ಆ ಹುಡುಗಿಗೆ ಜೊಮಾಟೊ ಇದೆ ಎನ್ನುವುದೇ ಗೊತ್ತಿಲ್ಲ..

ಜಿ ಎನ್ ಮೋಹನ್ 

ಟಿ ಎಂ ಕೃಷ್ಣ ಪುಸ್ತಕ
ಮನೆಯ ಬಾಗಿಲ ಒಳಗೆ ಬರುವ ವೇಳೆಗೆ
ಪುರಭವನದ ಮೆಟ್ಟಿಲ ಮೇಲೆ, ಬಾಂದ್ರಾದಲ್ಲಿ,
ಇಂಡಿಯಾ ಗೇಟ್ ಬಳಿ ಅಷ್ಟೇ ಅಲ್ಲ, ಇಲ್ಲಿ ಪುಟ್ಟೇನಹಳ್ಳಿಯಲ್ಲೂ
ಪ್ರತಿಭಟನೆಗಳಾಗುತ್ತಿತ್ತು
ಒಂದಷ್ಟು ಕಡೆ ಕ್ಯಾಂಡಲ್ ಲೈಟ್
ಇನ್ನೊಂದಷ್ಟು ಕಡೆ ಬರೀ ಫೋಟೋ
ಅವೆರಡೂ ಹೊಂದಿಸಲು ಸಾಧ್ಯವಾಗದ ಕಡೆ
ಎರಡು ಹನಿ ಕಣ್ಣೀರು

ಇರಲಿ,
ಅಮೆಜಾನ್ ನ ಡೆಲಿವರಿ ಬಾಯ್
ಸರಿಯಾಗಿ ಹೊಂಗೆ ಮರವೇ ಇರುವ
ನಂಬರ್ 142ರ ಮನೆಯ
ಬಾಗಿಲು ಬಡಿಯುವ ವೇಳೆಗೆ
ಅಲ್ಲೂ ಅನಿಸಿಹೋಗಿತ್ತು
ಬೆಲ್ ಒತ್ತಿದವರಿಗೆಲ್ಲಾ, ಬಾಗಿಲು ಬಡಿದವರಿಗೆಲ್ಲಾ
ಸಡನ್ನಾಗಿ ಬಾಗಿಲು ತೆರೆದುಬಿಡಬಾರದು ಎಂದು

ಒಂದಷ್ಟು ಸಿಸಿಟಿವಿ
ಮನೆಯೆತ್ತರಕ್ಕೂ ಕಬ್ಬಿಣದ ಬೇಲಿ
ಹಾಕಿಕೊಂಡು ಕಾಂಪೌಂಡ್ ನಲ್ಲೇ ನಿಂತು
ಒಳಗೆ ಬರಲೇ ಎಂದು ಕೇಳುವ ವ್ಯವಸ್ಥೆ
ಇರುವ ಮನೆಗಳೇ ಸೇಫಲ್ಲ
ಇನ್ನು ವರ್ಷಗಟ್ಟಲೆ ಲೋನ್ ಕಟ್ಟಿ
ಕೊಂಡ 2 bhk ಮನೆ ಕಥೆ ಏನು ಶಿವಾ..
ಧರೆಯೇ ಹತ್ತಿ ಉರಿಯುತ್ತಿರುವಾಗ ಇನ್ನು
ನಮ್ಮ ಒಲೆ ಉರಿಯುವ ಮನೆಗಳೇನು ಮಹಾ..!!

ಹುಟ್ಟಿದಹಬ್ಬ ಮುಗಿಸಿ ಇನ್ನೂ ದಿನ ಮುಗಿದಿಲ್ಲ
ಮನೆಯೊಳಗೇ ಆಡಿದ ಅಡುಗೆಯ ಘಮ ಇನ್ನೂ ಆರಿಲ್ಲ
ಇಲ್ಲಿಯವರೆಗೂ ‘ರಸ’ ಎನಿಸಿಕೊಂಡಿದ್ದ ಪಬ್ ಓನರ್ ಗೆ
ಇದು ಕುನ್ನಕ್ಕುಡಿ ವೈದ್ಯನಾಥನ್ ಕಚೇರಿ ನೀಡುವ ಹಾಲ್ ಹೆಸರಿನಂತಿದೆ ಎನಿಸಿ
ತಮ್ಮ ಹಣೆಬರಹವನ್ನು ಹ್ಯಾಚ್ ಎಂದು ಬದಲಿಸಿಕೊಂಡು
ಸಾಕಷ್ಟು ಆರ್ಡರ್ ಗಿಟ್ಟಿಸುತ್ತಿದ್ದರು
ಅಲ್ಲಿಂದಲೇ ನೇರವಾಗಿ ಜಿಂಕೆಯಂತೆ
ಚಿಮ್ಮಿದ ಡೆಲಿವರಿ ಬಾಯ್ ಗಳು
ಬಾಡೂಟವನ್ನು ಬಡಿಸಿ
ಐದು ಬೆರಳಿಗೂ ಎಟುಕುವಷ್ಟು ಭಕ್ಷೀಸು ಗಿಟ್ಟಿಸಿಕೊಂಡು
ಬೆನ್ನು ಹಾಕಿದ್ದರು

ಅಷ್ಟರಲ್ಲೇ
ಬೆಲ್ಲೂ ಇರದ, ಟಿ ಎಂ ಕೃಷ್ಣ ಪುಸ್ತಕ ಬರೆದಿದ್ದಾರೆ ಎಂದೂ ಗೊತ್ತಿರದ
ಸಿಸಿಟಿವಿಯನ್ನು ರಾತ್ರಿ ದೆವ್ವದ ಕಣ್ಣು ಎಂದು ಅಂದುಕೊಂಡಿದ್ದ,
ಇರಲು ಮನೆಯೇ ಇಲ್ಲದ ಹ್ಯಾಚ್, ಪಬ್, ಜೊಮಾಟೊ, ಡೆಲಿವರಿ
ಏನೂ ಗೊತ್ತಿಲ್ಲದ ಹುಡುಗಿಯನ್ನು
ಹುಟ್ಟಿದ ಹಬ್ಬ ಕಾಣುವ ಮುನ್ನವೇ
ಕಟುಕರು ಥೇಟ್ ಬಾಡೂಟದಂತೆ
ಮುಗಿಸಿಹಾಕಿಬಿಟ್ಟರು

ಈಗ ನಾನು ತಿಂದ ಬಾಡು
ನನ್ನೊಳಗೆ ಹೊರಳಾಡಿ
ನಿದ್ದೆ ಕಸಿದುಕೊಂಡಿದೆ

‍ಲೇಖಕರು avadhi

April 17, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: