ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಇದಕ್ಕೋಸ್ಕರ ಅವರಿಗೆ ಇಂಗ್ಲಿಷ್ ಬೇಕು…' – ಜೋಗಿ ಬರೀತಾರೆ

ಮೆಕಾಲೆಯ ಇಂಗ್ಲಿಷ್ ಎಲ್ಲ ಕೌಶಲಗಳನ್ನೂ ಕಂಗೆಡಿಸಿದ ಹಾಗೆ…

– ಜೋಗಿ

ಆ ಹುಮ್ಮಸ್ಸಿನ ಹುಡುಗರು ದೊಣ್ಣೆ ವರಸೆ ಮಾಡಿದರು. ಬೆಂಕಿ ನೃತ್ಯ ಶುರು ಮಾಡಿದರು. ಕೋಲಾಟ ಶುರುವಿಟ್ಟುಕೊಂಡಿತು. ಸುತ್ತಲೂ ಕೂತಿದ್ದವರನ್ನು ಕಾಡಿನ ಸೊಳ್ಳೆಗಳು ಕಚ್ಚುತ್ತಿದ್ದರೆ, ಆ ತಂಡದ ಮುಖಂಡ ತಾವೇನು ಮಾಡುತ್ತಿದ್ದೇವೆ ಅನ್ನುವುದನ್ನು ಇಂಗ್ಲಿಷಿನಲ್ಲಿ ವಿವರಿಸಲು ಹೆಣಗಾಡುತ್ತಿದ್ದ. ಅವನ ಧ್ವನಿಯಾಗಲೀ, ಉಚ್ಛಾರಣೆಯಾಗಲೀ, ಮಾತಿನ ಲಯವಾಗಲೀ ಇಂಗ್ಲಿಷಿಗೆ ಒಗ್ಗುತ್ತಿರಲಿಲ್ಲ. ಆದರೆ, ಅವನಿಗೆ ಇಂಗ್ಲಿಷಿನಲ್ಲೇ ಮಾತಾಡದೇ ವಿಧಿಯಿರಲಿಲ್ಲ. ಪ್ರತಿ ಶನಿವಾರ ಅಲ್ಲಿಗೆ ಬರುವ ಪ್ರವಾಸಿಗಳನ್ನು ರಂಜಿಸುವುದು ಅವನ ಕರ್ತವ್ಯ. ಅದು ರಂಜನೆ ಹೌದೋ ಅಲ್ಲವೋ ಅನ್ನುವುದೂ ಸ್ಪಷ್ಟವಿರಲಿಲ್ಲ.
ತಮ್ಮ ಬುಡಕಟ್ಟಿನ ದಿರಸು ತೊಟ್ಟುಕೊಂಡು ಹೆಜ್ಜೆ ಹಾಕುತ್ತಿದ್ದ ಹುಡುಗರು ಬೆಳಗ್ಗೆ ಹೊತ್ತಿಗೆ ರೂಪಾಂತರ ಹೊಂದಿದ್ದರು. ಅವರ ಉಡುಪು ಬದಲಾಗಿತ್ತು. ಅಲ್ಲಿರುವ ಪುಟ್ಟ ಅಂಗಡಿಗಳ ಮುಂದೆ ಕೂತು ಸಿಗರೇಟು ಸೇದುತ್ತಾ ತಲ್ಲಣಿಸುತ್ತಿದ್ದರು. ರಾತ್ರಿ ಕುಡಿದ ಮದ್ಯದ ರಂಗು ಅವರ ಕಣ್ಣುಗಳಲ್ಲಿ ಪ್ರತಿಫಲಿಸುತ್ತಿತ್ತು. ತಮ್ಮ ಪುಟ್ಟ ನಾಡಿನಲ್ಲಿ ಏನಾಗುತ್ತಿದೆ ಅನ್ನುವುದು ಅವರಿಗೆಲ್ಲ ತಿಳಿದಂತಿತ್ತು. ತಾವು ಪರದೇಸಿಗಳ ಮುಂದೆ ಕೋಡಂಗಿಗಳಾಗುತ್ತಿದ್ದೇವೆ, ಅವರಿಗೆ ತಾವೊಂದು ತಮಾಷೆಯ ವಸ್ತು, ತಮ್ಮ ಕಲೆ, ಪ್ರತಿಕ್ರಿಯೆ, ಪರಂಪರಾಗತ ರಂಜನೆಗಳೆಲ್ಲ ಬಿಡುವು ಕಳೆಯಲು ಬಂದವರಿಗೆ ಮತ್ತೊಂದು ಬಡ ಆಕರ್ಷಣೆ ಎನ್ನುವುದೆಲ್ಲ ಅವರಿಗೆ ಹೊಳೆಯುತ್ತಿತ್ತು. ಅದನ್ನು ಬದಲಾಯಿಸುವ ಶಕ್ತಿ ತಮಗಿಲ್ಲ. ತಮ್ಮ ದೇಶ ಶ್ರೀಮಂತವಾಗಬೇಕು. ಹಾಗಾಗಬೇಕಿದ್ದರೆ ತಾವು ತಮ್ಮ ನಾಡಿನ ಕಷ್ಟಕಾರ್ಪಣ್ಯ, ಗುಡ್ಡಗಾಡು, ಭೀಕರ ಮಳೆ, ಸುಡುಬಿಸಿಲು, ಹತ್ತಲಾಗದ ಬೆಟ್ಟ, ಏನೂ ಬೆಳೆಯಲಾಗದ ನೆಲ ಎಲ್ಲವನ್ನೂ ಮಾರಬೇಕು. ಅದನ್ನು ಮಾರುವುದಕ್ಕೆ ಇರುವ ಏಕೈಕ ದಾರಿಯೆಂದರೆ ಇಕೋ ಟೂರಿಸಮ್. ಪರಿಸರ ಪ್ರವಾಸೋದ್ಯಮ. ಇಡೀ ನಾಡನ್ನೆ ಬಂದವರೆದುರು ಬಿಚ್ಚಿಡುವುದು. ತಮ್ಮ ಹಳ್ಳಿಗಳನ್ನು ತೋರಿಸುವುದು, ಹಳೆಯ ಮನೆಗಳನ್ನು ತೋರಿಸುವುದು, ಜನಪದೀಯ ಆಚರಣೆಗಳನ್ನು ತೋರಿಸಿ ಅವರನ್ನು ಬೆರಗಾಗಿಸುವುದು.

ಇದಕ್ಕೋಸ್ಕರ ಅವರಿಗೆ ಇಂಗ್ಲಿಷ್ ಬೇಕು, ರಷ್ಯನ್, ಫ್ರೆಂಚ್, ಜರ್ಮನ್ ಕಲಿಯಬೇಕು. ಅದನ್ನು ಕಲಿಸುವುದಕ್ಕೆ ಸ್ಕೂಲುಗಳಿಲ್ಲ. ಟ್ಯುಟೋರಿಯಲ್ಲುಗಳೂ ಇಲ್ಲ. ಅಲ್ಲಿಗೆ ಹೋಗಿ ಕಲಿಯುವಷ್ಟು ಸಂಪಾದನೆ ಆ ಹುಡುಗರಿಗೆ ಹುಟ್ಟುವುದಿಲ್ಲ. ಭಾಷೆ ಕಲಿಯದೇ ಹೋದರೆ ಹೊರಗಿನ ಮಂದಿ ಬರುತ್ತಾರೆ. ಒಂದು ನಾಡನ್ನು ಹೊರಗಿನಿಂದ ನೋಡಿದವರಂತೆ ವಿವರಿಸುತ್ತಾರೆ.
ಇಷ್ಟಾದರೂ ಅವರಿಗೆ ಅರ್ಧ ವರುಷ ಮಾತ್ರ ಕೆಲಸ. ಮಳೆಗಾಲದಲ್ಲಿ ಚಳಿಗಾಲದಲ್ಲಿ ಹೊರಗಿನವರು ಬರುವುದಿಲ್ಲ. ಬೇರೆ ಅವಧಿಯಲ್ಲಿ ಬರುವವರೆಲ್ಲ ತಮ್ಮ ಒತ್ತಡ ನಿವಾರಿಸಿಕೊಳ್ಳಲು, ಬೆಟ್ಟ ಹತ್ತಲು ಬರುವವರು. ಹೀಗಾಗಿ ಪುಸ್ತಕದಂಗಡಿಗಳ ತುಂಬ ಮನೋವಿಕಾಸದ, ಒತ್ತಡ ನಿವಾರಿಸುವುದನ್ನು ಕಲಿಸುವ, ಧ್ಯಾನಸ್ಥರಾಗಲು ಹೇಳಿಕೊಡುವ ಪುಸ್ತಕಗಳು, ಓಂ ಅಂತ ಸದ್ದು ಮಾಡುವ ತಟ್ಟೆ, ಎಲ್ಲ ರೋಗಕ್ಕೂ ಮದ್ದು ಎಂದು ನಂಬಿಸುವ ಆಯುರ್ವೇದ, ಶುದ್ಧಗಾಳಿ, ಶುದ್ಧನೀರು ಸಿಗುವ ಹಿಮಾಲಯದ ತಪ್ಪಲು, ಅಲ್ಲಿರುವ ಗುಹೆಗಳಿಗೆ ಹೋಗಿ ಏಕಾಂತ ಅರಸುವವರು, ತಿಂಗಳುಗಟ್ಟಲೆ ಇದ್ದು, ಬಿಡುಗಡೆ ಪಡೆಯಲು ನೋಡುವವರು. ವಿಚಿತ್ರ ಮನಸ್ಥಿತಿಗಳ ಸಮ್ಮಿಶ್ರಣ.
ಇಂಥ ಬಿಕ್ಕಟ್ಟಿನಲ್ಲೇ ಅಲ್ಲಿ ಶಾಲೆಗಳಲ್ಲಿ ಮಕ್ಕಳು ಆಲ್-ಜೀಬ್ರಾ ಕಲಿಯುತ್ತಾರೆ. ಅವರ ಬದುಕಿಗೆ ಕಿಂಚಿತ್ತೂ ಸಂಬಂಧವಿಲ್ಲದ್ದು ಅದು. ಎದುರಿಗೆ ದುರ್ಗಮವಾದ ಹಿಮಾಲಯ ಪರ್ವತ ಶ್ರೇಣಿ. ಅದಕ್ಕಿಂತ ಕಷ್ಟಕರವಾದ ಬೀಜಗಣಿತ, ಕಾನೂನು, ಕಂಪ್ಯೂಟರ್ ವಿಜ್ಞಾನ. ಅದನ್ನು ಕಲಿತು ಮಾಡುವುದನ್ನೆಲ್ಲ ತಾವು ಸ್ವಯಂಸ್ಪೂರ್ತಿಯಿಂದ ಮಾಡಬಲ್ಲೆವು ಎಂದು ನಂಬಿದವರಿಗೆ ಅದನ್ನೇ ನೆಚ್ಚಿಕೊಳ್ಳುವಷ್ಟು ನಂಬಿಕೆಯೂ ಇಲ್ಲ.

ಒಂದು ನಾಡು ಬದಲಾವಣೆಗೆ ಒಡ್ಡಿಕೊಳ್ಳುತ್ತಿರುವುದನ್ನು ಹೇಗೆ ಗುರುತಿಸಬಹುದು? ಮೊಟ್ಟ ಮೊದಲು ನಿಮಗೆ ಕಾಣುವುದು ಹೆಣ್ಮಕ್ಕಳ ಆಧುನಿಕ ಉಡುಪುಗಳು. ಬೆಟ್ಟದ ತಪ್ಪಲಲ್ಲಿ ಇಣುಕುವ ಹದಿನಾರರ ಪೋರಿ ಕೂಡ ಮಿಲಾನ್ ಸಮ್ಮರ್ 2013 ಕಲೆಕ್ಷನ್ ಡಿಸೈನರ್ ಬಟ್ಟೆ ಹಾಕಿಕೊಳ್ಳುತ್ತಾಳೆ. ಹೊಸ ಮಾದರಿಯ ಉಡುಪು ಅತಿ ಕಡಿಮೆಗೆ ಸಿಗುತ್ತದೆ. ಹರಿದ ಜೀನ್ಸು, ಹರಿದು ಹೊಲಿದ ಟಾಪು ಸಮುದ್ರ ಮಟ್ಟದಿಂದ 4500 ಅಡಿ ಎತ್ತರದಲ್ಲಿರುವ ಸಾರಂಗಕೋಟೈ ಬೆಟ್ಟದಲ್ಲಿರುವ ಪುಟ್ಟ ಟೀ ಅಂಗಡಿಯ ಹೆಣ್ಣುಮಗಳು ಹೊಸ ಕಾಲದ ಹುಡುಗಿಯಂತೆ ಕಾಣಿಸುತ್ತಿದ್ದಳು. ಅವಳ ಅಮ್ಮ ಯಾವುದೋ ಯುಗಕ್ಕೆ ಸೇರಿದವಳಂತಿದ್ದಳು.
ನೇಪಾಲ ನಮ್ಮ ನೆರೆಯ ದೇಶ. ಅಲ್ಲಿಯ ಕಷ್ಟಗಳು ಕೇವಲ ಅಲ್ಲಿಯವು. ಅವರ ರಂಜನೆ, ಪ್ರೇಮ, ಸಂಸಾರ, ನರಕ ಮತ್ತು ಜೀವೋತ್ಸವಗಳ ಕುರಿತು ಮತ್ತೊಮ್ಮೆ ಬರೆಯುವೆ. ಇದು ಚಿತ್ವನ್ ಎಂಬ ರಾಷ್ಟ್ರೀಯ ಉದ್ಯಾನ ಮತ್ತು ಫೋಖರಾ ಎಂಬ ಸುಂದರ ನಗರಿಯ ಎರಡು ದೃಶ್ಯಗಳು ಮಾತ್ರ.
 

‍ಲೇಖಕರು avadhi

8 May, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading