'ಆ ಪದದ ಅರ್ಥ ಗೊತ್ತಾ?' ಕೇಳಿದ್ರು ಅಂಜಲಿ ರಾಮಣ್ಣ

ಅಂಜಲಿ ರಾಮಣ್ಣ

ಇದನ್ನು ಓದುತ್ತಿರುವ ಬೆಂಗಳೂರೇತರರಿಗೆ ಬಹುಶಃ ಈ ಪದದ ಪರಿಚಯವೂ ಇಲ್ಲದಿರಬಹುದು. ಹಿಂದಿನ ತಲೆಮಾರಿನವರಿಗೆ ಇದರ ಬಗ್ಗೆ ಸಣ್ಣ ಗಲಿಬಿಲಿಯೂ ಇಲ್ಲದಿರಬಹುದು. ನನ್ನಂಥವರಿಗೆ ಹೀಗೆಲ್ಲಾ ಓದುವಾಗ ನನ್ನನ್ನು ಹೆಣ್ಣು ಎನ್ನಲು ಹಿಂಸೆಯಾಗಬಹುದು. ಹೀಗೆ ಇಷ್ಟೆಲ್ಲ disclaimersನೊಂದಿಗೆ ಮುಂದುವರೆಯುವ ಭಂಡತನ ಮಾಡುತ್ತಿದ್ದೇನೆ. ನಾವು ಬಳಸುವ ಪದಗಳು ನಮ್ಮನ್ನು ಮೇಲ್ಸ್ತರದಲ್ಲಿ ಗುರುತಿಸಿಬಿಡುತ್ತದೆ ಎಂದು ನಂಬಿರುವ ಬಿಸಿ ರಕ್ತದವರ ನಡುವೆ, ‘ನಾಲಿಗೆ ಕುಲ ಹೇಳಿತು’ ಎನ್ನುವ ಗಾದೆಯನ್ನು ಬಲವಾಗಿ ನಂಬಿಕೊಂಡಿರುವ ಥಣ್ಣನೆಯ ರಕ್ತದ ತಲೆಮಾರಿನವರಿಗೆ ಹುಟ್ಟಿದವಳು ನಾನು. ಈ ಊರಿನಲ್ಲಿ ಗೂಡಂಗಡಿಯ ಚಿತ್ರಾನ್ನಕ್ಕಿಂತಲೂ ಸಾಮಾನ್ಯವಾಗಿ ಬಳಕೆಯಾಗುವ ಪದ ಇದು. ಅತೀ ಖುಷಿಯಿರಲಿ, ಕಭೀ ಗಂ ಇರಲಿ, ಹುಚ್ಚುತನ ಮೇಲೇರಲಿ, ಅಸಹಾಯಕತೆ ಮನ ಕಟ್ಟಲಿ, ಯಶಸ್ಸು ಕದ ತಟ್ಟುವಾಗ, ವ್ಯಂಗ್ಯ ನಾಲಿಗೆಯಲ್ಲಿ ಹೊರಳಾಡುವಾಗ, ಕಡೆಗೆ ಕತ್ತಲಲ್ಲಿ ಪರಸ್ಪರ ಕಿವಿ ಕಚ್ಚುವಾಗಲೂ ಇದೇ ಇದೇ ಇದೇ ಪದ ! ತಾಯಿ ಪ್ರೀತಿಯ ನಂತರ ಬಹಳ ಯೂನಿವರ್ಸಲ್ ಆದದ್ದು ಎಂದರೆ ಇದೊಂದೇ ಇರಬೇಕು. ಆದರೂ ಇದು ನನ್ನನ್ನು ಆಕರ್ಷಿಸಲು ಈವರೆಗೂ ಸಾಧ್ಯವಾಗಿಲ್ಲ ಎನ್ನುವುದೇ ಈ ಜನ್ಮದ ಸಾಧನೆ ಎಂದುಕೊಳ್ಳುವ ಅಲ್ಪಳು ನಾನು. ಯಾರೊಬ್ಬರ ತೇಜೋವಧೆ ಮಾಡಬೇಕೆನಿಸಿದಾಗ, ನಮ್ಮದನ್ನು ಸರಿ ಎಂದು ಬಿಂಬಿಸಿಕೊಳ್ಳುವಾಗ ಬಹಳ ಸುಲಭದಲ್ಲಿ ಒದಗಿ ಬರುವ ಬಾಂಬ್ನಂತೆ ಈ ಪದ. But, ಕುಲುಮೆಯಲ್ಲಿ ಕಾಯಿಸಿ ನೇರಾ, ಸೀದಾ ಕಿವಿಗಳಿಗೇ ಹುಯ್ದರೂ ನನ್ನನ್ನು ಕಿಂಚಿತ್ತು ನಲುಗಿಸದ, ಅಲುಗಾಡಿಸದ ಪದ ಎಂದರೇ ಇದೊಂದೇ.
ಎಲ್ಲರೂ ಇದನ್ನು ಅಸಭ್ಯ ಎನ್ನುವಾಗ, ಅವಮಾನ ಎಂದು ತತ್ತರಿಸುವಾಗ ನಾನ್ಯಾಕೆ ಹೀಗೆ? ಎನ್ನುವ ಪ್ರಶ್ನೆಗೆ ಉತ್ತರವಾಗಿ googleಲ್ಲಾಡಿಸಿದೆ. 1475ನೆಯ ಇಸವಿಯಲ್ಲಿ ಈ ಪದ ಮೊದಲ ಬಾರಿಗೆ ಬಳಕೆಯಾಯಿತು ಎಂದು ತಿಳಿದುಬಂದರೂ, ಅದಕ್ಕೂ ಮೊದಲೇ ಆಗಿದ್ದಿರಬಹುದು ಎನ್ನುವ ಮಾಹಿತಿ ಸಿಕ್ಕಿತು. ಕ್ರಿಯೆ ಎಷ್ಟು ಹಳೆಯದೋ ಆಲೋಚನೆಯೂ ಅಷ್ಟೇ ಹಳೆಯದ್ದಿರಬೇಕು ಅಲ್ಲ್ವಾ ?! ಬಳಕೆಗೆ ಬಂದಾಗ ಇದರೊಂದಿಗೆ ದುರುದ್ದೇಶವೇನೂ ಥಳುಕು ಹಾಕಿಕೊಂಡಿರಲಿಲ್ಲವಂತೆ. ಆದರೆ ಮನುಷ್ಯನ ಮನಸ್ಸು ಕೊಳೆಯತೊಡಗಿದಂತೆಲ್ಲಾ ಇದರ ಬಳಕೆಯೂ ಕೆಟ್ಟದ್ದಕ್ಕೇ ಆಗಲು ಶುರುವಿಟ್ಟಿತಂತೆ. ಗ್ರೀಕ್, ಲ್ಯಾಟಿನ್, ಜರ್ಮನ್ ಭಾಷೆಗಳಿಂದೆಲ್ಲಾ ಸಾಲ ಪಡೆದು ಆಂಗ್ಲವೆನಿಸುರುವ ಈ ಪದವನ್ನು ಬಳಸುವವರದ್ದು ಚಿಂದಿ ಆಯುವ ಮನೋಸ್ಥಿತಿಯೇ ಇದ್ದಿರಬೇಕು ! ಅಸಹನೆ, ಅಸಮಾಧಾನ, ಅಸಹಾಯಕತೆಯನ್ನು ಹೇಳಿಕೊಳ್ಳಲು ಈ ಪದವನ್ನು ಬಳಸುವುದೇ ಆದರೆ ಅದಕ್ಕೆ ಅಂಟಿಕೊಂಡಿರುವ ಕ್ರಿಯೆಯನ್ನೂ ನಿಷೇಧಿಸಬೇಕಿರುವ ದಾಷ್ಟ್ರ್ಯ ನಮಗಿರಬೇಕು. ಪಾಪ, ನಿಘಂಟು ಕೂಡ ನಮ್ಮ ಧೂರ್ತತೆಗಿಂತ ಸೀದಾಸಾದ. ಅದಕ್ಕೇ ನೇರವಾದ ಅರ್ಥವನ್ನು ಮಾತ್ರ ತೋರಿಸುತ್ತೆ. ಈ ಪದದ ಕ್ರಿಯೆಗೆ ಬಳಸುವ ಅಂಗವೂ, ಕಣ್ಣು, ಕಿವಿ, ಕೈ ಕಾಲುಗಳಂತೆ ಒಂದು ಅಂಗ ಅಷ್ಟೆ. ಹೆಚ್ಚಿನ ಅರ್ಥ ಕಲ್ಮಷಗೊಂಡ ಮೆದುಳಷ್ಟೇ ನೀಡಬಲ್ಲುದು.

 
ಆಗಿನ್ನೂ ಪ್ರಾತ್ಯಕ್ಷಿಕೆ ತಿಳಿಯದ ಬರೀ theoretical ಹುಡುಗಿಯಾಗಿದ್ದೆ. ಕಾಲೇಜಿನ ಗೋಡೆಯ ಮೇಲೆ ಯಾವೋನೋ ಗಂಡುಗಲಿ ಈ ಪದವನ್ನು ಸೀಮೆಸುಣ್ಣದಿಂದ ಸುಂದರವಾಗಿ ಕೆತ್ತಿಬಿಟ್ಟಿದ್ದ. ಆಗಲೇ ಮೊದಲ ಬಾರಿಗೆ ಆ ಪದದ ಪರಿಚಯವಾಗಿದ್ದು. ಅರ್ಥ ತಿಳಿಯದ್ದು. ಹುಡುಗಿಯರೆಲ್ಲಾ ಅತ್ತಕಡೆಯಿಂದ ಓಡಾಡುವುದನ್ನು ನಿಲ್ಲಿಸಿದರು. ನನಗೋ ಸಲ್ಮಾನ್ ಖಾನ್ ಶೈಲಿಯಲ್ಲಿನ ಕನ್ಫ್ಯೂಷನ್ನು ! ಈ ಗೌರಮ್ಮಂದಿರಿಗೆ ಹೆಚ್ಚಿನದೇನೋ ತಿಳಿದಿದೆ ಎನ್ನುವ ಅನುಮಾನ ಒಂದೆಡೆಯಾದರೆ ಅದು ಏನು ಎಂದು ತಿಳಿದುಕೊಳ್ಳಬೇಕು ಎನ್ನುವ ಕುತೂಹಲದ ತುರಿಕೆ ಮತ್ತೊಂದೆಡೆ. ಲೈಬ್ರರಿ ಹೊಕ್ಕೆ. ಅಯ್ಯೋ, ಆ ಕಾಲದ ನಿಘಂಟಿನಲ್ಲೂ ನಿಷೇಧವಿದ್ದ ಪದ ಇದಾಗಿತ್ತು. ಪಪ್ಪನೊಡನೆ ಕದ್ದುಮುಚ್ಚಿ ಎಷ್ಟೊಂದು ಇಂಗ್ಲಿಷ್ ಸಿನೆಮಾ ನೋಡುತ್ತಿದ್ದೆ. ಆದರೂ ಹಾಳಾದ್ದು ಈ ಪದ ಅದು ಹೇಗೆ ನನ್ನ ಕಿವಿ ತಪ್ಪಿಸಿ ಸರಿದಾಡುತ್ತಿತ್ತೋ. ಏನೋ ಒಂದು, ಒಟ್ಟಿನಲ್ಲಿ ಮಡಿಮಡಿ ಎಂದು ಅಡಿಗಡಿಗೆ ಹಾರುವಂತೆನಿಸುವ ಪದ ಇದು ಅಂತ ಮಾತ್ರ ಗೊತ್ತಾಗಿತ್ತು.
ಅಖಾಡಕ್ಕಿಳಿಯುವ ವಯಸ್ಸು ಬಂದಾಗ ಇದರ ಅರ್ಥ, ಮೂಲ ಎಲ್ಲದರ ಅರಿವಾಯ್ತು. ಆದರೂ ಯಾಕೋ ಈ ಜಗತ್ತು ಬಿಂಬಿಸಿರುವಷ್ಟು ಪವರ್ಫುಲ್ ಪದ ಇದು ಎನ್ನಿಸುವುದಿಲ್ಲ. ಒಮ್ಮೆ ತವರೂರಿನ ಮುಖ್ಯ ರಸ್ತೆಯೊಂದರಲ್ಲಿ ನನ್ನ ಕಾರನ್ನು ತಪ್ಪು ದಿಕ್ಕಿನಿಂದ ಓವರ್ಟೇಕ್ ಮಾಡಿದ ಬೈಕ್ ಸವಾರನೊಬ್ಬನನ್ನು ತೀಕ್ಷ್ಣವಾಗಿ ದುರುಗುಟ್ಟಿ ನೋಡಿ ಅಸಹನೆ ವ್ಯಕ್ತ ಪಡಿಸಿದೆ. ಅದು ಅವನ ಗಂಡಸುತನಕ್ಕೇ ಸವಾಲು ಏನಿಸಿತೋ ಏನೋ, ಅಬ್ಬಬ್ಬಬ್ಬಾ, ಅದ್ಯಾವ ಪರಿ ಸಿಟ್ಟಿನಿಂದ, ರೋಂಯ್ ಅಂತ ತನ್ನ ಗಾಡಿಯನ್ನು ನನ್ನ ಗಾಡಿಗೆ ಅಡ್ಡ ನಿಲ್ಲಿಸಿಯೇ ಬಿಟ್ಟ ಗೊತ್ತಾ?! ಸೀಟಿನಿಂದಿಳಿದವನೆ ಜೋರಾಗಿ ಒಂದೇ ಸಮನೆ ಇದೊಂದೇ ಪದವನ್ನು ನನ್ನೆಡೆಗೆ ಕೈ ತೋರಿಸುತ್ತ ಅರಚಿಕೊಳ್ಳತೊಡಗಿದ. ಆಹಾ, ಈಗ ego ಮೈಮುರಿದು ಎದ್ದು ನಿಂತಿತು. ಅವನು ನಿರೀಕ್ಷಿಸಿದಂತೆ ನಾನು ಜಗಳಕ್ಕಿಳಿಯಲೇ ಇಲ್ಲ. ಮುಖಕ್ಕೊಂದು ನಗು, ಬಾಯಿಗೊಂದು ಮೌನ ಸಿಕ್ಕಿಸಿಕೊಂಡು ಅವನನ್ನೇ ನೋಡುತ್ತಾ ನಿಂತೆ. ಸುಮಾರು ಇಪ್ಪತ್ತೊಂದು ಸರ್ತಿ ಈ ಪದ ಬಳಸಿ ಕಿರುಚಿದ ಅವ. ನೋಟದಲ್ಲೇ ತಿಳಿಯುತ್ತಿತ್ತು ಅವನು ಪಕ್ಕಾ ನಮ್ಮೂರಿನ ಲೋಕಲ್ ಮಾಲು ಅಂತ. ಆ ಪದವನ್ನು ಒಂದು ವಾಕ್ಯದಲ್ಲಿ ಬಳಸುವುದು ಹೇಗೆ ಅಂತ ತಿಳಿಯದಷ್ಟೂ ನಮ್ಮ ಮನೆ ಮಗ ಅಂತ. “ ಆಯ್ತಪ್ಪ, ಅದನ್ನೇ ಎಷ್ಟು ಸರ್ತಿ ಮಾಡ್ತೀಯಾ ? ಮುಂದೆ?” ಎಂದೆ. ಅಯ್ಯೋ ದೇವಾ, ಈ ಪ್ರಶ್ನೆ ಅವನಾಡುತ್ತಿದ್ದ ಆ ಪದಕ್ಕಿಂತ ಕೆಟ್ಟದೆನಿಸಿರಬೇಕು ಅವನಿಗೆ. ಒಂದು ಕ್ಷಣವೂ ಅಲ್ಲಿ ನಿಲ್ಲದೆ, ಹಿಂದಿರುಗಿ ನೋಡದೆ ಗಾಡಿಬಿಟ್ಟ. ಆದರೆ ಈ ಪದದ ಬಗ್ಗೆ ನನ್ನ ತಾಟಸ್ಥ್ಯವನ್ನು ಉಳಿಸಿ ಹೋದ.
ಮೊನ್ನೆ ಮೊನ್ನೆ ಪಾರ್ಕಿನಲ್ಲಿ ನುಣುಪುಗೆನ್ನೆಯ, ಗುಂಡುಗುಂಡಾಗಿದ್ದ ಹುಡುಗನೊಬ್ಬ ಮೊಬೈಲ್ನಲ್ಲಿ ಮಾತನಾಡುತ್ತಾ ಈ ಪದವನ್ನು ಬಾರಿ ಬಾರಿಗೂ ಬಳಸುತ್ತಿದ್ದ. ಅವನ ಮಾತು ಮುಗಿಯುವವರೆಗೂ ತಾಳ್ಮೆಯಿಂದ ಅಲ್ಲಿಯೇ ಕಾದಿದ್ದೆ. ನಂತರ ಇಂಗ್ಲಿಷ್ನಲ್ಲೇ ಕೇಳಿದೆ “Hi handsome, ಏನು ಓದುತಿದ್ದೀಯಾ ?” ಇನ್ನೂ ಒಡೆದಿರದ ಧ್ವನಿಯ ಮಗುಮಗು ಆ ಹುಡುಗನೆಂದ “ ಐದನೇ ಕ್ಲಾಸು”. ನನಗೆ ಬವಳಿ ಬಂದಂತಾಯ್ತು. ಒಣಗಿದ ತುಟಿಗಳನ್ನು ಬೆವರಿದ ಬೆರಳುಗಳಿಂದ ಒರೆಸಿಕೊಳ್ಳುತ್ತಾ “ಆ ಪದದ ಅರ್ಥ ಗೊತ್ತಾ?” ಅಂತ ಕೆಳಿದೆ. ಊಹ್, ಎಷ್ಟೊಂದು ಆತ್ಮವಿಶ್ವಾಸದಿಂದ ಅವನು ಗೊತ್ತು ಎಂದ. ನನ್ನ ಇಡೀ ಅಸ್ತಿತ್ವವವೇ ಆಶ್ಚರ್ಯ ಸೂಚಕ ಚಿಹ್ನೆಯಾಗಿ ನಿಂತಿತ್ತು ಆ ಕ್ಷಣ. ಆಂತರ್ಯದ ಗಲಿಬಿಲಿಯನ್ನು ತೋರಗೊಡದೆ “ ಏನು ಹೇಳು ಎಂದು ಕೇಳಿದೆ. ಅವನು ತನ್ನ ನಡುವಿನ ಬೆರಳನ್ನು ತೋರುತ್ತಾ ‘ಇದು ಎಂದ. Accupressure ವಿಜ್ಞಾನದಲ್ಲಿ ಆ ಬೆರಳಿನ ಬಳಕೆಯಿಂದ ಕೋಪವನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬಹುದು ಎಂದು ತಿಳಿದಿದ್ದ ಈ ಮನಕ್ಕೆ ಅವನ ಉತ್ತರ ಕಪಾಲಮೋಕ್ಷದಂತಿತ್ತು. ಹೇ ಭಗವಂತ, ನಾನು ಎಲ್ಲಿದ್ದೇನೆ? ಹೇಗಿದ್ದೇನೆ? ಯಾಕಿದ್ದೇನೆ? ಎಂದುಕೊಳ್ಳುತ್ತಾ ಅಲ್ಲೇ ಮೆಟ್ಟಲಿನ ಮೇಲೆ ವಕ್ಕರಿಸಿದೆ. ಒಂದಂತೂ ಸ್ಪಷ್ಟವಾಗಿತ್ತು, ಈಗಿನ ಮೆದುಳುಗಳಿಗೆ ಆ ಪದದ ಥಿಯರಿಯೂ ಗೊತ್ತಿಲ್ಲ ಪ್ರಾಕ್ಟಿಕಲ್ ಅಂತೂ ತಿಳಿದೇ ಇಲ್ಲ. ಆದರೂ ಅದೊಂದು ಘನಂದಾರಿ ಪದ ಎನ್ನುವ ಮರುಳು ಮಾತ್ರ ಮೈಮನ ಆವರಿಸಿಕೊಂಡಿದೆ.
ಇದು ಇಂಗ್ಲೀಷ್ ನಾಡಿನ ಪ್ರಭಾವ ಎಂದು ಗೊಣಗಿಕೊಳ್ಳುವವರು ಯಾರಾದರು ಇದ್ದರೆ I beg to differ ! ಒಂದಷ್ಟು ವರ್ಷಗಳು ವಿದೇಶ ಸುತ್ತಿದ ನಂತರ ಈಗ ತಿಳಿದಿದೆ ಟೀವಿ ಸೀರಿಯಲ್ಗಳಲ್ಲಿ ಮತ್ತು ಸಿನೆಮಾಗಳಲ್ಲಿ ಈ ಪದವನ್ನು ಬಳಸುವಷ್ಟು ಅಗ್ಗದಲ್ಲಿ ಅವರುಗಳು ನಿಜ ಜೀವನದಲ್ಲಿ ಇದನ್ನು ಬಳಸುವುದಿಲ್ಲ. ಬೇರೆಯವರು ಬಿಟ್ಟು ಹೋದದನ್ನು ಕೆದಕುವುದರಲ್ಲಿ, ಅಳವಡಿಸಿಕೊಳ್ಳುವುದರಲ್ಲಿ ನಮ್ಮದೇ ಮೇಲುಗೈ. ಎಲ್ಲೋ ಯಾರಿಗೋ ಅವಮಾನಕಾರೀ ಎನ್ನಿಸಬಹುದಾದ ಈ ಪದವನ್ನು ನಮ್ಮನಮ್ಮ ಜೀವಕೋಶಗಳ ಹೊಸಿಲಲ್ಲಿ ಇಟ್ಟು ಕಾಯ ಬಲ್ಲೆವಾದರೆ, ಮತ್ತೆಷ್ಟೆಷ್ಟೋ ಒಳಿತನ್ನೇಕೆ ಸ್ವಂತವಾಗಿಸಿಕೊಳ್ಳುವ ಸಾಮರ್ಥ್ಯವಿಲ್ಲ ನಮಗೆ ?! ತಮ್ಮನ್ನು ಈಗಿನ ಕಾಲದ, ನಿರ್ಭಿಡೆಯ, ದೈರ್ಯಸ್ಥ, ಆಧುನಿಕ, ಸ್ವತಂತ್ರ್ಯ, ಸಮರ್ಥರು ಎಂದು ತೋರಿಸಿಕೊಳ್ಳುವುದಕ್ಕಾಗಿಯೇ ಈ ಪದವನ್ನು ಬಳಸುವ ಹೆಣ್ಣುಗಳೆಡೆಗೆ ನನಗೆ ಕನಿಕರವಿದೆ. ಇದೊಂದು ಅತೀ ಅವಮಾನಕಾರಿ ಪದ ಎಂದುಕೊಳ್ಳುವವರೆಡೆಗೂ ಕಡೆಗಣ್ಣ ನೋಟವಿದೆ. ಏಕೆಂದರೆ ಇದಕ್ಕಿಂತ ಗಾಢವಾದ, ತೀಕ್ಷ್ಣವಾದ ಬೈಗುಳಗಳು ನಮ್ಮ ಭಾಷೆಯಲ್ಲಿಯೇ ಇವೆ. ಯಾರಾದರು ನನ್ನನ್ನು ಈ ಪದ ಬಳಸಿ ನಿಂದಿಸಿದರೆ I don’t get hurt. ಆದರೆ ನಮ್ಮದೇ ಭಾಷೆಯಲ್ಲಿ ಅಕ್ಕ, ಅಜ್ಜಿ, ಅಮ್ಮ, ಅಪ್ಪನನ್ನು ಎಳೆದು ತಂದು ಬೈದು ಬಿಟ್ಟರೆ, ಆ ಮಗ ಈ ಮಗ ಎನ್ನುತ್ತಾ ಹೆಣ್ಣು ಕುಲವನ್ನೇ ಗುರಿಯಾಗಿಸಿ ಮೃಗೀಯತನವನ್ನು ಜಾಲಾಡಿದರೆ ಅದು ಆಳವಾದ insult ಎನ್ನಿಸುತ್ತೆ. ಆದರೇನು ಮಾಡೋದು ಕನ್ನಡದಲ್ಲಿ ಮಾನಕಳೆಯುವ ಪದಗಳು ಇಂಗ್ಲೀಷಿನಲ್ಲಿ ಆಡಿ ಬಿಟ್ಟಾಗ ಉನ್ನತವಾದ ಜೀವನ ಶೈಲಿಯೆನಿಸಿಕೊಳ್ಳುತ್ತದೆ ಎಂದು ತಿಳಿದುಕೊಂಡ ಮರುಳರು ನಾವಲ್ಲವೇ? ಓಹ್, ಬೇಕಾದರೆ ಸಾಮಾಜಿಕ ಜಾಲತಾಣವನ್ನೊಮ್ಮೆ ಸುತ್ತಿ ಬನ್ನಿ ಅನುಭವಿಸಲು. ನಿಜ ಹೇಳಬೇಕೆಂದರೆ, ಈ ಪದ ಮತ್ತು ಸರಾಗವಾಗಿ ಬಳಕೆಯಾಗುವ ಮತ್ತೊಂದು ಪದ ಶಬ್ಧಪಟಲವನ್ನು ಬೇಧಿಸಿದಾಗಲೆಲ್ಲಾ ಅವುಗಳನ್ನು ಬಳಸಿದ ವ್ಯಕ್ತಿಯ ಮೇಲೆ ನಿಕೃಷ್ಟತೆ ಮೂಡುತ್ತದೆ. ಅವರುಗಳು ಭ್ರಮಾ ಜಗತ್ತಿನಲ್ಲಿ ಬದುಕುತ್ತಿರುವುದರ ಬಗ್ಗೆ ಅಯ್ಯೋ ಪಾಪ ಎನ್ನಿಸುತ್ತದೆ ಮತ್ತು ಈ ಪದಗಳು ಸೂಚಿಸುವ ಕ್ರಿಯೆಗಳ ಬಗ್ಗೆ ಮತ್ತಷ್ಟು ಗೌರವ ಬರುತ್ತದೆ. ಓಹೋಹೋ, ಇದನೆಲ್ಲಾ ಓದಿ I know, now you will call me a F***ing B**** ! ಹ್ಹಹ್ಹಾ, ನಿಮಗೆ ತಿಳಿದಿರಲಿ ಇದಕ್ಕಿಂತ ಶಕ್ತಿಯುತ, ಪ್ರಾಯೋಗಿಕವಾದ, ವಾಸ್ತವವಾದ ಬೈಗುಳವೊಂದು ನನಗೆ ತಿಳಿದಿದೆ ಎಂದು. ಅದು ಪಿತ್ರಾರ್ಜಿತ ಆಸ್ತಿಯಂತೆ, ಹಾಗಾಗಿ ಹೊರಗಿನವರೊಡನೆ ಹಂಚಿಕೊಳ್ಳಲಾರೆ. ಆದರೆ ಅದೇ ಪದದಿಂದ ಬೈಯುವುದನ್ನು ನಿಲ್ಲಿಸಲಾರೆ. ಎಷ್ಟೇ ಆದರೂ ನಾನಿನ್ನೂ Localಉ!
 

‍ಲೇಖಕರು G

April 1, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. Radhika

    “ಕನ್ನಡದಲ್ಲಿ ಮಾನಕಳೆಯುವ ಪದಗಳು ಇಂಗ್ಲೀಷಿನಲ್ಲಿ ಆಡಿ ಬಿಟ್ಟಾಗ ಉನ್ನತವಾದ ಜೀವನ ಶೈಲಿಯೆನಿಸಿಕೊಳ್ಳುತ್ತದೆ” ನಿಜ ಅಂಜಲಿ! ಹೊಸ ತಲೆಮಾರಿನವರು ಎಗ್ಗಿಲ್ಲದೆ ಉಪಯೋಗಿಸುವ ಪದ. ಸಮಾಧಾನ ಏನೆಂದರೆ ಹೊಸ ತಲೆಮಾರಿನವರಿಗೆ local ಬೈಗುಳ ಅಷ್ಟಾಗಿ ಗೊತ್ತೇ ಇಲ್ಲದಿರುವುದು. ಬರುವ ದಿನಗಳಲ್ಲಿ (ಬಹುತೇಕ) ಬೈಗುಳ ರಹಿತ ಸಮಾಜ ನಮ್ಮದಾಗಬಹುದೇನೋ ಅಂತ ಒಂದು ಸಣ್ಣ ಆಸೆ 🙂

    ಪ್ರತಿಕ್ರಿಯೆ
  2. Omi

    ಮೆಟ್ನಾಗೆ ಹೊಡೆದಂಗೆ ಬರೆದಿದ್ದೀರ , ಈ ಪದ ಸುಮ್ಮ ಸುಮ್ಮನೆ ಬಳಸೋ ಜನರನ್ನ ಭೇಟಿ ಮಾಡಿದ್ದೇನೆ. ಇಂಗ್ಲೀಶ್ ಸಿನಿಮಾ ದಲ್ಲಿ ಇದನ್ನ ಹ್ಯೂಮರ್ ಅಂತ ಏನು ಕರೀತಿವಿ ಅದಕ್ಕಾಗಿ ಬಳಸಿದ್ದು . ಆದರೆ ನಮ್ಮ ಜನಕ್ಕೆ (ಎಲ್ಲರೂ ಅಲ್ಲ , ಶ್ರೇಷ್ಟತೆಯ ವ್ಯಸನ ತಲೆಗೆ ಹಚ್ಚಿಕೊಂಡವರು ) ಹ್ಯೂಮರ್ ಕಾಣದಂತಾಗಿದೆ . ನಮ್ಮಲ್ಲೇ ಅತ್ತ್ಯುತ್ತಮ ಬಯ್ಗುಳಗಳು ಇರೋವಾಗ ಈ ಪರಕೀಯ ಪದ ಅಷ್ಟಾಗಿ ರುಚಿಸದು (ಅಮೆರಿಕನ್ ಸಿನೆಮಾಗಳಲ್ಲಿ ವಾಕ್ಯಕ್ಕೊಮ್ಮೆ ಅದನ್ನ ಕೇಳೋ ಖುಷಿಯೇ ಬೇರೆ ಮತ್ತು ಅದು ಸಿನೆಮಾಗಷ್ಟೇ ಸೀಮಿತ ) . ಬಯ್ಗುಳಗಳೂ ಭಾಷೆಯ ಒಂದು ಭಾಗ , ಭಾಷೆಯ ಶ್ರೀಮಂತಿಕೆಗೆ ಅದರ ಕೊಡುಗೆಯೂ ಬಹು ದೊಡ್ಡದು, ಪ್ರೀತಿ ಜಗಳ ಎರಡನ್ನೂ ಆದಷ್ಟು ಮಾತೃ ಭಾಷೆಯಲ್ಲೇ ನಡೆಸುವ ಪ್ರಯತ್ನ ಮಾಡೋಣ .

    ಪ್ರತಿಕ್ರಿಯೆ
  3. Vinod Kumar VK

    ಅಕ್ಕಾ… ಸುಸ್ತಾಗೋಯ್ತು.. ಎಂಥಾ ಅದ್ಭುತ ಬರವಣಿಗೆ.. ನಿಜ.. ಆ ಪದ ಉಪಯೋಗಿಸಿ ಬೈಯುವುದೇ ಒಂದು ಫ್ಯಾಷನ್ ಈಗ.. ಇನ್ನು ಕನ್ನಡದಲ್ಲಿ ಬೈದರೆ ಕೆಂಡಾ ಮಂಡಲವಾಗುವ ಜನ ಅದಕ್ಕಿಂತಲೂ ಕೆಟ್ಟದಾಗಿ ಇಂಗ್ಲೀಷಿನಲ್ಲಿ ಬೈಯ್ದರೆ ಸುಮ್ಮನಾಗುವುದಂತೂ ನಿಜ!!! ಎಲ್ಲಾ ಓದಿದ ಮೇಲೆ ಅದಕ್ಕಿಂತಲೂ ಶಕ್ತಿಯುತವಾದ.. ನಿಮಗೆ ಗೊತ್ತಿರುವ ಲೋಕಲ್ ಪದ ಯಾವುದು? ಅಂತ ಯೋಚಿಸ್ತಿದ್ದೇನೆ..

    ಪ್ರತಿಕ್ರಿಯೆ
  4. shanthakumari

    ಅಂಜಲಿ ಎಷ್ಟು ಚೆನ್ನಾಗಿ ರೇಶ್ಮೆ ಶಾಲಿನಲ್ಲಿ ಸುತ್ತಿ ಕೊಟ್ಟಿರಿ. ನನಗೂ ಯಾವಾಗಲೂ ಜಿಗುಪ್ಸೆ ಹುಟ್ಟಿಸುವ ಪದ. ಒಳ್ಳೆಯದಕ್ಕೂ ಕೆಟ್ಟದಕ್ಕೂ ಇದೇ ಪದ ಬಳಸುವ ಈಗಿನ ಹುಡುಗರ ನೋಡಿ ಇತ್ತೀಚೆಗೆ ಅಸಹನೆಯೂ ಹೊರಟುಹೋಗಿತ್ತು!

    ಪ್ರತಿಕ್ರಿಯೆ
  5. Vaanee Suresh.

    Incredible ma’m!!
    I loved these following gems from your pen! :
    – “ಬೇರೆಯವರು ಬಿಟ್ಟು ಹೋದದನ್ನು ಕೆದಕುವುದರಲ್ಲಿ, ಅಳವಡಿಸಿಕೊಳ್ಳುವುದರಲ್ಲಿ ನಮ್ಮದೇ ಮೇಲುಗೈ. ಎಲ್ಲೋ ಯಾರಿಗೋ ಅವಮಾನಕಾರೀ ಎನ್ನಿಸಬಹುದಾದ ಈ ಪದವನ್ನು ನಮ್ಮನಮ್ಮ ಜೀವಕೋಶಗಳ ಹೊಸಿಲಲ್ಲಿ ಇಟ್ಟು ಕಾಯ ಬಲ್ಲೆವಾದರೆ, ಮತ್ತೆಷ್ಟೆಷ್ಟೋ ಒಳಿತನ್ನೇಕೆ ಸ್ವಂತವಾಗಿಸಿಕೊಳ್ಳುವ ಸಾಮರ್ಥ್ಯವಿಲ್ಲ ನಮಗೆ ?!”
    – “ಆದರೇನು ಮಾಡೋದು ಕನ್ನಡದಲ್ಲಿ ಮಾನಕಳೆಯುವ ಪದಗಳು ಇಂಗ್ಲೀಷಿನಲ್ಲಿ ಆಡಿ ಬಿಟ್ಟಾಗ ಉನ್ನತವಾದ ಜೀವನ ಶೈಲಿಯೆನಿಸಿಕೊಳ್ಳುತ್ತದೆ ಎಂದು ತಿಳಿದುಕೊಂಡ ಮರುಳರು ನಾವಲ್ಲವೇ?”
    Superb observation yours and expressing the same with such conviction in such a wonderful way! Thanks for giving the readers such a wonderful article!

    ಪ್ರತಿಕ್ರಿಯೆ
  6. Shama, Nandibetta

    “ಬೇರೆಯವರು ಬಿಟ್ಟು ಹೋದದನ್ನು ಕೆದಕುವುದರಲ್ಲಿ, ಅಳವಡಿಸಿಕೊಳ್ಳುವುದರಲ್ಲಿ ನಮ್ಮದೇ ಮೇಲುಗೈ. ಎಲ್ಲೋ ಯಾರಿಗೋ ಅವಮಾನಕಾರೀ ಎನ್ನಿಸಬಹುದಾದ ಈ ಪದವನ್ನು ನಮ್ಮನಮ್ಮ ಜೀವಕೋಶಗಳ ಹೊಸಿಲಲ್ಲಿ ಇಟ್ಟು ಕಾಯ ಬಲ್ಲೆವಾದರೆ, ಮತ್ತೆಷ್ಟೆಷ್ಟೋ ಒಳಿತನ್ನೇಕೆ ಸ್ವಂತವಾಗಿಸಿಕೊಳ್ಳುವ ಸಾಮರ್ಥ್ಯವಿಲ್ಲ ನಮಗೆ ?!”
    “ತಮ್ಮನ್ನು ಈಗಿನ ಕಾಲದ, ನಿರ್ಭಿಡೆಯ, ದೈರ್ಯಸ್ಥ, ಆಧುನಿಕ, ಸ್ವತಂತ್ರ್ಯ, ಸಮರ್ಥರು ಎಂದು ತೋರಿಸಿಕೊಳ್ಳುವುದಕ್ಕಾಗಿಯೇ ಈ ಪದವನ್ನು ಬಳಸುವ ಹೆಣ್ಣುಗಳೆಡೆಗೆ ನನಗೆ ಕನಿಕರವಿದೆ. ಇದೊಂದು ಅತೀ ಅವಮಾನಕಾರಿ ಪದ ಎಂದುಕೊಳ್ಳುವವರೆಡೆಗೂ ಕಡೆಗಣ್ಣ ನೋಟವಿದೆ.”
    “ಯಾರಾದರು ನನ್ನನ್ನು ಈ ಪದ ಬಳಸಿ ನಿಂದಿಸಿದರೆ I don’t get hurt. ಅವುಗಳನ್ನು ಬಳಸಿದ ವ್ಯಕ್ತಿಯ ಮೇಲೆ ನಿಕೃಷ್ಟತೆ ಮೂಡುತ್ತದೆ.”
    “ಆದರೇನು ಮಾಡೋದು ಕನ್ನಡದಲ್ಲಿ ಮಾನಕಳೆಯುವ ಪದಗಳು ಇಂಗ್ಲೀಷಿನಲ್ಲಿ ಆಡಿ ಬಿಟ್ಟಾಗ ಉನ್ನತವಾದ ಜೀವನ ಶೈಲಿಯೆನಿಸಿಕೊಳ್ಳುತ್ತದೆ ಎಂದು ತಿಳಿದುಕೊಂಡ ಮರುಳರು ನಾವಲ್ಲವೇ?”
    “ನಾನಿನ್ನೂ Localಉ!” ಥೇಟ್ ನಿನ್ನಷ್ಟೇ..
    Incredible ಕಣೇ. ಹೀಗೆ ಬರೆಯೋಕೆ ನಿನ್ನಿಂದ ಮಾತ್ರ ಸಾಧ್ಯ ನೋಡು. ಬರೆದೂ ಬರೆದೂ ನನ್ನ ಅಸಿಡಿಟಿಯನ್ನ ಈ ಮಟ್ಟಕ್ಕೆ ಹೆಚ್ಚಿಸಿದ ನಿಂಗೀಗ ಬೈಯೋಕೆ ಪದ ಹುಡಿಕ್ತಿದ್ದೀನಿ ನಾನು !!!
    Million hugggggssssss

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: