-ಸದಾಶಿವ ಸೊರಟೂರು
ಯಾಕೊ ಏನೊ ಈ ಬೆಳಗಿಗೆ ಲಯ ತಪ್ಪಿದೆ. ಕಣ್ಣಲ್ಲಿ ಈಗಷ್ಟೆ ಸೂರ್ಯ ಮೂಡಿದ್ದಾನೆ. ಬಣ್ಣಗೆಟ್ಟ ಸೈಕಲ್ ಮೌನವಾಗಿದೆ. ಎದ್ದವನು ಕೂತ ಹಾಗೆಯೇ ಕೂತಿದ್ದೇನೆ. ಇಂದು ರಜೆ, ಇಂದಷ್ಟೇ ರಜೆ. ಈ ದುಬಾರಿ ರಜೆಯನ್ನು ಖರ್ಚು ಮಾಡುವುದು ಹೇಗೆ?
ಏನು ಮಾಡುವುದು ಈ ಬೆಳಗನ್ನು? ಮಲಗುವುದೇ? ನಿದ್ದೆಗೆ ಅವಮಾನ ಮಾಡಿದಂತೆ ಆಗುವುದಿಲ್ಲವೇ? ನಿತ್ಯ ಆಚೆ ತಳ್ಳಿ ಇಂದು ಹೇಗೆ ಕರೆಯಲಿ? ಸರ್ಕಾರಿ ನೌಕರನಂತೆ ಕಾಫಿ ಕುಡಿಯುತ್ತಾ ವರಾಂಡದಲ್ಲಿ ಪತ್ರಿಕೆ ಓದುತ್ತಾ ಕೂತಿರಲೇ? ಪತ್ರಿಕೆ ಹಾಕುವವನ ಮನೆಗೆ ಯಾರು ಪತ್ರಿಕೆ ಹಾಕುತ್ತಾರೆ? ಅಷ್ಟಕ್ಕೂ ಇಂದು ಪತ್ರಿಕೆಯಾದರೂ ಎಲ್ಲಿದೆ? ಪತ್ರಿಕೆ ರಜೆಯಾಗಿದ್ದೆ ಈ ಬೆಳಗು ನನಗೆ ಶೋಕದಂತೆ ಕಾಡುತ್ತಿದೆಯಲ್ಲಾ?
ಬಸ್ಟ್ಯಾಂಡಿನಲ್ಲಿ ಇಷ್ಟೊತ್ತಿಗಾಗಲೇ ಪತ್ರಿಕೆಯ ಬಂಡಲ್‍ಗಳು ಬಿದ್ದಿರುತ್ತಿದ್ದವು. ಪತ್ರಿಕೆ ಎಸೆಯಲು ಬಂದ ವಾಹನದ ಹೆಡ್ ಲೈಟ್ ಮಲಗಿದ್ದ ಬಸ್ಟ್ಯಾಂಡನ್ನು ತಟ್ಟಿ ಎಬ್ಬಿಸಿ ಕೂರಿಸು ಹೋಗುತ್ತಿತ್ತು. ಪಾಪ ಇಂದು ಅದನ್ನು ಎಬ್ಬಿಸುವವರು ಯಾರು? ಬಂಡಲ್ ಕಳಚಿದಾಗ ಆ ಪತ್ರಿಕೆಗೆ ಒಂದು ಘಮ ಇರುತ್ತಿತ್ತು. ಅದೇ ಪತ್ರಿಕೆ ಹಾಕುವ ಹುಡುಗರಿಗೆಲ್ಲಾ ಅತ್ತರು. ಇಂದು ಆ ಅತ್ತರಿಲ್ಲ, ದಿನಕ್ಕೆ ಘಮವಿಲ್ಲ.
ಮನೆಯಿಂದ ಹೊರಡುವಾಗ ಇದ್ದ ಚಳಿ ಪತ್ರಿಕೆಯನ್ನು ಮುಟ್ಟಿದ್ದೆ ಎಲ್ಲಿ ಹೆದರಿ ಓಡಿ ಹೊಯಿತು? ಪತ್ರಿಕೆಯೇ ನಮ್ಮನ್ನು ಪೊರೆಯುವ, ಬೆಚ್ಚಗಿಡುವ ಕುಲಾವಿ ಎಂಬುದು ಆ ಚಳಿಗೆ ಗೊತ್ತಾಗಿ ಹೊಯಿತೆ?
ಪತ್ರಿಕೆಗಳನ್ನು ತುಂಬಿಕೊಂಡು ಹೊರಟಿದ್ದೆ ಸೈಕಲ್ ಕುಣಿಯ ತೊಡಗುತ್ತದೆ. ಬೀದಿಯಲ್ಲಿ ಕನಸುಗಳು ಯಾರದೊ ಕಣ್ಣಿನಿಂದ ಹೊರಟು ಹೋದ ಅದರ ಹೆಜ್ಜೆ ಗುರುತುಗಳು ನಮಗಷ್ಟೆ ಕಾಣಿಸುತ್ತವೆ. ಯಾರದೊ ಮನೆಯ ನಾಯಿ ನಾವು ಬಂದದ್ದೆ ಬಾಲ ಅಲ್ಲಾಡಿಸುತ್ತದೆ. ಇನ್ಯಾರದೊ ಮನೆಯ ಕಾಂಪೌಂಡಿನ ಹೂವು ನಾವು ಬಂದದ್ದೆ ಕಿಲ್ಲೆನ್ನುತ್ತಾ ನಗುತ್ತದೆ. ಈ ಕಾಂಪೌಂಡಿನಿಂದ ಮುಕ್ತಗೊಳಿಸಿ ಆಚೆ ಕಳುಹಿಸಿ ಬಿಡು ಮಾರಾಯ ಎಂದು ಕೋರುತ್ತದೆ.
ವಾಕ್ ನಡೆದು ಬರುವವರ ಕಣ್ಣಲ್ಲಿ ರಾತ್ರಿಯಿಡೀ ಹಾಸಿಗೆಯಲ್ಲಿ ಅನುಭವಿಸಿದ ಅಸುಖ ಕಣ್ಣಿಗೆ ರಾಚುತ್ತದೆ. ಕೆಲವರ ಕಣ್ಣಲ್ಲಿ ಉನ್ಮಾದ ಇನ್ನೂ ಉಳಿದಿರುತ್ತದೆ. ಕೆಲವರಿಗೆ ನಿದ್ದೆ ಹೆಚ್ಚಾಗಿ ಕಣ್ಣಿನಿಂದ ಸೋರುತ್ತಿದ್ದರೆ ಕೆಲವರ ಕಣ್ಣುಗಳು ನಿದ್ದೆಯ ಅನಾವೃಷ್ಟಿಗೆ ಶುಷ್ಕವಾಗಿವೆ.
ಕೊನೆ ಮನೆಯ ಕಾಂಪೌಂಡಿನೊಳಗೆ ಪತ್ರಿಕೆ ಎಸೆದು ಒಂದು ಕಡೆ ಕೂತು ಪತ್ರಿಕೆ ತೆರೆದು ಅದರ ಮುಖಪುಟದ ಮೇಲೆ ಕಣ್ಣಾಡಿಸಿದಾಗಲೇ ನಾನು ಅಸಲಿ ಜಗತ್ತಿಗೆ ಬಂದು ಬಿದ್ದದ್ದು ಅರಿವಾಗುತ್ತದೆ.
ಇಂದು ಪತ್ರಿಕೆಗಳಿಗೆ ರಜೆ.. ಇರಲಿ ನನ್ನ ಸುಖಕ್ಕೂ ಒಂದು ದಿನದ ರಜೆ. ಬದುಕು ಬರೀ ಸುಖಗಳದ್ದು ಅಲ್ಲವಲ್ಲ!
*
ಎದ್ದು ಆಕಳಿಸಿ ಆಚೆ ಬಂದೆ. ಪತ್ರಿಕೆ ಇನ್ನೂ ಬಂದಿಲ್ಲ. ಎಂದೂ ತಡವಾಗಿಲ್ಲ, ಇಂದೇಕೆ? ಆ ಹುಡುಗನ ಮೇಲೆ ಕೋಪ. ಶತಪಥ ಹಾಕುತ್ತೇನೆ. ಥಟ್ಟನೆ ನೆನಪಾಗುತ್ತದೆ. ಅಯ್ಯೊ ಪತ್ರಿಕೆ ರಜೆ. ಆ ಹುಡುಗನ ಮೇಲೆ ಮರುಕ. ಎಂದೂ ತಡಮಾಡದವ. ಅರೆ ಅವನೆಷ್ಟು ಚೆಂದ ಪತ್ರಿಕೆ ಎಸೆಯುತ್ತಾನೆ? ಅವನ ಎಸೆತಕ್ಕೆ ಪತ್ರಿಕೆಯ ಒಂದೇ ಒಂದು ಅಕ್ಷರವೂ ಒಡೆದು ಹೋಗುವುದಿಲ್ಲವಲ್ಲ. ಜಾಹಿರಾತಿನ ಹುಡುಗಿಯ ನಗುವೂ ಬಾಡುವುದಿಲ್ಲ.
ಪತ್ರಿಕೆ ಎಸೆದ ಸದ್ದಿಗೆ ಮಲಗಿದ್ದ ಮನೆಯು ಆಕಳಿಸಿ ಏಳುತ್ತದೆಯಲ್ಲಾ? ಏನಿದು ಮೋಡಿ?
ಇಂದು ಮನೆಯನ್ನೂ ನಾನೇ ಎಬ್ಬಿಸಬೇಕು. ಯಾಕೊ ಮನೆ ಶೋಕದಂತಿದೆ. ಮನೆಗೆ ಬರಬೇಕಿದ್ದ ಕಳೆ ಪತ್ರಿಕೆಯಲ್ಲಿರುತ್ತಿತ್ತು. ಇಂದು ಪತ್ರಿಕೆ ಇಲ್ಲದೆ, ಮನೆಗೆ ಕಳೆ ಬರುವುದಾದರೂ ಹೇಗೆ? ಈ ಕಾಫಿಗೂ ಬೇಸರ; ಜೊತೆಗಾರನಿಲ್ಲದೆ. ಕಾಫಿಯ ರುಚಿ ಇರೋದು ಬಿಸಿಬಿಸಿ ಪತ್ರಿಕೆಯಲ್ಲಿ. ಕಾಂಪೌಂಡಿನ ಹೂವುಗಳು ಅವನನ್ನು ಎದುರು ನೋಡುತ್ತಿವೆ. ಪತ್ರಿಕೆಯನ್ನು ತಬ್ಬಿಕೂರುತ್ತಿದ್ದ ಟಿಫಾಯಿ ಮೌನವಾಗಿದೆ.
ದಿನಾ ಟಿಫಾಯಿ ಮೇಲೆ ಬಂದು ಕೂರುತ್ತಿದ್ದ ಪತ್ರಿಕೆ ನನಗೆ ಬದುಕಿನ ರೂಪಕ! ಸಾವಿನ ಸುದ್ದಿ. ಅಪಘಾತ, ತಂದೆ ಕೊಂದ ಮಗ, ಮಕ್ಕಳನ್ನು ಬಿಟ್ಟು ಹೋದ ಹೆಂಡತಿ. ಲಂಚ ತಿಂದು ಸಿಕ್ಕಿ ಹಾಕಿಕೊಂಡ ಅಧಿಕಾರಿ. ರಾಜಕಾರಣದ ಹೊಲಸು, ಬಡ ಹುಡುಗನ ಕನಸು, ಅರ್ಧ ಕಥೆ, ಪೂರ್ತಿ ಕವಿತೆ, ಪದಬಂಧ,ಭವಿಷ್ಯ, ನಟಿಯ ತುಟಿ, ನಟನ ಮೈ ಕಟ್ಟು, ನಾಲ್ಕು ಒಳ್ಳೆಯ ಮಾತು, ನಗಿಸುವ ಜೋಕು, ಅಳಿಸುವ ವರದಿ, ಚಿಂತೆ, ಚಿಂತನೆ..
ಬದುಕಿಗೆ ಬರೀ ಖುಷಿ ಸಾಲದು ದುಃಖವೂ ಬೇಕು ಎಂಬ ಪಾಠವನ್ನು ಪತ್ರಿಕೆ ಹೇಳದೆಯೂ ಹೇಳುತ್ತದೆ. ಒಂದು ಪತ್ರಿಕೆಯಂತೆ ; ಒಂದು ಬದುಕು. ಇಂದು ಪತ್ರಿಕೆ ಇಲ್ಲ; ಪಾಠವೂ ಇಲ್ಲ!
ಮಲಗಿದ ಮನೆಯನ್ನು ಎಬ್ಬಿಸಲು ನಾಳೆ ಪತ್ರಿಕೆಯೇ ಬರಬೇಕು. ಕಾಫಿಗೆ ರುಚಿ ಬರಲು ನಾಳೆವರೆಗೂ ಕಾಯಬೇಕು. ದೇವರೆ ಇಂದೊಂದು ದಿನ ಬೇಗ ಮುಗಿದು ಬಿಡಲಿ ಎನ್ನುವ ನನ್ನ ಕೋರಿಕೆಯನ್ನು ಕೇಳಿಸಿಕೊಂಡ ನಿನ್ನೆಯ ಪತ್ರಿಕೆ ಹೇಳಿತು
‘ಬದುಕಿಗೆ ಖುಷಿಯಷ್ಟೇ ಮುಖ್ಯವಿಲ್ಲ, ಬೇಸರವೂ! ‘






0 Comments