ಇಂದಿನ 'ಜುಗಾರಿ ಕ್ರಾಸ್': ಅಕಾಡೆಮಿ, ಪ್ರಾಧಿಕಾರದವರಿಗೂ ಚುನಾವಣೆಗಳಿಗೂ ಸಂಬಂಧವೇನು ? 

ಇದು ಜುಗಾರಿ ಕ್ರಾಸ್ ಚರ್ಚೆಗಾಗಿಯೇ ಇರುವ ವೇದಿಕೆ
ಅಂದಂದಿನ ಬಿಸಿ ಬಿಸಿ ಚರ್ಚೆಗೆ ಅವಧಿ ಇಲಿ ವೇದಿಕೆ ಕಲ್ಪಿಸುತ್ತದೆ
ಇಂದಿನ ಚರ್ಚೆ ಅಕಾಡೆಮಿ ಪ್ರಾಧಿಕಾರದ ಸದಸ್ಯರು ಸರ್ಕಾರಕ್ಕೆ ಚುನಾವಣಾ ನಜರ್ ಒಪ್ಪಿಸಾಬೇಕೆ ಎನ್ನುವುದರ ಬಗ್ಗೆ
ಈಗಾಗಲೇ ಫೇಸ್ ಬುಕ್ ನಲ್ಲಿ ಕಾಣಿಸಿರುವ ಚರ್ಚೆಯನ್ನು ನಿಮ್ಮ ಗಮನಕ್ಕಾಗಿ ಇಲ್ಲಿ ಒಟ್ಟುಮಾಡುತ್ತಿದ್ದೇವೆ
ನಿಮ್ಮ ಅಭಿಪ್ರಾಯವನ್ನೂ ಕಳಿಸಿಕೊಡಿ
[email protected] ಗೆ

ಎಲ್ ಸಿ ನಾಗರಾಜ್ 
ಕನ್ನಡ ಅಭಿವೃದ್ಧಿ ಪ್ರಾಧಿಕಾರ , ಸಾಹಿತ್ಯ ಅಕಾಡೆಮಿಯಂತಹ ಸಂಸ್ಥೆಗಳು ಕನ್ನಡ ಸಂಸ್ಕೃತಿಯ ಬಗ್ಗೆ ಕೆಲಸ ಮಾಡಲು ಇರುವ , ಕೊಂಚ ಮಟ್ಟಿಗಿನ ಸ್ವಾಯತ್ತ ಸಂಸ್ಥೆಗಳು
ಇಂತಹ ಸ್ವಾಯತ್ತ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯ ಸ್ಥಾನಕ್ಕೆ ಅಧಿಕಾರರೂಡ ಪಕ್ಷ ತನ್ನ ತತ್ವಕ್ಕೆ ಹತ್ತಿರವಿರುವವರನ್ನ ಆಯ್ಕೆ ಮಾಡುತ್ತದೆ ; ಎಲ್ಲ ಸರ್ಕಾರಗಳ ಅಧಿಕಾರಾವಧಿಯಲ್ಲೂ ಇದು ಸಹಜ
ಈ ಹಿಂದೆ ಅಧಿಕಾರದಲ್ಲಿದ್ದ ಬಿ.ಜೆ.ಪಿ ಸರ್ಕಾರ ‘ ಸಾವಯವ ಕೃಷಿ ಮಿಷನ್ ‘ ಸ್ಥಾಪಿಸಿತ್ತು ಮತ್ತು ಆ ಪಕ್ಷದ ವಿಚಾರಗಳಿಗೆ , ಅಂದರೆ ಸಂಘ ಪರಿವಾರದ ವಿಚಾರಗಳಿಗೆ ಹತ್ತಿರವಿರುವ ವ್ಯಕ್ತಿಯನ್ನೇ ಅದರ ಅಧ್ಯಕ್ಷರನ್ನಾಗಿ ಮಾಡಿತ್ತು ; ಇದು ಕೂಡ ಸಹಜ
ಆದರೆ ಇದಕ್ಕೂ ಹಿಂದಿನ ಕಾಂಗ್ರೆಸ್ ಮತ್ತು ಜನತಾ ದಳ ಸರ್ಕಾರಗಳ ಅಧಿಕಾರ ಅವಧಿಯಲ್ಲಿ ಡಾ. ಜಿ. ಎಸ್. ಶಿವರುದ್ರಪ್ಪನವರಂತ ಲೇಖಕರು ಸಾಹಿತ್ಯ ಅಕಾಡೆಮಿಯ ಸ್ಥಾನಕ್ಕೆ ಘನತೆ ತಂದುಕೊಟ್ಟಿರುವ ಉಧಾಹರಣೆಯಿದೆ
ಆದರೆ ಪರಿಸ್ಥಿತಿ ಈಗ ಅಷ್ಟು ಘನತೆಯ ಮಟ್ಟದಲ್ಲಿ ಇಲ್ಲ . ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು , ಪ್ರಾಧಿಕಾರಗಳ ಅಧ್ಯಕ್ಷರುಗಳಿಂದ ಚುನಾವಣಾ ಲಾಭ ಪಡೆಯುವ ಕೆಟ್ಟ ಪರಂಪರೆಯೊಂದು ಆರಂಭವಾಗಿರುವಂತೆ ಕಾಣುತ್ತಿದೆ.
ಪ್ರಾಧಿಕಾರವೊಂದರ ಹ್ಯಾಟ್ರಿಕ್ ಅಧ್ಯಕ್ಷರು ರಿಂಗ್ ಮಾಸ್ಟರ್ ತರ ವರ್ತಿಸುತ್ತ ಇತರೆ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರನ್ನ ನಿರ್ಧಿಷ್ಟ ರಾಜಕೀಯ ಪಕ್ಷವೊಂದರ ಪರವಾಗಿ ಚುನಾವಣ ಪ್ರಚಾರಕ್ಕೆ ಬರುವಂತೆ ನಿರೀಕ್ಷಿಸುವುದು ಅಂತಹ ಉತ್ತಮ ಸಾಂಸ್ಕೃತಿಕ ನಡವಳಿಕೆಯಲ್ಲ ; ಇದೊಂದು ಕೆಟ್ಟ ಪರಂಪರೆಯ ಪ್ರಾರಂಭ ಕಾಲ

ಎಂ ಡಿ ವಕ್ಕುಂದ 
ಇದು ತುಂಬ ಸಂಕೀರ್ಣ ಕಾಲ. ಸಾಂಸ್ಕೃತಿಕ ರಾಜಕಾರಣ ಬಲಪಂಥೀಯ ಎಡಪಂಥೆಯ ಪಕ್ಷಗಳಲ್ಲಿ ಪಕ್ಷ ರಾಜಕಾರಣಕ್ಕೆ ಮುಕ್ತವಾಗಿಯೆ ಬೆಂಬಲಿಸುತ್ತದೆ. ನಡುಪಂಥೀಯ ಪಕ್ಷದ ಸಂದರ್ಭದಲ್ಲಿ ಮಾತ್ರ ಈ ತೊಡಕು ದೊಡ್ಡದಾಗಿ ಕಾಣುತ್ತದೆ
ಎಡ ಪಕ್ಷಗಳ ಸೋಲು, ಬಲಪಕ್ಷದ ಪ್ರಾಬಲ್ಯದ ಚಾರಿತ್ರಿಕ ಸಂದರ್ಭದಲ್ಲಿ ನಡುಪಕ್ಷಗಳನ್ನು ಬೆಂಬಲಿಸುವ ಅನಿವಾರ್ಯತೆ, ಒತ್ತಡ,ಬದ್ದತೆಗಳ ಭಾಗವಾಗಿಯೂ ಈ ವಿಷಯವನ್ನು ಚರ್ಚಿಸಬಹುದೇ?

ಜಿ ಎನ್ ನಾಗರಾಜ್ 
ಅಕಾಡೆಮಿ, ಪ್ರಾಧಿಕಾರ ಮೊದಲಾದ ಸಂಸ್ಥೆಗಳಿಗೆ ಸರ್ಕಾರದ ನೇಮಕಾತಿ ಪಡೆದವರಿಗೂ ಚುನಾವಣೆಗಳಿಗೂ ಸಂಬಂಧವೇನು ?
ಅವರಿಗೆ ಆ ಸ್ಥಾನಗಳಿಗೆ ನೇಮಕ ಮಾಡಿದ್ದು ಆ ಸ್ಥಾನಗಳ ಹೊಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕೆಂದೋ ನೇಮಕ ಮಾಡಿದ ಸರ್ಕಾರ ರಚಿಸಿರುವ ಪಕ್ಷದ ಸೇವೆ ಮಾಡಲೆಂದೋ ?
ಅವರಿವರು ಬಂದು ಅರ್ಜಿ ಸಲ್ಲಿಸುವುದು, ಲಾಬಿ ಮಾಡುವುದು ಅಂತಹವರನ್ನು ಆಯ್ಕೆ ಮಾಡುವುದು ಈ ಪದ್ಧತಿಯೇ ಅಸಹ್ಯಕರ ಪರಿಸ್ಥಿತಿಯಲ್ಲವೇ ? ಮುಂದೊಮ್ಮೆ ಬಿಜೆಪಿ ಸರ್ಕಾರ ಮಾಡಿದ ನೇಮಕಾತಿಗಳಿಗೆ ಋಣಿಯಾಗಿ ಆರೆಸ್ಸೆಸ್ ಸೇವೆ ಸಲ್ಲಿಸಬೇಕೆ ?
ಇಂತಹ ನಿರೀಕ್ಷೆಯೇ ಪ್ರಜಾಪ್ರಭುತ್ವದ ತತ್ವಗಳ ಪಲ್ಲಟ.

ಎಲ್ ಸಿ ನಾಗರಾಜ್ 
ನಾನು ಬಯಸುತ್ತಿರುವುದು ಸರಳ : ಸರ್ಕಾರ ತನ್ನ ತತ್ವಗಳಿಗೆ ಹತ್ತಿರವಿರುವ ವ್ಯಕ್ತಿಗಳನ್ನ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ನೇಮಕ ಮಾಡಿದರೂ ಅವರು ಋಣ ಸಂದಾಯ ಮಾಡಬೇಕೆಂದು ಬಯಸಬಾರದು ; ಋಣ ಸಂದಾಯ ಮಾಡಲೇಬೇಕೆಂದು ವ್ಯುಹವನ್ನ ರಚಿಸಬಾರದು ; ಇದು ಎಲ್ಲ ಆಳುವ ಪಕ್ಷಗಳಿಗೂ ಸಂಬಂಧಿಸಿದ್ದು

ಜಿ ಎನ್ ನಾಗರಾಜ್ 
ಅಕಾಡೆಮಿ, ಪ್ರಾಧಿಕಾರಗಳ ಸದಸ್ಯರು ಮತ್ತು ಚುನಾವಣೆಗಳು
ದಿನೇಶ್ ಅಮೀನ್ ಮಟ್ಟು ರವರಿಂದ ಆರಂಭವಾದ ಚರ್ಚೆಗೆ ಪ್ರತಿಕ್ರಿಯೆ.
ವಶೀಲಿಯಿಂದ ಅಕಾಡೆಮಿಗಳ ಸದಸ್ಯರಾದವರು ಆಳುವ ಪಕ್ಷದ ಪ್ರಚಾರ ಮಾಡಬೇಕೆಂಬುದೇ ಪ್ರಜಾಪ್ರಭುತ್ವ ವಿರೋಧಿ.
ಸರ್ಕಾರಿ ಅನುದಾನಿತ ಸಂಸ್ಥೆಗಳನ್ನು ಸ್ಥಾಪಿಸಿದ್ದು ಸರ್ಕಾರದ ನಿರ್ದಿಷ್ಟ ಹೊಣೆ ನಿರ್ವಹಿಸಲೆಂದು ಮಾತ್ರ. ಆ ಹೊಣೆಯನ್ನು ನಿರ್ವಹಿಸಲು ಯೋಗ್ಯರಾದವರನ್ನು ಆಯ್ಕೆ ಮಾಡಿ ಅವರಿಂದ ಪರಿಣಾಮಕಾರಿಯಾಗಿ ಆ ಹೊಣೆ ನಿರ್ವಹಣೆಯ ಕೆಲಸವನ್ನಷ್ಟೇ ನಿರೀಕ್ಷೆ ಮಾಡುವುದು ಸರ್ಕಾರದ ಕರ್ತವ್ಯ. ಅದಕ್ಕಿಂತ ಹೆಚ್ಚೂ ಇಲ್ಲ ಕಡಿಮೆಯೂ ಇಲ್ಲ. ಅವರು ಸರ್ಕಾರದ ಪರವಾಗಿ ನಿಲ್ಲುವ ಪ್ರಶ್ನೆಯೇ ಇಲ್ಲ.
ಇಲ್ಲಿ ಮತ್ತೊಂದು ಬಹು ಮುಖ್ಯ ತಪ್ಪನ್ನು ಎಸಗಲಾಗುತ್ತಿದೆ. ಸರ್ಕಾರ ಮತ್ತು ಸರ್ಕಾರ ನಡೆಸುವ ಪಕ್ಷವನ್ನು ಏಕೀಭವಿಸುತ್ತಿರುವುದು ಮತ್ತು ಚುನಾವಣೆಗಳಲ್ಲಿ ಆಳುವ ಪಕ್ಷದ ಋಣ ತೀರಿಸಬೇಕೆಂದು ಬಯಸುವುದು ಇದು ಅತ್ಯಂತ ದೋಷಪೂರಿತ ಚಿಂತನೆ.
ರಾಜಕೀಯ ಪ್ರಭಾವ,ಒತ್ತಡಗಳ ಮೂಲಕ ಅನರ್ಹರಿಗೆ ಸ್ಥಾನಮಾನ ನೀಡಿದ್ದರೆ ಆಗ ಸರ್ಕಾರ ನಿರ್ದಿಷ್ಟ ಕರ್ತವ್ಯಗಳ ನಿರ್ವಹಣೆಗಾಗಿ ಸ್ಥಾಪಿಸಿದ ಸಂಸ್ಥೆಗಳನ್ನು ಅಪಮೌಲ್ಯಗೊಳಿಸಿದ್ದಕ್ಕಾಗಿ ಜನರ ದೂಷಣೆಗೆ ಒಳಗಾಗಬೇಕು ಮತ್ತು ಆ ಕಾರಣಕ್ಕಾಗಿ ಅದರ ಪ್ರಮಾಣಕ್ಕನುಗುಣವಾಗಿ ಮತದಾರರಿಂದ ಶಿಕ್ಷೆಗೆ ಒಳಗಾಗಬೇಕು.
ಅದಕ್ಕೆ ಬದಲಾಗಿ ಬೌದ್ಧಿಕ ವಲಯದಲ್ಲಿ ಬಾಲಂಗೋಚಿತನವನ್ನು ನಿರೀಕ್ಷೆ ಮಾಡುವುದು, ಇಂದು ದೇಶದೆಲ್ಲ ಬೌದ್ಧಿಕ ವಲಯ ಕೋಮುವಾದಿಗಳನ್ನು ದೂಷಣೆ ಮಾಡುತ್ತಿರುವ ಫ್ಯಾಸಿಸ್ಟ್ ಪ್ರವೃತ್ತಿಯ ಒಂದು ಅಂಶವೇ ಆಗಿದೆ.
ಇದು ದಿನೇಶರ ಬಗೆಗಿನ ವೈಯುಕ್ತಿಕ ಆರೋಪವಲ್ಲ.
ಪ್ರಜಾಪ್ರಭುತ್ವದ ಮೂಲಭೂತ ತತ್ವಗಳ ಸಂರಕ್ಷಣೆಯ ಬಗೆಗಿನ ಅವಶ್ಯ ವಿವರಣೆ.
ಅಕಾಡೆಮಿ ,ಪ್ರಾಧಿಕಾರಗಳ ಬಗೆಗಿನ ಈ ಚರ್ಚೆಯನ್ನು ಹೀಗೇ ಸರ್ಕಾರದ ಮುಖ್ಯಸ್ಥರ ಕೃಪೆಗೆ ಒಳಗಾಗಿ ಪದವಿ ಪಡೆಯುವ ವಿವಿಗಳ ವಿಸಿಗಳು, ವಿಜ್ಞಾನ, ತಾಂತ್ರಿಕ ಸಂಸ್ಥೆಗಳ ಮತ್ತು ಇತರ ಸಂಸ್ಥೆಗಳಿಗೂ ವಿಸ್ತರಿಸಿದರೆ ಆಗುವ ಅಪಾಯಗಳ ಬಗ್ಗೆ ಚಿಂತಿಸಿ ನೋಡಿ.

‍ಲೇಖಕರು avadhi

May 2, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: