ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಲೂರು ಅಂಕಣ: ಪತ್ರಕರ್ತರು ಮತ್ತು ಪದ್ಮಪತ್ರದ ಜಲಬಿಂದು

“ರಾಜಕಾರಣಿಗಳು, ಅಕಾರಿಗಳು, ಸೆಲೆಬ್ರಿಟಿಗಳೊಂದಿಗೆ ಪತ್ರಕರ್ತರ ಸಂಬಂಧ ಪದ್ಮಪತ್ರದ ಮೇಲಿನ ಜಲಬಿಂದುವಿನಂತಿರಬೇಕು…” ಎಂದು ಹೇಳಿ ನನ್ನ ಮಾತು ಮುಗಿಸಿದೆ. ಅದು ನಾನು ಸಿದ್ಧಪಡಿಸಿಕೊಂಡು ಹೋಗಿ ಮಾಡಿದ ಭಾಷಣವಲ್ಲ ಅಥವಾ ಪತ್ರಕರ್ತರ ನಡೆ-ನುಡಿ ಹೀಗೇ ಇರಬೇಕೆಂದು ಹೇಳುವುದೂ ನನ್ನ ಉದ್ದೇಶವಾಗಿರಲಿಲ್ಲ. ಹೀಗೇ ಮಾತಿನ ಲಹರಿಯಲ್ಲಿ ಹೊರಬಿದ್ದ ಶಬ್ದಗಳು.

***

ನನ್ನ ಬಗ್ಗೆ ಹೀಗೆ ವಿನಾಕಾರಣ ಅಕ್ಕರೆ ತೋರುವವರು ಕರ್ನಾಟಕದ ಎಲ್ಲ ಕಡೆ ಇದ್ದಾರೆ. ಮೊನ್ನೆ ಕೊಡಗಿನ ಪತ್ರಕರ್ತರು ಹೀಗೊಂದು ಕಾರ್ಯಕ್ರಮಕ್ಕೆ ಆಹ್ವಾನಿಸಿ ಸನ್ಮಾನಿಸಿದರು. ನನ್ನೊಂದಿಗೆ `ಸನ್ಮಾನ ಹಾಗೂ ಗೌರವಾರ್ಪಣೆಗೆ’ ಪಾತ್ರರಾದವರು ಪ್ರಜಾವಾಣಿಯ ಹಿರಿಯ ಪತ್ರಕರ್ತರಾದ ಕ್ರೀಡಾ ಸಂಪಾದಕ ಪೊನ್ನಪ್ಪ ಹಾಗೂ ಬ್ಯೂರೋ ಮುಖ್ಯಸ್ಥರಾದ ಇ.ವಿ.ಸತ್ಯನಾರಾಯಣರವರು. ಕೊಡಗು ಪತ್ರಿಕಾ ಭವನ ಟ್ರಸ್ಟ್ ಪತ್ರಿಕಾ ಭವನದ ಒಂಬತ್ತನೇ ವಾರ್ಷಿಕೋತ್ಸವದ ಅಂಗವಾಗಿ ಮಡಿಕೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಅದು. ಈ ಕಾರ್ಯಕ್ರಮವನ್ನ ಉದ್ಘಾಟಿಸಿದ ನಾನು ಅನಿವಾರ್ಯವಾಗಿ ಒಂದೆರಡು ಮಾತುಗಳನ್ನ ಆಡಲೇಬೇಕಾಯ್ತು.

ನೆನಪಿಸಿಕೊಂಡು ನಿಮ್ಮ ಮುಂದೆ ಹೇಳುವುದಾದರೆ:

ಎಂಬತ್ತರ ದಶಕದಲ್ಲಿ ಕೆ.ಎಫ್.ಸಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ತನ್ನ ಶಾಖೆಯನ್ನ ತೆರೆದಾಗ ಆಗ ನಡೆದ ಪ್ರತಿಭಟನೆ, ದಾಂಧಲೆಗಳು ಈಗಲೂ ನನ್ನ ಕಣ್ಣೆದುರು ಕಟ್ಟಿದಂತಿದೆ. ಅದು ಮುಖ್ಯವಾಗಿ ರೈತ ಸಂಘ ನಡೆಸಿದ ಹೋರಾಟ. ವಿದೇಶಿ ಫುಡ್ ಜಾಯಿಂಟ್ಗಳು ಅಥವಾ ಹೊಟೇಲುಗಳ ಅವಶ್ಯಕತೆ ಭಾರತಕ್ಕೆ ಇಲ್ಲ ಎಂದು ಸಾರುವುದು ಈ ಪ್ರತಿಭಟನೆಯ ಉದ್ದೇಶವಾಗಿತ್ತು. ಇದಾದ ಒಂದು ದಶಕದ ನಂತರ ಬಿಜೆಪಿಯ ಹಿರಿಯ ಮುಖಂಡ ನಮಗೆ ಬೇಕಿರುವುದು ಕಂಪ್ಯೂಟರ್ ಚಿಪ್ಸ್ ಗಳೇ ಹೊರತು ಅಂಕಲ್ ಚಿಪ್ಸ್ ಅಲ್ಲ ಎಂದಿದ್ದರು. ಮರಳಿ ಕೆಂಟುಕಿ ಫ್ರೈಡ್ ಚಿಕನ್ ಗೆ ಬರುವುದಾದರೆ, ಸುಮಾರು ಒಂದು ವರ್ಷಕಾಲ ಕೆ.ಎಫ್.ಸಿ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವುದು ಸಾಧ್ಯವಾಗಲೇ ಇಲ್ಲ. ಅಂದರೆ ಕನ್ನಡ ಜನಮಾನಸದಲ್ಲಿ ಇಂಥ ವಿದೇಶಿ ಸಂಸ್ಥೆಗಳು ಬೆಂಗಳೂರಿನಲ್ಲಿ ತಳ ಊರುವ ಬಗ್ಗೆ ಅಗಾಧವಾದ ಪ್ರತಿರೋಧವಿತ್ತು. ಆದರೆ ಈಗ ಬೆಂಗಳೂರಿನಂಥ ಬೃಹತ್ ನಗರಗಳ ಮಾತಿರಲಿ, ಚನ್ನಪಟ್ಟಣ ಮತ್ತು ಮದ್ದೂರಿನ ನಡುವಣ ಕೋಲೂರಿನ ಬಳಿ ಮೆಕ್ ಡೊನಾಲ್ಡ್ ಆರಂಭವಾಗಿದೆ. ರಾಜೀವ ಗಾಂಧಿ ಮತ್ತು ಪಿ.ವಿ.ನರಸಿಂಹರಾಯರು ಭಾರತವನ್ನು ಜಾಗತೀಕರಣಕ್ಕೆ ಒಡ್ಡಿದ ಪರಿಣಾಮ ಇದು.

ಇದನ್ನು ಹೇಳುತ್ತಿರುವಾಗಲೇ ಗೊಂದಲಗಳು ಆರಂಭವಾಗುತ್ತವೆ. ಇಂದಿನ ತಂತ್ರಜ್ಞಾನ ಶಕೆ ಸೃಷ್ಟಿಸಿರುವ ಲಕ್ಷಾಂತರ ಕೆಲಸಗಳನ್ನ (jobs) ನಾವು ಮರೆಯಲಾಗುವುದಿಲ್ಲ. ಇವರನ್ನ ಐ.ಟಿ.ಕೂಲಿಗಳು ಎಂದು ಎಷ್ಟೇ ಜರೆದರೂ ಒಂದು ಸತ್ಯವನ್ನ ಮರೆ ಮಾಚಲಾಗುವುದಿಲ್ಲ. ಎರಡು-ಎರಡೂವರೆ ದಶಕಗಳ ಹಿಂದೆ ನಮ್ಮಂಥವರು ವಿಶ್ವವಿದ್ಯಾಲಯಗಳಿಂದ ಹೊರಬಂದಾಗ ಸಣ್ಣಪುಟ್ಟ ಉದ್ಯೋಗಗಳಿಗೂ ಪರದಾಡಬೇಕಾಗಿತ್ತು. ಈಗ ತೀರಾ ಅಂಥ ಪರಿಸ್ಥಿತಿ ಇಲ್ಲ.

ಹಾಗಾದರೆ ನಮ್ಮೆಲ್ಲರ ಬದುಕು ಅಷ್ಟೊಂದು ಸುಂದರವಾಗಿದೆಯೇ, ಸಹನೀಯವಾಗಿದೆಯೇ? ಶಾಂತವೇರಿ ಗೋಪಾಲ ಗೌಡರ ಕಾಲದ ಮಾತು ಬೇಡ. ರೈತ ಚಳುವಳಿ, ದಲಿತ ಚಳುವಳಿ ಹಾಗೂ ಗೋಕಾಕ್ ಚಳುವಳಿಯ ಹಿನ್ನೆಲೆಯಲ್ಲಿ 1983ರಲ್ಲಿ ಕರ್ನಾಟಕದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಬಂತು. ಆಗಿನ ಚುನಾವಣೆಯಲ್ಲಿ ಹಲವು ಸಾವಿರ ಅಥವಾ ಒಂದೆರಡು ಲಕ್ಷ ರುಪಾಯಿ ಖರ್ಚು ಮಾಡಿದ ಎಷ್ಟೋ ಯುವಕರು ಶಾಸಕರಾಗಿ ಆರಿಸಿ ಬಂದರು.

ಈಗ ಒಂದು ಚುನಾವಣೆಗೆ ಗೆಲ್ಲಲು ಅಥವಾ ಸೋಲಲು ಹಲವು ಕೋಟಿಗಳು ಬೇಕು. ಒಬ್ಬ ಶಾಸಕನ ತಲೆ ಇಪ್ಪತ್ತೈದು-ಮೂವತ್ತು ಕೋಟಿ ಬೆಲೆ ಬಾಳುತ್ತದೆ ಎನ್ನುತ್ತಾರೆ. ನನ್ನ ಅನುಭವದ ಒಂದು ಮಾತು ಹೇಳುವುದಾದರೆ ಚನ್ನಪಟ್ಟಣದ ಶಾಸಕರಾಗಿದ್ದ ಸರಳ ಸಜ್ಜನ ಡಿ.ಟಿ.ರಾಮು (ಇಂದಿನ ಪತ್ರಿಕೋದ್ಯಮದ ಪರಿಭಾಷೆಯಲ್ಲಿ ಹೇಳುವುದಾದರೆ Vokkaliga Heart landನಿಂದ ಗೆದ್ದಿದ್ದ ತೀರಾ, ತೀರಾ ಅಲ್ಪ ಸಂಖ್ಯಾತರಾದ ಬೆಸ್ತ ಜನಾಂಗದವರು ರಾಮು) ನನ್ನೊಂದಿಗೆ ಚನ್ನಪಟ್ಟಣದಿಂದ ಬೆಂಗಳೂರಿಗೆ ನಿಂತುಕೊಂಡೇ (ಕುಳಿತವರು ಜಾಗ ಕೊಡಲು ಬಂದಾಗ ನಿರಾಕರಿಸಿದ್ದರು) ಪಯಣಿಸಿದ್ದು ನನ್ನ ನೆನಪಿನಲ್ಲಿದೆ. ಆದರೆ ಇಂದು ಅದೇ ಚನ್ನಪಟ್ಟಣದ ಶಾಸಕ ಅಶ್ವತ್ಥ್ ಇಪ್ಪತ್ತು-ಇಪ್ಪತ್ತೈದು ಕೋಟಿ ಅಮೇಧ್ಯ ನುಂಗಿದ್ದಾನೆ ಎನ್ನುತ್ತಾರೆ. ಆತನನ್ನ ಕೇಳಿದರೆ ಚುನಾವಣೆ ಗೆಲ್ಲಲು ತಾನು ಸೀರೆಯಿಂದ ಟಿವಿಯವರೆಗೆ; ನೂರರಿಂದ ಸಾವಿರ ನೋಟಿನವರೆಗೆ ಹಣ ಹಂಚಿ ಭಿಕಾರಿಯಾದೆ ಅನ್ನುತ್ತಾನಂತೆ.

ಇಂದಿನ ರಾಜಕಾರಣಿಗಳು ತಮ್ಮ ಪಾಪದಲ್ಲಿ ನಮ್ಮನ್ನೂ ಅಂದರೆ ಜನರನ್ನೂ ಭಾಗಸ್ಥರನ್ನಾಗಿ ಮಾಡುತ್ತಿದ್ದಾರೆ. ಹಳ್ಳಿಯಲ್ಲಿರುವ ಸ್ವಸಹಾಯ ಗುಂಪಿನ ಮಹಿಳೆಯರನ್ನ, ರೈತಾಪಿ ಕೆಲಸ ಮಾಡಿಕೊಂಡಿರುವ ಯುವಕರಿಗೆ ಹಣದ ಆಮಿಷ ಒಡ್ಡಿ ಕೆಡಿಸಿದ್ದಾರೆ. ಆದರೆ ಇದು ಇನ್ನೂ ಅಷ್ಟೊಂದು ವ್ಯಾಪಕವಾಗಿ ಆಗಿಲ್ಲ-ಎನ್ನುವುದು ಕೊಂಚ ಸಮಾಧಾನದ ಅಂಶ. ಈ ರಾಜಕಾರಣಿಗಳು ಅಥವಾ ಅಕಾರಸ್ಥರು ಹೇಗೆ ಇಡೀ ವಾತಾವರಣವನ್ನ ಕಲುಷಿತಗೊಳಿಸುತ್ತಿದ್ದಾರೆ ಎಂಬುದನ್ನು ಹೇಳಲು ನಾನು ಯತ್ನಿಸುತ್ತಿದ್ದೇನೆ. ಈ ಬ್ರಹ್ಮಾಂಡ ಭ್ರಷ್ಟತೆ ಭಾರತವನ್ನೇ ಮುಗಿಸಿಬಿಡುವಷ್ಟು ವೇಗವಾಗಿ ವ್ಯಾಪಿಸುತ್ತಿದೆ.

ಇದೊಂದು ಕಡೆಗಾದರೆ ಜಾಗತೀಕರಣದ ನೆಪದಲ್ಲಿ ನಾವು ಕಳೆದುಕೊಳ್ಳುತ್ತಿರುವ ಕೃಷಿ ಜಮೀನು. ರಾಜಾ ಸೀಟ್ನಲ್ಲಿ ನಿಂತು ಗೆಳೆಯರು ಬಣ್ಣಿಸಿದ್ದ ಪ್ರಕೃತಿಯ ಮೋಹಕ ದೃಶ್ಯವನ್ನ ಅರಸುತ್ತಿದ್ದಾಗ ಗೆಳೆಯ ಅನಿಲ್ ಹೇಳುತ್ತಿದ್ದರು: ಕಳೆದ ವರ್ಷ ಬಂದಾಗ ಅಲ್ಲಿರುವ ಕಾಟೇಜ್ಗಳು, ಮನೆಗಳು ಬಂದಿರಲಿಲ್ಲ. ಒಂದೆರಡು ವರ್ಷಕ್ಕೆ ಈಗ ಕಾಣುತ್ತಿರುವ ಹಸಿರೂ ಮಾಯವಾಗಿ ಬಿಡಬಹುದು ಅನ್ನಿಸುತ್ತದೆ ಎಂದರು. ಕೊಡಗಿನಲ್ಲಿ ಕಾಫಿ, ಕಿತ್ತಳೆ ಮಾಯವಾಗಿ Home stayಗಳು ಹೆಚ್ಚುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಇದನ್ನು ಎರಡೂ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದು. ಕಾಫಿಯಿಂದ, ಕಿತ್ತಳೆಯಿಂದ ಏನೂ ಗಿಟ್ಟದೆ ಹೋದ್ದರಿಂದ ಈ ಹೋಂ ಸ್ಟೇಗಳು ಹೆಚ್ಚುತ್ತಿವೆ. ಪ್ರಕೃತಿಯಲ್ಲಿಯೇ ಇಂಥ adaptation ಇದೆ ಎಂದು ಸುಲಭವಾಗಿ ಹೇಳಬಹುದು. ಹಿಂದಿನ ಮುಖ್ಯಮಂತ್ರಿಯೊಬ್ಬರು ಹೇಳಿದ್ದರು! “ಬೆಂಗಳೂರಿನಿಂದ ನೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಹೀಗಿರುವಾಗ ಅವರ ಜಮೀನಿಗೆ ಒಳ್ಳೆ ಬೆಲೆ ಕೊಟ್ಟು ಕೊಂಡರೆ ಏನು ತಪ್ಪು?”

ಇದೆಲ್ಲ ವಾಸ್ತವವಾದ ವಿಚಾರಗಳೇ. ಮೊನ್ನೆ ಯುರೋಪ್ ಪ್ರವಾಸ ಮಾಡಿ ಬಂದ ಸ್ನೇಹಿತರೊಬ್ಬರು ಹೇಳುತ್ತಿದ್ದರು: “ಯುರೋಪಿನ ರಾಷ್ಟ್ರಗಳು ನಮಗಿಂತ ಮೊದಲೇ ಕೈಗಾರಿಕೀಕರಣಕ್ಕೆ, ಜಾಗತೀಕರಣಕ್ಕೆ ತಮ್ಮನ್ನ ಒಡ್ಡಿಕೊಂಡಿದ್ದರೂ ಕೃಷಿಯ ಬಗೆಗಿನ ಅವರ ಒಲವು ಇನ್ನೂ ಹೆಚ್ಚಾಗಿದೆ. ಸಣ್ಣ ಪುಟ್ಟ ದೇಶಗಳು ಕೂಡಾ ತಮಗೆ ಬೇಕಾದ ದವಸ ಧ್ಯಾನ, ಹೂವು ಹಣ್ಣುಗಳನ್ನ ತಾವೇ ಬೆಳೆದುಕೊಳ್ಳುತ್ತಿವೆ. ಡೈರಿ ಫಾರ್ಮಿಂಗ್ ಮತ್ತು ದ್ರಾಕ್ಷಿ ಬೆಳೆಯಲ್ಲಿ (ವೈನ್ಗಾಗಿ) ಹಲವು ರಾಷ್ಟ್ರಗಳ ಸಾಧನೆ ಕಂಡರೆ ಆಶ್ಚರ್ಯವಾಗುತ್ತದೆ. ನಮ್ಮ ದೇಶದಲ್ಲಿ ನಗರೀಕರಣ (urbanisation)ವನ್ನೇ ನಾವು ಅಭಿವೃದ್ಧಿ ಎಂದು ಭ್ರಮಿಸಿದ್ದೇವೆ…”

ಈಗ ನಿಮಗೆ ಎಲ್ಲಾ ಸ್ಪಷ್ಟವಾಗಿರಬೇಕು. ಅತ್ಯಂತ ಗೊಂದಲದ, ಸಂಕೀರ್ಣ ಸ್ಥಿತಿಯಲ್ಲಿ ನಾವಿದ್ದೇವೆ. ಎಂಥ ಗೊಂದಲ ಎಂದರೆ ಒಬ್ಬ ಪರಮ ಭ್ರಷ್ಟ, ನೀಚ ರಾಜಕಾರಣಿ, ನೇತಾರ ಕೂಡ ತನ್ನ ಭ್ರಷ್ಟತೆಯನ್ನ ಚುನಾವಣೆ ಖರ್ಚಿನ ನೆಪ ಹೇಳಿ, ಶಾಸಕರ ಖರೀದಿ ವ್ಯವಹಾರದ ಬಗ್ಗೆ ಹೇಳಿ ತನ್ನನ್ನ `ಸಕಾರಣವಾಗಿ’ ಸಮರ್ಥಿಸಿಕೊಳ್ಳಬಲ್ಲ. “ಅಷ್ಟೊಂದು ಖರ್ಚು ಮಾಡಿ ಚುನಾವಣೆ ಗೆಲ್ತಾರೆ, ಅಕಾರದಲ್ಲಿ ಇರೋಕ್ಕೆ ಕೂಡ ಕೋಟ್ಯಂತರ ಸುರಿಯಬೇಕು; ಹೀಗಿರುವಾಗ ಲೋಕಾಯುಕ್ತರು ಕೈಗೆ ಜುಟ್ಟು ಜನಿವಾರ ಎಲ್ಲ ಕೊಡ್ಬೇಕು ಅಂದರೆ ಯಾರು ಒಪ್ತಾರೆ ಸಾರ್. ಅದೆಲ್ಲಾ ನಿಮ್ಮಂಥವರು ಬರೆಯೋಕ್ಕೆ ಹೇಳೋಕ್ಕೆ ಚೆನ್ನಾಗಿರುತ್ತೆ ಅಷ್ಟೆ…” ಎಂದು ಜನಸಾಮಾನ್ಯರೇ ಮಾತಾಡುವುದನ್ನ ನಾನು ಕೇಳಿದ್ದೇನೆ.

ಇಂಥ ಒಂದು ಸಂದಿಗ್ಧ ಸ್ಥಿತಿಯಲ್ಲಿ ಪತ್ರಕರ್ತರ ಜವಾಬ್ದಾರಿ ಏನು?

ಶಾಸಕಾಂಗ ಮತ್ತು ಕಾರ್ಯಾಂಗ  ಭ್ರಷ್ಟ ಕೂಪದಲ್ಲಿ ಮುಳುಗಿದ್ದರೆ, ನ್ಯಾಯಾಂಗ ಕೂಡ ಹಿಂದೆ ಬಿದ್ದಂತೆ ಕಾಣುತ್ತಿಲ್ಲ. ಖ್ಯಾತ ನ್ಯಾಯವಾದಿ ಶಾಂತಿ ಭೂಷಣ್ ಹಿಂದಿನ ಸುಪ್ರೀಂ ಕೋರ್ಟ್  ಮುಖ್ಯ ನ್ಯಾಯಾಶರಲ್ಲಿ ಶೇಕಡಾ 80ರಷ್ಟು ಭ್ರಷ್ಟರಿದ್ದರು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಪತ್ರಿಕಾರಂಗ ಮಾತ್ರ ತನ್ನ ಪಾವಿತ್ರ್ಯ ಉಳಿಸಿಕೊಳ್ಳಬೇಕೆಂದು ನಿರೀಕ್ಷಿಸುವುದು ತಪ್ಪಾಗುತ್ತದೇನೋ. ಆದರೆ ಅನ್ಯಮಾರ್ಗವಿಲ್ಲ, ನಮ್ಮ ಕರ್ತವ್ಯದಿಂದ ನಾವು ವಿಮುಖರಾಗಬಹುದು. ನಮ್ಮ ವೃತ್ತಿಯಲ್ಲಿ ರಾಜಕಾರಣಿಗಳೊಂದಿಗೆ, ಅಕಾರಸ್ಥರೊಂದಿಗೆ, ಸೆಲೆಬ್ರಿಟಿಗಳೊಂದಿಗೆ ಸಂಪರ್ಕ ಹೊಂದಿರಬೇಕಾಗುತ್ತದೆ. ಆದರೆ ಅವರೊಂದಿಗೆ ನಮ್ಮ ಬಾಂಧವ್ಯ ಅಂಟಿಯೂ ಅಂಟದಂತಿರಬೇಕು. ಅವರ ಎದುರೇ ಕುಳಿತಿದ್ದರೂ (ಅಕಸ್ಮಾತ್ ಗುಂಡು ಹಾಕುತ್ತಿದ್ದರೂ!) ಒಂದು ದೂರವನ್ನು ಕಾಯ್ದುಕೊಳ್ಳಬೇಕು.

ಮತ್ತೇನು ಹೇಳಲಿ ನನಗೆ ತುಂಬಾ organised ಆಗಿ, ಮೋಹಕವಾಗಿ ಮಾತಾಡಲು ಬರುವುದಿಲ್ಲ. ನನ್ನ ಕೆಲವು ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಅಧ್ಯಕ್ಷತೆ ವಹಿಸಿರುವ ಟಿ.ಪಿ.ರಮೇಶ್ ಹಾಗೂ ನನ್ನೊಂದಿಗೆ ಇರುವ ಎಲ್ಲರಿಗೂ ವಂದಿಸುತ್ತಾ ನನ್ನ ಮಾತು ಮುಗಿಸುತ್ತೇನೆ.

(ಒಂದಿಷ್ಟು ಕಾಲದ ಹಿಂದೆ ಬರೆದದ್ದು)

***

ನಂತರ ಮಾತನಾಡಿದ ಪೊನ್ನಪ್ಪನವರು ಸಹಜವಾಗಿಯೇ (ಉತ್ತಮ ಸಂಘಟಕರೂ ಆಗಿರುವುದರಿಂದ ಪತ್ರಕರ್ತರು ತಮ್ಮ ಕ್ಷೇಮಾಭಿವೃದ್ಧಿಯ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹೇಳಿದರು. ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಆರು ವರ್ಷಗಳ ಕಾಲ ಕೊಡಗು ಜಿಲ್ಲಾ ವರದಿಗಾರರಾಗಿದ್ದ ಸತ್ಯನಾರಾಯಣ ಅಂದಿನ ದಿನಗಳನ್ನ ಅದರಲ್ಲಿಯೂ ಗುಂಡೂರಾಯರು ಚುನಾವಣೆ ಸೋತ ಸಂದರ್ಭದಲ್ಲಿ ಅಲ್ಲಿನ ಮತಗಟ್ಟೆಯಲ್ಲಿದ್ದ ವಾತಾವರಣವನ್ನ; ಅವರು ಜನರಲ್ ಕಾರಿಯಪ್ಪನವರನ್ನ ಭೆಟ್ಟಿಯಾಗಿ ಅವರ ಖಾಸಗಿ ಲಾಂಜ್ನಲ್ಲಿ ಅವರ ಕೈಯಿಂದಲೇ ವ್ಹಿಸ್ಕಿ ಸ್ವೀಕರಿಸಿದ್ದನ್ನ ರಸವತ್ತಾಗಿ ಬಣ್ಣಿಸಿದರು.

ಅಂದು ಮುಂಜಾನೆಯಿಂದ ನಡುರಾತ್ರಿಯವರೆಗೆ ನನ್ನೊಂದಿಗಿದ್ದು ಮಡಿಕೇರಿಯ ಹಲವಾರು ಪ್ರಸಿದ್ಧ ಪ್ರವಾಸ ತಾಣಗಳನ್ನು ತೋರಿ; ಸುಸಂಸ್ಕೃತ-ಅಭಿರುಚಿವಂತ ಮಹಿಳೆಯೊಬ್ಬರು ನಡೆಸುತ್ತಿರುವ Home stayಯನ್ನ ಕೂಡ ಕಿರಿಯ ಗೆಳೆಯ ಅನಿಲ್ (ಅವರು ಮೈಸೂರು ವಿವಿಯಲ್ಲಿ ನಿವೇದಿತಾಗೆ ಜೂನಿಯರ್ ಆಗಿದ್ದರಂತೆ) ತೋರಿದರು. ಈಗಾಗಲೇ ಮನೆಗಳ ಭಾರಕ್ಕೆ ಕುಸಿಯುವಂತೆ ಕಾಣುತ್ತಿರುವ ಪುಟಾಣಿ ನಗರ ಮಡಿಕೇರಿಯಲ್ಲಿಯೇ ಇಂಥ ಮುನ್ನೂರು ಹೋಂ ಸ್ಟೇಗಳಿವೆಯಂತೆ.

ಅವರಿಗೆ, ಅವರ ಸ್ನೇಹಿತರಿಗೆ ಹಾಗೂ ನಿಮಗೆ ನನ್ನ ಭಾಷಣದಿಂದ ಬೋರ್ ಹೊಡೆಸಿದ್ದರೆ ಕ್ಷಮೆ ಇರಲಿ.

 

 

‍ಲೇಖಕರು G

24 March, 2011

1 Comment

  1. neehaarika

    chennagide baraha.ಹೌದು ನಾವು ಕೃಷಿ ಮತ್ತು ಪರಿಸರಕ್ಕೆ ಆದ್ಯತೆ ನೀಡಬೇಕು. ಆದರೆ ಹೋಮ್ ಸ್ಟೆ ಗಳನ್ನು ಮಾಡುತ್ತಿರುವವರು ಶ್ರೀಮಂತ ರೈತರು ಎಂದು ನೀವು ಗಮನಿಸಬೇಕು. ಬಡ ರೈತರು ಇದ್ದಂತೆಯೆ ಇರುತ್ತಾರೆ ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading