ಲೇಖಕಿಯರ ಹಿರಿಯಕ್ಕ -ಹೆಚ್. ಎಸ್. ಪಾರ್ವತಿ ಇನ್ನಿಲ್ಲ

ಕೆ ಉಷಾ ಪಿ ರೈ
ಒಂದು ಮನೆಯಲ್ಲಿ ಎಂಟು ಹತ್ತು ಮಕ್ಕಳಿದ್ದ ಕಾಲದಲ್ಲಿ ಹಿರಿಯ ಮಗಳು ಮನೆ ಮಕ್ಕಳಿಗೆಲ್ಲಾ ಹಿರಿಯಕ್ಕನಂತಿರುತ್ತಿದ್ದಳು. ಕಿರಿಯರನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಆ ಹಿರಿಯಕ್ಕನದ್ದು. ಮನೆಯ ಮಕ್ಕಳಿಗೆ ಅವಳು ಎರಡನೇ ತಾಯಿಯಿದ್ದಂತೆ. ಎಲ್ಲ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳುತ್ತಿದ್ದುದಲ್ಲದೆ ಅವರ ತಪ್ಪುಗಳನ್ನು ತಿದ್ದಿ ಮುಂದೆ ತಪ್ಪು ಮಾಡದಂತೆ ಬುದ್ಧಿಮಾತುಗಳನ್ನು ಹೇಳುತ್ತಿದ್ದಳು. ಅಕ್ಕನ ಬುದ್ಧಿ ಮಾತುಗಳಿಗೆ ಯಾರೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ಕಿರಿಯರೆಲ್ಲರಿಗೂ ಆಕೆಯ ಮೇಲೆ ತುಂಬಾ ಗೌರವ ಮತ್ತು ಪ್ರೀತಿ. ಅಕ್ಕನ ಪ್ರೀತಿಯಲ್ಲಿ ಬೆಳೆದವರಿಗೆಲ್ಲರಿಗೂ ಗೊತ್ತು ಆ ಸವಿ. ಆ ಸವಿಯನ್ನು ಲೇಖಕಿಯರಿಗೆಲ್ಲ ಹಂಚಿದವರು ಹೆಚ್. ಎಸ್. ಪಾರ್ವತಿಯವರು. ಆ ಹಿರಿಯಕ್ಕ ಇನ್ನಿಲ್ಲವಾಗಿದ್ದಾರೆ.
ಸಾವು ಅನಿವಾರ್ಯ. ಒಂದಲ್ಲ ಒಂದು ದಿನ ಎಲ್ಲರೂ ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಹೋಗಲೇ ಬೇಕು. ಆದರೆ ಅವರು ಹಿಂದೆ ಬಿಟ್ಟು ಹೋಗುವ ಶೂನ್ಯತೆ ತುಂಬಲು ಕೆಲವೊಮ್ಮೆ ಬಹಳ ಕಷ್ಟ.
1979ರಲ್ಲಿ ಟಿ. ಸುನಂದಮ್ಮನವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಲೇಖಕಿಯರ ಸಂಘ ಪ್ರಾರಂಭವಾಗುವಾಗ ಇದ್ದುದು ಬೆರಳೆಣಿಕೆಯಷ್ಟು ಲೇಖಕಿಯರು ಮತ್ತು ಸಾಹಿತ್ಯಾಸಕ್ತರು. ಲೇಖಕಿಯರನ್ನು ಒಂದು ವೇದಿಕೆಯಡಿಯಲ್ಲಿ ಸಂಘಟಿಸಲು ಪ್ರಾರಂಭಿಸಲ್ಪಟ್ಟ ಲೇಖಕಿಯರ ಸಂಘ ಯಾವುದೇ ನಿರ್ಧಾರಿತ ಕಟ್ಟುನಿಟ್ಟುಗಳಿಲ್ಲದೆ ತನ್ನಿಂದ ತಾನೇ ಲೇಖಕಿಯರ ಒಂದು ಕುಟುಂಬದಂತೆ ರೂಪಿತವಾಗಿತ್ತು. ಎಲ್ಲರೂ ಎಲ್ಲರ ಮನೆಗೂ ಸಂಬಂಧಿಸಿದವರಂತೆ, ಅವರ ಕಷ್ಟ ಸುಖಗಳಲ್ಲಿ, ಸಂತಸ ದುಃಖಗಳಲ್ಲಿ ಭಾಗಿಯಾಗುತ್ತಾ ತಮ್ಮ ಬರವಣಿಗೆಯನ್ನೂ ಬೆಳೆಸುತ್ತಾ ಇದ್ದರು.
ಸಂಘದ ಚಟುವಟಿಕೆಗಳು ನಡೆಯುತ್ತಿದ್ದುದು ಆಗಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಜಿ. ನಾರಾಯಣ ಅವರ ವಿನೋದ ಕಾರ್ಯಾಲಯದಲ್ಲಿ. ಸದಸ್ಯರೇ ಹಣ ಹಾಕಿ ಖರ್ಚು ವೆಚ್ಚ ಸರಿತೂಗಿಸುತ್ತಿದ್ದರು. ಸಂಘದ ಸದಸ್ಯರ ಸಂಖ್ಯೆ ಎರಡು ಅಂಕಿಗಳಾದಾಗ ಕರ್ನಾಟಕ ಲೇಖಕಿಯರ ಸಂಘದ ಎರಡನೇ ಅಧ್ಯಕ್ಷರಾಗಿ ಬಂದವರು ಶ್ರೀಮತಿ ಹೆಚ್. ಎಸ್. ಪಾರ್ವತಿಯವರು. ಆಗಿನ ಕಾಲದಲ್ಲಿ ಪಾರ್ವತಿಯವರು ಕಾರ್ ಡ್ರೈವಿಂಗ್ ಮಾಡುತ್ತಿದ್ದರು ಎನ್ನುವುದನ್ನು ಕೇಳುವುದೇ ಒಂದು ಹೆಮ್ಮೆಯ ಸಂಗತಿಯಾಗಿತ್ತು. ಆಗಲೂ ಸಂಘದಲ್ಲಿ ಅದೇ ಮನೆಯ ವಾತಾವರಣ ಇತ್ತು ಎಂದು ಹೇಳುವುದನ್ನು ಕೇಳಿದ್ದೇನೆ.
ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಪಾರ್ವತಿಯವರು ಕರ್ನಾಟಕದಾದ್ಯಂತ ತಮ್ಮ ರೇಡಿಯೋ ನಾಟಕಗಳಿಂದ ಹೆಸರು ಗಳಿಸಿದ್ದವರು. ಅವರನ್ನು ಗುರುತಿಸಲ್ಫಡುತ್ತಿದ್ದುದೇ ಆಕಾಶವಾಣಿ ಪಾರ್ವತಿಯೆಂದು. ಅವರ ರೇಡಿಯೋ ನಾಟಕಗಳು ಬಹಳ ಜನಪ್ರಿಯವಾಗಿದ್ದವು. ಲೇಖಕಿಯಾಗಿಯೂ ಅವರು ಅದಾಗಲೇ ಪ್ರಸಿದ್ಧರಾಗಿದ್ದರು. ಹೊರಗೆ ಕೆಲಸಮಾಡುತ್ತಿದ್ದುದರಿಂದ ಅನುಭವಸ್ಥರು. ಸ್ತ್ರೀ ಸಮಾನತೆಯ ಪ್ರತಿಪಾದಕರು. ಸಂಘ ಪ್ರಾರಂಭವಾದಾಗ ಲೇಖಕಿಯರನ್ನು ಒಟ್ಟು ಸೇರಿಸುವುದು ಮುಖ್ಯ ಕೆಲಸವಾಗಿತ್ತು. ಸದಸ್ಯರ ಸಂಖ್ಯೆ ಹತ್ತು, ಇಪ್ಪತ್ತು, ಮೂವತ್ತು ದಾಟಿದಾಗ ಕೆಲವು ಉಪಯುಕ್ತ ಕಾರ್ಯಕ್ರಮಗಳನ್ನು ಮಾಡಿ ಲೇಖಕಿಯರನ್ನು ಸಂಘದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಅಗತ್ಯವಿತ್ತು. ಈ ನಿಟ್ಟಿನಲ್ಲಿ ಕಾರ್ಯ ಪ್ರಾರಂಭಿಸಿದ್ದು ಪಾರ್ವತಿಯವರು ಅಧ್ಯಕ್ಷೆಯಾದ ಪ್ರಾರಂಭದಲ್ಲಿ ಹಾಕಿದ ಮೊದಲ ಪ್ರಮುಖ ಹೆಜ್ಜೆ. ಸಂಘದ ಕೆಲಸಕಾರ್ಯಗಳಲ್ಲಿ ಒಂದು ಶಿಸ್ತು, ಸಂಘದ ಕಾರ್ಯವೈಖರಿಯಲ್ಲಿ ಒಂದು ದೂರದರ್ಶಿತ್ವ ಬಂದದ್ದು ಅವರ ಕಾಲದಲ್ಲಿ ಎಂದರೂ ತಪ್ಪಿಲ್ಲ. ಮುಂದಿನ ಅಧ್ಯಕ್ಷರುಗಳಿಗೆ ಅವರು ಹಾಕಿದ್ದ ಗಟ್ಟಿ ತಳಪಾಯದ ಮೇಲೆ ಸಂಘವನ್ನು ಬೆಳೆಸುವುದು ಕಷ್ಟವಾಗಲಿಲ್ಲ.
ದಿಟ್ಟ ನಡೆಯ, ನೇರ ನುಡಿಯ ಪಾರ್ವತಿಯವರು ಬೆಂಗಳೂರಿನ ಲೇಖಕಿಯರಿಗೆಲ್ಲ ಹಿರಿಯಕ್ಕನಿದ್ದಂತೆ ಇದ್ದರು. ಎಲ್ಲರಿಗೂ ಅವರ ಮೇಲೆ ಎಷ್ಟು ಪ್ರೀತಿ ಇತ್ತೋ ಅಷ್ಟೇ ಗೌರವವೂ ಇತ್ತು. ಜೊತೆಗೆ ಒಂದು ರೀತಿಯ ಭಯ. ಅದಕ್ಕೆ ಅವರ ಎತ್ತರದ ಸ್ಥೂಲ ಕಾಯದ ಗಂಭೀರ ನಿಲುವು ಕಾರಣವೋ ಅಥವಾ ಅವರು ಲೇಖಕಿಯಾಗಿ ಬೆಳೆದು ನಿಂತ ಎತ್ತರ ಕಾರಣವೋ ತಿಳಿಯದು. ನಾವೆಲ್ಲಾ ಸಾಹಿತ್ಯರಂಗಕ್ಕೆ ಕಾಲಿಡುವಾಗ ಹೆಚ್. ಎಸ್. ಪಾರ್ವತಿ, ಟಿ. ಸುನಂದಮ್ಮ, ಡಾ ಅನುಪಮಾ ನಿರಂಜನ, ಎಂ. ಕೆ. ಇಂದಿರಾ, ತ್ರಿವೇಣಿ, ನೀಳಾದೇವಿ, ಎ. ಪಂಕಜಾ, ಎನ್ ಪಂಕಜಾ, ಹೆಚ್. ವಿ. ಸಾವಿತ್ರಮ್ಮ ಇವರೆಲ್ಲಾ ಮೊದಲ ಸ್ಥಾನದಲ್ಲಿದ್ದವರು. ಅವರೊಡನೆ ನಮಗೆ ಮಾತಾಡಲೂ ಭಯ. ಅವರಲ್ಲಿ ಯಾರಾದರೂ ನಮ್ಮ ಪುಸ್ತಕ ಓದಿ ಮೆಚ್ಚಿಕೊಂಡರೆ ನಮಗೆ ಅತೀವ ಸಂಭ್ರಮವಾಗುತ್ತಿತ್ತು.
ನಾನು ಪಾರ್ವತಿಯವರನ್ನು ನೋಡಿದ್ದು ಅವರು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದಾಗ. ಅಂದರೆ ಸುಮಾರು 1982-83ರಲ್ಲಿ. ನಾನು ದಕ್ಷಿಣ ಕನ್ನಡದಿಂದ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದವಳು. ವಿಜಯಾ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದೆ. ಆಗಷ್ಟೇ ನನ್ನ ಮೊದಲ ಎರಡು ಕಾದಂಬರಿಗಳು ಪ್ರಜಾಮತದಲ್ಲಿ ಪ್ರಕಟವಾಗಿದ್ದವು. ಪ್ರಜಾಮತದಲ್ಲಿ ಕೆಲಸ ಮಾಡುತ್ತಿದ್ದ ಹೆಚ್. ಪಿ. ಫಿಲೋಮಿನಾ ನನ್ನನ್ನು ಲೇಖಕಿಯರ ಸಂಘದ ಸದಸ್ಯೆಯನ್ನಾಗಿ ಮಾಡಿದ್ದು. ನಾನು ಸದಸ್ಯೆಯಾದ ಸ್ವಲ್ಪ ಸಮಯದಲ್ಲಿ ಬೆಂಗಳೂರಿನಲ್ಲಿ ಲೇಖಕಿಯರ ಸಮ್ಮೇಳನ ನಡೆದಿತ್ತು. ಅಲ್ಲಿಗೆ ಹೋಗಿದ್ದಾಗ ವೇದಿಕೆಯ ಮೇಲಿದ್ದ ಪಾರ್ವತಿಯವರನ್ನು ನಾನು ಮೊದಲ ಬಾರಿಗೆ ನೋಡಿದ್ದು. ಅವರ ಸ್ಥಾನ, ಗೌರವಯುತವಾದ ವ್ಯಕ್ತಿತ್ವ, ಅವರು ನಿರರ್ಗಳವಾಗಿ ಮಾತಾಡುತ್ತಿದ್ದ ರೀತಿ ನನ್ನನ್ನು ಬಹಳ ಆಕರ್ಷಿಸಿತ್ತು. ಆಗ ನನಗೆ ಯಾರ ಪರಿಚಯವೂ ಇರಲಿಲ್ಲ. ಯಾರಿಗೂ ನನ್ನ ಪರಿಚಯವೂ ಇರಲಿಲ್ಲ. ಸಾಹಿತ್ಯ ರಂಗದಲ್ಲಿ ಮೊದಲ ಹೆಜ್ಜೆಗಳನ್ನು ಊರುತ್ತಿದ್ದೆನಷ್ಟೇ. ಫಿಲೋಮಿನಾ ಕೆಲವರನ್ನು ಪರಿಚಯಿಸಿದ್ದರು. ಬಹಳ ಸಮಯದವರೆಗೆ ನನಗೆ ಪಾರ್ವತಿಯವರ ಹೆಚ್ಚಿನ ಪರಿಚಯವೇನೂ ಆಗಿರಲಿಲ್ಲ.
ಸುಮಾರು ವರ್ಷ ನಾನು ಲೇಖಕಿಯರ ಸಂಘಕ್ಕೆ ಸದಸ್ಯಳಾಗಿದ್ದೂ ಹೊರಗಿನವಳಾಗಿಯೇ ಉಳಿದಿದ್ದೆ. ಕೆಲಸದಲ್ಲಿದ್ದ ನಿಮಿತ್ತ ಅಪರೂಪಕೊಮ್ಮೆ ಕೆಲವು ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆನಾದರೂ ಯಾರದ್ದೂ ಹೆಚ್ಚು ಪರಿಚಯಮಾಡಿಕೊಳ್ಳುವುದು ಸಾಧ್ಯವಾಗಿರಲಿಲ್ಲ. ಆಗ ಸದಸ್ಯರ ಸಂಖ್ಯೆ ಇನ್ನೂರರ ಮೇಲಿತ್ತು ಎಂದು ಕಾಣುತ್ತದೆ. ದಕ್ಷಿಣ ಕನ್ನಡದವರು ಯಾರೂ ಸಂಘದ ಸದಸ್ಯರಾಗಿ ಇರಲಿಲ್ಲವೆನ್ನುವ ನೆನಪು. ಪ್ರಾದೇಶಿಕತೆಯ ವ್ಯತ್ಯಾಸವೂ ಹೆಚ್ಚು ಬೆರೆಯದಿರುವುದಕ್ಕೆ ಕಾರಣವಾಗಿರಬಹುದು. ಅಲ್ಲದೇ ನಾನು ಸ್ವಲ್ಪ ಸಂಕೋಚ ಪ್ರವೃತ್ತಿಯ ವ್ಯಕ್ತಿಯೇ ಆದ್ದರಿಂದ ಕೂಡಲೇ ಯಾರಲ್ಲೂ ಸಲುಗೆ ಬೆಳೆಸುತ್ತಲೂ ಇರಲಿಲ್ಲ. ಕ್ರಮೇಣ ಡಾ. ಅನುಪಮಾ ನಿರಂಜನ, ಎ. ಪಂಕಜಾ, ಎಂ. ಕೆ. ಇಂದಿರಾ ಹೀಗೆ ಒಬ್ಬೊಬ್ಬರೇ ಹತ್ತಿರವಾಗುತ್ತಾ ಬಂದಿದ್ದರು.
ಪಾರ್ವತಿಯವರು ಬಹಳ ದೀರ್ಘಕಾಲ ಸಂಘದ ಅಧ್ಯಕ್ಷೆಯಾಗಿದ್ದರು. ಅವರ ಅವಧಿಯಲ್ಲಿ ಸಂಘಕ್ಕೆ ನಾನು ಹೆಚ್ಚು ಹತ್ತಿರವಾಗಿರಲೇ ಇಲ್ಲ. ನಾನು ಸಂಘಕ್ಕೆ ಹತ್ತಿರವಾದದ್ದು ನಾಗಮಣಿ ಎಸ್. ರಾವ್. ಅವರು ಅಧ್ಯಕ್ಷರಾಗಿದ್ದ ಕಾಲದಲ್ಲಿ. ಒಂದು ಅವಧಿಗೆ ಖಜಾಂಜಿಯಾಗಿ, ಇನ್ನೊಂದು ಅವಧಿಯಲ್ಲಿ ಕಾರ್ಯದರ್ಶಿಯಾಗಿ ಸಂಘಕ್ಕೆ ಹತ್ತಿರವಾದಂತೆಲ್ಲ ಪ್ರಾದೇಶಿಕತೆಯ ಬೇಲಿ ಕಳಚಿ ಎಲ್ಲ ಸದಸ್ಯರಿಗೂ ಹತ್ತಿರವಾಗುತ್ತ ಬಂದಿದ್ದೆ. ಆಗಲೇ ನನಗೆ ಪಾರ್ವತಿಯವರ ಸಂಪರ್ಕ ನಿಕಟವಾಗಿ ಬೆಳೆದದ್ದು. ಅವರಿಗೂ ನನ್ನ ಪರಿಚಯವಾದದ್ದು. ನಾವು ಹೆಚ್ಚು ಹತ್ತಿರವಾದದ್ದು ಶ್ರೀ ಕೆ.ಟಿ. ಚಂದ್ರಶೇಖರ್ ಅವರು ಅನಕೃ ಪ್ರತಿಷ್ಟಾನ ಪ್ರಾರಂಭಿಸಿದ ಹೊಸತರಲ್ಲಿ. ಪ್ರಾರಂಭದಲ್ಲಿ ಅನಕೃ ಪ್ರತಿಷ್ಟಾನದಿಂದ ವರ್ಷಕ್ಕೊಮ್ಮೆ ಕಾದಂಬರಿಗಳಿಗೆ ಬಹುಮಾನ ಕೊಡಲಾಗುತಿತ್ತು. ಆಗ ನಾವಿಬ್ಬರೂ ಆಯ್ಕೆಸಮಿತಿಯಲ್ಲಿದ್ದೆವು. ಈ ಒಡನಾಟ ನಮ್ಮಿಬ್ಬರೊಳಗಿನ ಸ್ನೇಹಕ್ಕೆ ಬೆಸುಗೆ ಹಾಕಿತ್ತು. ಅಲ್ಲಿಂದ ಮುಂದೆ ಪಾರ್ವತಿಯವರ ಆಪ್ತರ ಸರ್ಕಲ್ ಗೆ ನಾನೂ ಸೇರಿಕೊಂಡೆ. ಅವರು ತೋರಿಸುತ್ತಿದ್ದ ಹಿರಿಯಕ್ಕನ ಪ್ರೀತಿಯಲ್ಲಿ ನಾನೂ ಪಾಲುದಾರಳಾದೆ. ಸದಸ್ಯರ ಸಂಖ್ಯೆ ಏರುತ್ತಿತ್ತು. ನಾಗಮಣಿಯವರ ಎರಡು ಅವಧಿ ಮುಗಿದ ಕೂಡಲೇ ಅಧ್ಯಕ್ಷರ ಆಯ್ಕೆ, ಓಟಿನ ಮೂಲಕವೇ ಆಗಬೇಕು ಎನ್ನುವ ಠರಾವು ಪಾಸುಮಾಡಿದಾಗ ಸಂಘದಲ್ಲಿ ಮೊದಲ ಬಾರಿಗೆ ಅಧ್ಯಕ್ಷತೆಯ ಪಟ್ಟಕ್ಕೆ ಇಲೆಕ್ಷನ್ ನಡೆಯುವಂತಾಯಿತು.
ನಾನಾಗ ಬ್ಯಾಂಕಿನ ಕೆಲಸ ಬಿಟ್ಟಿದ್ದೆ. ನಾಗಮಣಿಯವರು ನಿಮಗೆ ಸಂಘದ ಆಗುಹೋಗುಗಳೆಲ್ಲ ಗೊತ್ತು ನೀವೇ ನಿಂತುಕೊಳ್ಳಬಾರದೇಕೆ ಎಂದು ಒತ್ತಾಯಿಸಿದಾಗ ಅಗಲಿ ಎಂದು ಒಪ್ಪಿಕೊಂಡಿದ್ದೆ. ಶಶಿಕಲಾ ವೀರಯ್ಯಸ್ವಾಮಿ, ನಾರಾಯಣಮ್ಮ ಮತ್ತು ನಾನು ಮೂರು ಜನ ಅಭ್ಯರ್ಥಿಗಳು. ಶಶಿಕಲಾ ನನಗಿಂತ ಒಂದು ಓಟು ಹೆಚ್ಚು ಪಡೆದು ಗೆದ್ದಿದ್ದರು. ಅವರು ಅಧ್ಯಕ್ಷರಾಗಿ ನಾನು ಉಪಾಧ್ಯಕ್ಷೆಯಾಗಿ ಕಾರ್ಯ ಪ್ರಾರಂಭಿಸಿದ್ದೆವು. ಆದರೆ ಒಂದೇ ವರ್ಷದಲ್ಲಿ ಶಶಿಕಲಾ ಅವರಿಗೆ ಮಂಡ್ಯಕ್ಕೆ ವರ್ಗವಾದ ಕಾರಣ ಒಂದೇ ಓಟಿಗೆ ಸೋತಿದ್ದ ನಾನೇ ಅಧ್ಯಕ್ಷೆಯಾಗಿ ಮುಂದುವರೆಯ ಬೇಕೆನ್ನುವ ಹಿರಿಯ ಲೇಖಕಿಯರೆಲ್ಲರ ಒತ್ತಾಯದ ಮೇರೆಗೆ ಸಂಘದ ಅಧ್ಯಕ್ಷತೆಯ ಪಟ್ಟ ನನ್ನ ಹೆಗಲಿಗೆ ಬಂತು. ಆಗ ಪಾರ್ವತಿಯವರು ಹಿರಿಯಕ್ಕನಂತೆ ನನ್ನ ಬೆಂಬಲಕ್ಕೆ ನಿಂತದ್ದನ್ನು ನಾನು ಮರೆಯಲಾರೆ.
ಕಾರ್ಯಕ್ರಮ ಒಳ್ಳೆಯದಾದರೆ, ಭಾಷಣ ಚೆನ್ನಾಗಿದ್ದರೆ ಮೊದಲು ಅಭಿನಂದಿಸುತ್ತಿದ್ದವರು ಪಾರ್ವತಿಯವರು. ಚೆನ್ನಾಗಿ ಮಾತಾಡಿದಿಯಮ್ಮ ಎಂದು ಅವರು ಹೇಳಿದಾಗ ನನಗೆ ಒಂದು ಥರಾ ಸಂಭ್ರಮವಾಗುತ್ತಿತ್ತು. ಯಾಕೆಂದರೆ ಮೊದಲು ಮೊದಲು ಎಲ್ಲರೂ, ಎಲ್ಲಾ ಸರಿ ಉಷಾ ಮಾತಾಡುವಾಗ ಮಂಗಳೂರು ಕನ್ನಡವನ್ನೇ ಮಾತಾಡುತ್ತಾರೆ ಎನ್ನುತ್ತಿದ್ದರು. ಆಗ ನನಗೆ ಬೇಸರವಾಗುತ್ತಿತ್ತು. ಮಂಗಳೂರು ಕನ್ನಡವೇನೂ ಫ್ರೆಂಚ್ ಅಲ್ಲವಲ್ಲ ಎಂದು ಅನಿಸುತ್ತಿತ್ತು. ನಾನು ಅಧ್ಯಕ್ಷೆಯಾಗಿದ್ದಾಗ ಪದೇ ಪದೇ ನನ್ನ ಮಾತುಗಳನ್ನು ಅವರು ಕೇಳಲೇ ಬೇಕಿತ್ತು. ಹಾಗಾಗಿ ಮಂಗಳೂರು ಕನ್ನಡ ಎಲ್ಲರಿಗೂ ಫೆಮಿಲಿಯರ್ ಆಗುತ್ತ ಬಂದಿರಬಹುದು.
ನನ್ನ ಕೆಲಸಗಳನ್ನು ಮೆಚ್ಚಿಕೊಂಡವರಲ್ಲಿ ಪಾರ್ವತಿಯವರು ಮೊದಲಿಗರು. ಅವರ ಹಿರಿತನವನ್ನು ಬದಿಗಿಟ್ಟು ಬಿಚ್ಚು ಮನಸ್ಸಿನಿಂದ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಎರಡನೇ ಅವಧಿಗೆ ಪುನರಾಯ್ಕೆ ಆಗುವಾಗಲೂ ಅವರು ಯಾವುದೇ ಸಂಕೋಚವಿಲ್ಲದೇ ಈ ಸಲ ಉಷಾನೇ ಮುಂದುವರೆಯಬೇಕು. ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಎಲ್ಲರೊಡನೆ ಹೇಳುತ್ತಿದ್ದುದನ್ನು ಕೇಳುವಾಗ ಅವರ ಪ್ರೀತಿ ಅಭಿಮಾನವನ್ನು ಗೆದ್ದುಕೊಂಡ ನನಗೆ ಸಂತಸವಾಗುತ್ತಿತ್ತು. ನಾನು ಬೆಂಗಳೂರಿನವಳಲ್ಲ. ತುಳುನಾಡಿನವಳು. ನಾನು ಅಧ್ಯಕ್ಷೆಯಾಗುವವರೆಗೆ ಲೇಖಕಿಯರ ಸಂಘ ಬ್ರಾಹ್ಮಣರ ಸಂಘ ಎನ್ನುವ ತಪ್ಪಭಿಪ್ರಾಯವಿತ್ತು. ಆಗ ಹೆಚ್ಚಿನ ಲೇಖಕಿಯರು ಬ್ರಾಹ್ಮಣರೇ ಆಗಿದ್ದರು. ಅಮೇಲೆ ಒಬ್ಬೊಬ್ಬರೇ ಬೇರೆಯವರು ಲೇಖಕಿಯರಾಗಿ ಬೆಳೆದರು. ಸಂಘದೊಳಗೆ ಅಂತಹ ಯಾವುದೇ ತಾರತಮ್ಯ ಇದ್ದಿರಲೇ ಇಲ್ಲ. ಅಲ್ಲಿಯವರೆಗೆ ಅಧ್ಯಕ್ಷರಾಗಿದ್ದವರು ಬ್ರಾಹ್ಮಣರಾಗಿದ್ದುದಕ್ಕೆ ಹಾಗೆ ಹೇಳುತ್ತಿದ್ದಿರಬಹುದು. ಹಾಗೇನಾದರೂ ಇದ್ದಿದ್ದರೆ ನಾನು ಅಧ್ಯಕ್ಷೆಯಾಗುವುದು ಸಾಧ್ಯವಿರಲಿಲ್ಲ. ನನಗೆ ಬೆಂಬಲಿಸಿದವರೆಲ್ಲ ಹಿಂದಿನ ಅಧ್ಯಕ್ಷರುಗಳೇ. ನನಗೆ ಯಾವತ್ತೂ ನಾನು ಬ್ರಾಹ್ಮಣೇತರಳು ಎಂದು ಅನಿಸಿರಲೇ ಇಲ್ಲ. ಹಿರಿಯ ಲೇಖಕಿಯರೆಲ್ಲರೂ ನನ್ನನ್ನು ಬೆಂಬಲಿಸುತ್ತಿದ್ದ ರೀತಿ ಹಾಗಿತ್ತು.
ಪಾರ್ವತಿಯವರು ನನ್ನ ಮೇಲಿಟ್ಟಿದ್ದ ಪ್ರೀತಿ, ಅಭಿಮಾನಕ್ಕೆ ಒಂದು ಉದಾಹರಣೆ ನಾನು ಕೊಡಲೇ ಬೇಕು. ಜೀವನದಲ್ಲಿ ಅನಿರೀಕ್ಷಿತವಾಗಿ ಒದಗಿ ಬರುವ ಕೆಲವೇ ಒಳ್ಳೆಯ ಅವಕಾಶಗಳಲ್ಲಿ ‘ಅಕ್ಕ 2004 ವಿಶ್ವ ಕನ್ನಡ ಸಮ್ಮೇಳನ’ದಲ್ಲಿ ನಾನು ಭಾಗವಹಿಸುವಂತಾದದ್ದು ಅಂತಹ ಒಂದು ಅವಕಾಶ. ನನಗೆ ‘ಅಕ್ಕ’ದ ಅಥವಾ ಅಮೇರಿಕಾದ ಯಾವುದೇ ಕನ್ನಡ ಸಂಘದ ಪರಿಚಯವಾಗಲೀ, ಸಂಪರ್ಕವಾಗಲೀ ಇರಲಿಲ್ಲ. ನನಗೆ ಈ ಅವಕಾಶ ಒದಗಿದ್ದು ಶ್ರೀಮತಿ ಹೆಚ್. ಎಸ್. ಪಾರ್ವತಿಯವರಿಂದ. ಇದನ್ನು ನಾನೆಂದೂ ಮರೆಯಲಾರೆ. ‘ಅಕ್ಕ’ ಸಮ್ಮೇಳನದ ಸಾಹಿತ್ಯ ಸಮಿತಿಯ ಸಂಘಟಕ ಡಾ. ನಂಜುಂಡಸ್ವಾಮಿಯವರು (ದಿವಂಗತ ಹೆಚ್. ಕೆ. ರಂಗನಾಥ್ ಅವರ ಸಹೋದರ) ಯಾರನ್ನು ಕರೆಯಬಹುದು ಎಂದು ಪಾರ್ವತಿಯವರನ್ನು ಸಂಪರ್ಕಿಸಿದಾಗ ಅವರು ಕೆಲವು ಲೇಖಕಿಯರ ಹೆಸರುಗಳನ್ನು ಸೂಚಿಸಿದ್ದರಂತೆ. ಅದರಲ್ಲಿ ನನ್ನ ಹೆಸರನ್ನೂ ಸೂಚಿಸಿದ್ದರು. ಆದರೆ ಐದಾರು ತಿಂಗಳು ಕಳೆದಿದ್ದರೂ ‘ಅಕ್ಕ’ದಿಂದ ಯಾವ ಸೂಚನೆಯೂ ಇರಲಿಲ್ಲ. ಕೆಲವು ತಿಂಗಳುಗಳ ನಂತರ ಪಾರ್ವತಿಯವರು ಮತ್ತು ನೀಳಾದೇವಿಯವರು ಅವರ ಮಕ್ಕಳ ಸ್ಪಾನ್ಸರ್ಶಿಪ್ ನಲ್ಲಿ ಅಕ್ಕ ಸಮ್ಮೇಳನಕ್ಕೆ ಹೋಗುವುದಾಗಿ ತಿಳಿಸಿದರು. ನನ್ನ ಮಗ ಸಾತ್ವಿಕ್ ಅಲ್ಲಿ ವಿಧ್ಯಾರ್ಥಿಯಾಗಿದ್ದುದರಿಂದ ಅವನು ಸ್ಪಾನ್ಸರ್ ಮಾಡುವುದು ಸಾಧ್ಯವಿರಲಿಲ್ಲ. ನಾನು ಸುಮ್ಮನಾಗಿದ್ದೆ. ಆದರೆ ಏಪ್ರಿಲ್ ತಿಂಗಳಲ್ಲಿ ಸಾತ್ವಿಕ್ 2004ರ ಜೂನ್ ತಿಂಗಳ 11ರಂದು ತನ್ನ ಗ್ರ್ಯಾಜುಯೇಶನ್ ಸಮಾರಂಭವಿದೆ ಸಾಧ್ಯವಾದರೆ ಬನ್ನಿ ಅಂದಾಗ ನಾವು ಅಮೇರಿಕಾಕ್ಕೆ ಹೋಗುವ ಮನಸ್ಸು ಮಾಡಿದ್ದು. ಸೆಪ್ಟೆಂಬರಿನಲ್ಲಿ ವಿಶ್ವ ಕನ್ನಡ ಸಮ್ಮೇಳನವಿತ್ತು. ಹೋದರೆ ಸಮ್ಮೇಳನವನ್ನೂ ಮುಗಿಸಿ ಬರಬಹುದೆನ್ನುವ ಯೋಚನೆಯೂ ಆಗಲೇ ಬಂದದ್ದು.
ಇದನ್ನು ಕೇಳಿ ಹೆಚ್ಚು ಸಂತಸ ಪಟ್ಟವರು ಪಾರ್ವತಿಯವರು. ನಾವು ಅಮೇರಿಕಾಕ್ಕೆ ಹೊರಟಿರುವ ಸಂಗತಿಯನ್ನು ಪಾರ್ವತಿಯವರಿಂದ ತಿಳಿದ ಡಾ. ನಂಜುಂಡಸ್ವಾಮಿಯವರಿಂದ ಒಂದು ದಿನ ದೂರವಾಣಿ ಕರೆಬಂದಿತ್ತು. ‘ಅಮೇರಿಕಾಕ್ಕೆ ಬರುತ್ತಿದ್ದೀರೆಂದು ತಿಳಿಯಿತು. ಸಮ್ಮೇಳನಕ್ಕೆ ನಿಮ್ಮನ್ನು ಕರೆಯುವುದೆಂದು ಆರು ತಿಂಗಳ ಹಿಂದೆಯೇ ತೀರ್ಮಾನಿಸಿದ್ದೆವು. ನಿಮ್ಮ ಬಗ್ಗೆ ಹೆಚ್. ಎಸ್. ಪಾರ್ವತಿಯವರು ಬಹಳ ಹೇಳಿದ್ದಾರೆ. ಯಾರೂ ಸ್ಪಾನ್ಸರ್ಸ್ ಸಿಗದೇ ನಿಮ್ಮನ್ನು ಸಂಪರ್ಕಿಸಿರಲಿಲ್ಲ. ಈಗ ಹೇಗೂ ಬರ್ತಿದ್ದೀರಲ್ಲ? ಫ್ಲೋರಿಡಾದಲ್ಲಿ ನಡೆಯುವ ಸಮ್ಮೇಳನಕ್ಕೆ ಬಂದು ‘ಆಧುನಿಕ ಮಹಿಳಾ ಸಾಹಿತ್ಯದ’ ಬಗ್ಗೆ ಒಂದು ಇಪ್ಪತ್ತು ನಿಮಿಷಗಳ ಪ್ರಬಂಧ ಮಂಡಿಸಿ ಎಂದು ಆಹ್ವಾನಿಸುತ್ತಿದ್ದೇನೆ’ ಎಂದರು.
ನಮ್ಮ ವೀಸಾ ಆಗಿಲ್ಲ. ಆದರೆ ಬರುತ್ತೇವೆ ಎಂದು ಸುಮ್ಮನಾಗಿದ್ದೆ. ವೀಸಾ ಸಿಗುವಾಗ ತಡವಾಗಿ ಮಗನ ಗ್ರಾಜ್ಯುಯೇಶನ್ ಗೆ ಹೋಗುವುದು ತಪ್ಪಿದಾಗ ಅಕ್ಕ ಸಮ್ಮೇಳನಕ್ಕೆ ಹೋಗುವ ಆಸಕ್ತಿಯೂ ಹೋಗಿತ್ತು. ಆದರೆ ಮಗ ಇದು ಅಪರೂಪದ ಅವಕಾಶ ಹೇಗೂ ವೀಸಾ ಆಗಿದೆ ಬನ್ನಿ ಸಮ್ಮೇಳನಕ್ಕೆ ಹೋಗಿ ಎಂದು ಅವನೇ ಫ್ಲೋರಿಡಾಕ್ಕೆ ಹೋಗುವ ಎಲ್ಲಾ ಏರ್ಪಾಡೂ ಮಾಡಿದಾಗ ಹೋಗಿದ್ದೆವು. ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿದ್ದು ಒಂದು ಮರೆಯಲಾಗದ ಅನುಭವ. ಆ ಅವಕಾಶ ನನಗೆ ಸಿಕ್ಕಿದ್ದು ಪಾರ್ವತಿಯವರಿಂದ. ಅಲ್ಲಿ ಮೂರು ದಿನ ಪಾರ್ವತಿಯವರು, ನೀಳಾದೇವಿ ಮತ್ತು ನಾವು ಒಟ್ಟಿಗೇ ಇದ್ದೆವು. ಆ ನೆನಪುಗಳು ಇವತ್ತಿಗೂ ಮನದಲ್ಲಿ ಹಚ್ಚ ಹಸುರಾಗಿದೆ.
ಕ್ರಮೇಣ ನಮಗಿಬ್ಬರಿಗೂ ಹೆಚ್ಚಿನ ಓಡಾಟ ಸಾಧ್ಯವಾಗದೆ ಭೇಟಿಯಾಗೋದು ಅಪರೂಪವಾಗಿತ್ತು. ಆದರೂ ದೂರವಾಣಿಯ ಮೂಲಕ ಸಂಪರ್ಕ ಇಟ್ಟುಕೊಂಡಿದ್ದೆವು. ಅದೇ ಹಿರಿಯಕ್ಕನ ಪ್ರೀತಿಯಿಂದ ಉಷಾ ಹೇಗಿದ್ದೀರಿ? ನಿಮ್ಮ ಯಜಮಾನರು ಹೇಗಿದ್ದಾರೆ ಎಂದು ವಿಚಾರಿಸುವಾಗ ಮನಸ್ಸು ತುಂಬಿಬರುತ್ತಿತ್ತು. ನಮ್ಮ ಮನೆಯಲ್ಲಿ ನಾನೇ ಎಲ್ಲರಿಗೂ ಹಿರಿಯಕ್ಕ. ನನಗೆ ಹಿರಿಯಕ್ಕನ ಪ್ರೀತಿ ಕೊಟ್ಟೇ ಗೊತ್ತಲ್ಲದೆ ಸ್ವೀಕರಿಸಿ ಗೊತ್ತಿರಲಿಲ್ಲ. ಪಾರ್ವತಿಯವರು ತೋರಿಸಿರುವ ಪ್ರೀತಿ ವಿಶ್ವಾಸದಿಂದ ಹಿರಿಯಕ್ಕನ ಪ್ರೀತಿಯ ಅರ್ಥ ನನಗಾಗಿತ್ತು. ನನಗೊಬ್ಬಳಿಗೇ ಅಲ್ಲ. ಅವರು ಲೇಖಕಿರಿಗೆಲ್ಲಾ ಪ್ರೀತಿಯ ಹಿರಿಯಕ್ಕನೇ ಆಗಿದ್ದರು.
ಪಾರ್ವತಿಯವರು ಒಬ್ಬ ಒಳ್ಳೆಯ ಸಂವೇದನಾಶೀಲ ಲೇಖಕಿ. ಕಿರಿಯ ಲೇಖಕಿಯರಿಗೆ ಮಾದರಿಯಾಗಿದ್ದವರು. ಹಿಂದಿಯಲ್ಲಿ ಪರಿಣಿತಳಿದ್ದುದರಿಂದ ಹಲವಾರು ಹಿಂದಿ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಅವರ ‘ಒಂದು ಸಂವತ್ಸರ ಚಕ್ರ’ ಸ್ತ್ರೀವಾದಿ ನೆಲೆಯಿಂದ ಬರೆದ ಒಂದು ಉತ್ತಮ ಕೃತಿ. ಇತ್ತೀಚೆಗೆ ಅವರ ಅನಾರೋಗ್ಯದ ಕಾರಣ ಅವರು ಹೊರಗೆ ಹೋಗುವುದು ಕಡಿಮೆಯಾಗಿರುವುದಾದರೂ ಅವರ ಲೇಖನಿಗೆ ಹೊಸ ಚೇತನ ಬಂದಂತಿತ್ತು. ಅಧ್ಯಯನ ಶೀಲರಾದ ಅವರು ಬಹಳ ಓದುತ್ತಿದ್ದುದ್ದರ ಜೊತೆಗೆ ಒಳ್ಳೆಯ ಕೃತಿಗಳನ್ನು ಈ ವಯಸ್ಸಿನಲ್ಲೂ ರಚಿಸುತ್ತಲೇ ಇದ್ದರು. ಮುಪ್ಪು ದೇಹಕ್ಕೆ ಮಾತ್ರ ಮನಸಿಗಲ್ಲ ಎಂದು ಸಾಧಿಸಿ ತೋರುತ್ತಿದ್ದರು. ಇದು ಅವರ ಕ್ರಿಯಾಶೀಲ ಮನಸ್ಸಿಗೆ ನಿದರ್ಶನ. ದೈಹಿಕವಾಗಿ ಚೈತನ್ಯ ಕುಂದಿದರೂ ಮಾನಸಿಕವಾಗಿ ಹುರುಪನ್ನು ತುಂಬಿಸಿಕೊಂಡು ತಮ್ಮ ಪಾಲಿಗೆ ಉಳಿದಿರುವ ಸಮಯವನ್ನು ಚೇತೋಹಾರಿಯಾಗಿ ಕಳೆಯುವ ಮನಸ್ಥಿತಿ ಎಲ್ಲರಿಗೂ ದಕ್ಕುವುದಿಲ್ಲ. ಪಾರ್ವತಿಯವರಿಗೆ ಆ ಶಕ್ತಿ ದಕ್ಕಿತ್ತು. ನನ್ನ ಆತ್ಮಕಥನ ‘ಯಾವ ನಾಳೆಯೂ ನಮ್ಮದಲ್ಲ’ ವನ್ನು ಮೆಚ್ಚಿ ಅದಕ್ಕೆ ಚಂದದ ಮುನ್ನುಡಿ ಬರೆದು ಶುಭ ಹಾರೈಸಿದ್ದರು. ಸಹ ಲೇಖಕಿಯರನ್ನು ಮೆಚ್ಚಿ ಪ್ರೋತ್ಸಾಹಿಸುವ ದೊಡ್ಡ ಗುಣ ಅವರಲ್ಲಿತ್ತು. ಕರ್ನಾಟಕ ಲೇಖಕಿಯರ ಸಂಘದ ಪ್ರತಿಷ್ಟಿತ ಅನುಪಮಾ ಪ್ರಶಸ್ತಿ ಎಚ್. ಎಸ್ ಪಾರ್ವತಿಯವರಿಗೆ 2001ರಲ್ಲಿ ನಾನು ಅಧ್ಯಕ್ಷೆಯಾಗಿರುವ ಕಾಲದಲ್ಲಿ ಸಿಕ್ಕಿದ್ದು ನನಗೆ ಸಂತಸದ ಹಾಗೂ ಅತ್ಯಂತ ಹೆಮ್ಮೆಯ ವಿಷಯ.
ಇತ್ತೀಚೆಗೆ ಅವರು ತಮ್ಮ ಕ್ರಿಯಾಶಕ್ತಿಯನ್ನೆಲ್ಲ ಕಳಕೊಂಡಿದ್ದರು. ಹೋಗಿ ನೋಡ ಬೇಕೆನ್ನುವ ಮನಸ್ಸಿದ್ದರೂ ಕಾರಣಂತರಗಳಿಂದ ಹೋಗಲಾಗಿರಲೇ ಇಲ್ಲ. ಆ ನೋವು ನನ್ನೊಳಗೆ ಉಳಿದೇಬಿಟ್ಟಿತು. ಇವತ್ತೂ ಹೋಗಲಾಗಿಲ್ಲ ಎನ್ನುವ ನೋವಿನಿಂದಲೇ ಈ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ. ಇದು ಕರ್ನಾಟಕ ಲೇಖಕಿಯರ ಸಂಘದ ಸದಸ್ಯೆಯರೆಲ್ಲರ ಭಾವಪೂರ್ಣ ಶ್ರದ್ಧಾಂಜಲಿಯೂ ಆಗಿದೆ. ಹಿರಿಯಕ್ಕ ನಮ್ಮನ್ನಗಲಿದ್ದಾರೆ ಆದರೆ ಅವರ ನೆನಪುಗಳು ನಮ್ಮೆಲ್ಲರ ಮನದಲ್ಲಿ ಮುಖ್ಯವಾಗಿ ಲೇಖಕಿಯರ ಸಂಘದಲ್ಲಿ ಸದಾ ಇರುತ್ತದೆ.





very sad. RIP.