ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಶ್ರೀಕಂಠನ್ ರವರ ನಂಬಿಕೆಗಳು…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

12


ಸಂಪ್ರದಾಯವೊಮದರ ದೀಪಧಾರಿಗಳ ಪಂಕ್ತಿಯಲ್ಲಿರಬೇಕೆಂದು ಯಾರಾದರೂ ನಿಜವಾಗಿಯೂ ಬಯಸಿದರೆ, ಅಂಥವರನ್ನು ಅನುಲ್ಲಂಘ್ಯವಾದ ದೈವೀಶಕ್ತಿಯೇ ಆ ಸತ್ವಯುತ ಪರಂಪರೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಪರಿಶ್ರಮಿಸುವಂತೆ ಪ್ರೇರೇಪಿಸುತ್ತದೆ. ಶ್ರೀಕಂಠನ್ ೨೪*೭ ಸಂಗೀತದ ಬಿಗಿ ಹಿಡಿತದಲ್ಲಿರುವವರಂತೆ, ವಶೀಕರಣಕ್ಕೆ ಒಳಗಾದವರಂತೆ ಮತ್ತು ಅನ್ಯಮನಸ್ಕರಾಗಿರುವಂತೆ ಕಂಡುಬಂದರೂ ತಮ್ಮೊಳಗೆ ಸಂಗೀತ ಪೂರ್ಣಪ್ರಮಾಣದಲ್ಲಿ ತುಂಬಿಕೊಂಡಿದೆ ಎನ್ನುವ ಭಾವನೆ ಅವರಲ್ಲಿಲ್ಲ ಎನ್ನುವುದು ನನ್ನ ಸಮೀಕ್ಷೆ. ಇದನ್ನು ಅವರನ್ನು ಹತ್ತಿರದಿಂದ ನೋಡಿದವರಾರೂ ಅಲ್ಲಗಳೆಯಲಾರರು. “ಜೀವನದಲ್ಲಿ ಇತರ ವಸ್ತುಗಳಿಗೆ ಹೋಲಿಸಿದರೆ ಸಂಗೀತದ ಕುರಿತು ನನಗಿರುವ ಗೌರವ ಅತ್ಯುನ್ನತವಾದದ್ದು.

ಸಂಗೀತದಲ್ಲಿ ನನಗೆ ಪರಮ ಆಸಕ್ತಿ. ಅದನ್ನು ನನ್ನ ವೃತ್ತಿ ಎಂದು ಹೇಳಲು ನನಗೆ ಬಹಳ ಮುಜುಗರವಾಗುತ್ತದೆ, ಸಂಕೋಚವಾಗುತ್ತದೆ. ಓರ್ವ ಮನೋರಂಜಕನ ಮತ್ತು ಒಂದು ಪರಂಪರೆಯನ್ನು ಮುನ್ನಡೆಸುವ ಸಂಗೀತಗಾರನ ನಡುವೆ ನಾನು ವಿಭಾಜಕವನ್ನು ಬರೆಯುವುದು ಇಲ್ಲಿಯೇ. ಒಬ್ಬ ಮನೋರಂಜಕನಿಗೆ ಮುಂದಿನ ತಲೆಮಾರುಗಳ ಕುರಿತು ಗಂಭೀರವಾದ ಬದ್ಧತೆ ಇರುವುದಿಲ್ಲ. ಆದರೆ ಭವ್ಯವಾದ ಸಂಪ್ರದಾಯದ ಹರಿಕಾರನೂ ವಕ್ತಾರನೂ ಆದವನಿಗೆ ಆ ಗುರುತರ ಜವಾಬ್ದಾರಿ ಇರುತ್ತದೆ” ಎಂದು ನುಡಿಯುತ್ತಾರೆ ಶ್ರೀಕಂಠನ್.

ಪ್ರಸಿದ್ಧ ಸರೋದ್ ವಾದಕರಾದ ಅಮ್ಜದ್ ಅಲಿ ಖಾನ್ ಎಲ್ಲರೊಡನೆ ಹಂಚಿಕೊಳ್ಳುವ ಘಟನೆ ಇದು. ಅವರ ತಂದೆ ಹಾಫಿಜ್ ಅಲಿ ಖಾನ್ ರವರಿಗೆ ೧೯೬೦ರಲ್ಲಿ ಪದ್ಮಭೂಷಣ ಪ್ರಶಸ್ತಿ ದೊರೆತ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಘಟನೆಯೊಂದನ್ನು ಶ್ರೀಕಂಠನ್ ಸ್ಮರಿಸಿಕೊಳ್ಳುತ್ತಾರೆ. ಯುವಕ ಅಮ್ಜದ್ ತಮ್ಮ ತಂದೆಯವರೊಡನೆ ನವದೆಹಲಿಯಲ್ಲಿದ್ದ ರಾಷ್ಟ್ರಪತಿ ಭವನಕ್ಕೆ ಹೋಗಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭ ಸಂಪನ್ನಗೊಂಡ ಬಳಿಕ ರಾಷ್ಟ್ರಪತಿಗಳು ಲೋಕಾಭಿರಾಮವಾಗಿ ಹಾಫಿಜ್ ಅಲಿ ಖಾನ್ ರವರ ಬಳಿಗೆ ಬಂದು ತಾವು ಅವರಿಗಾಗಿ ಏನನ್ನಾದರೂ ಮಾಡಬಹುದೆ ಎಂದು ಕೇಳಿದರು. ಅದಕ್ಕೆ ಹಾಫಿಜ್ ಖಾನ್ “ಉಳಿದೆಲ್ಲವೂ ಸರಿಯಾಗಿಯೇ ಇದೆ, ಆದರೆ ದರ್ಬಾರಿ ಕಾನಡಾ ರಾಗವನ್ನು ದಯವಿಟ್ಟು ಉಳಿಸಿಕೊಡಿ” ಎಂದು ಕೇಳಿಕೊಂಡರು, “ದರ್ಬಾರಿ ಕಾನಡಾ ರಾಗವನ್ನು ತಾನ್ ಸೇನ್ ಆವಿಷ್ಕರಿಸಿದ. ಆದರೆ ಈಗ ಜನ ಈ ರಾಗವನ್ನು ಸ್ವೇಚ್ಛೆಯಿಂದ ಬದಲಾಯಿಸುತ್ತಿರುವುದರಿಂದ ಅದರ ಪರಿಶುದ್ಧತೆ ನಷ್ಟವಾಗುತ್ತಿದೆ” ಎಂದು ಹೇಳಿದರು.

ಈ ಘಟನೆಯ ಕುರಿತು ಅಮ್ಜದ್ ಅಲಿ ಖಾನ್ ತಮಾಷೆಯಾಗಿ ಹೇಳುತ್ತಾರೆ- “ನನಗನಿಸುತ್ತದೆ, ಈ ವಿಷಯವನ್ನು ತಾವು ಪಾರ್ಲಿಮೆಂಟಿನಲ್ಲಿ ಪ್ರಸ್ತಾಪಿಸಿ ಒಂದು ಠರಾವನ್ನು ಹೊರಡಿಸುತ್ತೇವೆ ಎನ್ನುವ ಭರವಸೆಯನ್ನು ತಮ್ಮಿಂದ ನಮ್ಮ ತಂದೆ ಅಪೇಕ್ಷಿಸುತ್ತಿದ್ದಾರೆ ಎಂದು ರಾಷ್ಟ್ರಪತಿಗಳಾಗಿದ್ದ ರಾಜೇಂದ್ರ ಪ್ರಸಾದರಿಗೆ ಅರ್ಥವಾಯಿತು ಎಂದು. ನನ್ನ ಅಬ್ಬಾ ನೇರವಾಗಿ ಮನೆಗೆ ಹೋಗಿ ನಮ್ಮ ತಾಯಿಯವರಿಗೆ ಹೇಳಿದರು, ರಾಷ್ಟçಪತಿಗಳು ದರ್ಬಾರಿ ಕಾನಡಾ ರಾಗವನ್ನು ರಕ್ಷಿಸುತ್ತಾರೆ ಎಂದು. ಕಲೆಯ ಕುರಿತು ಹೀಗೆ ನಿಷ್ಠಾವಂತರಾದ, ನೇರ ಸ್ವಭಾವದ, ಮುಗ್ಧ ಜನರನ್ನು ಈಗ ನಾವೆಲ್ಲಿ ನೋಡಲು ಸಾಧ್ಯ?”ಎಂದು.

ಈ ಘಟನೆಯನ್ನು ಬಣ್ಣಿಸಿ ಶ್ರೀಕಂಠನ್ ಹೇಳುತ್ತಾರೆ- “ಒಳ್ಳೆಯ ತತ್ವಗಳನ್ನು ಪಾಲಿಸುವಲ್ಲಿ ಅವಿಚಲ ಇಚ್ಛಾಶಕ್ತಿ ನಮ್ಮಲ್ಲಿದ್ದರೆ, ಹಾಫೀಜ್ ಅಲಿ ಖಾನ್ ರವರಂಥ ಬಹಳ ಜನರು ನಮ್ಮ ನಡುವೆ ಇರಲು ಸಾಧ್ಯವಾಗುತ್ತದೆ. ಸಮಾಜದ ಬಗ್ಗೆ ಕರ್ತವ್ಯವನ್ನು ತಮ್ಮ ಜೀವನದಲ್ಲಿ ಕಾಣಿಸಿರುವ ವ್ಯಕ್ತಿಗಳ ಕುರಿತು ನಾವು ಕೇಳಬೇಕು, ಓದಬೇಕು ಮತ್ತು ಚಿಂತನೆ ನಡೆಸಬೇಕು. ಸಂಗೀತ ಕೇವಲ ಅರ್ಥವಿಲ್ಲದ ಮನರಂಜನೆಯಾಗಿರಬಾರದು. ಜೊತೆಗೆ, ಅದು ಕೇವಲ ಬೌಧ್ಧಿಕ ಸೃಜನಶೀಲತೆಯೂ ಆಗಿರಬಾರದು. ಸಂಗೀತಕ್ಕೊಂದು ಧ್ಯೇಯವಿದೆ. ಅದು, ಶ್ರೋತೃಗಳ ಮನಸ್ಸನ್ನು ಉನ್ನತ ಸ್ತರಕ್ಕೇರಿಸಿ, ಅವರಲ್ಲಿ ನಮ್ಮ ಸಾಂಸ್ಕೃತಿಕ ಪರಂಪರೆಯ ಕುರಿತು ಅರಿವು ಮೂಡಿಸುವುದೇ ಆಗಿದೆ. ನಮ್ಮಲ್ಲಿ ಯಾರೂ ತಮ್ಮನ್ನು ತಾವು ಪರಿಪೂರ್ಣ ಕಲಾವಿದರು ಎಂದು ತಿಳಿದುಕೊಳ್ಳುವಂತಿಲ್ಲ.

ನಾನು ಸಂಗೀತದ ಓರ್ವ ನಮ್ರ ಭಕ್ತ. ನಾನು ಕರ್ನಾಟಕ ಪದ್ಧತಿಯ ಸಂಪ್ರದಾಯ ಹಾಗೂ ಪರಿಶುದ್ಧತೆಗಳೊಡನೆ ಯಾವುದೇ ಬಗೆಯ ರಾಜಿ ಮಾಡಿಕೊಳ್ಳುವುದಿಲ್ಲ. ನಾನು ರಕ್ತಿ, ಭಕ್ತಿ ಮತ್ತು ಭಾವಗಳಿಂದ ತುಂಬಿರುವ ಕೃತಿಗಳ ಪ್ರತಿಯೊಂದು ತುಣುಕನ್ನೂ ಆಸ್ವಾದಿಸುವುದರಲ್ಲಿ ವಿಶ್ವಾಸವಿಡುತ್ತೇನೆ” ಎಂದು. ಈಗ ಅವರು ತಮ್ಮ ಸ್ಪಷ್ಟವಾದ ಸಿರಿ ಕಂಠದಲ್ಲಿ ಭಕ್ತಿ ಭಿಕ್ಷಮು ಈಯವೇ ಕೃತಿಯನ್ನು ಹಾಡುತ್ತಾರೆ. ಅದು ಸ್ವರ್ಗಸುಖಕ್ಕೆ ಮಾರ್ಗ! “ತಪ್ಪುಗಳಿಲ್ಲದ ಸಾಹಿತ್ಯ, ಸ್ಪಷ್ಟ ಉಚ್ಚಾರಣೆ ಮತ್ತು ಕಛೇರಿಯ ನಿಯಮಗಳನ್ನು ಅನುಸರಿಸುವುದು ನನ್ನ ಕ್ರಮ. ನಾವು ಒಂದು ಮಟ್ಟವನ್ನು ತಲುಪುವ ತನಕ ‘ಕಲೆಗಾಗಿ ಕಲೆ’ ಎನ್ನುವುದೆಲ್ಲ ಸೊಗಸಾಗಿರುತ್ತದೆ, ಆದರೆ ಸಂಗೀತದ ವಿಷಯದಲ್ಲಿ ಅದಕ್ಕೂ ಮಿಗಿಲಾಗಿ ಕಲೆ ಸಾಮಾಜಿಕ ಹೊಣೆಗಾರಿಕೆಯಾಗಿ ಪರಿಣಮಿಸುತ್ತದೆ” ಎಂದು ಹೇಳುತ್ತಾರೆ ಶ್ರೀಕಂಠನ್.

ಶ್ರೀಕಂಠನ್ ಅವರ ಅಣ್ಣ ವೆಂಕಟರಾಮಾ ಶಾಸ್ತ್ರೀಗಳು, ‘ನಮ್ಮಲ್ಲಿರುವ ಸರಕನ್ನೆಲ್ಲ ಒಂದೇ ಕಛೇರಿಯಲ್ಲಿ ಹೊರಗೆ ಸುರಿದುಬಿಡಬಾರದು. ಉಗ್ರಾಣದಲ್ಲಿರುವುದನ್ನೆಲ್ಲ ಅಂಗಡಿಯಲ್ಲಿ ಪ್ರದರ್ಶನಕ್ಕಿಡಲು ಸಾಧ್ಯವಿಲ್ಲ!’ವಾದ್ದರಿಂದ ಮನೋಧರ್ಮದ ಆಯಾಮಗಳಲ್ಲಿ ಪ್ರಮಾಣ-ಔಚಿತ್ಯದ ಕಡೆ ಗಮನ ನೀಡುವಂತೆ ತಮ್ಮ ಸೋದರರಿಗೆ ಸಲಹೆ ನೀಡುತ್ತಿದ್ದರು. ಶ್ರೀಕಂಠನ್ ಹೇಳುತ್ತಾರೆ, ‘ಕಲಾವಿದರಿಗೆ ಅತಿ ಹೆಚ್ಚು ಸವಾಲು ಒಡ್ಡುವ ಕೌಶಲ್ಯ ಕಲಾಪ್ರಸ್ತುತಿಗೆ ಸಂಬಂಧಪಟ್ಟದ್ದು’ ಎಂದು. “ನೀವು ಎಷ್ಟೇ ಪುಸ್ತಕಗಳನ್ನು ಓದಿದರೂ ನಿಮಗೆ ಅವು ಈ ಅಂಶಗಳನ್ನು ಕಲಿಸಿಕೊಡಲಾರವು. ಲಯವ್ಯವಹಾರ-ಸ್ವರಕಲ್ಪನೆಗಳು ಕೂಡ ಇತ್ತೀಚಿನ ಪರಿಕಲ್ಪನೆಗಳು. ಸುಮಾರು ನೂರು ಅಥವಾ ಅದಕ್ಕೂ ಸ್ವಲ್ಪ ಹೆಚ್ಚು ವರ್ಷಗಳ ಹಿಂದೆ ಕೃತಿಗಳನ್ನು ಕೇವಲ ರಾಗಾಲಾಪನೆಯೊಂದಿಗೆ ಹಾಡಲಾಗುತ್ತಿತ್ತು. ರಾಗ-ತಾನ-ಪಲ್ಲವಿಯಲ್ಲಿ ಮಾತ್ರವೇ ಸ್ವರಕಲ್ಪನೆಯನ್ನು ಮಾಡಲಾಗುತ್ತಿತ್ತು.” ಬಹುಮಟ್ಟಿಗೆ ಕಲಾಪ್ರಶಂಸೆಯ ರೀತಿಯೂ ಮಾರ್ಪಾಡು ಹೊಂದಿದೆ.

ಆದರೆ ನಮ್ಮ ದೇಶದಲ್ಲಿ ಪಾಶ್ಚಾತ್ಯ ರಾಷ್ಟ್ರಗಳಂತೆ ನಾವು ವಿವಿಧ ಬಗೆಯ ಸಂಗೀತವನ್ನು ಅನುಭವಿಸುವಲ್ಲಿ ಸಮತೋಲನವನ್ನು ತಂದುಕೊಳ್ಳಲು ಸಾಧ್ಯವಾಗಿಲ್ಲ. “ಅವರಲ್ಲಿ ಹಾಲಿವುಡ್, ಒಪೆರಾ, ಸಿಂಫೋನಿಗಳು, ಪಾಪ್, ಜಾಜ್, ರಾಕ್ ಮತ್ತು ಜನಪದ ಸಂಗೀತಗಳಿವೆ. ಆದರೆ ಭಾರತದಲ್ಲಿ ನಾವು ಚಲನಚಿತ್ರ ಸಂಗೀತದ ಕುರಿತು ಅತಿ ಗೀಳನ್ನು ಕಾಣುತ್ತೇವೆ (ಅದು ತಪ್ಪಲ್ಲ). ಆದರೆ ಟಿವಿ ಮತ್ತಿತರ ಮಾಧ್ಯಮಗಳು ಕಾರ್ಯಕ್ರಮ ಯೋಜನೆಯಲ್ಲಿ ಸಮತೋಲನವನ್ನು ತಂದುಕೊಳ್ಳಲು ಸಾಧ್ಯವಾಗದಿರುವುದು ಶಾಸ್ತ್ರೀಯ ಕಲೆಗಳ ಅರ್ಥವತ್ತಾದ ಅಸ್ತಿತ್ವಕ್ಕೆ ಬಹಳ ಧಕ್ಕೆ ಉಂಟುಮಾಡುತ್ತದೆ. ಯುವಮನಸ್ಸುಗಳು ಶಾಸ್ತ್ರೀಯವಾಗಿ ಚಿಂತನೆ ನಡೆಸಲು ಸಹಾಯಕವಾಗುವಂತೆ ಟಿವಿ ಮತ್ತು ಮುದ್ರಣ ಮಾಧ್ಯಮಗಳೇಕೆ ಶಾಸ್ತ್ರೀಯ ಸಂಗೀತವನ್ನು ಹೆಚ್ಚಾಗಿ ಪ್ರೋತ್ಸಾಹಿಸಲು ಸಾಧ್ಯವಿಲ್ಲ? ಹಲವು ಶತಮಾನಗಳಿಂದ ಆದರಿಸಲ್ಪಟ್ಟಿರುವ ಪರಂಪರೆಯನ್ನು ಮುಂದುವರಿಸಲು ನಮ್ಮಲ್ಲಿ ರಾಯಭಾರಿಗಳಿದ್ದರೆ, ನಮ್ಮ ಶಾಸ್ತ್ರೀಯ ಪದ್ಧತಿಯೊಡನೆ ಹಾಸುಹೊಕ್ಕಾಗಿರುವ ಘನತೆ ಮತ್ತು ಲಾಲಿತ್ಯಗಳನ್ನು ಉಳಿಸಿಕೊಂಡು, ಸಾಂಸ್ಕೃತಿಕ ಪಥದಲ್ಲಿ ರಾಜಗಾಂಭೀರ್ಯದಿಂದ ಹೆಜ್ಜೆಹಾಕಬೇಕು”.

ಯಶಸ್ವಿ
ಜನ ಶ್ರೀಕಂಠನ್ ರವರನ್ನು ಅವರ ಅತಿ ಮಡಿವಂತಿಕೆಯ ನಿಲುವಿನಿಂದಲೇ ಗುರುತಿಸುತ್ತಾರೋ ಅಥವಾ ಅವರನ್ನು ಜಾಗತಿಕ ಮಾರುಕಟ್ಟೆಯಲ್ಲಿ ಓರ್ವ ‘ಖ್ಯಾತಿವೆತ್ತ ಕಲಾವಿದ’ ಮತ್ತು ‘ಯಶಸ್ವೀ ಸಂಗೀತಗಾರ’ ಎಂದು ಗುರುತಿಸುತ್ತಾರೋ ಎಂದು ನೀವು ಯೋಚಿಸಿದ್ದೀರಾ? ಶ್ರೀಕಂಠನ್ ಕೇಳುತ್ತಾರೆ- “ಯಶಸ್ಸನ್ನು ನಿರ್ಧರಿಸುವುದು ಯಾವುದು? ಹೆಸರಿಸಿದ ಕೂಡಲೇ ಸಂಗೀತ ವಲಯದ ಉದ್ದಗಲಕ್ಕೂ ಗುರುತಿಸಲ್ಪಡುವುದರಿಂದಲೋ ಅಥವಾ ನಮ್ಮ ಪೂರ್ವಿಕರ ಬಳುವಳಿಯಾದ ಪರಂಪರೆಯನ್ನು ಅತ್ಯಂತ ನಿಷ್ಠೆಯಿಂದ ಅನುಸರಿಸಿದುದಕ್ಕಾಗಿ ಹಾಗೂ ಸಮರ್ಥಿಸಿದುದಕ್ಕಾಗಿ ಪ್ರತಿಷ್ಠಿತ ಸಂಸ್ಥೆಗಳಿಂದ ಮತ್ತು ವಿದ್ವಾಂಸರಿಂದ ಗುರುತಿಸಲ್ಪಡುವುದರಿಂದಲೋ? ನಾನು ಈ ಎರಡನೇ ವರ್ಗಕ್ಕೆ ಸೇರಲು ಸಂತೋಷಪಡುತ್ತೇನೆ. ಕಲಾವಿದರ ಪಾಲಿಗೆ ಜೀವನ ಕಲಾಪ್ರಸಾರದ ಕುರಿತ ವಿಶೇಷ ಘಟನೆಗಳಿಂದ ಕೂಡಿದ ಪಯಣವಾಗದ ಹೊರತು, ಅದು ತಾರಾಪದವಿಯನ್ನು ಮತ್ತು ಪ್ರಸಿದ್ಧ ಕಲಾವಿದರ ವಿಷಯದಲ್ಲಿ ಮಹತ್ವಪೂರ್ಣವಾದುದನ್ನು ಆವಶ್ಯಕವಾಗಿ ದ್ಯೋತಿಸಬೇಕೆಂದೇನೂ ಇಲ್ಲ” ಎಂದು.
ಪಾಶ್ಚಾತ್ಯ ದೇಶಗಳಲ್ಲಿ ಸಂಗೀತದ ಅಧ್ಯಯನ ಮತ್ತು ಅಂತರಾರ್ಥ ನಿರೂಪಣೆಗಾಗಿ, ಗುಣಮಟ್ಟದ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ಸಮರ್ಥ ಸಂಗೀತಶಾಸ್ತ್ರಜ್ಞರಿಂದ ಪ್ರತಿನಿಧಿಸಲ್ಪಟ್ಟ ಕಲಾಸಮಾಜಗಳಿರುತ್ತವೆ ಎಂದು ಶ್ರೀಕಂಠನ್ ವಿವರಿಸುತ್ತಾರೆ. ವ್ಯಕ್ತಿಗತ ಪ್ರಯೋಗಗಳಿಗೆ ಮತ್ತು ಸಾಮಯಿಕ ಕಲ್ಪನೆಗಳಿಗೆ ಸಾಕಷ್ಟು ಅವಕಾಶಗಳಿದ್ದರೂ ಕಲಾಸಮಾಜದ ಅಧಿಕಾರವನ್ನು ಸಂಪೂರ್ಣವಾಗಿ ಗೌರವಿಸಲಾಗುತ್ತದೆ. ಒಪ್ಪಿತವಾದ ಗುಣಮಟ್ಟವನ್ನು ಕೆಳಗೆಳೆಯುವ ಸೃಜನಶೀಲ ಕಲಾವಿದರ ಯಾವುದೇ ಪ್ರಯತ್ನ ಕಟು ಟೀಕೆಗೆ ಗುರಿಯಾಗುತ್ತದೆ. ಸಂಗೀತದ ವಿದ್ವತ್ಪೂರ್ಣ ಶಿಕ್ಷಣಕ್ಕಾಗಿ ಭಾರತದಲ್ಲಿ ತಲೆ ಎತ್ತಿರುವ ಅಸಂಖ್ಯ ಸಂಸ್ಥೆಗಳು ಕಲಾವಿದರನ್ನು ರೂಪಿಸುವಲ್ಲಿ, ಉತ್ತಮ ಕಲಾವಿದರನ್ನು ಹಾಗೂ ಗುಣಗ್ರಾಹಿಗಳಾದ ಶ್ರೋತೃಗಳನ್ನು ನಿರ್ಮಿಸುವಲ್ಲಿ, ಭಾರತೀಯ ಸಂಗೀತ ಪದ್ಧತಿಯಲ್ಲಿ ಆರೋಗ್ಯಕರ ಮತ್ತು ಮಹತ್ವಪೂರ್ಣವಾಗಿರುವ ವಿಷಯಗಳ ಪ್ರಸಾರದಲ್ಲಿ ಎಷ್ಟರ ಮಟ್ಟಿಗೆ ಸಫಲವಾಗಿವೆ ಎನ್ನುವುದು ಮೂಲಭೂತ ಪ್ರಶ್ನೆ.

ಸಂಪ್ರದಾಯ ಮತ್ತು ನಾವೀನ್ಯತೆ
ಶಿಕ್ಷಣ ತಜ್ಞ ಜಿ.ವೇದಾಂತ ಐಯ್ಯಂಗಾರರಿಂದ ಸ್ಥಾಪನೆಗೊಂಡು, ಬೆಂಗಳೂರಿನಲ್ಲಿ ಸಂಗೀತ ಪ್ರಚಾರ ಕಾರ್ಯದಲ್ಲಿ ಪ್ರಾಮಾಣಿಕವಾಗಿ ತೊಡಗಿರುವ ರಾಮ ಲಲಿತ ಕಲಾ ಮಂದಿರ, ೨೦೧೩ನೇ ಸಾಲಿನಲ್ಲಿ ಏರ್ಪಡಿಸಿದ ‘ಕರ್ನಾಟಕ ಸಂಗೀತ ಆಸ್ವಾದನಾ ಕಾರ್ಯಕ್ರಮ’ದಲ್ಲಿ ಸಂಗೀತಗಾರರು ಮತ್ತು ಶ್ರೋತೃಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸಂಪ್ರದಾಯ ಮತ್ತು ನಾವೀನ್ಯತೆ, ಕಛೇರಿ ಪದ್ಧತಿಯ ಅನುಸರಣೆ, ಕಛೇರಿಯನ್ನು ವಿನ್ಯಾಸಗೊಳಿಸುವಾಗ ಹೊಸ ಅಂಶಗಳನ್ನು ಸೇರಿಸುವ ಪ್ರಾಮುಖ್ಯತೆ, ಕರ್ನಾಟಕ ಪದ್ಧತಿಯ ಚೌಕಟ್ಟಿನಲ್ಲಿ ಕಛೇರಿಗಳಲ್ಲಿ ಹೊಸ ಚಿಂತನೆಗಳನ್ನು ತರುವಿಕೆ ಮತ್ತು ರಸಿಕರ ತಾಂತ್ರಿಕ ತಿಳಿವಳಿಕೆಗೆ ಸಂಬಂಧಪಟ್ಟಂತೆ ಲಯ-ಕಾಲಾವಧಿಯ ಪ್ರಾಮುಖ್ಯತೆಗಳ ಕುರಿತು ಚರ್ಚೆ ನಡೆಯಿತು.

ನಿರೀಕ್ಷಿಸಿದಂತೆ, ಸಭಿಕರ ಸಮ್ಮುಖದಲ್ಲಿ ಸಾಂಪ್ರದಾಯಿಕ ಚಿಂತನೆಯ ಮತ್ತು ಆಧುನಿಕ ಆಲೋಚನೆಗಳ ಪ್ರವಾಹ ಹರಿದು ಬಂದು, ವೇದಿಕೆಯ ಮೇಲಿದ್ದ ಹಿರಿಯ ಮತ್ತು ಕಿರಿಯ ಸಂಗೀತಗಾರರು ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಗೊಳಿಸಿದಾಗ, ಶ್ರೀಕಂಠನ್ ಆಧಿಕಾರಿಕತೆಯಿಂದ ಮತ್ತು ನಿಶ್ಚಿತ ಧೋರಣೆಯಿಂದ ತಮ್ಮ ನಂಬಿಕೆಗಳಿಗೆ ಬದ್ಧರಾಗಿ ಮತ್ತು ಅಚಲರಾಗಿ ನಿಂತರು- “ನಾವು ಹಾಡುವ ಶೈಲಿ, ಕೃತಿಗಳನ್ನು ನಿರ್ವಹಿಸುವ ರೀತಿ, ಕಛೇರಿಯಲ್ಲಿ ಪ್ರಸ್ತುತ ಪಡಿಸುವ ಕೃತಿಗಳನ್ನು ನಿರ್ಣಯಿಸುವ ಕ್ರಮ ಇವುಗಳಿಗೆ ಸಂಬಂಧಪಟ್ಟಂತೆ ಕಾಲದ ಪರೀಕ್ಷೆಯಲ್ಲಿ ಗೆದ್ದು ಬಂದ ಪದ್ಧತಿಗಳನ್ನು ಅನುಸರಿವುದು, ಎಂದರೆ ಸಂಪ್ರದಾಯಕ್ಕೆ ಪ್ರಾಮುಖ್ಯತೆ ನೀಡುವುದರಲ್ಲಿ ಬಹಳ ಅರ್ಥವಿದೆ. ಇದು, ವ್ಯವಸ್ಥೆಯನ್ನು ಜನ ದುರ್ಬಲಗೊಳಿಸದಂತೆ ನೋಡಿಕೊಳ್ಳುತ್ತದೆ”.

ಆದರೆ ಈಗ ಬಹಳ ಜನ ಮಾಡುವಂತೆ ಕೃತಿಯೊಂದನ್ನು ಅನುಪಲ್ಲವಿಯಿಂದ ಪ್ರಾರಂಭಿಸಿ ಪಲ್ಲವಿಗೆ ಹಿಂದಿರುಗುವುದರಲ್ಲಿ ‘ಸಮಕಾಲೀನ ರಂಜನೆ’ ಇದೆಯೆ ಎಂದು ಕಾರ್ಯಕ್ರಮ ನಿರೂಪಕರೂ, ಮೃದಂಗ ವಿದ್ವಾಂಸರೂ ಆದ ಹೆಚ್.ಎಸ್.ಸುಧೀಂದ್ರ ಅವರು ಕೇಳಿದರು. ಇಂಥ ಪ್ರಯೋಗಗಳು ಈಗ ‘ನಾವೀನ್ಯತೆ’ ಎಂದು ಪರಿಗಣಿಸಲ್ಪಡುತ್ತವೆ ಎನ್ನುವ ಮಾತನ್ನೂ ಅವರು ಸೇರಿಸಿದರು. ಇದಕ್ಕೆ ಶ್ರೀಕಂಠನ್ ಹೇಳಿದ್ದು ಇಷ್ಟೇ- “ಸಂಗೀತಗಾರರು ಹೀಗೆ ಮಾಡುತ್ತಿದ್ದರೆ, ಇದನ್ನು ‘ತಪ್ಪು’ ಎಂದು ಹೇಳಲು ನಾವು ಯಾರೂ ಅಲ್ಲ. ಆದರೆ ಅನುಪಲ್ಲವಿಯಿಂದ ಪಲ್ಲವಿಗೆ ಬರುವಾಗ ಸಾಹಿತ್ಯಕ್ಕೆ ಸಮಂಜಸವಾದ ಅರ್ಥ ಬರುತ್ತದೆಯೆ ಮತ್ತು ಅರ್ಥದಲ್ಲಿ ಸೂತ್ರತೆ ಕಂಡುಬರುತ್ತದೆಯೆ ಎನ್ನುವುದನ್ನು ವಿಶ್ಲೇಷಿಸಿ, ನಂತರ ಈ ಪ್ರಯೋಗವನ್ನು ಮಾಡಬೇಕು. ಇದನ್ನು ನಾನು ಅಠಾಣ ರಾಗದ ತ್ಯಾಗರಾಜರ ಕೃತಿ “ಏಲ ನೀ ದಯರಾದು’ ವಿನ ಉದಾಹರಣೆಯೊಂದಿಗೆ ವಿವರಿಸುತ್ತೇನೆ. ಈ ಒಂದು ಕೃತಿಯನ್ನು ಮಾತ್ರ ಸಂತ ತ್ಯಾಗರಾಜರು ಸಕಾರಣವಾಗಿ ಅನುಪಲ್ಲವಿಯಿಂದ ಪ್ರಾರಂಭಿಸುತ್ತಾರೆ.

ತ್ಯಾಗರಾಜರು ೯೬ ಕೋಟಿ ಸಾರಿ ರಾಮನಾಮ ತಾರಕ ಮಂತ್ರಜಪವನ್ನು ಧ್ಯಾನಪೂರ್ವಕವಾಗಿ ಮಾಡಿದ ಬಳಿಕ ಭಗವಂತನನ್ನು ಅವನ ದರ್ಶನಕ್ಕಾಗಿ ಒತ್ತಾಯಪಡಿಸುತ್ತಾರೆ ಹಾಗೂ ರಾಮನನ್ನು ಕಾಣದೆ ತಮ್ಮ ನಯನಗಳು ಮತ್ತು ಮನಸ್ಸು ಶುಷ್ಕವಾಗಿಬಿಟ್ಟಿದೆ ಎನ್ನುತ್ತ ಅಂಗಲಾಚುತ್ತಾರೆ. ಅವರು ಸಾಹಿತ್ಯರಚನೆಯಲ್ಲಿ ತೊಡಗಿದಾಗ ಶ್ರೀರಾಮ ಒಂದು ಕ್ಷಣ ದರ್ಶನಭಾಗ್ಯವನ್ನು ಕರುಣಿಸುತ್ತಾನೆ. ಅವನ ರೂಪಲಾವಣ್ಯಗಳ ಮೋಡಿಗೊಳಗಾದ ತ್ಯಾಗರಾಜರು ಅನುಪಲ್ಲವಿಯಲ್ಲಿ ಅವನ ಅಂಗಸೌಂದರ್ಯದ ವರ್ಣನೆಯನ್ನು “ಬಾಲ! ಕನಕಮಯ ಚೇಲ! ಸುಜನಪರಿಪಾಲ!”ಎಂದು ಮಾಡಿದ್ದಾರೆ. ಈ ಸಾಹಿತ್ಯಭಾಗದಲ್ಲಿ ತ್ಯಾಗರಾಜರು ಶ್ರೀರಾಮನ ಸೌಂದರ್ಯವನ್ನು ಕಾವ್ಯಮಯವಾಗಿ ಬಣ್ಣಿಸಿದ್ದಾರೆ. ಆದ್ದರಿಂದ ಸಾಹಿತ್ಯದಲ್ಲಿರುವ ವರ್ಣನೆಯ ಸೊಬಗನ್ನು ಎತ್ತಿತೋರಿಸಲು ಕೃತಿಯ ನಡೆಗೆ ಅನುರೂಪವಾಗಿ ಅನುಪಲ್ಲವಿಯಿಂದ ಪ್ರಾರಂಭಿಸಲು ಸಾಹಿತ್ಯ ತ್ಯಾಗರಾಜರಿಗೆ ಅವಕಾಶ ಮಾಡಿಕೊಟ್ಟಿತು” ಎಂದು.

ತಜ್ಞರ ಸಮಿತಿಯಲ್ಲಿದ್ದ ಕೆಲವು ಯುವವಿದ್ವಾಂಸರು “ಈಗ ವಿಪುಲ ಅವಕಾಶಗಳಿರುವುದರಿಂದ ಕಲಾವಿದರು ಭಿನ್ನರಾಗಿರುವ ಅಗತ್ಯವಿದೆಯೇನೋ?” ಎನ್ನುವ ಪ್ರಶ್ನೆಯ ಕುರಿತು ಚಿಂತನೆ ನಡೆಸಿದರು. ಕೆಲ ಹೊತ್ತು ಸಂವಾದ ನಡೆದ ನಂತರ ಮೊಳಗಿದ ಶ್ರೀಕಂಠನ್ ರವರ ತೀರ್ಮಾನ ಕರಾರುವಾಕ್ಕಾಗಿತ್ತು- “ವಿರೋಧಿಸುವುದು ಒಳ್ಳೆಯದೇ. ಬದಲಾವಣೆಯ ಪ್ರಯತ್ನ ಅರ್ಥಪೂರ್ಣವಾಗುವುದು, ಆ ಬದಲಾವಣೆಯಿಂದ ಸಂಗೀತ ಶ್ರೀಮಂತಗೊಂಡಾಗ ಮಾತ್ರವೇ. ವೀಣಾ ಬಾಲಚಂದರ್ ರವರು ಸ್ವತಃ ಹೇಳಿದಂತೆ, “ನಿಮ್ಮ ಶ್ರೋತೃಗಳ ಇಂದ್ರಿಯಗಳನ್ನು ಮತ್ತು ಆತ್ಮವನ್ನು ಉನ್ನತಸ್ತರಕ್ಕೆ ಏರಿಸಿ”, “ನಿಮ್ಮ ಕಲೆಯನ್ನು ಕಡಿಮೆ ಬೆಲೆಗೆ ವಿಕ್ರಯಿಸಬೇಡಿ” ಮತ್ತು ನಂತರ “ಶ್ರೋತೃಗಳಿಗೆ ಬೇಕಾಗಿದ್ದುದು ಇಂಥದ್ದೇ ಎನ್ನುತ್ತ ಅವರನ್ನು ದೂಷಿಸಬೇಡಿ”.

ಹಿರಿಯ ವಿದ್ವಾಂಸರು ಜನರಿಗೆ ಶ್ರೀಕಂಠನ್ ರವರ ಪ್ರಸ್ತುತಿಯ ಪರಿಶುದ್ಧತೆಯ ಕುರಿತು ತಿಳಿಸಿಕೊಡಲು ವೇದಿಕೆಯನ್ನು ಉಪಯೋಗಿಸಿಕೊಂಡರೆ, ಸುಧೀಂದ್ರ ಈ ಅವಕಾಶವನ್ನು ಶ್ರೀಕಂಠನ್ ಅಟ್ಟತಾಳ ವರ್ಣಗಳನ್ನು ಹಾಡುವ ಬಗೆ ಎಷ್ಟು ಆನಂದವನ್ನು ಉಂಟುಮಾಡುತ್ತದೆ, ಅವರು ಕಾಲಪ್ರಮಾಣವನ್ನು ಆಯ್ದುಕೊಳ್ಳುವ ರೀತಿ ಕೃತಿಗಳ ಗಾಯನವನ್ನು ಎಷ್ಟು ಕ್ಲಿಷ್ಟಕರವನ್ನಾಗಿಸುತ್ತದೆ ಎನ್ನುವ ಕುರಿತು ವಿವರಿಸಲು ಬಳಸಿಕೊಂಡರು. “ಅವರು ಅಪರೂಪದ ತಾಳಗಳಲ್ಲಿರುವ ಪಲ್ಲವಿಗಳಲ್ಲಿ ವಿಹರಿಸುತ್ತ ಅವನ್ನು ಸ್ವಾರಸ್ಯಕರವಾಗಿ ನಿರೂಪಿಸುತ್ತಾರೆ ಮತ್ತು ದೀರ್ಘವಾದ ತನಿ ಆವರ್ತವನ್ನು ಪೂರೈಸಿದ ಮೇಲೆ ಅವರು ನಮ್ಮ ನುಡಿಸಾಣಿಕೆಗೆ ಒಪ್ಪಿಗೆ ಸೂಚಿಸಿದರೆಂದರೆ, ನಮ್ಮ ಶ್ರಮ ಸಾರ್ಥಕವಾಗುತ್ತದೆ”.

ಸದಾ ನೂತನ ಆಲೋಚನೆಗಳ ಚಿಂತಕ
ಶ್ರೀಕಂಠನ್ ರವರ ತತ್ವಗಳು, ನಿರ್ಧಾರ ಮತ್ತು ವಿವೇಕ ಅವರನ್ನು ಓರ್ವ ಸಂಪ್ರದಾಯಬದ್ಧನ್ನನಾಗಿ ಮತ್ತು ಓರ್ವ ಆಧುನಿಕ ಚಿಂತನೆಗಳ ಹರಿಕಾರನನ್ನಾಗಿ – ವರ್ಣಪಟ್ಟಿಕೆಯ ಎರಡೂ ಬದಿಗಳಲ್ಲಿ ಸ್ಥಾಪಿಸುತ್ತವೆ. ಶ್ರೋತೃವರ್ಗದಲ್ಲಿದ್ದ ಅನೇಕ ಗುರುಗಳು ಈ ಗುರುವರೇಣ್ಯನ ಮಂದೆ ಪ್ರಶ್ನೆಗಳ ಸರಮಾಲೆಯನ್ನೇ ಇರಿಸಿದರು. ಕೆಲವು ರಾಗಗಳನ್ನು ಪಾಠ ಮಾಡುವಾಗ ಶ್ರೀಕಂಠನ್ ಆ ರಾಗದಲ್ಲಿನ ಪ್ರಯೋಗ-ಅಪಪ್ರಯೋಗಗಳನ್ನು ನಿರ್ಣಯಿಸುವ ನಿಯಮಗಳನ್ನು ಅನುಸರಿಸುತ್ತಾರೆಯೇ ಎನ್ನುವುದನ್ನು ತಿಳಿದುಕೊಳ್ಳಲು ಹಲವರಿಗೆ ಕುತೂಹಲ _ “ಪಾಠ ಹೇಳಿಕೊಡಬಾರದ ರಾಗಗಳಿವೆಯೆ?”

ಶ್ರೀಕಂಠನ್ ಹೇಳುತ್ತಾರೆ: “ಕರ್ನಾಟಕ ಪದ್ಧತಿಯಲ್ಲಿ ಕೆಲವು ಅಮಂಗಳ ರಾಗಗಳಿದ್ದು, ಇವು ಸಂಗೀತಪಯಣದ ಅಂತ್ಯವನ್ನು ಸೂಚಿಸುವುದರಿಂದ ಪ್ರಾರಂಭಿಕ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಸಿಕೊಡಬಾರದು ಎಂದು ಸಂಗೀತಶಾಸ್ತç ಎಂದು ಕರೆಯಲ್ಪಡುವಂಥದ್ದು ಹೇಳುತ್ತವೆ. ಗುರು ಕಲಿಸಬಾರದ ಮುಖಾರಿ, ಆಹಿರಿ, ವರಾಳಿ, ಮಧ್ಯಮಾವತಿ, ಸುರುಟಿಗಳಂಥ ಕೆಲವು ರಾಗಗಳಿವೆಯಾದರೂ ಸಂಪ್ರದಾಯ, (ನನಗೆ ಮಡಿವಂತಿಕೆಯಲ್ಲಿ ನಂಬಿಕೆ ಇಲ್ಲ ಎನ್ನುತ್ತಾರೆ ಅವರು) ವಿದ್ಯಾರ್ಥಿಗಳು ಕಲಿಕೆಯ ನಿರ್ದಿಷ್ಟ ಹಂತವೊಂದನ್ನು ತಲುಪಿದ ಮೇಲೆ ಈ ರಾಗಗಳನ್ನು ತಾವಾಗಿಯೇ ಕಲಿತುಕೊಳ್ಳುತ್ತಾರೆ ಎನ್ನುತ್ತದೆ. ಆದರೆ ಇದನ್ನು ಅಂಧವಿಶ್ವಾಸ ಎನ್ನುತ್ತೇನೆ ನಾನು. ನಾವು ಪ್ರಗತಿಶೀಲರಾಗಿರುವುದು ಬೇಡವೆ? ಜೊತೆಗೆ ಪ್ರತಿ ರಾಗವೂ ಮಾಧುರ್ಯದ ಮೂರ್ತರೂಪ ಎನ್ನುವುದನ್ನು ಅರಿತುಕೊಳ್ಳಬೇಡವೆ? ತ್ಯಾಗರಾಜರು ರಾಗಸುಧಾರಸ ಎಂದು ಹೇಳಲಿಲ್ಲವೆ? “ನಾನು ಈ ವಿಷಯದಲ್ಲಿ ಸಂಪ್ರದಾಯದ ಮಡಿವಂತಿಕೆಯ ನಿರ್ದೇಶನಗಳನ್ನು ಮಾನ್ಯ ಮಾಡುವುದಿಲ್ಲ. ಪ್ರಗತಿಯ ವಿಷಯಕ್ಕೆ ಬಂದಾಗ ನಾನು ಕಾರ್ಯದೃಷ್ಟಿಯುಳ್ಳವನಾಗಿಬಿಡುತ್ತೇನೆ. ಸಂಗೀತ ಎಲ್ಲ ಅಡ್ಡಗೋಡೆಗಳನ್ನೂ ಮೀರುತ್ತದೆ, ಒಳ್ಳೆಯದನ್ನು ಹಂಚಿಕೊಳ್ಳಬೇಕಾದರೆ ಮಡಿವಂತಿಕೆಯನ್ನು ಬದಿಗೆ ಸರಿಸಲೇಬೇಕಾಗುತ್ತದೆ. ನನ್ನ ಪಾಲಿಗೆ ಎಲ್ಲ ರಾಗಗಳೂ ‘ಮಂಗಳಕರ’ವೇ ಆಗಿವೆ”.

ಕಾಲಪ್ರಮಾಣಕ್ಕೆ ಸಂಬಂಧಪಟ್ಟಂತೆ, ಅನೇಕರು ಕೆಲವು ಬದಲಾವಣೆಗಳನ್ನು ಮತ್ತು ಪಾಶ್ಚಾತ್ಯ ಲಯಗಳಿಗೆ ಹೋಲಿಕೆಗಳನ್ನು ಸೂಚಿಸಿದಾಗ, ಶ್ರೀಕಂಠನ್ ಮಾತ್ರ ತಮ್ಮ ನಿಲುವಿಗೆ ಅನುಸಾರವಾಗಿ “ಕವಿಹೃದಯ ಎನ್ನುವುದೊಂದಿದ್ದು, ಅಲ್ಲಿ ರಕ್ತಿ-ಭಕ್ತಿ-ಭಾವಗಳು ಜೊತೆಜೊತೆಯಾಗಿ ಸಾಗಬೇಕು; ಆದರೆ ಕಾಲಪ್ರಮಾಣ ಸಾಹಿತ್ಯದ ಭಾವದೊಂದಿಗೆ ಮುನ್ನಡೆಯಬೇಕು. ಎಷ್ಟೋ ಆಯಾಮಗಳಿಗೆ ಸಂಬಂಧಪಟ್ಟಂತೆ ಲಿಖಿತ ಕಾನೂನುಗಳೇನೂ ಇಲ್ಲ. ಆದರೆ ಅನುಭವ ಮತ್ತು ‘ಒಳ್ಳೆಯ ಸಂಗೀತವನ್ನು ಗುರುತಿಸಬಲ್ಲ ಕಿವಿ’ ನಿಮಗೆ ಮಾರ್ಗದರ್ಶನ ಮಾಡುತ್ತವೆ” ಎಂದು ನುಡಿದರು.

ನಂತರ ವೇದಿಕೆಗಳ ಮೇಲೆ ತಾಳವಾದ್ಯ ಕಲಾವಿದರು ಪ್ರಸ್ತುತ ಪಡಿಸುವ ದೀರ್ಘ ತನಿ ಆವರ್ತಗಳಿಗೆ ಮೀಸಲಾದ ಕಾಲಾವಧಿಯನ್ನು ಉಳಿಸಿಕೊಳ್ಳುವ ವಿಷಯದತ್ತ ಸಂವಾದ ತಿರುಗಿತು. ‘ಅರಿಯಲು ಅಷ್ಟು ಸುಲಭವಲ್ಲದ’ ದೀರ್ಘವಾದ ಲಯದ ಕಸರತ್ತುಗಳ ಕುರಿತು ಶ್ರೋತೃಗಳು ಔದಾಸೀನ್ಯ ತಾಳುವುದನ್ನು ನಾವು ಕಾಣುತ್ತೇವೆ. ಕಛೇರಿಯ ಕಟ್ಟಕಡೆಯಲ್ಲಿ ಮೂಡಿಬರುವ ಬುದ್ಧಿಯನ್ನು ಕೆಣಕುವ ತುಣುಕುಗಳ ವಿಷಯದಲ್ಲಂತೂ ಇದು ಹೆಚ್ಚು ಸತ್ಯ” ಎಂದು ಕೆಲವರು ಹೇಳಿದರು. ಅದಕ್ಕೆ ಶ್ರೀಕಂಠನ್ ಹೇಳಿದರು: “ನಾವು ಹೇಗೆ ಬೌದ್ಧಿಕ ಔನ್ನತ್ಯದಿಂದ ಸಾಹಿತ್ಯದ ಅರಿವನ್ನು ಗಳಿಸಿಕೊಳ್ಳಬೇಕೋ ಮತ್ತು ವಾಲ್ಮೀಕಿ ರಾಮಾಯಣವನ್ನು, ಶೇಕ್ಸ್ಪಿಯರ್‌ನ ನಾಟಕಗಳನ್ನು ಸವಿಯಲು ಪಕ್ವತೆಯನ್ನು ಹೊಂದಿರಬೇಕೋ, ಹಾಗೆಯೇ ಉತ್ತಮ ರೀತಿಯ ಆಸ್ವಾದನೆಗೆ ಸಂಗೀತವನ್ನು ಅಧ್ಯಯನ ಮಾಡಿ ಅರ್ಥೈಸಿಕೊಂಡಿರಬೇಕು. ಲಯವಾದ್ಯಗಳ ವಿಷಯದಲ್ಲಿ ಇದು ಇನ್ನಷ್ಟು ಸತ್ಯ! ಕರ್ನಾಟಕ ಪದ್ಧತಿಯ ತಾಳಗಳಲ್ಲಿ ಹುದುಗಿರುವ ಶಿಸ್ತು ಮತ್ತು ಸೂಕ್ಷö್ಮತೆಗಳು ಎಷ್ಟು ಜಟಿಲ ಮತ್ತು ಗಹನ ಎಂದರೆ, ಅದರ ಹಿರಿಮೆಯನ್ನು ಪೂರ್ವಾಭ್ಯಾಸವುಳ್ಳ ಕೆಲವರು ಮಾತ್ರವೇ ಗ್ರಹಿಸಬಲ್ಲರು.

ಆದ್ದರಿಂದ ಸುಪ್ರತಿಷ್ಠಿತ ಸಂಗೀತಗಾರರು ರಾಗ-ತಾಳಗಳ ಮೇಲನದ ವಿಷಯವನ್ನು ಅಥವಾ ಅವುಗಳನ್ನು ಬೌದ್ಧಿಕವಾಗಿ ಬೆಸೆಯುವಲ್ಲಿರುವ ಸೌಂದರ್ಯವನ್ನು ಅರ್ಥಮಾಡಿಕೊಳ್ಳಲು ಅಗತ್ಯವಾದ ಶಿಕ್ಷಣವನ್ನು ಶ್ರೋತೃಗಳಿಗೆ ಪ್ರಜ್ಞಾಪೂರ್ವಕವಾಗಿ ನೀಡುತ್ತಾರೆ.

ಸಕಾರಾತ್ಮಕ ಪರಿಣಾಮಕ್ಕಾಗಿ ವಾದ್ಯಗಳು
೧೯೯೨ರಲ್ಲಿ ಬೆಂಗಳೂರಿನಲ್ಲಿ ನಡೆದ ತಾಳವಾದ್ಯ ಕಲಾ ಕೇಂದ್ರದ ‘೧೧ನೆಯ ತಾಳವಾದ್ಯೋತ್ಸವ’ದ ಪರಿಚಯ ಭಾಷಣದಲ್ಲಿ ಶ್ರೀಕಂಠನ್ ತಾಳವಾದ್ಯ ವಿಜ್ಞಾನ ಮತ್ತು ಸಂಗೀತದಲ್ಲಿ ಅದರ ಪಾತ್ರದ ಕುರಿತು ಸುದೀರ್ಘವಾಗಿ ಮಾತನಾಡುತ್ತ, “ಜನರ ಮನಃಸ್ಥಿತಿಯನ್ನು ಉತ್ತಮಪಡಿಸುವುದರ ಜೊತೆಗೆ ಲಯ ಅವರನ್ನು ವಶೀಕರಿಸಿಕೊಳ್ಳಬಲ್ಲುದು” ಎಂದು ಹೇಳಿದರು. ಏಕತಾನತೆಯುಳ್ಳ ಲಯಗಳ ಸರಣಿಯಲ್ಲಿ ಸೃಜನಶೀಲತೆಯನ್ನು ಉಂಟುಮಾಡಲು ಮತ್ತು ನಿಜವಾದ್ಯಗಳಿಂದ ನೈಜ ನಾದವನ್ನು ಅನುಭವಿಸಲು ವಿಭಿನ್ನ ತಾಳವಾದ್ಯಗಳನ್ನು ಮೇಳೈಸಬಹುದು.

“ಯಾವುದರ ನೆರವಿನಿಂದ ವಿದ್ಯಾರ್ಥಿಗಳು ವಿಭಿನ್ನ ಲಯವಿನ್ಯಾಸಗಳನ್ನು ಅಭ್ಯಾಸ ಮಾಡಬಹುದೋ ಅಂಥ ಮೈಕ್ರೋ ಕಂಪ್ಯೂಟರ್ ತಾಳಜನಕಗಳು ಕಾಲಮಾಪನಕ್ಕಾಗಿ ಲಭ್ಯವಿರುವ ಇಂದಿನ ಯುಗದಲ್ಲಿ ನಾವು ನಮ್ಮ ವಾದ್ಯಗಳನ್ನು ಆಧುನೀಕರಿಸಲು ಮತ್ತು ಉತ್ತಮಪಡಿಸಲು ವಾದ್ಯನಿರ್ಮಾಣದತ್ತಲೂ ನೂತನ ದೃಷ್ಟಿಯನ್ನು ಹರಿಸಬೇಕು. ಮೃದಂಗದ ಶ್ರುತಿ ಅದರ ಉದ್ದವನ್ನು ಅವಲಂಬಿಸಿರುತ್ತದೆ. ವಾದ್ಯ ಚಿಕ್ಕದಾದಷ್ಟೂ ಎತ್ತರದ ಶ್ರುತಿಯನ್ನು ಸಾಧಿಸಬಹುದು. ಆದರೂ ಎತ್ತರದ ಶ್ರುತಿಗಳಿಗೆ ಹೊಂದುವಂತೆ ಮೃದಂಗವನ್ನು ತಯಾರಿಸಲು ಪ್ರಾಮಾಣಿಕ ಪ್ರಯತ್ನಗಳು ಇನ್ನೂ ನಡೆದಿಲ್ಲ.

ಹವಾಮಾನದ ವೈಪರೀತ್ಯಗಳು ವಾದ್ಯಗಳ ಮೇಲೆ ಪರಿಣಾಮ ಬೀರುವುದರಿಂದ ಚರ್ಮ ಮತ್ತು ಮರಗಳ ಕುರಿತ ತಜ್ಞ ಸಂಶೋಧಕರ ಮಾರ್ಗದರ್ಶನ ಅನಿವಾರ್ಯವಾಗುತ್ತದೆ. ಆದರೆ ವಂಶಪಾರಂಪಾರ್ಯವಾಗಿ ವಾದ್ಯ ತಯಾರಿಕೆಯ ವೃತ್ತಿಯಲ್ಲಿರುವವರ ಸಂಖ್ಯೆ ಸ್ಥಿರವಾಗಿ ಕ್ಷೀಣಿಸುತ್ತಿರುವುದರಿಂದ ಕಲಾವಿದರು ಮತ್ತು ಕುಶಲಕರ್ಮಿಗಳು ತಾಳವಾದ್ಯ ಕಲೆಗಳಲ್ಲಿ ಫೈಬರ್-ಗ್ಲಾಸ್ ಮತ್ತಿತರ ಬದಲಿ ಪದಾರ್ಥಗಳ ಬಳಕೆಯ ಸಾಧ್ಯತೆಯ ಕುರಿತು ಸಂಶೋಧನೆಯನ್ನು ಹೆಚ್ಚುಹೆಚ್ಚಾಗಿ ಕೈಗೊಳ್ಳಬೇಕು. ಇದನ್ನು ಪ್ರೋತ್ಸಾಹಿಸಲು ಭೌತಶಾಸ್ತçಜ್ಞರು ಮುಂದಾಗಬೇಕು. ಚರ್ಮದ ಪಟ್ಟಿಗಳ ಬಿಗಿತದ ಮೇಲೆ ಅವಲಂಬಿತವಾದ ಮೃದಂಗವನ್ನು ಶ್ರುತಿಗೊಳಿಸುವಿಕೆಗೆ ಸಂಬಂಧಪಟ್ಟಂತೆ ಉತ್ತರದ ಭಾರತದ ‘ನಾಲ್’ – ಬಿಗಿತವನ್ನು ಹೆಚ್ಚಿಸಲು ತಿರುಪು ಮೊಳೆಗಳುಳ್ಳ ತಾಳವಾದ್ಯ- ಇದರಲ್ಲಿ ಕಂಡುಬರುವ ತಂತ್ರವನ್ನು ದಕ್ಷಿಣ ಭಾರತೀಯರಾದ ನಾವು ಏಕೆ ಅಳವಡಿಸಿಕೊಳ್ಳಬಾರದು ಎಂದು ಶ್ರೀಕಂಠನ್ ಪ್ರಶ್ನಿಸಿದರು. “ಸರಿಯಾದ ಶ್ರುತಿಯನ್ನು ಪಡೆದುಕೊಳ್ಳಲು ತಾಳವಾದ್ಯಗಳ ಕಲಾವಿದರು ಮೃದಂಗದ ಬದಿಗಳ ಮೇಲೆ ಕುಟ್ಟುವುದನ್ನು ನೋಡಿದರೆ ನೋವಾಗುತ್ತದೆ”.

ಫ್ಯೂಶನ್ ಅಥವಾ ಕನ್-ಫ್ಯೂಶನ್
ಫ್ಯೂಶನ್ ಅನ್ನು ಕನ್-ಫ್ಯೂಶನ್ ಎಂದು ವ್ಯಂಗ್ಯವಾಡುವುದಕ್ಕೆ ಶ್ರೀಕಂಠನ್ ಹೆಸರುವಾಸಿ. ಆದರೆ ಜುಗಲ್‌ಬಂದಿಗೆ ಸಂಬಂಧಪಟ್ಟಂತೆ ಅವರ ಪ್ರತಿಕ್ರಿಯೆ ಅಷ್ಟು ಖಾರವಾಗಿಲ್ಲ. ಎರಡೂ ಸಂಗೀತ ಪದ್ಧತಿಗಳ ಅನುಯಾಯಿಗಳಿಗೆ ಉಪಯುಕ್ತವಾಗುವಂತೆ ಜುಗಲ್‌ಬಂದಿ ಪ್ರದರ್ಶನವನ್ನು ಶೈಕ್ಷಣಿಕವಾದ ಪ್ರಾತ್ಯಕ್ಷಿಕೆಯನ್ನಾಗಿ ಪರಿವರ್ತಿಸುವಂತೆ ಆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಮತ್ತು ಆಯೋಜಕರಿಗೆ ಶ್ರೀಕಂಠನ್ ಸಲಹೆ ನೀಡುತ್ತಾರೆ- “ಎರಡೂ ಸಂಗೀತ ಪದ್ಧತಿಗಳ ಬೇಕಾಬಿಟ್ಟಿ ಬೆರಕೆಯನ್ನು ನಾನು ಒಪ್ಪುವುದಿಲ್ಲ. ಆದರೆ ಅವರೆಡನ್ನೂ ಮಿಶ್ರಣ ಮಾಡಲೇಬೇಕಾದಲ್ಲಿ, ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡುವುದು ಒಳ್ಳೆಯದು ಎನ್ನುವುದು ನನ್ನ ಅಭಿಮತ. ಆದರೆ ನನ್ನ ಅಂತರಂಗದ ನಂಬಿಕೆಯ ಪ್ರಕಾರ ಪ್ರತಿಯೊಂದು ಬಗೆಯ ಸಂಗೀತಕ್ಕೂ ಅದರದೇ ಆದ ವ್ಯಕ್ತಿತ್ವವಿದೆ ಮತ್ತು ಆ ನಿರ್ದಿಷ್ಟ ಸಂಗೀತ ಪದ್ಧತಿಯ ರಂಜನೀಯತೆಯ ವಲಯದಲ್ಲೇ ಅವುಗಳನ್ನು ಗ್ರಹಿಸಬೇಕಲ್ಲದೆ, ಅದನ್ನು ಇತರ ಶೈಲಿಗಳಿಗೆ ವಿಸ್ತರಿಸಬಾರದು. ನಿಜವಾಗಿಯೂ ಇದು ವಿಲಕ್ಷಣವಾದ ಬೇಡಿಕೆಗಳ ಯುಗವಾದ್ದರಿಂದ ಇಂದು ಬಹುತೇಕ ಕಲಾವಿದರಿಗೆ ಇದೊಂದು ಬಗೆಯ ಸಂಕಟ”.

ಶ್ರೀಕಂಠನ್ ಅವರ ಪ್ರಕಾರ ಆಧುನಿಕ ತಂತ್ರಜ್ಞಾನದ ಬೆಳವಣಿಗೆಗಳು ವರವೂ ಹೌದು, ಶಾಪವೂ ಹೌದು. ಉದಾಹರಣೆಗೆ ಇಲೆಕ್ಟ್ರಾನಿಕ್ ತಂಬೂರ ಬಳಕೆಗೆ ಅನುಕೂಲಕರವಾಗಿದ್ದರೂ, ಅದರ ಅತಿ ಬಳಕೆಯಿಂದ ಯುವಜನತೆಗೆ ಮರದ ತಂಬೂರವನ್ನು ಉಪಯೋಗಿಸುವ ಅಥವಾ ಶ್ರುತಿ ಮಾಡುವ ರೀತಿ ತಿಳಿದೇ ಇಲ್ಲ (ಅಪೇಕ್ಷಿತ ಶ್ರುತಿಯನ್ನು ಅನುಸರಿಸಲು ಮಂದ್ರ ತಂತಿಯನ್ನು ಬಳಸಲಾಗುತ್ತದೆ). ಏಳುನೂರು ವರ್ಷಗಳ ಹಿಂದೆ ತನ್ನ ಮೂಲರೂಪದಲ್ಲಿ ಅಸ್ತಿತ್ವದಲ್ಲಿದ್ದ ತಂಬೂರ ಎಲ್ಲವನ್ನೂ ಆವರಿಸುವಂಥ ಮಾಧುರ್ಯವನ್ನು ಹೊರಡಿಸುವ ಒಂದು ವಾದ್ಯ.

೧೯೮೯ರಲ್ಲಿ ಬೆಂಗಳೂರಿನಲ್ಲಿ ಡಾ.ರಾಜಾರಾಮಣ್ಣ ನೀಡಿದ ‘ಸಂಗೀತವಾದ್ಯಗಳ ಹಿನ್ನೆಲೆಯಲ್ಲಿರುವ ಭೌತಶಾಸ್ತ್ರ’ ಎನ್ನುವ ಉಪನ್ಯಾಸದಲ್ಲಿ ಹೇಳಿದ್ದರು- “ಮುಂಬೈನಲ್ಲಿರುವ ರಾಷ್ಟ್ರೀಯ ಪ್ರದರ್ಶನ ಕಲೆಗಳ ಕೇಂದ್ರದಲ್ಲಿ ತಂಬೂರ ಮತ್ತು ಅದರ ಲಕ್ಷಣಗಳ ಕುರಿತು ನಡೆಯುತ್ತಿದ್ದ ಕೆಲವು ಸಂಶೋಧನೆಗಳೊಡನೆ ನಾನು ಸಂಪರ್ಕವನ್ನು ಇರಿಸಿಕೊಂಡಿದ್ದೆ. “ಕೈಯಿಂದ ಹೊರಡಿಸಬಹುದಾದ ಎಲ್ಲ ನಾದಗಳನ್ನೂ ತಂಬೂರ ಸ್ವಭಾವಸಹಜವಾಗಿ ಆವರಿಸಿಕೊಂಡಿರುತ್ತದೆ” ಎನ್ನುವ ಸಂಸ್ಕೃತದ ಸೂಕ್ತಿ, ಈ ಹೇಳಿಕೆಯ ಹಿನ್ನೆಲೆಯಲ್ಲಿರುವ ಸತ್ಯವನ್ನು ಪರೀಕ್ಷಿಸಲು ನನ್ನನ್ನು ಪ್ರೇರೇಪಿಸಿತು. ಆದರೆ ನಿಶ್ಚಯವಾಗಿಯೂ ಅದರ ನಿರ್ಮಾಣ ಮತ್ತು ಅದರಿಂದ ಹೊಮ್ಮುವ ಜೀವಂತಿಕೆಯಿಂದ ನಾದದ ಹರಹನ್ನು ನಾವು ಆಲಿಸಬಹುದು, ಅನುಭವಿಸುವುದು. ಆದರೆ ತಂಬೂರದ ನಾದವನ್ನು ಕಂಪ್ಯೂಟರ್ ಆಸಿಲೋಸ್ಕೋಪಿನ ಸಹಾಯದಿಂದ ವಿಶ್ಲೇಷಿಸಿದಾಗ, ಅದು ಪ್ರಧಾನ ನಾದವನ್ನು ಮೊದಲು ಹೊರಡಿಸಿತು ಮತ್ತು ಕ್ರಮೇಣ ಇತರ ಕಂಪನಗಳು ಏಕಕಾಲದಲ್ಲಲ್ಲ, ಆದರೆ ಒಂದಾದ ಮೇಲೊಂದರಂತೆ ಹೊಮ್ಮಿದವು ಹಾಗೂ ಕಾಲ ಸರಿದಂತೆ ನಿಧಾನವಾಗಿ ಅಳಿಸಿಹೋದವು. ಈ ದೃಷ್ಟಿಯಿಂದ ಹಲವು ನೂರು ವರ್ಷಗಳ ಹಿಂದೆ ರಚಿಸಲ್ಪಟ್ಟ ಆ ಸಂಸ್ಕೃತೋಕ್ತಿ ಬೆರಗು ಮೂಡಿಸುವಂತಿದೆ!”

ಇದು ನಮ್ಮ ಐತಿಹಾಸಿಕ ವಾದ್ಯಗಳ ಮಹತ್ವ ಎನ್ನುತ್ತಾರೆ ಶ್ರೀಕಂಠನ್. “ಯೂರೋಪಿನ ಸಂಗೀತ ತನ್ನ ವಾದ್ಯಗಳನ್ನು ಕಳೆದ ೩೦೦ ವರ್ಷಗಳಲ್ಲಿ ಅಭಿವೃದ್ಧಿಗೊಳಿಸಿತು. ಪಿಟೀಲು ೪೦೦ ವರ್ಷಗಳಷ್ಟು ಪುರಾತನವಾದದ್ದು ಮತ್ತು ಆಧುನಿಕ ಪಿಯಾನೋ ಕೇವಲ ೧೫೦ ವರ್ಷಗಳಷ್ಟು ಹಳೆಯದು, ಅಷ್ಟೆ!”. ಆಧಾರ ಶ್ರುತಿಗಳಿಗೆ ಹೊಂದುವಂತೆ ಶಾರೀರವನ್ನು ಪೋಷಿಸುವಲ್ಲಿ ತಂಬೂರಿ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ಶ್ರೀಕಂಠನ್ ರವರ ನಂಬಿಕೆ. “ಸಾಧ್ಯವಾದಾಗಲೆಲ್ಲ ನಾವು ತಂಬೂರಿಯನ್ನು ಉಪಯೋಗಿಸಬೇಕು ಮಾತ್ರವಲ್ಲ, ಸ್ವರಗಳನ್ನು ಮತ್ತು ಆಧಾರಕ್ಕಾಗಿ ಅಗತ್ಯವಾದ ಮಂದ್ರತಂತಿಯ ಸ್ತರಗಳನ್ನು ಪರಿಚಯ ಮಾಡಿಕೊಳ್ಳುವ ಸಲುವಾಗಿ ತಂಬೂರಿಯನ್ನು ಶ್ರುತಿಗೊಳಿಸಲು ತರಬೇತಿ ಪಡೆದುಕೊಳ್ಳಬೇಕು. ವೀಣೆಯಂತಹ ವಾದ್ಯಗಳ ಪರಿಚಯ ವಿದ್ಯಾರ್ಥಿಗಳಿಗೆ ಇನ್ನಷ್ಟು ಪ್ರಯೋಜನಕಾರಿ. ಸ್ವರಸ್ಥಾನಗಳನ್ನು ಅರಿತುಕೊಳ್ಳಲು ಇದು ಸಹಾಯಕಾರಿ”.

೧೫ನೆಯ ಶತಮಾನದ ಸಂತ-ಕವಿ ಪುರಂದರದಾಸರ ಪದಗಳನ್ನು ಅವಲೋಕಿಸಿದಾಗ, ಅವರ ಸುಮಾರು ೩೦ ಪದಗಳಲ್ಲಿ ಸಂಗೀತವಾದ್ಯಗಳ ಉಲ್ಲೇಖವಿದೆ. ‘ಕೇಳನೋ ಹರಿ ತಾಳನೋ’ ಕೃತಿಯಲ್ಲಿ ಆ ಕಾಲದಲ್ಲಿ ಬಳಕೆಯಲ್ಲಿದ್ದ ತಂಬೂರ, ಕೊಂಬು ಮತ್ತು ಕೊಳಲುಗಳಂಥ ವಾದ್ಯಗಳನ್ನು ಉಲ್ಲೇಖಿಸಿದ್ದಾರೆ. ತಮ್ಮ ‘ತಂಬೂರಿ ಮೀಟಿದವ’ ಉಗಾಭೋಗದಲ್ಲಿ ಗೆಜ್ಜೆ, ತಾಳಗಳನ್ನು ಹೆಸರಿಸಿದ್ದಾರೆ ಹಾಗೂ ತಂಬೂರ ಮೋಕ್ಷಕ್ಕೆ ಎಡೆ ಮಾಡಿಕೊಡುವ ಆಧ್ಯಾತ್ಮಿಕ ಜ್ಞಾನಕ್ಕೆ ಸಾಧನ ಎಂದಿದ್ದಾರೆ. ಪುರಂದರದಾಸರು ನಮ್ಮ ಪದ್ಧತಿಯಲ್ಲಿ ತೋಡಿರಾಗವನ್ನು ಪರಿಚಯಿಸಿದರು. ಸಂಗೀತ ಶಿಕ್ಷಣಕ್ಕೆ ಮೂಲಭೂತ ರಾಗವಾಗಿ ಹಿಂದೆ ಬಳಕೆಯಲ್ಲಿದ್ದ ಖರಹರಪ್ರಿಯ ರಾಗಕ್ಕೆ ಬದಲಾಗಿ ಮಾಯಾಮಾಳವಗೌಳ ರಾಗವನ್ನು ವಿಧಿಸಿದರು.

ವೇದಗಳಷ್ಟೇ ಸನಾತನವಾದ ಭಾರತೀಯ ಸಂಗೀತ
ಭಾರತದಲ್ಲಿ ಸಂಗೀತ ವೇದಗಳಷ್ಟೇ ಪುರಾತನವಾದದ್ದು. ಅದರಲ್ಲೂ ಸಾಮವೇದ ಅತ್ಯಂತ ಪ್ರಾಚೀನವಾದದ್ದು. ಈ ವೇದದಲ್ಲಿರುವ ಸ್ತೋತ್ರಗಳನ್ನು ರಾವಣ ಶಿವಪೂಜೆ ಮಾಡುವ ಸಂದರ್ಭದಲ್ಲಿ ಹಾಡುತ್ತಿದ್ದ ಎಂದು ಹಿಂದೂಶಾಸ್ತçಗಳು ಹೇಳುತ್ತವೆ. ಸಂಗೀತದ ಉಲ್ಲೇಖಗಳಲ್ಲಿ ನಂತರ ಬರುವುದು ವಾಲ್ಮೀಕಿಯಿಂದ ರಚಿತವಾಗಿ ಲವಕುಶರಿಂದ ಗಾಯನ ಮಾಡಲ್ಪಟ್ಟ ರಾಮಾಯಣ. ಕರ್ನಾಟಕದಲ್ಲಿ ವೀರಶೈವ ಸಂತರಾದ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮತ್ತು ಹರಿಹರ; ಜೈನಸಾಹಿತಿಗಳಾದ ಜನ್ನ ಮತ್ತು ರತ್ನಾಕರ; ಬ್ರಾಹಣ ಜೀವನಧರ್ಮವನ್ನು ಅನುಸರಿಸುತ್ತಿದ್ದ ಕುಮಾರವ್ಯಾಸ ಮತ್ತು ಪುರಂದರದಾಸರು ಗೇಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

ಪಾಂಡುರಂಗ ವಿಠ್ಠಲನ ಪರಮ ಭಕ್ತರಾದ ಕರ್ನಾಟಕದ ಹರಿದಾಸರು – ಮಹಿಳಾ ಹರಿದಾಸರನ್ನು ಒಳಗೊಂಡಂತೆ ಸುಮಾರು ೨೦೦ ಹರಿದಾಸರ ಹೆಸರುಗಳನ್ನು ಪಟ್ಟಿಮಾಡಲಾಗಿದೆ- ಪರಿವ್ರಾಜಕರಾದ ದಾಸಪಂಥಕ್ಕೆ ಸೇರಿದವರು. ಪದ, ತತ್ವ, ಶ್ಲೋಕ, ಕಂದ, ವೃತ್ತ, ವಚನ, ಗದ್ಯ, ಸುವ್ವಾಲಿ, ತ್ರಿಪದಿ, ಚೌಪದಿ, ಷಟ್ಪದಿ, ಅಷ್ಟಪದಿ, ಕೀರ್ತನೆಗಳು, ಸುಳಾದಿಗಳು ಮತ್ತು ಉಗಾಭೋಗಗಳು ಇವೇ ಮೊದಲಾದ ವಿಭಿನ್ನ ಸ್ವರೂಪದ ಗೀತೆಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ಪ್ರಾದೇಶಿಕ ಭಾಷೆಗಳಲ್ಲಿ ಮತ್ತು ಬಗೆಬಗೆಯ ಛಂದಸ್ಸುಗಳಲ್ಲಿ ರಚಿಸುವ ಮೂಲಕ ದಕ್ಷಿಣ ಭಾರತದಲ್ಲಿ ಸಂಗೀತದ ಮೂಲಕ ಭಕ್ತಿಯನ್ನು ಪ್ರಸಾರಗೊಳಿಸಿದವರಲ್ಲಿ ಹರಿದಾಸರು ಆದ್ಯ ಪ್ರವರ್ತಕರು. ೧೮ನೆಯ ಶತಮಾನದ ಉತ್ತರಾರ್ಧದಲ್ಲಿ ದಕ್ಷಿಣ ಭಾರತದಲ್ಲಿ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾಶಾಸ್ತ್ರೀಗಳು ಜನ್ಮ ತಳೆದು ೧೯ನೇ ಶತಮಾನದ ನಡುಭಾಗದವರೆಗೂ ಜೀವಿಸಿದ್ದರು.

ವಸ್ತುತಃ ಪುರಂದರದಾಸರು ತಮ್ಮ ಕೀರ್ತನೆಗಳಲ್ಲಿ ಉಲ್ಲೇಖಿಸಿರುವ ರಾಮಕ್ರಿಯಾ, ಮುಖಾರಿ, ಮಹಾರಂಜನಿ, ಆಹಿರಿ, ಕಾಂಭೋಜಿ, ಗುರ್ಜರಿ, ಗುಂಡಕ್ರಿಯಾ, ದೇಶಾಕ್ಷಿ, ಶಂಕರಾಭರಣ ಮತ್ತು ವಸಂತರಾಗಗಳ ಹೆಸರುಗಳು, ಈ ರಾಗಗಳು ೧೫ನೆಯ ಶತಮಾನದಲ್ಲಿ ಅಸ್ತಿತ್ವದಲ್ಲಿದ್ದವು ಎನ್ನುವ ವಿಷಯವನ್ನು ದೃಢೀಕರಿಸುತ್ತವೆ. ಪರ್ಷಿಯಾದೇಶದ ಪ್ರಭಾವವುಳ್ಳ ಕಲ್ಯಾಣಿ ಮತ್ತು ದರ್ಬಾರ್ ರಾಗಗಳನ್ನು ದಾಸರು ಜನಪ್ರಿಯಗೊಳಿಸಿದರು ಎನ್ನುವ ಮಾತಿದೆ. ಅವರ ಅತಿ ಮುಖ್ಯ ಕೃತಿಗಳಾದ ಕೀರ್ತನೆಗಳು, ಕಡ್ಡಾಯವಾಗಿ ಸಂಗತಿಗಳ ಅಲಂಕರಣವಿಲ್ಲದ, ಗೋಷ್ಠಿಗಾಯನಕ್ಕೆ ಅನುಕೂಲವಾದ, ಕೇವಲ ಒಂದು ಸ್ಥಾಯಿಗೆ ಸೀಮಿತವಾದ ಸಂಚಾರಗಳುಳ್ಳ ಸರಳ ರಚನೆಗಳಾಗಿದ್ದವು.

ಕೃತಿಗಳ ಸಂಖ್ಯಾಬಾಹುಳ್ಯ ಸಾಗರೋಪಮವಾಗಿದ್ದು, ಶ್ರೇಷ್ಠತಮ ವಾಗ್ಗೇಯಕಾರರ ಎಲ್ಲ ರಚನೆಗಳನ್ನು ವೇದಿಕೆಯ ಮೇಲೆ ಉಪಯೋಗಿಸಿಕೊಳ್ಳಲು ಸಾಧ್ಯವಾಗಿರದ ಕಾರಣ, ಕೃತಿರಚನೆಯ ಸಾಹಸಕ್ಕೆ ಕೈಹಾಕುವುದನ್ನು ಶ್ರೀಕಂಠನ್ ಅಷ್ಟಾಗಿ ಮೆಚ್ಚಿಕೊಳ್ಳುವುದಿಲ್ಲ. “ಅದು ಅಗತ್ಯವೇ? ತ್ಯಾಗರಾಜರು ತೋಡಿರಾಗವೊಂದರಲ್ಲೇ ೩೦ ಕೃತಿಗಳನ್ನು ರಚಿಸಿದ್ದಾರೆ! ಇವುಗಳಲ್ಲಿ ಪ್ರತಿಯೊಂದೂ ರತ್ನಪ್ರಾಯವಾಗಿದ್ದು, ವೈಶಿಷ್ಟö್ಯದ ಅನೇಕ ಛಾಯೆಗಳನ್ನು ಪ್ರದರ್ಶಿಸುತ್ತವೆ. ತ್ಯಾಗರಾಜರು ವೀಣಾಕುಪ್ಪಯ್ಯರ್ ಅವರನ್ನು ಭೇಟಿ ಮಾಡಿದಾಗ ದೇವಗಾಂಧಾರಿರಾಗದಲ್ಲಿ ಎಂಟು ಅದ್ಭುತ ರಚನೆಗಳನ್ನು ಮಾಡಿದರು. ಅವರ ಭಾಷಾಜ್ಞಾನ, ಛಂದೋಮಯ ಕಾವ್ಯಶಕ್ತಿ ಮತ್ತು ಸಂಗೀತಪ್ರಜ್ಞೆಗಳ ಮುಂದೆ ನಾವೆಷ್ಟರವರು? ಪೂರ್ವದ ವಾಗ್ಗೇಯಕಾರರು ತಮ್ಮ ಕೃತಿಗಳ ಮೂಲಕ ನವವಿಧ ಭಕ್ತಿಯನ್ನು, ಸಮಾಜೋದ್ಧಾರದ ಉಪಾಯಗಳನ್ನು ಮತ್ತು ನಮ್ಮ ದಿನನಿತ್ಯದ ಜೀವನಕ್ಕೆ ಅಗತ್ಯವಾದ ಉಪದೇಶಗಳನ್ನು ನೀಡಿರುವಾಗ, ಆ ಕೃತಿಗಳನ್ನು ನಾವು ಸರಿಯಾಗಿ ಹಾಡಿದರೆ ಸಾಲದೆ? ಸಂಗೀತ ಮತ್ತು ಕಾವ್ಯದ ಅಪೂರ್ವ ಸಂಗಮವೆನಿಸಿರುವ ಹರಿದಾಸರ ಪದಗಳ ಒಟ್ಟು ಸಂಖ್ಯೆ ಹಲವು ಸಾವಿರಗಳಷ್ಟು! ಈ ಅಮೂಲ್ಯವಾದ ನಿಧಿಯನ್ನು ನಾವು ಕಾಪಾಡಿಕೊಂಡರೆ ಸಾಕಷ್ಟಾಯಿತು ಎನ್ನವುದು ನನ್ನ ಭಾವನೆ” ಎನ್ನುವ ಶ್ರೀಕಂಠನ್ ರವರ ನಿಲುವು ತುಂಬ ಖಚಿತ.

ತಮ್ಮ ವೃತ್ತಿಜೀವನದ ಪ್ರಾರಂಭಿಕ ವರ್ಷಗಳಲ್ಲಿ ಶ್ರೀಕಂಠನ್ ರವರಿಗೆ ಸಂಭಾವನೆಯೇನೂ ದೊರೆಯುತ್ತಿರಲಿಲ್ಲ. ಆದರೆ ಇದರಿಂದ ಅವರೇನೂ ಚಿಂತಾಕ್ರಾಂತರಾಗಲಿಲ್ಲ. ಕಛೇರಿಯ ಅನುಭವ ಪಡೆದುಕೊಳ್ಳಲು ಇರುವ ಅತ್ಯುತ್ತಮ ಮಾರ್ಗಗಳಲ್ಲಿ ಇದೊಂದು ಎಂದು ಅವರು ತೀರ್ಮಾನಿಸಿದರು. ಅವರ ಪ್ರಾರಂಭದ ಅನುಭವಗಳನ್ನು ಕುರಿತು ಕೇಳಿದರೆ, ಅವುಗಳಲ್ಲಿ ಒಂದನ್ನು ಜ್ಞಾಪಿಸಿಕೊಳ್ಳುತ್ತ ಅವರು ನಗುತ್ತಾರೆ: “ಅರಮನೆ ಕಛೇರಿಯೊಂದರ ಸಂಬಂಧವಾಗಿ ಧ್ವನಿಪರೀಕ್ಷೆಗಾಗಿ ನಾನು ಹೋಗಿದ್ದೆ. ಆಗ ಆಸ್ಥಾನ ವಿದ್ವಾಂಸರಾಗಿದ್ದ ಮುತ್ತಯ್ಯ ಭಾಗವತರು ಹೇಳಿದರು-‘ನೀನು ಚೆನ್ನಾಗಿ ಹಾಡುತ್ತೀ. ಆದರೆ ನಾನು ನಿನ್ನನ್ನು ಈಗ ಮೈಸೂರಿನ ದರ್ಬಾರಿನೊಳಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ನೀನಿನ್ನೂ ಚಿಕ್ಕವನು. ಕೆಲವು ವರ್ಷಗಳ ನಂತರ ಬಾ!’“ಎಂದು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

10 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading