ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಸ್ಟ್ರೇಲಿಯಾದಿಂದ ವಿನತೆ ಶರ್ಮ: ಒಂದೆಡೆ ಕನಸು. ಇನ್ನೊಂದೆಡೆ  ಕಸಿವಿಸಿ..

 

 

 

 

ವಿನತೆ ಶರ್ಮ

 

 

 

 

ಭಾರತೀಯಳಾದ್ದರಿಂದ ನನಗೆ ಆ ದಿನ ಸಂತೋಷ ಮತ್ತು ಹೆಮ್ಮೆಯನ್ನ ತರುತ್ತದೆ. ೧೯೫೦ ನೇ ಇಸವಿಯ ಜನವರಿ ೨೬ರಂದು ಪ್ರಜಾಪ್ರಭುತ್ವವನ್ನು ಸಾರುತ್ತಾ ನಮ್ಮ ಸಂವಿಧಾನವು ದೇಶದಾದ್ಯಂತ ಜಾರಿಗೆ ಬಂತು. ಅಮ್ಮನ ಅಚಲ ದೇಶಭಕ್ತಿಯ ಪ್ರಭಾವ ನಮ್ಮೆಲ್ಲರ ಮೇಲೂ ಊರಿತ್ತು. ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುವ ವಿಜೃಂಭಣೆಯ ರಿಪಬ್ಲಿಕ್ ಡೇ ಪರೇಡ್ ಎಂದರೆ ಹಿಂದೊಮ್ಮೆ ಮೈಪುಳಕ ಬರುತಿತ್ತು. ಶಾಲೆ ಮತ್ತು ಕಾಲೇಜಿನ ದಿನಗಳಲ್ಲಿ ರಿಪಬ್ಲಿಕ್ ಡೇ ಪರೇಡ್ ಬಗ್ಗೆ ಕೇಳಿದ್ದ ಕತೆಗಳೆಷ್ಟೋ!

ದೂರದರ್ಶನ ಪೆಟ್ಟಿಗೆ ಬಂದ ಮೇಲಂತೂ ಬೆಳಗ್ಗೆ ಬೇಗನೆ ಎದ್ದು, ಕಾಫಿ ಕುಡಿದು, ದಪ್ಪನೆ ರಜಾಯಿಯನ್ನ ಕಿವಿಗಳ ತನಕ ಹೊದ್ದುಕೊಂಡು ಕುಳಿತು ಪರೇಡ್ ನೋಡೋದು. ಆಗಸ್ಟ್ ೧೫ ರ ದಿನ ಅಮ್ಮ ತಪ್ಪದೆ ಸಿಹಿ ಅಡುಗೆ ಮಾಡುವವರು. ಜನವರಿ ೨೬ಕ್ಕೆ ಕೂಡ ಒಂದು ಸಿಹಿ ತಿಂಡಿ ಇದ್ದೆ ಇರುತಿತ್ತು.

ಶಾಲಾ ಶಿಕ್ಷಕಿಯಾದ್ದರಿಂದ ಅವರಿಗೆ ಆ ಎರಡು ದಿನಗಳ ಬಗ್ಗೆ ಬಲು ಹೆಮ್ಮೆ. ಈಗ ನಮ್ಮಗಳ ಮಕ್ಕಳ ಕಾಲಕ್ಕೂ ಅವುಗಳ ವಿಶೇಷತೆ ಇನ್ನೂ ಉಳಿದಿದೆ ಎಂದರೆ ನಮ್ಮಲ್ಲಿ ಸ್ವಾತಂತ್ರ್ಯದ ಬಗ್ಗೆ ಮತ್ತು ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಅಷ್ಟು ಅಭಿಮಾನವಿದೆ.

ಯಾಕೋ, ಕಳೆದ ೧೬ ವರ್ಷಗಳಿಂದ ಜನವರಿ ೨೬ರ ಬಗ್ಗೆ ಮಿಶ್ರ ಭಾವನೆಗಳು ಉಂಟಾಗಿವೆ. ಯೋಚನೆಗಳು ಎಡಬಿಡದೆ ಕಾಡುತ್ತವೆ.

ಕಾರಣ ಆಸ್ಟ್ರೇಲಿಯಾದಲ್ಲಿ ಜನವರಿ ೨೬ ಎಂದರೆ Australia Day. ಈಗಲೂ ನೆನೆಸಿಕೊಂಡರೆ ನಾನು ಒಂದು ವರ್ಷವೂ Australia Day ಸಮಾರಂಭಕ್ಕೆ, ಸೆಲೆಬ್ರೇಶನ್ ಗಳಿಗೆ ಹೋಗಲಿಲ್ಲ ಯಾಕೆ ಎಂಬ ಪ್ರಶ್ನೆ ಏಳುತ್ತದೆ.  ಸುಮಾರು ೧೪ ವರ್ಷಗಳು ಆಸ್ಟ್ರೇಲಿಯಾದ ಮಣ್ಣಲ್ಲಿ ವಾಸಿಸಿದ್ದೆ. ಆ ಬಹು ವಿಶಾಲ ದೇಶದ ನೀರು ಕುಡಿದು ನಾನು ಕೂಡ ಅರ್ಧಂಬರ್ಧ ಆಸ್ಟ್ರೇಲಿಯನ್ ಆಗಿದ್ದೀನಿ ಅಂತ ಆ ದೇಶ ಬಿಟ್ಟ ಮೇಲೆ ನನ್ನ ಅರಿವಿಗೆ ಬಂತು.

ವಿಷಾದವೋ, ವಿನೋದವೋ – ಅಲ್ಲಿದ್ದಾಗ ಹಲವಾರು ಜನ ನನ್ನನ್ನು “Are you Aboriginal?” ಎಂದು ಕೇಳಿದ್ದರು. ಮೊದಮೊದಲು ನಾನು ಸ್ವಲ್ಪ ಗಲಿಬಿಲಿಗೊಳ್ಳುತ್ತಿದ್ದೆ. ಆಸ್ಟ್ರೇಲಿಯನ್ ಮೂಲನಿವಾಸಿಗಳ (Aboriginals) ಬಗ್ಗೆ ನನಗೆ ಅಷ್ಟೊಂದು ತಿಳುವಳಿಕೆ ಇರಲಿಲ್ಲ. ದೇಶದ ಇತಿಹಾಸವನ್ನು ಒಂದಷ್ಟು ಓದಿಕೊಂಡಿದ್ದೆ, ಅಷ್ಟೇ. ಆದರೂ ಅದಕ್ಕೆ ಮನ ತೆರೆದುಕೊಂಡು ಮುಖಾಮುಖಿಯಾಗಲಿಲ್ಲ.

ನನಗೆ ಆಸ್ಟ್ರೇಲಿಯನ್ ಮೂಲನಿವಾಸಿಗಳ ಬಗ್ಗೆ ಒಂದು ನೇರನೋಟವನ್ನು ಒದಗಿಸಿಕೊಟ್ಟವಳು ವಿಶ್ವವಿದ್ಯಾನಿಲಯದ ಒಬ್ಬ ಗೆಳತಿ. ಒಂದಷ್ಟು ಕತೆಗಳು, ಸಂಶೋಧನಾ ಮತ್ತು ಪತ್ರಿಕಾ ಲೇಖನಗಳು ಮತ್ತು ಅತ್ಯಂತ ಮುಖ್ಯವಾಗಿ Cultural Competence ಬಗ್ಗೆ ತನ್ನ ಒಳನೋಟಗಳನ್ನು ನನ್ನೊಡನೆ ಹಂಚಿಕೊಳ್ಳುತ್ತಲೇ ನಮ್ಮ ನಡುವೆಯೇ ಇದ್ದ Aboriginals ಯಾರು, ಅವರ ಜೀವನ ಏನು ಎಂದು ಹೇಳಿದಳು.

ಆಗ ಜನವರಿ ೨೬ Australia Day ನನ್ನ ಜೀವನದೊಳಗೂ ಬಂದು ನಿಂತಿತು. ಭಾರತೀಯಳಾಗಿ ನಮ್ಮ ಗಣರಾಜ್ಯೋತ್ಸವದ ಬಗ್ಗೆ ಎಷ್ಟು ಹೆಮ್ಮೆಪಡುತ್ತಿದ್ದೆನೋ ಅಷ್ಟರ ಮಟ್ಟಿಗೆ Australia Day ಬಗ್ಗೆ ಕಸಿವಿಸಿಗೊಳ್ಳತೊಡಗಿದೆ. ಆಸ್ಟ್ರೇಲಿಯನ್ Aboriginal ಜನಕ್ಕೆ ಜನವರಿ ೨೬ ಎಂದರೆ ಮುಖ ಬಾಡುತ್ತದೆ, ಅವರ ಹಿಂದಿನ ತಲೆಮಾರುಗಳ ಜನರ ಜೀವನದಲ್ಲಿ ಆವರಿಸಿದ ಕರಾಳ ಛಾಯೆಯ ನೆನಪು ಈ ದಿನ ಎನ್ನುವುದು ನನಗೆ ನಿಧಾನವಾಗಿ ಅರ್ಥವಾಯಿತು.

ಮೊದಲ ಕೆಲ ವರ್ಷಗಳು ನನ್ನ ಸ್ನೇಹಿತರು – ಹೆಚ್ಚಾಗಿ ಬಿಳಿ ಆಸ್ಟ್ರೇಲಿಯನ್ನರು – ತಮ್ಮ ಆಸ್ಟ್ರೇಲಿಯಾ ಡೇ ದಿನವನ್ನ ಬಹು ಹೆಮ್ಮೆಯಿಂದ ಸೆಲೆಬ್ರೇಟ್ ಮಾಡುವ ಬಗ್ಗೆ ನನಗೆ ತಿಳಿಸಿಕೊಟ್ಟಿದ್ದರು. ಉಳಿದರ್ಧ ವರ್ಷಗಳು ಹೇಳಿದ ಕತೆಗಳು ಮತ್ತು ನನ್ನದೇ ಸ್ವಂತ “Are you Aboriginal”, ಅನುಭವಗಳು ನನ್ನನ್ನು ಬೆಚ್ಚಿಬೀಳಿಸಿದವು.

ಹದಿನೆಂಟನೇ ಶತಮಾನದಲ್ಲಿ ಯೂರೋಪಿನ ಬಲಾಢ್ಯ ದೇಶಗಳು ಪ್ರಪಂಚದ ವಿವಿಧ ಭೂಭಾಗಗಳನ್ನು (ಲಾಭಮಯವಾದ) ಆಕ್ರಮಿಸಿ ಅವನ್ನ ತಮ್ಮ ಕಾಲೊನಿಗಳು ಎಂದು ಹೆಸರಿಸಿ ಅಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸುತ್ತಿದ್ದರು. ಉತ್ತರ ಮತ್ತು ದಕ್ಷಿಣ ಅಮೇರಿಕ, ಭಾರತ, ಆಫ್ರಿಕಾದ ಪ್ರದೇಶಗಳು ಮತ್ತು ದೂರದ ಆಸ್ಟ್ರೇಲಿಯಾ ಅವರ ಪ್ರೀತಿಯ ಬಲಿಪಶುಗಳು.

೧೭೮೦ ದಶಕದಲ್ಲಿ ಇಂಗ್ಲೆಂಡ್ ನ ಸೇನೆ ಉತ್ತರ ಅಮೇರಿಕದ ಹಲವಾರು ಭಾಗಗಳಲ್ಲಿ ಸೋಲನ್ನಪ್ಪಿತ್ತು. ಇತರ ಖಂಡಗಳಲ್ಲಿ ಪ್ರೆಂಚರು, ಪೋರ್ಚುಗೀಸರು, ಡಚ್ಚರು, ಬೆಲ್ಜಿಯನ್ನರು ಮತ್ತಿತರರು ಇಂಗ್ಲೆಂಡ್ ಗೆ ಸವಾಲೊಡ್ಡಿದ್ದರು. ಬೇಗ ಬೇಗ ಹೊಸ ಪ್ರದೇಶಗಳಿಗೆ ಹೋಗಿ ತಮ್ಮ ಬಾವುಟವನ್ನು ಹಾರಿಸಿ ಈ ಭೂಭಾಗ ನಮಗೆ ಸೇರಿದ್ದು ಎಂದು ಸಾರುವುದು ಆ ಎಲ್ಲಾ ದೇಶಗಳಿಗೆ ಮುಖ್ಯವಾಗಿತ್ತು.

೧೬೦೦ರ ವರ್ಷಗಳಲ್ಲಿ ಆಸ್ಟ್ರೇಲಿಯಾ ಭೂ ಪ್ರದೇಶಕ್ಕೆ ಬಂದ ಮೊದಲ ಯೂರೋಪಿಯನ್ನರು ಡಚ್ಚರು. ಆದರೆ ಕಡೆಗೆ ೧೭೭೦ರಲ್ಲಿ ಇಂಗ್ಲೆಂಡಿನ ರಾಜ ಮೂರನೇ ಜಾರ್ಜ್ ನ ಅಣತಿಯ ಪ್ರಕಾರ ಈ ನೆಲ ನಮಗೆ ಸೇರಿದ್ದು ಎಂದವನು ಕ್ಯಾಪ್ಟನ್ ಕುಕ್. ಬ್ರಿಟನ್ನಿನ ನೌಕಾಪಡೆಯ ತುಕಡಿಯೊಂದು  ೧೭೮೮ ನೇ ವರ್ಷದಲ್ಲಿ ಸಿಡ್ನಿ ಪ್ರದೇಶಕ್ಕೆ ಬಂದಿತು. ಕೆಲ ಸಾಂದರ್ಭಿಕ ಮತ್ತು ಹವಾಮಾನ ಕಾರಣಗಳಿಂದ ಫ್ರೆಂಚರಿಗೂ ಮೊದಲು ಕ್ಯಾಪ್ಟನ್ ಆರ್ಥರ್ ಫಿಲಿಪ್ ಸಿಡ್ನಿ ಕೊಲ್ಲಿ (Sidney Cove) ತಲುಪಿ ಇಂಗ್ಲೆಂಡ್ ನ ಯೂನಿಯನ್ ಜಾಕ್ ಬಾವುಟವನ್ನು ಜನವರಿ ೨೬ರಂದು ಹಾರಿಸಿಯೇ ಬಿಟ್ಟರು.

ಅಲ್ಲಿಗೆ ಆಸ್ಟ್ರೇಲಿಯಾ ದೇಶ ಬ್ರಿಟನ್ ಗೆ ಸೇರಿದ್ದು ಎಂದು ಘೋಷಿತವಾಯಿತು. ಫ್ರೆಂಚರು, ಚೀನಿಯರು ಮೊದಲೇ ಆ ದೇಶಕ್ಕೆ ಹೋಗಿದ್ದರೂ ಬಾವುಟ ಹಾರಿಸಿ ಈ ದೇಶ ನಮ್ಮ ಇಂಗ್ಲೆಂಡ್ ದೊರೆಗೆ ಸೇರಿದ್ದು ಎಂದು ಮೊಟ್ಟಮೊದಲು ಘೋಷಿಸಿದವರು ಬ್ರಿಟನ್ನಿನವರು!

ಆ ಕಾಲಕ್ಕೆ ಬೇರೆ ಬೇರೆ ಹೆಸರುಗಳಿದ್ದರೂ (ಫೌಂಡೇಶನ್ ಡೇ, ಆನಿವರ್ಸರಿ ಡೇ) ಕ್ರಮೇಣ ಸುಮಾರು ೧೯೩೫ರ ಹೊತ್ತಿಗೆ ಆಸ್ಟ್ರೇಲಿಯಾ ಡೇ ಎಂಬುದು ಸ್ಥಿರವಾಯಿತು. ೧೯೯೪ ನೇ ವರ್ಷ ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಜನವರಿ ೨೬ರಂದು ಸರ್ಕಾರಿ ರಜಾ ದಿನ ಎಂದು ಅಂಗೀಕರಿಸಿದವು.  Australia Day ಒಂದು ದಿನದ ದೊಡ್ಡ ಹಬ್ಬವಾಯಿತು.

 

ಬ್ರಿಟಿಷರು ಆಸ್ಟ್ರೇಲಿಯವನ್ನ ಆಕ್ರಮಿಸಿ, ತಮ್ಮದೇ ರಾಜಕೀಯ ಕುತಂತ್ರ ಮಾಡಿ ಈ ಭೂಭಾಗದಲ್ಲಿ ಇದುವರೆಗೂ ಯಾವ ಮನುಷ್ಯರೂ ವಾಸ ಮಾಡಿಲ್ಲ ಎಂದೂ ಪ್ರಪಂಚಕ್ಕೆ ಹೇಳಿದರು. ಆದರೆ ಆಸ್ಟ್ರೇಲಿಯನ್ Aboriginal ಜನರು ಸುಮಾರು ತೊಂಭತ್ತು ಸಾವಿರ ವರ್ಷಗಳು ಅಲ್ಲಿ ವಾಸಿಸಿ, ಸುದೀರ್ಘವಾಗಿ ತಮ್ಮದೇ ಆದ ಸಂಸ್ಕೃತಿ, ಪ್ರಕೃತಿಗೆ ಹತ್ತಿರವಾದ ಜ್ಞಾನಸಂಪತ್ತನ್ನು, ರೂಢಿಗಳನ್ನು, ಆಚಾರವಿಚಾರಗಳನ್ನು ಅಭಿವೃದ್ಧಿಪಡಿಸಿದ್ದರು.

ಬ್ರಿಟಿಷರ ಆಕ್ರಮಣ ಮತ್ತು ಆಳ್ವಿಕೆ ಅವೆಲ್ಲವನ್ನೂ ನಿರ್ನಾಮಪಡಿಸಲು ಹೇಗೆಲ್ಲಾ ಪ್ರಯತ್ನಿಸಿತು ಎನ್ನುವುದನ್ನು ಸುಮಾರು ಒಂದೂವರೆ ಶತಮಾನಗಳ ಕಾಲ ಮುಚ್ಚಿಡಲಾಗಿತ್ತು. Aboriginal ಜನರನ್ನು ತಂಡೋಪತಂಡವಾಗಿ ಹತ್ಯೆ ಮಾಡಿದ್ದು, ಅವರ ಸಂಸ್ಕೃತಿಗಳನ್ನ, ಭಾಷೆಗಳನ್ನು, ಆಹಾರಕ್ರಮಗಳನ್ನು, ಕಲೆ ನೃತ್ಯ ಸಂಗೀತಗಳ ವಿವಿಧ ಪ್ರಕಾರಗಳನ್ನು  ಬಲವಂತವಾಗಿ ನಿರ್ಮೂಲನೆ ಮಾಡಲು ಬ್ರಿಟಿಷರು ನಡೆಸಿದ ವಿಧ್ವಂಸಕ ಕೃತ್ಯಗಳನ್ನು (ಕುಡಿಯುವ ನೀರಿನ ಸೆಲೆಗಳಿಗೆ ವಿಷ ಹಾಕಿ ಕೊಲ್ಲುತ್ತಿದ್ದರು) ಓದುತ್ತಾ ಎಷ್ಟೋ ಬಾರಿ ನಾನು ಅತ್ತಿದ್ದೀನಿ.

Aboriginal ಕುಟುಂಬಗಳನ್ನು ಬೇರ್ಪಡಿಸಿ, ಗಂಡಸು, ಹೆಂಗಸರನ್ನು ಗುಲಾಮರನ್ನಾಗಿಸಿ, ಮಕ್ಕಳನ್ನು ಕೊಂಡೊಯ್ದು ಮಿಷನರಿಗಳಿಗೆ ಸೇರಿಸುತ್ತಿದ್ದರು. ಅವರು ಪಶುಗಳು, ಸಂಸ್ಕೃತಿ-ಹೀನರು ಎಂದು ನಿರ್ಧರಿಸಿ ಇಂಗ್ಲಿಷ್ ಭಾಷೆ, ಉಡುಪು ರೀತಿನೀತಿಗಳನ್ನು ಕಲಿಸುವ ಕೆಲಸ ೧೮೦೦ ರಿಂದ ಹಿಡಿದು ೧೯೮೦ರ ದಶಕದ ತನಕ ಅವ್ಯಾಹತವಾಗಿ ನಡೆಯಿತು. ೧೯೬೨ ಮಾರ್ಚ್ ತಿಂಗಳಲ್ಲಿ ಮೊತ್ತ ಮೊದಲ ಬಾರಿಗೆ ಆಸ್ಟ್ರೇಲಿಯನ್ ಸ್ವದೇಶಿಯರಿಗೆ (Indigenous) ಚುನಾವಣೆಗಳಲ್ಲಿ ತಮ್ಮ ಮತವನ್ನು ಚಲಾಯಿಸುವ ಹಕ್ಕು ಬಂದಿತು ಎಂದು ಓದಿ, ಕೇಳಿ ನನಗೆ ಮೂರ್ಛೆ ಬರುವ ಹಾಗಾಗಿತ್ತು. ಸ್ವತಂತ್ರ ಭಾರತದ ಎರಡನೆಯ ತಲೆಮಾರಿನಲ್ಲಿ ಹುಟ್ಟಿದ ನನಗೆ ಇರುವ ಹಕ್ಕು, ಸವಲತ್ತುಗಳ ಬಗ್ಗೆ ಇನ್ನಷ್ಟು ಗೌರವವುಂಟಾಯಿತು.

Stolen Generations, Stolen Wages ಎನ್ನುವುದು ಈಗಲೂ ಬಹು ಚರ್ಚಿತ ವಿಷಯ. ವಸಾಹತುಶಾಹಿಗಳ ಅಧಿಕಾರದ ಇದೇ ರೀತಿಯ ಅಕ್ರಮಗಳು ಹೆಚ್ಚು ಕಡಿಮೆ ಒಂದೇ ಕಾಲ ಘಟ್ಟದಲ್ಲಿ ಉತ್ತರ ಅಮೆರಿಕ, ಏಷ್ಯಾ ಮತ್ತು ಆಫ್ರಿಕಾ ಖಂಡಗಳ ದೇಶಗಳಲ್ಲಿ ನಡೆದಿವೆ. ಇತ್ತೀಚೆಗೆ ವಿಶ್ವವಿದ್ಯಾನಿಲಯವೊಂದು ಎರಡೂವರೆ ಶತಮಾನಗಳ ಕಾಲಘಟ್ಟದಲ್ಲಿ ಎಲ್ಲೆಲ್ಲಿ ಮತ್ತು ಎಷ್ಟು Aboriginals ಸಮುದಾಯಗಳನ್ನು ನಿರ್ಮೂಲನೆ ಮಾಡಲಾಯಿತು ಎಂದು ದಾಖಲಿಸಿದೆ.

ಏನೇ ಸಂಶೋಧನೆ ನಡೆದಿದ್ದರೂ ಇವತ್ತಿಗೂ ಆಸ್ಟ್ರೇಲಿಯಾ ದೇಶದ ಭಾಗಗಳಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ Aboriginals ಬಗ್ಗೆ ದ್ವೇಷ, ಅಸೂಯೆ, ಕೀಳು ಮನೋಭಾವಗಳನ್ನು ತೋರಲಾಗುತ್ತಿದೆ. ಒಮ್ಮೆ ನಾನು ವಿಶ್ವವಿದ್ಯಾನಿಲಯದಲ್ಲಿ Indigenous Studies ಎಂಬ ಪಠ್ಯವಿಷಯದ ಬಗ್ಗೆ ಒಂದು ಸೆಮಿಸ್ಟರ್ ಪೂರ್ತಿ ತರಗತಿಯನ್ನು ನಡೆಸಿದ್ದೆ. ಆಗ ನಡೆದ ಮಾತುಕತೆಗಳು ವಿದ್ಯಾರ್ಥಿಗಳಲ್ಲಿ ಇದ್ದ ಪೂರ್ವಾಗ್ರಹಗಳನ್ನು, ಪಕ್ಷಪಾತಗಳನ್ನು ನಿಚ್ಚಳವಾಗಿ ತೋರಿದ್ದವು – ಎಂದೆಂದಿಗೂ ಯೂರೋಪಿಯನ್ ಬಿಳಿಯರೇ ಶ್ರೇಷ್ಠ, ಅವರ ಸಂಸ್ಕೃತಿ ಪ್ರಪಂಚಕ್ಕೆಲ್ಲಾ ಮಾದರಿಯಾದದ್ದು! ತರಗತಿಯಲ್ಲಿ ಇದ್ದ ಇಬ್ಬರೇ ಇಬ್ಬರು Aboriginal ವಿದ್ಯಾರ್ಥಿಗಳು ಸೆಮಿಸ್ಟರ್ ಪೂರ್ತಿ ಬಾಯೇ ಬಿಡಲಿಲ್ಲ.

ನಾನು ನನ್ನ ಅನುಭವಗಳನ್ನು ಆಗ ಹಂಚಿಕೊಂಡಿದ್ದೆ (ಮುಕ್ಕಾಲು ಜನ ನಾನು ಬೊಗಳೆ ಬಿಡುತ್ತಿದ್ದೀನಿ ಎಂದಿದ್ದರು, ಮತ್ತು ಒಂದಷ್ಟು ಬುದ್ಧಿಮಾತು ಕೂಡ ಹೇಳಿದ್ದರು!!). ಹೊಸ ಬಾಡಿಗೆ ಮನೆಗೆ ಹೋದಾಗ ಪಕ್ಕದ ಮನೆಯವನು ಅವನ ಚಿಕ್ಕ ಮಗಳಿಗೆ ಕೂಗಿ ಹೇಳಿದ್ದ – ‘ಅವರೊಂದಿಗೆ ಮಾತನಾಡಬೇಡ, ಅವರು ಕರಿಯರು. ಅವರು ನಮ್ಮಂತೆ ಅಲ್ಲ’. ಆ ಮಾತಷ್ಟೇ ಅಲ್ಲ. ಅದೇ ಜನವರಿ ೨೬ರಂದು ಅವನ ಮೋಟಾರ್ ಬೈಕ್ ಪಡೆಯ (ಇಂತಹ ಪಡೆಗಳು ಪಾಶ್ಯಾತ್ಯ ದೇಶಗಳಲ್ಲಿ ಕುಖ್ಯಾತಿ ಪಡೆದಿವೆ) ಸ್ನೇಹಿತರು ಅವನ ಮನೆಗೆ ಬಂದು ಹಿತ್ತಲಲ್ಲಿ ದೊಡ್ಡ BBQ party, ಕುಡಿತ, ಮೋಜಿನ ಸಂಗೀತ ನಡೆಸಿದ್ದರು. ನಾನು, ನನ್ನ ಮಕ್ಕಳು ಹಿತ್ತಲಿಗೆ ಹೋದಾಗಲೆಲ್ಲಾ “We are Australians. This is our country. Go back,” ಎಂದು ದೊಡ್ಡದಾಗಿ ಕೂಗಿ ಹೇಳುತ್ತಿದ್ದರು. ನನ್ನ ಮಗು ಅಮ್ಮ ಯಾಕೆ ಅವರು ಹಾಗೆ ಹೇಳುತ್ತಿದ್ದಾರೆ ಎಂದು ಕೇಳಿದಾಗ ನನ್ನ ಹೃದಯ ಅಳುತಿತ್ತು. “ಮನುಷ್ಯರು ಬಹಳ ಸ್ವಾರ್ಥಿಗಳು ಮಗು. ವಿಭಜನೆ ಮಾಡಿ ಬದುಕುವುದೇ ಬಹು ಚೆನ್ನ ಎಂದು ಕೆಲವರು ನಂಬಿದ್ದಾರೆ. ಆದರೆ ಅದು ಸುಳ್ಳು ಎಂದು ನಾವು ಅವರಿಗೆ ನಮ್ಮ ಕೃತಿಯ ಮೂಲಕ ತೋರಿಸಬಹುದು”, ಎಂದಿದ್ದೆ.

ವಿಶ್ವವಿದ್ಯಾನಿಲಯದಲ್ಲಿದ್ದಾಗ ಒಬ್ಬ Aboriginal ಸಮುದಾಯದ ಸ್ನೇಹಿತರು ನನ್ನನ್ನು ಕೇಳುತ್ತಿದ್ದರು – “You guys had your Gandhi. Egypt had its revolution. When do we get our freedom?” ವರ್ಷದಿಂದ ವರ್ಷಕ್ಕೆ ನಾವು ಆಸ್ಟ್ರೇಲಿಯನ್ Indigenous, Aboriginal peoples ಎಂದು ಧೈರ್ಯದಿಂದ ಹೇಳಿಕೊಂಡು ಮುಂದೆ ಬರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಬಲವಂತದಿಂದ ನಮ್ಮ ಹಿರಿಯರಿಗೆ ಹೇಳಿಕೊಟ್ಟ ಕೀಳರಿಮೆ ನಮಗೆ ಬೇಡ, ಇದು ನಮ್ಮ ದೇಶ. ನಾವೂ ನೀವೂ ಸೌಹಾರ್ದತೆಯಿಂದ ಬದುಕೋಣ ಬನ್ನಿ ಎಂದು ಹೇಳುವ ಜನರನ್ನು ನೋಡಿದರೆ ಭೇಷ್ ಎನ್ನಿಸುತ್ತದೆ. ಇಂತಹ Cultural Interface ಬೇಕು. ಅರಿವು ಎಲ್ಲರಿಗೂ ಆಗಬೇಕಿದೆ.

ಮೊನ್ನೆ ಮೊನ್ನೆಯಷ್ಟೇ ನನ್ನ ಇಬ್ಬರು non-Aboriginal ಮತ್ತು non-White ಸ್ನೇಹಿತರು ಈ ವರ್ಷದ Settlers Day ಪೆರೇಡ್ ಗೆ ಹೋಗುತ್ತಿದ್ದೀವಿ, ತಯಾರಿ ನಡೆದಿದೆ ಎಂದು ಮೆಸೇಜ್ ಮಾಡಿದ್ದರು. My strength is with you ಎಂದೆ. ಭಾರತ ಮತ್ತು ಆಸ್ಟ್ರೇಲಿಯಾ, ಈ ಎರಡೂ ದೇಶಗಳಲ್ಲಿ ಜನವರಿ ೨೬ ಎಂಬ ದಿನಾಂಕ ಮಹತ್ವದ ದಿನವಾಗುವುದಕ್ಕೆ ಕಾರಣವಾದ ಇಂಗ್ಲೆಂಡ್ ನಲ್ಲಿ ಈಗ ಕೂತು Republic Day ಮತ್ತು Settlers Day ಗಳ ಬಗ್ಗೆ ಯೋಚಿಸುತ್ತಿದ್ದೀನಿ.

ಒಂದೆಡೆ ಕನಸು. ಇನ್ನೊಂದೆಡೆ  ಕಸಿವಿಸಿ.

‍ಲೇಖಕರು Avadhi GK

26 January, 2018

1 Comment

  1. shrivatsadesai

    ನಿಮ್ಮ ಬರಹ ಮನ ತಟ್ಟಿತು. ಒಮ್ಮೆ ನಾನೂ ಆಸ್ಟ್ರೇಲಿಯಾಗೆ ಹೋಗಲು ಅರ್ಜಿ ಹಾಕಿದ್ದೆ ಎಂದು ನೆನೆದು ಮೈ ಜುಮ್ಮೆನುತ್ತಿದೆ, ನಿಮ್ಮಅನುಭವ ಓದಿ.Eye opener!
    ನಾವು ಕೊಂದ ಗಾಂಧಿ ಅಲ್ಲಿ ಹುಟ್ಟಿಬರಲಿ ಎಂದು ಕನಸು ಕಾಣುವಾ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading