ಮಹಿಪಾಲರೆಡ್ಡಿ ಮುನ್ನೂರ್
ಮೊನ್ನೆ ಮಂಗಳವಾರದ ಮುಸ್ಸಂಜೆ. ಕನ್ನಡ ಭವನದ ಅಂಗಳದಲ್ಲಿ ಸಾಹಿತ್ಯಾಸಕ್ತರ ಲವಲವಿಕೆ ಇತ್ತು. ಬರೋಬ್ಬರಿ ಐವತ್ತು ಜನ ಸೇರಿದ್ದರು… ಕರೆಂಟು ಯಥಾ ಪ್ರಕಾರ ತನ್ನ ಚಾಳಿ ಬಿಡಲಿಲ್ಲ. `ಛಂದ’ದ ಸಂಜೆಯನ್ನು ಹಾಳು ಮಾಡಲು ಯತ್ನಿಸುತ್ತಿತ್ತು. ಆದರೆ, ಗೋಪಣ್ಣ ಮಾಸ್ತರನೂ ಮತ್ತವನ ತಲ್ಲಣಗಳನ್ನೂ ಕೇಳುತ್ತಿದ್ದ ಸಾಹಿತ್ಯದ ಮಂದಿಗೆ ಕರೆಂಟಿನ ಚೆಲ್ಲಾಟ ಡಿಸ್ಟರ್ಬ್ ಅನ್ನಿಸಲೇ ಇಲ್ಲ. ಇಡೀ ಎರಡೂವರೆ ತಾಸಿನ `ಛಂದ’ದ ಸಂಜೆಯಲ್ಲಿ ಒಂದೆರೆಡು ಬಾರಿ ಮಿಣುಕು ದೀಪಗಳ ಬೆಳಕಿನಲ್ಲಿಯೂ ಅವರ ಮಾತು`ಕತೆ’ಯನ್ನು ಆಲಿಸಿದ್ದು, ನಿಜಕ್ಕೂ ಚೆಂದವೇ ಅನಿಸಿತು.
ಮಹಿಪಾಲರೆಡ್ಡಿ ಯಾವುದರ ಬಗ್ಗೆ ಮಾತನಾಡುತ್ತಿದ್ದಾರೆ? ಏನು ಹೇಳುತ್ತಿದ್ದಾರೆ? `ಛಂದ’ದ ಸಂಜೆ ಅಂದರೇನು? ಯಾಕೆಂದರೆ, `ಚೆಂದ’ ಎಂಬುದನ್ನು ಕೇಳಿದ್ದೇವೆ. ಆದರೆ ಇದೇನು `ಛಂದ’? ಪ್ರಿಂಟಿಂಗ್ ಮಿಸ್ಟೇಕು, ವ್ಯಾಕರಣ ಮಿಸ್ಟೇಕು ಅಲ್ಲ ತಾನೇ? ಯಾರೀ ಗೋಪಣ್ಣ ಮಾಸ್ತರೂ? ಮತ್ತವನ ತಲ್ಲಣ ಅಂತಿದಾರೆ.. ಏನೀದೆಲ್ಲಾ? ಅಂತ ಯೋಚಿಸುತ್ತಿರುವ ಸಂದರ್ಭವನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ.
ಸಹೃದಯ ಸನ್ಮಿತ್ರರೇ,
ಮಂಗಳವಾರದ ಆ ಮುಸ್ಸಂಜೆಯಲ್ಲಿ, ನಿಜಕ್ಕೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದ ಅಂಗಳದಲ್ಲಿ ಕತೆಯ ರಸದುಣಿಸು ಇತ್ತು. ನಾಡಿನ ಖ್ಯಾತ ಕಥೆಗಾರ ವಸುಧೇಂದ್ರ ಅವರು `ಯುಗಾದಿ’ ಕತೆಯನ್ನು ತುಂಬಾ ರಸವತ್ತಾಗಿ ಓದಿ ರಂಜಿಸಿದರು. ನೆರೆದಿದ್ದ ಅನೇಕ ಹಿರಿಯ, ಮಹಿಳಾ, ಯುವ ಸಾಹಿತಿಗಳನ್ನು, ಓದುಗರನ್ನು ಕೇಳುಗರನ್ನು ಪರಿಚಯಿಸಿಕೊಳ್ಳುವುದರ ಮೂಲಕ ವಸುಧೇಂದ್ರ ಆತ್ಮೀಯರಾದರೇನೋ ಎಂಬಷ್ಟರ ಮಟ್ಟಿಗೆ ನಮ್ಮವರಾದರು.
ಯಾಕೆಂದರೆ, ಅವರೂ ಇದೇ ಬಿರು ಬಿಸಿಲನಾಡು ಬಳ್ಳಾರಿಯವರು. ಬೆಂಗಳೂರು ಸೇರಿಕೊಂಡು 20 ವರ್ಷ ಆಯ್ತು ಅಷ್ಟೇ. ಓದಿದ್ದು ಸಾಫ್ಟವೇರ್ ಆಗಿದ್ದರೂ, `ಛಂದ’ದ ಕತೆಗಳನ್ನು, ಪ್ರಬಂಧಗಳನ್ನು ಬರೀತಾರೆ. ಕನ್ನಡದಲ್ಲಿ ಹೊಸ ಶೈಲಿಯ ತಮ್ಮ ನಿರೂಪಣೆ ಮತ್ತು ತಂತ್ರಗಾರಿಕೆಯ ಸ್ಟೈಲ್ನಿಂದಾಗಿ ತಮ್ಮ ಓದುಗರನ್ನು ಸೃಷ್ಟಿಸಿಕೊಂಡಿದ್ದಾರೆ. ಅಂತಹ ಕತೆಗಾರ ವಸೂ, ಕನ್ನಡ ಭವನದ ಅಂಗಳದಲ್ಲಿ ಕತೆಯನ್ನು ನಮಗಾಗಿ ಓದುತ್ತಾರೆಂದರೆ, ಎಂತಹ ಖುಷಿ. ಅಂದಹಾಗೆ, `ಛಂದ’ ಎಂದರೆ, ಅವರದೇ ಆದ ಪುಸ್ತಕ ಪ್ರಕಾಶನದ ಹೆಸರು.
ಕರೆಂಟಿನ ಕಳ್ಳಾಟದ ನಡುವೆಯೂ ವಸುಧೇಂದ್ರ ಕತೆಯನ್ನು ವಾಚನ ಮಾಡುತ್ತಿದ್ದರೆ, ಅವರ ಓದುವ ರೀತಿ ಆಪ್ತವೆನಿಸುತ್ತಿತ್ತು. ಕತೆಯನ್ನು ಓದುವ ಆಸಕ್ತಿ, ವಾಚನ ಮಾಡುವಾಗ ಧ್ವನಿಯ ಏರಿಳಿತ, ಕತೆ ಓದುತ್ತಲೇ ನಡು ನಡುವೆ ಬರುವ ಸಂಭಾಷಣೆಗಳನ್ನೂ ಕೇಳುಗರಿಗೆ ರೀಚ್ ಆಗುವಂತೆ ನೋಡಿಕೊಳ್ಳುತ್ತಿದ್ದರು.
`ಕತೆಯೊಂದಿಗಿನ ಮಾತುಕತೆ’ಯಲ್ಲಿ ಯುಗಾದಿ ಕತೆಯನ್ನು ಎಲ್ಲರ ಮುಂದೆ ಓದಿದ ವಸು, ಅದರಲ್ಲಿ ಬರುವ ಬ್ರಾಹ್ಮಣ ಆಗಿರುವ ಗೋಪಣ್ಣ ಮಾಸ್ತರನ ತಲ್ಲಣಗಳನ್ನು, ತಾಕಲಾಟಗಳನ್ನು, ಮಗ ಪ್ರಹ್ಲಾದ ಕೊಡುವ ಕಿರಿಕಿರಿಗಳನ್ನು ಸಹಿಸಿಕೊಂಡೇ ಜೀವನ ಏಗುವುದನ್ನು, ಮಗನ ಅಂತರ್ಜಾತಿ ವಿವಾಹವನ್ನು, ಗೆಳೆಯ ಕಾಸೀಮಸಾಬನಿಗೆ ಮನೆಯಲ್ಲಿ ಕೂಡಿಸಿಕೊಂಡು ಹೇಳಿಕೊಳ್ಳುವ ಕವಳಿಕೆಗಳನ್ನು, ಸೊಸೆ ಮಾಡುವ ನಾನ್ ವೆಜ್ ಊಟ ಮಾಡು ಎನ್ನುವ ಮುಜುಗರದ ಮಾತುಗಳನ್ನು, ರುಕ್ಮಿಣಮ್ಮ ಇದ್ದಾಗ ಮಾತಾಡುವುದಕ್ಕೂ, ಈಗ ಫೋಟೋ ಎದುರು ಕುಳಿತು ಮಗನ ಹರಸಾಹಸಗಳನ್ನು ಹೇಳಿಕೊಳ್ಳುವುದಕ್ಕೂ ಇರುವ ವ್ಯತ್ಯಾಸಗಳನ್ನು, ಅಮೆರಿಕಾದ ಭ್ರಮೆಗಳನ್ನು, ಹೆಂಡತಿಯ ಹೆರಿಗೆಗಾಗಿ ಒದ್ದಾಡುವ ಪ್ರಹ್ಲಾದನ ಪೀಕಲಾಟಗಳನ್ನು, ಸರಕಾರಿ ಆಸ್ಪತ್ರೆಯಲ್ಲಿಯೇ ಕೊನೆಗೆ ಹಡವಣಿಗೆಗಾಗಿ ಅಡ್ಮೀಟ್ ಮಾಡುವುದನ್ನು, ಗಿಡ್ಡ ಪುಟಾಣಿ ಎಂದು ಶಾಲೆಯಲ್ಲಿ ಪ್ರೀತಿಯಿಂದ ಕರೆಯುತ್ತಿದ್ದ ರಾಧ , ಆಸ್ಪತ್ರೆಯಲ್ಲಿ ನರ್ಸ ಆಗಿದ್ದುಕೊಂಡು ಮಾಡಿದ ಹಡವಣಿಗೆಯ ಪ್ರಕ್ರಿಯೆಗಳನ್ನು, ಹಾಗೇ ಮಾಡಿದ್ದಕ್ಕೆ ಪ್ರತಿಯಾಗಿ ಭಕ್ಷೀಸು ಕೊಡಲು ಹೋಗಿದ್ದಕ್ಕೆ ನಯವಾಗಿ ನಿರಾಕರಿಸಿದ ಗಿಡ್ಡ ಪುಟಾಣಿಯ ನಿಲುವನ್ನು, ಅದನ್ನೇ ಗುರುದಕ್ಷಿಣೆ ಅಂತ ಭಾವಿಸಿಕೊಂಡಿದ್ದನ್ನು, ಇದೆಲ್ಲವನ್ನೂ ಸಮಚಿತ್ತರಾಗಿ ನೋಡುತ್ತ, ಜಾಗತೀಕರಣದ ಹಿನ್ನೆಲೆಯಲ್ಲಿ ಎಂತೆಂತಹ ಅಪಸವ್ಯಗಳು ನಡೀತಿವೆ ಎಂಬುದನ್ನು ರುಕ್ಮಿಣಮ್ಮನ ಫೋಟೋ ಎದುರು ಕುಳಿತು ತನ್ನಷ್ಟಕ್ಕೆ ತಾನೇ ಅಂದುಕೊಳ್ಳುತ್ತಿರುವ ಸಂಗತಿಗಳ ಮೆಲುಕು.. ಹೀಗೆ.. ಸಾಗುತ್ತದೆ `ಯುಗಾದಿ’ ಕಥಾ ಹಂದರ.
ಆಮೇಲೆ ನಡೆದದ್ದು ಅಪ್ಪಟ ಸಂವಾದ. ಕತೆಗಾರಿಕೆಯ ಎಲ್ಲ ಮಗ್ಗಲುಗಳ ಬಗ್ಗೆ ವಸುಧೇಂದ್ರ ಅವರೊಂದಿಗೆ ಮಾತಿನ ಮಂಟಪ ಕಟ್ಟಿದವರು ಅನೇಕರು. ಈ ಮಾತುಕತೆಯಲ್ಲಿ, ಡಾ.ವಸಂತ ಕುಷ್ಟಗಿ, ಸಿದ್ದರಾಮ ಪೊಲೀಸ್ ಪಾಟೀಲ, ಪ್ರೊ.ಸೂಗಯ್ಯ ಹಿರೇಮಠ, ಸಂಧ್ಯಾ ಹೊನಗುಂಟಿಕರ್, ಡಾ.ವಿಕ್ರಮ ವಿಸಾಜಿ, ಇಂದುಮತಿ ಸಾಲಿಮಠ, ಡಾ.ಶೈಲಜಾ ಕೊಪ್ಪರ, ಜ್ಯೋತಿ ಕುಲಕರ್ಣಿ, ಪ್ರಭಾಕರ ಜೋಶಿ, ಡಾ.ಚಿ.ಸಿ.ನಿಂಗಣ್ಣ, ಲಕ್ಷ್ಮೀ ಶಂಕರ ಜೋಶಿ, ಸಿ.ಎಸ್.ಮಾಲಿಪಾಟೀಲ, ಶರಣಬಸಪ್ಪ ವಡ್ಡಣಕೇರಿ, ಭಾರತಿ ಸಾಲಿಮಠ, ರತ್ನಾ ಕಾಂತಾಚಾರ್ಯ ಮಣ್ಣೂರ, ನಾಗರಾಜ ಹೂವಿನಳ್ಳಿ, ವಿಜಯೇಂದ್ರ ಮಳ್ಳಿ, ಶಾಂತಾ ಭೀಮಸೇನರಾವ ಸೇರಿದಂತೆ ಅನೇಕರು ಚರ್ಚೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಒಂದು ಒಳ್ಳೆಯ ಸಂಜೆ ಮತ್ತು ಸಾಹಿತ್ಯದ ವಾತಾವರಣ ನಿಮರ್ಾಣವಾಯಿತು.
ತಮ್ಮ ಅನುಭವಗಳನ್ನು, ಕತೆಯ ಹಿಂದಿನ ಸಂಗತಿಗಳನ್ನು, ನಿರೂಪಣಾ ಶೈಲಿಯನ್ನು, ಕತೆಯೊಳಗಿನ ಕತೆಯನ್ನು ಹೀಗೆ ಒಂದೇ ಎರಡೇ ಅನೇಕ ಪ್ರಸಂಗಗಳು ಸಂವಾದಕ್ಕೀಡಾದವು. ಕೆಲವೇ ಕೆಲವು ಕ್ಲಿಷ್ಟ ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕಿಂತ ಮುನ್ನ ವಸುಧೇಂದ್ರ ಅವರ ನಗುವೇ ಉತ್ತರವಾಗಿತ್ತು.
ಒಂಥರಾ ಈ ನಗು ಅಪ್ಯಾಯಮಾನ.
ಓದುವವರ, ಕೇಳುಗರ ಸಂಖ್ಯೆ ಕಡಿಮೆ ಆಗುತ್ತಿದೆ ಎಂಬ ಮಾತುಗಳ ನಡುವೆಯೇ ಅನೇಕರು ಭಾಗವಹಿಸಿದ್ದರು. ಕತೆಯ ಬಗ್ಗೆ ಮಾತಾಡಿದರು. ವಾಪಾಸು ಮನೆಗೆ ತೆರಳುವಾಗ ಹೊರಗಡೆ ಮಾರಾಟಕ್ಕಿಟ್ಟಿದ್ದ ಅನೇಕ ಪುಸ್ತಕಗಳನ್ನು ಖರೀದಿ ಮಾಡಿದರು.
ವಸುಧೇಂದ್ರ ಪರಿಚಯ ಕೆಲವೇ ಕೆಲವು ಮಂದಿಗೆ ಬಿಟ್ಟರೆ ಅನೇಕರಿಗೆ ಇರಲಿಲ್ಲ. ಸಂವಾದ ಆರಂಭಕ್ಕೂ ಮುನ್ನ ಮತ್ತು ನಂತರ ಪರಿಚಯವಾದರಲ್ಲಾ.. ಆ ಖುಷಿಯೇ ಬೇರೆ.
ನಿರರ್ಗಳವಾಗಿ ಸ್ವಲ್ಪವೂ ಬೋರ್ ಮಾಡದೇ, ಕತೆಯನ್ನು ಓದಿದ್ದು, ಓದುವಿಕೆಯ ಪರಿ, ನಂತರ ಅದ್ಭುತವಾಗಿ ಮಾತಾಡಿದ್ದು.. ಕಾರ್ಯಕ್ರಮಕ್ಕೆ ಬರದೇ ಇರದವರು ನಿಜಕ್ಕೂ ಒಂದು ಒಳ್ಳೆಯ ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡರು. ಸಾರಿ ಫ್ರೆಂಡ್ಸ್.
ಕನ್ನಡ ಭವನದ ಅಂಗಳಕ್ಕೆ ವಸುಧೇಂದ್ರ ಬಂದಾಗ, ಅವರನ್ನು ಸ್ವಾಗತಿಸಿದ್ದು, ಲಕ್ಷ್ಮೀ ಶಂಕರ ಜೋಶಿ ಅವರ ನಗು, ಭಾರತೀ ಸಾಲಿಮಠ ಅವರ ಮಧುರ ಮಧುರವೆನಿಸುವ ಮಂಜುಳಗಾನ..
ಆಪ್ತ ಮಾತುಗಳಲ್ಲಿಯೇ ಸ್ವಾಗತವನ್ನು ಮಾಡಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ. ಕೊನೆಗೆ ಪ್ರೀತಿಯ ವಂದನೆಗಳನ್ನು ಹೇಳಿದ್ದು, ಇನ್ನೋರ್ವ ಕಾರ್ಯದರ್ಶಿ ಬಿ.ಎಚ್.ನಿರಗುಡಿ.
ನನಗೆ ವಸುಧೇಂದ್ರ ಅವರ `ನಮ್ಮಮ್ಮ ಅಂದ್ರೆ ನಂಗಿಷ್ಟ’ ಕಥಾ ಸಂಕಲನದ ಮೂಲಕ ಎಷ್ಟು ಇಷ್ಟವಾಗಿದ್ದರೋ.. ಅವರ ಜೊತೆ, ಮೊನ್ನಿನ ಮಂಗಳವಾರದ ಮುಸ್ಸಂಜೆ ಕಳೆದ ಮೇಲೆ ದುಪ್ಪಟ್ಟು ಇಷ್ಟವಾಗುತ್ತಿದ್ದಾರೆ.
ಕಾರಣ ಇಷ್ಟೇ. ಅವರ ಚೆಂದನೆಯ ನಗು, `ಛಂದ’ದ ಕತೆಗಳು, ಒಪ್ಪ ಓರಣವಾಗಿ ಕೊಡುವ ಅವರ ರೀತಿ, ಸುಲಲಿತ ಮಾತು..
ತಮ್ಮ ಕತೆಗಳ ಮೂಲಕ ಬಹಳಷ್ಟು ಜನರ ಪ್ರೀತಿಯನ್ನು ಪಡೆದುಕೊಂಡಿರುವ ವಸುಧೇಂದ್ರ ಅವರು, ಹೀಗೆ `ಛಂದ’ನೆಯ ಕತೆಗಳನ್ನು ಓದುಗ ದೊರೆಗಳಿಗೆ ಕೊಡಲಿ. ಆ ಮೂಲಕ ಬಳ್ಳಾರಿಯ ಈ ಬಾಬು, ಬೆಂಗಳೂರಿನಲ್ಲಿದ್ದುಕೊಂಡು ಬಳ್ಳಾರಿಯ ಸ್ವಾದದಲ್ಲೇ ಕತೆ ಬರೆಯುವ ತುಡಿತವನ್ನು ಹೊಂದಿರುವುದಕ್ಕೆ ಹ್ಯಾಟ್ಸಾಫ್.
ವಸುಧೇಂದ್ರ ಅವರ ಕತೆಗಳು ತೋರಿಸುವ ಸಾಂಸ್ಕೃತಿಕ ಕಂದರಗಳಲ್ಲಿ ಭಾಷೆಯದೂ ಒಂದು. ದೇಸೀ ಕನ್ನಡ, ಬೆಂಗಳೂರು ಕನ್ನಡ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಜೊತೆಗೆ ಹೋದರೂ, ಕೊನೆಗೆ, ಅಮೆರಿಕದ ಭ್ರಮೆಗಳಿಗೆ ಹೊರತಾಗಿಯೂ ಲೋಕಲ್ ಅನಿವಾರ್ಯವೆನಿಸುತ್ತದೆ. ಈ ಪ್ರಸ್ತಾಪದ ಹಿಂದೆ ಅಂದು ವಾಚನ ಮಾಡಿದ `ಯುಗಾದಿ’ ಕತೆಯೇ ಉದಾಹರಣೆ. ಕನ್ನಡ ಶಾಲೆಯ ಮಾಸ್ತರರಾಗಿರುವ ಗೋಪಣ್ಣ ಅವರಿಗೂ, ಅವರ ಸಾಫ್ಟವೇರ್ ಎಂಜಿನಿಯರ್ ಮಗನಿಗೂ ಉಂಟಾಗುವ ಅಂತರ ಸಂಸ್ಕೃತಿಯದು, ಮುಖ್ಯವಾಗಿ ಭಾಷೆಯಿಂದ ಉಂಟಾದ ಸಂಸ್ಕೃತಿ ಅದು. ರಿಟೈರ್ಡ ಆಗಿರುವ ಗೋಪಣ್ಣ ಮಾಸ್ತರರು ಬಿಡುವಿನ ಸಮಯದಲ್ಲಿ ಪಾಠ ಮಾಡುತ್ತ ಜೀವನ ಸಾಗಿಸಬೇಕೆನ್ನುವ ಇರಾದೆಗೆ, ಮಗ ಮನೆ ಮಾಡಿರುವ ಏರಿಯಾದಲ್ಲಿ ಯಾವ ತಂದೆ ತಾಯಿಗಳೂ ತಮ್ಮ ಮಕ್ಕಳನ್ನು ಕನ್ನಡದಲ್ಲಿ ಕಲಿಸಲು ಇಷ್ಟಪಡುವುದಿಲ್ಲ. `ನೀವು ಯಾವುದಾದರೂ ಸ್ಲಂ ಏರಿಯಾ ಹುಡುಕಿಕೊಂಡು ಹೋದರೆ ಅಲ್ಲಿ ಸಾಮಾನ್ಯವಾಗಿ ಕನ್ನಡ ಶಾಲೆಗಳಿರುತ್ತವೆ. ಅಲ್ಲಿ ಕನ್ನಡ ಕಲಿಸಬಹುದು’ ಎಂಬಂತೆ ಹೇಳಿದಾಗ, ಮನಸಿಗೆ ಬೇಸರ ಮಾಡಿಕೊಳ್ಳುತ್ತಾರೆ. ಏರಿಯಾದ ಮಕ್ಕಳಿಗೆ ಚೈತ್ರ, ವೈಶಾಖ ಕಲಿಸುವುದಕ್ಕೂ ಆಕ್ಷೇಪಿಸುವ ತಂದೆ-ತಾಯಿಗಳು, ಔಟ್ ಡೇಟ್ ಆದ ವಿಷಯಗಳನ್ನು ಕಲಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ.
ಮಲ್ಟಿನೇಶನ್ ಕಂಪನಿಯೊಳಗೆ ಕೆಲಸ ಮಾಡೋದು ಅಂದರೆ ಏನಂತ ಅಂದುಕೊಂಡಿ ನೀನು? ಕನ್ನಡ ಸಾಲಿ ಮಾಸ್ತರ್ ಕೆಲಸ ಅಂತ ಮಾಡೀ ಏನು? ಎಂದು ಮಗ ತಂದೆಯನ್ನು ಹಂಗಿಸುತ್ತಾನೆ. ಆದರೆ ಅದೇ ಮಗನ ಹೆಂಡತಿ ಹೆರಿಗೆಗಾಗಿ ತಾಕಲಾಟ ಇದ್ದಾಗ, ನೆರವಾಗೋದು ಮಾತ್ರ, ಕನ್ನಡ ಶಾಲೆಯಲ್ಲಿ ಮಾಸ್ತರ ಕೈಯಲ್ಲಿ ಕಲಿತ ಗಿಡ್ಡ ಪುಟಾಣಿ ಅನ್ನಿಸಿಕೊಳ್ಳುವ ಒಬ್ಬ ಹುಡುಗಿಯಿಂದ. ಇದು ವಸುಧೇಂದ್ರ ಸೃಷ್ಟಿಸುವ ಕತೆಯಲ್ಲಿನ ಕಂದರಗಳು. ಇದು ರಮ್ಯ ಗ್ರಹಿಕೆಯೂ ಹೌದು. ಆದರೆ, ಕತೆಗಾರನ ಒಟ್ಟು ಮನಃಸ್ಥಿತಿ ದ್ವಂದ್ವಗಳ ನಡುವಿನದ್ದು ಎಂದು ಮೇಲ್ನೋಟಕ್ಕೆ ತೋರಿಸುತ್ತದೆ ಎಂಬ ಭಾವನೆ ವ್ಯಕ್ತವಾಗುತ್ತದೆ.
ತಾವು ಬರೆದದ್ದೆಲ್ಲವನ್ನು ಕಥನಗಳನ್ನಾಗಿ ಮಾಡುವ ಕೌಶಲ್ಯವನ್ನು ವಸುಧೇಂದ್ರ ಹೊಂದಿದ್ದಾರೆ. ಅವರ ಕತೆಗಳನ್ನು ರಂಜನೆಗೆ, ನೆನಪುಗಳನ್ನು ಮೆಲುಕು ಹಾಕುವ ಸಾಹಿತ್ಯಕ್ಕೆ ಸೀಮಿತಗೊಳಿಸಿದ್ದಾರೇನೋ ಎಂದೆನಿಸುತ್ತದೆ.
ಕಾರ್ಯಕ್ರಮದ ನಂತರ, ಸನ್ಮಿತ್ರರಾದ ಪ್ರಭಾಕರ ಜೋಶಿ ಒಂದು ಮಾತು ಕೇಳಿದ್ದರು. `ಕತೆಯೊಂದಿಗಿನ’ ಅಂತ ಹೆಸರಿಟ್ಟಿದ್ದು ಯಾಕೆ? `ಕತೆಯೊಂದಿಗೆ..’ ಸಾಕಾಗಿತ್ತಲ್ಲವೇ ಎಂದರು. `ಗೊತ್ತಿಲ್ಲ. ಹಂಗನ್ನಿಸಿತು, ಇಟ್ಟೆ’ ಅಂತಂದೆ. ಶ್ರೀರಾಮುಲು ಅವರು ಮಾತಾಡುವಾಗ, `ಅಂದ್ರಗೀನಾ.. ಅಂದ್ರಗೀನಾ..’ ಅಂತಿರ್ತಾರೆ. ಅವರು ಬಳ್ಳಾರಿಯವರು. ಬಹುಶಃ ವಸುಧೇಂದ್ರ ಕೂಡ ಬಳ್ಳಾರಿಯವರಾಗಿದ್ದರಿಂದ `ಕತೆಯೊಂದಿಗಿನ, ಅಂತ ಇಟ್ಟೀರೇನೋ’ ಎಂದು ಚರ್ಚೆ ಮಾಡಿದರು. ಹೆಸರಿಡುವಾಗ ಹಂಗಂತ ಅನ್ನಿಸಿರಲಿಲ್ಲ. ಇನ್ಮುಂದೆ ಯಾರಾದರೂ ಕೇಳಿದರೆ, ಹೀಗೆಯೂ ಸಮರ್ಥನೆ ಮಾಡಿಕೊಳ್ಳಬಹುದೇನೋ ಅಂತಂದೆ.
ಇದನ್ನು ಕೇಳಿದರೆ, ಬಳ್ಳಾರಿಯ ವಸುಧೇಂದ್ರ ನಕ್ಕುಬಿಡ್ತಾರಷ್ಟೇ.







🙂 ನಕ್ಕಾಯ್ತು 🙂
bhala andra bhala chanda baradeeri.chanda nageya chadaprakashanada odeya a sanjeyannu chandavagisiddu matra agdi khare.lakshmishankar.joshi.
miss maadkondru..neevu sanksiptavaagi lekhnada mulaka namage hanchidralla tumba..tumbaa dhanyavadagaLu!!