ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಆಹಾರ ಭದ್ರತೆಯ ಅರಿಯಲೆತ್ನಿಸದ ಭೈರಪ್ಪನವರ ಭೌದ್ಧಿಕ ಸೋಮಾರಿತನ’ – ಜಿ ಎನ್ ನಾಗರಾಜ್

ಅನ್ನಭಾಗ್ಯ, ಆಹಾರ ಭದ್ರತೆ, ಅನ್ನಭಾಗ್ಯದ ವಿರೋಧದ ಹೇಳಿಕೆಗಳ ಬಗ್ಗೆ ಈ ಹಿಂದೆ ಜಿ ಎನ್ ನಾಗರಾಜ್ ಬರೆದಿದ್ದರು.

ಆ ಬರಹದ ಮುಂದುವರೆದ ಭಾಗ ಇಲ್ಲಿದೆ.

ಜಿ ಎನ್ ನಾಗರಾಜ್

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೃಷಿ ಮತ್ತು ಆಹಾರ ಸಂಸ್ಥೆ ಗಳು ವಿವರಿಸಿದಂತೆ ಆಹಾರ ಭದ್ರತೆ ಎಂದರೆ ಎಲ್ಲ ಜನರಿಗೂ ಎಲ್ಲ ಕಾಲದಲ್ಲಿಯೂ ಕ್ರಿಯಾಶೀಲವಾದ ,ಆರೋಗ್ಯಕರವಾದ ಬದುಕನ್ನು ನಡೆಸಲು ಅವಶ್ಯವಿರುವಷ್ಟು , ಕ್ಷೇಮಕರವಾದ ,ಪೋಷಕಾಂಶಪೂರಿತ ಆಹಾರ ದೊರಕುವುದೇ ಆಹಾರ ಭದ್ರತೆ .
ಇದರಲ್ಲಿ ಆಹಾರ ವಸ್ತುಗಳು ಲಭ್ಯವಿರುವುದು , ಅದನ್ನು ಕೊಳ್ಳುವ ಶಕ್ತಯಿರುವುದು ಎರಡೂ ಸೇರಿದೆ. ಕುಟುಂಬಗಳ ನಡುವೆ ಆಹಾರ ವಿತರಣೆ ಮಾತ್ರವಲ್ಲದೆ ಮನೆಯೊಳಗಿನ ಜನರ –ಅಂದರೆ ಗಂಡಸರು, ಹೆಂಗಸರು, ಮಕ್ಕಳು, ವೃದ್ಧರು ಇವರ ನಡುವಣ ಆಹಾರ ಹಂಚಿಕೆಯೂ ಸೇರಿದೆ.
ಯಾರೂ ಹಸಿವಿನಿಂದ ಸಂಕಟಕ್ಕೊಗಾಗಬಾರದು, ಹಸಿವಿನ ಭಯದಿಂದ ಕೊರಗಬಾರದು, ಅದನ್ನು ತಪ್ಪಿಸಿಕೊಳ್ಳುವುದಕ್ಕೆ ತಮ್ಮ ದೇಹ ಮಾರಿಕೊಳ್ಳುವ , ಕೈಲಾಗದಿದ್ದರೂ ದುಡಿಯುವ( ವಯಸ್ಸಾಗಿದ್ದರೂ, ರೋಗದಿಂದ ನರಳುತ್ತಿದ್ದರೂ, ದುಡಿಯುವ ವಯಸ್ಸಲ್ಲದ ಬಾಲಕ/ಬಾಲಕಿಯರು ), ದುಡಿಯುವ ಅನಿವಾರ್ಯತೆ ಬರಬಾರದು.
ಈ ಅಂಶಗಳು ಆಹಾರ ಭದ್ರತೆಯೆಂಬ ಪರಿಕಲ್ಪನೆಯಲ್ಲಿ ಒಳಕೊಂಡಿವೆ. ಅನ್ನ ಭಾಗ್ಯ ಯೋಜನೆಯನ್ನು ಹೀಗಳೆಯುತ್ತಿರುವವರಿಗೆ ಈ ಆಹಾರ ಭದ್ರತೆಯ ಈ ಸಾಮಾಜಿಕ-ಆರ್ಥಿಕ ಅಂಶಗಳ ಕನಿಷ್ಠ ತಿಳುವಳಿಕೆ ಇದೆಯೇ? ಇದು ಒಂದು ಕಡೆಯಾದರೆ ಅನ್ನಭಾಗ್ಯ ಎಂಬ ಯೋಜನೆಯಲ್ಲಿ ಈ ಸಮಗ್ರವಾಗಿ ಈ ಆಯಾಮಗಳನ್ನೆಲ್ಲಾ ಪರಿಗಣಿಸಿದ್ದಾರೆಯೇ ಎಂಬುದು ಮತ್ತೊಂದು ಕಡೆ ಕೇಳಬೇಕಾದ ಪ್ರಶ್ನೆ.
ಈಗ ನಮ್ಮ ದೇಶದಲ್ಲಿನ ವಾಸ್ತವ ಪರಿಸ್ಥಿತಿಯಲ್ಲಿ ಆಹಾರ ಭದ್ರತೆಯ ಚಿತ್ರಣ ಏನು ಎಂಬುದನ್ನು ನೋಡೋಣ. ಈ ಬಗ್ಗೆ ಕೆಲ ಅಂಶಗಳು ಬೇರೆ ಬೇರೆ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಬಂದಿದ್ದರೂ ಅದನ್ನು ಸಮಗ್ರವಾಗಿ ಪರಿಶೀಲಿಸೋಣ.

ಆಹಾರ ಭದ್ರತೆಯೆಂದರೆ ದಿನಕ್ಕೆ ಕನಿಷ್ಟ ಭಾರತದಲ್ಲಿ 2340( ವಿಶ್ವ ಮಟ್ಟದಲ್ಲಿ 2700) ಕ್ಯಾಲೊರಿಗಳಷ್ಟು ಶಕ್ತಿಯನ್ನು ಒದಗಿಸುವ , ಪ್ರೋಟೀನು, ಇತರ ಪೋಷಕಾಂಶಗಳು ಆ ಆಹಾರದ ಮೂಲಕ ಲಭ್ಯವಾಗಬೇಕು. ಅದಕ್ಕಾಗಿ ಎಷ್ಟು ಧಾನ್ಯ, ಬೇಳೆ, ಕಾಳು, ತರಕಾರಿ , ಹಾಲು, ಮಾಂಶ. ಮೊಟ್ಟೆ ಇಂತಹವೆಲ್ಲಾ ಬೇಕೆಂಬ ಲೆಕ್ಕಾಚಾರವನ್ನು ದೇಶದ ಸಂಶೋಧನಾ ಸಂಸ್ಥೆಗಳುನೀಡಿವೆ.
ವಿವಿಧ ರೀತಿಯ ಶ್ರಮದ ಕೆಲಸ ಮತ್ತು ವಿವಿಧ ವಯೋಮಾನಗಳಿಗೆ ಬೇರೆ ಬೇರೆ ಅಗತ್ಯಗಳನ್ನು ಲೆಕ್ಕಿಸಲಾಗಿದೆ. ಆ ವಿವರಗಳಿಗೆ ಲೇಖನವನ್ನು ಬಹಳ ವಿಸ್ತರಿಸಿ ಬಿಡುವುದರಿಂದ ಅದನ್ನು ಇಲ್ಲಿ ನೀಡಲಾಗಿಲ್ಲ.

ಆದರೆ ಇಂದು ವಿವಿಧ ಆದಾಯದ ಹಂತಗಳಲ್ಲಿರುವವರು ತಿನ್ನುವ ಆಹಾರದಿಂದ ದೊರಕುವ ಕ್ಯಾಲೊರಿಗಳೆಷ್ಟು ಎಂಬುದನ್ನು ನೋಡೋಣ:
ಕೆಳಗಿನ ಕಾಲು ಭಾಗ——–1624
ಎರಡನೆಯ ಕಾಲು ಭಾಗ—–1900
ಮೂರನೆಯ ಕಾಲು ಭಾಗ—–2143
ಅತಿ ಮೇಲಿನ ಕಾಲು ಭಾಗ—-2521
ಈ ಸಮೀಕ್ಷೆಯಂತೆ ಅತ್ಯಂತ ಮೇಲುಭಾಗದ ಕಾಲು ಭಾಗ ಹೊರತಾಗಿ ಮುಕ್ಕಾಲು ಭಾಗದಷ್ಟು ಜನರಿಗೆ ಅವರ ದೇಹದ ಕ್ಯಾಲೋರಿ ಅಗತ್ಯಗಳು ಪೂರೈಸುತ್ತಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಅದರಲ್ಲಿಯೂ ಕೂಡ ದೇಶದ ಅತಿ ಬಡವರಾದ ಕೆಳಗಿನ ಶೇ ಹತ್ತರಷ್ಟು ಭಾಗದ ಜನಕ್ಕೆ ಸಿಗುವ ಕ್ಯಾಲೋರಿಗಳು ಕೇವಲ 1485 ಕ್ಯಾಲೊರಿಗಳು. ಇದರ ಅರ್ಥವೇನು? ದೈಹಿಕವಾಗಿ ಅತಿ ಹೆಚ್ಚು ದುಡಿಯುವ ಜನರಿಗೆ ಬೇಕಾದ ಶಕ್ತಿ ಲಭ್ಯವಿಲ್ಲ.  ಆದರೆ ದೈಹಿಕ ಶ್ರಮವಿಲ್ಲದ ಮತ್ತು ಅದರಿಂದಾಗಿ ಕಡಿಮೆ ಕ್ಯಾಲೊರಿ ಅಗತ್ಯವಿರುವ ಮೇಲ್ವರ್ಗದ ಜನರಿಗೆ ಅತಿ ಹೆಚ್ಚು ಕ್ಯಾಲೊರಿ ಲಭ್ಯ .ಇಂತಹ ಸಂದರ್ಭದಲ್ಲಿ ಸ್ವಲ್ಪ ಅಕ್ಕಿ ಕಡಿಮೆ ಬೆಲೆಗೆ ದೊರೆತರೆ ಅವರ ದುಡಿಮೆಯ ಶಕ್ತಿ ಹೆಚ್ಚುತ್ತದೆಯೋ ಅಥವಾ ಸೋಮಾರಿತನ ಹೆಚ್ಚುತ್ತದೆಯೋ? ಈ ಕಾರಣಕ್ಕಾಗಿಯೇ ಬಿಪಿಎಲ್ ಕುಟುಂಬಗಳಿಗೆ ಮಾತ್ರ ಅಲ್ಲದೆ ಎಲ್ಲರಿಗೂ ಪಡಿತರ ಚೀಟಿ ಮತ್ತು ಆಹಾರ ಧಾನ್ಯ ನೀಡುವ ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಕೇವಲ ಎಡಪಂಥೀಯರಲ್ಲದೆ ಆಹಾರದ ಹಕ್ಕಿನ ಆಂದೋಲನದವರೂ ಒತ್ತಾಯ ಮಾಡುತ್ತಿರುವುದು.
ಈ ರೀತಿಯ ಆಹಾರ ಕೊರತೆಯಿಂದಾಗಿ
ನಮ್ಮ ದೇಶದಲ್ಲಿ ಶೇ. 80ರಷ್ಟು ಮಕ್ಕಳು ಮತ್ತು ಮಹಿಳೆಯರೂ ಕೂಡ ರಕ್ತಹೀನತೆಯಿಂದ ಬಳಲುತ್ತಿದ್ದಾರೆ.
ಶೇ. 45.90 ರಷ್ಟು ಮಕ್ಕಳ ತೂಕ ಅವರ ವಯೋಮಾನಕ್ಕೆ ಹೋಲಿಸಿದರೆ ಕಡಿಮೆ.ಶೆ.38.4ರಷ್ಟು ಕೃಶ ದೇಹಿಗಳು, ಶೇ. 19ರಷ್ಟು ಮಕ್ಕಳು ಇನ್ನು ಮುಂದೆ ಆಹಾರ ದೊರೆತರೂ ಸುಧಾರಿಸಲಾಗದಷ್ಟು ಕೆಟ್ಟ ಸ್ಥಿತಿ.
ಇತ್ತೀಚಿನ ವಿಶ್ವ ಸಮೀಕ್ಷೆಯ ವರದಿಗಳಂತೆ ಇಡೀ ದೇಶವೇ ತಲೆತಗ್ಗಿಸುವಂತಾಗಿದೆ ಈ ಆಹಾರ ಸ್ಥಿತಿ ಕಾರಣವಾಗಿದೆ.ಅಂತಹ ಸಂದರ್ಭದಲ್ಲಿಯೂ ಕೂಡ ಕೇವಲ ಹತ್ತಿಪ್ಪತ್ತು ಕೇಜಿ ಅಕ್ಕಿ ಕಡಿಮೆ ಬೆಲೆಗೆ ನೀಡುವುದು ಅವರ ಸೋಮಾರಿತನವನ್ನು ಹೆಚ್ಚಿಸುತ್ತದೆಯೇ!
ಹೇಗಿದೆ ಭೈರಪ್ಪನವರ ಭೌದ್ಧಿಕ ಸೋಮಾರಿತನ! ತಮ್ಮ ಬರಹಗಳನ್ನು ಬರೆಯಲು ವರ್ಷಗಟ್ಟಲೆ ಸಂಶೋಧನೆ ನಡೆಸುತ್ತೇನೆಂದು ಸಾರಿಕೊಳ್ಳುವ ಭೈರಪ್ಪನವರು ದೇಶವನ್ನು ಕಟ್ಟುವ ದೊಡ್ಡ ವಿಭಾಗದ ಜನರನ್ನು ಸೋಮಾರಿಗಳಾಗಿದ್ದಾರೆಂದು ಅವಮಾನಿಸುವಾಗ ಸಂಶೋಧನೆ ನಡೆಸಿಯೇ ತೀರ್ಮಾನಕ್ಕೆ ಬರಬೇಕು ಎಂದೆನಿಸಲಿಲ್ಲವೇ !
ಅವರ ಮಾತಿನ ಪೊಳ್ಳುತನವನ್ನು ಬಯಲಿಗೆಳೆಯಲು ಈ ವಾಸ್ತವ ಚಿತ್ರಣ ಸಾಕಾದರೂ ಆಹಾರದ ಅಭದ್ರತೆಯ ಕಾರಣಗಳೇನು? ಅದಕ್ಕೆ ಈ ಕೆಳ ವರ್ಗದ ಜನರ ಸೋಮಾರಿತನ ಕಾರಣವೇ ಎಂಬುದನ್ನು ಪರಿಶೀಲಿಸೋಣ.
ಆಹಾರದ ಭದ್ರತೆಗೆ ಅವಶ್ಯವಾದ ಆಹಾರವನ್ನು ಕೊಳ್ಳುವ ಶಕ್ತಿ ಬಹಳ ಮುಖ್ಯ. ಅಂತಹ ಶಕ್ತಿ ಏಕಿಲ್ಲ? ಈ ಸೋಮಾರಿ ಭೌದ್ಧಿಕತೆಯ ವಾದವೆಂದರೆ ಈ ಜನ ಕಷ್ಟಪಟ್ಟು ದುಡಿಯುವುದಿಲ್ಲ, ಸೋಮಾರಿಗಳಾಗಿ ಕಾಲ ಹರಣ ಮಾಡುತ್ತಾರೆ. ಅಥವಾ ದುಡಿದದ್ದನ್ನು ಕುಡಿದು ಕಳೆಯುತ್ತಾರೆ ಇತ್ಯಾದಿ. ಆದರೆ ವಾಸ್ತವವೇನು ಎಂಬುದನ್ನು ನೋಡೋಣ.
ಆಹಾರವನ್ನು ಕೊಳ್ಳುವ ಶಕ್ತಿಯನ್ನು ಪಡೆಯದಿರಲು ಒಂದು ಕಡೆ ಬಡಜನರ ಆದಾಯ , ಮತ್ತೊಂದು ಕಡೆ ಆಹಾರ ವಸ್ತುಗಳ ಬೆಲೆಗಳು ಕಾರಣ. ಈ ಎರಡರಲ್ಲಿನ ಸಮಸ್ಯೆಗಳಿಗೂ ಮುಖ್ಯ ಕಾರಣ ಕೇಂದ್ರ ಸರ್ಕಾರದ ನೀತಿಗಳು.ಅದನ್ನು ಹೆಚ್ಚು ವಿಸ್ತರಿಸದೆ ಸಂಕ್ಷಿಪ್ತಗೊಳಿಸುತ್ತೇನೆ.
• ಮಧ್ಯಮ ವರ್ಗ ಬಳಸುವ ಕಾರು, ಇತರ ವಾಹನಗಳು, ಮೊಬೈಲ್ ಫೋನ್ , ಉತ್ತಮ ಟೀವಿ ಮತ್ತಿತರ ವಸ್ತುಗಳ ಬೆಲೆಗಳು ಎಷ್ಟೋ ಬಾರಿ ಕಡಿಮೆಯಾಗುತ್ತಿದ್ದರೂ ಆಹಾರದ ಬೆಲೆಗಳು ಏರುತ್ತಲೇ ಇವೆ. ಸಾಮಾನ್ಯ ಬೆಲೆ ಸೂಚ್ಯಾಂಕಕ್ಕಿಂತ ಆಹಾರದ ಬೆಲೆ ಸೂಚ್ಯಂಕ ದುಪ್ಪಟ್ಟಿರುತ್ತದೆ.
• ಕೃಷಿಗೆ ಬೇಕಾದ ಬೀಜ, ಗೊಬ್ಬರ , ರಸಗೊಬ್ಬರ, ಔಷಧಿಗಳು ಮೊದಲಾದ ಮೂಲ ವಸ್ತುಗಳ ಬೆಲೆ , ಮಾರುಕಟ್ಟೆಗೆ ಸಾಗಿಸುವುದರ ವೆಚ್ಚ ಇತ್ಯಾದಿಗಳು ಬಹು ರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕುವ ಕೇಂದ್ರ ಸರ್ಕಾರದ ನೀತಿಗಳಿಂದಾಗಿ ವಿಪರೀತ ಹೆಚ್ಚಿದೆ. ಬ್ಯಾಂಕುಗಳಿಂದ ಕಡಿಮೆ ಬಡ್ಡಿಯ ಸಾಲವನ್ನು ಒದಗಿಸಲು ಕೇಂದ್ರ ಸರ್ಕಾರ ನಿರಾಕರಿಸುತ್ತಿರುವುದರಿಂದ ದುಬಾರಿ ಬಡ್ಡಿಯ ಖಾಸಗಿ ಸಾಲ ತೆಗೆದುಕೊಳ್ಳುವ ಪರಿಸ್ಥಿತಿ. ಇದರಿಂದಾಗಿಯೇ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಿ ಆಹಾರ ವಸ್ತುಗಳ ಬೆಲೆ ಹೆಚ್ಚಲು ಕಾರಣವಾಗಿದೆ.
• ಅದೇ ಸಮಯದಲ್ಲಿ ಜಾಗತೀಕರಣ, ಖಾಸಗೀಕರಣ ನೀತಿಗಳಿಂದಾಗಿ ಕಟ್ಟಡ ನಿರ್ಮಾಣ, ಕೃಷಿ ಮುಂತಾವುಗಳಲ್ಲಿ ಹೆಚ್ಚು ಹೆಚ್ಚು ಯಂತ್ರಗಳ ಬಳಕೆಯಾಗುತ್ತಿದೆ. ಬಡವರಿಗೆ ಉದ್ಯೋಗ ಲಭ್ಯತೆ ಕಡಿಮೆಯಾಗಿದೆ. ರಾಷ್ಟ್ರೀಯ ಸಮೀಕ್ಷೆಗಳ ಅಂಕಿ ಅಂಶಗಳು ಇದನ್ನು ಧೃಡ ಪಡಿಸಿವೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಲಬ್ಯತೆ ಮತ್ತಷ್ಟು ಕಡಿಮೆಯಾಗಿದೆ. ಅಯ್ಯೋ ಕೃಷಿ ಕೆಲಸಕ್ಕೆ ಕೂಲಿಕಾರರೇ ಸಿಕ್ಕುವುದಿಲ್ಲ ಎಂಬ ರೈತರ ಪೇಚಾಟದ ನಡುವೆಯೂ ಹಳ್ಳಿಗಳಲ್ಲಿ ಒಂದು ವರ್ಷದಲ್ಲಿ ಕೆಲಸ ಸಿಕ್ಕ ದಿನಗಳು ನಿರಂತರವಾಗಿ ಕಡಿಮೆಯಾಗುತ್ತಿದೆಯೆಂದು, ಈಗ ಕೇವಲ 70-100 ದಿನ ಮಾತ್ರ ಎಂದು ವಿವಿಧ ಸಾಮಾಜಿಕ ವಿಜ್ಞಾನಿಗಳ ಸಂಶೋಧನೆಗಳೂ ತಿಳಿಸುತ್ತಿವೆ.
• ಇನ್ನು ಕೆಲಸಕ್ಕೆ ಕೂಲಿಯ ಪ್ರಶ್ನೆ. ಕೂಲಿ ಏರುತ್ತಿದ್ದರೂ ರೈತರಿಗೆ, ಸಾಮಾನ್ಯ ಜನರಿಗೆ ಅದನ್ನು ಭರಿಸುವುದು ಕಷ್ಟವೆಂಬಂತೆ ಕಾಣುತ್ತಿದ್ದರೂ ಕೂಡ ಈ ವರ್ಗದ ಕೂಲಿಕಾರರಿಗೆ ಮದ್ಯಮ ವರ್ಗದವರಿಗೆ ಇರುವಂತೆ ವೇತನ ಆಯೋಗ, ತುಟ್ಟಿ ಭತ್ಯ ಇಲ್ಲ ಬೆಲೆ ಏರಿಕೆಗೆ ಸಮನಾಗಿ ಕೂಲಿ ಹೆಚ್ಚಾಗುತ್ತಿಲ್ಲ.
• ಸರ್ಕಾರಗಳು ಕನಿಷ್ಡ ಕೂಲಿ ಕಾನೂನಿನ ಪ್ರಕಾರ ಆಗಿಂದಾಗ್ಗೆ ಕೂಲಿ ಏರಿಕೆ ಮಾಡುವುದಾಗಲಿ, ಅಧಿಸೂಚನೆ ಹೊರಡಿಸಿದ ಕೂಲಿ ಸಿಗುವಂತೆ ಕ್ರಮ ಕೈಗೊಳ್ಳುವುದಾಗಲೀ ಮಾಡುತ್ತಿಲ್ಲ. ಅದನ್ನು ಏರಿಸಲು ಪ್ರಯತ್ನ ಮಾಡಿದಾಗೆಲ್ಲ ಮಾಲೀಕರುಗಳ ಸಂಘಗಳು ಸರ್ಕಾರದ ಮೇಲೆ ಒತ್ತಡ ತಂದು ಕಡಿಮೆ ಮಾಡಿಸುತ್ತವೆ. ಕೋರ್ಟ್ ಗಳಿಂದ ತಡೆಯಾಜ್ಞೆ ಪಡೆಯುತ್ತವೆ . ಸುಪ್ರೀಂ ಕೋರ್ಟ್ ಗೆ ಕೂಡ ಹೋಗುತ್ತವೆ.ಉದಾಹರಣೆಗೆ ಇತ್ತೀಚೆಗೆ ಬೀಡಿ ಕಾರ್ಮಿಕರಿಗೆ ಕಾನೂನು ಬದ್ದವಾಗಿ ನೀಡಬೇಕಾದ ತುಟ್ಟಿಭತ್ಯೆ ಕೊಡಬೇಕಾಗಿಲ್ಲವೆಂಬ ಆಜ್ಞೆ ಹೊರಟಿದೆ.
ಹೀಗೆ ಇನ್ನು ಕೆಲವು ಕಾರಣಗಳಿವೆ. ಮುಖ್ಯವಾದದ್ದೆಂದರೆ ಆಹಾರ ವಸ್ತುಗಳ ಬೆಲೆ ಏರಿಕೆಯಾಗುವುದೂ ಕೇಂದ್ರ ಸರ್ಕಾರದ ನೀತಿಗಳಿಂದ. ಅದಕ್ಕೆ ತಕ್ಕಂತೆ ಆದಾಯ ಹೆಚ್ಚಾಗದಿರಲೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಕಾರಣ.
ಈಗ ಹೇಳಿ ಆಹಾರದ ಅಭದ್ರತೆ ಉಂಟಾಗುವುದು ಬಡಜನರ ಸೋಮಾರಿತನದಿಂದಲೋ ಅಥವಾ ಸರ್ಕಾರಗಳಿಂದಲೋ.
ಅನ್ನಭಾಗ್ಯ ಎಂಬುದು ಆದ್ದರಿಂದಲೇ ಸರ್ಕಾರ ಬಡವರಿಗೆ ನೀಡುವ ಭಾಗ್ಯವಲ್ಲ ಬದಲಾಗಿ ಅವುಗಳ ನೀತಿಗಳಿಂದಾಗಿ ಹಸಿವಿನ ಸಂಕಟಕ್ಕೆ ದೂಡಲ್ಪಟ್ಟಿರುವ ಬಡವರಿಗೆ ನೀಡಿದ ಅತ್ಯಲ್ಪ ಪರಿಹಾರ.ಇದನ್ನು ಜನರ ಹಣದ ಪೋಲು ಎಂದು ಬಿಂಬಿಸುತ್ತಿರುವವರು ಈ ವಿಷಯವನ್ನು ಮನದಟ್ಟು ಮಾಡಿಕೊಳ್ಳಿ. ಬಹು ರಾಷ್ಟ್ರೀಯ ಕಂಪನಿಗಳು, ದೇಶದ ದೊಡ್ಡ ಕಂಪನಿಗಳ ದುರ್ಲಾಭದಾಸೆಗೆ ಈ ಬಡವರನ್ನು ಬಲಿ ಹಾಕಲಾಗುತ್ತಿದೆ.. ಅವರ ದುರ್ಲಾಭದಾಸೆಯ ವಿರುದ್ಧ, ಅದಕ್ಕೆ ಅವಕಾಶ ನೀಡಿದ ಸರ್ಕಾರಗಳ ವಿರುದ್ಧ ನಿಮ್ಮ ಸಿಟ್ಟನ್ನು ತೋರಿಸಿ .
 

‍ಲೇಖಕರು G

16 July, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading