– ಡಾ ಕೆ ಪುಟ್ಟಸ್ವಾಮಿ
ಕನ್ನಡದ ಹೊಸ ಅಲೆಯ ಕಲರವ ಮತ್ತು ಪುಟ್ಟಣ್ಣ ಕಣಗಾಲರ ಅಬ್ಬರದಲ್ಲಿ ಇಬ್ಬರು ಪ್ರತಿಭಾವಂತ ನಿರ್ದೇಶಕರು ಅನೇಕ ವರ್ಷಗಳ ಕಾಲ ಮುಂಚೂಣಿಗೆ ಬರಲಿಲ್ಲ. ಚಿತ್ರಗಳ ಬಗೆಗಿನ ವ್ಯಾಮೋಹದಲ್ಲಿ ಅವರು ಸಹ ಪುಟ್ಟಣ್ಣನವರಿಗೆ ಕಡಿಮೆಯೇನಲ್ಲ. ದಕ್ಕಬೇಕಾದ ಮಾನ್ಯತೆಯಿಂದ ವಂಚಿತರಾದರೂ ಸದ್ದಿಲ್ಲದಂತೆ ತಮ್ಮ ವೃತ್ತಿಯಲ್ಲಿ ನಿಷ್ಠೆಯಿಂದ ದುಡಿದು ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದರು. ಅವರೆಂದರೆ- ಒಬ್ಬರು ಸಿದ್ಧಲಿಂಗಯ್ಯ, ಮತ್ತೊಬ್ಬರು ದೊರೆ-ಭಗವಾನ್ ಜೋಡಿ.

ನಿರ್ದೇಶಕ ಸಿದ್ಧಲಿಂಗಯ್ಯನವರ ಹೆಸರು ಕೇಳುತ್ತಿದ್ದಂತೆ `ಬಂಗಾರದ ಮನುಷ್ಯ’, `ಬೂತಯ್ಯನ ಮಗ ಅಯ್ಯು’, `ಮೇಯರ್ ಮುತ್ತಣ್ಣ’, `ಹೇಮಾವತಿ’ ಚಿತ್ರದಲ್ಲಿನ ಮನಮಿಡಿವ ದೃಶ್ಯಗಳು ಬಿಚ್ಚಿಕೊಳ್ಳುತ್ತವೆ. ಅವರ ಟಂಕಸಾಲೆಯಿಂದ ಹೊರ ಬಂದ ರಾಜೀವ, ಬೂತಯ್ಯ, ಅಯ್ಯು, ಮುತ್ತಣ್ಣ, ಹೇಮಾವತಿಯರ ಪಾತ್ರ ಕಣ್ತುಂಬುತ್ತವೆ. ‘ಹಳ್ಳಿಯಾದರೇನು ಶಿವಾ…’, ‘ನಗು ನಗುತಾ ನಲೀ… ನಲೀ…’, ‘ಬಾಳ ಬಂಗಾರ ನೀನು’, ‘ವಿರಸವೆಂಬ ವಿಷಕೆ ಬಲಿಯಾದೆ ಏತಕೆ?’, ‘ಆಕಾಶವೆ ಬೀಳಲಿ ಮೇಲೆ’ ಮುಂತಾದ ಅರ್ಥಪೂರ್ಣವಾದ, ಭಾವತುಂಬಿದ ಗೀತೆಗಳ ರಾಗ ಮಾಧುರ್ಯಕ್ಕೆ ಮನ ಸೋಲುತ್ತದೆ. ‘ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಪಾಲಿಗೆ…’ ಹಾಡು ನೀಡುವ ಮುದಕ್ಕೆ ಹೃದಯ ಆದ್ರ್ರವಾಗುತ್ತದೆ. ಆದರೆ ಸಿದ್ಧಲಿಂಗಯ್ಯನವರ ಪ್ರತಿಭೆ ಅದಷ್ಟಕ್ಕೆ ಸೀಮಿತವಲ್ಲ.
ಸಿದ್ಧಲಿಂಗಯ್ಯನವರು ಚಿತ್ರನಿರ್ದೇಶನಕ್ಕೆ ಇಳಿಯುವ ಮುನ್ನ ಮುಖ್ಯವಾಹಿನಿಯ ಚಿತ್ರಗಳಲ್ಲಿ ಹಳ್ಳಿಯ ಪರಿಸರ ಅವಾಸ್ತವಿಕವಾಗಿ ಕ್ಯಾರಿಕೇಚರ್ನಂತೆ ಮೂಡುತ್ತಿದ್ದವು. (‘ಕಾಡು’ ಚಿತ್ರಗಳಂಥ ಪ್ರಯೋಗಶೀಲ ಚಿತ್ರಗಳಲ್ಲಿ ಹಳ್ಳಿಗಳ ಪರಿಸರ ನೈಜವಾಗಿ ಮೂಡಿದ್ದು ಬೇರೆ) ಹಳ್ಳಿಯ ವ್ಯಕ್ತಿಗಳ ಅಭಿನಯ, ಸಂಭಾಷಣೆಯಲ್ಲಿ ಕೃತಕತೆಯದೇ ಮೇಲುಗೈ. (ಚಂದವಳ್ಳಿಯ ತೋಟ ಚಿತ್ರದ ಶಿವನಂಜೇಗೌಡನ ಪಾತ್ರವನ್ನೇ ನೋಡಿ) ಮನೆ, ಹೊಲ ವ್ಯಕ್ತಿ ಬಿಟ್ಟರೆ ಗ್ರಾಮೀಣ ಪ್ರದೇಶದ ಉಳಿದ ವಿವರ ದಕ್ಕುವುದು ಕಷ್ಟವಿತ್ತು.
ಆದರೆ ಸಿದ್ಧಲಿಂಗಯ್ಯನವರು ಹಳ್ಳಿಯ ಪರ್ಯಾವರಣವನ್ನು ಅದರ ಎಲ್ಲ ಸೊಬಗಿನೊಡನೆ ಚಿತ್ರರಂಗಕ್ಕೆ ಎಳೆದು ತಂದರು. ಅವರ ನಿರ್ದೇಶನದ ಚಿತ್ರಗಳಲ್ಲಿ ಗ್ರಾಮೀಣ ಬದುಕು ತನ್ನ ಸಹಜ ಸೌಂದರ್ಯದಿಂದ ಅರಳಿತು. ಗ್ರಾಮೀಣ ಪರಿಸರ, ಅಲ್ಲಿನ ಭಾಷೆ, ಸಂಸ್ಕೃತಿ ಮತ್ತು ವ್ಯಕ್ತಿಗಳು ಸಹಜಕ್ಕೆ ಕುಂದಿಲ್ಲದಂತೆ ಒಡಮೂಡಿದವು. ಗ್ರಾಮ ಬದುಕಿನ ಅಂತಃಸತ್ವವನ್ನು ಕಂಡುಂಡು, ದೃಶ್ಯ ಮಾಧ್ಯಮಕ್ಕೆ ಪರಿಣಾಮಕಾರಿಯಾಗಿ ರೂಪಾಂತರಿಸಿದ ವಿರಳ ನಿರ್ದೇಶಕರ ಪೈಕಿ ಸಿದ್ಧಲಿಂಗಯ್ಯನವರು ಅಗ್ರಗಣ್ಯರು.
ಚಲನಚಿತ್ರರಂಗದ ತಮ್ಮ ಇಪ್ಪತ್ತೈದು ವರ್ಷಗಳ ಸುದೀರ್ಘ ಅನುಭವದಲ್ಲಿ (ಸ್ವತಂತ್ರ ನಿರ್ದೇಶಕರಾಗಿ) ಸಿದ್ಧಲಿಂಗಯ್ಯನವರು 20 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವುಗಳಲ್ಲಿ ಕೆಲವು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿವೆ. ಮತ್ತೆ ಕೆಲವು ನಿರ್ದೇಶನದಲ್ಲಿ ಹೊಸ ಜಾಡನ್ನು ನಿರೂಪಿಸಿವೆ. ಕೌಟುಂಬಿಕ, ಹಾಸ್ಯ, ದುರಂತ, ಪತ್ತೇದಾರಿ ಮುಂತಾದ ವಿಭಿನ್ನ ಬಗೆಯ ಚಿತ್ರಗಳನ್ನು ಅವರು ನಿರ್ದೇಶಿಸಿದ್ದರೂ, ಅವರ ಪ್ರತಿಭೆ ಸುವ್ಯಕ್ತವಾಗುವುದು ಗ್ರಾಮೀಣ ಬದುಕಿನ ಕಥಾನಕ ಚಿತ್ರಗಳಲ್ಲಿ. ಇದಕ್ಕೆ ಅವರ ಬಾಲ್ಯದ ಅನುಭವ ಮತ್ತು ಗ್ರಾಮ ಭಾರತದ ಬಗ್ಗೆ ಅವರಿಗಿರುವ ಪ್ರೀತಿ-ಕಾಳಜಿಗಳೂ ಕಾರಣವಿರಬಹುದು.

ಬಡತನದ ಬೇಗೆ ತಾಳಲಾರದೆ, ನಗರಕ್ಕೆ ಓಡಿ ಬಂದು ಸಿನಿಮಾ ಕಾರ್ಮಿಕನಾಗಿ ಜೀವನ ಆರಂಭಿಸಿ ಶ್ರೇಷ್ಠ ನಿರ್ದೇಶಕನ ಮಟ್ಟಕ್ಕೆ ಬೆಳೆದ ಸಿದ್ಧಲಿಂಗಯ್ಯನವರದು ಅಪರೂಪದ ಬದುಕು. ಹೊಟ್ಟೆಪಾಡಿಗಾಗಿ ಮೈಸೂರಿನ ನವಜ್ಯೋತಿ ಸ್ಟುಡಿಯೋಸ್ನಲ್ಲಿ ಕಾರ್ಮಿಕನಾಗಿ ಸೇರಿದ ಅವರು ಸ್ವಯಂಸ್ಫೂರ್ತಿಯಿಂದ ಸಿನಿಮಾರಂಗದ ವಿವಿಧ ಕ್ಷೇತ್ರಗಳನ್ನು ಪರಿಚಯ ಮಾಡಿಕೊಂಡರು. ನಿರ್ದೇಶನದ ಸೂಕ್ಷ್ಮಗಳನ್ನು ಕರಗತ ಮಾಡಿಕೊಂಡರು. ಮದರಾಸಿಗೆ ತೆರಳಿ ಬಿ.ವಿಠಲಾಚಾರ್ಯ ಅವರ ಬಳಿ ಸಹಾಯಕರಾಗಿ ದುಡಿದರು. ಮುಂದೆ ಹಲವಾರು ಖ್ಯಾತ ನಿರ್ದೇಶಕರಿಗೂ ಸಹಾಯಕ ನಿರ್ದೇಶಕರಾಗಿ ದುಡಿದು ತಮ್ಮ ಅನುಭವ ಸೀಮೆಯನ್ನು ವಿಸ್ತರಿಸಿಕೊಂಡರು.
1970ರಲ್ಲಿ ಬಿಡುಗಡೆಯಾದ ನಟ ದ್ವಾರಕೀಶ್ ಅವರ ನಿರ್ಮಾಣದ `ಮೇಯರ್ ಮುತ್ತಣ್ಣ’ ಚಿತ್ರದ ಮೂಲಕ ಸಿದ್ಧಲಿಂಗಯ್ಯನವರು ಸ್ವತಂತ್ರ ನಿರ್ದೇಶಕರಾದರು. ದ್ವಾರಕೀಶ್ ರಿಗೂ ಅದು ಮೊದಲ ನಿರ್ಮಾಣ. ಮೊದಲ ನಿರ್ದೇಶನದಲ್ಲೇ ಸಿದ್ಧಲಿಂಗಯ್ಯನವರು ಮಾಧ್ಯಮದ ಮೇಲೆ ತಮಗಿರುವ ಹಿಡಿತವನ್ನು ಮನದಟ್ಟು ಮಾಡಿಸಿದರು. ಹಳ್ಳಿ ಮತ್ತು ನಗರ ಪರಿಸರಗಳೆರಡರಲ್ಲೂ ಜರುಗುವ ಕಥೆಯ ಈ ಚಿತ್ರ, ಪರಿಸ್ಥಿತಿಯ ಒತ್ತಡದಿಂದ ಪಟ್ಟಣಕ್ಕೆ ಬರುವ ಮುಗ್ಧ ಹಳ್ಳಿಮುಕ್ಕ ಮೇಯರ್ ಪದವಿಗೇರುವ ವಸ್ತುವನ್ನು ಹೊಂದಿತ್ತು. ಬಹುಶಃ ಸಿದ್ಧಲಿಂಗಯ್ಯನವರ ಬದುಕಿನ ಭವಿಷ್ಯದ ಯಶಸ್ಸಿನ ಸ್ಥೂಲ ಪ್ರತಿನಿಧಿಯಂತೆ ಆ ಚಿತ್ರ ರೂಪುಗೊಂಡಿತ್ತು.
`ಮೇಯರ್ ಮುತ್ತಣ್ಣ’ ಚಿತ್ರದ ಯಶಸ್ಸಿನ ನಂತರ ಉದ್ಯಮದವರಿಂದ ಗುರುತಿಸಲ್ಪಟ್ಟ ಸಿದ್ಧಲಿಂಗಯ್ಯನವರಿಗೆ ಅವಕಾಶದ ಬಾಗಿಲುಗಳು ತೆರೆದವು. 1970ನೇ ವರ್ಷದಲ್ಲಿ ಡಾ.ರಾಜ್ಕುಮಾರ್ ಅವರ 125ನೇ ಚಿತ್ರ `ಬಾಳು ಬೆಳಗಿತು’ ಚಿತ್ರವನ್ನು ನಿರ್ದೇಶಿಸಿದರು. ಅದೂ ಸಹ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಸಾಧಿಸಿತು. ಈ ಯಶಸ್ಸು `ನಮ್ಮ ಸಂಸಾರ’ (1971), `ತಾಯಿ ದೇವರು’ (1971) ಮತ್ತು ‘ನ್ಯಾಯವೇ ದೇವರು’ (1971) ಚಿತ್ರಗಳಲ್ಲಿ ಮುಂದುವರಿಯಿತು.
1972ರಲ್ಲಿ ಸಿದ್ಧಲಿಂಗಯ್ಯನವರ ನಿರ್ದೇಶನದ ಆರನೇ ಚಿತ್ರ `ಬಂಗಾರದ ಮನುಷ್ಯ’ ತೆರೆಕಂಡಿತು. ಕನ್ನಡ ಚಿತ್ರರಂಗದಲ್ಲಿ ಅದೊಂದು ಅಪೂರ್ವ ದಾಖಲೆಯನ್ನು ಸೃಷ್ಟಿಸಿತು. ಬೆಂಗಳೂರಿನಲ್ಲಿ ಸತತ ಎರಡು ವರ್ಷ ಪ್ರದರ್ಶನಗೊಂಡ ಈ ಚಿತ್ರ ನಾಡಿನುದ್ದಗಲಕ್ಕೂ ಜನಮನ್ನಣೆಗೆ ಪಾತ್ರವಾಯಿತು.
`ದೂರದ ಬೆಟ್ಟ’ (1973) ಚಿತ್ರ ನಿರ್ದೇಶನದ ನಂತರ ಸಿದ್ಧಲಿಂಗಯ್ಯನವರು ಮತ್ತೊಂದು ಸಾಹಸಕ್ಕೆ ಸಿದ್ಧರಾದರು. ಈ ಬಾರಿ ಅವರು ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಥೆಯನ್ನಾಧರಿಸಿ `ಬೂತಯ್ಯನ ಮಗ ಅಯ್ಯು’ವನ್ನು ತೆರೆಗಿತ್ತರು. ಚಿತ್ರದ ಸಹ ನಿರ್ಮಾಪಕರಲ್ಲೊಬ್ಬರಾದ ಅವರು ಸಿನಿಮಾ ಮಾಧ್ಯಮವನ್ನು ಸಮರ್ಥವಾಗಿ ದುಡಿಸಿಕೊಂಡರು. ಅನಂತರ ಗೊರೂರು ಅವರ ಪ್ರಸಿದ್ಧ ಕಾದಂಬರಿಯಾದ ‘ಹೇಮಾವತಿ’ ಚಿತ್ರವನ್ನು ತೆರೆಗಿತ್ತರು.
ಇದಾದ ನಂತರ ಹಾಸ್ಯ ಮತ್ತು ಫ್ಯಾಂಟಸಿ ಬೆರೆತ ‘ನಾರದ ವಿಜಯ’, ‘ಭೂಲೋಕದಲ್ಲಿ ಯಮರಾಜ’ ಚಿತ್ರ ನಿರ್ದೇಶಿಸಿ ಯಶಸ್ವಿಯಾದರು. ಬದಲಾದ ಸನ್ನಿವೇಶ, ಅಭಿರುಚಿಗೆ ತಕ್ಕಂತೆ ಅವರು ಪರಿವರ್ತನೆಯಾಗಲು ಬಯಸಿದರು. ಅನೇಕ ವೇಳೆ ಮಾಧ್ಯಮದ ಹಿಡಿತ ತಪ್ಪಿ ನೆಲೆ ಕಳೆದುಕೊಂಡಂತೆ ಕಂಡರು. ಆದರೂ, ತಮ್ಮ ಮೂಲ ಧೋರಣೆಯನ್ನು ಬಿಟ್ಟು ಕೊಡದೆ, ನಟರು, ತಂತ್ರಜ್ಞರನ್ನು ನಿಯಂತ್ರಿಸಿ ಅವರ ಪ್ರತಿಭೆಯನ್ನು ಹೊರ ತೆಗೆಯುವ ಅಪರೂಪದ ನಿರ್ದೇಶಕರಾಗಿಯೇ ಉಳಿದರು.

ಈ ಮುನ್ನ ಹೇಳಿದಂತೆ ಗ್ರಾಮೀಣ ಬದುಕಿನ ಚಿತ್ರಣ ಸಿದ್ಧಲಿಂಗಯ್ಯ ಅವರಿಗೆ ಅತ್ಯಂತ ಪ್ರಿಯವಾದದ್ದು. ಆದರೆ ಅವರು ಸೃಷ್ಟಿಸುವ ಪರಿಸರ ಕೇವಲ ನಾಯಕ-ನಾಯಕಿಯರ ಬದುಕಿಗಷ್ಟೇ ಸೀಮಿತವಲ್ಲ. ಒಂದು ಗ್ರಾಮದ ಅವಿಭಾಜ್ಯ ಅಂಗವಾಗಿ ಗ್ರಾಮ ಪರಿಸರದ ಮುಖ್ಯವಾಹಿನಿಯಲ್ಲಿ ಬೆರೆತ ಕಮ್ಮಾರ, ಕುಂಬಾರ, ನಾಯಿಂದ, ಮುಸ್ಲಿಂ ಜನಾಂಗ ಮುಂತಾದ ಎಲ್ಲಾ ಕಸುಬಿನ ಜನಾಂಗದವರ ಮೂಲಕ ಗ್ರಾಮೀಣ ಸಂಸ್ಕೃತಿಯ ಸೊಬಗನ್ನು ಕಟ್ಟುತ್ತಾರೆ. ಅಲ್ಲಿ ಈ ಪಾತ್ರಗಳು ಎಲ್ಲೂ ಕ್ಯಾರಿಕೇಚರ್ ಮಟ್ಟಕ್ಕಿಳಿಯದಿರುವುದು ಅವರ ನಿರ್ದೇಶನದ ವೈಶಿಷ್ಟ್ಯ. `ಮೇಯರ್ ಮುತ್ತಣ್ಣ’, `ಬಂಗಾರದ ಮನುಷ್ಯ’, `ದೂರದ ಬೆಟ್ಟ’, `ಬೂತಯ್ಯನ ಮಗ ಅಯ್ಯು’, `ಹೇಮಾವತಿ’, `ಕೂಡಿ ಬಾಳಿದರೆ ಸ್ವರ್ಗ ಸುಖ’, `ಭೂತಾಯಿ ಮಕ್ಕಳು’ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಅಂಶ ಮನದಟ್ಟಾಗುತ್ತದೆ. ಮೇಯರ್ ಮುತ್ತಣ್ಣ ಚಿತ್ರದ ಆರಂಭದ ಹಳ್ಳಿಯ ದೃಶ್ಯಗಳು ಎಷ್ಟು ಸಹಜವಾಗಿ ಮೂಡಿವೆಯೆಂದರೆ, ಅಲ್ಲಿನ ಓಣಿ, ದೇವಸ್ಥಾನ, ಪಂಚಾಯತಿಕಟ್ಟೆ, ಗಾಡಿ ಜಾಡು ಹಳ್ಳಿಯ ಬೀದಿ ದೃಶ್ಯಗಳು ಯಾವುದೇ ಒಂದು ಹಳ್ಳಿಯ ಸ್ವಾಭಾವಿಕ ಪರಿಸರದ ಭಾಗವಾಗಿ ಕಾಣುತ್ತವೆ.
ಸಿದ್ಧಲಿಂಗಯ್ಯ ಅವರ ಹೆಸರು ಮುಂಚೂಣಿಗೆ ಬಂದದ್ದು ‘ಬಂಗಾರದ ಮನುಷ್ಯ’ ಚಿತ್ರದ ಅಭೂತಪೂರ್ವ ಯಶಸ್ಸಿನಿಂದ. ಗಾಂಧಿಯುಗದ ಆದರ್ಶಗಳನ್ನು ಮೈಗೂಡಿಸಿಕೊಂಡ ಕತೆಯನ್ನೊಳಗೊಂಡು, ಆ ಕಾಲಕ್ಕೆ ಅದ್ದೂರಿಯಾಗಿ ನಿರ್ಮಾಣಗೊಂಡ ಚಿತ್ರವು ಆ ಮಟ್ಟದ ಯಶಸ್ಸನ್ನು ಕಾಣುತ್ತದೆಂಬ ಕಲ್ಪನೆ ಯಾರಲ್ಲೂ ಇರಲಿಲ್ಲ. ಅಕ್ಕನ ಗಂಡನ ಸಾವಿನಿಂದ ಅನಾಥವಾದ ಅವಳ ಮನೆಯ ಪುನರ್ನಿರ್ಮಾಣಕ್ಕೆ ಅರ್ಪಿಸಿಕೊಳ್ಳುವ ವಿದ್ಯಾವಂತ ರಾಜೀವನ ಬದುಕಿನ ವೃತ್ತಾಂತ ಪ್ರೇಕ್ಷಕರನ್ನು ಸೆರೆ ಹಿಡಿದ ಪರಿ ಇಂದಿಗೂ ಒಂದು ವಿಸ್ಮಯ. ಒಂದು ಜನಪ್ರಿಯ ಚಿತ್ರಕ್ಕೆ ಅಗತ್ಯವಾದ ಎಲ್ಲ ಪರಿಕರಗಳನ್ನು ಸಮ ಪ್ರಮಾಣದಲ್ಲಿ ತುಂಬಿದ ಅವರ ಕೌಶಲ್ಯ ಮತ್ತೆ ಎಲ್ಲೂ ಪುನರಾವರ್ತನೆಯಾಗಲಿಲ್ಲ. ಮಲೆನಾಡು ಮತ್ತು ಬಯಲುಸೀಮೆಯ ಹೊರಾಂಗಣ, ಬಣ್ಣದ ಛಾಯಾಗ್ರಹಣ, ಅರ್ಥಗರ್ಭಿತ ಸಾಹಿತ್ಯ, ಮಧುರವಾದ ಗೀತೆಗಳು, ಹದವರಿತ ಅಭಿನಯ, ಅಪೂರ್ವ ಸಂಯೋಜನೆಯ ಸಮೂಹ ನೃತ್ಯ. ಸರಸ, ವಿರಸ, ಹಾಸ್ಯ, ಹಗೆತನ, ಪ್ರೀತಿ, ಔದಾರ್ಯ- ಮಹಾಕಾವ್ಯದ ಮಟ್ಟದಲ್ಲಿ ನಿರ್ವಹಣೆಗೊಂಡ ಮಾನವನ ರಾಗಭಾವ, ದ್ವೇಷಾಸೂಯೆ, ಕುಟುಂಬವನ್ನು ಕಟ್ಟುವ, ಒಡೆಯುವ, ಗ್ರಾಮವನ್ನು ಪುನರ್ ನಿರ್ಮಿಸುವ ಕ್ರಿಯೆ, ತಾಕಲಾಟಗಳು, ಗ್ರಾಮ ಮತ್ತು ಕುಟುಂಬದ ಬದುಕಿನ ಸಮಾನಾಂತರ ಎಳೆಗಳ ಸೂಕ್ಷ್ಮತೆ- ಇವೆಲ್ಲವೂ ‘ಬಂಗಾರದ ಮನುಷ್ಯ’ ಚಿತ್ರವನ್ನು ಅನನ್ಯ ಅನುಭವವಾಗಿಸಿದವು.
ಚಿತ್ರದ ಆರಂಭದಿಂದಲೇ ನಿರ್ದೇಶಕರು ಹೊಸತೊಂದು ಜಾಡು ಹಿಡಿದಿರುವುದು ಸ್ಪಷ್ಟವಾಗುತ್ತದೆ. ಹಿನ್ನೆಲೆಯ ಸಂಗೀತವೇ ಇಲ್ಲದೆ ರೈಲಿನ ಚಲನೆಯ ವಿವಿಧ ಆಯಾಮಗಳನ್ನು ಸೆರೆ ಹಿಡಿದು ಶೀರ್ಷಿಕೆಗಳನ್ನು ತೋರಿಸುತ್ತಾ ಹೋಗುವ ನಿರ್ದೇಶಕರು ಒಂದು ಬಗೆಯ ಸಸ್ಪೆನ್ಸ್ ಸೃಷ್ಟಿಸುತ್ತಾರೆ. ರೈಲಿನ ಒಡಲಿನ ಬೆಂಕಿಗೆ ಸುರಿಯುವ ಕಲ್ಲಿದ್ದಲು, ಭುಸುಗುಡುವ ಆವಿ, ಕಿರ್ರೆನ್ನುವ ಗಾಲಿಗಳು, ಕಿವಿ ತೂತಾಗುವಂತೆ ಕೇಳಿಸುವ ಸೀಟಿಯ ನಂತರ ಹಸಿರ ಗದ್ದೆ ಬಯಲುಗಳಲ್ಲಿ ಮೆಲುದನಿಯಲ್ಲಿ ಮಾತನಾಡುವಂತೆ ಸಾಗುವ ರೈಲು ಕೊನೆಯಲ್ಲಿ ನಿಲ್ದಾಣದಲ್ಲಿ ನಿಂತಾಗ ತೋರಿಸುವುದು ನಾಯಕನ ಕಾಲುಗಳನ್ನು (ಆ ಕಾಲಕ್ಕೆ ನಾಯಕನ ‘ಎಂಟ್ರಿ’ಯನ್ನು ಈ ರೀತಿಯ ಶೈಲಿಯಲ್ಲಿ ತೋರಿಸುವ ಕ್ರೇಜ್ ಇತ್ತು. ಬಂಗಾರದ ಮನುಷ್ಯ ಚಿತ್ರದ ಆ ದೃಶ್ಯಕ್ಕೆ ಅನೇಕ ವಿಮರ್ಶಕರು ಆಕ್ಷೇಪಿಸಿದ್ದರು) ಅದರ ನಂತರ ಮಲೆನಾಡ ಕಣಿವೆ ಹೊಲಗಳಲ್ಲಿ ಆರಂಭವಾಗುವ ‘ನಗು ನಗುತಾ ನಲಿ’ ಹಾಡು. ಅದೊಂದು ಜೀವ ವಿಕಾಸದ ಹಾಡು. ನಿಸರ್ಗದ ಭವ್ಯತೆಯ ನಂತರ ಬಾಲ್ಯಾವಸ್ಥೆ, ಶಿಕ್ಷಣಾವಸ್ಥೆ, ಮದುವೆ, ಮುಪ್ಪಿನ ವಿವಿಧ ಹಂತಗಳನ್ನು ತಟ್ಟುತ್ತಾ ಕೊನೆಯಾಗುವ ಹಾಡು ಬಿಚ್ಚಿಕೊಳ್ಳುವುದು ನಾಯಕನ ಭಾವನ ಸಾವಿನಲ್ಲಿ!
ಹೀಗೆ ಅನಾಥವಾದ ಸಂಸಾರದ ಹೊಣೆ ಹೊತ್ತ ರಾಜೀವ ನೆಲೆಯಾಗುವುದು ಹಳ್ಳಿಯಲ್ಲಿ. ತರ್ಕಕ್ಕೂ ಸಿಗದ ರೀತಿಯಲ್ಲಿ ಬೆಳವಣಿಗೆ ಕಾಣುವ ರಾಜೀವ ಕೊನೆಗೂ ಉದ್ಧರಿಸಿದವರಿಂದಲೇ ದೂರವಾಗುವ ದುರಂತವನ್ನು ತಂದುಕೊಳ್ಳುತ್ತಾನೆ.
ಈ ಮುಖ್ಯ ಕತೆಗೆ ಸಮಾನಾಂತರವಾಗಿ ಹಲವಾರು ಎಳೆಗಳನ್ನು ನೇಯುತ್ತಾ ಹಳ್ಳಿಯ ಸ್ಥಿತ್ಯಂತರಗಳ ಚಿತ್ರಗಳನ್ನು ನಿರ್ದೇಶಕ ಬಿಡಿಸಿಡುತ್ತಾರೆ. ರಾಚೂಟಪ್ಪನೆಂಬ ಹಳ್ಳಿಯ ಔದಾರ್ಯ ಪುರುಷ, ಜಮೀನು ಕಳೆದುಕೊಂಡ ಚನ್ನನ ಪರಿತಾಪ, ರಾಜೀವ-ಲಕ್ಷ್ಮಿಯರ ವಿಶಿಷ್ಟ ಪ್ರೇಮ ಕಥನ. ಲಕ್ಷ್ಮಿಯ ದುರಂತ ಸಾವು. ಇವರೆಲ್ಲರ ಜೊತೆಗೆ ಗ್ರಾಮ ಪುನರ್ನಿರ್ಮಾಣದ ಎಳೆಗಳೂ ಸೇರಿಕೊಂಡು ಸಮಗ್ರ ಸಂಸ್ಕೃತಿಯೊಂದು ಮಾತನಾಡುತ್ತಿರುವ ಅನುಭವವಾಗುತ್ತದೆ. ರಾಜ್, ಬಾಲಕೃಷ್ಣ, ಭಾರತಿ, ಲೋಕನಾಥ್, ದ್ವಾರಕೀಶ್, ಆರತಿ, ಆದವಾನಿ ಲಕ್ಷ್ಮಿದೇವಿ, ವಜ್ರಮುನಿ ಅವರ ಪಾತ್ರೋಚಿತ ಅಭಿನಯಕ್ಕೂ ಈ ಚಿತ್ರದ ಯಶಸ್ಸಿನಲ್ಲಿ ಪಾಲಿದೆ. ಡಾ.ರಾಜ್ ಅವರ ವೃತ್ತಿ ಬದುಕಿನ ಒಂದು ಹೊರಳು ಈ ಚಿತ್ರದಿಂದಲೇ ಆರಂಭವಾಯಿತೆನ್ನಬಹುದು. ಪ್ರೇಕ್ಷಕರ ಕಣ್ಣಿನಲ್ಲಿ ರಾಜ್ರವರ ಪಾತ್ರಗಳು ಆದರ್ಶದ, ತ್ಯಾಗದ, ಪ್ರೀತಿಯ ಅತಿಮಾನವ ಬಿಂಬಗಳಾಗಿ ಬೆಳೆಯಲು ಈ ಚಿತ್ರ ನಾಂದಿ ಹಾಡಿತು. ಟಿ.ಕೆ. ರಾಮರಾಯರ ಸಾಧಾರಣ ಕಾದಂಬರಿಯೊಂದನ್ನು ಆಧರಿಸಿದ ಚಿತ್ರಕತೆಗೆ ಸಿದ್ಧಲಿಂಗಯ್ಯನವರು ಅನೇಕ ಮಾರ್ಪಾಡುಗಳನ್ನು ತಂದರು. ಮುಖ್ಯವಾಗಿ ಕತೆಯಲ್ಲಿ ರಾಜೀವನ ಪ್ರೇಯಸಿಯಾಗಿದ್ದ ಆರತಿಯ ಪಾತ್ರವನ್ನು ಭಾವನ ಎರಡನೆಯ ಹೆಂಡತಿಯನ್ನಾಗಿ ರೂಪಿಸಿದ್ದು, ಒಂದು ನಾಯಕನ ಇಮೇಜಿಗೆ ಧಕ್ಕೆ ಬರಬಾರದೆಂಬ ಕಾರಣದಿಂದ ಆ ಮಾರ್ಪಾಡು. ಹಾಗೆಯೇ ಗ್ರಾಮ ಪುನರ್ನಿರ್ಮಾಣ ಸಹ ಅವರ ಕಲ್ಪನೆಯ ಕೂಸು.
ಸಿದ್ಧಲಿಂಗಯ್ಯನವರು ತಮ್ಮ ವೃತ್ತಿ ಬದುಕಿನ ಪರಾಕಾಷ್ಠತೆ ಕಂಡದ್ದು ‘ಬೂತಯ್ಯನ ಮಗ ಅಯ್ಯು’ (1974) ಚಿತ್ರದಲ್ಲಿ. ಗೊರೂರು ರಾಮಸ್ವಾಮಿ ಅಯ್ಯಂಗಾರರ ಸಣ್ಣ ಕತೆಯನ್ನು ಆಧರಿಸಿದ ಈ ಚಿತ್ರದಲ್ಲಿ ಜಿಪುಣ ‘ಬೂತಯ್ಯ’ನ ಎದುರು ಕತೆಯಲ್ಲಿ ಇಲ್ಲದ ಉದಾರ ಮನಸ್ಸಿನ ‘ದೇವಯ್ಯ’ನನ್ನು ತಂದು ನಿಲ್ಲಿಸಿದ್ದಾರೆ. ಜಿಪುಣಾಗ್ರೇಸರ ಬೂತಯ್ಯನ ಮಗ ಅಯ್ಯು (ಲೋಕೇಶ್) ಮತ್ತು ಸದ್ಗುಣಗಳ ಖನಿ ದೇವಯ್ಯನ ಮಗ ಗುಳ್ಳ (ವಿಷ್ಣುವರ್ಧನ್)- ಇವರ ನಡುವಿನ ಸಂಘರ್ಷ ಇಡೀ ಚಿತ್ರವನ್ನು ಆವರಿಸಿಕೊಳ್ಳುತ್ತದೆ.
ದ್ವೇಷದ ಸಂಘರ್ಷದಲ್ಲಿ ಮೂರಾಬಟ್ಟೆಯಾಗುವ ಹಳ್ಳಿ ಬದುಕನ್ನು ತಹಬಂದಿಗೆ ತರಲು ಹೋರಾಡುವ ಹೆಣ್ಣುಗಳ ಕ್ಷೀಣ ಧ್ವನಿಯನ್ನು ಈ ಚಿತ್ರ ಹೇಳುವ ಪರಿಯೇ ಕುತೂಹಲಕಾರಿಯಾಗಿದೆ. ಅಯ್ಯುವಿನ ದ್ವೇಷವನ್ನು ಕರಗಿಸಲು ಆತನ ಹೆಂಡತಿ ಮಾಡುವ ಪ್ರಯತ್ನ ಒಂದೆಡೆಯಾದರೆ, ಗುಳ್ಳನ ರೋಷವನ್ನು ಕುಗ್ಗಿಸಲು ಆತ್ಮಹತ್ಯೆಯ ದಾರಿ ಹಿಡಿಯುವ ಮಾದೇವಿ ಮತ್ತೊಂದೆಡೆ. ಮಾದೇವಿಯನ್ನು ಬದುಕಿಸಿದ ಅಯ್ಯುವಿನಲ್ಲಾಗುವ ಜೀವಪರ ಬದಲಾವಣೆ ಮಾರಿಹಬ್ಬದ ದಿನ ಮನೆಗೆ ಊರಿನ ಜನ ಬೆಂಕಿ ಹಾಕುವಾಗಲೂ ದೃಢವಾಗುತ್ತದೆ. ಅಲ್ಲಿಂದ ಆರಂಭವಾಗುವ ಪರಿವರ್ತನೆಯ ನದಿ, ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದ ಅಯ್ಯುವಿನ ಸಂಸಾರವನ್ನು ರಕ್ಷಿಸುವಲ್ಲಿಗೆ ಹರಿಯುತ್ತದೆ. ಊರಿನ ದ್ವೇಷದ ಕತೆ ಒಂದು ಸುತ್ತು ಹಾಕುತ್ತದೆ.
‘…… ಅಯ್ಯು’ ಅನೇಕ ದೃಷ್ಟಿಯಿಂದ ಗ್ರಾಮ ಭಾರತದ ಆದರ್ಶ, ಕನಸು ಮತ್ತು ಪರಿವರ್ತನೆಯ ಹಾದಿಗಳನ್ನು ಕುರಿತ ಚಿತ್ರ. ‘ಬಂಗಾರದ ಮನುಷ್ಯ’ ಚಿತ್ರವನ್ನು ಅತಿಯಾದ ಆದರ್ಶದ ತಳಪಾಯದ ಮೇಲೆ ಕಟ್ಟಿದ್ದರೆೆ ಗ್ರಾಮಸಂಸ್ಕೃತಿಯ ತಳಪಾಯದಲ್ಲಿ ‘…… ಅಯ್ಯು’ ಚಿತ್ರದ ಸೌಧ ನಿಮರ್ಿಸಿದ್ದಾರೆ. ಪುಟ್ಟಣ್ಣನವರು ಮಧ್ಯಮವರ್ಗದ ವ್ಯಕ್ತಿಗಳು, ಮುಖ್ಯವಾಗಿ ಹೆಣ್ಣುಗಳ ತುಡಿತಗಳು, ಸಂವೇದನೆಗಳನ್ನು ತಮ್ಮ ನಿರೂಪಣಾ ತಂತ್ರದಲ್ಲಿ ಹಿಡಿದಿಟ್ಟರೆ ಸಿದ್ಧಲಿಂಗಯ್ಯನವರು ಹಳ್ಳಿಯ ಸಂಸ್ಕೃತಿಯ ಬೃಹತ್ ಕ್ಯಾನ್ವಾಸನ್ನು ಹಿಡಿದರು.
ಸಿದ್ಧಲಿಂಗಯ್ಯನವರ ಚಿತ್ರಗಳ ಮತ್ತೊಂದು ವೈಶಿಷ್ಟ್ಯವೆಂದರೆ ಅರ್ಥಗರ್ಭಿತವಾದ ಮತ್ತು ಸನ್ನಿವೇಶಕ್ಕೆ ಪೂರಕವಾಗಿ ಬೆರೆಯುವ ಗೀತೆಗಳ ಬಳಕೆ. ‘ಹಳ್ಳಿಯಾದರೇನು ಶಿವಾ…’ (ಮೇಯರ್ ಮುತ್ತಣ್ಣ), ‘ಆಗದು ಎಂದು…’ (ಬಂಗಾರದ ಮನುಷ್ಯ), ‘ನಮ್ಮ ಸಂಸಾರ ಆನಂದ ಸಾಗರ’ (ನಮ್ಮ ಸಂಸಾರ), ‘ಆಕಾಶವೆ ಬೀಳಲಿ ಮೇಲೆ…’ (ನ್ಯಾಯವೇ ದೇವರು), ‘ಪ್ರೀತಿನೇ ಆ ದ್ಯಾವ್ರು ತಂದ’ (ದೂರದ ಬೆಟ್ಟ), ‘ಎಂಥಾ ಲೋಕವಯ್ಯಾ…’ (ನಾರದ ವಿಜಯ) ಮುಂತಾದ ಗೀತೆಗಳು ಚಿತ್ರದ ಕತೆಯ ವೇಗಕ್ಕೆ ಮತ್ತು ಸನ್ನಿವೇಶದ ಭಾವ ತೀವ್ರತೆಗೆ ತಕ್ಕಂತೆ ಬಳಕೆಯಾಗಿವೆ. ಮನುಷ್ಯನ ಬದುಕಿನ ಆರಂಭದಿಂದ ಅಂತ್ಯದವರೆಗಿನ ಏಳು ಬೀಳುಗಳನ್ನು ಹೇಳುತ್ತಲೇ ‘ನಗು ನಗುತಾ ನಲಿ’ ಎಂದು ಸಾರುವ ಗೀತೆಯನ್ನು ‘ಬಂಗಾರದ ಮನುಷ್ಯ’ ಚಿತ್ರದ ಆರಂಭದಲ್ಲೇ ಬಳಸಿರುವ ರೀತಿ ಚಲನಚಿತ್ರರಂಗದಲ್ಲೇ ಅಪರೂಪ. ಪತ್ನಿಯನ್ನು ಕಳೆದುಕೊಂಡು ತನ್ನವರಿಂದಲೇ ದೂರೀಕರಿಸಲ್ಪಡುವ ರಾಜೀವ ಅಂತ್ಯದಲ್ಲಿ ನಗದೆ, ನಲಿಯದೆ ಕ್ಷಿತಿಜದತ್ತ ನಡೆವ ದೃಶ್ಯಕ್ಕೆ ಹಿಮ್ಮೇಳದಲ್ಲಿ ಸ್ವರ ಸಂಯೋಜನೆಯಾಗಿ ಬರುವ ಈ ಗೀತೆಯ ಭಾವ ರಾಜೀವನ ಬದುಕಿನಲ್ಲಿ ಎದುರಾದ ವ್ಯಂಗ್ಯ ಮತ್ತು ವಿಷಾದಗಳನ್ನು ಅಭಿವ್ಯಕ್ತಿಗೊಳಿಸುತ್ತದೆ.
ಸಿನಿಮಾ ಎಂದರೆ ಕೇವಲ ಸಂಭಾಷಣೆಯ ಮೂಲಕ ಕಥೆ ಕಟ್ಟುವುದಲ್ಲ. ಅದಕ್ಕೂ ಒಂದು ಭಾಷೆಯಿದೆ. ಆ ಭಾಷೆಗೆ ನಟರು-ತಂತ್ರಜ್ಞರೆಲ್ಲಾ ಅಪೂರ್ವ ರೀತಿಯಲ್ಲಿ ದುಡಿಯಬೇಕಾಗಿದೆ. ಹಾಗಾದಾಗ ಅದೊಂದು ಕಲಾತ್ಮಕ ಅನುಭವವಾಗುತ್ತದೆ. ಅಂಥ ಅನನ್ಯ ಕಲಾತ್ಮಕ ದೃಶ್ಯಗಳನ್ನು ಸಿದ್ಧಲಿಂಗಯ್ಯನವರು ತಮ್ಮ ಅನೇಕ ಚಿತ್ರಗಳಲ್ಲಿ ಕಡೆದಿದ್ದಾರೆ. ಆದರೆ ಇದಾವೂ ಸಿನಿಮಾ ವಿಮರ್ಶಕರ ಕಣ್ಣಿಗೆ ಬಿದ್ದದ್ದು ಅಪರೂಪ. ಉದಾಹರಣೆಗೆ ‘ನ್ಯಾಯವೇ ದೇವರು’ ಚಿತ್ರದ ದೃಶ್ಯದ ಕೊನೆಯ ದೃಶ್ಯಗಳು. ನಿವೃತ್ತ ನ್ಯಾಯಾಧೀಶ ತನ್ನ ಮಗ ಪ್ರೇಮಿಸಿದ ಹೆಣ್ಣು ಬೇರೆಯಾಗಲು ಕಾರಣನಾಗುತ್ತಾನೆ. ಮಗುವಿನ ತಾಯಿಯಾದ ಅವಳು ತಾನು ಮಾಡದ ಕೊಲೆಯೊಂದರಲ್ಲಿ ಅಪರಾಧಿಯಾಗಿದ್ದಾಳೆ. ಆದರೆ ಕೊಲೆ ಮಾಡಿದವನು ನಿವೃತ್ತ ನ್ಯಾಯಾಧೀಶನೇ! ವಿಚಾರಣೆಯ ಕಾಲದಲ್ಲಿ ಆ ಕೊಲೆಗಾರ (ಎರಡು ವಿಧದಲ್ಲಿ) ತಾನೇ ಎಂಬ ಪಾಪಪ್ರಜ್ಞೆ ಜಾಗೃತವಾಗುತ್ತದೆ. ಅವಳ ಬಿಡುಗಡೆ ಅವನ ಸಾಕ್ಷಿಯನ್ನವಲಂಬಿಸಿದೆ. ತನ್ನ ಕೊಠಡಿಗೆ ಬಂದು ಬಾಗಿಲು ಹಾಕಿ, ಕನ್ನಡಿಯ ಮುಂದೆ ಪ್ರತಿಬಿಂಬವನ್ನು ನೋಡಿಕೊಳ್ಳುತ್ತಾನೆ. ಎತ್ತರದಿಂದ ಕ್ಯಾಮೆರಾ ನಿಧಾನಕ್ಕೆ ಕೆಳಗಿಳಿಯುತ್ತಾ ಕನ್ನಡಿಯಲ್ಲಿ ಪ್ರತಿಬಿಂಬವಾಗುವ ನ್ಯಾಯದೇವತೆಯ ತಕ್ಕಡಿ ನ್ಯಾಯಾಧೀಶನ ತಲೆಯನ್ನು ಮೀರಿ ಮೇಲೇರಿದಂತೆ ಭಾಸವಾಗುತ್ತದೆ. ತಲೆ ಚಿಟ್ಟು ಹಿಡಿಸುವ ಸಂಭಾಷಣೆ ಇಲ್ಲದೆ, ನೆರಳು ಬೆಳಕಿನ ಅಪೂರ್ವ ಸಂಯೋಜನೆಯಿಂದ, ಅತಿರೇಕವಿಲ್ಲದ ನಟನ (ಕೆ.ಎಸ್.ಅಶ್ವಥ್) ಭಾವಾಭಿನಯದಿಂದ, ಕ್ಯಾಮೆರಾ ಚಲನೆಯಿಂದ ವ್ಯಕ್ತಿಯ ಮಾನಸಿಕ ಒಳತೋಟಿಯ ಸೂಕ್ಷ್ಮಗಳು ಪ್ರತಿಫಲಿತವಾಗುತ್ತದೆ. ಸಿನಿಮಾ ಭಾಷೆಯ ಬಳಕೆ ಎಂದರೆ ಇದು. ಕನ್ನಡ ಚಿತ್ರರಂಗವೇ ಏಕೆ ಯಾವುದೇ ಭಾಷೆಯ ಚಿತ್ರಗಳ ಅತ್ಯುನ್ನತ ಮಟ್ಟದ ದೃಶ್ಯ ಸಂಯೋಜನೆಗೆ ಈ ಸನ್ನಿವೇಶ ಸಾಟಿಯಾಗುತ್ತದೆ. ಪತ್ರಿಕೆ-ಪ್ರೇಕ್ಷಕರ ಗಮನಕ್ಕೆ ಬಾರದ ಇಂಥ ಹಲವಾರು ದೃಶ್ಯ ಸಂಯೋಜನೆಗಳು ಸಿದ್ಧಲಿಂಗಯ್ಯನವರ ಕುಲುಮೆಯಲ್ಲಿ ಮೂಡಿ ಬಂದಿವೆ. ಹಾಗೆಯೇ ನ್ಯಾಯಾಧೀಶ ತಪ್ಪೊಪ್ಪಿಕೊಂಡ ನಂತರ ಹೃದಯಾಘಾತದಿಂದ ಕುಸಿಯುವಲ್ಲಿ ಅಳವಡಿಸಿರುವ ‘ಫ್ರೀಜ್’ ಶಾಟ್ಗಳು ಸಹ ಸಿನಿಮಾವೊಂದರ ಸಾಮಾನ್ಯ ಅಂತ್ಯದ ಮಾದರಿಯನ್ನು ಮೀರಿದೆ.
ಸಿದ್ಧಲಿಂಗಯ್ಯನವರ ಚಿತ್ರಗಳ ಮತ್ತೊಂದು ವೈಶಿಷ್ಟ್ಯವೆಂದರೆ ‘ಸಹಜೀವನ’ ಬದುಕಿನ ಸಂದೇಶ. ಮಾನವ ಕುಲ ಒಟ್ಟಾಗಿ ಬಾಳುವುದರಲ್ಲಿ ಸಮರಸವಿದೆ ಎಂಬುದನ್ನು ಅವರ ಅನೇಕ ಚಿತ್ರಗಳಲ್ಲಿ ಮೂಡಿಸಿದ್ದಾರೆ. `ಬಂಗಾರದ ಮನುಷ್ಯ’, `ಬೂತಯ್ಯನ ಮಗ ಅಯ್ಯು’, `ಕೂಡಿ ಬಾಳಿದರೆ ಸ್ವರ್ಗ ಸುಖ’, `ಭೂತಾಯಿ ಮಕ್ಕಳು’ ಮುಂತಾದ ಚಿತ್ರಗಳಲ್ಲಿ ಸಹಜೀವನದ ಮೌಲ್ಯವನ್ನು ಪ್ರತಿಪಾದಿಯನ್ನು ಕಾಣಬಹುದು. ದ್ವೇಷ, ಅಶಾಂತಿ, ಅಮಾನವೀಯ ನಡವಳಿಕೆಯ ಅಂತ್ಯಕ್ಕೆ ಒಟ್ಟಾಗಿ ದುಡಿದು ಬದುಕುವ ಅನಿವಾರ್ಯವನ್ನು ಅವರು ಪ್ರತಿಪಾದಿಸುತ್ತಾರೆ. `ಬಂಗಾರದ ಮನುಷ್ಯ’ ಚಿತ್ರದಲ್ಲಿ ಕುದುರೆ ಎತ್ತುಗಳಿಗೆ ಲಾಳ ಕಟ್ಟುವ, ಗಾಡಿ ರಿಪೇರಿ ಮಾಡುವ ಮುಸಲ್ಮಾನ ಮತ್ತು ಕ್ಷೌರಿಕ ವೆಂಕಟಸ್ವಾಮಿಯ ಸೇದುವ ಬೀಡಿಗೆ ತನ್ನ ಬೀಡಿ ಹಚ್ಚಿ ದಂ ಎಳೆಯುವ ಮುಸಲ್ಮಾನ. ಅಂಥ ದೃಶ್ಯ ಮತ್ತೆಲ್ಲಿ ಕಾಣಲು ಸಾಧ್ಯ? ಪ್ರಸ್ತುತ ಸಂದರ್ಭದಲ್ಲಂತೂ ಇದು ಹೆಚ್ಚು ಸಕಾಲಿಕ.
ಸಿದ್ಧಲಿಂಗಯ್ಯರವರಿಗೆ ಸಿಗಬೇಕಾದ ಮತ್ತೊಂದು ಮನ್ನಣೆಯೆಂದರೆ ಡಾ.ರಾಜ್ ಮತ್ತು ಭಾರತಿ ಅವರ ಜೋಡಿಯನ್ನು ಜನಪ್ರಿಯಗೊಳಿಸಿದ್ದು. `ನ್ಯಾಯವೇ ದೇವರು’ (ಬಿ.ಸರೋಜಾದೇವಿ) ಚಿತ್ರವನ್ನು ಹೊರತುಪಡಿಸಿದರೆ, ರಾಜ್ ನಾಯಕರಾಗಿದ್ದ ಸಿದ್ಧಲಿಂಗಯ್ಯನವರ ಎಲ್ಲ ಚಿತ್ರಗಳಲ್ಲಿ ಭಾರತಿಯವರೇ ನಾಯಕಿ. `ಮೇಯರ್ ಮುತ್ತಣ್ಣ’ ಬಿಡುಗಡೆಯಾಗುವ ವೇಳೆಗೆ ರಾಜ್-ಭಾರತಿ ಜೋಡಿ ಜನಪ್ರಿಯತೆಯನ್ನು ಕಂಡಿತ್ತು. ಮುಖ್ಯವಾಗಿ ಪಂತುಲು ಅವರ ಚಿತ್ರಗಳಲ್ಲಿ (ಎಮ್ಮೆ ತಮ್ಮಣ್ಣ, ಬೀದಿ ಬಸವಣ್ಣ, ಅಮ್ಮ, ಗಂಡೊಂದು ಹೆಣ್ಣಾರು, ಶ್ರೀಕೃಷ್ಣದೇವರಾಯ) ಈ ಜೋಡಿಯ ಅಭಿನಯಕ್ಕೆ ಕನ್ನಡಿಗರು ಮಾರು ಹೋಗಿದ್ದರು. ಆದರೆ ಸಿದ್ಧಲಿಂಗಯ್ಯನವರು ಈ ಜೋಡಿಯ ಪ್ರಣಯ ದೃಶ್ಯಗಳನ್ನು ಹೆಣೆಯುತ್ತಿದ್ದ ಒಂದು ಸುಂದರ ಕಾಲದಲ್ಲಿಯೇ ಜೆಮಿನಿ ಗಣೇಶನ್ (ಸ್ನೇಹಿತಿ), ಶಿವಕುಮಾರ್, ಹಿಂದಿಯ ರಾಕೇಶ್ ರೋಷನ್ (ಸೀಮಾ); ತೆಲುಗಿನ ಕೃಷ್ಣ (ಅಖಂಡಡು) ಮುಂತಾದವರ ಜೊತೆ ನಟಿಸಿದ ಚಿತ್ರಗಳನ್ನು ನೋಡಿದರೆ ಕನ್ನಡಿಗರಾದ ನಮ್ಮಲ್ಲಿ ಹೇಳಲಾರದ ಸಂಕಟವಾಗುತ್ತಿತ್ತು. ರಾಜ್ರವರನ್ನು ತೊರೆದು ಅನ್ಯ ಭಾಷೆಯ ನಾಯಕ ನಟರೊಡನೆ ಭಾರತಿಯವರು ನಟಿಸುವುದನ್ನು ಸಹಿಸಿಕೊಳ್ಳಲಾರದಷ್ಟು ರಾಜ್-ಭಾರತಿ ಜೋಡಿಯ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕರು ಆರಾಧಿಸುತ್ತಿದ್ದರು. `ಮೇಯರ್ ಮುತ್ತಣ್ಣ’ ಚಿತ್ರದಲ್ಲಿ ನಗರದ ಹೆಣ್ಣಾಗಿ ರಾಜ್ರವರ ಜೊತೆ ಅವರು ಹಾಡುವ ‘ಒಂದೇ ನಾಡು, ಒಂದೇ ಕುಲವು, ಒಂದೇ ದೈವವು’ ಸಮೂಹ ಗೀತೆಯಾಗಲೀ, ‘ಹಾವಿಗೆ ಮುಂಗುಸಿಯುಂಟು, ಆನೆಗೆ ಸಿಂಹ ಉಂಟು’ ಎಂದು ಮತ್ತಿನಿಂದ ಹೆಜ್ಜೆ ಹಾಕುವ ದೃಶ್ಯಗಳು ಸಿನಿಮಾದ ವಿಶೇಷ ಆಕರ್ಷಣೆಯಾಗಿದ್ದವು. ರಾಜ್ರವರನ್ನು ಛೇಡಿಸುವ ದೃಶ್ಯ ‘ಅಯ್ಯಯ್ಯಯ್ಯೋ ಹಳ್ಳಿ ಮುಕ್ಕ’ ಹಾಡಂತೂ ಜನಪದ ಗೀತೆಯ ಸ್ಥಾನವನ್ನು ಪಡೆದುಕೊಂಡಿತ್ತು. ಅಷ್ಟೇ ಏಕೆ `ಬಂಗಾರದ ಮನುಷ್ಯ’ ಚಿತ್ರದಲ್ಲಿ ಬಲವಂತದಿಂದ ಸರಳವಾಗಿ ಮದುವೆಯಾದ ನಂತರ ರಾಜೀವ-ಲಕ್ಷ್ಮಿ ತೋಟದಲ್ಲಿ ಮಾತನಾಡುತ್ತಾ ನಡೆದು ಬರುವ ದೃಶ್ಯ ನೆನಪಿಸಿಕೊಳ್ಳಿ. ಆ ಜೋಡಿಯ ಲವಲವಿಕೆ, ಆತಂಕ, ಯಾರಾದರೂ ನೋಡಿಯಾರೆಂಬ ಸಂಕೋಚಗಳನ್ನೆಲ್ಲ ಮಡಿಲಲ್ಲಿ ಕಟ್ಟಿಕೊಂಡು ಹೆಜ್ಜೆ ಹಾಕುವ ಆ ದೃಶ್ಯ ಹೊಸದಾಗಿ ಮದುವೆಯಾದ ಗ್ರಾಮೀಣ ದಂಪತಿಗಳ ಮನೋಲೋಕವನ್ನೇ ಅನಾವರಣ ಮಾಡುವಷ್ಟು ಶಕ್ತವಾಗಿದೆ. `ಬಂಗಾರದ ಮನುಷ್ಯ’ ಯಶಸ್ಸಿಗೆ ಇಂಥ ಪೂರಕ ಸನ್ನಿವೇಶಗಳ ಕಾಣಿಕೆ ದೊಡ್ಡದು.
ಸಿದ್ಧಲಿಂಗಯ್ಯನವರು ರಾಜ್-ಭಾರತಿ ಜೋಡಿಯನ್ನು ಒಂದು ಸುಂದರ ಮತ್ತು ಮಾದರಿ ದಂಪತಿ ಜೋಡಿಯನ್ನಾಗಿಸಲು ರೂಪಿಸಿರುವ ದೃಶ್ಯಗಳು ಸಹ ಅಧ್ಯಯನ ಯೋಗ್ಯ. ಬಾಳು ಬೆಳಗಿತು ಚಿತ್ರದಲ್ಲಿ ಹುಟ್ಟುವ ಮಗುವಿನ ಬಗ್ಗೆ ಕನಸು ಕಟ್ಟುತ್ತಾ ಹಾಡುವ ‘ಚೆಲುವಾದ ಮುದ್ದಾದ ನಿನ್ನಂತೆ ಇರುವ ಹೆಣ್ಣಾಗಲೀ’ ಹಾಡು, ದೂರದ ಬೆಟ್ಟದ ಬಡ ದಂಪತಿಗಳು ಶಿವ-ಗೌರ ಪರಸ್ಪರ ಸಾಂತ್ವನ ಹೇಳಿಕೊಳ್ಳುವ ‘ಪ್ರೀತಿನೆ ಆ ದ್ಯಾವ್ರು ತಂದ… ದಿನವು ನಿತ್ಯ ಉಗಾದಿನೇ ನನ್ನ ನಿನ್ನ ಪಾಲಿಗೆ’ ಗೀತೆ ಮತ್ತು ‘ಬಂಗಾರದ ಮನುಷ್ಯ’ ಚಿತ್ರದಲ್ಲಿ ಭಾರತಿಯವರು ಹಾಡುವ ‘ಬಾಳ ಬಂಗಾರ ನೀನು’ ಮತ್ತು ಯುಗಳ ಗೀತೆ ‘ಆಹಾ ಮೈಸೂರು ಮಲ್ಲಿಗೆ’ ಹಾಡಿನ ದೃಶ್ಯಗಳು ಗಂಡು-ಹೆಣ್ಣಿನ ನಡುವಿನ ಪ್ರಣಯಾರಾಧನೆಯನ್ನು ಒಂದು ಸುಂದರ ಕಾವ್ಯವೆನ್ನುವ ಮಟ್ಟಕ್ಕೆ ಎತ್ತರಿಸಿವೆ. ‘ಬಾಳು ಬೆಳಗಿತು’ ಚಿತ್ರದ ಮತ್ತೊಬ್ಬ ನಾಯಕಿ ಜಯಂತಿ ಅವರ ಜೊತೆಗಿನ ಯುಗಳ ಗೀತೆ ‘ಕಮಲದ ಹೂವಿಂದ’ದ ಮಾದಕತೆಯಾಗಲೀ, ‘ನ್ಯಾಯವೇ ದೇವರು’ ಚಿತ್ರದ ಸಾರ್ವಕಾಲಿಕ ಜನಪ್ರಿಯ ಗೀತೆ ‘ಆಕಾಶವೆ ಬೀಳಲಿ ಮೇಲೆ’ ಹಾಡಿನಲ್ಲಿ ಕಾಣುವ ಪ್ರೇಮದ ವಿಚಿತ್ರ ಆಕರ್ಷಣೆ ಮತ್ತು ನಿರೀಕ್ಷೆಯಾಗಲೀ ಮತ್ತೊಬ್ಬ ನಿರ್ದೇಶಕರಿಂದ ರೂಪಿಸುವುದು ಸಾಧ್ಯವೇ ಎಂಬ ಅನುಮಾನ ಕಾಡದಿರದು.
ಸಿದ್ಧಲಿಂಗಯ್ಯನವರ ಚಿತ್ರಗಳ ಮತ್ತೊಂದು ಲಕ್ಷಣವೆಂದರೆ ಮುಖ್ಯ ಕತೆಗೆ ಸಮಾನಾಂತರವಾಗಿ ಎಳೆದು ತರುವ ಹಾಸ್ಯದ ಟ್ರ್ಯಾಕ್. ಅವರ ಕೆಲವು ಚಿತ್ರಗಳನ್ನು ಹೊರತುಪಡಿಸಿದರೆ ಉಳಿದ ಚಿತ್ರಗಳಲ್ಲಿ ಈ ಹಾಸ್ಯದ ಟ್ರ್ಯಾಕನ್ನು ಕತ್ತರಿಸಿ ತೆಗೆದರೂ ಒಟ್ಟು ಸಿನಿಮಾದ ಪರಿಣಾಮಕ್ಕೇನೂ ತೊಂದರೆಯಾಗದು. ಮೇಯರ್ ಮುತ್ತಣ್ಣ, ಬಾಳು ಬೆಳಗಿತು, ತಾಯಿ ದೇವರು, ನ್ಯಾಯವೇ ದೇವರು ಮತ್ತು ಬಂಗಾರದ ಮನುಷ್ಯ ಚಿತ್ರಗಳಲ್ಲಿ ದ್ವಾರಕೀಶ್ರವರ ಪಾತ್ರಗಳಿರುವ ದೃಶ್ಯಗಳನ್ನು ಕಂಡಾಗ ಅದು ವೇದ್ಯವಾಗುತ್ತದೆ. ಇದು ನೇರವಾಗಿ ತಮಿಳು ಚಿತ್ರಗಳ ಪ್ರಭಾವ. ತಮಿಳು ಚಿತ್ರಗಳಲ್ಲಿ ಕಾಮೆಡಿ ಟ್ರ್ಯಾಕ್ ಒಂದು ಅವಿಭಾಜ್ಯ ಅಂಗ. ನಾಯಕನೇ ಹಾಸ್ಯ ದೃಶ್ಯಗಳನ್ನು ನಿರ್ವಹಿಸಿದರೂ ತಮಿಳು ಮತ್ತು ಇತ್ತೀಚಿನ ತೆಲುಗು ಚಿತ್ರಗಳಲ್ಲಿ ಸಮಾನಾಂತರವಾಗಿ ಒಂದು ಕಾಮೆಡಿ ಟ್ರ್ಯಾಕ್ ಇರಲೇಬೇಕು. ತಮಿಳು-ತೆಲುಗು ಚಿತ್ರಗಳಲ್ಲಿ ಹಾಸ್ಯ ನಟರ ದಂಡು ರಚನೆಯಾಗಲು ಇದೇ ಕಾರಣ. ದ್ವಾರಕೀಶ್ರವರು ತಮ್ಮ ವೃತ್ತಿ ಜೀವನದ ಅತ್ಯುತ್ತಮ ಹಾಸ್ಯ ಸನ್ನಿವೇಶಗಳನ್ನು ನೀಡಿದ್ದು ಸಿದ್ಧಲಿಂಗಯ್ಯನವರ ಚಿತ್ರಗಳಲ್ಲೇ ಎಂದು ಕಾಣುತ್ತದೆ.
ಎರಡನೇ ತಲೆಮಾರಿನ ಪ್ರಮುಖ ನಿರ್ದೇಶಕರಲ್ಲಿ ಪುಟ್ಟಣ್ಣ, ಸಿದ್ಧಲಿಂಗಯ್ಯ ಅಗ್ರಗಣ್ಯರು ಎಂಬುದರಲ್ಲಿ ಎರಡು ಮಾತಿಲ್ಲ. ಪುಟ್ಟಣ್ಣನವರು ಜನಪ್ರಿಯ ನಾಯಕ ನಟರನ್ನು ತೊರೆದು ಕತೆಯನ್ನೇ ಕೇಂದ್ರವಾಗಿಟ್ಟುಕೊಂಡು ಚಿತ್ರಗಳನ್ನು ನಿದರ್ೆಶಿಸಿದರು. ಪ್ರೇಕ್ಷಕರನ್ನು ಷಾಕ್ಗೆ ಒಳಪಡಿಸುವ ಕೌಶಲ್ಯ ಅವರಿಗಿತ್ತು. ಆದರೆ ಸಿದ್ಧಲಿಂಗಯ್ಯ ಅವರಿಗಿಂತ ಭಿನ್ನವಾದ ಹಾದಿಯನ್ನು ತುಳಿದರು. ಜನಪ್ರಿಯ ನಟರಿದ್ದರೂ ಕಥೆ ಶಕ್ತವಾಗಿದ್ದು ನಿದರ್ೆಶಕನಿಗೇ ಸಾಮಥ್ರ್ಯವಿದ್ದರೆ ಶ್ರೇಷ್ಠ ಚಿತ್ರಗಳ ಸಾಧ್ಯತೆಗೆ ಯಾವುದೂ ಅಡ್ಡಿಯಾಗದೆಂಬುದನ್ನು ನಿರೂಪಿಸಿದರು. ಪ್ರೇಕ್ಷಕರಿಗೆ ಷಾಕ್ ನೀಡುವುದಕ್ಕಿಂತ ಸಿನಿಮಾದಲ್ಲಿ ಲೀನವಾಗುವಂತೆ ಮಾಡುವ ತಂತ್ರಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಅವರು ಹಳ್ಳಿಯ ಬದುಕನ್ನು ತೆರೆಯ ಮೇಲೆ ಮೂಡಿಸಿದ ಪರಿ ನಿಜಕ್ಕೂ ಅನನ್ಯವಾದದ್ದು. ಅದೇ ಮಟ್ಟದಲ್ಲಿ ಹಳ್ಳಿಯ ಬದುಕನ್ನು ತಮಿಳು ಚಿತ್ರರಂಗದಲ್ಲಿ ತೆರೆಗೆ ತಂದವರು ಭಾರತೀರಾಜಾ. ಅವರ ಚಿತ್ರಗಳ ಮೇಲೆ ಸಿದ್ಧಲಿಂಗಯ್ಯನವರ ಗಾಢ ಪ್ರಭಾವವಿರುವುದನ್ನು ಗಮನಿಸಬಹುದು. ‘ಪದಿನಾರು ವಯದಿನಿಲೆ’, ‘ಪುದಿಯ ವಾರ್ಪುಗಳ್’, ‘ಮಣ್ ವಾಸನೈ’, ‘ಮೊದಲ್ ಮರಿಯಾದೈ’ ಚಿತ್ರಗಳ ಗ್ರಾಮೀಣ ಪರಿಸರ ಚಿತ್ರೀಕರಣ ನಮ್ಮ ಸಿದ್ಧಲಿಂಗಯ್ಯನವರ ಚಿತ್ರಗಳನ್ನೇ ಹೋಲುತ್ತದಾದ್ದರಿಂದಲೋ ಏನೋ ಭಾರತೀರಾಜ ಅವರ ಬಹುತೇಕ ಗ್ರಾಮೀಣ ಕತೆಯ ಚಿತ್ರೀಕರಣ ಮೈಸೂರು ಜಿಲ್ಲೆಯ ಗ್ರಾಮಗಳಲ್ಲೇ ನಡೆದಿದೆ.
ಗ್ರಾಮ ಭಾರತದ ಬಹುಪದರದ ಸಂಸ್ಕೃತಿಯನ್ನು ಕಾಲೋಚಿತವಾಗಿ ಜನಪ್ರಿಯ ವಿಧಾನದಲ್ಲಿ ಬಿಡಿಸಿದ ಸಿದ್ಧಲಿಂಗಯ್ಯ ಗೆಳೆಯ ಎನ್.ಎಸ್.ಶಂಕರ್ ಹೇಳಿದಂತೆ ಅಪ್ಪಟ ಕನ್ನಡ ನಿದರ್ೆಶಕ. ಅಪ್ಪಟ ಕನ್ನಡದ ಕಲಾಕಾರ. ಆ ಕಾರಣಕ್ಕೆ ಕನ್ನಡದ ಸಂದರ್ಭದಲ್ಲಿ ಪುಟ್ಟಣ್ಣನವರಿಗಿಂತ ಮಹತ್ವದ ನಿರ್ದೇಶಕ. ನಂತರದ ವರ್ಷಗಳಲ್ಲಿ ಇವರು ನೆಲೆತಪ್ಪಿದಂತೆ ಕಾಣತೊಡಗಿದರು; ಮಾಧ್ಯಮದ ಹಿಡಿತವನ್ನೆ ಕಳೆದುಕೊಂಡಂತೆ ಕಳಪೆ ಚಿತ್ರಗಳನ್ನು ಮಾಡತೊಡಗಿದರು ಎನ್ನುವುದು ಅವರ ಸಾಧನೆಯನ್ನೇನೂ ಮಸುಕುಗೊಳಿಸುವುದಿಲ್ಲ.
ಆ ಕಾರಣಕ್ಕೆ ಸಿದ್ಧಲಿಂಗಯ್ಯ ಕನ್ನಡ ಚಿತ್ರರಂಗಕ್ಕೆ ಆ ದ್ಯಾವ್ರು ತಂದ ಆಸ್ತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.
ಸೈಡ್ರೀಲ್
`ಬಂಗಾರದ ಮನುಷ್ಯ’ ಬೆಂಗಳೂರಿನಲ್ಲಿ ಸತತ ಎರಡು ವರ್ಷಗಳ ಕಾಲ ನಡೆದ ಚಿತ್ರ. ವಜ್ರ ಮಹೋತ್ಸವದ ನಂತರ ತುಂಬಿದ ಗೃಹಗಳಿಗೆ ನಡೆಯುತ್ತಿರುವಾಗ ಸ್ಟೇಟ್ಸ್ ಚಿತ್ರಮಂದಿರ ಪ್ರದರ್ಶನವನ್ನು ನಿಲ್ಲಿಸಿದಾಗ ಪ್ರೇಕ್ಷಕರ ಒತ್ತಾಯದಿಂದ ಮುಂದುವರಿಯಿತು. ಎಪ್ಪತ್ತೈದು ವಾರ ಪೂರ್ಣಗೊಳಿಸಿದ ನಂತರ ಕೆಂಪೇಗೌಡ ಚಿತ್ರಮಂದಿರದಲ್ಲಿ ನೂರನಾಲ್ಕನೇ ವಾರ ಪೂರೈಸಿತು.
`ಬಂಗಾರದ ಮನುಷ್ಯ’ ಚಿತ್ರವು ಅನೇಕ ಕೇಂದ್ರಗಳಲ್ಲಿ ಶತದಿನೋತ್ಸವ ಮತ್ತು ರಜತ ಮಹೋತ್ಸವ ಆಚರಿಸಿಕೊಂಡ ನಂತರ ನಡೆದ ಸಮಾರಂಭಗಳನ್ನು ಚಿತ್ರಿಸಿ ವಿಶೇಷ ಆಕರ್ಷಣೆಯಾಗಿ ಮೊದಲಬಾರಿಗೆ ಚಿತ್ರಮಂದಿರಗಳಲ್ಲಿ ಪ್ರದಶರ್ಿಸಲಾಯಿತು. ಈ ಪರಂಪರೆ ಹಾಲಿವುಡ್ ಮತ್ತು ಹಿಂದಿ ಮತ್ತು ತಮಿಳು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿತ್ತು. ಆ ಪರಂಪರೆಯನ್ನು ಕನ್ನಡಕ್ಕೆ `ಬಂಗಾರದ ಮನುಷ್ಯ’ ಪರಿಚಯಿಸಿತು. ಮುಂದೆ ಅದು `ಶಂಕರ್ಗುರು’ ಚಿತ್ರದಲ್ಲಿ ಪುನರಾವರ್ತನೆಯಾಯಿತು.
`ಬೂತಯ್ಯನ ಮಗ ಅಯ್ಯು’ ಚಿತ್ರದಲ್ಲಿ ಅಯ್ಯು ಪಾತ್ರ ವಹಿಸಿದ ಲೋಕೇಶ್ ದಿನ ಬೆಳಗಾಗುವುದರೊಳಗೆ ತಾರೆಗಳಾಗುವ ವಿದ್ಯಮಾನಕ್ಕೆ ಮೊದಲ ಉದಾಹರಣೆಯಾದರು. ಮುಂದೆ ತಮಿಳು, ಹಿಂದಿ ಮತ್ತು ತೆಲುಗಿನಲ್ಲಿ ಈ ಚಿತ್ರ ರೀಮೇಕ್ ಆದಾಗ ಅಯ್ಯುವಿನ ಪಾತ್ರವನ್ನು ಲೋಕೇಶ್ ವಹಿಸಿದರು. ಎ.ವಿ.ಎಂ. ಸಂಸ್ಥೆ ನಿರ್ಮಿಸಿದ ಆ ಚಿತ್ರಗಳು ನೇಟಿವಿಟಿಯ ಕೊರತೆಯಿಂದಾಗಿ ಯಶಸ್ವಿಯಾಗಲಿಲ್ಲ.
`ನಾಗರಹಾವು’ ಚಿತ್ರದ ‘ರಾಮಾಚಾರಿ’ ಪಾತ್ರದ ಕುಪಿತ ಯುವಕನಾಗಿ ಅಮೋಘ ಅಭಿನಯ ನೀಡಿದ ವಿಷ್ಣುವರ್ಧನ್ರವರ ವೃತ್ತಿ ಬದುಕು ಕುಸಿಯುತ್ತಿರುವಾಗ ಆಸರೆಗೆ ಬಂದದ್ದು ಅದೇ ಕುಪಿತ ಯುವಕ ಗುಳ್ಳನ ಪಾತ್ರ. ವಿಷ್ಣು ಅವರ ವೃತ್ತಿ ಬದುಕು ಮತ್ತೆ ಚಿಗುರಿದ್ದು `…ಅಯ್ಯು’ ಚಿತ್ರದಿಂದ.
`ಪ್ರೇಮ ಪರ್ವ’ ಚಿತ್ರದ ಮೂಲಕ ಸಿದ್ಧಲಿಂಗಯ್ಯನವರು ತಮ್ಮ ಮಗ ಮುರಳಿಯನ್ನು ನಾಯಕ ನಟನನ್ನಾಗಿಸಿದರು. ಚಿತ್ರ ಯಶಸ್ವಿಯಾಯಿತು. ಆದರೆ ನಂತರದ ಚಿತ್ರ `ಸಂಭವಾಮಿ ಯುಗೇ ಯುಗೇ’ಯಲ್ಲಿನ ಅತಿ ಹಿಂಸೆ ನೋಡುಗರಿಗೆ ನಿಜವಾದ ‘ಚಿತ್ರ ಹಿಂಸೆ’ ನೀಡಿತು, ಸೋಲೂ ಕಂಡಿತು. ಅನಂತರ ಅವರು ತಮ್ಮ ಎಂದಿನ ಗ್ರಾಮೀಣ ವಸ್ತುಗಳಿಗೆ ಮರಳಿದರು.
(ಇದು ನನ್ನ ‘ಸಿನಿಮಾಯಾನ’ ಪುಸ್ತಕದಲ್ಲಿ ನನ್ನ ನೆಚ್ಚಿನ ನಿದರ್ೆಶಕ ಸಿದ್ದಲಿಂಗಯ್ಯ ಅವರ ಬಗ್ಗೆ ಬರೆದಿರುವ ಬರಹ. ಸಿದ್ದಲಿಂಗಯ್ಯ ಅವರು ಲೇಖನವನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ತುಂಬಾ ಪ್ರತಿಭಾಶಾಲಿ ವಿದ್ಯಾರ್ಥಿಯಾಗಿದ್ದ ಅವರು ಬಡತನದ ಕಾರಣ ಓದನ್ನು ಅರ್ಧಕ್ಕೆ ನಿಲ್ಲಿಸಿ ಮೈಸೂರಿನ ನವಜ್ಯೋತ ಸ್ಟುಡಿಯೋನಲ್ಲಿ ಕ್ಲಾಪ್ ಬಾಯ್ ವೃತ್ತಿ ಆರಂಭಿಸಿದ ಅವರು ಮುಂದೆ ಮದರಾಸಿನಲ್ಲಿ ಸಹಾಯಕ ನಿರ್ದೇಶಕರಾಗಿ, ಭಾರತದ ಬಹುದೊಡ್ಡ ನಿದರ್ೇಶಕರಾಗಿ ಬೆಳೆದ ಕಥನ ಅತ್ಯಂತ ಕುತೂಹಲಕಾರಿಯಾದದ್ದು. ಕಳೆದ ವರ್ಷ ಅವರನ್ನು ಗೆಳೆಯ ಬಸವರಾಜು ಜೊತೆ ಎರಡು ಬಾರಿ ಭೇಟಿಯಾಗಿ ಹಲವಾರು ಗಂಟೆಗಳ ಕಾಲ ಅವರ ಬದುಕು ಮತ್ತು ಸಿನಿಮ ಕುರಿತು ಅವರೊಡನೆ ಮಾತನಾಡುವ ಅವಕಾಶ ಒದಗಿತ್ತು. ತಮ್ಮ ಬಾಲ್ಯಕಾಲದ ಹಲವಾರು ಸ್ವಾರಸ್ಯಕರ ಘಟನೆಗಳನ್ನು, ಸಹಾಯಕ ನಿರ್ದೇಶಕರಾಗಿ ಎನ್.ಟಿ. ಆರ್ ರವರ ಪ್ರೀತಿ ಸಂಪಾದಿಸಿದ ಬಗೆಯನ್ನು, ಕನ್ನಡದ ಜನಪ್ರಿಯ ಕಾದಂಬರಿಕಾರರೊಬ್ಬರು ತಮ್ಮ ಕಾದಂಬರಿಯನ್ನು ಚಿತ್ರಕ್ಕೆ ಅಳವಡಿಸಲು ಅನುಮತಿ ‘ನಿರಾಕರಿಸಿ’ದ್ದು ಮತ್ತು ಭೂತಯ್ಯನ ಮಗ ಅಯ್ಯು ಯಶಸ್ಸಿನ ನಂತರ ಅದೇ ಲೇಖಕ ಕಾದಂಬರಿಯನ್ನು ಕೊಡುವ ಆಸೆ ವ್ಯಕ್ತಪಡಿಸಿದಾಗ ತಾವು ಅದನ್ನು ನಿರಾಕರಿಸಿದ ಸಂಗತಿಯನ್ನು ಯಾವುದೇ ರಾಗದ್ವೇಷವಿಲ್ಲದೆ ಹೇಳಿದ್ದು ನೆನಪಲ್ಲಿ ಉಳಿದಿದೆ. ಮುಂದೆ ಎಂದಾದರೂ ಅವರೊಡನೆ ಅಡಿದ ಮಾತುಗಳನ್ನು ದಾಖಲಿಸಬೇಕು)









Very nice article sir. Surely he is one among the great directors.
BANGARAD MANUSHYA, BOOTAYYANA MAGA AYYU 2 cinemaglu namma mele madid parinam sanndalla. adarshagala khajane siddalinagayyanavara agalike tumblarada nasta. adaru avaru kalisida naguvin, virahada, sahasada, chlada pata sada shshwata
Excellent article. Kudos to Dr.Puttaswamy for giving us a beautiful insight into the life and works of the colossus Director Siddalingaiah. The sad demise of Siddalingaiah marks the end of an era of meaningful movies in Kannada. RIP Mr.Siddalingaiah.