ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ದಿನ ವಿಜಾಪುರ ಸಾಹಿತ್ಯ ಸಮ್ಮೇಳನದಲ್ಲಿ..

ವಿಜಾಪುರದ ಹಲಸಂಗಿ :

ಕನ್ನಡ ನವೋದಯ ಕಾವ್ಯದ ಜಾನಪದದ ಹೆಬ್ಬಾಗಿಲು

-ಡಾ.ಪ್ರಕಾಶ ಗ.ಖಾಡೆ

ವಿಜಾಪುರದಲ್ಲಿ 1923 ಮೇ 21,22,23 ಗಳಂದು ಜರುಗಿದ 9ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲಸಂಗಿ ಗೆಳೆಯರ ಗುಂಪಿನ ಮಧುರಚೆನ್ನರು ‘ಹಳ್ಳಿಯ ಹಾಡುಗಳು’ ಹಾಗೂ ಪಿ. ಧೂಲಾ ಸಾಹೇಬರು ‘ಲಾವಣಿಯ ಲಾವಣ್ಯ’ ಕುರಿತು ನೀಡಿದ ಜಾನಪದ ಉಪನ್ಯಾಸವು ಮುಂದೆ ಕನ್ನಡ ಕಾವ್ಯದ ದಿಕ್ಕನ್ನೇ ಬದಲಿಸಿತು, ಅದರ ನೆನಪಿಗಾಗಿ ಡಾ ಪ್ರಕಾಶ್ ಖಾಡೆ ಬರೆದ ಲೇಖನ ಇಲ್ಲಿದೆ
 
ವಿಜಾಪುರ ಜಿಲ್ಲೆಯ ಹಲಸಂಗಿ ಗ್ರಾಮದಲ್ಲಿ 1912-13 ರ ಹೊತ್ತಿಗೆ ಹುಟ್ಟಿಕೊಂಡ ‘ಹಲಸಂಗಿ ಗೆಳೆಯರ ಗುಂಪು’ ಕನ್ನಡ ಸಾಹಿತ್ಯ ರಚನೆಗೆ ಹೊಸ ತಿರುವನ್ನು ನೀಡಿತು.ಹಲಸಂಗಿ ಗೆಳೆಯರ ಗುಂಪಿಗೆ ಮಧುರಚೆನ್ನರು ಹಿರಿಯಣ್ಣ. ಈ ಗುಂಪಿನಲ್ಲಿ ಸಿಂಪಿ ಲಿಂಗಣ್ಣ, ಪಟೇಲ ಧೂಲಾ ಸಾಹೇಬ, ಕಾಪಸೆ ರೇವಪ್ಪ, ಓಲೇಕಾರ ಮಾದಣ್ಣ, ರೇವಣಸಿದ್ದಪ್ಪ ಮದಭಾವಿ, ಚೆನ್ನಮಲ್ಲವ್ವ ಸರಸಂಬಿ, ವಿಜಾಪುರದ ಬಸಣ್ಣ ಅಕ್ಕಿ, ಪದ್ಮರಾಜ ಹುನಗುಂದ, ಚಡಚಣದ ಗುರುಪಾದಪ್ಪ ಜೀರಂಕಲಗಿ, ಅಗರಖೇಡದ ಅಣ್ಣಾರಾವ ಪಾಟೀಲ ಮುಂತಾದವರು ಸೇರಿದ್ದರು.
ಹಲಸಂಗಿ ಗೆಳೆಯರು ಅಂದು ಜನಪದ ಗೀತೆಗಳ ಮಹತ್ವಸಾರಿ ಉಪನ್ಯಾಸಗಳನ್ನು, ಹಾಡುಗಾರಿಕೆಯನ್ನು ನೀಡುವ ಜೊತೆಗೆ ಸ್ವತಃ ಸಂಗ್ರಹಕ್ಕೆ ನಿಂತರು. ಹೀಗೆ ಜನಪದರ ಹಾಡುಗಳನ್ನು ಅವರ ಬಾಯಿಂದ ಕೇಳಿ ಬರೆದುಕೊಂಡು ಸಂಗ್ರಹಿಸಿ ಸಂಪಾದಿಸಿ ಪ್ರಕಟಿಸುವಾಗ ತಮ್ಮ ಕಾರ್ಯಕ್ಕೆ ವ್ಯಾಪಕತೆ ಬರಲು ಮತ್ತು ಅಖಂಡ ಕನರ್ಾಟಕ ಈ ಕಡೆಗೆ ಹೊರಳಲು, ತಮ್ಮ ಸಂಪಾದಿತ ಕೃತಿಯ ಮೌಲ್ಯ ಹೆಚ್ಚಿಸಲು ಆ ಕಾಲಕ್ಕೆ ಕನ್ನಡ ಜನಮಾನಸ ನೇತಾರರೆನಿಸಿದ್ದ ಬಿ.ಎಂ.ಶ್ರೀ, ಮಾಸ್ತಿ, ಬೇಂದ್ರೆ ಅವರಿಂದ ಕೃತಿಯ ಕಾರ್ಯ ಮತ್ತು ಮೌಲ್ಯ ಕುರಿತು ಬರಹಗಳನ್ನು ಬರೆಸಿದರು.

ಹಲಸಂಗಿ ಗೆಳೆಯರ ಈ ಕಾರ್ಯದಲ್ಲಿ ಮೊದಲ ಬಾರಿಗೆ ಕೃತಿಯ ಕುರಿತು ಬರೆದ ಬಿ.ಎಂ.ಶ್ರೀ ಮತ್ತು ಬೇಂದ್ರೆಯವರ ಮುಂದಿನ ಕಾವ್ಯಧಾಟಿಯೇ, ಕಾವ್ಯಾಲೋಚನೆಗಳೇ ಬೇರೆಯಾದವು. ಬರೀ ಸಂಸ್ಕೃತ, ಇಂಗ್ಲಿಷ್ ಪ್ರಭಾವ ಕುರಿತು ಚಿಂತಿಸುತ್ತಿದ್ದ ಈ ವಿದ್ವಾಂಸರು ಹಲಸಂಗಿ ಗೆಳೆಯರ ಜಾನಪದ ಕಾರ್ಯದಿಂದ ಸ್ಫೂತರ್ಿಗೊಂಡು ಕನ್ನಡ ನವೋಯದ ಕಾವ್ಯದ ಜಾನಪದದ ಹೆಬ್ಬಾಗಿಲು ತೆರೆಯಿತು ಎಂದು ಸಾರಿದರು. ಕನ್ನಡದ ತಿಳುವಳಿಕೆ ಕನ್ನಡದಲ್ಲಿಯೇ ಹುಟ್ಟಿಬರಬೇಕು, ಕನ್ನಡ ಭಾಷೆಯೇ ಚಿಂತಿಸಲು, ಭಾವಿಸಲು, ತಿಳಿಯಲು ಕಲಿಯಬೇಕು. ಅದಕ್ಕಾಗಿ ಅವಕಾಶ ಮಾಡಿಕೊಡಬೇಕು ಎಂದು ಹೇಳುವ ಮೂಲಕ ದೇಸೀ ಮಾತಿಗೆ ಮನ್ನಣೆ, ಪ್ರಾಧಾನ್ಯ ನೀಡುವ ಸಂದರ್ಭ ಒದಗಿಬಂದಿತು. ಇಲ್ಲಿ ಡಾ.ಸಿ.ಕೆ.ನಾವಲಗಿ ಅವರ ಮಾತುಗಳಿಂದ ಈ ಸಂಗತಿಯನ್ನು ಇನ್ನಷ್ಟು ಸ್ಪಷ್ಟಪಡಿಸಲು ಸಾಧ್ಯ:
”ಕನ್ನಡ ನವೋದಯ ಸಂದರ್ಭದಲ್ಲಿ ಜಾನಪದ ಸಂಗ್ರಹ ಕುರಿತಾದ ನಿಜವಾದ ಆಸಕ್ತಿ ಕನ್ನಡಿಗರಲ್ಲಿ ಮೂಡಿತು. ಪಾಶ್ಚಾತ್ಯ ಸಾಹಿತ್ಯಿಕ ಗಾಳಿಯನ್ನು ತಲೆಯಲ್ಲಿ ತುಂಬಿಕೊಂಡ ನವೋದಯದ ಅನೇಕ ಕನ್ನಡ ಕವಿಗಳು ತಮ್ಮ ಕಾವ್ಯದ ಸೊಗಸು , ಸೌಂದರ್ಯ, ಲಾವಣಿಗಳಿಗೆ ಒಟ್ಟಿನಲ್ಲಿ ಕಾವ್ಯ ಶೈಲಿಯ ಬಗೆಗೆ ಜನಪದ ಸಾಹಿತ್ಯವನ್ನು ಅನಿವಾರ್ಯವಾಗಿ ಆಶ್ರಯಿಸಲೇ ಬೇಕಾಯಿತು. ಅಂಥ ಕಾವ್ಯದ ಸೊಗಸು, ಸೌಂದರ್ಯ ಗುಣ, ಜನಪದ ಸಾಹಿತ್ಯಕ್ಕಿದೆ. ಎಂಬುದನ್ನು ಮನಗಂಡ ನವೋದಯ ಕವಿಗಳು ತಮ್ಮ ಕಾವ್ಯ ಕೃಷಿಯಲ್ಲಿ ಜಾನಪದದ ವಿವಿಧ ಪ್ರಕಾರಗಳ ತಂತ್ರ, ಭಾಷೆ, ಛಂದಸ್ಸು ಇತ್ಯಾದಿಗಳನ್ನು ದುಡಿಸಿಕೊಳ್ಳತೊಡಗಿದರು. ಇದರ ಪರಿಣಾಮವಾಗಿ ಕನ್ನಡ ಜಾನಪದ ಸಂಗ್ರಹ ಅಧ್ಯಯನಗಳು ಪ್ರಾರಂಭವಾದವು. ”
ಬದಲಾದ ಬೇಂದ್ರೆ ಕಾವ್ಯ ಧೋರಣೆ :
ಹಲಸಂಗಿ ಗೆಳೆಯರ ‘ಗರತಿಯ ಹಾಡು’ ಹೊರಬರುವ ಮೊದಲು ಮತ್ತು ಈ ಗೆಳೆಯರು ಜಾನಪದದ ಬಗೆಗೆ ಉಂಟುಮಾಡುತ್ತಿದ್ದ ಜಾಗೃತಿಯಲ್ಲಿ ಪಾಲ್ಗೊಂಡ ಬೇಂದ್ರೆಯವರ ಕಾವ್ಯಧೋರಣೆಯನ್ನು ಇಲ್ಲಿ ಗಮನಿಸಬೇಕು. ‘ನಮಗೆ ಬೇಕಾದ ಕಾವ್ಯ’ (1923) ಕುರಿತು ಚಚರ್ಿಸಿದ ಬೇಂದ್ರೆಯವರು ಮುಂದೆ ಸಂಪೂರ್ಣವಾಗಿ ಜಾನಪದೀಯತೆಗೆ ಒತ್ತು ನೀಡಿರುವುದು ಸ್ಪಷ್ಟವಾಗುತ್ತದೆ.
ಬೇಂದ್ರೆಯವರು ಅಂದು ‘ನಮಗೆ ಬೇಕಾದ ಕಾವ್ಯ’ ಕುರಿತು ಸಾಹಿತ್ಯ ಸಮ್ಮೇಳನದ ಭಾಷಣದಲ್ಲಿ ಹೇಳಿದ್ದು:
1. ನಮಗೆ ಬೇಕಾದವರು ಅಷ್ಟಾದಶ ವರ್ಣನದ, ಚಕೋರ ಚಾತಕಗಳ ಸಮಯದ ಕವಿಗಳಲ್ಲ. ಸೃಷ್ಟಿಯ ಪೂಜಾರಿಗಳಾದ, ವಿಚಾರಮೂಢ ವಿಕಾರಗಳನ್ನು ತಾಳ ಲಯಕ್ಕೆ ಹಾಡುವ ಕವಿಗಳಲ್ಲ. ನಮಗೆ ಬೇಕಾದವರು ಋಷಿಗಳು. ಮಂತ್ರದ್ರಷ್ಟಾರರಾದ ಋಷಿಗಳು, ವೇದದ ಕವಿಗಳು.
2.ಭಾವಯೋಗ ಬಲದಿಂದ ಅಪರೋಕ್ಷ ಜ್ಞಾನವನ್ನೂ, ಶೋಕ ನಿವೃತ್ತಿಯನ್ನು ನಿರಂಕುಶ ವೃತ್ತಿಯನ್ನು ಪಡೆದ ಪ್ರಾಸಾದಿತ ಕವಿಗಳು ಬೇಕು.
3.ಮತಗಳ ಬೇಲಿಯನ್ನು ದಾಟಿ ‘ಎಲ್ಲರೊಳು ತಾನಿಪ್ಪ ತನ್ನೊಳಗೆಲ್ಲರನು ಧರಿಸಿಹ’ ಒಂದು ಸನಾತನ ಧರ್ಮದ ಅನುಭಾವ ಸ್ಪೂತರ್ಿಯಿಂದ ‘ಏಕಂ ಸದ್ವಿಪ್ರಾ ಬಹುಧಾ ವದಂತಿ’ ‘ಸರ್ವ ಚಿತ್ಜ್ಯೋತಿ ದೇವೇತಿಯಃ ಪಶ್ಯತಿ ಸ ಪಶ್ಯತಿ’ ‘ಓಚಿಣಣಡಿಜ ಚಿ ಥಿಟಛಠಟ’ ಮೊದಲಾದ ಯೋಗಿ ಪ್ರತ್ಯಕ್ಷಜ ಪ್ರತೀತಿಯ ಸಮಯಗಳಿಂದ ಒಡಗೂಡಿದ ಗಾಢ, ಉನ್ನತ ಕಾವ್ಯಬೇಕು.
4.ಅಂದ ಚೆಂದದ ನೀಟುಗಾರಿಕೆಯ ಕಾವ್ಯವು ನಮಗಷ್ಟು ಬೇಕಾಗಿಲ್ಲ. ಜೀವಿತದ ಹುರುಳು ತಿರುಳನ್ನು ಒಡನುಡಿದು ತೋರಿಸಿ ಸಂಸಾರ ಸಾರೋದಯವಾಗುವ ಕಾವ್ಯವು ನಮಗೆ ಬೇಕಾಗಿದ್ದರೂ, ನರನೊಳಗಿನ ನಾರಾಯಣನ ಅವತಾರದ ಬೆಲೆಗಳನ್ನೂ, ಮಾನವನೊಳಗಿನ ಮನುವಿನ ಉದ್ಧಾರದ ನೆಲೆಗಳನ್ನೂ, ಪ್ರತಿಭಾಚಕ್ಷುವಿನ ಜ್ಯೋತಿಯ ಬೆಳಕಿನಲ್ಲಿ ಜಗತ್ತಿನ ರಸಿಕ ದೃಷ್ಟಿಗೆ ತೋರಿಸುವ, ಶ್ರವಣಮಾತ್ರದಿಂದ ಸಹೃದಯರ ಹೃದಯದಲ್ಲಿ ಕಿವಿಯಿಂದೀಂಟಿಸುವ ಕಾವ್ಯ ನಮಗೆ ಬೇಕಾದ ಕಾವ್ಯ.
5.ಅರವಿಂದರು ‘ಈಣಣಣಡಿಜ ಕಠಜಣಡಿಥಿ’ಯಲ್ಲಿ ಹೇಳಿದಂತೆ ವಸ್ತುವಸ್ತುವಿನ ಅಂತರಂಗದ ಮೊಗ್ಗುಗಳನ್ನರಳಿಸುವ ಪ್ರಕೃತಿಯ ಅಂತರ್ಗತವಾದ ಚೈತನ್ಯವನ್ನು ಮೂತರ್ಿಮತ್ತಾಗಿ ತೋರಿಸುವ ಅಕ್ಷರಾತ್ಮನ, ಅಂತರಾತ್ಮನ, ಅವಿದಿತ ರಸಗಳ ಅನಂತ ಲೀಲಾನಾಟ್ಯದ ಪ್ರೇಕ್ಷಕರನ್ನಾಗಿ ನಮ್ಮನ್ನು ಮಾಡುವ, ನಶ್ವರದೊಳಗಿನ ಈಶ್ವರನನ್ನು ಅಂತಶ್ಚಕ್ಷುವಿಗೆ ಪ್ರತ್ಯಕ್ಷೀಕರಿಸುವ ಕಾವ್ಯ ನಮಗೆ ಬೇಕಾದ ಕಾವ್ಯ.
6. ಶಿಶುನಾಳ ಶರೀಫಸಾಹೇಬರ ಆತ್ಮವೇಧಕ ವಾಣಿ, ಹಳ್ಳಿಪಳ್ಳಿಯ ಓಣಿ ಓಣಿಗಳೊಳಗಿನ ಮಾತು ಕಥೆಗಳನ್ನು ರೂಪಕದ ಅವಯವಗಳನ್ನಾಗಿ ಮಾಡಿ, ಆತ್ಮದ ರಂಗುರೂಪನ್ನು ನಿರೂಪಿಸುವ ಯೋಗಕುಶಲವಾಗಬೇಕು.
ಹೀಗೆ ಬೇಂದ್ರೆಯವರು ಆರಂಭ ಕಾಲದಲ್ಲಿ ಶೆಲ್ಲಿ, ಕೀಟ್ಸ್ ಜಯದೇವ ಮತ್ತು ಅರವಿಂದರ ಪ್ರಭಾವಕ್ಕೆ ಒಳಗಾಗಿ ಕನ್ನಡಕಾವ್ಯ ಒಡಮೂಡಬೇಕಾದ ಸಂದರ್ಭಗಳನ್ನು ಕಟ್ಟಿಕೊಟ್ಟರು. ಮುಂದೆ ಹಲಸಂಗಿ ಗೆಳೆಯರ ಸಂಪರ್ಕ, ಸಾಧನಕೇರಿಯ ದಟ್ಟ ಗ್ರಾಮೀಣ ಸೊಗಡು ಹಳ್ಳಿಯ ಹಾಡು, ದಾಸರ ಪದ, ಶರೀಫರ ಗ್ರಾಮ್ಯ, ಜಾನಪದ ಧಾಟಿಗೆ ಮನಸೋತು ಜಾನಪದವೇ ನಿಜವಾದ ಕಾವ್ಯ ,ನಮ್ಮ ಕವಿತೆಯು ಜಾನಪದದ ಮೈದುಂಬಿಕೊಳ್ಳಬೇಕಾದ ಅಗತ್ಯವನ್ನು ಹಲಸಂಗಿ ಗೆಳೆಯರ ‘ಗರತಿಯ ಹಾಡು’ ಪರಿಚಯದಲ್ಲಿ ಪ್ರಕಟಪಡಿಸಿದರು. ಅವರ ಬದಲಾದ ಕಾವ್ಯ ಸಂದರ್ಭವನ್ನು ಹೀಗೆ ಗುರುತಿಸಲು ಸಾಧ್ಯ. ‘ನಮ್ಮ ಇಂದಿನ ಕನ್ನಡ ಸಾಹಿತ್ಯಕ್ಕೆ ಆ ಸಂಸ್ಕಾರವು ಅವಶ್ಯವಿದೆ. ಸಂಸ್ಕೃತ, ಇಂಗ್ಲಿಷ್, ಹಳಗನ್ನಡಗಳ ಪ್ರತಿಬಿಂಬವನ್ನು ತಳೆದ ಸಾಹಿತ್ಯಕ್ಕಿಂತಲೂ ಅಚ್ಚಗನ್ನಡದ ಅಚ್ಚೊತ್ತಿದ ಸಾಹಿತ್ಯದ ಅಗತ್ಯವು ಅಷ್ಟಿಷ್ಟೆಂದು ಹೇಳಬಾರದು. ಕಟ್ಟುಳ್ಳ ಮೈ, ಹುಟ್ಟು ಸವಿಯುಳ್ಳ ನುಡಿ, ತಿಳಿಯಾದ ಬಗೆ ಇವೆಲ್ಲವೂ ಬೇಕು ಈಗಿನ ಕವನಗಳಲ್ಲಿ. ಜೀವನವೇ ದೇವತೆಯಾದ ತ್ರಿಪದಿ ಛಂದದಲ್ಲಿ ಹೊರಹೊಮ್ಮಿದ ಗರತಿಯ ಹಾಡಿನ ಋಷಿಗಳು ಹೆಣ್ಣು ಮಕ್ಕಳು ಅವರದೇ ನಿಜವಾದ ಕಾವ್ಯ ಉಳಿದುದು ಕಾವ್ಯದ ಛಾಯೆ’ ಎಂದು ಸಾರುವ ಮೂಲಕ ಕನ್ನಡ ನವೋದಯಕ್ಕೆ ಜಾನಪದದ ಶ್ರೀಕಾರ ಹಾಕಿದರು. ಜೊತೆಗೆ ಅವರೂ ಜಾನಪದ ಸಾಹಿತ್ಯ ಪ್ರಸಾರ, ಪ್ರಚಾರಕ್ಕಾಗಿ ಆ ಕಾಲದಲ್ಲಿ ಮಧುರಚೆನ್ನ, ಬಿ.ಎಂ.ಶ್ರೀ, ಕುವೆಂಪು ಮೊದಲಾದವರೊಂದಿಗೆ ನಾಡನ್ನು ಸುತ್ತಿ ಜಾಗೃತಿ ಮೂಡಿಸಿ ಕನ್ನಡ ಕಾವ್ಯದ ಜಾನಪದೀಯತೆಗೆ ಹೊಸ ಸಾಧ್ಯತೆಗಳನ್ನು ತೆರೆದುತೋರಿದರು.
ದ.ರಾ.ಬೇಂದ್ರೆಯವರು ತಮ್ಮ ಜನಪದ ಧಾಟಿಯ ಕವಿತೆಗಳನ್ನು ಊರೂರಲ್ಲಿ ಹಾಡಿ ಹೇಳಿದಾಗ ಒಂದು ಬಗೆಯ ಜಾಗೃತಿ ಉಂಟಾಯಿತು. 1930ರಲ್ಲಿ ಕುಮಾರವ್ಯಾಸ ಉತ್ಸವದಲ್ಲಿ ‘ಉತ್ತರಕುಮಾರ’ ಎಂಬ ಪ್ರಬಂಧವನ್ನು ಓದುವುದಕ್ಕಾಗಿ ಬೇಂದ್ರೆಯವರು ಮೈಸೂರಿಗೆ ಹೋಗಿದ್ದರು. ಆಗ ಮೈಸೂರು ಸಾಹಿತ್ಯ ಸಮ್ಮೇಳನದ ಲೇಖಕರ ಗೋಷ್ಠಿಗೆ ಅನೌಪಚಾರಿಕ ಅಧ್ಯಕ್ಷರಾಗುವ ಘಟನೆ ಘಟಿಸಿತು. ಈ ಸಭೆಯಲ್ಲಿ ಕುವೆಂಪು ಅವರು ತಾನಾಜಿ ಲಾವಣಿಯನ್ನು ಓದಿದರು. ಹಳೆಯ ಕಾವ್ಯ ಸಂಪ್ರದಾಯದವರೂ ತಮ್ಮ ಕವನ ಓದಿದ್ದರು. ಅನಂತರ ಮಾರನೆಯ ವರ್ಷ ಬೇಂದ್ರೆಯವರು ಮಾಸ್ತಿಯವರೊಡನೆ ಮೈಸೂರು, ಬೆಂಗಳೂರು ಮತ್ತು ಮೈಸೂರಿನ ಬೇರೆ ಬೇರೆ ದೊಡ್ಡ ಊರುಗಳಲ್ಲಿ ಜಾನಪದ ಸಾಹಿತ್ಯ ವಿಷಯವಾಗಿ ಭಾಷಣ ಮಾಡಿದ್ದರು. ಅದಲ್ಲದೆ ‘ಹಕ್ಕಿ ಹಾರುತಿದೆ ನೋಡಿದಿರಾ’, ‘ಕೋಗಿಲೆ’, ‘ಚಳಿಯಾಕೆ’, ‘ತುತ್ತಿನ ಚೀಲ’, ‘ರಸಿಕ ಪೇಳೋ’, ‘ಕನಸಿನೊಳಗೊಂದು ಕನಸು’, ‘ಕರಿಮರಿನಾಯಿ’, ‘ರಾಗರತಿ’, ‘ಚಿಂತೆ’ ಮೊದಲಾದ ಪದ್ಯಗಳ ವಾಚನ ಮಾಡಿ ತೋರಿಸಿದ್ದರು. ಈ ಪದ್ಯಗಳನ್ನು ಇಂದಿಗೂ ಜನರು ಬೇಂದ್ರೆಯವರ ಕಾವ್ಯದ ಹಿರಿಮೆಯನ್ನು ಹೇಳಲು ಬಳಸುತ್ತಿದ್ದಾರೆ. ಇದೇ ರೀತಿ ಆಗ ಮಾಡಿದ ಭಾಷಣಗಳ ಮೂಲಕವೇ ಬೇಂದ್ರೆಯವರ ಕಾವ್ಯ ಜಾನಪದ ಕಾವ್ಯ ಎಂದೂ, ಅವರು ಹಾಡಿದರೇ ತಿಳಿಯುವ ಕಾವ್ಯ ಎಂದೂ ಮೌಲ್ಯಮಾಪನ ಮಾಡಿದರು. ಹೀಗೆ ಜಾನಪದದ ಪ್ರಚಾರ, ಪ್ರಸಾರ, ಸಂಗ್ರಹ, ಸಂಪಾದನೆ ಕಾರ್ಯದಿಂದ ಬಹುಕಾಲದಿಂದ ವಿಸ್ಮ್ನೃತಿಗೆ ಒಳಪಟ್ಟ ದೇಶೀ ಕಾವ್ಯ ಪರಂಪರೆಗೆ ಬಹುದೊಡ್ಡ ಪ್ರೋತ್ಸಾಹ ಮನ್ನಣೆ ದೊರೆತು ನಾಡು ಗುರುತಿಸುವಂತಾಯಿತು. ನವೋದಯ ಕವಿಗಳಿಗೆ ಜಾನಪದವೇ ಮೂಲ ಆಶ್ರಯವಾಯಿತು. ರಾಜಾಶ್ರಯದ ಕಟ್ಟುಕಟ್ಟಳೆಯ ಬಂಧ ಸಡಿಲಗೊಂಡು ಬಯಲು ಸಾಹಿತ್ಯದ ಆಶಯಗಳು ತೀವ್ರವಾಗಿ ಸೆಳೆಯುವುದರೊಂದಿಗೆ ಯಾರೂ ಜಾನಪದದಿಂದ ಹೊರಗುಳಿಯಲು ಸಾಧ್ಯವಾಗಲಿಲ್ಲ. ಕನ್ನಡ ಜಾನಪದಕ್ಕೆ ಮೊದಲ ನೇಗಿಲು ಹೂಡಿದ ಹಲಸಂಗಿ ಗೆಳೆಯರು ಮಾಡಿದ ಕಾರ್ಯ ಸಾರ್ವತ್ರಿಕವಾಗಿ ಗಮನಸೆಳೆಯಿತು. ‘ಜಾನಪದ ಗಾರುಡಿಗ’ ಎನಿಸಿದ ದ.ರಾ.ಬೇಂದ್ರೆಯವರ ಈ ಮಾತುಗಳನ್ನು ಗಮನಿಸೋಣ.
‘ನನಗೆ ತಿಳಿದ ಮಟ್ಟಿಗೆ ಚನ್ನಮಲ್ಲಪ್ಪನವರು (ಮಧುರಚೆನ್ನ) ವಿಜಾಪುರ ಸಾಹಿತ್ಯ ಸಮ್ಮೇಳನ ಕಾಲಕ್ಕೆ ಹಳ್ಳಿಯ ಸಾಹಿತ್ಯದ ವಿಷಯವಾಗಿ ಮಾತನಾಡಿದುದೇ ಮೊದಲು. ಅವರ ಪುಟ್ಟ ನಿಬಂಧವು ಮುಂದೆ ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಪ್ರಕಟವಾಯಿತು. ಹೊಸಪೇಟೆಯ ಶ್ರೀ ಹಣುಮಂತಗೌಡರು ಮೊದಲಾದವರು ಲಾವಣಿಗಳ ಸಂದರ್ಭವನ್ನು ಆಗಾಗ್ಗೆ ಎತ್ತಿ ಮಾತನಾಡಿದರೂ ಲಾವಣಿ ಸಾಂಗತ್ಯದ ವಿಷಯವಾಗಿ ಶ್ರೀಮಾನ್ ಮಾಸ್ತಿಯವರು ಪರಿಷತ್ ಪತ್ರಿಕೆಯಲ್ಲಿ ಬರೆದ ಸೊಗಸಾದ ಲೇಖನವೇ ಮಹತ್ವದ ಬರಹ. ಕಲಬುಗರ್ಿ, ಬೆಳಗಾವಿ ಮತ್ತು ಮೈಸೂರು ಈ ಮೂರು ಸಮ್ಮೇಳನಗಳಲ್ಲಿಯೂ ಪ್ರಮುಖವಾಗಿ ಶ್ರೀಕಂಠಯ್ಯನವರ ಪ್ರೋತ್ಸಾಹದಿಂದಲೂ, ಪ್ರೀತಿಗಾಗಿಯೂ ಜನಪದ ಸಾಹಿತ್ಯ ವಿಚಾರವನ್ನು ಕುರಿತು ಸಮ್ಮೇಳನದ ಸಭಾಸದರ ಸಮಕ್ಷಮದಲ್ಲಿ ಚಚರ್ಿಸುವ ಸಂದಿ ನನಗೆ ದೊರೆಯಿತು. ಬೆಳಗಾವಿಯ ಸಮ್ಮೇಳನದಲ್ಲಿ ಶ್ರೀ ಮಾಸ್ತಿ ಅವರು ಈ ವಿಷಯವನ್ನು ಕುರಿತು ಮಾತನಾಡಿದರು. ಮುಂದೆ ‘ಜಯ ಕನರ್ಾಟಕ’ ಪತ್ರಿಕೆಯವರು ಜನಪದ ಸಾಹಿತ್ಯವನ್ನು ಸಂಗ್ರಹಿಸುವ ಯತ್ನಗಳಿಗೆ ಪೋಷಣೆಯನ್ನೀಯಲು ಆ ಮಾಸಪತ್ರಿಕೆಯಲ್ಲಿ ಇಂದಿಗೂ ಪ್ರತ್ಯೇಕ ಪುಟಗಳನ್ನು ಕೊಡುತ್ತ ಬಂದಿರುವರು. ಈ ಮಧ್ಯದಲ್ಲಿಗೆ ಪ್ರಲ್ಹಾದ ನರೇಗಲ್ಲ ಅವರು ‘ಕನರ್ಾಟಕ ಕಾಲೇಜು’ ಪತ್ರಿಕೆಯಲ್ಲಿ ‘ವಾಸ್ತವ ಸಾಹಿತ್ಯ’ ಎಂಬ ಲೇಖನವನ್ನೂ, ಬೆಟಗೇರಿಯವರು ಪರಿಷತ್ ಪತ್ರಿಕೆಯಲ್ಲಿ ‘ಹಳ್ಳಿಗರ ಹಾಡುಗಳು’ ಎಂಬ ಸೋದಾಹರಣವಾದ ನಿಶಾಂತ ಮನೋಹರವಾದ ನಿಬಂಧವನ್ನೂ ಮುಂಬಯಿಯ ‘ಪ್ರಚೋದಕ’ ಮಾಸಪತ್ರಿಕೆಯ ಸಂಪಾದಕರು ಹಿರಿ ಬರಹವೊಂದನ್ನು ಬರೆದು ಜನಪದ ಸಾಹಿತ್ಯ ಸಂಗ್ರಹದ ಕಾರ್ಯವನ್ನೂ ಎತ್ತಿ ಹಿಡಿದಿದ್ದಾರೆ. ‘ಪ್ರಬುದ್ಧ ಕನರ್ಾಟಕ’, ‘ರಂಗಭೂಮಿ’, ‘ಕಥಾಂಜಲಿ’ ಮೊದಲಾದ ಪತ್ರಿಕೆಗಳಲ್ಲಿಯೂ ಜನಪದ ಸಾಹಿತ್ಯ ತಲೆದೋರದೆ ಇಲ್ಲ. ಈ ಪ್ರಯತ್ನಗಳ ಪ್ರಥಮ ಫಲವೆಂದು ಚನ್ನಮಲ್ಲಪ್ಪನವರೂ ಅವರ ಗೆಳೆಯರೂ ಪ್ರಮುಖತಃ ಸಂಗ್ರಹಿಸಿದ, ಸಂಪಾದಿಸಿದ ‘ಜನಪದ ಗಾಥಾ ಸಂಹಿತೆ’ (ಗರತಿಯ ಹಾಡು)ಯನ್ನೂ ಕನ್ನಡಿಗರಿಗೆ ಕೊಡುವ ಸುಯೋಗ ಉಂಟಾಗಿದೆ.’
ಆ ಕಾಲಕ್ಕೆ ಜಾನಪದವು ಉಂಟುಮಾಡಿದ ಆಕರ್ಷಣಾ ನೆಲೆಯನ್ನು ಬೇಂದ್ರೆಯವರು ಗುರುತಿಸುತ್ತ ಒಟ್ಟು ಕನ್ನಡದ ಸಂದರ್ಭದಲ್ಲಿ ಮುಖ್ಯಧಾರೆಯಾಗಿ ಪ್ರವಹಿಸಿದ್ದನ್ನು ಸ್ಪಷ್ಟಪಡಿಸಿದ್ದಾರೆ. ಈ ಕಾರ್ಯದಲ್ಲಿ ತಮ್ಮನ್ನು ತುಂಬಾ ಜಾಗೃತಿಯಿಂದ ತೊಡಗಿಸಿಕೊಂಡ ಬಿ.ಎಂ.ಶ್ರೀ ಅವರು ‘ಗರತಿಯ ಹಾಡು’ ಸಂಕಲನದ ಪ್ರಸ್ತಾವನೆಯಲ್ಲಿ ಅವರ ಜಾನಪದ ಧೋರಣೆಯನ್ನು ಅರಿಯಬಹುದು. ಉದ್ದಕ್ಕೂ ಕನ್ನಡ ಹಲವು ಪ್ರಭಾವಗಳಿಗೆ ಒಳಗಾಗಿ ಈ ಜಾನಪದೀಯ ಅಂಶಗಳಿಗೆ ಒಳಗು ಮಾಡಿಕೊಳ್ಳುತ್ತಿರುವ ಸಂದರ್ಭವನ್ನು ಗೌರವಪೂರ್ಣವಾಗಿ ಪ್ರಚುರಪಡಿಸುತ್ತಾರೆ. ಜನಪದ ಸಾಹಿತ್ಯವನ್ನು ಮಾತ್ರ ಉಳ್ಳ ಒಂದು ಜನಕ್ಕೆ ಆ ಸಾಹಿತ್ಯದ ಮಟ್ಟವನ್ನು ಮೀರಿ ಉತ್ತಮ ಕಾವ್ಯಗಳಿಂದ ಶೋಬಿತವಾದ ಸಾಹಿತ್ಯವನ್ನುಳ್ಳ ಜನರ ಸಂಪರ್ಕ ಉಂಟಾಗುವ ಸಂದರ್ಭ ಬಂದಾಗೆಲ್ಲಾ ಆ ಅನ್ಯ ಸಾಹಿತ್ಯದ ಸೌಂದರ್ಯಕ್ಕೂ, ಗಾಂಬಿರ್ಯಕ್ಕೂ ಮರುಳಾಗಿ ರಾಜಿಕ, ಸಾಮಯಿಕ ಕಾರಣಗಳಿಂದ ಆ ಸಾಹಿತ್ಯಕ್ಕೂ, ಸಾಹಿತ್ಯ ಶಾಸ್ತ್ರಕ್ಕೂ ಶರಣು ಹೋಗಿ, ಅದರ ಕಾಂತಿಯನ್ನು ಬಲವನ್ನು ಸ್ವೀಕರಿಸುವುದಕ್ಕೆ ಪ್ರಯತ್ನಿಸುವುದು ಸ್ವಾಭಾವಿಕವಾಗಿದೆ. ಹಿಂದೆ ಕನ್ನಡ ಸಂಸ್ಕೃತ ಸಮ್ಮೇಳನದಲ್ಲಿ ಹೀಗೆ ನಡೆಯಿತು. ಈಗ ಕನ್ನಡ ಸಂಸ್ಕೃತಿಯ ಸಹಚರ್ಯದಲ್ಲಿ ಹೀಗೆ ನಡೆಯುತ್ತಾ ಇದೆ. ಇದು ತಪ್ಪೆಂದಾಗಲಿ, ಕೆಳಗಿನ ಮಟ್ಟದ ಸಾಹಿತ್ಯವೇ ಉತ್ಕೃಷ್ಟವೆಂದಾಗಲಿ ಹೇಳಬೇಕೆಂದಲ್ಲ. ಆದರೆ ತನ್ನದನ್ನು ‘ದೇಶ್ಯ’ವೆಂದು ದಿಕ್ಕರಿಸಿ, ಅನ್ಯ ಮಾರ್ಗದಲ್ಲಿಯೇ ಸ್ವೇಚ್ಫೆಯಾಗಿ ಮದಿಸಿ ತಿರುಗುತ್ತಾ ಇದ್ದು ಕಡೆಗೆ ನವೀನತೆಯ ಕುತೂಹಲವೂ ಸಾಮಥ್ರ್ಯವೂ ಕಾಲಕ್ರಮದಲ್ಲಿ ಹಳಸಿ, ಯಾವ ನಿಜವಾದ ಸತ್ತ್ವವೂ ಇಲ್ಲದೆ, ಜನರಿಂದ ದೂರವಾಗಿ ಸಾಹಿತ್ಯವು ನಿಸ್ಸಾರವಾಗುವುದು, ತೇಜೋಹೀನವಾಗುವುದು. ಆಗ ಮತ್ತೆ ಹಳೆಯ ಸಾಹಿತ್ಯದ ಪುನರುತ್ಥಾನವಾಗುವುದು. ಮತ್ತೆ ಸಹೃದಯರು ತವರುನಾಡಿನ, ತಾಯಿ ಹಾಡಿನ ಹಾಲನ್ನು ಕುಡಿದು ಸಜೀವರಾಗಬೇಕೆಂದು ಹಿಂತಿರುಗುವರು. ಜನರೊಡನೆ ಜನವಾಗುವರು. ಆ ಭಾಷಾ, ಆ ಛಂದಸ್ಸು, ಆ ಜೀವ ಮತ್ತೆ ಹೊಳಪುಗೂಡಿ ಹೆಮ್ಮೆಗೇರುವುದು… ಕನ್ನಡದಲ್ಲಿ ಇಂಥ ಕಾಲ ಒದಗಿರುವಾಗ ಕನ್ನಡ ಕವಿತೆ ತನ್ನ ಅಳತೆಯನ್ನೇ ಅಲ್ಲ, ಆಳವನ್ನೂ ಕೂಡ ಕಂಡುಕೊಳ್ಳುತ್ತಿರುವಾಗ, ಸಂಸ್ಕೃತ-ಇಂಗ್ಲಿಷ್ ಸಾಹಿತ್ಯಗಳ, ಇತರ ಸಾಹಿತ್ಯಗಳ, ಸರಿಯಾದ ಸಂಸ್ಕಾರದ ಜೊತೆಗೆ ಕನ್ನಡದ ಪ್ರೌಢಸಾಹಿತ್ಯದ ವ್ಯಾಸಂಗದ ಜೊತೆಗೆ, ಕನ್ನಡದ ಮತ್ತು ಇತರ ಸಾಹಿತ್ಯದ ಜನಪದ ಸಾಹಿತ್ಯವನ್ನು ಪರಾಮಶರ್ಿಸುವುದು ಅತ್ಯಾವಶ್ಯಕವಾದ ಕರ್ತವ್ಯ ಎಂದರು ಬಿ.ಎಂ.ಶ್ರೀ ಅವರು.
ಬಿ.ಎಂ.ಶ್ರೀ ಅವರು ಉತ್ತರ ಕನರ್ಾಟಕಕ್ಕೆ ಬಂದಾಗಲೆಲ್ಲ ಅವರು ಇಲ್ಲಿನ ಜಾನಪದದ ಬಗೆಗಿನ ಆಸಕ್ತಿದಾಯಕ ಕೆಲಸಗಳನ್ನು ಗಮನಿಸಿ, ಅದರ ಶ್ರೇಯಸ್ಸಿಗಾಗಿ ತಮ್ಮ ಚಿಂತನೆಯನ್ನು ಜೊತೆ ಸೇರಿಸಬೇಕಾಯಿತು. 1929ರಲ್ಲಿ ಸಾಹಿತ್ಯ ಸಮ್ಮೇಳನ ಬೆಳಗಾವಿಯಲ್ಲಿ ಜರುಗಿದಾಗ ಅಲ್ಲಿ ಬಿ.ಎಂ.ಶ್ರೀ ಅವರು ಆಗಮಿಸಿದ್ದರು. ಬಿ.ಎಂ.ಶ್ರೀ ಅವರ ಎದುರಿನಲ್ಲಿ ಬೆಟಗೇರಿ ಕೃಷ್ಣಶರ್ಮರು ಜನಪದ ತ್ರಿಪದಿಗಳನ್ನು ಧಾಟಿ ಲಯಬದ್ಧವಾಗಿ ಹಾಡಿದರು. ಅಲ್ಲದೆ ತಮ್ಮ ಭಾವಗೀತೆಗಳನ್ನು ಅದೇ ಧಾಟಿ ಲಯಗಳೊಂದಿಗೆ ಹಾಡಿ ಜಾನಪದ ಸೊಬಗನ್ನು ಸೂಚಿಸಿದರು. ಬಿ.ಎಂ.ಶ್ರೀಕಂಠಯ್ಯನವರು ಅತೀ ಮೆಚ್ಚಿಕೊಂಡರು.ಪದೇಪದೇ ಬೆಟಗೇರಿ ಅವರನ್ನೂ ಹೊಗಳಿದರು. ”ಜನಪದ ಸಾಹಿತ್ಯವನ್ನು ಬರೆದು ಜನತೆಗೆ ತೋರಿಸಲು ನಿಮಗೆಲ್ಲ ನನ್ನ ಕೋರಿಕೆ ಇದೆ” ಎಂದು ನುಡಿದರು.ಇಷ್ಟಲ್ಲದೆ ‘ಜಯ ಕನರ್ಾಟಕ’ದಲ್ಲಿ ಬರುತ್ತಿದ್ದ ಜಾನಪದ ಸಂಬಂದಿ ಲೇಖನಗಳು ಶ್ರೀಯವರಲ್ಲೂ ಒಂದು ಬಗೆಯ ಆಕರ್ಷಕ ನೆಲೆಯನ್ನು ಪ್ರತಿಷ್ಠಾಪಿಸಿತು. ವಸಾಹತುಶಾಹಿ ಇಂಗ್ಲಿಷ್ ಶಿಕ್ಷಣ ಕ್ರಮ ರಾಜಕೀಯ ಮತ್ತು ಧಾಮರ್ಿಕ ಕಾರಣಗಳಿಗಾಗಿ ಅದರ ಅಂತಿಮ ಗುರಿಯ ಬಣ್ಣ ಬಯಲಾಗುತ್ತಿರುವ ಹೊತ್ತಿಗೆ ಸಂಸ್ಕೃತದೆಡೆಗೆ ಮತ್ತೆ ಹೊರಳುವ ಮತ್ತು ಅದರ ಬಗೆಯಲ್ಲಿ ರಚನೆಗಿಳಿದಿರುವ ಸಂದರ್ಭವೂ ಮೂಡಿರುವ ಸಾಧ್ಯತೆ ಇದೆ. ಆದರೆ ಮಧುರಚೆನ್ನ, ಮಾಸ್ತಿ, ಬೇಂದ್ರೆ, ಆನಂದಕಂದ ಮೊದಲಾದವರು ಆ ಕಾಲಕ್ಕೆ ಉಂಟುಮಾಡಿದ ಜಾನಪದ ಜಾಗೃತಿ ಶ್ರೀ ಕುವೆಂಪು ಮೊದಲಾದವರಲ್ಲಿ ಉಂಟುಮಾಡಿದ ಚೇತನ ಕನ್ನಡದ ಸಂದರ್ಭದಲ್ಲಿ ಮರೆಯಲಾಗದಂತಹುದು. ಹೀಗೆ ಪ್ರಭುತ್ವದ ಅನುಭವ, ಮತ್ತು ಪರಿಕಲ್ಪನೆಯ ಚೌಕಟ್ಟನ್ನು ಮೀರಿ ಶ್ರೀಯವರು ಜಾನಪದವನ್ನು ಕಂಡ ಹೊಸ ಬಗೆಯ ದೃಷ್ಟಿಕೋನದಿಂದ ನವೋದಯ ಕಾವ್ಯ ಚೇತನಕ್ಕೆ ಮೊದಲಾದ ಸಂದರ್ಭವನ್ನು ಈ ನೆಲೆಯಲ್ಲಿ ಹೀಗೆ ವಿಶ್ಲೇಷಿಸಲಿಕ್ಕೆ ಸಾಧ್ಯವಾಗಿದೆ. ಹಾಗಾಗಿ ಕನ್ನಡ ನವೋದಯ ಕಾವ್ಯ ರೂಪುಗೊಳ್ಳಲು ವಿಬಿನ್ನ ಅನುಭಾವ, ಭಾಷೆ ಶಿಲ್ಪ ಮತ್ತು ಮನೋಧರ್ಮಗಳು ಕಾರಣವಾದವು ಎನ್ನುವುದಕ್ಕಿಂತ ಕನ್ನಡ ಕಾವ್ಯಕ್ಕೆ ಹೊಸದಿಕ್ಕನ್ನು ತೆರೆದುತೋರಿದ ಜಾನಪದವೇ ಮೂಲ ಪ್ರೇರಣೆಯಾಗಿ ನಿಂತದ್ದು ಈ ಬಗೆಯ ರಚನೆಗಳು ಹೆಚ್ಚು ಜನಪರವಾದುದನ್ನು ಅಲ್ಲಗಳೆಯುವಂತಿಲ್ಲ.
 

‍ಲೇಖಕರು G

28 January, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading