-ರಾ ಬಂದೋಳ್
ಆ ಶಿಥಿಲವಾದ ಬಿಲ್ಡಂಗ್ ನ ಒಂದು ರೂಮಿನಲ್ಲಿ ರಂಗನಾಥ್ ಮೇಷ್ಟ್ರು ಗಹನವಾದದ್ದೇನನ್ನೋ ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದರು. ನಾವಿಬ್ಬರೂ ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದೆವು. ನನಗೆ ಇಂಗ್ಲಿಷ್ ಗ್ರಾಮರ್ ಚೆನ್ನಾಗಿಯೇ ಗೊತ್ತಿತ್ತಾದರೂ ನಾನು ಕಾಲೇಜಿನ ವಿಷಯಗಳನ್ನು ಬಿಟ್ಟು ಬೇರೇನನ್ನೂ ಇಂಗ್ಲಿಷ್ ನಲ್ಲಿ ಓದಿರಲಿಲ್ಲ. ಅಂದರೆ ಕತೆ, ಕಾದಂಬರಿ, ಫಿಲಾಸಫಿ ಇತ್ಯಾದಿ ಇತ್ಯಾದಿ. ಅವರು ಹೇಳುವುದನ್ನು ಅರ್ಥ ಮಾಡಿಕೊಳ್ಳುವಷ್ಟು ಶಬ್ಧ ಭಂಡಾರ ನನ್ನಲ್ಲಿರಲಿಲ್ಲ. ನನ್ನ ಗೆಳಯ ಪುನೀತಣ್ಣನಿಗಂತೂ ಇಂಗ್ಲಿಷ್ ಎಂದರೆ ಏನೋ ಆಕರ್ಷಣೆ, ಮೋಹ. ಅವನಿಗೆ ಇಂಗ್ಲಿಷ್ ನಯಾಪೈಸೆ ಬರುತ್ತಿರಲಿಲ್ಲ. ಅದೇಗೆ ಸ್ಕೂಲಿನಲ್ಲಿ ಇಂಗ್ಲಿಷ್ ಲಾಂಗ್ವೇಜ್ ಪಾಸಾದನೆಂದು ಅವನಿಗೂ ಗೊತ್ತಿಲ್ಲ. ಅವನಿಗೆ ಸರಾಗವಾಗಿ ಇಂಗ್ಲಿಷ್ ನಲ್ಲಿ ಯಾರಾದರೂ ಮಾತನಾಡುವುದನ್ನು ಕೇಳುತ್ತಿದ್ದರೆ ಗರಬಡಿದವನಂತೆ ಕೇಳುತ್ತಿದ್ದ. ಇವನ ಪ್ರಕಾರ ಯಾರಾದರೂ ಇಂಗ್ಲಿಷ್ ಅನ್ನು ಸರಾಗವಾಗಿ ಮಾತನಾಡಿದರೆ ಅವರಿಗೆ ಪ್ರಪಂಚದ ಎಲ್ಲವೂ ಗೊತ್ತೆಂದೇ ಅರ್ಥ.
ಅವರು ಒಳ್ಳೆಯ ಬಟ್ಟೆ, ಚಪ್ಪಲಿ, ಶೂ, ಸಿಂಪಲ್ಲಾಗಿ ಹೇಳುವುದಾದರೆ ಬ್ರ್ಯಾಂಡೆಡ್ ಅನ್ನೇ ಹಾಕಿರುತ್ತಾರೆಂದು ಅರ್ಥ. ಅವರು ಶ್ರೀಮಂತರೆಂದೇ ಅರ್ಥ. ಅವರ ಮನೆಯಲ್ಲಿ ಒಂದಾದರೂ ಕಾರು ಇರುತ್ತದೆಂದೇ ಅರ್ಥ. ಆದರೆ ಮೇಷ್ಟ್ರು ಒಳ್ಳೆಯ ಇಂಗ್ಲಿಷ್ ಮಾತನಾಡುತ್ತಿದ್ದರಾದರೂ ಅವರು ಬ್ರ್ಯಾಂಡೆಡ್ ಬಟ್ಟೆ ಹಾಕದಿರುವದು, ಅವರು ಸೈಕಲ್ಲಿನಲ್ಲಿ ಬರುವದು ಇವನಿಗೆ ಅರಗಿಸಿಕೊಳ್ಳಲಾಗುತ್ತಿರಲಿಲ್ಲ. ಇವರಿಬ್ಬರೂ ಒಬ್ಬರಿಗೊಬ್ಬರು ಅದೆಲ್ಲಿ ಗಂಟು ಬಿದ್ದರೆಂದು ನನಗೆ ಗೊತ್ತಿಲ್ಲ. ಆದರೆ ಆ ಗಂಟಿನೊಳಗೆ ನನ್ನನ್ನೂ ಎಳೆದು ತೂರಿಸಿದ್ದರು. ನಾನು ಆಗ ಪಿಯುಸಿ ಮಾಡುತ್ತಿದ್ದೆ, ಪುನೀತಣ್ಣ ಬಿ.ಕಾಮ್ ಡಿಗ್ರಿ ಮಾಡುತ್ತಿದ್ದ. ನಾವು ಒಬಿಸಿ ಹಾಸ್ಟೆಲ್ ನಲ್ಲಿ ರೂಮ್ ಮೇಟ್ಸ್. ಪುನೀತಣ್ಣ ಬೆಳೆಗ್ಗೆ ಕಾಲೇಜಿಗೆ ಹೋಗುತ್ತಿದ್ದ. ರಾತ್ರಿಯಿಂದ ಬೆಳಗ್ಗೆವರೆಗೆ ಶಿವಪ್ಪ ನಾಯಕ ಸರ್ಕಲ್ಲಿರುವ ನಂದಿನಿ ಡೈರಿಯಲ್ಲಿ ಕೆಲಸ ಮಾಡುತ್ತಿದ್ದ. ನನಗನಿಸುತ್ತೆ ಇವರಿಬ್ಬರೂ ಅಲ್ಲಿ ಗಂಟುಬಿದ್ದರೆಂದು! ನಾನು ಚೆನ್ನಾಗಿ ದುಡಿಯುವಾಗ ಮೇಷ್ಟ್ರಿಗೆ ಬ್ರ್ಯಾಂಡೆಡ್ ಬಟ್ಟೆ, ಶೂ ಕೊಡಿಸುತ್ತೇನೆ ಅನ್ನುತ್ತಿದ್ದ. ಆಗ ಅವರ ಇಂಗ್ಲಿಷ್ ಗೊಂದು ನ್ಯಾಯ ಸಿಕ್ಕಂತಾಗುತ್ತದೆಂದು ಹೇಳುತ್ತಿದ್ದ.
ನಾವಿಬ್ಬರೂ ಸಮಯ ಸಿಕ್ಕಾಗಲೆಲ್ಲ ಮೇಷ್ಟ್ರ ರೂಮಿಗೆ ಹೋಗುತ್ತಿದ್ದೆವು. ಇವನು ಬಹಳ ಪ್ರೀತಿಯಿಂದ “ಸಾರ್, ಇಂಗ್ಲಿಷ್ ನಲ್ಲಿ ಏನಾದರೂ ಮಾತನಾಡಿ ಅನ್ನುತ್ತಿದ್ದ” ಅವರು ಮಾತನಾಡುತ್ತಿದ್ದರು. ಇವನು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ. ನನಗೆ ಅಲ್ಲಲ್ಲಿ ಒಂದೊಂದು ಪದಗಳು ಎಲ್ಲೋ ಕೇಳಿದಂತೆ ಅನಿಸುತ್ತಿತ್ತು. ಇಂಗ್ಲಿಷ್ ಲಾಂಗ್ವೇಜ್ ಕ್ಲಾಸಿನಲ್ಲಿರಬೇಕು. ಆಗಲೇ ಹೇಳಿದೆನೆಲ್ಲಾ, ಮೇಷ್ಟ್ರು ಗಹನವಾದದ್ದೇನನ್ನೋ ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದರು. ಅವರು ಹಾಗೆ ಮಾತನಾಡುತ್ತಾ ಯಾವಾಗಲೂ ಕಿಡಿಕಿಯಿಂದ ರಸ್ತೆಯನ್ನು ವಾರಗಣ್ಣಿನಲ್ಲಿ ನೋಡುತ್ತಾ ಇರುತ್ತಿದ್ದರು. ಯಾಕೆಂದರೆ ಅವರ ಅವ್ವ ಅವರನ್ನು ಆಗಾಗ ಹುಡುಕಿಕೊಂಡು ಬರುತ್ತಿದ್ದರು. ಇವರನ್ನು ಮದುವೆಗೆ ಒಪ್ಪಿಸಲು ಪ್ರಯತ್ನಿಸುತ್ತಿದ್ದರು. ಸೋತು ಹಿಂತಿರುಗುತ್ತಿದ್ದರು. ಮೇಷ್ಟ್ರಿಗೆ ಮದುವೆ ಇಷ್ಟವಿರಲಿಲ್ಲವೆಂದು ಒಮ್ಮೆ ಹೇಳಿದ್ದರೆಂದು ಪುನೀತಣ್ಣ ನನಗೆ ಹೇಳಿದ್ದ. ಯಾಕೆಂದು ನಾವು ಯಾವತ್ತೂ ಕೇಳಿರಲಿಲ್ಲ. ಕೇಳಬೇಕೆಂದು ನಮಗೆ ಅನ್ನಿಸಿಯೇ ಇರಲಿಲ್ಲ. ಆಗ ಅದು ನಮ್ಮದಲ್ಲದ ಪ್ರಪಂಚದ ವಿಚಾರ. ಮೇಷ್ಟ್ರಿಗೆ ಕಿಡಕಿಯಿಂದ ಅವರ ಅವ್ವ ಏನಾದರೂ ಕಾಣಿಸಿದರೆ, ರೂಮಿಗೆ ಬೀಗ ಹಾಕಿ ಟೆರೇಸ್ ಮೇಲೆ ಹೋಗಿ ಕುಳಿತುಕೊಳ್ಳುತ್ತಿದ್ದರು. ಅವ್ವ ಹೊತ್ತು ಮುಳುಗುವವರೆಗೂ ಕಾದು ಹಿಂತಿರುಗುತ್ತಿದ್ದರು. ನಂತರ ಮೇಷ್ಟ್ರು ವಾಪಾಸ್ಸು ರೂಮು ಸೇರಿಕೊಳ್ಳುತ್ತಿದ್ದರು. ಇದು ಅವ್ವ-ಮಗ ಇಬ್ಬರಿಗೂ ಅಭ್ಯಾಸವಾಗಿ ಹೋಗಿದೆ. ಅವ್ವ ಬರುವುದು ಬಿಟ್ಟಿಲ್ಲ. ಇವರು ಮದುವೆಗೆ ಒಪ್ಪಿಲ್ಲ. ಇದು ವರುಷಗಳಿಂದ ನಡೆಯುತ್ತಿದೆ.
ಮೇಷ್ಟ್ರು ಇಂಗ್ಲಿಷಿನಲ್ಲಿ ಮಾತನಾಡುವುದು ಪುನೀತಣ್ಣನಿಗೆ ಅರ್ಥವಾಗುವುದಿಲ್ಲ, ಅದು ಅವರಿಗೂ ಗೊತ್ತು, ಅದರೆ ಇವನು ಕೇಳುವುದು ಬಿಟ್ಟಿಲ್ಲ, ಇವನು ಕೇಳಿದಾಗ ಅವರು ಮಾತನಾಡದೇ ಇರುತ್ತಿರಲಿಲ್ಲ. ಎದುರಿನವರಿಗೆ ನಾವು ಹೇಳುವುದು ಅರ್ಥವಾಗುವುದಿಲ್ಲವೆನ್ನುವುದು ಗೊತ್ತಾಗಿಯೂ ಹೇಗೆ ಮಾತನಾಡಬಹುದು? ಹಾಗು ಏನು ಮಾತನಾಡಬಹುದು? ಅರ್ಥವಾಗುವುದಿಲ್ಲವೆಂದು ಗೊತ್ತಾಗಿಯೂ ಇವನು ತದೇಕಚಿತ್ತದಿಂದ ಅದೇನು ಕೇಳಿಸಿಕೊಳ್ಳಬಹುದು? ಅದೇನು ಅರ್ಥ ಮಾಡಿಕೊಳ್ಳಬಹುದು? ಇದು ಇವರಿಬ್ಬರ ಪ್ರಪಂಚ, ಇದೂ ಕೆಲವು ವರ್ಷಗಳಿಂದ ಹೀಗೆಯೇ ಚಲಿಸುತ್ತದೆ.
ಒ.ಬಿ.ಸಿ. ಹಾಸ್ಟೆಲ್ ಹುಡುಗರು ಪರೀಕ್ಷೆಗಳು ಹತ್ತಿರ ಬಂದಾಗ ಕೆಲವು ತಿಂಗಳು ಹೊರಗಡೆ ರೂಮ್ ಮಾಡಿಕೊಂಡು ಓದುವುದು ತುಂಬಾ ಸಾಮಾನ್ಯವಾಗಿತ್ತು, ವಿಶೇಷವಾಗಿ ಪಿ.ಯು.ಸಿ ವಿಧ್ಯಾರ್ಥಿಗಳು. ಊಟಕ್ಕೆಂದು ಹಾಸ್ಟೆಲ್ ಗೆ ಬಂದು ಹೋಗುತ್ತಿದ್ದೆವು. ಆಗ ನಾನು ನನ್ನ ಗೆಳೆಯ ಪ್ರಶಾಂತ್ ವೆಂಕಟೇಶ್ವರ ಬಿಲ್ಡಿಂಗ್ ನಲ್ಲಿ ರೂಮ್ ಮಾಡಿಕೊಂಡು ಓದುತ್ತಿದ್ದೆವು. ಅವನು ಶನಿವಾರ ಮತ್ತು ಭಾನುವಾರ ಊರಿಗೆ ಹೋಗಿ ಮತ್ತೆ ಸೋಮುವಾರ ವಾಪಾಸ್ಸು ಬರುತ್ತಿದ್ದ. ನಾನು ಒಮ್ಮೊಮ್ಮೆ ಮಧ್ಯಾಹ್ನ ಊಟ ಮಾಡಿ ಮಲಗಿದರೆ ಮತ್ತೆ ಮರುದಿನ ಬೆಳಗ್ಗೆ ಏಳುತ್ತಿದ್ದೆ, ವಿಶೇಷವಾಗಿ ರಜಾದಿನಗಳಲ್ಲಿ. ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಗೆಲ್ಲಾ ಏಳುತ್ತಿದ್ದೆ. ಹಾಗೆ ಎದ್ದವನು ನೇರವಾಗಿ ಬಿ.ಹೆಚ್. ರಸ್ತೆಗುಂಟಾ ನಡೆದು ಹೋದರೆ ಪುನೀತಣ್ಣ ಕೆಲಸ ಮಾಡುವ ಬೇಕರಿ ಸಿಗುತ್ತಿತ್ತು. ಅವನು ನಾನು ತಲುಪುವ ಹೊತ್ತಿಗೆ, ಒಮ್ಮೊಮ್ಮೆ ನಂದಿನಿ ಹಾಲಿನ ಟ್ರಕ್ ಗಳಿಂದ ಹಾಲು ಇಳಿಸಿಕೊಳ್ಳುತ್ತಿದ್ದ, ಒಮ್ಮೊಮ್ಮೆ ಇಳಿಸಿದ ಹಾಲನ್ನು ಬೇಕರಿಯೊಳಗೆ ಜೋಡಿಸುತ್ತಿರುತ್ತಿದ್ದ, ಒಮ್ಮೊಮ್ಮೆ ಎಲ್ಲಾ ಕೆಲಸಗಳು ಮುಗಿದು ಬಿಸಿ ಬಿಸಿ ಟೀ, ಬಾದಾಮಿ ಹಾಲು ಮಾಡಿರುತ್ತಿದ್ದ. ಅಷ್ಟು ಬೆಳ್ಳಂಬೆಳಗ್ಗೆ ಜನಗಳು ಅದೆಲ್ಲಿಂದ ಬರುತ್ತಿದ್ದರೋ? ಟೀ ಅಥವಾ ಬಾದಾಮಿ ಹಾಲು, ತಮಗೆ ಬೇಕಾದ್ದನ್ನು ಕೊಂಡು ಕುಡಿಯುತ್ತಾ ಬೆಳಗನ್ನು ಸವಿಯುತ್ತಿದ್ದರು. ಕೆಲವರು ಬನ್ ಕೊಂಡು ಅದರೊಳಗೆ ಅದ್ದಿಕೊಂಡು ಮೆಲ್ಲುತ್ತಿದ್ದರು. ನಾನು ಟೀ-ಬನ್ ಮೆಲ್ಲುವವರ ಬಳಗದವನು.
ಸರ್ಕಲ್ಲಿನಲ್ಲಿರುವ ಕೆಳದಿಯ ಶಿವಪ್ಪ ನಾಯಕ ಇದಕ್ಕೆಲ್ಲಾ ಸಾಕ್ಷಿಯಾಗಿ ನಮ್ಮನ್ನೆಲ್ಲಾ ನೋಡುತ್ತಾ ಬೆಳ್ಳಂಬೆಳಗ್ಗೆ ತಾನೇನು ತಿನ್ನುತ್ತಿದ್ದನೆಂದು ನೆನಸಿಕೊಳ್ಳುತ್ತಿದ್ದ, ಅದೇನೇ ಇದ್ದರೂ ಈ ಟೀ-ಬನ್ ಗಿಂತ ಚೆನ್ನಾಗಿರಲಿಕ್ಕಿಲ್ಲ ಬಿಡು. ಪುನೀತಣ್ಣನ ಪಾಳಿ ರಾತ್ರಿ ಹತ್ತರಿಂದ ಬೆಳಗ್ಗೆ ಏಳರವರೆಗೆ, ರಾತ್ರಿ ಮಲಗಲು ಸಮಯವಿರುತ್ತಿತ್ತು ಹನ್ನೊಂದು-ಹನ್ನೆರಡರ ಮೇಲೆ, ಪಟ್ಟಣವೆಲ್ಲಾ ಮಲಗಿದ ಮೇಲೆ. ಆ ನೀಲಿ ತಗಡಿನ ಪುಟ್ಟ ಡೈರಿಯೊಳಗೆ, ಖರ್ಚಾಗದೆ ಉಳಿದ ಸ್ಟೊವ್ ಮೇಲಿನ ಟೀ, ಬಾದಾಮಿ ಹಾಲು, ಗ್ಯಾಸ್ ಸಿಲಿಂಡರ್, ಜೋಡಿಸಿಟ್ಟಿರುವ ಉಳಿದ ನಂದಿನಿ ಹಾಲು ಹಾಗು ಮೋಸರಿನ ಪ್ಯಾಕೆಟ್ ಗಳ ಮಧ್ಯೆ ಶಂಖದ ಹುಳು ತನ್ನ ಶಂಖದೊಳಗೆ ಸೇರಿಕೊಳ್ಳುವ ಹಾಗೆ ಸೇರಿ ಮಲಗುತ್ತಿದ್ದ. ನೀಲಿ ಮಿಠಾಯಿಯಂತೆ ಕಾಣುವ ಆ ಬೇಕರಿಯ ನೀಲಿ ತಗಡಿನ ಮೇಲೆ ನಂದಿನಿ ಹಾಲು ಎಂದು ಬರೆದ ಬಿಳಿಯ ಅಕ್ಷರಗಳನ್ನು ರಸ್ತೆದೀಪಗಳು ಹೊಳೆಯಿಸಲು ಯತ್ನಿಸುತ್ತಿದ್ದವು. ಬೆಳಗ್ಗೆ ಮೂರು-ನಾಲ್ಕಕ್ಕೆಲ್ಲಾ ಏಳಬೇಕು, ನಂದಿನಿ ಹಾಲಿನ ಟ್ರಕ್ ಬರುವ ಹೊತ್ತಿಗೆಲ್ಲಾ. ಅವನ ಶಿಫ್ಟ್ ಮುಗಿದ ಮೇಲೆ ಹಾಸ್ಟೆಲ್ ಗೆ ಹೋಗಿ, ಸ್ನಾನ ಮಾಡಿ ತಿಂಡಿ ತಿಂದು ಕಾಲೇಜಿಗೆ ಹೋಗುತ್ತಿದ್ದ. ಒಮ್ಮೊಮ್ಮೆ ಹಾಲಿಗೆ ಇದ್ದಕ್ಕಿದ್ದ ಡಿಮ್ಯಾಂಡ್ ಬಂದು, ಹಾಲು ಬೇಗ ಖಾಲಿಯಾದರೆ, ದಿನದ ೨೪ ಗಂಟೆಯೂ ಹಾಲು ಸಿಗುವ ನಂದಿನಿಯವರ ಮಿಲ್ಕ್ ಸೆಂಟರ್ ಗೆ ತನ್ನ ಅಟ್ಲಾಸ್ ಸೈಕಲ್ಲಿನಲ್ಲಿ ಹೋಗಿ, ದೊಡ್ಡ ಎರಡು ಚೀಲಗಳಲ್ಲಿ ೨೫, ೨೫ ಲೀಟರ್ ಹಾಲು ತುಂಬಿಸಿಕೊಂಡು ಸೈಕಲ್ ಹ್ಯಾಂಡಲ್ ನ ಎರಡೂ ಕಡೆ ಒಂದೊಂದು ಚೀಲ ನೇತು ಹಾಕಿಕೊಂಡು ನನ್ನನ್ನೂ ಹಿಂದೆ ಕೂರಿಸಿಕೊಂಡು ಸೈಕಲ್ ಹೊಡೆಯುತ್ತಿದ್ದ, ಭೀಮನಂತವನು ನನ್ನ ಗೆಳೆಯ ಪುನೀತಣ್ಣ.
ಭಾನುವಾರ ಬಂತೆಂದರೆ, ಅವನ ಶಿಫ್ಟ್ ಮುಗಿದ ಮೇಲೆ ನಾನು, ಅವನೂ ಹಾಗೂ ಮೇಷ್ಟ್ರು ಒಟ್ಟಿಗೆ ವಿಷ್ಣು ಭವನದಲ್ಲಿ ದೋಸೆ ತಿನ್ನುತ್ತಿದ್ದೆವು, ಸಿನೆಮಾ ನೋಡುತ್ತಿದ್ದೆವು. ಅವರು ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದರು ಇವನು ಕೇಳಿಸಿಕೊಳ್ಳುತ್ತಿದ್ದ. ಅವರು ಇವನು ಕೇಳದ ಹೂರತು ಮಾತನಾಡಿದ್ದು ತುಂಬಾ ಕಡಿಮೆ. ಇವನ ಇಂಗ್ಲಿಷ್ ಹೊರತು ಬೇರೇನನ್ನಾದರೂ ಕೇಳಿದ್ದು ಕಡಿಮೆ. ನಮ್ಮ ಮೂವರ ಮಧ್ಯೆದ ಮೌನವೂ ಅರ್ಥವಾಗದ ಆದರೂ ಮುದ ನೀಡುವ ಸಂಭಾಷಣೆ. ಅವನು ಸಾರ್ ಎನ್ನುತ್ತಿದ್ದ, ಅವರು ಮ್ ಎನ್ನುತ್ತಿದ್ದರು. ಮತ್ತೆ ಮೌನ. ಅವನು ಸ್ವಲ್ಪ ಹೊತ್ತಿನ ನಂತರ ಮತ್ತೆ ಸಾರ್ ಎನ್ನುತ್ತಿದ್ದ. ಅವರು ಮ್ ಎನ್ನುತ್ತಿದ್ದರು. ಸಾರ್ ಮತ್ತು ಮ್ ಗಳ ಮಧ್ಯ ಟೀ, ದೋಸೆ, ಸಿನಿಮಾ, ಕಾಲೇಜು, ಹಾಸ್ಟೆಲ್, ಡೈರಿ ಇತ್ಯಾದಿ ಬಂದು ಹೋಗುತ್ತಿದ್ದವು. ನಮಗೆ ಅವರ ಇಂಗ್ಲಿಷ್ ಮತ್ತು ಅವರ ಅವ್ವನ ಒದ್ದಾಟದ ಹೊರತು ಬೇರೇನೂ ಅವರ ಬಗ್ಗೆ ಗೊತ್ತಿರಲಿಲ್ಲ ಅಥವಾ ಬೇರೇನೂ ಇರಲಿಲ್ಲ. ನಾವು ಮೂವರೂ ಊರು-ಹಬ್ಬಗಳವರಲ್ಲ. ಹಾಗಾಗಿ ಯಾರೂ ಯಾರ ಮನೆಗೂ ಹೋಗಿಲ್ಲ. ಆಹ್ವಾನಿಸುವ ಪ್ರಮೇಯವೇ ಬಂದಿಲ್ಲ.
ಹೀಗೆ ಒಂದು ಭಾನುವಾರ ಪುನೀತಣ್ಣ ಅವನ ಶಿಫ್ಟ್ ಮುಗಿಸಿ ನನ್ನನ್ನು ಅವನ ಅಟ್ಲಾಸ್ ನ ಹಿಂದೆ ಕೂರಿಸಿಕೊಂಡು ಮೇಷ್ಟ್ರ ರೂಮಿನ ಕಡೆ ಹೊರಟ ಎಂದಿನಂತೆ. ಮೇಷ್ಟ್ರನ್ನ ಕರ್ಕೊಂಡು ವಿಷ್ಣು ಭವನಕ್ಕೆ ದೋಸೆ ತಿನ್ನಲು ಹೋಗೋಣ ಅಂದಿದ್ದ. ಕೋಟೆ ಪೋಲಿಸ್ ಸ್ಟೇಷನ್ ನ ಹಿಂದೆ ಇರುವ ಶ್ರೀನಿವಾಸ ಬಿಲ್ಡಿಂಗ್ ನಲ್ಲಿರುವ ಅವರ ರೂಮಿಗೆ ಲಗ್ಗೆ ಹಾಕಿ ಅವರ ಬಾಯಿಯಿಂದ ಇಂಗ್ಲಿಷ್ ಕೇಳಲು ಇವನ ಕಿವಿ ಕಾಯುತ್ತಿದ್ದವು. ನಾವು ಮೇಷ್ಟ್ರ ರೂಮ್ ತಲುಪುವ ಹೊತ್ತಿಗಾಗಲೇ ಮೇಷ್ಟ್ರ ಅವ್ವ ಬಂದಿದ್ದರು. ಎಂದಿನಂತೆ ಮೇಷ್ಟ್ರು ಬಾಗಿಲಿಗೆ ಬೀಗ ಹಾಕಿ ಟೆರೇಸ್ ಏರಿದ್ದಾರೆನ್ನುವುದು ಅವ್ವ ಬಾಗಿಲಿಗೆ ಮುಖ ಮಾಡಿ ಮಗನಿಗೆ ಕಾಯುತ್ತಾ ಇರುವುದ ನೋಡಿದರೆ ತಿಳಿಯುತ್ತಿತ್ತು. ನಾವು ಅವ್ವನಿಗೆ ಗೊತ್ತಾಗದಂತೆ ನಿಧಾನವಾಗಿ ಮೆಟ್ಟಿಲೇರಿ ಟೆರೇಸ್ ತಲುಪಿದೆವು. ಮೇಷ್ಟ್ರು ಮೊಣಕಾಲುದ್ದದ ಗೋಡೆಗೆ ಬೆನ್ನು ಮಾಡಿ ಕಾಲು ಉದ್ದ ಚಾಚಿಕೂಂಡು ಇಂಗ್ಲಿಷ್ ಪುಸ್ತಕವೊಂದನ್ನು ಓದುತ್ತಿದ್ದರು. ಅವ್ವ ಬರುವುದು ಕಿಟಕಿಯಿಂದ ಕಾಣುತ್ತಿದ್ದಂತೆ ರೂಮಿನ ಬೀಗ ಹಾಕಿ, ಟೆರೇಸ್ ಗೆ ಹೋಗಿ ಅವ್ವ ಹೋಗುವವರೆಗೆ ಕದ್ದು ಕಾದು, ಅವ್ವ ಸಂಜೆಯವರೆಗೆ ಕಾದು ಕಾದು ವಾಪಾಸ್ಸು ಹೋದ ನಂತರ ರೂಮಿಗೆ ಮರಳುವುದು ಮೊದಮೊದಲು ಮೇಷ್ಟ್ರಿಗೆ ಸಂಕಟವೆನಿಸಿದರೂ ಈಗ ಅಭ್ಯಾಸವಾಗಿದೆ. ಸಮಯ ವ್ಯರ್ಥ ಮಾಡಬಾರದೆಂದು ಪುಸ್ತಕ ಓದುತ್ತಾರೆ, ಇಲ್ಲವೆಂದರೆ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಾರೆ, ಇಲ್ಲವೆಂದರೆ ನಾಳೆಯ ತರಗತಿಗೆ ತಯಾರಿ ಮಾಡಿಕೊಳ್ಳುತ್ತಾರೆ ಇತ್ಯಾದಿ.
“ಏ ರಂಗಣ್ಣ ಏಸ್ ದಿನಾ ಅಂತ ಕಣ್ಣಾ ಮುಚ್ಚಾಲೆ ಆಡಿಯೋ! ನಾನ್ ಕಣ್ ಮುಚ್ಚಾವರ್ಗು?! ಅವ್ವನ್ ಹೊಟ್ಟೆಯ ಇಷ್ಟ್ ಉರ್ಸ್ ಬಾರ್ದು. ನೀನ್ ಮ್ಯಾಲ್ ಕೂತ್ಕಂಡಿರೋದ್ ನಂಗ್ ಗೊತ್ತಿಲ್ಲ ಅಂದ್ಕಂಡಿದಿಯಾ?! ಈ ಕರುಳಿಗೆ ಅಷ್ಟು ತಿಳಿಯಲ್ಲೇನು?! ನೀನ್ ಮ್ಯಾಲ್ ಕುಂತ್ಕಂಡ್ ಉಸ್ರಾಡೋದೂ ನಂಗ್ ಕೇಳ್ತತಿ. ಯಾಕ್ ಬಾಳೇವು ಅಂದ್ರೆ ಹೆದ್ರತಿ? ನಿಂಗೊಂದ್ ಬಾಳೇವು ಹಚ್ಲಿಲ್ಲ ಅಂದ್ರೆ ನಾನೆಂಗ್ ನೆಮ್ದಿಯಿಂದ ಉಸುರ್ ಬಿಡ್ಲಿ. ನಿನ್ ಮಾವಾನು ಎಷ್ಟ್ ದಿನಾ ಅಂತ ಮಗಳ್ ನ ಮನೆಯಾಗೆ ಇಟ್ಕಂಡಾನು? ನಿನ್ನ ಎತ್ ಆಡ್ಸಿಲ್ಲಾ ಅವ್ನು? ಅವ್ಳ್ ಗಿಂತ ಚಲೋ ಹುಡ್ಗಿ ಸಿಕ್ಕಾಳೇನೋ? ಪ್ಯಾಟಿಗ್ ಬಂದು ಮರಳು ಬಂದೈತಿ ನಿಂಗೆ. ಒಬ್ರೆ ಬಾಳ್ವೆ ಮಾಡೋದು ಅಂದ್ಕಂಡಷ್ಟು ಸುಲಭ ಅಲ್ಲ. ನಿಮ್ಮಪ್ಪ ಹೋದ್ಮ್ಯಾಲಿಂದ ನಾನ್ ಅನುಭವಿಸಿದ್ದು ನಿನ್ ಕಣ್ಣಾರೆ ನೋಡಿದಿಯ. ಸಾಯೋವರ್ಗು ಹೊರಗೇ ಕೂಳು ತಿನ್ಕೂಂಡು ಬದ್ಕ್ತೀನಿ ಅನ್ಕೂಂಡಿದ್ರೆ ಅದು ಅಗ್ದೇ ಇರೋ ಮಾತು. ನಿನ್ ಹುಚ್ಚಾಟ ಎಲ್ಲಾ ಬಿಟ್ಟು ಕೆಳಗೆ ಇಳ್ದ್ ಬಾ. ಮನೆಗ್ ಹೋಗಾಣ. ಏ ರಂಗಣ್ಣ ಇಳ್ದ್ ಬಾರೋ. ನಂಗೊತ್ತು ನೀ ನಂಜೊತೆ ಬರಲ್ಲ ಅಂತ. ರಾತ್ರಿ ವಿಜಯಲಕ್ಷ್ಮಿ ಬಸ್ಸಿಗ್ ಬಾ. ಯಾರ್ನಾದ್ರು ಅಡ್ ರಸ್ತೆಗೆ ಕಳ್ಸ್ತೀನಿ. ರಾತ್ರಿ ಒಬ್ನೇ ನಡ್ದು ಬರೋದ್ ಬ್ಯಾಡ. ಇಚ್ಕಾವ್ರೆ ಬೇಳೆ ಸಾರು ಮಾಡ್ತಿನಿ. ಆ ಹುಡ್ಗ್ರುನ್ನು ಕರ್ಕೊಂಡು ಬಾ. ನಾಳೆ ಒಂದಿನ ಸಾಲಿಗ್ ರಜ ಹಾಕು. ನಿಮ್ಮಾವನ್ ಹತ್ರ ಮಾತಾಡೀನಿ. ನಾಳೆನೇ ಮಾತುಕತೆ. ಮತ್ ಮತ್ ಬಂದು ನಿನ್ ಕೋಣೆ ಎದ್ರು ಕೂರೋ ತನುವು ಇಲ್ಲ ರಂಗಪ್ಪ. ನಾ ಹೊಂಟೆ.” ಎನ್ನುತ್ತಾ ಅವ್ವ ಎದ್ದು ತಲೆ ಮೇಲಿನ ಸೆರಗು ಸರಿಯಿದ್ದರೂ ಮತ್ತೆ ಸರಿ ಮಾಡಿಕೊಂಡು ನಿಧಾನವಾಗಿ ಮೆಟ್ಟಿಲಿಳಿದು ಹೂರಟಳು.
ಮೇಷ್ಟ್ರು ಕೂಗಿ ಹೇಳಿದರು “ಅವ್ವ, ನಾನು ಬೆಳಗ್ಗೆ ತೀರ್ಥರಾಮೇಶ್ವರ ಬಸ್ಸಿಗ್ ಬರ್ತೀನಿ. ಯಾರು ಕರ್ಕೊಂಡ್ ಬರಾಕೆ ಬರೋದ್ ಬೇಡ. ನಡ್ಕಂಡೇ ಬರ್ತೀನಿ” ಅವ್ವ ಕೇಳಿಸಿಕೊಂಡಳಿರಬೇಕು.
ನಾವು ಮೇಷ್ಟ್ರ ಜೊತೆ ಬೆಳಗಿನ ಏಳು ಗಂಟೆಯ ತೀರ್ಥರಾಮೇಶ್ವರ ಬಸ್ಸು ಹತ್ತಿದೆವು. ಅವರೇನು ನಮ್ಮನ್ನು ಕರೆದಿರಲಿಲ್ಲ. ಅವ್ವ ಕರೆದಿದ್ದಳಲ್ಲ. ಎಷ್ಟು ಸಾರಿ ಮೇಷ್ಟ್ರ ರೂಮಿನ ಎದುರು ಅವ್ವ ಇಟ್ಟು ಹೋದ ರೊಟ್ಟಿ ಮೆಂತ್ಯ ಚಟ್ನಿ ಮೊಸರು ತಿಂದಿದ್ದೇವೆ. ಅದು ಮೇಷ್ಟ್ರ ಮದುವೆ ಮಾತುಕತೆ ಅಂದ ಮೇಲೆ ನಾವು ಹೋಗದೇ ಇರೋಕಾಗಲ್ಲ ಎಂದು ಪುನೀತಣ್ಣ ನನ್ನನ್ನೂ ಒಪ್ಪಿಸಿ ಕರೆತಂದಿದ್ದ. ಮೇಷ್ಟ್ರು ಬಸ್ ಕಂಡಕ್ಟರ್ ಗೆ ಮೂರು ಎಂದರು ನಮ್ಮನ್ನೂ ತೋರಿಸಿ. “ಏನ್ ಮೇಷ್ಟ್ರೇ, ಅಪರೂಪ ಆಗ್ಬಿಟ್ರಿ. ಯಾರು ಈ ಹುಡುಗ್ರು?” ಮೇಷ್ಟ್ರು ಉತ್ತರಿಸಲಿಲ್ಲ. ಅವನು ಉತ್ತರಕ್ಕೆ ಕಾಯಲೂ ಇಲ್ಲ. ಎಷ್ಟು ಎಂದು ಮುಂದಿನ ಪ್ರಯಾಣಿಕರನ್ನು ಕೇಳುತ್ತಾ ಸಾಗಿದ. ಅವನು ಯಾರನ್ನೂ ಎಲ್ಲಿಗೆ ಎಂದು ಕೇಳುತ್ತಿರಲಿಲ್ಲಪಪ. ಅವನಿಗೆ ಎಲ್ಲರ ಊರು ಗೊತ್ತು. ಎಲ್ಲರ ಕಷ್ಟ ನಷ್ಟ ಸಾವು ನೋವುಗಳು ಗೊತ್ತು. ಎಲ್ಲ ಊರುಗಳ ಹಬ್ಬ ಹರಿದಿನಗಳು ಗೂತ್ತು. ಬಸ್ಸು ಮಲೆನಾಡಿನ ಹೊಟ್ಟೆಯ ಸೀಳಿಕೂಂಡು ಬಂದು ಬಯಲುಸೀಮೆಯ ಬಾಗಿಲಿನಲ್ಲಿ ನಿಂತಿತು. ಅವರ ಊರಿಗೆ ಸಾಗುವ ಅಡ್ಡ ರಸ್ತೆಯಲ್ಲಿ ಇಳಿದೆವು. ಕಂಡಕ್ಟರ್ ಅವ್ವಂಗೆ ಕೇಳ್ದೆ ಎಂದು ಹೇಳಿ ಎಂದು ಕೂಗಿ ಹೇಳಿದ. ಮೇಷ್ಟ್ರು ಬಸ್ಸಿನ ಕೊನೆಯ ಕಿಟಕಿಯಿಂದ ಕತ್ತು ಹೊರಗೆ ಹಾಕಿದ್ದ ಕಂಡಕ್ಟರ್ ಕಡೆ ತಿರುಗಿ ನೋಡಿದರು, ಮೇಷ್ಟ್ರು ಚೂರು ನಕ್ಕಂತಾಯಿತು. ಬಸ್ ಹತ್ತುತ್ತಿದ್ದ ಇವರ ಊರಿನ ಜನ ಇವರೊಡನೆ ಮಾತನಾಡಲು ಅಂಜುತ್ತಿದ್ದರಾದರೂ ಕನಿಕರದಿಂದ ನೋಡುತ್ತಿದ್ದರು.
ನಾವು ಸರಿಸುಮಾರು ಎರಡು ಕಿಲೋಮೀಟರ್ ನಡೆದ ಮೇಲೆ ಊರ ಹೆಬ್ಬಾಗಿಲಿನಲ್ಲಿ ಹನುಮಪ್ಪನ ಗುಡಿ. ದಾರಿಯಲ್ಲಿ ಎದುರು ಸಿಗುವ ಯಾರೂ ಇವರೊಂದಿಗೆ ಮಾತನಾಡಲು ಅಂಜುತ್ತಿದ್ದರು. ನಮಗೆ ಆಶ್ಚರ್ಯವೇನು ಅನ್ನಿಸಲಿಲ್ಲ. ಮೇಷ್ಟ್ರನ್ನ ಮಾತನಾಡಿಸಲು ಪುನೀತಣ್ಣ ನಿಗೆ ಬಿಟ್ಟರೆ ಬೇರೆ ಯಾರಿಗಾದರೂ ಎಲ್ಲಿ ಸಾಧ್ಯ. ನಾವು ನೂರು ಮಾತನಾಡಿದರೆ ಅವರು ಒಂದು ಆಡಿದರೆ ಹೆಚ್ಚು. ದೇವಸ್ಥಾನದ ಕಲ್ಲಿನ ಗೋಡೆಗಳಿಗೆ ಅವ್ವನ ಇಚ್ಕವರೆ ಸಾರಿನ ಘಮ ಅಪ್ಪಳಿಸುತ್ತಿತ್ತು. ಗುಡಿಯ ಹಿಂದೆಯೇ ಮನೆ. ಮನೆ ಮುಂದೆ ಬಹಳಷ್ಟು ಜನ ಜಮಾಯಿಸಿದ್ದರು. “ಜಯಣ್ಣ, ನಿಮ್ಮಳಿಯ ಮೇಷ್ಟ್ರು ಬಂದ್ರು” ಎಂದು ಯಾರೋ ಕೂಗಿದರು. ಮನೆಯ ಬಾಗಿಲಿನಿಂದ ನಿರ್ವಾತ ರಭಸದಿಂದ ಹರಿದಂತೆ, ಜನ ಬಾಗಿಲಿನ ಎಡಕ್ಕೂ ಬಲಕ್ಕೂ ಭಾಗವಾದರು. ಅವ್ವನ ಪಕ್ಕ ಕೂತಿದ್ದ ಮೇಷ್ಟ್ರ ಮಾವ ಎದ್ದು ಬಂದರು. ಕಣ್ಣು ತೇವಗೊಂಡಿದ್ದವು. “ಉಸ್ರು ರಾತ್ರೀನೇ ಹೋಗಿರ್ಬೇಕು”, ಎಂದು ಮೇಷ್ಟ್ರ ಹೆಗಲ ಮೇಲೆ ಕೈ ಹಾಕಿಕೊಂಡು ಅವ್ವನ ಹತ್ತಿರ ಕರೆದೊಯ್ದರು. ಐದತ್ತು ನಿಮಿಷ ಏನೋ ಮಾತನಾಡಿದರು. ಪುನೀತಣ್ಣ ಜೋರಾಗಿ ಅಳುತ್ತಿದ್ದ, ಅವನು ಭಾವುಕ ಜೀವಿ. ಜಯಣ್ಣ “ಲೇ ಹನುಮಂತ, ನಿಮ್ಮ ರಂಗಣ್ಣನ ಕರ್ಕೂಳೋ; ರಂಗಣ್ಣ ನೀನ್ ನಡಿ, ನಾನು ಮುಂದಿನ ಕಾರ್ಯಕ್ಕೆ ವ್ಯವಸ್ಥೆ ಮಾಡ್ತಿನಿ”. ಹನುಮಂತ ಅವರನ್ನು ಮೂರು ಮನೆ ಮಂದಕ್ಕೆ ಹೆಗಲ ಮೇಲೆ ಕೈ ಹಾಕಿಕೊಂಡು ಕರ್ಕೊಂಡು ಹೋಗಿ, ಮನೆಯೊಂದರ ಕಟ್ಟೆಯ ಮೇಲೆ ಕೂರಿಸಿದ. ನಾವೂ ಹಿಂಬಾಲಿಸಿ ಅವರ ಪಕ್ಕ ಕೂತೆವು. ಮೇಷ್ಟ್ರು ಅಳುತ್ತಿರಲಿಲ್ಲ, ಯಾವುದೇ ಭಾವೋದ್ವೇಗಗಳಿರಲಿಲ್ಲ. ಸ್ವಲ್ಪ ಹೊತ್ತಿನ ನಂತರ ಯಾರೋ ಟೀ ತಂದುಕೊಟ್ಟರು. ಪುನೀತಣ್ಣ ಅಳು ನಿಲ್ಲಿಸಿದ್ದ. ಎಲ್ಲರೂ ಟೀ ಕುಡಿಯುತ್ತಿದ್ದೆವು. ಹನುಮಂತ “ಲೇ ರಂಗ, ನಿಮ್ಮ ಮಾವನ್ ಮಗಳು ರತ್ನ, ಬೀರನ್ ಜೊತೆ, ಒತ್ತಾರೆನೆ ಓಡೋದ್ಲು ಕಣ್ಲಾ“. ಮೇಷ್ಟ್ರು ಸುಮ್ಮನಿದ್ದರು ಎಂದಿನಂತೆ.






0 Comments