ಇದು ಆಕೆಯ ಕಥೆ: ಏರಿಳಿದರು ಓಶೋ-ಶೀಲಾ

ಪ್ರಸಾದ್ ನಾಯ್ಕ್

3

ನೆಟ್-ಫ್ಲಿಕ್ಸ್ ಈಚೆಗೆ ಬಿತ್ತರಿಸಿದ್ದ ಡಾಕ್ಯುಮೆಂಟರಿಯ ಸಂಗತಿಗಳು ಹಾಗಿರಲಿ.

ಮಾ ಆನಂದ್ ಶೀಲಾ ತನ್ನ ಡೋಂಟ್ ಕಿಲ್ ಹಿಮ್ ಎಂಬ ಬೆಸ್ಟ್ ಸೆಲ್ಲರ್ ಕೃತಿಯಲ್ಲಿ ತನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸುವಂತಿನ ಧಾಟಿಯಲ್ಲಿ ಹಲವು ವಿವಾದಾತ್ಮಕ ವಿಚಾರಗಳನ್ನು ದಾಖಲಿಸಿರುವುದು ಅವರಿಗೆ ಅದೆಷ್ಟರ ಮಟ್ಟಿಗೆ ಉಪಯೋಗವಾಯಿತೋ ದೇವರೇ ಬಲ್ಲ. ಏಕೆಂದರೆ ಜನಪ್ರಿಯತೆ ಮತ್ತು ಕುಖ್ಯಾತಿಯ ವಿಚಾರಕ್ಕೆ ಬಂದರೆ ಶೀಲಾರಿಗೆ ಅಂಥಾ ಯಾವ ಅವಶ್ಯಕತೆಗಳೂ ಇರಲಿಲ್ಲ.

ಮೊದಲೇ ಹೇಳಿರುವಂತೆ 1981 ರಲ್ಲಿ ಒರೆಗಾನ್ ಪ್ರದೇಶದಲ್ಲಿ ನೆಲೆಯೂರಿದ ದಿನದಿಂದಲೂ ಶೀಲಾರ ಹಿಂದೆ ಬಿದ್ದಿದ್ದ ಅಂತಾರಾಷ್ಟ್ರೀಯ ಮಾಧ್ಯಮಗಳು ಇಂದಿನವರೆಗೂ ಅವರ ಬೆನ್ನು ಬಿಟ್ಟಿಲ್ಲ. ಇವೆಲ್ಲವನ್ನೂ ಕೂಡ ರಜನೀಶರ ಆಣತಿಯ ಪ್ರಕಾರವೇ ತಾನು ನಡೆಸಿದ್ದೆ ಎಂದು ಕೃತಿಯಲ್ಲಿ ದಾಖಲಿಸುವ ಶೀಲಾ, ಅಂತೂ ಈ ಗಂಭೀರ ಪ್ರಕರಣಗಳ ಆರೋಪಗಳಲ್ಲಿದ್ದ ಕಟುಸತ್ಯವನ್ನು ಮತ್ತು ಅವುಗಳ ಹಿಂದಿದ್ದ ತನ್ನ ಮುಖ್ಯ ಪಾತ್ರಗಳನ್ನು ಪರೋಕ್ಷವಾಗಿ ಒಪ್ಪಿಕೊಂಡಿರುವುದಂತೂ ಸತ್ಯ.

 

ಇವುಗಳಲ್ಲಿ ಪ್ರಮುಖವಾಗಿ ಎದ್ದು ಕಾಣುವುದು ರಜನೀಶಪುರಂ ಅನ್ನು ಅಮೆರಿಕನ್ ಸಾಂವಿಧಾನಿಕ ಪ್ರಕ್ರಿಯೆಯಲ್ಲಿ ಕಾನೂನು ರೀತಿಯಲ್ಲೇ ಅಧಿಕೃತಗೊಳಿಸಲು ಹೋರಾಡುತ್ತಿದ್ದ ಶೀಲಾರ ದುಸ್ಸಾಹಸಗಳು. ಆದರೆ ಈ ಪ್ರಯತ್ನಗಳ ಹಿಂದಿನ ಕಸರತ್ತುಗಳು ಅದೆಷ್ಟರ ಮಟ್ಟಿಗೆ ನ್ಯಾಯಯುತವಾಗಿದ್ದವು ಎಂಬುದಕ್ಕೆ ಬಹುಷಃ ಇಂದಿಗೂ ಅವರಲ್ಲಿ ಉತ್ತರವಿಲ್ಲ.

ಒರೆಗಾನ್ ಶಹರದ ಕುಡಿಯುವ ನೀರಿನ ಮೂಲಕ್ಕೆ ರಾಸಾಯನಿಕಗಳನ್ನು ಬೆರೆಸಿ ಚುನಾವಣೆಯ ದಿನ ಮತದಾರರ ಸಂಖ್ಯೆಯನ್ನು ಇಳಿಸುವ ಕೃತ್ಯದಿಂದ ಹಿಡಿದು, ಆ ದಿನಗಳಲ್ಲಿ ಒರೆಗಾನ್ ಆಡಳಿತದಲ್ಲಿದ್ದ ಒಂದಿಬ್ಬರು ಪ್ರಮುಖ ಹುದ್ದೆಯ ಸರಕಾರಿ ಅಧಿಕಾರಿಗಳ ಹತ್ಯೆಯ ಸಂಚಿನವರೆಗೂ ಇದು ಮುಂದುವರಿಯುತ್ತದೆ. ಈ ಅವಧಿಯಲ್ಲೇ ವಾಸ್ಕೋ ಕೌಂಟಿಯ ಕಾರ್ಯಾಲಯವೊಂದನ್ನು ಅಗ್ನಿಗೆ ಆಹುತಿಯಾಗಿಸಿ ಸಾಕಷ್ಟು ದಾಖಲೆಗಳನ್ನು ರಜನೀಶರ ಅನುಯಾಯಿಗಳು ನಾಶಗೊಳಿಸಿದ್ದರು.

ಇನ್ನು ಸ್ಥಳೀಯ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ ನಂತರವಂತೂ ತಮ್ಮದೇ ಪೋಲೀಸ್ ಬಲಗಳನ್ನು ಹೊಂದಿದ ರಜನೀಶಪುರಂ ಸಮುದಾಯವು ತಮ್ಮ ಬಳಿಯಿದ್ದ ಅಪಾರ ಸಂಪತ್ತು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ರೈಫಲ್ ಶೂಟಿಂಗ್ ಗಳ ನಿತ್ಯ ಅಭ್ಯಾಸಗಳಿಂದಾಗಿ ಒರೆಗಾನ್ ನಿವಾಸಿಗಳನ್ನು ಅನುದಿನವೂ ಮೃತ್ಯುಭಯದಲ್ಲಿ ಬದುಕುವಂತೆ ಮಾಡುವಲ್ಲಿ ಯಶಸ್ವಿಯಾಗಿತ್ತು.

ಅಂದು ಸಂಜೆಯ ಕಾರ್ಯಕ್ರಮದುದ್ದಕ್ಕೂ ಓಶೋರನ್ನು ಭಗವಾನ್ ಎಂದೇ ಸಂಭೋಧಿಸುತ್ತಿದ್ದ ಶೀಲಾ ಬೇರ್ಯಾವ ಹೆಸರಿನಿಂದಲೂ ಓಶೋರನ್ನು ಸಂಭೋಧಿಸಿರಲಿಲ್ಲ. ಭಗವಾನ್ ರನ್ನು ಕಂಡ ಮೊದಲ ದಿನದಿಂದಲೇ ನಾನು ಪ್ರೀತಿಯಲ್ಲಿ ಬಿದ್ದೆ. ಆ ಭಾವವು ನನ್ನಲ್ಲಿ ಇಂದಿಗೂ ಇದೆ. ಆ ಪ್ರೀತಿಯೇ ರಜನೀಶಪುರಂ ಎಂಬ ಅದ್ಭುತವೊಂದನ್ನು ನನ್ನ ಕೈಯಲ್ಲಿ ಸೃಷ್ಟಿಸಿತು ಎಂದು ನೆರೆದ ಮಂದಿಯನ್ನು ಉದ್ದೇಶಿಸುತ್ತಾ ನೆನಪಿನ ದೋಣಿಯಲ್ಲಿ ಹಾಯಾಗಿ ವಿಹರಿಸುತ್ತಿದ್ದರು ಶೀಲಾ.

ಆದರೆ ರಜನೀಶಪುರಂ ಅನುಯಾಯಿಗಳು ತಮ್ಮ ಸುಪರ್ದಿಯಲ್ಲಿ ಹೊಂದಿದ್ದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಓಶೋ-ಶೀಲಾರ ಒರೆಗಾನ್ ನಿವಾಸದ ನೆಲಮಹಡಿಯಲ್ಲಿ ನಿರ್ಮಿಸಲಾಗಿದ್ದ ರಹಸ್ಯ ಸುರಂಗಗಳ ಬಗ್ಗೆ ಕೇಳಿದರೆ ಅವುಗಳು ನಮ್ಮ ಆತ್ಮರಕ್ಷಣೆಗಾಗಿದ್ದವು. ಒರೆಗಾನ್ ನಿವಾಸಿಗಳು ಪೋಟ್ ಲ್ಯಾಂಡಿನಲ್ಲಿದ್ದ ನಮ್ಮ ಹೋಟೆಲಿನ ಮೇಲೆ ಬಾಂಬ್ ದಾಳಿ ಮಾಡಿದ್ದ ಘಟನೆಯು ನಿಮಗೆ ನೆನಪಿರಬಹುದು. ಹೀಗಾಗಿ ಇಂಥಾ ಕಾರ್ಯತಂತ್ರಗಳು ನಮಗೆ ಅನಿವಾರ್ಯವಾಗಿದ್ದವು ಎಂದು ಸಮರ್ಥಿಸಿಕೊಳ್ಳುತ್ತಾರೆ.

ಭಗವಾನ್ ರನ್ನು ಅವರ ಅನುಯಾಯಿಗಳಿಂದಲೇ ನಾನು ರಕ್ಷಿಸಬೇಕಿತ್ತು, ಎಂದೂ ತಮ್ಮ ನೆನಪಿನ ಸುರುಳಿಯನ್ನು ಬಿಚ್ಚಿಟ್ಟಿದ್ದರು ಶೀಲಾ. ಆ ದಿನಗಳಲ್ಲಿ ಓಶೋ ಸಾಮ್ರಾಜ್ಯದ ಮೇಲೆ ಶೀಲಾರಿಗಿದ್ದ ಸಂಪೂರ್ಣ ನಿಯಂತ್ರಣ ಮತ್ತು ದಿನೇ ದಿನೇ ಅವುಗಳು ತಮ್ಮ ಕೈಯಿಂದ ಜಾರುತ್ತಿರುವ ಆತಂಕವು ಅವರ ಈ ಮಾತುಗಳಲ್ಲಿ ಸ್ಪಷ್ಟವಿದೆ.

ಏಕೆಂದರೆ ಒರೆಗಾನ್ ಅವಧಿಯ ಕೊನೆಯ ದಿನಗಳಲ್ಲಿ ಓಶೋರ ಶಿಷ್ಯವೃಂದಕ್ಕೆ ಹಾಲಿವುಡ್ ವರ್ಗದಿಂದ ಖ್ಯಾತ ಸೆಲೆಬ್ರಿಟಿಗಳು ಹೊಸದಾಗಿ ಸೇರಿಕೊಂಡಿದ್ದರು. ತನ್ನ ವಿಲಾಸಿ ಜೀವನಕ್ಕೆ ಹೆಸರಾಗಿದ್ದ ಓಶೋರಿಗೆ ಈ ಹಾಲಿವುಡ್ ವರ್ಗವು ಕೇಳಿದಷ್ಟು ಹಣವನ್ನು ಚೆಲ್ಲಲು ಸಿದ್ಧವಾಗಿದೆ ಎಂಬ ಅರಿವಾದೊಡನೆಯೇ ಈ ಮಂದಿಗೆ ವಿಶೇಷವಾದ ಪ್ರಾಮುಖ್ಯತೆಗಳು ದೊರಕತೊಡಗಿದ್ದವು.

ಅತ್ಯುತ್ಕೃಷ್ಟ ಡಿಸೈನರ್ ಉಡುಪುಗಳು, ಮಿಲಿಯನ್ ಡಾಲರ್ ಮೌಲ್ಯದ ದುಬಾರಿ ಕೈಗಡಿಯಾರಗಳು, ವಿಲಾಸಿ ಎಸ್ಟೇಟುಗಳು ಉಡುಗೊರೆಯ ರೂಪದಲ್ಲಿ ತನ್ನ ಪಾಲಾಗುತ್ತಿರುವಂತೆ ಶೀಲಾರ ಪ್ರಾಮುಖ್ಯತೆಯು ಓಶೋರಿಗೆ ಕಮ್ಮಿಯಾಗುತ್ತಾ ಬಂದು ಕ್ರಮೇಣ ತಮ್ಮ ಆಪ್ತವಲಯದಿಂದ ಆಕೆಯನ್ನು ದೂರವಿಡುವವರೆಗೂ ಪರಿಸ್ಥಿತಿಯು ಬಿಗಡಾಯಿಸಿತ್ತು. ಓಶೋ ರಜನೀಶರು ತೊಂಭತ್ತಕ್ಕೂ ಹೆಚ್ಚಿನ ವಿಲಾಸಿ ರೋಲ್ಸ್-ರಾಯ್ಸ್ ಕಾರುಗಳ ಒಡೆಯರಾಗಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಆನಂದ್ ಶೀಲಾರ ಪಯಣದಲ್ಲಿ ಇದು ನಿಜಕ್ಕೂ ಮಹತ್ವವಾದ ಘಟ್ಟ. ಏಕೆಂದರೆ ಒರೆಗಾನ್ ದಿನಗಳಲ್ಲಿ ಯಾವ ಉಪದೇಶಗಳನ್ನೂ ನೀಡದೆ ಓಶೋ ಮೌನವಾಗಿದ್ದಾಗ ಅವರ ಪರವಾಗಿ ಮಾಧ್ಯಮಗಳಲ್ಲಿ ನಿರಂತರವಾಗಿ ಮಿಂಚುತ್ತಿದ್ದವರು ಆನಂದ್ ಶೀಲಾ. ಆ ದಿನಗಳಲ್ಲಿ ಪ್ರಚಾರದ ಸಲುವಾಗಿ ತಾನು ಯಾವ ಸಂದರ್ಶನಗಳನ್ನೂ, ಪತ್ರಿಕಾಗೋಷ್ಠಿಗಳನ್ನೂ ತಪ್ಪಿಸುತ್ತಿರಲಿಲ್ಲ ಎಂದು ತಮ್ಮ ಕೃತಿಯಲ್ಲಿ ದಾಖಲಿಸುವ ಶೀಲಾ, ತನ್ನ ಖ್ಯಾತಿಯ ಉತ್ತುಂಗದ ದಿನಗಳನ್ನು ಸಂಪೂರ್ಣವಾಗಿ ಸವಿದದ್ದಂತೂ ಸತ್ಯ.

ತನ್ನ ಖಾರದ ಜೋಕುಗಳೊಂದಿಗೆ, ಆಗೊಮ್ಮೆ ಈಗೊಮ್ಮೆ ಮಾತಿನ ಮಧ್ಯದಲ್ಲಿ ಇಣುಕುತ್ತಿದ್ದ ಬೈಗುಳದ ಪದಗಳೊಂದಿಗೆ, ತಾವು ದೇಶದ ಕಾನೂನಿಗಿಂತಲೂ ಮಿಗಿಲು ಎಂಬ ಧಿಮಾಕಿನಿಂದ ಬೀಗುತ್ತಿದ್ದ ದಿನಗಳನ್ನು ಶೀಲಾ ಚೆನ್ನಾಗಿಯೇ ಎಂಜಾಯ್ ಮಾಡಿದ್ದರು. ಓಶೋ ಜೊತೆಗಿನ ತನ್ನ ಬಾಂಧವ್ಯ, ಅವರ ಬೃಹತ್ ಸಾಮ್ರಾಜ್ಯದ ಮೇಲೆ ತನಗಿರುವ ನಿಯಂತ್ರಣ, ತನ್ನ ಬೆನ್ನಹಿಂದಿರುವ ಸಾವಿರಗಟ್ಟಲೆ ಅನುಯಾಯಿಗಳ ಶ್ರಮ… ಇವುಗಳೆಲ್ಲವೂ ಶೀಲಾರಲ್ಲಿ ತಂದಿದ್ದ ಅಪಾರ ಆತ್ಮವಿಶ್ವಾಸ, ಭಂಡಧೈರ್ಯಗಳನ್ನು ಅವರ ಹಳೆಯ ವೀಡಿಯೋಗಳಲ್ಲಿ ಸ್ಪಷ್ಟವಾಗಿ ಕಾಣಬಹುದು.

ಹೀಗೆ ತಾನು ಸೆಲೆಬ್ರಿಟಿಯಾಗಿ, ಓಶೋ ಸಾಮ್ರಾಜ್ಯದ ಅನಭಿಷಿಕ್ತ ರಾಣಿಯಂತೆ ಮೆರೆಯುತ್ತಿದ್ದಾಗಲೇ ಹಾಲಿವುಡ್ ವಲಯವು ಹಟಾತ್ತನೆ ಬಂದು ಶೀಲಾರ ಸಿಂಹಾಸನವನ್ನು ಅಲುಗಾಡಿಸಿತ್ತು. ಇನ್ನು ಓಶೋ ಕೂಡ ಕ್ರಮೇಣ ಈ ಶ್ರೀಮಂತ ಖ್ಯಾತನಾಮರ ತಂಡದತ್ತ ವಾಲಿದ್ದು ಶೀಲಾ ಎದುರಿಸಬೇಕಾಗಿ ಬಂದ ದೊಡ್ಡ ಸೋಲು ಮತ್ತು ಮುಖಭಂಗಗಳಲ್ಲೊಂದು.

ಓಶೋರ ದೃಷ್ಟಿಯಲ್ಲಿ ಶಕ್ತಿ ಎಂದರೇನು?, ಎಂದು ಝೋರ್ಬಾ ದ ಬುದ್ಧ ಸಮುದಾಯದ ಮುಖ್ಯಸ್ಥರಾದ ಅಶ್ವಿನ್ ಭಾರತಿಯವರು ಕೇಳಿದಾಗ ನಿಧಾನವಾಗಿ ಎದ್ದು ನಿಂತ ಶೀಲಾ ಪವರ್ ಎಂದರೆ ಇದುವೇ ನೋಡಿ… ನಾನೇ ಆ ಪವರ್… ನನ್ನದು ಪ್ರೀತಿಯ ಶಕ್ತಿ ಎಂದು ತನ್ನತ್ತ ಬೊಟ್ಟುಮಾಡುತ್ತಲೇ ಪ್ರೇಕ್ಷಕರಲ್ಲಿ ನಗೆಯನ್ನು ಮೂಡಿಸಿದ್ದರು. ಶೀಲಾರಿಂದ ಇಂಥಾ ಉತ್ತರಗಳು ನಿರೀಕ್ಷಿತವೇ ಆಗಿದ್ದವನ್ನಿ. ಅವರಿಗೆ ಪ್ರಶ್ನೆಗಳು ಹೊಸತಲ್ಲ.

ಇನ್ನು ಮಾಧ್ಯಮಗಳ ಕಹಿಪ್ರಶ್ನೆಗಳಿಗೆ ಅಷ್ಟೇ ಕಟುವಾಗಿ ತನ್ನದೇ ಶೈಲಿಯಲ್ಲಿ ಉತ್ತರಿಸುತ್ತಾ ಒಂದು ಕಾಲದಲ್ಲಿ ಸೆನ್ಸೇಷನಲ್ ಆಗಿದ್ದ ಶೀಲಾ, ತನ್ನ ಇಳಿವಯಸ್ಸಿನಲ್ಲಿ ಕೊಂಚ ಮೃದುವಾಗಿದ್ದಾರೆ ಎಂಬುದನ್ನು ಬಿಟ್ಟರೆ ಈ ಸಂಜೆಯ ವೇದಿಕೆಗೆ ತಾನೇ ರಾಣಿ ಎಂಬುದನ್ನು ಸೂಚ್ಯವಾಗಿ ಹೇಳಲಂತೂ ಮರೆತಿರಲಿಲ್ಲ. ಇಂದಿನ ಬ್ರೇಕಿಂಗ್ ನ್ಯೂಸ್ ಗಳ ಯುಗಕ್ಕಂತೂ ಮಾ ಆನಂದ್ ಶೀಲಾ ಕಂಟೆಂಟ್ ಗಳ ಭಂಡಾರವೇ ಸರಿ.

ಆದರೆ ಆಕೆ ಹೇಳುತ್ತಿದ್ದ ಈ ಶಕ್ತಿಯು ರಜನೀಶಪುರಂ ಅನ್ನು ನಿರ್ಮಿಸಿದಂತೆಯೇ ಹಲವು ಅನಾಹುತಗಳಿಗೂ ದಾರಿಯಾಗಿತ್ತು. ಓಶೋ ಸಾಮ್ರಾಜ್ಯದ ಮೇಲಿರುವ ತನ್ನ ನಿಯಂತ್ರಣವು ಸಡಿಲವಾಗುತ್ತಿರುವ ಆತಂಕಕ್ಕೆ ಬಿದ್ದ ಶೀಲಾ ಮತ್ತವರ ತಂಡವು ಹಾಲಿವುಡ್ ವಲಯದಲ್ಲಿದ್ದ ಒಬ್ಬೊಬ್ಬರನ್ನೂ ತಮ್ಮ ದಾರಿಯಿಂದ ತೆರವುಗೊಳಿಸುವತ್ತ ಗಂಭೀರವಾಗಿ ಯೋಚಿಸಿತ್ತು.

 

ಹಾಲಿವುಡ್ ಗುಂಪು ಓಶೋರನ್ನು ತಮ್ಮ ದುಬಾರಿ ಉಡುಗೊರೆಗಳಿಂದ ಸೆಳೆಯುತ್ತಲೇ ಅವರನ್ನು ಮಾರಣಾಂತಿಕ ಔಷಧಗಳಿಂದ, ಮಾದಕದ್ರವ್ಯಗಳಿಂದ ಇಷ್ಟಿಷ್ಟೇ ಕೊಲ್ಲುತ್ತಿತ್ತು ಎಂದು ಹೇಳುವ ಶೀಲಾ, ಓಶೋ ರಜನೀಶರ ಕೋಣೆಯನ್ನು ಸೇರಿದಂತೆ ಬಹುತೇಕ ಎಲ್ಲರ ಕೋಣೆಯನ್ನೂ ವೈರ್-ಟ್ಯಾಪ್ ಮಾಡಿದ್ದ ಬಗ್ಗೆಯೂ ನೆನಪಿಸಿಕೊಳ್ಳುತ್ತಾರೆ.

ಹೀಗೆ ದೊರಕಿದ್ದ ಆಡಿಯೋ ದಾಖಲೆಯೊಂದರಲ್ಲಿ ನೋವಿಲ್ಲದೆ, ಸಾವಧಾನವಾಗಿ ಸಾಯಲು ಯಾವ್ಯಾವ ರಾಸಾಯನಿಕಗಳನ್ನು ಬಳಸಬಹುದು ಎಂದು ತನ್ನ ಖಾಸಗಿ ವೈದ್ಯನಲ್ಲಿ ಕೇಳುವ ಓಶೋ, ಗುರುಪೂರ್ಣಿಮೆಯ ದಿನದಂದು ತನ್ನ ದೇಹವನ್ನು ತ್ಯಜಿಸುವ ಬಗ್ಗೆ ಚರ್ಚಿಸಿರುತ್ತಾರೆ.

ಇನ್ನು ರಜನೀಶಪುರಂ ಮೇಲೆ ನಡೆದಿದ್ದ ಎಫ್.ಬಿ.ಐ ದಾಳಿಯ ಅವಧಿಯಲ್ಲಿ ಮುಂದೆ ಅದೆಷ್ಟು ಧ್ವನಿಸುರುಳಿಗಳು ಸಿಕ್ಕಿದ್ದವೆಂದರೆ ವಶಪಡಿಸಿಕೊಂಡಿದ್ದ ಎಲ್ಲವನ್ನೂ ಕೇಳಿಸಿಕೊಳ್ಳಲು ಅಧಿಕಾರಿಯೊಬ್ಬ ದಿನನಿತ್ಯವೂ ಎಂಟು ತಾಸುಗಳವರೆಗೆ, ಎರಡು ವರ್ಷಗಳ ಕಾಲ ಈ ಆಡಿಯೋ ಧ್ವನಿಸುರುಳಿಗಳನ್ನು ಕೇಳಬೇಕಾಗುತ್ತದೆ ಎಂದು ಡಾಕ್ಯುಮೆಂಟರಿಯಲ್ಲಿ ಅಧಿಕಾರಿಯೊಬ್ಬರು ಹೇಳುತ್ತಾರೆ.

ಇದರ ಮುಂದುವರಿದ ಭಾಗವಾಗಿ ತನ್ನ ಪ್ರೀತಿಯೂ, ಕಮ್ಯೂನಿನ ಏಕಮಾತ್ರ ನಾಯಕನೂ ಆಗಿರುವ ಓಶೋರನ್ನು ರಕ್ಷಿಸಲು ಶೀಲಾ ತನ್ನ ಆಪ್ತಳಾಗಿದ್ದ ಶಾಂತಿ ಭದ್ರಾಗೆ ಆದೇಶಿಸುತ್ತಾರೆ. ಈ ನಿಟ್ಟಿನಲ್ಲಿ ಓಶೋರ ವೈದ್ಯನಾಗಿದ್ದ ಡಾ. ದೇವರಾಜನ ಹತ್ಯೆಗೆ ಸಂಚೊಂದು ರೂಪುಗೊಳ್ಳುತ್ತದೆ. ಪೂರ್ವನಿಯೋಜಿತ ಷಡ್ಯಂತ್ರದಂತೆ ಶಾಂತಿ ಭದ್ರಾಳ ಪ್ರಯತ್ನವು ಬಹುತೇಕ ಯಶಸ್ವಿಯಾದರೂ ವೈದ್ಯ ಅದ್ಹೇಗೋ ಬದುಕುಳಿಯುತ್ತಾನೆ. ಅಸಲಿಗೆ ಈ ಪ್ರಕರಣವು ಬೆಳಕಿಗೆ ಬರುವಷ್ಟರಲ್ಲಿ ಶೀಲಾ ಮತ್ತವರ ತಂಡವು ರಜನೀಶಪುರಂ ಅನ್ನು ಶಾಶ್ವತವಾಗಿ ತೊರೆದು ಜರ್ಮನಿಯಲ್ಲಿ ತಲೆಮರೆಸಿಕೊಂಡಿತ್ತು.

ಆದರೆ ವಿಧಿಯ ಲೆಕ್ಕಾಚಾರಗಳು ಬೇರೆಯೇ ಇರುತ್ತವೆ. ಮೊದಲ ಬಾರಿ ವಿಫಲರಾಗಿದ್ದರೂ ಎರಡನೇ ಹಂತದ ಪ್ರಯತ್ನದಲ್ಲಿ ಇವರೆಲ್ಲರನ್ನೂ ಅಮೆರಿಕಾಗೆ ವಾಪಾಸು ಕರೆತರುವಲ್ಲಿ ಅಮೆರಿಕನ್ ಸರಕಾರವು ಯಶಸ್ವಿಯಾಗುತ್ತದೆ.

ಕೊನೆಗೂ ರಜನೀಶಪುರಂ ಸಾಮ್ರಾಜ್ಯದೊಳಗಿದ್ದ ಬಣರಾಜಕೀಯದಿಂದ ಬೇಸತ್ತು, ಕಮ್ಯೂನ್ ತೊರೆದು ಜರ್ಮನಿಯಲ್ಲಿ ತಾತ್ಕಾಲಿಕವಾಗಿ ನೆಲೆಯೂರಿದ್ದ ಶೀಲಾರ ತಂಡವು ನಿತ್ಯದ ಖರ್ಚಿಗೆ ಒದ್ದಾಡುತ್ತಿತ್ತು. ಅತ್ತ ಕೋಪದಿಂದ ಕುದಿಯುತ್ತಿದ್ದ ಓಶೋ ರಜನೀಶರು ಶೀಲಾ ವಿರುದ್ಧ ದಿನಕ್ಕೊಂದು ಹೊಸ ಆರೋಪಗಳೊಂದಿಗೆ ಮಾಧ್ಯಮಗಳ ಎದುರು ಕಿಡಿಕಾರುತ್ತಿದ್ದರೆ, ಇತ್ತ ಮಾಧ್ಯಮಗಳ ಕಣ್ಣುತಪ್ಪಿಸಿ ಬದುಕಬೇಕಾದ ಅಜ್ಞಾತವಾಸದ ಅನಿವಾರ್ಯತೆ ಶೀಲಾರದ್ದು.

ಪರಿಸ್ಥಿತಿಯು ಹೀಗಿದ್ದಾಗ ಖ್ಯಾತ ಸ್ಥಳೀಯ ಪತ್ರಿಕೆಯೊಂದು ಅದ್ಹೇಗೋ ಇವರನ್ನು ಸಂಪರ್ಕಿಸಿ ದೊಡ್ಡ ಮೊತ್ತವೊಂದರ ಬದಲಿಗೆ ಎಕ್ಸ್-ಕ್ಲೂಸಿವ್ ವರದಿಯೊಂದನ್ನು ನೀಡುವಂತೆ ಡೀಲ್ ಕುದುರಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ವಿಶೇಷ, ಸೆನ್ಸೇಷನಲ್ ವರದಿಯನ್ನು ಹೊಂದಿದ್ದ ಪತ್ರಿಕೆಯ ಆ ಪ್ರತಿಗಳು ಅಂದು ನಂಬಲಸಾಧ್ಯವೆನ್ನಿಸುವ ವೇಗದಲ್ಲಿ ಬಿಕರಿಯಾಗಿದ್ದವಂತೆ.

ಅಸಲಿಗೆ ಜರ್ಮನಿ ಸರಹದ್ದಿನಿಂದ ಕೊಂಚ ದೂರವಿದ್ದ ಸ್ವಿಟ್ಜರ್ಲಾಂಡ್‍ಗೆ ಶೀಲಾರ ತಂಡವು ತೆರಳಿದ್ದರೂ ಅಮೆರಿಕನ್ ಸರ್ಕಾರಕ್ಕೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಪ್ರಯತ್ನಿಸಿ ಅವರನ್ನು ಬಂಧಿಸುವುದು ಅಸಾಧ್ಯವಾಗುತ್ತಿತ್ತು. ಈ ನಿಟ್ಟಿನಲ್ಲಿ ಅಮೆರಿಕನ್ ವ್ಯವಸ್ಥೆಯ ಈ ಸಾಹಸವು ಥ್ರಿಲ್ಲರ್ ಸಿನಿಮಾ ಒಂದಕ್ಕಾಗುವಷ್ಟು ರೋಚಕ ಎಪಿಸೋಡೇ ಸರಿ.

ಅಂದು ಹಸಿರು ಬಣ್ಣದ ದಿರಿಸಿನಲ್ಲಿ ಮಿಂಚುತ್ತಿದ್ದ, ತನ್ನ ಪರಿಶುದ್ಧ ನಗು ಮತ್ತು ಆಲಿಂಗನಗಳೊಂದಿಗೆ ಪ್ರೀತಿಯೇ ಮೈವತ್ತಂತಿದ್ದ ಎಪ್ಪತ್ತರ ಪ್ರಾಯದ ಶೀಲಾರನ್ನು ನೋಡುತ್ತಿದ್ದರೆ ಒಂದು ಕಾಲದಲ್ಲಿ ಅಮೆರಿಕನ್ ಸರಕಾರಕ್ಕೆ, ಒರೆಗಾನ್ ಆಡಳಿತಕ್ಕೆ ತಲೆನೋವಾಗಿದ್ದ ಮಾ ಆನಂದ್ ಶೀಲಾ ಇವರೇನಾ ಅನ್ನಿಸಿದ್ದು ಸಹಜ.

1981 ರಲ್ಲಿ ಶೀಲಾರೊಂದಿಗೆ ಅಮೆರಿಕಾಗೆ ಏಕಾಏಕಿ ವಲಸೆ ಬಂದ ಓಶೋ, ಹೊರಡುವಾಗ ಪುಣೆಯ ಆಶ್ರಮದಲ್ಲಿದ್ದ ತನ್ನ ಅನುಯಾಯಿಗಳಿಗೆ ವಿದಾಯದ ಒಂದು ಮಾತನ್ನೂ ಹೇಳಿರಲಿಲ್ಲ. ಮುಂದೆ 1985 ರಲ್ಲಿ ಅಮೆರಿಕಾದಿಂದ ಬರ್ಮುಡಾಗೆ ಅಪರಾತ್ರಿಯಲ್ಲಿ ರಹಸ್ಯವಾಗಿ ತೆರಳುವ ಓಶೋ ರಜನೀಶರು ಒರೆಗಾನ್ ಅನುಯಾಯಿಗಳನ್ನೂ ಕೂಡ ರಾತ್ರೋರಾತ್ರಿ ಅನಾಥರನ್ನಾಗಿಸಿದ್ದರು.

ಇನ್ನು ಪಲಾಯನದ ವಿಫಲ ಪ್ರಕ್ರಿಯೆಯಲ್ಲಿ ಬಂಧನಕ್ಕೊಳಗಾಗಿ ಮೂರು ವಾರಗಳ ಕಾಲ ನಾಲ್ಕೈದು ಜೈಲುಗಳ ಹವೆ ತಿನ್ನಬೇಕಾಗಿ ಬಂದ ರಜನೀಶರನ್ನು ಕೊನೆಗೂ ಅಮೆರಿಕನ್ ಸರ್ಕಾರವು ಭಾರತಕ್ಕೆ ವಾಪಾಸು ಕಳಿಸಿತ್ತು. ಹೀಗೆ ಅಮೆರಿಕಾದಿಂದ ಅಧಿಕೃತವಾಗಿ ಹೊರದಬ್ಬಲ್ಪಟ್ಟ ರಜನೀಶರು ಗ್ರೀಸ್ ಸೇರಿದಂತೆ ಇಪ್ಪತ್ತೊಂದು ದೇಶಗಳಿಂದ ತಿರಸ್ಕರಿಸಲ್ಪಟ್ಟು ತನ್ನ ಬದುಕಿನ ಪೂನಾ-2 ಭಾಗಕ್ಕೆ ಸಿದ್ಧರಾಗಿ ಪುಣೆ ಆಶ್ರಮಕ್ಕೆ ಮರಳಿದ್ದರು.

ಆದರೆ ತನ್ನ ಬದುಕಿನ ಹಲವು ಅಮೂಲ್ಯ ವರ್ಷಗಳನ್ನು ರಜನೀಶಪುರಂನ ಸೃಷ್ಟಿ ಮತ್ತು ಅದರ ಉಳಿವಿಗಾಗಿ ಸವೆಸಿದ ಶೀಲಾರಿಗೆ ಕೊನೆಗೂ ದಕ್ಕಿದ್ದೇನು? ಪಲಾಯನ, ಅಲೆದಾಟ, ಅಜ್ಞಾತವಾಸ ಮತ್ತು ಜೈಲುವಾಸದಂಥಾ ವಿಲಾಸಗಳು ಮಾತ್ರ. ಮಾ ಆನಂದ್ ಶೀಲಾ ಆಗಾಗ ನೆನಪಿಸಿಕೊಂಡು ಕಣ್ತುಂಬಿಕೊಳ್ಳುವ ತನ್ನ ಮತ್ತು ಓಶೋರ ನಡುವಿದ್ದ ಪ್ರೀತಿ-ಬಾಂಧವ್ಯಗಳು ನಿಜವೇ ಆಗಿದ್ದರೆ ಒರೆಗಾನ್ ನಂತರದ ದಿನಗಳಲ್ಲಿ ತನ್ನ ಅಧಿಕಾರದೊಂದಿಗೆ, ಸೌಜನ್ಯದ ಮಾತುಕತೆಯ ಭಾಗ್ಯವನ್ನೂ ಕಳೆದುಕೊಳ್ಳುವ ದುರಾದೃಷ್ಟವು ಅವರಿಗೆ ಬರುತ್ತಿರಲಿಲ್ಲವೇನೋ.

ನಿನಗೆ ನನ್ನ ಮೇಲೆ ಪ್ರೀತಿಯಾಗಿದೆ. ಹಾಗೆಯೇ ನನಗೂ ನಿನ್ನ ಮೇಲೆ ಪ್ರೀತಿಯಾಗಿದೆ, ತನ್ನ ಕಾಲಬುಡದಲ್ಲಿ ಕುಳಿತಿದ್ದ ತರುಣಿ ಶೀಲಾರ ತಲೆಯನ್ನು ಸವರುತ್ತಾ, ಆಕೆಯ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ, ಅಲ್ಲಿದ್ದ ಅಷ್ಟೂ ಜನರ ಸಮ್ಮುಖದಲ್ಲೇ ಹೀಗಂದಿದ್ದರಂತೆ ಓಶೋ ರಜನೀಶ್. ಇದು ಶೀಲಾ-ಓಶೋರ ಆರಂಭದ ದಿನಗಳ ಸವಿನೆನಪು. ಹಾಗಿದ್ದರೆ ನಿಜಕ್ಕೂ ಪ್ರೀತಿ ಇರಲೇ ಇಲ್ಲವೇ? ಇತ್ತು, ಆದರೆ ಅದು ಅಲ್ಪಾಯುಷಿ ಆಗಿತ್ತಷ್ಟೇ.

ಸಿರಿವಂತ ಹಾಲಿವುಡ್ ಗುಂಪಿನ ಹೊಳಪಿಗೆ ಸ್ಪರ್ಧೆಯೊಡ್ಡುವಷ್ಟು ಶೀಲಾರ ಪ್ರೀತಿಯಾಗಲೀ, ಅವರ ಸ್ವಾಮಿನಿಷ್ಠೆಯಾಗಲೀ ಬಾಳಿಕೆ ಬರಲಿಲ್ಲ ಎಂಬುದೇ ದುರಾದೃಷ್ಟ.

| ಇನ್ನುಳಿದದ್ದು ನಾಳೆಗೆ ।

‍ಲೇಖಕರು avadhi

November 15, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: