ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಸಂಕೇತಿಮೂಲ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

2

ಸಂಕೇತಿಮೂಲ

ಆರ್. ಕೆ. ಶ್ರೀಕಂಠನ್ ರವರು ‘ಸಂಕೇತಿ’ ಎಂಬ ಸಮುದಾಯಕ್ಕೆ ಸೇರಿದವರು. ಈ ಸಮುದಾಯವು ಶತಮಾನಗಳಿಂದ ಸಂಗೀತ ಹಾಗೂ ಕಲಾಕ್ಷೇತ್ರಗಳಲ್ಲಿ ಯೋಗದಾನವನ್ನೀಯುತ್ತ ಬಂದಿದೆ. ಕರ್ನಾಟಕದಲ್ಲಂತೂ ಸಂಕೇತಿಗಳು ಎಂದರೆ ಸಂಗೀತ, ವೇದ ಹಾಗೂ ಕೃಷಿಗೆ ‘ಸಂಕೇತ’ವೇ ಆಗಿಬಿಟ್ಟಿದ್ದಾರೆ! ಈ ಕ್ಷೇತ್ರದಲ್ಲಿನ ಸಂಕೇತಿಗಳ ಅನುಪಮ ಯೋಗದಾನವನ್ನು ಗಮನಿಸಿದರೆ ಅವರು ಈ ಕೀರ್ತಿಗೆ ಸರ್ವಥಾ ಅರ್ಹರು ಎನ್ನುವುದು ನಿರ್ವಿವಾದ.

ಬಹುಮಟ್ಟಿಗೆ ಮಧ್ಯಮವರ್ಗದವರಾದ ಇವರು ಪರಿಶ್ರಮದಿಂದ ದುಡಿದು ಸಂಪಾದಿಸುವ ಸ್ವಭಾವದವರು. ಸ್ವಧರ್ಮ-ಸ್ವವೃತ್ತಿಯಲ್ಲಿ ನಿಷ್ಠೆಯಿಂದ ತೊಡಗಿದ್ದು ಶ್ರೇಯಸ್ಸನ್ನು ಸಂಪಾದಿಸಬೇಕೆಂಬ ನೀತಿಗೆ ಇವರು ನಿದರ್ಶನವೇ ಆಗಿದ್ದಾರೆ. ಇದು ಸಂಕೇತೀ ಹಳ್ಳಿಗರ ಮಾತುಗಳಲ್ಲೇ ಸ್ಪಷ್ಟವಾಗುತ್ತದೆ- “ಯಾವುದನ್ನೇ ಹಿಡಿಯಲಿ, ಅದನ್ನು ಸಾಟಿಯಿಲ್ಲದಂತೆ ಸಾಧಿಸಿ ಮುಗಿಸುವುದೇ ಸಂಕೇತಿ ಪ್ರವೃತ್ತಿ. ಈ ಕಾರಣಕ್ಕಾಗಿಯೇ ಈ ಸಮುದಾಯವು ಪ್ರಾಮಾಣಿಕತೆ ಹಾಗೂ ಪರಿಶ್ರಮಶೀಲತೆಗೆ ಹೆಸರಾಗಿದೆ.”

ಈ ವೇದಾಧ್ಯಾಯೀ ಸಮುದಾಯದ ಹುಟ್ಟಿನ ಮೂಲವನ್ನಾಗಲಿ, ಸಂಗೀತ-ವೇದಗಳಲ್ಲಿನ ಇವರ ಅನನ್ಯಾಭಿಜ್ಞತೆಯ ಮೂಲಪ್ರೇರಣೆಯನ್ನಾಗಲಿ ಗುರುತಿಸುವಂತಹ ಯಾವುದೇ ಸಮಗ್ರ ದಾಖಲೆ ಲಭ್ಯವಿಲ್ಲ. (ಈ ಸಮುದಾಯದವರು ಶಾಂಕರಾದ್ವೈತಮತವನ್ನು ಅನುಸರಿಸುತ್ತಾರೆ; ಹೆಚ್ಚಿನವರು ಶೃಂಗೇರೀ ಶಾರದಾಪೀಠಕ್ಕೆ ನಡೆದುಕೊಳ್ಳುತ್ತಾರೆ). ಈ ಸಮುದಾಯದ ಖಚಿತವಾದ ಮೂಲಸ್ಥಾನವನ್ನಾಗಲಿ, ಕರ್ನಾಟಕದ ಹಳ್ಳಿಗಳಿಗೆ ಹಿಂಡುಹಿಂಡಾಗಿ ವಲಸೆ ಬಂದ ಕಾರಣ-ಹಿನ್ನಲೆಗಳನ್ನಾಗಲಿ ಖಚಿತವಾಗಿ ಗುರುತಿಸಿ ವಿವರಿಸಲು ಇಲ್ಲಿಯವರೆಗೂ ಯಾವ ಇತಿಹಾಸಜ್ಞರಿಗೂ ಸಾಧ್ಯವಾಗಿಲ್ಲ.

ಸಂಗೀತ ಮತ್ತು ಸಾಹಿತ್ಯಕ್ಷೇತ್ರಗಳಲ್ಲಿ ಸಂಕೇತಿಗಳು ವಿಪುಲವಾಗಿ ಕಾಣಿಸಿಕೊಂಡಿದ್ದಾರೆ. ಗಾಯಕರಾಗಿಯೂ, ವಾದ್ಯಕೋವಿದರಾಗಿಯೂ, ವಾಗ್ಗೇಯಕಾರರಾಗಿಯೂ, ಲಕ್ಷಣಗ್ರಂಥಕಾರರಾಗಿಯೂ, ಗಮಕ-ಕಲಾವಿದರಾಗಿಯೂ, ಶಿಕ್ಷಕರಾಗಿಯೂ, ಸಂಸ್ಕೃತ ಹಾಗೂ ವೇದವಿದ್ವಾಂಸರಾಗಿಯೂ ಸಂಕೇತಿಗಳು ಬೆಳೆಗಿ ನಿಂತಿದ್ದಾರೆ. 

ಹಣವಂತರೆನ್ನುವ ಖ್ಯಾತಿ ಪಡೆಯದಿದ್ದರೂ, ಮೇಧಾಶಕ್ತಿಗೂ  ಪರಿಶ್ರಮಕ್ಕೂಹೆಸರುವಾಸಿಗಳಾಗಿದ್ದಾರೆ. ಅಡಕೆ, ಹೊಗೆಸೊಪ್ಪುಮತ್ತು ಬಾಳೆದೊನ್ನೆಗಳ ತಯಾರಕರಾಗಿಯೂ ಇವರು ಖ್ಯಾತರು.

ಸಂಕೇತಿಗಳು ಯಾರು? ಇವರ ಮೂಲವೇನು? ಇವರ ಭಾಷೆಯೆಂತಹದ್ದು? 

ಸಂಕೇತಿ-ಸಮುದಾಯವನ್ನು ದಕ್ಷಿಣ ಭಾರತದ ಐಯ್ಯರ್ ಬ್ರಾಹ್ಮಣ ಸಮುದಾಯದ ಉಪಪಂಗಡವೆಂದು ಪರಿಗಣಿಸಲಾಗುತ್ತದೆ. ಸುಮಾರು 900 ವರ್ಷಗಳ ಹಿಂದೆ ಸಂಕೇತಿಗಳು ತಮ್ಮ ಮೂಲಸ್ಥಾನವನ್ನು ಬಿಟ್ಟು ವಲಸೆ ಬಂದರು.ಕರ್ನಾಟಕದಲ್ಲೇ ಹೆಚ್ಚಾಗಿ ನೆಲೆ ನಿಂತರಂತೆ. ಕೇರಳದ ಸೀಮೆಯ ಬಳಿ ಇರುವ ತಮಿಳುನಾಡಿನ ತಿರುನಲ್ವೇಲಿಯ ಶೇಂಕೊಟ್ಟೈ ಎಂಬ ಸ್ಥಳವೇ ಇವರ ಮೂಲ ಎನ್ನಲಾಗುತ್ತದೆ. ಹಾಸನದ ಕೌಶಿಕನಗರ ಹಾಗೂ ಮೈಸೂರು ಜಿಲ್ಲೆಯ ಬೆಟ್ಟದಪುರಗಳಿಗೆ ಮೊದಮೊದಲು ಬಂದಿಳಿದ ಇವರು ನಂತರ ದಕ್ಷಿಣ ಕನ್ನಡದ ಇತರ ಗ್ರಾಮಗಳಲ್ಲೂ ನೆಲೆನಿಂತರು ಎನ್ನಲಾಗುತ್ತದೆ. ಇವರಲ್ಲಿ ಪ್ರಮುಖವಾದ ನಾಲ್ಕು ಪಂಗಡಗಳು- ಕೌಶಿಕ ಸಂಕೇತಿ, ಬೆಟ್ಟದಪುರ ಸಂಕೇತಿ, ಮತ್ತೂರು ಹೊಸಹಳ್ಳಿ ಸಂಕೇತಿ ಹಾಗೂ ಲಿಂಗದಹಳ್ಳಿ ಸಂಕೇತಿಗಳು. 

ಶ್ರೀಕಂಠನ್ ರವರು ಬೆಟ್ಟದಪುರ ಸಂಕೇತಿ ಪಂಗಡಕ್ಕೆ ಸೇರಿದವರು.

ಸ್ವತಃ ಸಂಕೇತಿಗಳಾದ  ಡಾ. ಬಿ. ಎಸ್.  ಪ್ರಣತಾರ್ತಿಹರನ್ ರವರು ಈ ಸಮುದಾಯದ ಕುರಿತಾಗಿ ವಿಸ್ತೃತ ಅಧ್ಯಯನವನ್ನು ಮಾಡಿ ಮಹಾಪ್ರಬಂಧವನ್ನು ರಚಿಸಿ ಡಾಕ್ಟೊರೇಟ್ ಅನ್ನು ಪಡೆದಿದ್ದಾರೆ. ಪ್ರಣತಾರ್ಥಿಹರನ್ ರವರು ಆಕಾಶವಾಣಿಯಲ್ಲಿ ಉದ್ಯೋಗಸ್ಥರಾಗಿದ್ದವರು. ಮೈಸೂರಿನಲ್ಲಿ ಇವರು ನಡೆಸುತ್ತಿರುವ ‘ಸಮುದಾಯದ ಅಧ್ಯಯನಕೇಂದ್ರ’ದಲ್ಲಿ ಸಂಕೇತಿಗಳಿಗೆ ಸಂಬಂಧಿಸಿದ ಇನ್ನೂ ಹೆಚ್ಚಿನ ವಿಚಾರಸಾಮಗ್ರಿಯು ಲಭ್ಯವಿದೆ. ಈ ಕೇಂದ್ರವು ಸಂಕೇತಿ-ಸಮುದಾಯದ ಕುರಿತಾದ ಅಧ್ಯಯನ, ಸಂಶೋಧನೆ, ದಾಖಲೀಕರಣಗಳನ್ನು ನಡೆಸುವುದರ ಜೊತೆಗೆ, ಒಂದು ನಿಯತಪತ್ರಿಕೆಯನ್ನೂ ಪ್ರಕಟಿಸುತ್ತದೆ. ಸಂಕೇತಿ-ಭಾಷೆ ಹಾಗೂ ಸಂಸ್ಕೃತಿಯ ಸಂರಕ್ಷಣೆಗಾಗಿ ಹಲವು ಕಾರ್ಯಕಲಾಪಗಳನ್ನು ನಡೆಸುತ್ತದೆ. ಈಗಾಗಲೇ ಸಂಕೇತಿ-ಅಧ್ಯಯನಕ್ಕೆ ಸಂಬಂಧಿಸಿದ 20 ಕಂತುಗಳ ಪಠ್ಯವನ್ನು ಇದು ಪ್ರಕಟಿಸಿದೆ. ಇವುಗಳಲ್ಲಿ ವಲಸೆ ಬಂದ ಸಂಕೇತಿ-ಸಮುದಾಯದವರ ಹಲವಾರು ವೈಶಿಷ್ಟ್ಯಗಳೂ ವಿವರಗಳೂ ಸಂಗ್ರಹವಾಗಿವೆ. 

ಒಂದು ಕಥಾನಕದ ಪ್ರಕಾರ, ಸಂಕೇತಿಗಳು ಪಾಂಡ್ಯರ ಆಳ್ವಿಕೆಯ ಕಾಲದಲ್ಲಿ ಎಂದರೆ, ಸುಮಾರು 900 ವರ್ಷಗಳ ಹಿಂದೆ, ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಶೇಂಕೊಟ್ಟೈ ಎಂಬ ಸ್ಥಳದಿಂದ ಕರ್ನಾಟಕಕ್ಕೆ ವಲಸೆ ಬಂದರು. ಇದಕ್ಕೆ ಸಂಬಂಧಿಸಿದ ಕಥೆಯೂ ಸ್ವಾರಸ್ಯಕರವಾಗಿದೆ. ನಾಚಾರಮ್ಮ ಎಂಬ ಹೆಸರಿನ ಸಾಧ್ವಿಯಾದ ಓರ್ವ ಬ್ರಾಹ್ಮಣಸ್ತ್ರೀ ತನ್ನ ಪರಿವಾರದ ಬಡತನವನ್ನು ನೀಗಿಸಿಕೊಳ್ಳಲು ಯೋಗಿಯೊಬ್ಬರನ್ನು ಸಮೀಪಿಸಿದಳು. ಗಂಡ-ಹೆಂಡತಿ ಮತ್ತು ಒಂದು ಮಗುವಿನ ಈ ಪರಿವಾರಕ್ಕೆ ಆ ಯೋಗಿಯು ಒಂದು ದಿವ್ಯ ಕಷಾಯವನ್ನು ನೀಡಿದರು. ಆದರೆ, ಆ ಕಷಾಯಸೇವನೆಯ ಉತ್ತರೋತ್ತರ ಪರಿಣಾಮಗಳ ಬಗ್ಗೆ ಭವಿಷ್ಯವನ್ನೂ ನುಡಿದರು- ‘ಅದನ್ನು ಸೇವಿಸುತ್ತಿದ್ದಂತೆ ಕೆಲವು ಅಹಿತಕರ ಭಯಾನಕ ಘಟನೆಗಳು ಸಂಭವಿಸುತ್ತವೆ. ಅದು ಪರಿವಾದವರ ಮೇಲೆ ತಕ್ಷಣವೇ ಪ್ರಭಾವ ಬೀರುತ್ತದೆ. ಪರಿವಾರದ ಮೂವರ ಪೈಕಿ ಒಬ್ಬರು ಸತ್ತು ಮತ್ತೊಬ್ಬರು ಮನೋವ್ಯಾಧಿಗ್ರಸ್ತರಾಗುತ್ತಾರೆ. ಆದರೆ ಮೂರನೆಯವರು ಮಾತ್ರ ಅಪಾರವಾದ ಆಧ್ಯಾತ್ಮಿಕಶಕ್ತಿಯನ್ನೂ ವಿದ್ಯಾಪರಿಣತಿಯನ್ನೂ ಪಡೆದು, ಹಲವು ಅನುಯಾಯಿಗಳನ್ನೂ ಹೊಂದುತ್ತಾರೆ. ಇದೇ ಮುಂದೆ ‘ಸಂಕೇತಿ’ ಎಂಬ ಪಂಗಡವಾಗಿ ಬೆಳೆದು, ವಿದ್ಯೆ ಹಾಗೂ ಪ್ರತಿಷ್ಠೆಗೆ ಖ್ಯಾತವಾಗುತ್ತದೆ’ ಎಂದು. 

ಆ ಪರಿವಾರದಲ್ಲಿ ನಾಚಾರಮ್ಮ ಮಾತ್ರವೇ ಬದುಕುಳಿದದ್ದು. ದೈವಕೃಪೆಯು ಅವಳಲ್ಲಿ ಅಮೋಘವಾದ ವೇದಜ್ಞಾನವನ್ನು ಮೂಡಿಸಿತು ಎನ್ನುವ ಪ್ರತೀತಿ ಇದೆ.  ಆಕೆಯು ಆಧ್ಯಾತ್ಮಿಕ ಕಲಾಪಗಳಲ್ಲೂ ಶಾಸ್ತ್ರಚರ್ಚೆಗಳಲ್ಲೂ ಭಾಗವಹಿಸಿದಾಗ ಅವಳ ಅಸಾಧಾರಣ ಪಾಂಡಿತ್ಯವು ಎಲ್ಲರನ್ನೂ ಬೆರಗಾಗಿಸುತ್ತಿತ್ತು. ನಾಚಾರಮ್ಮಳ ಈ ಅಪರಿಮಿತ ಸಾಮರ್ಥ್ಯವನ್ನು ಕಂಡು ಮತ್ಸರಿಸಿದ ಕೆಲವು ಸ್ಥಳೀಯರು ಅವಳಿಗೆ ಅವಮಾನವೆಸಗಲು ಹೊಂಚುಹಾಕುತ್ತಿದ್ದರು.

ಅನ್ನಸಮಾರಾಧನೆಯೊಂದರಲ್ಲಿ ನಾಚಾರಮ್ಮ ಬಡಿಸುವಾಗ ಉಡಬೇಕಿದ್ದ ಮಡಿಸೀರೆಗೆ ಉಪಾಯವಾಗಿ ಅಂಟವಾಳಕಾಯಿಯನ್ನು ಬಳಿದುಕೊಟ್ಟರು. ಉಟ್ಟಾಗ, ಆ ಸೀರೆಯು ನಾಚಾರಮ್ಮಳ ಮೈಯಿಂದ ಪದೇಪದೇ ಜಾರುತ್ತಲೇ ಇತ್ತು. ಆ ದುಷ್ಟರ ಕಿತಾಪತಿಯನ್ನು ತಕ್ಷಣವೇ ಗುರುತಿಸಿದ ಚತುರೆ ನಾಚಾರಮ್ಮಳು, ತಕ್ಷಣ ಆ ಸೀರೆಯ ಅಂಚನ್ನು ಭಾಗಶಃ ತನ್ನ ಎಡಭುಜದ ಮೇಲೆ ಗಂಟುಕಟ್ಟಿಕೊಂಡು ಬಿಗಿಗೊಳಿಸಿಕೊಂಡಳು. 900 ವರ್ಷಗಳ ಹಿಂದೆ ಆಕೆ ಕಟ್ಟಿದ ಆ ‘ಸೀರೆ-ಗಂಟು’ ಇಂದಿಗೂ ಸಂಕೇತಿಗಳ ಸಂಕೇತವೇ ಆಗಿದೆ! ಆದರೆ ಇಂತಹ ಸತತ ನಿಂದೆ ಮತ್ತು ತೊಂದರೆಗಳಿಂದ ಬೇಸತ್ತ ನಾಚಾರಮ್ಮಳು ತನ್ನ ವಾಸಸ್ಥಾನವನ್ನೇ ಬಿಟ್ಟು, ಹಸಿರಿನಿಂದ ಸಮೃದ್ಧವಾದ ಭೂಮಿಯನ್ನು ಹುಡುಕುತ್ತ ವಲಸೆ ಹೊರಟಳು. ಅವಳನ್ನು ನಿಷ್ಠೆಯಿಂದ ಅನುಸರಿಸುತ್ತಿದ್ದ ಇನ್ನೂರು ಪರಿವಾರಗಳು ತಕ್ಷಣವೇ ಅವಳೊಡನೆ ಹೊರಟವು. ಈ ದೊಡ್ಡ ಸಮುದಾಯವು ಕೇರಳ ಮತ್ತು ತಮಿಳುನಾಡಿನ ಸೀಮೆಗಳನ್ನು ದಾಟಿ, ಹೊಯ್ಸಳರ ಪ್ರಾಂತವಾದ ಹಾಸನವನ್ನು (ಹಳೇಬೀಡು) ತಲುಪಿತು.

ಮತ್ತೊಂದು ವದಂತಿಯಂತೆ ಸಂಕೇತಿಗಳು ಕೇರಳದ ಮೂಲಕ ಕೊಡಗನ್ನು ತಲುಪಿ, ಕುಶಾಲನಗರದ ಸಮೀಪ ಬಂದರು. ಅಲ್ಲಿನ ಸ್ಥಳೀಯ ಮುಖಂಡನೊಬ್ಬ ಸಂಕೇತಿ ಹೆಣ್ಣುಮಕ್ಕಳನ್ನು ಅಪಹರಿಸಿದನು. ಪುರುಷರು ಅವರಿಗಾಗಿ ಅಲ್ಲೇ ಕಾಯುತ್ತ ಇದ್ದರು. ಅಂತೂ ಇಂತೂ ಆ ಹೆಣ್ಣುಮಕ್ಕಳೆಲ್ಲ ಸುರಕ್ಷಿತವಾಗಿ ಹಿಂದಿರುಗಿದರು. ಕುಶಾಲನಗರದಿಂದ ಸುಮಾರು 8 ಕಿ.ಮೀ. ದೂರದ ಬೆಟ್ಟದಪುರದಲ್ಲಿ ಅವರೆಲ್ಲ ನೆಲೆಗೊಂಡರು. ನದೀತೀರದಲ್ಲೇ ವಾಸ್ತವ್ಯ ಹೂಡುವ ಸ್ವಭಾವದ ಸಂಕೇತಿಗಳು ಬೆಟ್ಟದ ಪಕ್ಕದಲ್ಲಿ ವಾಸ್ತವ್ಯ ಹೂಡುವುದಕ್ಕೆ ಈ ಪ್ರಸಂಗವೇ ಕಾರಣ ಎನ್ನಲಾಗುತ್ತದೆ.

ಸ್ವಾರಸ್ಯವೇನೆಂದರೆ, ಸಂಕೇತಿ ಹೆಣ್ಣುಮಕ್ಕಳ ಹಾಗೂ ಕೊಡಗಿನ ಹೆಣ್ಣುಮಕ್ಕಳ ಸೀರೆ ಉಡುವ ಶೈಲಿಯಲ್ಲಿ ಸಾದೃಶ್ಯವಿದೆ. ಅದು ಕರ್ನಾಟಕದ ಇತರೆಲ್ಲ ವರ್ಗದ ಹೆಣ್ಣುಮಕ್ಕಳ ಸೀರೆ ಉಡುವ ಶೈಲಿಗಿಂತ ಭಿನ್ನವಾಗಿರುವುದೂ ಗಮನಾರ್ಹ!

ಇನ್ನೊಂದು ಕಥಾನಕದ ಪ್ರಕಾರ ಸಂಕೇತಿಗಳ ಹಲವು ಪರಿವಾರಗಳು ತಿರುನೆಲ್ವೇಲಿಯ ಹತ್ತಿರದಲ್ಲೇ ಇದ್ದ ಕೇರಳದಲ್ಲಿನ ದೇವಾಲಯಗಳಿರುವ ಪ್ರಾಂತಗಳಿಗೆ ವಲಸೆ ಹೋಗಲಾರಂಭಿಸಿದ್ದವು. ದೇಗುಲಗಳ ನಿರ್ವಹಣೆಗೆ ಬೇಕಾದ ಸಂಕೇತಗಳನ್ನು (ನಿಯಮಗಳನ್ನು) ರಚಿಸಿಡಲಾಗಿ, ಆ ನಿಯಮಗಳನ್ನು ಪಾಲಿಸುವ ವರ್ಗವು ‘ಸಂಕೇತಿ’ಗಳೆಂದು ಗುರುತಿಲ್ಪಟ್ಟರು. ಇವರ ಮಧ್ಯದಲ್ಲಿ ಚುನಾಯಿತರಾದ ಮುಖ್ಯಸ್ಥರನ್ನು ‘ಸಭಾಯ್ಯರ್’ ಎಂದೂ ಆತನ ಪತ್ನಿಯನ್ನು ‘ನಾಚಾರಮ್ಮ’ ಎಂದೂ ಸಂಬೋಧಿಸಲಾಗುತ್ತಿತ್ತು. ಆದರೆ ತಿರುವಾಂಕೂರು ಹಾಗೂ ಮಲಬಾರು ಪ್ರದೇಶಗಳಲ್ಲಿ ಸಾಕಷ್ಟು ಪ್ರಭಾವಶಾಲಿಯಾಗಿದ್ದ ಈ ಪಂಗಡವು, ಗುಡ್ಡದ ಮೇಲಿನ (ಪಶ್ಚಿಮ ಘಟ್ಟಗಳ ಪೂರ್ವಭಾಗದ) ಕರ್ನಾಟಕದೆಡೆಗೆ ವಲಸೆ ಬರಲು ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಕಾರಣಗಳಾದರೂ ಏನಿರಬಹುದು ಎನ್ನುವುದು ನಿಖರವಾಗಿ ತಿಳಿದುಬಂದಿಲ್ಲ.

ಸಮುದಾಯದ ಅಧ್ಯಯನ ಕೇಂದ್ರದ ಹಲವು ಪುಸ್ತಕಗಳ ಪ್ರಾಕಾರ, ಪೋರ್ಚುಗೀಸರ ಆಕ್ರಮಣದೊಂದಿಗೆ ಪಶ್ವಿಮದ ಕಡಲತೀರದಲ್ಲಿ ಶಾಂತಿ-ಸುರಕ್ಷೆಗಳು ಕುಗ್ಗಿದಾಗ, ಈ ಪಂಗಡವು ಪಶ್ಚಿಮ ಘಟ್ಟಗಳನ್ನು ದಾಟಿ, ಕನ್ನಡನಾಡಿನ ಅಂದಿನ ಒಂದು ರಾಜಧಾನಿಯಾಗಿದ್ದ ಪೆರಿಯಾಪಟ್ಟಣಕ್ಕೆ ಬಂದಿಳಿದರು. ಮೈಸೂರು ಸಾಮ್ರಾಜ್ಯವಾದರೋ ಸ್ಥಾಪನೆಯಾದದ್ದು 16ನೆಯ ಶತಮಾನದ ಕೊನೆಯ ಭಾಗದಲ್ಲಿ. 1565ರಲ್ಲಿ ತಾಳೀಕೋಟೆ ಯುದ್ಧವಾದ ಕೆಲಕಾಲದ ನಂತರ, ವಿಜಯನಗರ ಸಾಮ್ರಾಜ್ಯದ ಪ್ರತಿನಿಧಿಯಾಗಿದ್ದ ಶ್ರೀರಂಗರಾಯನನ್ನು ಸೋಲಿಸಿದ ರಾಜ ಒಡೆಯರ್ ಈ ಸಾಮ್ರಾಜ್ಯವನ್ನು ಸ್ಥಾಪಿಸಿದರು.

ಹೊಯ್ಸಳರ ಪತನದ ನಂತರ ಸಂಕೇತಿಗಳು ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ಹಾಗೂ ತುಂಗಾನದಿಗಳ ತೀರಗಳಿಗೆ ಹರಡಿಕೊಂಡರು. ಒಂದು ಪಂಗಡವು ಮೈಸೂರು ಜಿಲ್ಲೆಯ ಬೆಟ್ಟದಪುರಕ್ಕೂ ಇತರ ಗುಂಪುಗಳು ಶಿವಮೊಗ್ಗೆಯ ಬಳಿಯ ಲಿಂಗದಪುರ, ಸಾಲಿಗ್ರಾಮ, ರಾಮನಾಥಪುರ, ಕೊಣನೂರು. ಕಟ್ಟೇಪುರ, ಕಣಗಾಲು, ಸರಗೂರು, ಕುಶಾಲನಗರ, ಕಣಿವೆ, ಪೆರಿಯಾಪಟ್ಟಣ, ಚಿಲ್ಕುಂದ, ಹರವೆ, ಹುಣಸೂರು, ಹಣಸೊಗೆ, ಎಡತೊರೆ (ಕೆಆರ್ ನಗರ) ತಿಪ್ಪೂರು, ಗಾವದಗೆರೆ, ಕುಪ್ಪಳ್ಳಿ, ಹಳ್ಳಿಮೈಸೂರು, ಮೊಸಳೆ, ಸೋಮನಹಳ್ಳಿ, ಅಗ್ರಹಾರ, ಮಗ್ಗೆ, ಬರಗೂರು, ಮಾವಿನಕೆರೆ, ಮರಿತಮ್ಮನಹಳ್ಳಿ, ಶಾಂತಿಗ್ರಾಮ, ಪೋಮಗಾಮೆ ಹಾಗೂ ಹಂದ್ರಾಳುಗಳಿಗೂ ಹೋಗಿ ನೆಲೆಸಿದರು.

‘ಸಂಕೇತಿ’ ಎಂಬ ನಾಮಸಂಕೇತವು ಕಾಲಾಂತರದಲ್ಲಿ ಮೂಡಿತೆನ್ನಲಾಗುತ್ತದೆ. ಶೇಂಕೊಟ್ಟೈ ಮೂಲದವರೆಂದೂ, ‘ಸಂಕೇತ’ವಿಲ್ಲದೆ ವಲಸೆ ಬಂದರೆಂದೂ ಇವರಿಗೆ ಸಂಕೇತಿಗಳೆಂಬ ಹೆಸರು ಬಂತು ಎಂದು ಸಂಕೇತಿ ಸಾಹಿತ್ಯದಲ್ಲಿ ಉಲ್ಲೇಖಗಳಿವೆ.

ಸಂಕೇತಿಗಳ ಭಾಷೆ

ಸಂಕೇತಿಭಾಷೆಯು ಕನ್ನಡ, ತಮಿಳು, ಮಲಯಾಳಂ  ಭಾಷೆಗಳನ್ನಲ್ಲದೆ ಸಂಸ್ಕೃತವೂ ಸೇರಿದಂತೆ ಅಲ್ಲಿಲ್ಲಿ ಕೊಡವ, ತುಳುವ ಮತ್ತು ತೆಲುಗುಭಾಷೆಗಳ ಅಂಶಗಳನ್ನೊಳಗೊಂಡಿರುವುದು ಸ್ವಾರಸ್ಯಕರ. ಸಂಕೇತಿ ಸಮುದಾಯವು ದಾಕ್ಷಿಣಾತ್ಯ ರಾಜ್ಯಗಳ ವಿವಿಧ ಭೌಗೋಳಿಕ ಪರಿಸರಗಳಲ್ಲಿ ಸಂಚರಿಸುತ್ತ ಸಾಗಿದಂತೆ, ಅಲ್ಲಲ್ಲಿನ ಭಾಷೆಗಳ ಅಂಶಗಳನ್ನು ಮೈಗೂಡಿಸಿಕೊಳ್ಳುತ್ತ ಸಾಗಿದೆ ಎನ್ನುತ್ತಾರೆ ವಿಮರ್ಶಕರು. ಕೇರಳ—ತಮಿಳುನಾಡು ಸೀಮೆಗಳಲ್ಲೇ ಉಳಿದುಕೊಂಡ ಈ ಸಮುದಾಯದ ಪಂಗಡಗಳು ಮೂಲದ ‘ಗಟ್ಟಿ-ಸಂಕೇತಿಭಾಷೆ’ಯನ್ನೇ ಉಳಿಸಿಕೊಂಡುಬಂದಿದ್ದಾರೆಂದೂ, ಆ ನುಡಿಯು, ವಲಸಿಗರ ಭಾಷೆಯಂತೆ ಬಾಹ್ಯಪ್ರಭಾವಗಳನ್ನು ಮೈಗೂಡಿಸಿಕೊಂಡಿಲ್ಲವೆಂದೂ ಹೇಳಲಾಗುತ್ತದೆ. 

ದ್ರಾವಿಡಭಾಷಾತಜ್ಞರಾದ ಹಂ.ಪ. ನಾಗರಾಜಯ್ಯನವರ ಪ್ರಕಾರ ಸಂಕೇತಿ ಭಾಷೆಯು ಕನ್ನಡ ಮತ್ತು ತಮಿಳುಭಾಷೆಗಳಿಗಿಂತ ಭಿನ್ನವಾಗಿದ್ದು, ಸ್ವತಂತ್ರ ಶೈಲಿಯುಳ್ಳದ್ದಾಗಿದೆ. ಸಂಕೇತೀಭಾಷೆಯನ್ನು ಕನ್ನಡದ ಉಪಭಾಷೆ ಎಂದೇ ಗುರುತಿಸುವುದು ಸಂಪ್ರದಾಯ. ಆದರೆ ಸಂಕೇತಿ ಜನರು ಹೇಳುವುದೇನೆಂದರೆ ‘ಕನ್ನಡ, ತಮಿಳು  ಹಾಗೂ ಮಲಯಾಳಂಭಾಷೆಯನ್ನು ಮಾತನಾಡಬಲ್ಲವರಿಗೆ ಮಾತ್ರವೇ ಈ ಭಾಷೆಯನ್ನು ಗ್ರಹಿಸಲು ಸುಲಭವಾಗುವುದು, ಅನ್ಯಥಾ ಅಲ್ಲ’ ಎಂದು. 

ಸಂಕೇತಿಭಾಷೆಯು ಸಂಸ್ಕೃತ ಮತ್ತು ಕನ್ನಡಭಾಷೆಗಳಿಂದ ಬಹಳಷ್ಟು ಪ್ರಭಾವಗೊಂಡಿದ್ದು ಅಲ್ಲಿಂದ ಬಹಳವಾಗಿ ಭಾಷಾಸಾಮಗ್ರಿಯನ್ನು ವಿಪುಲವಾಗಿ ಪಡೆದಿರುವುದು ನಿಜವಾದರೂ. ಇದು ತನ್ನ ಮೂಲಸ್ವರೂಪವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ ಎನ್ನುತ್ತಾರೆ ಭಾಷಾತಜ್ಞರು. ಕೇರಳದ ಗಡಿಪ್ರದೇಶವಾದ ಶೇಂಕೊಟ್ಟೈ ತನ್ನ ಉತ್ಪತ್ತಿ    ಸ್ಥಾನವಾಗಿರುವುದರಿಂದ  ಸಂಕೇತಿಭಾಷೆಯಲ್ಲಿ ಮಲೆಯಾಳದ ಸಾಮಾನ್ಯಾಂಶಗಳನ್ನು ಕಾಣಬಹುದಾಗಿದೆ. ಪ್ರಾತಿನಿಧಿಕ ದ್ರಾವಿಡ ಶೈಲಿಯ ಬಳಕೆಯೂ  ಸಂಕೇತೀಭಾಷೆಯಲ್ಲಿ ಸಾಕಷ್ಟು ಉಳಿದುಬಂದಿವೆ. 

ಈ ಭಾಷೆಯಲ್ಲಿ ವಿಪುಲವಾದ ಶಬ್ದಸಂಗ್ರಹವಿದೆ. ಚೆನ್ನಾಗಿ ಬೆಸೆಯಲ್ಪಟ್ಟ ಈ ಪುಟ್ಟ ಸಮೂಹದಲ್ಲಿ, ಶತಮಾನಗಳಿಂದಲೂ ಆತ್ಮೀಯತೆಯ ದ್ಯೋತಕವಾದ ಹಲವು ಪದಗಳು ಜನಿಸಿಬಂದಿವೆ. ಈಗಂತೂ ಆ ಭಾಷಾಧಾರೆ ಸಾಕಷ್ಟು ಬಲಿತುನಿಂತಿದೆ ಕೂಡ. ಕರ್ನಾಟಕದ ಹೆಬ್ಬಾರ್ ಐಯ್ಯಂಗಾರರು, ಮಂಡ್ಯ ಐಯ್ಯಂಗಾರರು ಅಥವಾ ಹಾಸನ-ಮೈಸೂರು ಪ್ರಾಂತಗಳ ನಿವಾಸಿಗರ ನುಡಿಯಲ್ಲೂ ಕನ್ನಡ-ತಮಿಳುಗಳ ಸಮ್ಮಿಶ್ರಣ ಸಾಕಷ್ಟು ಇರುವುದರಿಂದ ಇವರುಗಳೂ ಸಂಕೇತಿಭಾಷೆಯನ್ನು ಬೇರೆಲ್ಲರಿಗಿಂತಲೂ ಹೆಚ್ಚಾಗಿಯೇ ಗ್ರಹಿಸಬಲ್ಲವರಾಗಿದ್ದಾರೆ.

ಇದನ್ನು ಗಮನಿಸಿ-

ಬೆಟ್ಟದಪುರ ಸಂಕೇತೀ ನುಡಿಗೆ ಉದಾಹರಣೆ

ಓದಪ್ಪ ನನ್ಡಾರಾಂಡ್ಯಾ, ಹಾತ್ತುಳ್ಳೆ  ಎಲ್ಲರೂ ಅಪ್ಡಿರಾನ್ನೇ? (ನೀನು ಚೆನ್ನಾಗಿದ್ದೀಯಾ? ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ?)

ನಂಗೆಲ್ಲ ನನ್ಡಾರಾಣೋ  ನಿಂಗೆಲ್ಲ ಆಪ್ಡಿರಾಂಡಿಗೋ ? (ನಾವೆಲ್ಲ ಚೆನ್ನಾಗಿದ್ದೇವೆ. ನೀವೆಲ್ಲ  ಹೇಗಿದ್ದೀರಾ?)

ಕೌಶಿಕ ಸಂಕೇತಿ ಉದಾಹರಣೆ-

ವೋದ್, ಶಾನೆ ತದೇಚಿತ್ತಮಾಯಿಟ್ಟು ಪೇಪರ್ ಓದಾಂಡ್ರಾಂಡ್ಯೆ ಅವಧಾನಿ? (ಏನ್ ಅವಧಾನಿ, ನಿಜಕ್ಕೂ ಪೇಪರ್  ಓದೋದ್ರಲ್ಲಿ ಮಗ್ನನಾಗಿಬಿಟ್ಟಿದ್ದೀಯಲ್ಲ?)

ಇಂಡೇನ್ತೇ ಪೇಪರ್ರೇ ಸಿಕ್ಕಿತಿಲ್ಲ. ಅದೋ ಒರು ವರ್ಷತ್ತ್ ಪಳೇ ಪ್ರಜಾವಾಣಿ ಹಾತ್ಲಿಂದಿ. (ಇವತ್ತಿನ ಪೇಪರ್ ಸಿಕ್ಕಿಲ್ಲ. ಒಂದು ವರ್ಷ ಹಳೆಯ ಪ್ರಜಾವಾಣಿ ಮನೆಯಲ್ಲಿ ಬಿದ್ದಿತ್ತು)

ಅದತ್ಥಾ  ಅಳದೀರಾ? (ಅಲ್ಲಿ ಏನ್ ಬರೆದಿದೆ?)

ಓದಾಣಿ ಕೋಳು (ಓದುತ್ತೀನಿ ಕೇಳು)

ಮತ್ತೂರಿನ ಬಳಿಯ ಗ್ರಾಮವೊಂದರ ಹಿರಿಯ ಸಂಕೇತಿಗರಾದ ನಾರಾಯಣಪ್ಪನವರು ಹೇಳುತ್ತಾರೆ- “ಇತರ ಮುಂದುವರೆದ ಭಾಷೆಗಳಂತೆಯೇ ಇಲ್ಲಿಯೂ (ಸಲಿಗೆಯಿಂದಲೋ ಗೌರವವಾಚಕವಾಗಿಯೋ ಬಳಸಲಾಗುವ) ಏಕವಚನ ಮತ್ತು ಬಹುವಚನಗಳ ಪ್ರಯೋಗದ ಮೇಲೆ ಒತ್ತುಕೊಡಲಾಗಿದೆ- ಅವ್ಹಾ (ಗೌರವವಾಚಕ), ಅವು(ಮರ್ಯಾದೆಯಿಂದ) ಅದು (ಅವನು, ಅವಳು) ಇತ್ಯಾದಿ. ಕೌಶಿಕ ಸಂಕೇತಿಯಲ್ಲಿ ‘ಪಶ್ಶಾ’ ಎಂದರೆ ಮಕ್ಕಳು, ಬೆಟ್ಟದಪುರ ಸಂಕೇತಿಯಲ್ಲಿ ಪೈಜೆ ಎನ್ನುವ ಬಳಕೆಯೂ ಇದೆ. ಉದಾಹರಣೆಗೆ, ಪಶ್ಶಾ ವರಂದು (ಮಕ್ಕಳು ಬರುತ್ತಿದ್ದಾರೆ)

(ಭೂತ-ವರ್ತಮಾನ-ಭವಿಷ್ಯತ್) ಕಾಲವಾಚಕಗಳಲ್ಲೂ, ಪ್ರಥಮ-ಮಧ್ಯಮ-ಉತ್ತಮಪುರುಷಗಳಲ್ಲೂ ಸ್ಪಷ್ಟವಾದ ವ್ಯತ್ಯಾಸಗಳು ಇಲ್ಲಿ ಕಾಣುತ್ತವೆ. ಸಂಕೇತಿ ಸಂಬೋಧನೆಗಳಲ್ಲೂ ಮೂರು ಲಿಂಗಗಳಿದ್ದು, ಒಳಗೊಳ್ಳುವ ಮತ್ತು ಒಳಗೊಳ್ಳದ ಸರ್ವನಾಮಗಳ  ವಿಷಯದಲ್ಲಿ ಸ್ಪಷ್ಟವಾದ ವಿಂಗಡನೆ ಇದೆ. ಉದಾಹರಣೆಗೆ, ನಾಂಗ ಎಂಗಡೆ, ನಾಂಬ-ನಾಮ, ನಮ್ಮಡೇ ನಂಬಡೇ, — ಸಂಕೇತಿಭಾಷೆಯ ಒಂದು ಅನನ್ಯತೆಯೇನೆಂದರೆ ಮಕ್ಕಳಿಗೂ ಅತ್ಯಂತ ಆತ್ಮೀಯರಿಗೂ ನಪುಂಸಕಲಿಂಗವನ್ನು ಬಳಸಿ ಸಂಬೋಧಿಸುವುದು. 

ಕೇರಳದಿಂದ ಕರ್ನಾಟಕಕ್ಕೆ ವಲಸೆ ಬಂದ ಈ ಸಮೂಹವು ಕೃಷಿಯಲ್ಲಿ ವಿಶೇಷ ಆಸ್ಥೆಯನ್ನು ಉಳ್ಳದ್ದಾಗಿದೆ. ಅಡಕೆ, ವೀಳ್ಯಗಳನ್ನೂ, ವೇದಾಧ್ಯಯನ, ಸಂಸ್ಕೃತಭಾಷೆಯನ್ನೂ. ಶಾಸ್ತ್ರೀಯ ಸಂಗೀತವನ್ನೂ. ರಂಗಭೂಮಿ ಹಾಗೂ ಗಮಕಕಲೆಯನ್ನೂ ಇವರು ಕುಲಧರ್ಮದಂತೆ ಉಳಿಸಿ-ಬೆಳೆಸಿಕೊಂಡು ಬಂದುಬಿಟ್ಟಿದ್ದಾರೆ.

ಬ್ರಾಹ್ಮಣವರ್ಗದವರು ಕೃಷಿಗೆ ಕೈ ಹಾಕುವುದಿಲ್ಲವೆಂಬ ಸಲ್ಲದ ಅಪವಾದಕ್ಕೆ ಇವರು ಅಪವಾದವಾಗಿದ್ದಾರೆ! ನಾರಾಯಣಪ್ಪನವರು ಹಾಸ್ಯವಾಗಿ ಹೇಳುವುದು, “ಹಾಗೆಯೇ ನಾವು ಸಂಕೇತಿಗಳು ತಿನ್ನುವುದರಲ್ಲೂ ಎತ್ತಿದ ಕೈ! ನಾವು ಭೂರಿಪ್ರಮಾಣದಲ್ಲಿ ತಿಂದುಹಾಕುತ್ತೇವೆ!”

ಹಳೆಯ ಪೀಳಿಗೆಗಳ ಸಂಕೇತಿಗರು ಹೇಳುವುದೇನೆಂದರೆ ವೇದ ಹಾಗೂ ಕೃಷಿಯಲ್ಲಿ ಸಮಾನ ಆಸಕ್ತಿಯುಳ್ಳ ಉತ್ತರ ಕರ್ನಾಟಕದ ಹವ್ಯಕರಿಗೂ ಅಥವಾ ದಕ್ಷಿಣದ ಹೆಗ್ಗಡೆ ಮತ್ತು ಹೆಗಡೆಗಳಿಗೂ ಸಂಕೇತಿಗಳಿಗೂ ಬೆಳೆದುಬಂದ ಪ್ರಧಾನ ವ್ಯತ್ಯಾಸವೇ ಶಾಸ್ತ್ರೀಯ ಸಂಗೀತಾಭ್ಯಾಸ. ಕೃಷಿಮಾಡುವಾಗಲೂ ಸಂಗೀತವನ್ನು ಗುನುಗುವುದು ಸಂಕೇತಿಗಳ ಸ್ವಭಾವವೇ ಆಗಿ ಬೆಳೆದಿದೆ. ಸಾಯಂಕಾಲದಲ್ಲಿ ಹಿಂದಿರುಗುವಾಗ ಇವರು ಸಂಧ್ಯಾವಂದನ ಮಾಡುವುದನ್ನಷ್ಟೇ ಅಲ್ಲ, ದಾರಿಯುದ್ದಕ್ಕೂ ಶ್ಲೋಕಗಳನ್ನು ಪಠಿಸುವುದನ್ನೂ ಅಭ್ಯಾಸಮಾಡಿಕೊಂಡರು.

ಗೃಹಿಣಿಯರು ಮನೆಗೆಲೆಸ ಮಾಡುವಾಗಲೂ ಹಾಡುಗಳನ್ನು ಗುನುಗಾಡಿದರೆ, ಅತ್ತ ಸಂಗೀತಕಲಾವಿದರು ನೀರಿನಲ್ಲಿ ನೆಟ್ಟಗೆ ನಿಂತು ತಮ್ಮ ಕಂಠವನ್ನು ಪಳಗಿಸಿಕೊಳ್ಳುತ್ತಿದ್ದರು! ‘ತನ್ನ ಸುತ್ತಲ ನೀಚಬುದ್ಧಿಯವರು ಕಾಟಕೊಟ್ಟಾಗ, ಅವರನ್ನು ಗಣಿಸದೆ, ತನ್ನ ಇಡೀ ನೆರೆಕೆರೆಯ ಸಮೂಹವನ್ನೇ ಹುಟ್ಟೂರಿನಿಂದ ಬೇರೆಡೆಗೆ ವಲಸೆ ಹೊರಡಿಸಿತಂದ ನಾಚಾರಮ್ಮಳ ದೃಢತೆ ಹಾಗೂ ಇಚ್ಛಾಶಕ್ತಿಗಳು ಈ ಸಂಕೇತಿ ಜನರ ಸತ್ವಯುತ ಸುದೃಢ ಸ್ವಭಾವವನ್ನು ರೂಪಿಸಿರುವ ಮಂತ್ರ’ ಎಂದೇ ಸಂಕೇತಿಗಳು ಹೆಮ್ಮೆಯಿಂದ ನಂಬುತ್ತಾರೆ!

‘ನಾಚಾರಮ್ಮ’ ಎನ್ನುವುದು ಲಕ್ಷ್ಮಿಯ ಹೆಸರು. ‘ಈಕೆ ಲಕ್ಷ್ಮಿಯಾಗಿದ್ದೂ ಸರಸ್ವತಿಯಾಗಿದ್ದಳು(ಜ್ಞಾನಸಂಪನ್ನೆಯಾಗಿದ್ದಳು)’ಎನ್ನುವುದು ಸಂಕೇತಿ ಮಹಿಳೆಯರ ಮಾತು. ವೇದಾದ್ಯಯನ, ಸಂಗೀತ, ಕೃಷಿ ಹಾಗೂ ಪಾಕಪ್ರಾವೀಣ್ಯಗಳನ್ನು ಸಿದ್ಧಿಸಿಕೊಂಡ ಸಂಕೇತಿಗಳು ಬಿಡುವಿನ ವೇಳೆಯಲ್ಲಿ ವೀಳ್ಯವನ್ನು ಮೆಲ್ಲುತ್ತ 28 ಎಂಬ ಇಸ್ಪೀಟಾಟವನ್ನೂ, ಪಗಡೆಯನ್ನೂ ರೂಢಿಸಿಕೊಂಡಿರುವುದು ಕಾಣಬರುತ್ತದೆ.

‘The original in English – ‘Voice of a Generation – RK Srikantan’ can be sourced from the RK Srikantan Trust – Call Kumar Srikantan -9845376091.   

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

25 March, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading