಟಿರುವ ಮುಸ್ಲಿಂ, ಕ್ರಿಶ್ಚಿಯನ್ನರನ್ನು ರಾಜಕೀಯವಾಗಿ ಸಂಪೂರ್ಣ ದುರ್ಬಲಗೊಳಿಸಿ ಸಂಪೂರ್ಣ ಶರಣಾಗಿಸಬೇಕು, ಮತ್ತು ಈ ಮತಗಳನ್ನು ನಂಬಿಕೊಂಡ ರಾಜಕೀಯ ಪಕ್ಷಗಳನ್ನು ಇನ್ನಿಲ್ಲದಂತೆ ನಾಮಾವಶೇಷ ಮಾಡಬೇಕೆಂಬ ಸಂಘ ಪರಿವಾರದ ಅಜೆಂಡಾ ದೊಡ್ಡ ಹೆಬ್ಬಯಕೆ ರೂಪದಲ್ಲಿ ರಾರಾಜಿಸುತ್ತಿದೆ.
ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಮೊದಲಾದ ಕಡೆ ಮುಸ್ಲಿಂ ಸಮುದಾಯ ಗಣನೀಯವಾಗಿದ್ದು ಅಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಹಿಂದುತ್ವದ ವೋಟ್ ಬ್ಯಾಂಕ್ ಸೃಷ್ಟಿಸುವ ದೊಡ್ಡ ಪ್ರಯೋಗಕ್ಕೆ ಮುಂದಾಗಿರುವುದು ನೋಡಿದರೆ ಮೋದಿ, ಅಮಿತ್ ಷಾ ಜೋಡಿ ದೂರದೃಷ್ಟಿ ಕಾಣಿಸುತ್ತದೆ. ಬಿಜೆಪಿ ಸಂಪೂರ್ಣ ಬಹುಮತ ಪಡೆದು, ಮೋದಿ ಮತ್ತೆ ಪ್ರಧಾನಿ ಆದರೆ ಏನೆಲ್ಲಾ ಆಗಬಹುದೆಂಬುದಕ್ಕೆ ಒಂದು ಪೂರ್ವಭಾವಿ ಚಿತ್ರಣ ಇದು. ಇದು ಮೋದಿ ಮ್ಯಾಂಡೆಟ್. ಈ ಸುವರ್ಣ ಯುಗ ಕಟ್ಟುವ mandate ಇನ್ನಷ್ಟು ಹೊಸ ಆಯಾಮ ಹೊಂದಿದೆ.

1935 ರ ಬ್ರಿಟಿಷ್ ಮಾಡೆಲ್ ಆಧರಿಸಿ ರಚನೆಯಾದ ನಮ್ಮ ಸಂವಿಧಾನ, ನಮ್ಮ ಸಂಪ್ರದಾಯ, ಆಶೋತ್ತರಗಳನ್ನು ಆಧರಿಸಿಲ್ಲ ಎಂಬ ಕೂಗೆದ್ದಿರುವುದು ಕೂಡಾ ಹಿಂದೂ ಸುವರ್ಣ ಯುಗ ಸೃಷ್ಟಿಯ ಒಂದು ಭಾಗ. ಸಂವಿಧಾನ ಬದಲಾವಣೆಯೇ ಇದರ ಹೆಗ್ಗುರಿ. ಸಮಾನ ನಾಗರಿಕ ಸಂಹಿತೆ ಇರಬಹುದು, ಕಾಶ್ಮೀರದ ಸ್ವಾಯುತ್ತತೆ ರದ್ದು ಇರಬಹುದು ಸಂವಿಧಾನ ಬದಲಾವಣೆಗೆ ವೇದಿಕೆ ಸಜ್ಜುಗೊಳಿಸುವ ಧ್ವನಿಗಳು ಮಾತ್ರ .
ಭಾರತವನ್ನು ಇಡಿಯಾಗಿ ಬದಲಾಯಿಸುವ ಹರಸಾಹಸ ಯತ್ನವಿದು. ಕೋಮು ಧ್ರುವೀಕರಣದ ಮಹಾಪ್ರಯೋಗ ಇದು. ಭಾವೈಕ್ಯತೆಯ ಭದ್ರ ಬುನಾದಿಯನ್ನು ಅಲ್ಲಾಡಿಸುವ ಸವಾಲಿದು. ಈ ಯತ್ನಕ್ಕೆ, ಸವಾಲಿಗೆ ಭಾರತ ಮತದಾರ ನೀಡುವ ಉತ್ತರ ಚಾರಿತ್ರಿಕವಾಗಲಿದೆ .
ಬಿಜೆಪಿ ವಿರೋಧಿ ಪಕ್ಷಗಳು ತಮ್ಮ ರಾಜಕೀಯ ವರಸೆಯನ್ನು ಬದಲಾಯಿಸಿಕೊಳ್ಳಬೇಕಾದ ರೀತಿಗೂ ಈ ಫಲಿತಾಂಶ ಮಾರ್ಗಸೂಚಿ ಆಗಲಿದೆ.






0 Comments