ಇದು 'ಗೌರೀದುಃಖ' ..

ಸೋಮು ಕುದರಿಹಾಳ
ವಿದ್ಯಾರಶ್ಮಿ ಮೇಡಂ ಅವರ ಗೌರಿ, ತನ್ನ ದುಃಖವನ್ನು ಸೆರಗಿನ ತುದಿಗೆ ಕಟ್ಟಿಕೊಂಡು ಸಾಹಿತ್ಯ ಮಾರ್ಗದಲ್ಲಿ ನಿಂತವಳು.
ತನ್ನ ದುಃಖಕ್ಕೆ ಕೊರಗುತ್ತಾ ಕುಳಿತವಳಲ್ಲ. ಸಂಕಟ ತೊಳಲಾಟದ ಭಾವಗಳನ್ನ ಕವಿತೆಯ ಪದಗಳಾಗಿ ತೊಡರಿಸಿದವಳು. ಗೌರಿಯ ಕಣ್ಣ ಹನಿಗಳು ಕೆನ್ನೆ ಮೇಲೆ ಜಾರಿ ಉಪ್ಪುಗಡಲಲಿ ಮುಳುಗಿಹೋದವುಗಳಲ್ಲ. ಅವು ಹರಳುಗಟ್ಟಿ ಕಲ್ಲಾದವಳು. ಸೆರಗಿನ ತುದಿ ನೆಂದ ಮೆದುವಲ್ಲ. ಹರಳುಗಳನ್ನು ಸೇರಿಸಿ ಕಟ್ಟಿದ ಗಟ್ಟಿಗಂಟು.
ಶೋಷಣೆಯ ದಾರಿಯಲ್ಲಿ ಎಡತಾಕುವವರನ್ನು ಪ್ರಶ್ನಿಸುತ್ತದೆ. ನೀನೇ ಕಾರಣ ಎಂದು ನೆತ್ತಿ ಮೊಟಕುತ್ತದೆ. ಇನ್ನೂ ಎಚ್ಚರಿಸುತ್ತಾ ಕವಣೆಯಾಗಿ ಬೆನ್ನತ್ತಿ ಬೀಸುತ್ತದೆ.
ಬಿಟ್ಟರೂ ಬಿಡದೆಂಬಂತೆ ಇವರನ್ನು ಒಳಗೊಳ್ಳುತ್ತಾ ಬಂದಿರುವ ಕವಿತೆ, ಇವರ ಜೊತೆ ಅಮ್ಮನಾಗಿ ಅಪನಾಗ್ಪಿ ಮಗಳಾಗಿ ಸಂಗಾತಿಯಾಗಿ ಜೊತೆ ಬಂದಿದೆ. ಬದುಕಿನ ಹಲವಾರು ಸನ್ನಿವೇಶಗಳನ್ನು ಕವಿತೆಯಾಗಿಸಿ ಆ ಮೂಲಕ ಸಮಾಜದ ಹಲವು ಮುಖಗಳನ್ನು ಬಿಂಬಿಸುವಲ್ಲಿ ಈ ಸಂಕಲನ ಯಶ ಕಂಡಿದೆ.

ಕೈ ಚೆಲ್ಲಿದ ಸಾಲುಗಳೇ
ನಿಮಗೆ ನಮಸ್ಕಾರ..

ಅನ್ನುವ ಕವಯಿತ್ರಿ ಉಳಿದ ಭಾವಗಳನ್ನು ನೆನಪಿಸಿಕೊಂಡು ಮೊದಲ ಪದ್ಯದಲ್ಲಿಯೇ ಕಾವ್ಯಕ್ಕೆ ಕೃತಜ್ಞತೆ ಸಲ್ಲಿಸುತ್ತಾರೆ. ಹೆಣ್ಣುಮಕ್ಕಳ ಮೇಕಪ್ಪಿನಲ್ಲಿ ಪದ್ಯ ಹೊಸೆಯುತ್ತಾ ಕಣ್ಣಿಗೆ ಹಚ್ಚುವ ಕಾಡಿಗೆ ಕಣ್ಣೀರು ತಡೆಯುತ್ತದೆಯಂತೆ, ಭಾವಗಳನ್ನು ಚೆಲ್ಲಾಪಿಲ್ಲಿ ಮಾಡದಿರಲೆಂದೆ ಸೀರೆಗೆ ನೆರಿಗೆಗಳಂತೆ, ಸಲ್ಲದ ಮಾತುಗಳ ಕೇಳದಿರಲೆಂದೇ ಕಿವಿಗೆ ಗೆಜ್ಜೆಯ ಓಲೆಗಳಂತೆ. ಮೇಕಪ್ಪೆಂಬುದು ಹೆಣ್ಣಿನ ಅಲಂಕಾರಿಕ ವಸ್ತುವಲ್ಲ ಒಳತೋಟಿಗಳನ್ನು ಮರೆಮಾಚಿಕೊಳ್ಳುವ ಸಾಧನವಾಗಿದೆ.
ಏನು ಕಲಿತರೇನು ಸುಶಿಕ್ಷಿತ ಮಹಿಳೆಯು ಕೂಡ ಅಡುಗೆ ಮನೆಯಲ್ಲಿ ಬಂಧಿತಳಾಗಿದ್ದು ಅದರಿಂದ ಮುಕ್ತಳಾಗಬೇಕೆಂಬ ಹಂಬಲವನ್ನು ಅವಳ ಕನಸು ಪದ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿಯೂ ತನ್ನ ಸಂಕಟವನ್ನು ಇನ್ನೊಬ್ಬರ ಹೆಗಲ ಮೇಲೆ ಸಾಗಿಸುತ್ತ ತನ್ನ ಅಸೆಗಳನ್ನು ಸಂತೈಸಿಕೊಳ್ಳುತ್ತಾಳೆ. ಸೋಲೊಪ್ಪಿಕೊಳ್ಳುವ ಜಾಯಮಾನದವಳಲ್ಲ ಈ ಗೌರಿ.

ಖಾಲಿ ಹಣೆ ಕಂಡರೇಕೆ ಅಂಜುವೆ ಎಲೇ ಗಂಡೇ
ನನ್ನೊಳಗೆ ನೀ ಇನ್ನಿಲ್ಲವಾದ ಕ್ಷಣ ಭಯಪಡು

ಎಂಬ ಎಚ್ಚರಿಕೆಯ ಸಾಲುಗಳು ಬೊಟ್ಟು ಕವಿತೆಯಲ್ಲಿವೆ. ಹಣೆಗೆ ಬೊಟ್ಟು ಧರಿಸುವುದನ್ನು ಪ್ರಶ್ನಿಸುವವರನ್ನು ಪ್ರತಿಭಟಿಸುತ್ತಾಳೆ ಗೌರಿ.
ಒಂದೂವರೆ ವರ್ಷದ ಬೆಳಕೂ ಜೊತೆ ಸೋಲುವ ಅಮ್ಮ ದೃಷ್ಟಿಯುದ್ಧ ಕವಿತೆಯಲ್ಲಿದ್ದಾಳೆ. ಕವಿತೆಯೊಂದು ಹೇಗೆ ಜೀವನ್ಮುಖಿ ಹಾಗೂ ಜೀವನ ಸಖಿಯಾಗಿ ಪ್ರವಹಿಸದೆಯಲ್ಲ ಅನಿಸಿಬಿಡುತ್ತದೆ. ‘ದ್ವೇಷ ಅಂದರೇನಮ್ಮ?’ ಅಂತ ಕೇಳುತ್ತೆ ಪುಟ್ಟ ಕೂಸು. ಆ ಮಗುವಿಗೆ ಆ ಭಾವನೆಯ ಪರಿಚಯವೇ ಆಗಬಾರದೆಂಬ ಕಾಳಜಿ ಕಳಕಳಿ ಗೌರಿಯದ್ದು. ಹಾಗಾಗಿ ‘ಪ್ರೀತಿ ಇಲ್ಲದ್ದು ಕಂದಾ’ ಎಂದು ಉತ್ತರಿಸುತ್ತಾ ಅದರ ಉತ್ತರಕ್ಕಾಗಿ ಹಲವಾರು ತಲ್ಲಣಗಳನ್ನು ಎಡತಾಕಿಸುತ್ತಾರೆ. ಮಗಳನ್ನು ತುಂಬಾ ಪ್ರೀತಿಯಿಂದ ಕಾಣುವ ಗೌರಿ ಡೇಕೇರ್‍ನಲ್ಲಿರುವ ಮಗುವನ್ನು ಸಾಕಷ್ಟು ಮಿಸ್ ಮಾಡಿಕೊಳ್ಳುವ ಅಮ್ಮ, ತೊರೆದು ಜೀವಿಸಬಹುದೇ? ಎಂದು ತಳಮಳಗೊಳ್ಳುತ್ತಾಳೆ. ಕೂಸು ಕನಸು ಪದ್ಯವಂತೂ ಇತ್ತೀಚಿನ ಹಲವಾರು ದುರಂತಗಳನ್ನು ನೆನಪಿಸಿ ಜೀವಹಿಂಡಿಬಿಡುತ್ತದೆ.

‘ಮತ್ತೆ ಗರ್ಭದಲ್ಲಿ ಬಚ್ಚಿಟ್ಟು ಜೋಪಾನ ಮಾಡುವಾಸೆ
ಆಫೀಸಿನ ಕರೆ ನೆನಪಾಗುತ್ತದೆ
ನಿಟ್ಟುಸಿರು ಬಿಟ್ಟು ಹೊರಡುವೆ
ಜಗತ್ತಿಗೊಂದು ಪ್ರಾರ್ಥನೆ ಸಲ್ಲಿಸಿ
ಮುಂದೆ ಬಂದರೆ ಹಾಯಬೇಡಿ.’

ಪುಟ್ಟಪುಟ್ಟ ಮಕ್ಕಳನ್ನು ತಾಯಿಯೊಬ್ಬಳು ರಕ್ಷಿಸಿಕೊಳ್ಳುವ ಕೊನೆಯ ಭಿನ್ನಹವೇನೋ ಅನಿಸಿಬಿಡುವ ಹಾಗೂ ಕ್ರೂರ ಮನಸ್ಸುಗಳನ್ನು ತಣ್ಣಗೆ ತಿವಿಯುವ ಕಸುವು ಈ ಕವಿತೆಗಳಲ್ಲಿದೆ
ಅಮ್ಮನೊಂದಿಗೆ ಮಾತನಾಡುತ್ತಾ ಪರೀಕ್ಷೆಗೊಡ್ಡಿಕೊಳ್ಳುವ ಗೌರಿ ತುಂಬಾ ಆಪ್ತವಾಗುತ್ತಾಳೆ.

ನೋಡೇ ನೋಡಿದೆ ಅಮ್ಮನ ಮೊಗವ. ನನ್ನದೇ ದೃಷ್ಟ್ಟಿಯಾಗುವಷ್ಟು
ಅಳತೆ ಕೊಟ್ಟುಮಾಡಿಸಿದ ಮುದ್ದು ಮೂಗು
ಎಳನೀರಿನ ಕೆನೆ ಹಚ್ಚಿದಂತಹ ಕಣ್ಣು

ಹೀಗೆ ಮುಂದೆ ಸಾಗಿವ ಭಾವಗಳಲ್ಲಿ ಕಲ್ಪನೆಗಳು ಪ್ರಶ್ನೆಗಳು ಸುಂದರವಾಗಿ ಹರಡಿಕೊಂಡಿವೆ. ಅದೇಅಮ್ಮನನ್ನು ಕುರಿತು ನೀ ಉತ್ತರಿಸು ಕವಿತೆಯಲ್ಲಿ ತಾಯಿಯ ಅದಮ್ಯ ಚೇತನವನ್ನು ವ್ಯಕ್ತಪಡಿಸುತ್ತಾ ತನಗೂ ಆ ಶಕ್ತ ಬೇಕೆನ್ನುವ ಭಾವನೆಯಂತೂ ಮಗಳೊಬ್ಬಳ ನಿಸ್ಪ್ರಹ ಒಡನಾಡವೆನಿಸುತ್ತದೆ.
ಸಂಕಲನದ ಶೀರ್ಷಿಕೆ ಪದ್ಯ ಗೌರೀದುಃಖದಲ್ಲಿ ಸ್ಪಷ್ಟವಾಗಿ ಗೌರಿಯನ್ನು ಬಿಂಬಿಸಿದ್ದಾರೆ. ಈ ಗೌರಿ ಹೆಣ್ಣುಮಕ್ಕಳ ಕಣ್ಣೀರನ್ನು ಅರ್ಥಮಾಡಿಕೊಳ್ಳದವನು ಹೇಗೆ ಇಷ್ಟವಾದಾನು? ಅನ್ನುತ್ತಾ ಸಂತೈಸಲಿಕ್ಕಾಗದ ಅವನಿಗೆ ಬೇಡವಾದರೆ ಅವಳಿಗೆ ಅವನೂ ಬೇಡ, ಅಷ್ಟೇ ಎಂದು ದೃಢವಾಗುತ್ತಾಳೆ.
ಒಂದು ಉತ್ತಮ ಪ್ರತಿಮೆಯಲ್ಲಿ ಅಡಗಿ ಕುಳಿತ ಕವಿತೆ ಕಣ್ಕಪ್ಪು, ಕಾಡಿಗೆಯೆಂಬುದು ಹೆಣ್ಣಿಗಂಟಿದ ಸಂಪ್ರದಾಯವಿದ್ದಂತಿದೆ ಅತ್ತರೆ ಕೆನ್ನೆ ಮೇಲೆ ನಡೆದು ಬರುತ್ತದೆ. ಅದು ಹಾಗೆಯೇ ಇರಬೇಕೇಕೆ ಎಂದು ಧಿಕ್ಕರಿಸುತ್ತದೆ ಕವಿಮನಸ್ಸು.

ಹುಡುಕ ಹೊರಟ ದೀಪವ ಕತ್ತಲು ಗದರಿದೆ
ದೀಪಕ್ಕೂ ನಾಚಿಕೆ
ಅರೆಕಣ್ಣು ಮುಖಮುಚ್ಚಿ ತಿರುಗಿದೆ
ನಾಳೆ ಪಲ್ಲಂಗಕೆ ಪ್ರಶ್ನೆಗಳಿವೆ ಅಂದಿದೆ ಸುಳ್ಳೇ..

ಎಂಬ ಭಾವ ಸ್ಫುರಿಸುವ ಮಿಲನ ಕವಿತೆಯಲ್ಲಿ ಸುಖದ ತೃಪ್ತಭಾವವೊಂದು ಅಭಿವ್ಯಕ್ತಗೊಂಡಿದೆ. ಮಾತುಗಳ ಮೂಲಕವೇ ಆಳ ಹೊರಟವನನ್ನು ತಾರಾಮಾರಾ ಕೈಗೆತ್ತಿಕೊಳ್ಳುತ್ತಾ ಬಿಟ್ಟು ಹೊರಡುವೆ ನಿನ್ನನ್ನು ಒಬ್ಬನೇ ಎಷ್ಟಾದರೂ ಮಾತಾಡಿಕೊ ನಿನ್ನ ಸಹಿಸಿಕೊಂಡೇ ಇರಲಾರೆ ಎಂಬುದು ಗೌರಿಯ ಮನದಾಳ.
ಜೀವನ ಪಾಠದಲ್ಲಿ ಅಪ್ಪನ ಗೈರನ್ನು ತುಂಬ ಅಪ್ಯಾಯಮಾನವಾಗಿ ಹಾಜರುಪಡಿಸಿಕೊಂಡಿದ್ದಾರೆ. ‘ಒಬ್ಬಳೇ ಇದ್ದಿಯಾ ಆಫೀಸಿನಲ್ಲಿ?” ಎಂದು ಕೇಳುವ ಮಗುವಿನ ಕಾಳಜಿಯಲ್ಲಿ ಅಪ್ಪನನ್ನು ನೆನೆದು ಭಾವುಕರಾಗುತ್ತಾರೆ.
ಗೌರೀದುಃಖ ಮೇಣದ ಬತ್ತಿಯಂತದ್ದು. ತಾನು ಜಿನುಗುತ್ತ ಬೆಳಕು ಚೆಲ್ಲವ ಹೊಣೆ ಅರಿತವಳು ಈ ಗೌರಿ. ಆ ಬೆಳಕಲ್ಲಿ ಮಗಳು ನಲಿಯುತ್ತಾಳೆ. ಅಮ್ಮನನ್ನು ಕರೆಯುತ್ತಾರೆ. ಅಪ್ಪನನ್ನು ಹುಡುಕುತ್ತಾರೆ. ತಮ್ಮ ಪತಿಯನ್ನು ತೋರಿಸುತ್ತಾರೆ. ಬೆಳಕಿನ ಕರುಗುವಿಕೆ ಮತ್ತೆ ಹೆಪ್ಪುಗಟ್ಟುವಿಕೆಯ ನಡುವಣ ಹಲವಾರು ಮಗ್ಗಲುಗಳಲ್ಲಿ ಬದುಕನ್ನು ಬಿಂಬಿಸುತ್ತಾ ಸಾಗಿದ್ದಾರೆ. ಅವೆಲ್ಲವೂ ಕವಿತೆಗಳಾಗಿ ಎದುರಾಗುತ್ತವೆ.
ಹಾಗೆಂದ ಮಾತ್ರಕ್ಕೆ ಈ ಸಂಕಲನದ ಕವಿತೆಗಳು ಒಂದು ಚೌಕಟ್ಟಿನೊಳಗೆ ಸೀಮಿತವಾಗಿ ಉಳಿಯುವುದಿಲ್ಲ. ಎಲ್ಲರನ್ನೂ ತಮ್ಮ ಒಳಕ್ಕೆ ಬಿಟ್ಟುಕೊಳ್ಳುತ್ತವೆ. ಒಳಗಿನಿಂದ ಸಂದೇಶವನ್ನು ಕೈಗಿಟ್ಟು ಹೊರನೋಟಕ್ಕೆ ನೋಡುವ ಕಣ್ಣಿನ ಬಾಗಿಲು ತೆರೆಯುತ್ತವೆ. ಕವಿತೆಗಳಲ್ಲಿ ಪ್ರತಿಭಟಿಸುವ ಶಕ್ತಿ ಇದೆ. ಖಡಕ್ಕಾಗಿ ಪ್ರಶ್ನಿಸುವ ಧೈರ್ಯ ಇದೆ. ಹೋರಾಟದ ಹಾದಿಯಲ್ಲಿರುವ ಬಹಳಷ್ಟು ಮಹಿಳೆಯರ ಪ್ರತಿನಿಧಿಯಾಗಿ ಗೌರಿ ನಿಲ್ಲುತ್ತಾಳೆ.

‍ಲೇಖಕರು avadhi

March 8, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಸೋಮು ಕುದರಿಹಾಳ ಗಂಗಾವತಿ.

    ಮಹಿಳಾ ದಿನಾಚರಣೆಯ ಹೊತ್ತಿನಲ್ಲಿ ತುಂಬಾ ಪ್ರಸ್ತುತ ಅನಿಸುವ ಪದ್ಯ ಪುಸ್ತಕ ವಿದ್ಯಾರಶ್ಮಿ ಮೇಡಂ ಅವರ ಗೌರಿದುಃಖ. ಸಂಕಲನದ ಓದಿನಲ್ಲಿ ನನಗೆ ದಕ್ಕಿದ ಗೌರಿಯ ಭಾವಗಳ ಅನಿಸಿಕೆಗಳನ್ನು . ಅವಧಿಯಲ್ಲಿ ಪ್ರಕಟಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು..

    ಪ್ರತಿಕ್ರಿಯೆ
  2. Vidyarashmi Pelathadka

    ಗೌರಿದುಃಖ ಪುಸ್ತಕದ ಬಗ್ಗೆ ಬರೆದದ್ದಕ್ಕೆ ಧನ್ಯವಾದಗಳು ಸೋಮು ಅವರೇ. ಪ್ರಕಟಿಸಿದ ಅವಧಿಗೂ ನಾನು ಕೃತಜ್ಞೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: