ಸಿದ್ಧರಾಮ ಕೂಡ್ಲಿಗಿ
ಸುದೀರ್ಘ ಕಾಲದ ಲಾಕ್ ಡೌನ್ ಮುಗಿದ ನಂತರ ಇತ್ತೀಚೆಗೆ ಅನಿವಾರ್ಯ ಕಾರ್ಯ ನಿಮಿತ್ಯ ಮುಂಡರಗಿ ಕಡೆ ಹೊರಟಿದ್ದೆ. ಹೂವಿನ ಹಡಗಲಿ ಪ್ರದೇಶ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಹೋಗುತ್ತಿರಬೇಕಾದಾಗ ಆಕಸ್ಮಿಕವಾಗಿ ರಸ್ತೆಯ ಬಲಭಾಗದಲ್ಲಿ ನೂರಾರು ಪುಟ್ಟ ಮಡಕೆಗಳು ಕಂಡವು. ಅದಕ್ಕಿಂತಲೂ ನನ್ನನ್ನು ತಕ್ಷಣ ಆಕರ್ಶಿಸಿದ್ದು ಎರಡು ಗೊಂಬೆಗಳು. ತಕ್ಷಣ ನೋಡಿದರೆ ಯಾರೋ ಪುಟ್ಟ ಹುಡುಗಿ ಕುಳಿತಿದ್ದಾಳೆಂದೇ ಭಾಸವಾಗುವ ಈ ಗೊಂಬೆಗಳು ನನ್ನ ಕುತೂಹಲ ಕೆರಳಿಸಿದವು. ತಕ್ಷಣ ಕಾರು ನಿಲ್ಲಿಸಿ ನೋಡಲು ಹೋದೆ.
ನೂರಾರು ಪುಟ್ಟ ಖಾಲಿ ಮಡಕೆಗಳು. ಮಡಕೆಗಳಿಗೆ ಹಸಿರು ಬಳೆಗಳನ್ನು ಕಟ್ಟಲಾಗಿತ್ತು. ಕೆಲವು ಸ್ವಲ್ಪ ದೊಡ್ಡದಾದ ಮಡಕೆಗಳ ಮೇಲೆ ಮನುಷ್ಯಾಕೃತಿಯನ್ನು ಹೋಲುವ ಮಣ್ಣಿನ ಮುಚ್ಚಳಗಳು. ಇನ್ನು ಗೊಂಬೆಗಳನ್ನೂ ಪರಿಶೀಲಿಸಿದೆ. ಹಸಿರೇ ಪ್ರಧಾನವಾಗಿರುವ ಸೀರೆಗಳನ್ನು ಉಟ್ಟಿದ್ದ ಈ ಗೊಂಬೆಗಳು ಕಟ್ಟಿಗೆಯದ್ದಾಗಿದ್ದವು. ತಲೆಗೆ ಕೂದಲನ್ನೂ ಸಹ ಯಥಾವತ್ತಾಗಿ ಕೂರಿಸಲಾಗಿತ್ತು.
ಒಂದು ಗೊಂಬೆ ಕುಳಿತಿದ್ದರೆ ಮತ್ತೊಂದು ನೆಲದ ಮೇಲೆ ಉರುಳಿತ್ತು. ಎರಡೂ ಗೊಂಬೆಗಳು ಗಾಲಿಯ ಬಂಡಿಯಲ್ಲಿ ಕುಳಿತಿದ್ದವು. ಪ್ರಮಾಣಬದ್ಧವಾದ ಮಟಸ ಆಕಾರದ ಈ ಗೊಂಬೆಗಳ ಮುಖಗಳೂ ಸಹ ಅತ್ಯಂತ ಸ್ಫುಟವಾಗಿ ಕೆತ್ತನೆ ಮಾಡಲಾಗಿತ್ತು. ಒಂದು ಕೈಯಲ್ಲಿ ಖಡ್ಗ ಮತ್ತೊಂದು ಕೈಯಲ್ಲಿ ಏನನ್ನೋ ಹಿಡಿದುಕೊಂಡಂತಿದ್ದವು. ತುಂಬಾ ಹೊತ್ತಿನವರೆಗೂ ಇವುಗಳನ್ನು ನೋಡುತ್ತಿದ್ದೆ. ಈ ಗೊಂಬೆಗಳ ಮುಂದೆಯೇ ಕೆಂಪು, ಕಪ್ಪು ಪುಟ್ಟ ಖಾಲಿ ಮಡಕೆಗಳು ನೂರಾರು ಬಿದ್ದಿದ್ದವು.

ಊರಿನ ಆರೋಗ್ಯಕ್ಕಾಗಿ, ಅಭಿವೃದ್ಧಿಗಾಗಿ ಊರಿಗೆ ಊರೇ ಗುಳೆ ಹೋಗಿ ಒಂದು ದಿನದಲ್ಲಿಯೇ ಮತ್ತೆ ಮರಳಿ ಊರಿಗೆ ಬರುವ ಆಚರಣೆಗಳು ಕೆಲವು ಗ್ರಾಮಗಳಲ್ಲಿವೆ. ಕೆಲವು ಗ್ರಾಮಗಳಲ್ಲಿ ಗ್ರಾಮ ದೇವತೆಗೆ ಹೋಳಿಗೆ ನೈವೇದ್ಯ ಎಂದು ಮಡಕೆಯಲ್ಲಿ ಹೋಳಿಗೆಯನ್ನಿಟ್ಟುಕೊಂಡು ಹೋಗಿ ದೇವತೆಯ ಮುಂದೆ ಇರಿಸಿ ಬರುವ ಆಚರಣೆಗಳಿವೆ.
ಕೆಲವು ಗ್ರಾಮಗಳಲ್ಲಿ ಊರಿಗೆ ಕೇಡು ಬಂದಾಗ, ಈ ರೀತಿ ಕೇಡನ್ನು ಗೊಂಬೆಗಳಿಗೆ ಆವಾಹಿಸಿ ಅವುಗಳನ್ನು ಊರ ಹೊರಗೆ ಬಿಟ್ಟು ಬರುವ ಪರಿಪಾಠವಿದೆ. ಪುಟ್ಟ ಮಡಕೆಗಳಲ್ಲಿ ಬೇವಿನ ಎಲೆಗಳನ್ನಿರಿಸಿಕೊಂಡು, ಹಸಿರುಬಳೆಗಳನ್ನು ಕಟ್ಟಿ, ಅವುಗಳನ್ನು ಒಯ್ದು ಊರ ಹೊರಗೆ ಸಲ್ಲಿಸಿಬರುವ ಆಚರಣೆಗಳಿವೆ. ಇದರಿಂದ ಊರಿಗೆ ಬರುವ ಪಿಡುಗು ದೂರ ಹೋಗುವುದು ಎಂಬ ಒಂದು ಜನಪದೀಯ ನಂಬಿಕೆಯಿದೆ.
ಇಲ್ಲಿಯೂ ಸಹ ಅಂಥದೇ ಆಚರಣೆ ಇರಬಹುದೆಂದು ನಾನು ಊಹಿಸಿದೆ. ಕೈಯಲ್ಲಿ ಖಡ್ಗ ಹಿಡಿದಿರುವ ಗೊಂಬೆ ಎಂದರೆ ಕೆಡಕಿನ ವಿರುದ್ಧ ಹೋರಾಟ ಮಾಡುವುದರ ಸಂಕೇತ ಇರಬಹುದು. ಒಟ್ಟಾರೆ ಅಲ್ಲಿ ಇಡೀ ಗ್ರಾಮವೇ ಬಂದು ಈ ಆಚರಣೆಯಲ್ಲಿ ಪಾಲ್ಗೊಂಡಂತಹ ಕುರುಹುಗಳು ಅಲ್ಲಿದ್ದವು. ಇಲ್ಲಿ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಯಾವುದೇ ಪದಾರ್ಥಗಳು ನನಗೆ ಕಾಣಲಿಲ್ಲ.
ಮಣ್ಣಿನ ಮಡಕೆಗಳು ಮಳೆಯಲಿ ಕರಗಿ ಕ್ರಮೇಣ ಮಣ್ಣಾಗುತ್ತವೆ. ಕಟ್ಟಿಗೆಯ ಗೊಂಬೆಗಳೂ ಸಹ ಕೊಳೆತು ಮಣ್ಣಲ್ಲಿ ಮಣ್ಣಾಗುತ್ತವೆ. ಕೆಲವೇ ತಿಂಗಳಲ್ಲಿ ಅಲ್ಲಿ ಯಾವುದೇ ಕುರುಹುಗಳೂ ಉಳಿಯುವುದಿಲ್ಲ. ಹೀಗಾಗಿ ಈ ಆಚರಣೆಯಲ್ಲಿ ಪರಿಸರಕ್ಕೆ ಹೊಂದಿಕೊಳ್ಳುವ ವಸ್ತುಗಳನ್ನಷ್ಟೇ ಬಳಕೆ ಮಾಡಿರುವುದು ಸ್ಪಷ್ಟ.

ಇನ್ನು ಇದೊಂದು ಮೂಢ ನಂಬಿಕೆ ಎನ್ನಬಹುದೆ ? ಹೀಗೆ ಮಾಡಿದರೆ ಪಿಡುಗು ಹೋಗುತ್ತದೆಯೇ ? ಎಂದು ಪರಿಶೀಲಿಸಿದಾಗ, ಇದೊಂದು ಜನಪದೀಯ ಅಚರಣೆ ಹಾಗೂ ನಂಬಿಕೆಯ ತಳಹದಿಯ ಮೇಲೆ ನಿಂತಿದೆ. ವಿಚಿತ್ರವೆಂದರೆ ನಮ್ಮ ಜನರೇ ಲಕ್ಷಾಂತರ ರೂಗಳನ್ನು ವೆಚ್ಚ ಮಾಡಿ, ವಿದೇಶಗಳಿಗೆ ಹೋದಾಗ ಉದಾ : ಕೆನ್ಯಾ, ಆಫ್ರಿಕಾ, ಮುಂತಾದ ಕೆಲವು ಬಡ ರಾಷ್ಟ್ರಗಳಲ್ಲಿಯ ಅಲ್ಲಿಯ ಗ್ರಾಮೀಣ ಭಾಗಗಳಿಗೆ ಭೇಟಿ ನೀಡಿದಾಗ ನಮ್ಮವರೇ ಅಲ್ಲಿಯ ಜನರ ಇಂಥದೇ ಆಚರಣೆಗಳನ್ನು, ನಂಬಿಕೆಗಳನ್ನು ‘ಅತ್ಯಂತ ಸುಂದರ ಕಲೆ ಎಂದೋ, ಆಚರಣೆಗಳೆಂದೋ, ಸಾಂಪ್ರದಾಯಿಕ ಪರಂಪರೆ ಎಂದೋ, ಕಲಾತ್ಮಕ ಆಚರಣೆಗಳು ಎಂದೋ’ ಅವರೊಂದಿಗೆ ಆ ಕಲೆಗಳೊಂದಿಗೆ ನಿಂತು ಫೋಟೊ ತೆಗೆಸಿಕೊಂಡು ಬೃಹತ್ ಕೃತಿಗಳನ್ನು ರಚಿಸುತ್ತಾರೆ, ಇಲ್ಲವೇ ಪತ್ರಿಕೆಗಳಿಗೆ ಬರೆಯುತ್ತಾರೆ.
ಪತ್ರಿಕೆಗಳೋ ಅವುಗಳನ್ನು ವೈಭವೀಕರಿಸಿ ಫೋಟೊಗಳನ್ನೂ ದೊಡ್ಡದಾಗಿ ಪ್ರಕಟಿಸಿ, ಅದೊಂದು ಅದ್ವಿತೀಯ ಲೇಖನ ಎಂದೇ ಪ್ರಕಟಿಸುತ್ತವೆ. ಆದರೆ ನಮ್ಮ ದೇಶದಲ್ಲಿ ಇದೇ ಜನ ಅವುಗಳನ್ನು ತಿರುಗಿಯೂ ನೋಡದೇ ‘ಥತ್ ಮೂಢ ನಂಬಿಕೆಯ ಜನ, ಅರ್ಥವಿಲ್ಲದ ಆಚರಣೆಗಳು, ಕೆಲಸಕ್ಕೆ ಬಾರದ ನಂಬಿಕೆ ಹಾಗೂ ಕುರುಡು ಆಚರಣೆಗಳು’ ಎಂದು ಹೀಗಳೆಯುತ್ತಾರೆ. ಅಲ್ಲಿ ಯಾಕೆ ಹಾಗೆ ? ಇಲ್ಲಿ ಯಾಕೆ ಹೀಗೆ ? ಎಂಬುದು ನನ್ನ ಪ್ರಶ್ನೆ.
ಇಲ್ಲಿ ಮೂಢ ನಂಬಿಕೆ ಎನ್ನುವುದಕ್ಕಿಂತ ಪರಂಪರಾಗತವಾಗಿ ಬಂದ ಒಂದು ನಂಬಿಕೆ ಇದೆ. ಆ ನಂಬಿಕೆ ಇಂಥ ವಿಶಿಷ್ಟವಾದ ಜಾನಪದೀಯ ಅಂಶಗಳ ತಳಹದಿಯ ಮೇಲೆ ನಿಂತಿದೆ. ಈ ಆಚರಣೆಯಲ್ಲಿ ಪಾಲ್ಗೊಳ್ಳುವವರಲ್ಲಿ ಒಂದು ತೆರನಾದ ಭಕ್ತಿ, ನಂಬಿಕೆ ಇರುತ್ತದೆಯೇ ಹೊರತು ಯಾರಿಗೂ ಹಾನಿ ಮಾಡುವಂಥದ್ದೇನೂ ಇರುವುದಿಲ್ಲ. ಹಾಗೆ ನೋಡಿದರೆ ಇಂಥವುಗಳು ಈ ನೆಲದ ವಿಶಿಷ್ಟ ಸಂಸ್ಕೃತಿಯ ಒಂದು ಭಾಗಗಳೇ ಆಗಿವೆ.

ಕಾರಣ ಯಾವುದನ್ನೇ ಆಗಲಿ ನಾವು ನೋಡುವ ದೃಷ್ಟಿಕೋನದ ಮೇಲೆ ಹೋಗುತ್ತದೆ. ವಿದೇಶದಲ್ಲಿ ಇಂಥವೇ ಆಚರಣೆಗಳು ‘ಪರಂಪರಾಗತ ವಿಶಿಷ್ಟ, ಅದ್ವಿತೀಯ, ಕಲಾತ್ಮಕ ಆಚರಣೆಗಳು’ ಎಂಬಂತೆ ಕಂಡರೆ, ‘ನಮ್ಮಲ್ಲಿ ಇಂಥ ಆಚರಣೆಗಳು ಮೂಢನಂಬಿಕೆ, ಕೆಲಸಕ್ಕೆ ಬಾರದವುಗಳು’ ಎನಿಸಿಕೊಳ್ಳುತ್ತಿರುವುದೇ ವಿಪರ್ಯಾಸ.
ಅಲ್ಲಿಯ ಪಳೆಯುಳಿಕೆಯಂತಹ ವಸ್ತುಗಳನ್ನು ನೋಡುತ್ತಿರುವಾಗ, ಮನಸಿನಲ್ಲಿಯೇ ಚಿತ್ರವನ್ನು ಕಲ್ಪಿಸಿಕೊಂಡೆ. ಅತ್ಯಂತ ವೈಭವದಿಂದ ಮೆರವಣಿಗೆಯಲ್ಲಿ ಬಹುಶ: ಈ ಗೊಂಬೆಗಳನ್ನು ಹೊತ್ತು ತಂದಿರುತ್ತಾರೆ. ಅದರೊಂದಿಗೆ ಹೆಂಗಳೆಯರು ಭಕ್ತಿಭಾವದಿಂದ ಪುಟ್ಟ ಮಡಕೆಗಳನ್ನು ಹಿಡಿದುಕೊಂಡು ಬಂದು ಇಲ್ಲಿ ಇರಿಸಿ ಮರಳಿ ಗ್ರಾಮಕ್ಕೆ ಹೋಗಿರುತ್ತಾರೆ ಎಂಬ ಎಲ್ಲ ದೃಶ್ಯ ವೈಭವವೂ ಕಣ್ಮುಂದೆ ಸುರುಳಿಯಾಗಿ ಬಿಚ್ಚಿತು.
ಏನೆಂದರೂ ನನ್ನೊಳಗೆ ಒಂದು ಚಿಂತನೆಗೆ ಹಚ್ಚಿದ ಈ ಆಚರಣೆಗೆ ಧನ್ಯವಾದಗಳು, ಹಾಗೂ ಅಪರಿಚಿತ ಗ್ರಾಮಸ್ಥರಿಗೂ ಧನ್ಯವಾದಗಳು.







Lovely article, Siddarama Kudligi! And so beautifully argued too … belief, blind belief, and ritual … enjoyed reading this … a good example of how a random sighting beside the road arouses curiosity and engages the mind …
ಚಿಂತನೆಗೆ ಹಚ್ಚಿದ್ದೀರಿ sir. Thanku ಒಳ್ಳೆಯ ಲೇಖನಕ್ಕಾಗಿ