ಪ್ರಸಾದ್ ಶೆಣೈ ಆರ್ ಕೆ
ಸುಂದರ ಬೆಳಗಿನಲ್ಲಿ ಆಕೆಯ ಕಾಲ್ಜೆಜ್ಜೆ ಕೆರೆದಂಡೆಯ ತುಂಬೆಲ್ಲಾ ಲಾಸ್ಯವಾಡುತ್ತಿದ್ದರೂ ಕ್ಷಣಾರ್ಧದಲ್ಲೇ ಅಳು ನಿಲ್ಲಿಸಿದ ಪುಟ್ಟ ಮಗುವಿನ ಆ ಬೆಳ್ಳಿ ಕಂಗಳಲ್ಲಿ ಜಿಗ್ಗೆನ್ನುತ್ತಾ ಮೂಡಿ ಬರುತ್ತದಲ್ಲಾ? ಆ ಬೆಳಕಾದ ಹನಿ ಹಾಗೇ ಕಾಣುತ್ತಿತ್ತು ಆ ಕಾಲ್ಜೆಜ್ಜೆ. ಮಾಗಿ ಮೂಡಿದ ಹೊಸತು. ಕೆರೆದಂಡೆಯ ಅಷ್ಟೂ ಮೆಟ್ಟಲಲ್ಲಿ ಚೆಲ್ಲಿದ್ದ ಹವಳದ ಹೂವು ಇಬ್ಬರ ಪಾದವನ್ನೂ ಸೋಕುತ್ತಿತ್ತು.
ಒಮ್ಮೆ ಅವಳ ಕಾಲ್ಗೆಜ್ಜೆಯನ್ನು ನೋಡುತ್ತಾ, ಮತ್ತೊಮ್ಮೆ ದಂಡೆಯಲ್ಲಿ ಬಿದ್ದಿದ್ದ ಹುಳು ಹುಪ್ಪಟೆಗಳನ್ನು ಹಿತವಾಗಿ ಹಿಡಿದು ಸಂಭ್ರಮಿಸುತ್ತಾ ಇದ್ದ ಟಿಟ್ಟಿಭ ಹಕ್ಕಿ, ಬೆಳಗು ಸೂರ್ಯನ ಬೆರಗಾದ ಬೆಳಕಲಿ ನಿನ್ನ ಕಣ್ಣ ಹೊಳಪು ಕೂಡ ಚಿತ್ರ ಬರೆದಿದೆ ಅಂತ ಯಾವುದೋ ಹೊಂಬೆಳಗಿನಲ್ಲಿ ನಾನು ಕಲ್ಪಿಸಿಕೊಂಡು ಬರೆದಿದ್ದ ಸಾಲು ಈಗ ನಿಜಕ್ಕೂ ನಿಜವಾಗಿ ನನ್ನ ಕಣ್ಣೆದುರೇ ಆವಿರ್ಭವಿಸಿ ಹೋಗುತ್ತಿತ್ತು. ಮಾಗಿ ಹಗಲು ಸೂರ್ಯ ನಿಂಗೆ ಮುತ್ತು ಕೊಟ್ಟು ಬಿಟ್ಟ. ಕಿರುಬೆರಳ ಸೋಕಿ ಅಲ್ಲೇ ಟೆಂಟು ಹಾಕಿ ಬಿಟ್ಟ ಅಂತ ಬರೆದಿದ್ದ ಇನ್ನೊಂದು ಸಾಲು ಕೂಡ ತನ್ನೆಲ್ಲಾ ಕಲ್ಪನೆಗಳನ್ನು ಕಳೆದುಕೊಂಡು ಈಗ ನಿಜ ನಿಜವಾಗುತ್ತಿತ್ತು.
ನೀವೇ ಹೇಳಿ ನಾನು ಮೇಲೆ ವಿವರಿಸಿದ ಕ್ಷಣ ನಿಜವಾದ ಪ್ರೇಮಿಯೊಬ್ಬನ, ಗಾಢವಾದ ಜೀವನ ಪ್ರೀತಿಯ ಚೆಲುವನೊಬ್ಬನ, ಪ್ರೀತಿಗೂ ತನ್ನೆದುರು ನಿಜವಾಗಿಯೇ ಇರುವ ಪ್ರಕೃತಿಗೂ ಲಿಂಕ್ ಕೊಡುತ್ತಾ ಹೋಗುವ ಅಪ್ಪಟ ಪರಿಸರ ಪ್ರೇಮಿಯೊಬ್ಬನ, ಗಾಢವಾಗಿ ಬದುಕಬೇಕು ಗಾಢವಾಗಿ ಪ್ರೀತಿಸಬೇಕು. ಬದುಕನ್ನು ರಮಿಸುತ್ತಾ ಬರೆಯಬೇಕು ಅನ್ನೋ ತುಂಬು ಬರಹಗಾರನ, ಅಮೂರ್ತ ಕ್ಷಣ ಅಂತ ಅನ್ನಿಸುತ್ತಿಲ್ಲವಾ ನಿಮಗೆ. ನಂಗಂತೂ ಅನ್ನಿಸುತ್ತಿದೆ. ಇವರೆಲ್ಲರಿಗೂ ಬದುಕು ಕಟ್ಟಲು ಈ ಅಮೂರ್ತ ಕ್ಷಣವೊಂದು ಒದಗಿದ್ದರೆ ಸಾಕು ಅಂತಲೂ ಅನ್ನಿಸುತ್ತಿದೆ ನಂಗೆ.
ಆದರೆ ಬೇಜಾರಾಗೋದು ಅಂದ್ರೆ ಈ ನಾವು ನಿಜಕ್ಕೂ ಗಾಢವಾಗಿ ಪ್ರೀತಿಸುವವಳೊಬ್ಬಳ ಜೊತೆ ಈ ಅಮೂರ್ತ ಕ್ಷಣವನ್ನು ಕಳೆಯುತ್ತಿದ್ದೇವಾ? ಕಳೆಯುತ್ತಿದ್ದರೆ ಅದನ್ನು ಹೇಗೆ ಕಳೆಯುತ್ತಿದ್ದೇವೆ? ಪಾರ್ಕ್ ಗಳ ನೂರಾರು ಪಿಸುಮಾತುಗಳೊಂದಿಗೆ, ನೂರಾರು ಮೈಗಳ ಬಿಸಿ ಬಿಸಿ ಸ್ಪರ್ಶದೊಂದಿಗೆ ನಮ್ಮದೂ ಒಂದೂ ಸ್ಪರ್ಶ ಅಂತಲಾ? ಅವರೂ ಮಾಡ್ತಾರೆ ನಾವು ಹೋಗೋಣ ಬಾ ಅಂತ ಅನುಕರಣೆಯ ರಾಗಕ್ಕೊಲಿದು ನಾವೂ ಪ್ರೀತಿಸುವ ಅನ್ನೋ ಹುಚ್ಚಿನಿಂದಲಾ? ಹೇಗೆ ಕಳೆಯುತ್ತಿದ್ದೇವೆ ನಾವು ನಮ್ಮೊವರೊಂದಿಗಿನ ಈ ಅಮೂರ್ತ ಕ್ಷಣವನ್ನು? ತುಂಬಾ ಪಾರ್ಕ್ ಗಳಲ್ಲಿ ಕೈ ಕೈ ಹಿಡಿದುಕೊಂಡು ಕದ್ದು ಮುಚ್ಚಿ ಮುತ್ತುಕೊಟ್ಟುಕೊಂಡು ನೂರಾರು ಸೆಲ್ಫಿ ತೆಗೆದುಕೊಂಡು ಹೋಗುವ ಪ್ರೇಮಿ ಅಂತ ಗುರುತಿಸಿಕೊಳ್ಳುವವರನ್ನು ನೋಡಿದರೆ ರೇಜಿಗೆಯೂ. ಇದೇನಾ ಪ್ರೀತಿ ಅನ್ನೋ ಪ್ರಶ್ನೆಯೂ ಏಕಕಾಲಕ್ಕೆ ಹುಟ್ಟಿ ಬಿಡುತ್ತದೆ.
ಯಾಕೋ ಎಲ್ಲವನ್ನೂ ಪಡೆದುಕೊಳ್ಳುವ ಇಲ್ಲಿನ ಅವಸರ ಸಾವಧಾನದ ಬೆನ್ನೇರಿದೆ ಅಂತ ಅನ್ನಿಸೋದೇ ಇಲ್ಲ. ಬರೀ ಅವಸರವೇ ಮತ್ತೊಂದು ಅವಸರದ ಬೆನ್ನೇರಿದೆ ಅನ್ನಿಸಿ ಬಿಡುತ್ತದೆ. ತಾವಿಬ್ಬರೂ ಸೆಲ್ಫಿಯಲ್ಲಿ ಚಂದ ಕಾಣ್ಬೇಕು ಅಂತ ಭ್ರಮಿಸುವ ಜೋಡಿಗಳು ಬದುಕನ್ನು ಚಂದಗಾಣಿಸಲು ಏನೇನು ಮಾಡಬೇಕು.? ಅಂತ ಆ ಕ್ಷಣಕ್ಕೆ ಮಾತಾಡಿಕೊಳ್ಳೋದೇ ಇಲ್ಲ. ಎಲ್ಲವನ್ನೂ ಎಲ್ಲರನ್ನೂ ಪ್ರೀತಿಯಿಂದಲೇ ಗೆಲ್ಲೋದು ಹೇಗೆ ಅಂತ ಯೋಜನೆ ಮಾಡಲ್ಲ. ತಮ್ಮ ಬಾಲ್ಯ ಹೇಗಿತ್ತು ಹೇಳಿಕೊಳ್ಳಲ್ಲ… ತನ್ನ ಮೊದಲ ಗೆಳೆತಿ ಹೇಗಿದ್ದಳು ಹೂಂ ಅದೂ ಹೇಳಿಕೊಳ್ಳಲ್ಲ.
ಜೀವನದಲ್ಲಿ ಸವಾಲನ್ನು ಎದುರಿಸಿ ಪ್ರೀತಿ ಗೆಲ್ಲೋಣವಾ ಅಂತಲೂ ಯಾವುದೇ ದೃಢ ನಿರ್ಧಾರ ಮಾಡಲ್ಲ. ಆದರೆ ನೂರಾರು ಮುತ್ತುಗಳನ್ನು ಕೊಡ್ತಾರೆ. ಮೌನ ಇವರಿಗೆ ಬೇಡ. ಇಬ್ಬರ ಕಣ್ಣ ಬೆಳಕು ಇಬ್ಬರೊಳಗೆ ಇಳಿಯಬೇಕು ಅನ್ನೋ ಪರಿಕಲ್ಪನೆ ಇವರಿಗೆ ಬೇಡ. ಆದರೆ ನೀನು ಇಲ್ಲದೇ ಬದುಕಿಲ್ಲ ಅಂತ ಅಸಹಜ ಮತ್ತು ಯಾವ ಪ್ರೇಮಿಯೂ ಆಡಬಾರದ ದುರಂತಮಯ ಈ ಸಾಲೊಂದನ್ನು ಹೇಳಿಬಿಡ್ತಾರೆ. ಅಷ್ಟೊತ್ತಿಗೆ ಮಾತು ಕಳೆಯುತ್ತದೆ. ಪಾರ್ಕ್ ಕೂಡ ಆ ಮಾತುಗಳನ್ನು ಮರೆತುಬಿಟ್ಟು ಮತ್ತೊಂದು ಕ್ಷಣಕ್ಕೆ ಅಣಿಯಾಗುತ್ತದೆ. ಮನದ ಪಾರ್ಕ್ ತುಂಬಿಕೊಳ್ಳದೇ ನೀನಿಲ್ಲದೇ ಬದುಕಿಲ್ಲ ಅನ್ನೊವಷ್ಟಕ್ಕೇ ನಿಂತು ಬಿಡುತ್ತದೆ…
ಯಾರು ಕೈ ಬಿಟ್ಟರೂ ನೀ ಬಿಡದಿರು ನೀನೆನ್ನ ತಾಯ್ ತಂದೆ ಗುರು ದೇವರು…
ನಿನ್ನೊಡೆನೆ ಹಿಂದೆನಿತೊ ಸಾರಿ ಹುಟ್ಟಿದೆ ಸಾತ್ತೆ,
ಮುಂದೆಯೂ ನಿನ್ನೊಡನೆ ಜನ್ಮ ಜನ್ಮವನೆತ್ತೆ
ಹಿಂಜರಿಯನೈ ಕ್ಲೇಶ ಕಷ್ಟದಿ ಮತ್ತೆ ಮತ್ತೆ
ಸಂಸಾರ ಲೀಲೆಯ ರಾಸ ವರ್ತುಲದಿ ಸುತ್ತೆ.
ತಮ್ಮ ಪತ್ನಿ ಹೇಮಾವತಿಗೆ ಕುವೆಂಪು ಬರೆದ ಜೀವೋಜ್ವಲ ಸಾಲುಗಳು ಮತ್ತೆ ಮತ್ತೆ ಕಾಡ್ತಾ ಇದ್ದವು. ರವಿ ದಂಪತಿಗಳು ಅದೇಗೆ ಒಲವಿನಿಂದ ಬದುಕಿರಬಹುದು ಅಂತ ಯೋಚನೆಗೆ ಹಚ್ಚಿದವು ಸಾಲುಗಳು…
ಪ್ರೀತಿ ಅಂದ್ರೆ ಕಷ್ಟದಲ್ಲೂ ಹಿತವಾಗಿ ಬದುಕೋದು. ಕತ್ತಲಿನಲ್ಲೂ ಬೆಳಕಿನ ಅನಂತ ಪುಂಜವನ್ನೇ ಕಾಣೋದು. ನಿನ್ನಲ್ಲಿ ಬೆಳಕಿಲ್ವಾ ಹೋಗಲಿ ನನ್ನಲ್ಲಿದೆಯಲ್ಲಾ ನನ್ನಲ್ಲಿದ್ದರೆ ಅದೂ ನಿಂದೇ ತಾನೇ ಅಂತ ಬೆಳಕು ಕೊಡುತ್ತಾ ಪಡೆಯುತ್ತಾ ಉತ್ಕಟವಾಗಿ ಬದುಕೋದು.
ಕಲ್ಪನೆಯಲ್ಲಿ ನೂರು ಸಾಲು ಬರೆದರೂ ವಾಸ್ತವದಲ್ಲಿ ಸಹ್ಯವಾಗಿ ಬದುಕೋದು. ಹೊಸದಾದ ಸಾಹಸಗಳಿಗೆ, ವೇದನೆಗಳಿಗೆ, ಸಡಗರಗಳಿಗೆ, ಮುಂದೆ ನಮ್ಮಲ್ಲಿ ಬಿಕ್ಕಟ್ಟು ಬಂದರೂ ಅದನ್ನು ಒಲವಿನ ಮುಲಾಮು ಹಚ್ಚಿ ಪರಿಹರಿಸಿ ಬಿಡ್ತೀವಿ ಅನ್ನೋ ಭಾವಗಳನ್ನು ಹುಟ್ಟಿಸುತ್ತಲ್ಲ? ಅವಳ ಗೆಜ್ಜೆಯೊಂದು ತೇಲಿಕೊಂಡು ಬದುಕಿನ ಹೆಜ್ಜೆಗೂ ಜೆತೆಯಾಗ್ತೀನಿ ಮಾರಾಯ ಅಂತ ಪಿಸುನುಡಿಯುತ್ತಲ್ಲ ಇದು ಅಮೂರ್ತ ಕ್ಷಣ ಅಂದ್ರೆ..!!
ಇಂತದ್ದೇ ಅಮೂರ್ತ ಕ್ಷಣಗಳು ಯೌವ್ವನದಲ್ಲಿ ನಿಮ್ಮವನ, ನಿಮ್ಮವಳ ಭೇಟಿಗಳಲ್ಲಿ ತೇಲಿಕೊಂಡು ಬರಲಿ. ಹೀಗೆ ಬದುಕುತ್ತಾ ಬದುಕನ್ನು ಸಹ್ಯವಾಗಿಸುತ್ತಾ ಸಾಗುವ ದಿವ್ಯ ಜೀವಗಳು ಈ ಮಾಗಿಯ ತಂಪಿನಲ್ಲಿ ಕಾರ್ತಿಕದ ಹಣತೆಯ ಕಂಪಿನಲ್ಲಿ ದೇದೀಪ್ಯಮಾನವಾಗಲಿ.
ನೀನಿರಲು ನನ್ನೊಡನೆ ದುಮುಕೆ ಹೆದರಿಕೆ ಏಕೆ
ಸರ್ಪಕಾಳಿಯನಿರ್ಪ ಮಡುವಾದರೂ?
ನೀಂ ಬರಲು ಬೆಂಬಿಡದೇ ನನಗನ್ಯರೇಂ ಬೇಕೆ?
ನೀಂ ಬಂದೆ ಬಹೆ ಕೊಂಚ ತಡವಾದರೂ
ಕುವೆಂಪು ಅವರ ಹೇಮಾವತಿಯಂತವಳೂ ನನಗೂ ನನ್ನಂತಿರುವ ನಿಮಗೂ ಧಕ್ಕಲಿ…





ಹಾ… ಖಂಡಿತಾ ಸಿಗಲಿ..ನಮ್ಮ ಹಾರೈಕೆಯೂ ಅದೇ..