ಇದು ಕೂಡ ಚೇಳು ರಾತ್ರಿಯೇ..

ಭಾರತಿ ಹೆಗಡೆ

ನಾನಾಗ 9ನೇ ಕ್ಲಾಸಿನಲ್ಲಿದ್ದೆ. ಆಗ ನಡೆದ ಘಟನೆಯಿದು.

ನನಗೆ ನೆನಪಿರುವ ಹಾಗೆ ನಾನು ಸಾಧಾರಣವಾಗಿ ಅಪ್ಪ ಅಮ್ಮನ ಜೊತೆ ಎಲ್ಲೆಡೆಯೂ ಹೋಗುತ್ತಿದ್ದೆ. ನೆಂಟರ ಮನೆಗೆಲ್ಲ ಹೋಗುತ್ತಿದ್ದೆ. ಆದರೆ ಆದಿನ ಹೋಗಿರಲಿಲ್ಲ. ಅಪ್ಪ ಅಮ್ಮ ಇಬ್ಬರೂ ಇಟಗಿ ಸಮೀಪದ ಹಳೇಬರಗಾಲು ಎಂಬ ಊರಿಗೆ ಹೋಗಿದ್ದರು. ಇಟಗಿ ಸಿದ್ದಾಪುರದಿಂದ 12 ಕಿ.ಮೀ.ದೂರದಲ್ಲಿರುವ ಒಂದು ಸಣ್ಣ ಪಟ್ಟಣದಂಥ ಊರು. ಅಲ್ಲಿಂದ 3-4 ಕಿ.ಮೀ. ದೂರದಲ್ಲಿರುವುದು ಹಳೇಬರಗಾಲು ಎಂಬ ಎರಡೋ… ಮೂರೋ ಮನೆಗಳಿರುವ ಒಂದು ಊರದು. ಅದು ನನ್ನ ಸೋದರಮಾವನ ಹೆಂಡತಿಯ ತವರು ಮನೆಯಾಗಿತ್ತು. ಅಲ್ಲಿ ಏನೋ ಕಾರ್ಯಕ್ರಮ. ಏನು ಕಾರ್ಯಕ್ರಮವಿತ್ತು ಎಂಬುದು ಈಗ ನೆನಪಿಲ್ಲ. ಏನೋ ಒಂದಿಷ್ಟು ಪೂಜೆ, ಹೋಮ, ಹವನಗಳೆಲ್ಲ ಇದ್ದವು. ನನ್ನ ಅಪ್ಪನೇ ಅಲ್ಲಿ ಪ್ರಮುಖ ಅದ್ವೈರ್ಯ. ಅಲ್ಲಿಗೆ ಹೋದಾಗ ನಡೆದ ಘಟನೆಯಿದು.

ನನ್ನ ಅಮ್ಮನಿಗೆ ಚಿಕ್ಕ ಮಕ್ಕಳೆಂದರೆ ತುಂಬ ಪ್ರೀತಿ. ಎಲ್ಲೇ ಹೋಗಲಿ, ಯಾರದ್ದೇ ಚಿಕ್ಕ ಮಗುವಿದ್ದರೂ ಮಗುವನ್ನು ಎತ್ತಿಕೊಂಡು ಮುದ್ದು ಮಾಡದಿದ್ದರೆ ಅಮ್ಮನಿಗೆ ಸಮಾಧಾನವಿಲ್ಲ. ಹೀಗೆ ಯಾರ್ಯಾರದ್ದೋ ಮಕ್ಕಳು ನಮ್ಮನೆಯಲ್ಲಿ ಬೆಳೆದು, ಅವರೆಲ್ಲ ನಮ್ಮ ಮನೆಯವರೇ ಆಗಿಬಿಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಅಮ್ಮನದ್ದೂ ಆ ಮಕ್ಕಳದ್ದೂ ನಂಟು. ಹೀಗೆಯೇ ಅಲ್ಲಿ ಯಾರದ್ದೋ ಮಗುವನ್ನು ಎತ್ತಿಕೊಂಡು ಮುದ್ದಿಸುತ್ತಿರುವಾಗ ನಡೆದ ಘಟನೆಯಿದು.

scorpion2ಅದು ಅಕ್ಟೋಬರ್, ನವೆಂಬರ್ ತಿಂಗಳು. ಆಗ ಕೊನೆ ಕೊಯ್ಲು ಪ್ರಾರಂಭ. ಮಲೆನಾಡಿನ ಎಲ್ಲರ ಮನೆಗಳ ಮುಂದೆ ಅಡಕೆ ಸಿಪ್ಪೆಗಳ ರಾಶಿ. ಅಡಕೆ ಗೊನೆಗಳ ರಾಶಿ. ಆ ರಾಶಿಗಳ ಮಧ್ಯೆ ಹಿಸುಕು, ಚೇಳು, ಹಾವುಗಳು ಹೆಚ್ಚು. ಅಲ್ಲಲ್ಲೇ ಹರಿದುಬಿಡುವ, ಎಷ್ಟೊತ್ತಿಗೂ ಮೈಮೇಲೂ ಹರಿದುಬಿಡುವ ಅಪಾಯಗಳು ಹೆಚ್ಚು. ಹಾಗಾಗಿ ಎಷ್ಟು ಹುಷಾರಿನಲ್ಲಿದ್ದರೂ ಸಾಲದು ಈ ಸಮಯದಲ್ಲಿ.

ಇಂಥದ್ದೇ ಒಂದು ರಾತ್ರಿಯಲ್ಲಿ ಅಮ್ಮ ಹಳೇಬರಗಾಲಿನ ಅತ್ತೆಯ ಅಪ್ಪನ ಮನೆಯ ಕಟ್ಟೆಯ ತುದಿಯಲ್ಲಿ ಕೂತು ನೆಂಟರೊಬ್ಬರ ಮಗುವನ್ನು ಎತ್ತಿಕೊಂಡು ಆಡಿಸುತ್ತಿದ್ದಳು. ಆಗ ರಾತ್ರಿ 8.30 ಸಮಯವಾಗಿತ್ತು. ಎದುರಿಗೆ ದೊಡ್ಡದಾದ ಅಡಕೆ ರಾಶಿ. ನೆಂಟರಿಷ್ಟರೆಲ್ಲ ಕತೆಹೇಳುತ್ತ ಪಕ್ಕದಲ್ಲೇ ಕುಳಿತಿದ್ದರೆ ಕೆಲವರು ಅಡಕೆ ಸುಲಿಯುತ್ತಲೇ ಕತೆ ಹೇಳುತ್ತಿದ್ದರು. ಅವರ ಕತೆಗಳಲ್ಲಿ ಇಡೀ ದೇಶದ, ಜಗತ್ತಿನ ಎಲ್ಲ ಆಗುಹೋಗುಗಳೂ ಆ ಅಂಗಳದಲ್ಲೇ ನಡೆಯುತ್ತಿವೆಯೇನೋ ಎಂಬಂತೆ ನುಸುಳುತ್ತಿದ್ದವು.

ಅಮ್ಮ ಮಗುವನ್ನು ಎತ್ತಿ ತೊಡೆಯಮೇಲೆ ಮಲಗಿಸಿಕೊಂಡು ಆಡಿಸುತ್ತಿದ್ದಳು. ಆಗಲೇ ಅಮ್ಮನ ಸೀರೆ ಒಳಗಿಂದ ಏನೋ ಹರಿದ ಅನುಭವ. ತಕ್ಷಣ ಅಮ್ಮ ಅದನ್ನು ಸೀರೆ ಸಮೇತವೇ ಬರಗಿ ಗಟ್ಟಿಯಾಗಿ ಹಿಡಿದುಕೊಂಡಳು. ಕೈಲಿದ್ದ ಮಗುವನ್ನು ಪಕ್ಕದಲ್ಲಿದ್ದ ಮತ್ತೊಬ್ಬ ಅತ್ತೆಗೆ, `ಏಯ್, ಮೊದ್ಲು ಮಗುನ ತಗಾ. ಎನ್ನ ಸೀರೆ ಒಳಗೆ ಎಂಥದ್ದೋ ಹತ್ಯಕ್ಯಂಡಿದ್ದು’ ಎಂದು ಕೊಟ್ಟಳು. ಹಾಗೆ ಅವಳು ಗಬಕ್ಕನೆ ಅದನ್ನು ಹಿಡಿದ ಪರಿಣಾಮ ಒಳಗಿದ್ದ ಜೀವ ವಿಲವಿಲ ಒದ್ದಾಡತೊಡಗಿತು. ಯಾವಾಗ ಅದು ಒದ್ದಾಡ ತೊಡಗಿತೋ ಆಗ ಅಮ್ಮನಿಗೆ ಭಯವಾಗಿ ಥಟ್ಟೆಂದು ಅದನ್ನು ಬಿಟ್ಟೇ ಬಿಟ್ಟಳು. ಹಾಗೆ ಬಿಟ್ಟ ಕೂಡಲೇ ಗಪ್ಪೆಂದು ಅಮ್ಮನ ತೊಡೆಗೆ ಅದು ಗಟ್ಟಿಯಾಗಿ ಕಚ್ಚಿಕೊಂಡುಬಿಟ್ಟಿತು.

ಅಮ್ಮ ಚಿಟ್ಟನೆ ಚೀರಿದಳು. ಅಸಾಧ್ಯ ಉರಿ. ಸಂಕಟ. ಏನಾಯಿತು ಎಂದು ತಿಳಿಯದಂಥ ಅನುಭವ. ಅದು ಹಾವೇ ಇರಬಹುದು ಎಂಬ ಭಯ. ತಕ್ಷಣ ಸೀರೆ ಎಲ್ಲ ಬಿಚ್ಚಿ ಒಗಾಯ್ಸಿದಳು. ಉರಿ ತಾಳಲಾರದೆ ತಕತಕನೆ ಕುಣಿಯಲಾರಂಭಿಸಿದಳು. ಏನು ಕಚ್ಚಿತು, ಏನಾಯ್ತು ಎಂದು ಎಲ್ಲರಿಗೂ ಗಾಬರಿ. ಏನೋ ಆಯ್ತು ಎಂಬುದಷ್ಟೇ ಎಲ್ಲರಿಗೂ ತಿಳಿದದ್ದು. ನೆಂಟರಿಷ್ಟರೆಲ್ಲ ಒಂದಾದರು. ಹೆಂಗಸರೆಲ್ಲ ಅಮ್ಮನ ಸುತ್ತ ಗುಂಪು ಸೇರಿದರು. ಅಮ್ಮನಿಗೆ ಅಸಾಧ್ಯ ಉರಿ. ತಡೆಯಲಾಗುತ್ತಿಲ್ಲ. ಹೀಗೆ ಉರಿ ತಡೆದುಕೊಳ್ಳಲಾಗದೇ ಎಚ್ಚರ ತಪ್ಪಿ ಬಿದ್ದಳು ಕೂಡ. ತಕ್ಷಣ ಅವಳಿಗೆ ನೀರು ಹಾಕಿ ಉಪಚಾರ ಮಾಡಿದರು. ಯಾರೋ ಸೀರೆಯನ್ನು ಮೇಲಿಂದ ಹೊದೆಸಿದರು. ಎ

ಚ್ಚರಾದರೂ ಅವಳಿಗೆ ಉರಿ ತಡೆಯಲಾಗುತ್ತಿಲ್ಲ. ಬಿದ್ದು ಬಿದ್ದು ಒದ್ದಾಡತೊಡಗಿದಳು. ಎಲ್ಲರೂ ಏನು ಕಚ್ಚಿರಬಹುದು ಎಂದು ಅತ್ತ ಇತ್ತ ಹುಡುಕಾಡತೊಡಗಿದರು. ಅಡಕೆ ಗೊನೆಗಳನ್ನು ಸರಿಸಿದರು. ಮೆತ್ತು, (ಮಹಡಿ) ಜಗುಲಿ, ಅಡುಗೆ ಮನೆ, ಹೀಗೆ ಎಲ್ಲೇ ಏನೇ ಹುಡುಕಿದರೂ ಏನೂ ಕಾಣಿಸುತ್ತಿಲ್ಲ. ಅಮ್ಮ ಆ ನೋವಲ್ಲೇ ‘ಎಂಥದ್ದೋ…ಉದ್ದವಾಗಿದ್ದ ಹಾಗೆ ಅನುಭವವಾತು. ಬಹುಶಃ ಹಾವಿದ್ದಿಕ್ಕಾ…’ಎಂದು ನರಳುತ್ತಲೇ ಕೇಳಿದಳು. ಅಯ್ಯೋ… ಹಾವಿರಬಹುದಾ… ಕೆಲವರಿಗೆ ಅನುಮಾನ. ಅಮ್ಮನಿಗೂ ಅನುಮಾನ… ‘ಇಲ್ಯಪ… ಹಾವಿರಲಿಕ್ಕಿಲ್ಲ… ಅದಾಗಿದ್ದರೆ ನಂಜು ಏರಿ ಇಷ್ಟೊತ್ತಿಗೆ ನೀನು ಸತ್ತೇ ಹೋಗುತ್ತಿದ್ದೆ’ ಎಂದು ಯಾರೋ ಒಬ್ಬರು ಹೇಳಿದರು.

ಮತ್ತೊಬ್ಬ ಅತ್ತಿಗೆ ಬಂದು ‘ಎಲ್ಲಿ, ನೋಡನ, ಕಚ್ಚಿದ ಜಾಗ ತೋರಸು, ಎಂಥ ಕಚ್ಚಿಕ್ಕು ಎಂದು ಒಂದು ಅಂದಾಜಾದ್ರೂ ಸಿಗ್ತು..’ ಎಂದರು. ನಾಚಿಕೊಳ್ಳಬೇಡ, ಎಲ್ಲರೂ ಇಲ್ಲಿ ಹೆಂಗಸರೇ ಇದ್ದಾರೆ ತೋರಿಸು ಎಂದರು. ಅಮ್ಮನಿಗೆ ಆ ಉರಿಯ ಸಂಕಟದಲ್ಲಿ ನಾಚಿಕೆ ಪೀಚಿಕೆ ಎಲ್ಲ ಏನು. ಮೊದ್ಲು ಉರಿಯ ತಾಪ ಕಡಿಮೆಯಾದರೆ ಸಾಕು ಎಂದಿತ್ತು. ಅಲ್ಲಿ ಕೆಂಪಗೆ ಕಚ್ಚಿದ ಗುರುತು. ಅಷ್ಟರಲ್ಲಾಗಲೇ ಕಚ್ಚಿದ್ದು ದಪ್ಪವಾಗಿ ಅಂಗೈ ಅಗಲದಷ್ಟು ದಪ್ಪಗೆ ಊದಿಕೊಂಡುಬಿಟ್ಟಿತ್ತು. ಒಬ್ಬರು ಅದು ಉರಿಚಟ್ಟೆ ಮರಿ ಇರಬಹುದು ಎಂದರೆ, ಇಲ್ಲ ಇಲ್ಲ ಉರಿಚಟ್ಟೆ ಮರಿ ಕಚ್ಚಿದರೆ ಇಷ್ಟು ದೊಡ್ಡ ಗಾಯವಾಗುವುದಿಲ್ಲ, ಇಷ್ಟೆಲ್ಲ ಉರಿಯುವುದೂ ಇಲ್ಲ ಎಂದರು. ಮತ್ತೊಬ್ಬರು ಚೊರಟೆ ಇರಬಹುದು, ಅಥವಾ ತಪ್ಸಿಮರಿ ಇರಬಹುದು ಹೀಗೆ ಒಬ್ಬೊಬ್ಬರು ಒಂದೊಂದು ಬಾಯಿಗೆ ಬಂದದ್ದನ್ನು ಹೇಳತೊಡಗಿದರು.

‘ಅಯ್ಯೋ…ಎಂತಾರಾ ಆಗ್ಲೀ…ಎಂಗೆ ಉರಿಗೇನಾದ್ರೂ ಔಷಧ ಮಾಡ್ರೇ..’ ಎಂದು ಅಮ್ಮ ಕಿರುಚಿದಳು. ಅಷ್ಟೊತ್ತಿಗೆ ಹಾವಾಗ್ಲೀ… ಚೇಳಾಗ್ಲೀ.. ಏನೇ ಕಚ್ಚಿದ್ರೂ ಮಳುಗುಳಿ ಔಷಧ ನೀಡಿದ್ರೆ ಎಲ್ಲ ಗುಣವಾಗುತ್ತದೆ, ನೋವೂ ಕಡಿಮೆಯಾಗುತ್ತದೆ, ನಂಜೂ ಹೋಗುತ್ತದೆ. ಏನಾದ್ರೂ ಅದರಿಂದ ವಿರೋಧವಂತೂ ಇಲ್ಲ ಎಂದು ಯಾರನ್ನೂ ಮಳುಗುಳಿಗೆ ಅಟ್ಟಿದರು.

ಮಳುಗುಳಿ ಇಟಗಿ ಸಮೀಪದ ಒಂದು ಹಳ್ಳಿ. ಆ ಭಾಗದಲ್ಲೆಲ್ಲ ಹಾವು ಕಚ್ಚಿದ್ದಕ್ಕೆ ಔಷಧ ಕೊಡಲು ತುಂಬ ಪ್ರಸಿದ್ಧಿ ಪಡೆದಿದ್ದ ಮನೆತನವೊಂದು ಅಲ್ಲಿತ್ತು. ಈಗಲೂ ಅಲ್ಲಿ ಇದಕ್ಕೆ ಔಷಧ ಕೊಡುತ್ತಾರೆ. ಅಲ್ಲಿ ಸುತ್ತಮುತ್ತ ಇರುವ ಹಳ್ಳಿಗಳಲ್ಲಿ ಯಾರಿಗೇ ಹಾವು ಕಚ್ಚಿದರೂ ಮಳುಗುಳಿಗೇ ಬಂದು ಔಷಧ ತೆಗೆದುಕೊಂಡು ಹೋಗುತ್ತಿದ್ದರು. ಹಾಗಾಗಿ ಮಳುಗುಳಿ ಔಷಧ ತಗಂಡ್ರೆ ಸಾಕು, ಎಂಥ ವಿಷಜಂತು ಕಚ್ಚಿದ್ರೂ ಸಾಕು, ತಕ್ಷಣ ಇಳಿದು ಹೋಗುತ್ತದೆಂದು ಆ ಭಾಗದಲ್ಲಿ ಹೆಸರು ಮಾತಾಗಿತ್ತು.

ಹಾಗಾಗಿ ಅಮ್ಮನಿಗೆ ಏನು ಬೇಕಾದ್ರೂ ಕಚ್ಚಲಿ, ಅದರ ವಿಷ ಇಳಿಸಲೆ ಇದೇ ಮದ್ದು ಎಂದು ಮಳುಗುಳಿಗೆ ಜನರನ್ನು ಅಟ್ಟಿದ್ರು. ಅಂದರೆ ಬಹುತೇಕ ಜನರ ಮನಸ್ಸಲ್ಲಿ ಅದು ಹಾವೇ ಎಂದು ನಿರ್ಧರಿಸಿದ ಹಾಗಿತ್ತು. ಕೆಲವರಂತೂ ಪಾಪ… ಹೀಗಾಗಕಾಗಿತ್ತಿಲ್ಲೆ… ಎಂದು ಲೊಚಗುಟ್ಟಿದರೆ, ಆ ಮನೆಯ ಅಜ್ಜಿ, ಪಾಪ. ಇಲ್ಲಿ. ಎಮ್ಮನಿಗೆ ಬಂದು ಹೀಗಾಗ್ಹೋತು… ಎಂದು ಪರಮಾತ್ಮಾ… ಅದಕ್ಕೆ ಹುಶಾರು ಮಾಡು.. ಎಮ್ಮನಿಗೆ ಹೆಂಗ ಬೈಂದೋ… ಹಂಗೇ ಅದು ಹೋಗುವು ಹುಷಾರಾಗಿ. ಎಂದು ದೇವರಲ್ಲಿ ಪ್ರಾರ್ಥನೆ ಕೂಡ ಮಾಡಿದ್ರು.

scorpion1ಮನೆಯ ಅಜ್ಜ, ಅದೇನೋ ಮಂತ್ರಿಸಿ ತಂದು ಅಮ್ಮನ ತಲೆಗೂ ಹಾಕಿದ. ಇಷ್ಟಾದ್ರೂ ಅಪ್ಪನ ಪಟ್ನಕ್ಕೆ ಈ ವಿಷಯ ಗೊತ್ತಾಗಲೇ ಇಲ್ಲ. ಅಪ್ಪ ಯಾರ ಹತ್ತಿರವೋ ಕತೆ ಹೊಡೆಯುತ್ತ ಕೂತಿದ್ದ. ಇಲ್ಲಿನ ಹೆಂಗಸರು ಹಾಗೂ ಮನೆಯ ಗಂಡಸರಿಗೆ ಮಾತ್ರ ಇದರ ಅರಿವಿದ್ದದ್ದು. ಹೀಗೆ ಅಮ್ಮ ಒದ್ದಾಡುತ್ತಿರುವಾಗ, ಎಲ್ಲರೂ ಏನು ಮಾಡಬೇಕು ಎಂದು ತಪತಪನೆ ಓಡಾಡುತ್ತಿರುವಾಗ, ನೂರೆಂಟು ಔಷಧ ಕೊಡುತ್ತಿರುವಾಗ ರಾತ್ರಿ ಗಂಟೆ 11 ಆಗಿತ್ತು.

ಆಗ ಕಣ್ಣಿಗೆ ಬಿತ್ತು ಅಮ್ಮನಿಗೆ ಕಚ್ಚಿದ ಅತಿಥಿ. ಜಗುಲಿಯಲ್ಲಿರುವ ಮೆತ್ತಿಗೆ (ಮಹಡಿಗೆ) ಹೋಗುವ ಏಣಿಮೆಟ್ಟಿಲ ಮೇಲೆ ಕೆಂಪಗೆ ಬಣ್ಣ ಬಣ್ಣದ ಚೇಳು, ಹಣ್ಣಡಿಕೆ ಚೇಳು. ಮೇಲಕ್ಕೆ ನಿಧಾನಕ್ಕೆ ಹರಿದುಕೊಂಡು ಹೋಗುತ್ತಿತ್ತು. ಅದನ್ನು ನೋಡಿದ ತಕ್ಷಣ ಯಾರೋ ಕಿರುಚಿಕೊಂಡರು. ‘ಅಯ್ಯೋ… ಹಣ್ಣಡಿಕೆ ಚೇಳು’ ಎಂದು. ತಕ್ಷಣ ಎಲ್ಲರೂ ಒಂದಾದರೂ. ‘ಓ… ಇದೇ ಹಾಗಿದ್ದರೆ ಮೀನಕ್ಕಯ್ಯಂಗೆ ಕಚ್ಚಿದ್ದು’ ಎಂದು ತಕ್ಷಣ ಹೊಡೆದರು ಕೂಡ. ಹೊಡೆದು ಕೋಲೊಂದಕ್ಕೆ ಸಿಕ್ಕಿಸಿಕೊಂಡು ಉದ್ದಕ್ಕೆ ಅಲ್ಲಾಡಿಸುತ್ತ ಅಮ್ಮನ ಮುಂದೆ ಹಿಡಿದು, ‘ಇದೆಯಾ… ನೋಡು ನಿಂಗೆ ಕಚ್ಚಿದ್ದು’ ಎಂದರು.

ಅದನ್ನು ನೋಡಿದ ಅಮ್ಮನಿಗೆ ಮತ್ತಷ್ಟು ಉರಿ ಹೆಚ್ಚಾಗಿ ನಡುಗಿದಳು. ಅಷ್ಟೊತ್ತಿಗೆ ಅವಳ ಸಂಕಟ ಕಡಿಮೆಯಾಗಲೆಂದು, ಆ ಪಾನಕ, ಈ ಪಾನಕ, ಯಾವ್ಯಾವುದೋ ಕಷಾಯಗಳು, ನಂಜಿನ ಬೇರು … ಹೀಗೆ ಒಂದೈವತ್ತು ಥರದ ಔಷಧಗಳನ್ನು ಮಾಡಿ ಅಮ್ಮನಿಗೆ ಕುಡಿಸಿದ್ದರು. ಜೊತೆಗೆ ಮಳುಗುಳಿಗೆ ಹೋಗಿದ್ದವ ಮಳುಗುಳಿ ಬೇರನ್ನೂ ತಂದ. ಅದನ್ನೂ ತೇಯ್ದು ಅಮ್ಮನಿಗೆ ಕುಡಿಸಿದರು. ಹೀಗೆ ಇವೆಲ್ಲವೂ ಒಟ್ಟು ಸೇರಿ ಅಮ್ಮನಿಗೆ ವಾಂತಿ. ಭೇದಿ ಪ್ರಾರಂಭವಾಯಿತು. ವಾಂತಿಯಾಗಿದ್ದು ನಿಲ್ಲಿಸಲೇ ಆಗುತ್ತಿಲ್ಲ.

ಒಂದೆಡೆ ವಾಂತಿ, ಮತ್ತೊಂದೆಡೆ ಉರಿ ಎರಡೂ ಸೇರಿ ಅಮ್ಮ ಮತ್ತಷ್ಟು ಸುಸ್ತಾದಳು. ಅಲ್ಲಿ ಕೂರಲು ಕೂಡ ಶಕ್ತಿ ಇಲ್ಲದವಳಂತೆ ಹಾಗೆಯೇ ಹಾಸಿಗೆಗೆ ಒರಗಿದಳು. ಅಷ್ಟೊತ್ತಿಗೆ ಅಪ್ಪನಿಗೆ ವಿಷಯ ಗೊತ್ತಾಯಿತು. ಅಪ್ಪ ವಿಚಾರಿಸಲು ಅಮ್ಮನ ಬಳಿ ಬಂದ. ಅಪ್ಪನ ಮುಖ ನೋಡಿದವಳೇ ಅಮ್ಮನಿಗೆ ದುಃಖ ಉಮ್ಮಳಿಸಿ ಬಂತು. ಅದುವರೆಗೆ ತನ್ನವರು ಎಂಬವರು ಯಾರೂ ಇಲ್ಲ, ನೀನೊಬ್ಬನೇ ಜಗತ್ತಿನಲ್ಲಿ … ಎಂಬಂತೆ ಅಪ್ಪನನ್ನು ನೋಡಿ ಒಂದೇ ಸಮನೆ ಅಳತೊಡಗಿದಳು. ಅಪ್ಪ, ಈ ನಾಟಿ ಔಷಧಗಳೆಲ್ಲ ಸಾಕು, ಸೀದ ಅವಳನ್ನು ಸಿದ್ದಾಪುರಕ್ಕೆ ಕರೆದುಕೊಂಡು ಹೋಗಬೇಕು. ಹಾರ್ಸಿಮನೆ ಡಾಕ್ಟರ್ ಹತ್ರ ಔಷಧ ನೀಡಿದ್ರೇ ಇದು ಸರಿಹೋಗುತ್ತದೆ ಎಂದ. ಇದಕ್ಕೆ ಒಂದು ಇಂಜಕ್ಷನ್ ಬಿದ್ರೇನೇ ಸರಿ ಎಂದ.

ಆಗ ಶುರುವಾಯಿತು ಗೊಂದಲ. ಅಷ್ಟೊತ್ತಿಗೆ ರಾತ್ರಿ 10 ಗಂಟೆ ದಾಟಿತ್ತು. ಹಳೇಬರಗಾಲಕ್ಕೆ ಡೈರೆಕ್ಟ್ ಬಸ್ಸಿರಲಿಲ್ಲ. ವಂದಾನೆ ಎಂಬುದೊಂದು ಸಣ್ಣ ಊರು. ಅಲ್ಲಿಗೆ ಬರುವ ಬಸ್ಸು ಹಳೇಬರಗಾಲಕ್ಕೆ ಬಂದು ಹೋಗುತ್ತಿತ್ತು. ಸಿದ್ದಾಪುರದಿಂದ ವಂದಾನೆಗೆ ಬೆಳಗ್ಗೆ, ಮದ್ಯಾಹ್ನ ಮತ್ತು ಸಂಜೆ 7 ಗಂಟೆಗೆ ಬಸ್ಸಿತ್ತು. ಅಷ್ಟೊತ್ತಿಗೆ ಕಡೆಯ ಬಸ್ಸು ಬಂದು ಹೋಗಿತ್ತು. ಆ ಊರಲ್ಲಿ ಯಾರ ಮನೆಯಲ್ಲೂ ಸೈಕಲ್ಲು ಬಿಟ್ಟರೆ ಇನ್ಯಾವ ವಾಹನಗಳೂ ಇಲ್ಲ.

ಮತ್ತೆ ಹೇಗೆ ಅಮ್ಮನನ್ನು ಕರೆದುಕೊಂಡು ಸಿದ್ದಾಪುರಕ್ಕೆ ಹೋಗುವುದು? ಮಾರನೆ ದಿನ ಬೆಳಗಾಗುವವರೆಗೆ ಕಾಯುವುದು ಅಮ್ಮನಿಂದ ಸಾಧ್ಯವಿಲ್ಲದ ಮಾತಾಗಿತ್ತು. ಇವೆಲ್ಲವೂ ಸೇರಿ ಅಮ್ಮನ ದುಃಖ ಹೆಚ್ಚುತ್ತಿತ್ತು. ಈ ಉರಿಯಲ್ಲೇ ತಾನು ಸತ್ತೇ ಹೋಗುತ್ತೇನೇನೋ ಎಂದೆನಿಸಿದರೆ ಸುಳ್ಳಾಗಿರಲಿಲ್ಲ. ಅಮ್ಮನ ಅಳು ನೋಡಿ ಅಲ್ಲಿರುವ ಹೆಂಗಸರಿಗೂ ಅಳು ಬರುವಂತಾಗಿತ್ತು. ಕೆಲವರು ಅತ್ತೂ ಬಿಟ್ಟರು. ಅವರು ಅಳುವುದನ್ನು ನೋಡಿ ಅಮ್ಮನಿಗೂ ಅಳು ಹೆಚ್ಚುತ್ತಿತ್ತು.

ಹೀಗೆ ಆದಾಗ ಅಲ್ಲೆಲ್ಲೋ ಇದ್ದ ಹಾಲಿನ ಡೈರಿಗೆ ಹೋಗುತ್ತಿದ್ದ ಹಾಲಿನ ವ್ಯಾನ್ ಇದೆ ಎಂದರು. ಸರಿ, ಅದನ್ನೇ ಕರೆಸಿ ಎಂದಾಯಿತು. ಇಷ್ಟೆಲ್ಲ ಮಾತುಕತೆಯಾಗುವ ಹೊತ್ತಿಗೆ ರಾತ್ರಿ ಗಂಟೆ 11 ಆಗಿತ್ತು. ಅದನ್ನು ತರಲೂ ಒಬ್ಬನ್ನು ಕಳಿಸಲಾಯಿತು. ಅವನು ಆ ರಾತ್ರಿ ಸೈಕಲ್ಲೇರಿ ಅಲ್ಲಿಗೆ ಹೋಗಿ ಬರುವಷ್ಟರಲ್ಲಿ ರಾತ್ರಿ 12 ಆಗಿತ್ತು. ಆ ಉರಿಯಲ್ಲೇ ಒದ್ದಾಡುತ್ತ ಅಮ್ಮ ವ್ಯಾನು ಏರಿದಳು. ಅದರಲ್ಲೇ ಅಪ್ಪ, ಮಾವ, ಅತ್ತೆ ಎಲ್ಲರೂ ಬಂದರು. ರಾತ್ರಿ 2 ಗಂಟೆ ಸುಮಾರಿಗೆ ಸಿದ್ದಾಫುರಕ್ಕೆ ಬಂದು, ಸೀದಾ ಡಾಕ್ಟರ್ ಹತ್ತರ ಹೋಗಿ ಇಂಜಕ್ಷನ್ ಹಾಕಿಸಿಕೊಂಡು ಮನೆಗೆ ಬಂದರು. ಆಗ ನಾನು ಅಣ್ಣ ಇಬ್ಬರೂ ನಿದ್ದೆ ಹೋಗಿದ್ದೆವು. ನಿದ್ದೆಗಣ್ಣಿನಲ್ಲೇ ಬಾಗಿಲು ತೆರೆದದ್ದನ್ನು ನೋಡಿದೆ. ಅಮ್ಮ ಸುಸ್ತಾಗಿದ್ದಳು. ಅಪ್ಪ ಅಮ್ಮನನ್ನು ಹಿಡಿದುಕೊಂಡು ಬಂದು ಮಲಗಿಸಿದ. ಅಮ್ಮ ನರಳುತ್ತಲೇ ನಿದ್ದೆ ಹೋದಳು.

ಅಪ್ಪ ಆ ರಾತ್ರಿಯೇ ನನ್ನ ಎಬ್ಬಿಸಿ ‘ಕೂಸೇ… ಅಮ್ಮನಿಗೆ ಹುಷಾರಿಲ್ಲೆ’ ಎಂದ. ‘ಹೂಂ. ಅವಳನ್ನು ನೋಡಿದಾಗ ಅನಿಸ್ತು. ಎಂತಾಯ್ದು’ ಎಂದು ಕೇಳಿದೆ. ಅಮ್ಮನಿಗೆ ಹಣ್ಣಡಿಕೆ ಚೇಳು ಕಚ್ಚಿತು ಎಂದ. ಹಾಂ… ಎಂದು ಛಟ್ಟನೆ ಎದ್ದು ಕೂತೆ. ನನಗೇ ಚೇಳು ಕಡಿದಂತೆ ಗಾಬರಿಯಾಗಿತ್ತು. ಈ ಚೇಳು, ಹಾವುಗಳೆಲ್ಲ ಅವರಿಗೆ ಕಚ್ಚಿತ್ತು, ಇವರಿಗೆ ಕಚ್ಚಿತ್ತು ಎಂದೆಲ್ಲ ಸುದ್ದಿ ಕೇಳುತ್ತಿದ್ದರೂ ಇವೆಲ್ಲ ನಮ್ಮ ಹತ್ತಿರ ಬರುವುದಿಲ್ಲ ಎಂಬುದು ನಮ್ಮ ನಂಬಿಕೆ. ಅಷ್ಟೇ ಏಕೆ, ಆ್ಯಕ್ಸಿಡೆಂಟ್ ಗಳು ಕೂಡ. ಯಾರ್ಯಾರಿಗೋ ಆಗುತ್ತದೆಂದು ಸುದ್ದಿ ಕೇಳುತ್ತೇವೆ. ಇವೆಲ್ಲ ನಮಗೆ ಆಗೋದಿಲ್ಲ ಎಂದೇ ಅಂದುಕೊಂಡು ಬಿಡುತ್ತೇವೆ. ನಮಗೇ ಆದಾಗ… ಅದು ತರುವ ಆಘಾತ, ನೋವು ಅದನ್ನು ಅಕ್ಷರಗಳಲ್ಲಿ ನಿಜಕ್ಕೂ ಹಿಡಿದಿಡಲು ಕಷ್ಟವಾಗುತ್ತದೆ.

ಅಂದು ಅದುವರೆಗೆ ಹಾವು, ಚೇಳುಗಳನ್ನು ಅದೆಷ್ಟು ಸಲ ನೋಡಿದ್ರೂ ಏನೂ ಅನಿಸುತ್ತಿರಲಿಲ್ಲ. ಬಣ್ಣದ ಚೇಳಿಗೆ ಹಣ್ಣಡಿಕೆ ಚೇಳಂತಲೂ, ಕಪ್ಪು ಚೇಳಿಗೆ ಕಾಯಡಿಕೆ ಚೇಳಂತಲೂ ಹೇಳುತ್ತಿದ್ದರು. ಅದ್ರಲ್ಲೂ ಹಣ್ಣಡಿಕೆ ಚೇಳು ಲಕ್ಷ್ಮೀ ಹಾರವಂತೆ ಅದು. ಹಾಗಾಗಿ ಅದು ಬಂದರೆ ಮನೆಯೊಳಗೆ ಸಾಕ್ಷಾತ್ ಲಕ್ಷ್ಮಿಯೇ ಬಂದ್ಹಾಗೆ. ಅದಕ್ಕೆ ಅದನ್ನು ಕೊಲ್ಲಬಾರದಂತೆ ಎಂದೆಲ್ಲ ಹಿರಿಯ ಹೆಂಗಸರು ಹೇಳುತ್ತಿದ್ದರು. ಹೌದೌದು… ಅದು ಕಚ್ಚಿದರೆ ಗೊತ್ತಾಗುತ್ತದೆ, ಲಕ್ಷ್ಮೀ ಹಾರವಾ… ಮತ್ತೆಂಥದ್ದಾ ಎಂದು ಎಂದು ಅದನ್ನು ಕಚ್ಚಿಸಿ ನೋವು ತಿಂದಿದ್ದ ಅಜ್ಜ ಬೈದಿದ್ದ ನೆನಪೂ ಒಮ್ಮೆ ಹಾದು ಹೋಯಿತು ಆಗ. ‘ಅಪ್ಪ, ಉರಿಯೆಲ್ಲ ಕಡಿಮೆ ಆಯ್ದು. ಆದ್ರೆ ಸುಸ್ತು ರಾಶಿ ಇದ್ದು ಅಮ್ಮಂಗೆ. ಸುಮಾರು ಇಷ್ಟುದ್ದ ಇತ್ತು ಚೇಳು’ ಎಂದು ಕೈ ಅಗಲ ಮಾಡಿ, ಕಿರುಬೆರಳಿನಿಂದ ಹೆಬ್ಬರಳಿನವರೆಗೆ ಅಳತೆ ತೋರಿಸಿ ಹೇಳಿದ ಅಪ್ಪ. ಅಬ್ಬಾ ಎಂದು ಮೈ ನಡುಗಿ, ಹಾಗೇ ಅದನ್ನು ಕೇಳುತ್ತಲೇ ನಿದ್ದೆ ಹೋದೆ. ರಾತ್ರಿಯೆಲ್ಲ ಅದು ಚೇಳಾ… ಲಕ್ಷ್ಮೀ ಹಾರವಾ… ಅಮ್ಮನ ಉರಿಯಾ… ನಮ್ಮನೆಗೆ ಲಕ್ಷ್ಮೀ ಬರ್ತಾಳಾ… ಹೀಗೆ ಏನೇನೋ… ಕನಸುಗಳು.

ಮಾರನೇ ದಿನ ಬೆಳಗ್ಗೆ ಎದ್ದದ್ದು ತಡವಾಗಿ. ಅಮ್ಮನೂ ತಡವಾಗಿಯೇ ಎದ್ದಿದ್ದಳು. ಅಪ್ಪ ಅಮ್ಮನ ಬಳಿ ಕುಳಿತು ಅವಳ ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದ. ನಾನೂ ಹೋಗಿ ಕುಳಿತೆ. ಹೇಗಿದೆ ಉರಿ. ಲಕ್ಷ್ಮೀ ಹಾರ ಏನಂತು ಎಂದು ತಮಾಷೆ ಮಾಡಿದೆ. ಕ್ಷೀಣವಾಗಿ ನಕ್ಕಳು ಅಮ್ಮ. ತಕ್ಷಣ ‘ಪಾಪ. ಆ ಶಿಶುವನ್ನು ಎತ್ಕ್ಯಂಡಿಯಿದ್ದಿ. ಸದ್ಯ ಅದಕ್ಕೊಂದು ಕಚ್ಚಿದ್ದಿಲ್ಲೆ ಚೇಳು. ಅದಕ್ಕೇನಾದ್ರೂ ಕಚ್ಚಿಬಿಟ್ಟಿದ್ರೆ ಅಲ್ಲೇ ಅದು ಸತ್ತೇ ಹೋಗ್ತಿತ್ತು. ಸದ್ಯ ಎಂಗೇ ಕಚ್ಚಿತು. ಆನು ಎಷ್ಟೇ ಆದ್ರೂ ನೋವು ತಡ್ಕತ್ತಿ…’ ಎಂದಳು. ಅದನ್ನು ಕೇಳಿದ ತಕ್ಷಣ ಅಣ್ಣ ಈ ಚೇಳಿನ ಕುರಿತು ಇಂಗ್ಲೀಷ್ ಕವಿಯೊಬ್ಬ ಕವನ ಬರೆದಿದ್ದಾನೆ. ಅದು ಕೂಡ ಹೀಗೇ ಇದೆ. ಆ ತಾಯಿ ಕೂಡ ಸದ್ಯ ನನ್ನ ಮಕ್ಕಳಿಗೆ ಕಚ್ಚಲಿಲ್ಲವಲ್ಲ ಎಂದು ಬರೆದಿದ್ದನ್ನು ನೆನಪಿಸಿಕೊಂಡ.

ಅಮ್ಮ ತನ್ನ ಮಕ್ಕಳಿಗಲ್ಲ, ಬೇರೆ ಯಾರೇ ಮಕ್ಕಳಿಗೂ ಇದು ಕಡಿದರೂ ನೋವು ಅನುಭವಿಸುತ್ತಾಳೆ. ಅಮ್ಮ ಅಮ್ಮನೇ.!
ಇದೆಲ್ಲ ನೆನಪಾಗಿದ್ದು ಮೊನ್ನೆ ಇದೇ ಅವಧಿಯಲ್ಲಿ ವಿದ್ಯಾ ಅವರ ಚೇಳು ರಾತ್ರಿ ಕವನ ಓದಿದಾಗ. ಮತ್ತೊಮ್ಮೆ ಅಮ್ಮನಿಗೆ ಚೇಳುಕಚ್ಚಿದ ಆ ಅನುಭವ ನನ್ನೊಳಗಿಟ್ಟುಕೊಟ್ಟುಕೊಳ್ಳಲು ಸಾಧ್ಯವೇ ಆಗದೇ ಆ ಅನುಭವಗಳನ್ನೆಲ್ಲ ಬರೆದೆ.

‍ಲೇಖಕರು admin

August 8, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Shama, Nandibetta

    “ಅಮ್ಮ ತನ್ನ ಮಕ್ಕಳಿಗಲ್ಲ, ಬೇರೆ ಯಾರೇ ಮಕ್ಕಳಿಗೂ ಇದು ಕಡಿದರೂ ನೋವು ಅನುಭವಿಸುತ್ತಾಳೆ. ಅಮ್ಮ ಅಮ್ಮನೇ.!”

    ನಿಜ, ಭಾರತಿ. ಆಪ್ತ ಬರಹ

    ಪ್ರತಿಕ್ರಿಯೆ
  2. Anonymous

    ನಿಜ ಭಾರತಿ ಅವರೆ,ಅಮ್ಮ ಅಮ್ಮನೆ. ಬೇರೆಯವರ ನೋವು ನುಂಗುವುದೂ ಅವರ ಸಹಜ ಧರ್ಮ. ಬಹಳ ಚೆನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: