
ನಾಗೇಶ್ ಹೆಗಡೆ
ಕಾರಣ ಏನೆಂದು ಕೊನೆಯಲ್ಲಿ ಹೇಳುತ್ತೇನೆ…
ಈ ಚಿತ್ರದಲ್ಲಿ ಬಲಗಡೆ ಕೂತಿದ್ದ ದೊಡ್ಡ ವ್ಯಕ್ತಿ ಯಾರೆಂದು ಗೊತ್ತಾಯ್ತಲ್ಲ? ಆತನ ಬಲಗೈ ಬಳಿ ಕೂತವ ನಾನು. ಅಮೆರಿಕ ಸರಕಾರದ ಆಹ್ವಾನದ ಮೇರೆಗೆ 32 ವರ್ಷಗಳ ಹಿಂದೆ ವಾಷಿಂಗ್ಟನ್‌ಗೆ ಹೋಗಿದ್ದಾಗಿನ ಚಿತ್ರ.
ಈ ಶಿಲ್ಪ ತೀರಾ ವಿಶಿಷ್ಟವಾಗಿದೆ. ಅರೆಬರೆ ಕೆತ್ತಿ, ಇನ್ನೂ ಪಾಲಿಶ್ ಮಾಡದ ಮೂರ್ತಿಯಂತೆ ಕಂಡರೂ ಈ 12 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಯಾರೂ ಗುರುತಿಸಬಹುದು. ಶರೀರ ಗಾತ್ರಕ್ಕೆ ಹೋಲಿಸಿದರೆ ತಲೆ ದೊಡ್ಡದಾಗಿದ್ದರೂ ಅದು ಸಾಂಕೇತಿಕವೇ ಆಗಿದೆ. ಮಗುವಿನ ಮುಗ್ಧತೆ ಅದಕ್ಕಿದೆ.
ಆತ ಕೈಯಲ್ಲಿ ಹಿಡಿದ ಟಿಪ್ಪಣಿಯ ಹಾಳೆಯಲ್ಲಿ ಬ್ರಹ್ಮಾಂಡದ ರಹಸ್ಯವನ್ನು ವಿವರಿಸುವ ಮಹೋನ್ನತ ಮೂರು ಸೂತ್ರಗಳಿವೆ. (ಸಾಮಾನ್ಯ ಸಾಪೇಕ್ಷ ಸಿದ್ಧಾಂತ, ಫೋಟೊ ಇಲೆಕ್ಟ್ರಿಕ್ ಇಫೆಕ್ಟ್ ಮತ್ತು E=mc2).
ಆತ ಕೂತ ವೃತ್ತಾಕಾರದ ಬೆಂಚಿನಲ್ಲಿ ಬ್ರಹ್ಮಾಂಡದ ಎಲ್ಲ ವೈಚಿತ್ರ್ಯಗಳನ್ನೂ (ಗ್ರಹ, ಉಲ್ಕೆ, ಧೂಮಕೇತು, ತಾರೆ, ಗೆಲಾಕ್ಸಿ, ಕ್ವೇಸಾರ್, ಪಲ್ಸಾರ್ ಇತ್ಯಾದಿಗಳನ್ನು) ಲೋಹದ ಚುಕ್ಕಿಗಳಲ್ಲಿ ಮೂಡಿಸಲಾಗಿದೆ. ಈ ಶಿಲ್ಪವನ್ನು ಅನಾವರಣ ಮಾಡಿದ ದಿನ (22.4.1979) ಆಕಾಶದಲ್ಲಿ ಗ್ರಹ ನಕ್ಷತ್ರಗಳ ಸ್ಥಾನಮಾನ ಎಲ್ಲೆಲ್ಲಿತ್ತೊ ಅದೇ ವಿನ್ಯಾಸದಲ್ಲಿ ಚುಕ್ಕಿಗಳನ್ನು ಜೋಡಿಸಲಾಗಿದೆ.

ಬೆಂಚಿನ ಹಿಂಬದಿಯಲ್ಲಿ ಐನ್‌ಸ್ಟೀನ್ ನಂಬಿದ ಮೂರು ತತ್ವಗಳಿವೆ:
1 ಯಾವ ದೇಶದಲ್ಲಿ ನಾಗರಿಕ ಸ್ವಾತಂತ್ರ್ಯ, ಸರ್ವಧರ್ಮ ಸಮಭಾವ ಮತ್ತು ಸಮತಾವಾದ ಇದೆಯೊ ಆ ದೇಶದಲ್ಲೇ ನಾನು ಬದುಕಲು ಬಯಸುತ್ತೇನೆ.
2 ಅಚ್ಚರಿ ಮತ್ತು ಆನಂದಸಾಗರದಂತಿರುವ ಈ ವಿಶ್ವದ ಅಪ್ರತಿಮ ಸೌಂದರ್ಯ ಮತ್ತು ಅಗಾಧತೆಯಲ್ಲಿ ಮನುಷ್ಯನ ಪಾಲು ತೀರ ಅನಂತಾಲ್ಪ.
3 ಸತ್ಯಾನ್ವೇಷಣೆಯ ಹಕ್ಕಿನ ಜೊತೆಜೊತೆ ಕರ್ತವ್ಯಪ್ರಜ್ಞೆಯೂ ಇರಬೇಕು. ತನಗೆ ಹೊಳೆದ ಸತ್ಯವನ್ನು ಎತ್ತಿ ಹೇಳಲು ಮನುಷ್ಯ ಎಂದೂ ಹಿಂಜರಿಯಬಾರದು.
ನೂರು ವರ್ಷಗಳ ಹಿಂದೆ 1922: ಐನ್‌ಸ್ಟೀನ್ ನೊಬೆಲ್ ಪಾರಿತೋಷಕವನ್ನು ಸ್ವೀಕರಿಸಿದ ವರ್ಷ ಅದು. ನೊಬೆಲ್ ಸಿಕ್ಕಿದ್ದೂ ಅವರ ವಿಶ್ವಖ್ಯಾತಿಯ ಸಾಪೇಕ್ಷ ಸಿದ್ಧಾಂತಕ್ಕಲ್ಲ; ಬದಲಿಗೆ ಫೊಟೊ ಇಲೆಕ್ಟ್ರಿಕ್ ಇಫೆಕ್ಟ್‌ಗೆ! (1921ರಲ್ಲೇ ಈ ಪ್ರಶಸ್ತಿಯ ಘೋಷಣೆ ಆಗಿತ್ತು).
ಇದೇ 1922ರಲ್ಲಿ ಇನ್ನೊಂದು ವಿಶೇಷವೂ ಇದೆ: ಐನ್‌ಸ್ಟೀನ್ ಜಪಾನ್‌ಗೆ ಹೋಗಿದ್ದಾಗ ಆತನನ್ನು ನೋಡಲು ಎಲೆಲ್ಲೂ ಜನಜಾತ್ರೆ. ಆತನ ಉಪನ್ಯಾಸ ಕೇಳಲೆಂದು 2500ಕ್ಕೂ ಹೆಚ್ಚು ಜನರು ಟಿಕೆಟ್ ಖರೀದಿಸಿದ್ದರು. ಅದರ ಬಗ್ಗೆ ತನ್ನ ಪತ್ನಿ ಎಲ್ಸಾಗೆ ಬರೆದ ತಮಾಷೆ ಪತ್ರದಲ್ಲಿ “ಯಾರಿಗೂ ಇಂಥ ಸ್ವಾಗತ ಸಿಗಬಾರದು. ಜನರನ್ನು ದೋಚಲು ಬಂದ ಮೋಸಗಾರನೆಂದು ನನ್ನ ಜೈಲಿಗೆ ಹಾಕದಿದ್ದರೆ ಸಾಕುʼ ಅಂತ.
ಇನ್ನೂ ಒಂದು ಸ್ವಾರಸ್ಯ ಇದೆ:
ಐನ್‌ಸ್ಟೀನ್ ಅಲ್ಲಿನ ಇಂಪೀರಿಯಲ್ ಹೊಟೆಲ್‌ನಲ್ಲಿದ್ದಾಗ ಮಾಣಿಯೊಬ್ಬ ಅದೇನೋ ಪತ್ರವನ್ನು ತಂದುಕೊಟ್ಟ. ಭಕ್ಷೀಸು ಕೊಡಲು ಐನ್‌ಸ್ಟೀನ್ ಬಳಿ ಚಿಲ್ಲರೆ ಇರಲಿಲ್ಲವೊ ಅಥವಾ ಮಾಣಿಯೇ ನಿರಾಕರಿಸಿದನೊ ಅಂತೂ ಐನ್‌ಸ್ಟೀಟ್ ಆತನನ್ನು ನಿಲ್ಲಿಸಿ. ಒಂದು ಹಾಳೆಯ ಮೇಲೆ ತನ್ನ ಒಂದು ಒಳನೋಟವನ್ನು ಗೀಚಿ ಕೊಟ್ಟು, “ಇಟ್ಕೊಂಡಿರು; ಮುಂದೆ ಯಾವಾಗಾದರೂ ಪ್ರಯೋಜನಕ್ಕೆ ಬಂದೀತು” ಎಂದ.
ಆತ ಅಂದು ಬರೆದ ಆ ವಾಕ್ಯ (ಆತನ ಸಾಪೇಕ್ಷ ಸಿದ್ಧಾಂತದ ಹಾಗೇ) “ಐನ್‌ಸ್ಟೀನ್‌ನ ಸಂತೋಷ ಸಿದ್ಧಾಂತʼ ಎಂತಲೇ ಖ್ಯಾತಿ ಪಡೆದಿದೆ.
ಹೊಟೆಲ್ ಮಾಣಿಯ ಮೊಮ್ಮಗನ ಬಳಿ ಇದ್ದ ಆ ಕಾಗದ ಈಗ ಐದು ವರ್ಷಗಳ ಹಿಂದೆ ಜೆರೊಸಲೇಮಿನಲ್ಲಿ ಲಿಲಾವಿಗೆ ಬಂದು 15.6 ಲಕ್ಷ ಡಾಲರಿಗೆ ಮಾರಾಟವಾಯಿತು.
ಏನಿತ್ತು ಆ ಕಾಗದದ ಆ ವಾಕ್ಯದಲ್ಲಿ? ಜರ್ಮನ್ ಭಾಷೆಯಲ್ಲಿದ್ದ ಅದರ ಇಂಗ್ಲಿಷ್ ತರ್ಜುಮೆ ಹೀಗಿದೆ:
“A calm and modest life brings more happiness than the pursuit of success combined with constant restlessness.”
ಕನ್ನಡದಲ್ಲಿ ಹೇಳುವುದಾದರೆ-
“ಯಶಸ್ಸಿನ ಬೆನ್ನುಹತ್ತಿ ಹಗಲೂರಾತ್ರಿ ಅವಿಶ್ರಾಂತ ದುಡಿಯುವದಕ್ಕಿಂತ ಸಾದಾ, ನಿರುಮ್ಮಳ ಬದುಕಿನಲ್ಲೇ ಜಾಸ್ತಿ ಸಂತೋಷ ಸಿಗುತ್ತದೆ”.
ಅಷ್ಟೆ!
ಅಲ್ಲಿಗೆ, ಸಾಪೇಕ್ಷ ಸಿದ್ಧಾಂತವೂ ಸಿಕ್ಕಿತು; ಸರಳ ಬದುಕಿನ ಸೂತ್ರವೂ ಸಿಕ್ತಾ? ಈಗ ನಾನು ಹುಟ್ಟಿದ ವರ್ಷಕ್ಕೆ (1948) ಬರೋಣ: ಅದೇ ವರ್ಷ ಗಾಂಧಿ ಇನ್ನಿಲ್ಲವಾದರು. ಅದೇ ವರ್ಷ ಇಸ್ರೇಲ್ ದೇಶವೂ ಹುಟ್ಟಿತು. ಆಗ ಮತ್ತೆ ಐನ್‌ಸ್ಟೀನ್ ನೆನಪಾಗುತ್ತಾರೆ.
ಜನಾಂಗೀಯ ದ್ವೇಷಕ್ಕೆ ತುತ್ತಾಗಿ ಎಲ್ಲೆಲ್ಲೋ ಚದುರಿ ಹೋಗಿದ್ದ ಯಹೂದ್ಯರು ಒಂದೆಡೆ ಕೂಡಿ ಬಾಳಲೆಂದು ಕಟ್ಟಿಕೊಂಡ ದೇಶ ಇಸ್ರೇಲ್. ಸಂಘಟಿತರಾದರೆ ಮಹಾನ್ ಸಾಧಕರು ಅವರು. ಆದರೆ ಅಷ್ಟೇ ಕ್ರೂರಿಗಳು.
ಹೊಸ ದೇಶವನ್ನು ಕಟ್ಟಿಕೊಂಡ ಆರಂಭದಲ್ಲೇ ಪಕ್ಕದ ಪ್ಯಾಲಸ್ಟೀನ್ ಹಳ್ಳಿಗಳಿಗೆ ನುಗ್ಗಿ ಇವರು ಮುಗ್ಧರ ನರಮೇಧ ಮಾಡಿದ ಪರಿ (ಸ್ವತಃ ಯಹೂದಿಯೇ ಆಗಿದ್ದ) ಐನ್‌ಸ್ಟೀನ್‌ಗೆ ಗಾಬರಿ ಹುಟ್ಟಿಸಿತ್ತು.
Deir Yassin ಎಂಬ ಅರಬ್ ಹಳ್ಳಿಯ ಮಹಿಳೆ ಮಕ್ಕಳೂ ಸೇರಿದಂತೆ 240 ಜನರನ್ನು ಕೊಂದು, ಹೆಣಗಳ ರಾಶಿಯ ಮೇಲೆ ಕೇಕೆ ಹಾಕಿದ್ದರ ಬಗ್ಗೆ ತುಂಬ ನೊಂದವರಲ್ಲಿ ಐನ್‌ಸ್ಟೀನ್ ಕೂಡ ಒಬ್ಬರಾಗಿದ್ದರು.
1948ರಲ್ಲಿ ಅವರು ಸಹಿ ಹಾಕಿದ, ʼನ್ಯೂಯಾರ್ಕ್ ಟೈಮ್ಸ್ʼನಲ್ಲಿ ಪ್ರಕಟವಾದ ಪತ್ರದ ಮುಖ್ಯವಾಕ್ಯ ಹೀಗಿತ್ತು: ʼಇವರು ತಮ್ಮ ಯಹೂದಿ ಸಮುದಾಯಕ್ಕೆ ಅತಿಯಾದ ರಾಷ್ಟ್ರೀಯತೆ (ultranationalism), ಧಾರ್ಮಿಕ ಮೂಢನಂಬಿಕೆ ಮತ್ತು ಜನಾಂಗೀಯ ಶ್ರೇಷ್ಠತೆಯ ಸ್ಫೋಟಕ ಮಿಶ್ರಣವನ್ನು ತುಂಬುತ್ತಿದ್ದಾರೆ. [ತನಗೆ ಹೊಳೆದ ಸತ್ಯವನ್ನು ಹೇಳಲು ಹಿಂಜರಿಯಬಾರದು ಎಂಬ ಐನ್‌ಸ್ಟೀನ್ ನಿಲುವು ಇಲ್ಲಿದೆ] ಇದಾಗಿದ್ದು ನಾನು ಹುಟ್ಟಿದ ವರ್ಷ.
ಐನ್‌ಸ್ಟೀನ್‌ಗೆ ಆತಂಕ ಹುಟ್ಟಿಸಿದ ಅತಿರಾಷ್ಟ್ರೀಯವಾದವೇ ನಾನು ಹುಟ್ಟುವ ಎರಡು ವಾರಗಳ ಮುಂಚೆ ಗಾಂಧೀಜಿಯವರ ಕೊಲೆಗೂ ಕಾರಣವಾಗಿತ್ತು. ಈಗ ಕೊನೆಯ ಭಾಗಕ್ಕೆ ಬರುತ್ತೇನೆ. ನಿನ್ನೆ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಎಲ್ಲರಿಗೂ ನಾನು ಧನ್ಯವಾದ ಹೇಳಬೇಕು.
ಈಗಿನ ಸೋಶಿಯಲ್ ಮೀಡಿಯಾದಿಂದಾಗಿ ಒಳ್ಳೆಯದು, ಕೆಟ್ಟದು ಎಲ್ಲವೂ ಸ್ಫೋಟಕರೂಪದಲ್ಲಿ ವೈರಲ್ ಆಗುತ್ತಿವೆ. ನಿನ್ನೆ ನನ್ನ ಹುಟ್ಟುಹಬ್ಬವೆಂದು ಲೆಕ್ಕಕ್ಕೆ ಸಿಗದಷ್ಟು ಜನರು ಶುಭಾಶಯ ಕೋರಿದರು. ನಾನೇನೂ ಮಹತ್ವದ ವ್ಯಕ್ತಿಯಲ್ಲ.
ಮಧುಬಾಲಾ, ಸುಷ್ಮಾ ಸ್ವರಾಜ್, ಅಷ್ಟೇಕೆ ಬಾಬರ್ ಕೂಡ ಇದೇ ದಿನ ಹುಟ್ಟಿದ್ದಾರೆ. ಲಕ್ಷಾಂತರ ಜನರು ಫೆಬ್ರುವರಿ 14ರಂದು ಜನಿಸಿದ್ದಾರೆ. ಈಗಿನ ಲೆಕ್ಕಾಚಾರದ ಪ್ರಕಾರ ಪ್ರತಿ ದಿನ ಸರಾಸರಿ ನಾಲ್ಕು ಲಕ್ಷ ಮಕ್ಕಳು ಜನಿಸುತ್ತಾರೆ. ಆದರೂ ಯಾವ ಕೋನದಲ್ಲೂ ಅಸಾಮಾನ್ಯ ಎಂದುಕೊಂಡಿರದ ನನಗೆ ಈ ವರ್ಷ ದಾಖಲೆ ಪ್ರಮಾಣದಲ್ಲಿ ಶುಭಾಶಯಗಳು ಬಂದಿವೆ.
(ಐನ್‌ಸ್ಟೀನ್ ತನ್ನ ಪತ್ನಿಗೆ ಬರೆದಿದ್ದನ್ನೇ ನಾನೂ ಇಲ್ಲಿ ನೆನಪಿಸಿಕೊಳ್ಳುತ್ತೇನೆ). 74ಕ್ಕೆ ಕೈ ಮುಗಿದು 75ಕ್ಕೆ ನಾನು ಪ್ರವೇಶಿಸುತ್ತಿರುವ ಈ ಸಂದರ್ಭದಲ್ಲಿ ಆ ಎಲ್ಲ ಸಹೃದಯರಿಗೂ ಪ್ರತ್ಯೇಕ ಧನ್ಯವಾದ ಹೇಳಲು ಆಗುತ್ತಿಲ್ಲ.
ಇದನ್ನೇ ಹಂಚಿಕೊಳ್ಳಿ ಪ್ಲೀಸ್.






0 Comments